
ಅಮೆರಿಕ ಅವಲಂಬನೆ ತಪ್ಪಿಸಲು ಬೇಕಿದೆ ಬ್ರಿಕ್ಸ್ ಸಂಕಲ್ಪ: ಸಂಘರ್ಷಕ್ಕಿಂತ ಸಮರಸವೇ ಆಗಲಿ ಪ್ರಬಲ ಮಂತ್ರ
ಕರೆನ್ಸಿ ಪಾವತಿಗಳಿಂದ ಸುಂಕ ಸಹಕಾರದ ವರೆಗೆ ಭಾರತಕ್ಕೆ ಒಕ್ಕೂಟದ ಒಳಗಿನ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಲು ಹಾಗೂ ಟ್ರಂಪ್ ನೇತೃತ್ವದ ಅಸ್ಥಿರ ಅಮೆರಿಕದ ಮೇಲಿನ ಅವಲಂಬನೆ ತಗ್ಗಿಸಲು ಉತ್ತಮ ಅವಕಾಶ.
ಆಗಿನ್ನೂ ಹೊರಹೊಮ್ಮುತ್ತಿದ್ದ ಆರ್ಥಿಕ ಶಕ್ತಿಗಳಾದ ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ ದೇಶಗಳಿಗೆ ಹೆಚ್ಚಿನ ಧ್ವನಿಯನ್ನು ನೀಡಲು 2006ರಲ್ಲಿ ಹುಟ್ಟಿಕೊಂಡಿದ್ದು ಬ್ರಿಕ್ (BRIC) ಎಂಬ ಸಂಸ್ಥೆ. ಆ ಬಳಿಕ ಅದಕ್ಕೆ ಸೇರ್ಪಡೆಯಾಗಿದ್ದು ದಕ್ಷಿಣ ಆಫ್ರಿಕ. ಹಾಗಾಗಿ ಅದನ್ನು ಬ್ರಿಕ್ಸ್ –BRICS ಎಂದು ಸಂಯೋಜಿಸಲಾಯಿತು.
ಇದನ್ನು ಇನ್ನಷ್ಟು ವಿಸ್ತರಿಸಬೇಕು ಎಂದು ಚೀನಾ ಒತ್ತಾಯ ಮಾಡಿತು. ಅದರ ಪರಿಣಾಮವಾಗಿ ಈಗ ಇದು ಹನ್ನೊಂದು ಸದಸ್ಯರನ್ನು ಹಾಗೂ ಹತ್ತು ಪಾಲುದಾರರನ್ನು ಹೊಂದಿದೆ. ಆ ಕಾರಣಕ್ಕೇ ಅದನ್ನು ನಿಭಾಯಿಸಲು ಕಷ್ಟಕರವಾಗಿದೆ ಮತ್ತು ತನ್ನ ಮಹತ್ವವನ್ನು ಕಳೆದುಕೊಂಡಿದೆ. ʼಈ ಎಲ್ಲ ಹಿನ್ನೆಲೆಯಲ್ಲಿ ಬ್ರಿಕ್ಸ್ ತಾನು ಹೊರಟಿರುವ ತಾಣದಿಂದ ಬಹಳ ದೂರ ಸಾಗಿದೆ,ʼ ಎಂದು ರಾಯಭಾರಿ ಟಿ.ಎಸ್. ತಿರುಮೂರ್ತಿ ಅವರು ಅಭಿಪ್ರಾಯಪಟ್ಟಿದ್ದಾರೆ.
ನಾನು ಬ್ರಿಕ್ಸ್ ರಾಜಕೀಯವನ್ನು ವಿದೇಶಾಂಗ ನೀತಿಯ ಪಂಡಿತರಿಗೇ ಬಿಟ್ಟುಬಿಡುತ್ತೇನೆ ಮತ್ತು ಪ್ರಾಥಮಿಕವಾಗಿ ನನ್ನ ಗಮನವನ್ನು ವ್ಯಾಪಾರದ ಮೇಲೆ ಕೇಂದ್ರೀಕರಿಸುತ್ತೇನೆ. ಇದು ಬ್ರಿಕ್ಸ್ ದೇಶಗಳ ನಡುವಿನ ಒಮ್ಮುಖದ ಸಂಗತಿಯಾಗಿದೆ.
ಸುಂಕ ಮತ್ತು ಅಮೆರಿಕದ ಧೋರಣೆ
ಅಮೆರಿಕ ತನ್ನ ವಾಣಿಜ್ಯಿಕ ಸಂಬಂಧವನ್ನು ಕಡಿತಗೊಳಿಸಬಹುದು ಎಂದು ಅಮೆರಿಕದ ಅಧ್ಯಕ್ಷ ಡೊಲಾನ್ಡ್ ಟ್ರಂಪ್ ಇತ್ತೀಚೆಗೆ ಹೇಳಿದ್ದನ್ನು ನೀವು ಗಮನಿಸಿರಬಹುದು. “ನಾವು ಉಳಿದ ದೇಶಗಳ ಜೊತೆ ವ್ಯಾಪಾರ ಮಾಡದೇ ಇರುವ ಮೂಲಕ ನಾವು ನಮಗೇ ಸಾಕಷ್ಟು ಪ್ರಮಾಣದಲ್ಲಿ ಒಳಿತನ್ನು ಮಾಡಿಕೊಳ್ಳಬಹುದು,” ಎಂದು ಅವರು ಹೇಳಿದ್ದರು. ಅವರು ನಿಜಕ್ಕೂ ಹಾಗೆ ಮಾಡಲು ಬಯಸಿದ್ದರೆ ಅವರಿಗೆ ದೇವರು ಒಳಿತು ಮಾಡಲಿ.
ಇರಾನ್ನ್ನು ಹೊರತುಪಡಿಸಿ ಎಲ್ಲ ಬ್ರಿಕ್ಸ್ ದೇಶಗಳು ಅಮೆರಿಕದ ಜೊತೆ ನಿಕಟವಾದ ವ್ಯಾಪಾರ ಸಂಬಂಧಗಳನ್ನು ಹೊಂದಿವೆ. ಭಾರತವು ಕೂಡ ವ್ಯಾಪಕ ಶ್ರೇಣಿಯ ಸರಕುಗಳನ್ನು ರಫ್ತು ಮಾಡುತ್ತದೆ. ಜೊತೆಗೆ ಅಮೆರಿಕದ ಜೊತೆ ಒಂದಷ್ಟು ಹೆಚ್ಚೇ ಅನ್ನುವ ವ್ಯಾಪಾರ ಸಂಬಂಧವನ್ನು ಹೊಂದಿರುವ ಕಾರಣ ಇದು ಹೆಚ್ಚು ಅನ್ವಯವಾಗುತ್ತದೆ. ಅಮೆರಿಕವು ತನ್ನ ಸುಂಕ ನೀತಿಯನ್ನು ಬಿಗಿಗೊಳಿಸುವುದರಿಂದ ಅದರ ಪರಿಣಾಮ ಬ್ರಿಕ್ಸ್ ಮೇಲೆ ಉಂಟಾಗುತ್ತದೆ. ಅದರಲ್ಲೂ ವಿಶೇಷವಾಗಿ ಭಾರತದ ಮೇಲೆ ಉಂಟಾಗುತ್ತದೆ.
ಬ್ರಿಕ್ಸ್ನ್ನು ಅಮೆರಿಕ ವಿರೋಧಿ ಆರ್ಥಿಕ ಬ್ಲಾಕ್ ಆಗಿ ಪರಿವರ್ತಿಸಿದರೆ ಅದು ಸ್ವಯಂ-ನಾಶಕ್ಕೆ ದಾರಿ ಮಾಡಿಕೊಟ್ಟಂತೆ. ಹಾಗಾಗಿ ಬ್ರಿಕ್ಸ್‌ನ್ನು ಈ ಹಂತಕ್ಕೆ ತಗ್ಗಿಸುವ ಯಾವುದೇ ಪ್ರಯತ್ನವನ್ನು ಭಾರತವು ಖಡಾಖಂಡಿತವಾಗಿ ವಿರೋಧಿಸಬೇಕು.
ನಿರ್ದಿಷ್ಟ ಕಾರ್ಯತಂತ್ರಗಳ ಅಗತ್ಯ
ಬ್ರಿಕ್ಸ್ ರಾಷ್ಟ್ರಗಳ ನಡುವಿನ ವ್ಯಾಪಾರವನ್ನು ವೃದ್ಧಿಸುವುದು ಹಾಗೂ ಅಮೆರಿಕದ ಅನಿರೀಕ್ಷಿತ ಧೋರಣೆಯಿಂದ ದುರ್ಬಲವಾಗುವುದನ್ನು ತಪ್ಪಿಸಲು ಹೆಚ್ಚಿನ ಗಮನವನ್ನು ಹರಿಸಬೇಕು. ಯುಎನ್ಸಿಟಿಎಡಿ ಮಂಡಿಸಿರುವ ವರದಿಯ ಪ್ರಕಾರ, ಪರಸ್ಪರ ಪೂರಕ ಅಂಶಗಳ ಕಾರಣಗಳಿಂದಾಗಿ ಬ್ರಿಕ್ಸ್ ಸದಸ್ಯರ ನಡುವಿನ ವ್ಯಾಪಾರವು ವೇಗವನ್ನು ಪಡೆದುಕೊಂಡಿದೆ. ಹಾಗಾಗಿ ಇದು 2024ರಲ್ಲಿ 1.17 ಟ್ರಿಲಿಯನ್ ಡಾಲರ್ ವಹಿವಾಟನ್ನು ದಾಟಿದೆ.
ಬ್ರಿಕ್ಸ್ ದೇಶಗಳ ನಡುವಿನ ವ್ಯಾಪಾರದ ಮೇಲಿನ ಅವಲಂಬನೆಯು ಬ್ಲಾಕ್ನ ಸದಸ್ಯರ ನಡುವೆ ಭಿನ್ನವಾಗಿದೆ; ಬ್ರೆಜಿಲ್, ರಷ್ಯಾ ಮತ್ತು ಇಂಡೋನೇಷಿಯಾ ದೇಶಗಳು ಇದರ ಮೇಲೆ ಹೆಚ್ಚು ಅವಲಂಬಿತವಾಗಿವೆ, ಆದರೆ ಇತರ ದೇಶಗಳ ಅವಲಂಬನೆ ಕಡಿಮೆ. ಆದರೂ, ಬ್ರಿಕ್ಸ್ ದೇಶಗಳ ನಡುವಿನ ಒಟ್ಟು ವ್ಯಾಪಾರವು ಅವುಗಳ ಒಟ್ಟು ರಫ್ತಿನ ಶೇಕಡಾ 30 ಕ್ಕಿಂತ ಅಧಿಕವಾಗಿದೆ.
ಸುಂಕಗಳಲ್ಲಿ ಇಳಿಕೆಯಾಗಿದೆ ಎಂಬುದನ್ನು ಕೂಡ ಈ ವರದಿಯು ತೋರಿಸುತ್ತದೆ. ವ್ಯಾಪಾರ ನೀತಿಗಳಲ್ಲಿ ಗಣನೀಯ ವ್ಯತ್ಯಾಸಗಳಿದ್ದರೂ ಇದು ಸಾಧ್ಯವಾಗಿದೆ.
ಹಾಗಿದ್ದರೂ, ವ್ಯಾಪಾರದಲ್ಲಿನ ಈ ಹೆಚ್ಚಳವು ಅದರ ಅಪಾರ ಸಾಮರ್ಥ್ಯಕ್ಕೆ ತಕ್ಕ ನ್ಯಾಯ ಒದಗಿಸುವುದಿಲ್ಲ. ವರದಿಯಲ್ಲಿ ಉಲ್ಲೇಖಿಸಿರುವಂತೆ, ವ್ಯಾಪಾರ ಸಂಬಂಧಗಳನ್ನು ಇನ್ನಷ್ಟು ಗಾಢಗೊಳಿಸಲು ಮತ್ತು ಅಂತರವನ್ನು ಕಡಿಮೆ ಮಾಡಲು ನಿರ್ದಿಷ್ಟ ಕಾರ್ಯತಂತ್ರಗಳ ತುರ್ತು ಅಗತ್ಯವಿದೆ. ಇವುಗಳಲ್ಲಿ ಸಾಂಸ್ಥಿಕ ಮತ್ತು ನಿಯಂತ್ರಣಾತ್ಮಕ ವ್ಯತ್ಯಾಸಗಳು, ಸಂಸ್ಥೆ ಹಾಗೂ ಸಾಮರ್ಥ್ಯದ ಕೊರತೆಗಳು ಮತ್ತು ಭೌಗೋಳಿಕ ರಾಜಕೀಯ ಅಂಶಗಳು ಸೇರಿವೆ.
ದೆಹಲಿ ಘೋಷಣೆ 2020 ತನ್ನ 140 ಪ್ಯಾರಾಗಳಲ್ಲಿ ಹಲವು ಕಡೆಗಳಲ್ಲಿ ಇದನ್ನು ಗುರುತಿಸಿದೆ. ಇದು ಜಾಗತಿಕ ವ್ಯಾಪಾರಕ್ಕೆ ಅಡ್ಡಿಪಡಿಸಿದ ವ್ಯಾಪಾರ ನಿರ್ಬಂಧಕ ಪದ್ಧತಿಗಳನ್ನು ಮತ್ತು ಜಾಗತಿಕ ವ್ಯಾಪಾರದ ಸುಗಮ ಹರಿವನ್ನು ಕಾಯ್ದುಕೊಳ್ಳಲು ವ್ಯಾಪಾರ ಸೌಲಭ್ಯಗಳ ಬಳಕೆ, ಸಾಮರ್ಥ್ಯ ವರ್ಧನೆ, ವರ್ಧಿತ ಸಂಪರ್ಕ ಮತ್ತು ತಂತ್ರಜ್ಞಾನ ಲಭ್ಯತೆಯಂತಹ ನಾನಾ ಕ್ಷೇತ್ರಗಳಲ್ಲಿ ಜೊತೆಯಾಗಿ ಕೆಲಸ ಮಾಡುವ ಅವಶ್ಯಕತೆಯನ್ನು ಎತ್ತಿ ತೋರಿಸುತ್ತದೆ.
ಬ್ರಿಕ್ಸ್ ಸಂಸ್ಥೆಯನ್ನು ಪರಿಣಾಮಕಾರಿ ಮಾಡಲು ಆರು ಮಾರ್ಗಗಳು
• ಸ್ಥಳೀಯ ಕರೆನ್ಸಿ ಪಾವತಿ ಬಲಗೊಳಿಸಿ (ರೂಪಾಯಿ-ರೂಬಲ್, ರಿಯಾಲ್-ಯುವಾನ್).
• ಸ್ವಿಫ್ಟ್ (SWIFT) ಅವಲಂಬನೆಯನ್ನು ತಪ್ಪಿಸಲು 'ಬ್ರಿಕ್ಸ್ ಪೇ' (BRICS Pay) ವಿಸ್ತರಿಸುವುದು.
• ಯುಪಿಐ ಮಾದರಿಯ ಗಡಿಯಾಚೆಗಿನ ಡಿಜಿಟಲ್ ಪಾವತಿ ವ್ಯವಸ್ಥೆಗಳ ಸಂಯೋಜನೆ.
• ಕಳ್ಳಸಾಗಣೆಯ ವಿರುದ್ಧ ಜಂಟಿ ಕಸ್ಟಮ್ಸ್ ಜಾರಿ ಕಾರ್ಯಾಚರಣೆಗಳನ್ನು ಪ್ರಾರಂಭಿಸುವುದು.
• ದ್ವಿಪಕ್ಷೀಯ ಅಥವಾ ಬ್ಲಾಕ್ ವ್ಯಾಪ್ತಿಯ ಮುಕ್ತ ವ್ಯಾಪಾರ ಒಪ್ಪಂದಗಳ ಪರಿಶೀಲನೆ.
• ಹೊಸ ಅಭಿವೃದ್ಧಿ ಬ್ಯಾಂಕ್ ಧನಸಹಾಯ ಪಡೆದ ಮೂಲಭೂತ ಸೌಕರ್ಯ ಯೋಜನೆಗಳನ್ನು ಬಲಪಡಿಸುವುದು.
ಅಮೆರಿಕದ ಮಾರುಕಟ್ಟೆಯ ಮೇಲಿನ ಅವಲಂಬನೆಯನ್ನು ತಗ್ಗಿಸಲು ವ್ಯಾಪಾರ-ವ್ಯವಹಾರವನ್ನು ಇನ್ನಷ್ಟು ಹೆಚ್ಚಿಸುವುದು ಮತ್ತು ಸ್ಥಳೀಯ ಕರೆನ್ಸಿಗಳಲ್ಲಿ (ಉದಾಹರಣೆಗೆ: ರೂಪಾಯಿ-ರೂಬಲ್, ರಿಯಾಲ್-ಯುವಾನ್) ವ್ಯವಹಾರ ನಡೆಸುವುದು ಅತ್ಯಗತ್ಯವಾಗಿದೆ. ಇದರಿಂದ ಅಮೆರಿಕನ್ ಡಾಲರ್ ಮೇಲಿನ ನಂಬಿಕೆ ಮತ್ತು ಬಳಕೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಅಮೆರಿಕದ ಡಾಲರ್ಗೆ ಪರ್ಯಾಯವಾಗಿ ಪ್ರಬಲ ಕರೆನ್ಸಿಯನ್ನು ಜಾರಿಗೆ ತರಲು ತಕ್ಷಣವೇ ಸಾಧ್ಯವಾಗದೇ ಇದ್ದರೂ ಕೂಡ ಡಾಲರ್ ಮತ್ತು ಅಮೆರಿಕ ನಿಯಂತ್ರಿಸುವ ಸ್ವಿಫ್ಟ್ ಹಣಕಾಸು ವ್ಯವಸ್ಥೆ ಮೇಲಿನ ಅತಿಯಾದ ಅವಲಂಬನೆ ಹಂತಹಂತವಾಗಿ ಕಡಿಮೆ ಮಾಡುವುದು ಸಾಧ್ಯ ಮತ್ತು ಅದು ಅಗತ್ಯವೂ ಆಗಿದೆ.
ಇದಕ್ಕಾಗಿ ಬ್ರಿಕ್ಸ್ ಪೇ ಎಂಬ ವ್ಯವಸ್ಥೆಯನ್ನು ರೂಪಿಸಲಾಗಿದೆ. ಕಜಾನ್ ಪ್ರಕಟಣೆಯಲ್ಲಿ ಹೇಳಿರುವಂತೆ, ದೇಶಗಳ ಸ್ವಂತ ಹಣಕಾಸು ಪಾವತಿ ವ್ಯವಸ್ಥೆಯನ್ನು ಒಂದಕ್ಕೊಂದು ಜೋಡಿಸಿ, ಸ್ವಿಫ್ಟ್ ಹಣಕಾಸು ವ್ಯವಸ್ಥೆಯ ಹಂಗಿಲ್ಲದೆ ಸುಲಭ-ಸುಗಮವಾಗಿ ಹಣದ ವಹಿವಾಟು ನಡೆಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಡಿಜಿಟಲ್ ಪಾವತಿಗಳ ಏಕೀಕರಣ
ಸಂಶೋಧನಾ ಪ್ರಬಂಧಗಳು ಪ್ರತಿಪಾದನೆ ಮಾಡಿರುವಂತೆ, ಇದನ್ನು ಬಲವಾಗಿ ಮುಂದುವರಿಸಬೇಕು, ಈ ರೀತಿಯಲ್ಲಿ ಇತ್ಯರ್ಥಪಡಿಸುವ ವ್ಯವಹಾರಗಳು ವೆಚ್ಚದಲ್ಲಿ ಗಣನೀಯ ಕಡಿತಕ್ಕೂ ಕಾರಣವಾಗುತ್ತವೆ. ಈಗಾಗಲೇ ಹಲವಾರು ಮೂಲಸೌಕರ್ಯ ಮತ್ತು ಸುಸ್ಥಿರ ಅಭಿವೃದ್ಧಿ ಯೋಜನೆಗಳಿಗೆ ಹಣಕಾಸು ಒದಗಿಸಿರುವ New Development Bank (NDB) ಕೂಡ ಇದರಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ.
ಗಡಿಯಾಚೆಗಿನ ಡಿಜಿಟಲ್ ಪಾವತಿಗಳಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಸಹ UPI ಏಕೀಕರಣದ ಬಗ್ಗೆ ಮಾತನಾಡಿದ್ದಾರೆ. ಬ್ರೆಜಿಲ್ ಕೂಡ ಇದೇ ರೀತಿಯ ದೇಶೀಯ ತ್ವರಿತ ಪಾವತಿ ಡಿಜಿಟಲ್ ವ್ಯವಸ್ಥೆಯಾದ PIX ಅನ್ನು ಯಶಸ್ವಿಯಾಗಿ ನಡೆಸುತ್ತಿದೆ. ಇದನ್ನು ಗಟ್ಟಿ ಮನಸ್ಸಿನಿಂದ ಮುಂದುವರಿಸಬೇಕಾಗಿದೆ. ಇದು ಎಲ್ಲಾ ದೇಶಗಳಿಗೂ ಗೆಲುವಿನ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ.
ವ್ಯಾಪಾರವನ್ನು ಹೆಚ್ಚಿಸುವುದರ ಮತ್ತೊಂದು ಮುಖವೆಂದರೆ ವ್ಯಾಪಾರವನ್ನು ಸುಲಭಗೊಳಿಸುವ ಅಗತ್ಯತೆ. ಇದರಲ್ಲಿ ತ್ವರಿತ ಕಸ್ಟಮ್ಸ್ ತೆರವು ಪ್ರಮುಖವಾಗಿದೆ. ಬ್ರಿಕ್ಸ್ ದೇಶಗಳ ನಡುವೆ ಕಸ್ಟಮ್ಸ್ ಸಹಕಾರವನ್ನು ಇನ್ನಷ್ಟು ಗಟ್ಟಿಗೊಳಿಸುವ ಅಗತ್ಯತೆಯನ್ನು ದೆಹಲಿ ಘೋಷಣೆಯು ಒಪ್ಪಿಕೊಳ್ಳುತ್ತದೆ.
ಕಸ್ಟಮ್ಸ್ ಜಾರಿ ಕಾರ್ಯಾಚರಣೆಗಳು
ಚೀನಾದ ಕ್ಷಿಯಾಮೆನ್ ಮತ್ತು ಭಾರತದ ಆಂಧ್ರಪ್ರದೇಶದ ಪಾಲಸಮುದ್ರಂನಲ್ಲಿರುವ ʼಬ್ರಿಕ್ಸ್ ಕಸ್ಟಮ್ಸ್ ಶ್ರೇಷ್ಠತಾ ಕೇಂದ್ರಗಳುʼ ಬ್ರಿಕ್ಸ್ ದೇಶಗಳ ಕಸ್ಟಮ್ಸ್ ಅಧಿಕಾರಿಗಳಿಗೆ ನಿಯಮಿತವಾಗಿ ತರಬೇತಿ ನೀಡುವ ಕೆಲಸವನ್ನು ಅಚ್ಚುಕಟ್ಟಾಗಿ ನಡೆಸಬೇಕಿದೆ.
ಅದೇ ರೀತಿ, ದೆಹಲಿ ಪ್ರಕಟಣೆಯಲ್ಲಿ ಹೇಳಲಾದ 'ಆಥರೈಸ್ಡ್ ಎಕನಾಮಿಕ್ ಆಪರೇಟರ್ಸ್' (AEO) ಯೋಜನೆಯು ನಂಬಿಕಸ್ಥ ವ್ಯಾಪಾರಿಗಳನ್ನು ಗುರುತಿಸುವ ಒಂದು ಕಾರ್ಯಕ್ರಮವಾಗಿದೆ. ಕಸ್ಟಮ್ಸ್ ನಿಯಮಗಳನ್ನು ಸರಿಯಾಗಿ ಪಾಲಿಸುವ ಸಂಸ್ಥೆಗಳಿಗೆ ಈ ಮಾನ್ಯತೆ ಸಿಗುತ್ತದೆ. ನಾನಾ ದೇಶಗಳ ಕಸ್ಟಮ್ಸ್ ಇಲಾಖೆಗಳು ಈ ಮಾನ್ಯತೆ ಪಡೆದ ಸಂಸ್ಥೆಗಳನ್ನು 'ಅಪಾಯವಿಲ್ಲದ ವ್ಯಾಪಾರಿಗಳು' ಎಂದು ಪರಸ್ಪರ ಗುರುತಿಸಿ, ಅವರ ಸರಕುಗಳಿಗೆ ಶೀಘ್ರ ಅನುಮತಿ ನೀಡುತ್ತವೆ. ಆದರೆ, ಹೀಗೆ ವೇಗವಾಗಿ ಅನುಮತಿ ಕೊಡುವುದರಿಂದ ತೆರಿಗೆ ವಂಚನೆ ಅಥವಾ ಅಕ್ರಮ ನಡೆಯುವ ಅಪಾಯವೂ ಇರುತ್ತದೆ.
ಇದಕ್ಕಾಗಿ ಬ್ರಿಕ್ಸ್ ಪ್ರಕಟಣೆಯು ಜಂಟಿ ಕಸ್ಟಮ್ಸ್ ಕಾರ್ಯಾಚರಣೆಯ ಅಗತ್ಯವನ್ನು ಒತ್ತಿಹೇಳುತ್ತದೆ. ಕಳ್ಳಸಾಗಣೆ ತಡೆಯಲು, ಪರಸ್ಪರ ಮಾಹಿತಿ ಹಂಚಿಕೊಳ್ಳಲು ಮತ್ತು ಹೊಸ ರೀತಿಯ ಬೆದರಿಕೆಗಳನ್ನು ಎದುರಿಸಲು ಬ್ರಿಕ್ಸ್ ದೇಶಗಳು ಒಂದಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ.
ಬ್ರಿಕ್ಸ್ ದೇಶಗಳ ನಡುವೆ ಕಸ್ಟಮ್ಸ್ ಸಹಕಾರಕ್ಕಾಗಿ ಒಂದು ಒಪ್ಪಂದಕ್ಕೆ ತತ್ವಶಃ ಒಪ್ಪಿಗೆ ಸಿಕ್ಕಿದ್ದು, ಅಧಿಕೃತ ಸಹಿ ಆಗಬೇಕಿದೆ. ಹಲವು ಸದಸ್ಯ ದೇಶಗಳ ಆಡಳಿತಾತ್ಮಕ ಅನುಮತಿಗಾಗಿ ಇದು ಕಾಯುತ್ತಿದೆ.
ಪ್ರಸ್ತುತ ಭಾರತೀಯ ಕಸ್ಟಮ್ಸ್ ಇಲಾಖೆಯು ರಷ್ಯಾ, ಇರಾನ್, ಯು.ಎ.ಇ, ಚೀನಾ ಮತ್ತು ಸೌದಿ ಅರೇಬಿಯಾ ರಾಷ್ಟ್ರಗಳ ಜೊತೆಗೆ ಇಂತಹ ಒಪ್ಪಂದಗಳನ್ನು ಹೊಂದಿದ್ದು, ಇದನ್ನು ಇನ್ನಷ್ಟು ದೇಶಗಳಿಗೆ ವಿಸ್ತರಿಸಬೇಕಿದೆ. ಇದರಿಂದ ಅಕ್ರಮ ತಡೆಯಲು ಮಾಹಿತಿ ಹಂಚಿಕೆ ಮತ್ತು ಸಹಕಾರ ಸುಲಭವಾಗುತ್ತದೆ.
ಅಂತಿಮವಾಗಿ, ಬ್ರಿಕ್ಸ್ ಒಕ್ಕೂಟವು ವಿಶ್ವ ವ್ಯಾಪಾರ ಸಂಸ್ಥೆಯ (WTO) ನಿಯಮಗಳಿಗೆ ಬದ್ಧವಾಗಿ ವ್ಯಾಪಾರ ನಡೆಸಬೇಕು ಹಾಗೂ ವ್ಯಾಪಾರವನ್ನೇ ಅಸ್ತ್ರವನ್ನಾಗಿ ಮಾಡಿಕೊಳ್ಳುವುದನ್ನು ವಿರೋಧಿಸಬೇಕು. ಅಷ್ಟೇ ಅಲ್ಲದೆ, ಅಮೆರಿಕದ ವಿರುದ್ಧ ನೇರ ಸಂಘರ್ಷದ ನೀತಿಗೆ ಮುಂದಾಗಬಾರದು.
ಭಾರತವು ಬ್ರಿಕ್ಸ್ ಮುಕ್ತ ವ್ಯಾಪಾರ ಒಪ್ಪಂದದ ಸಾಧ್ಯತೆಯನ್ನು ಪರಿಶೀಲಿಸಬೇಕು. ಆದರೆ ಈ ಒಕ್ಕೂಟದಲ್ಲಿ ಚೀನಾ ಪ್ರಬಲವಾಗಿದ್ದು, ಇಂತಹ ಒಪ್ಪಂದದ ದುರ್ಬಳಕೆ ಮಾಡಿಕೊಳ್ಳಬಹುದು ಎಂಬ ಆತಂಕ ಭಾರತಕ್ಕಿದೆ. ಇದೇ ಕಾರಣಕ್ಕೆ ಭಾರತ ಹಿಂದೆ ಆರ್ಸಿಇಪಿ ಒಪ್ಪಂದದಿಂದ ಹೊರಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಮೆರಿಕದ ವಿರುದ್ಧದ ಸಂಘರ್ಷದ ನೀತಿ
ಬ್ರಿಕ್ಸ್ ಮುಕ್ತ ವ್ಯಾಪಾರ ಒಪ್ಪಂದದ ಸಾಧ್ಯತೆಯನ್ನು ಭಾರತವು ಪರಿಶೀಲಿಸಬೇಕು. ಚೀನಾ ಈ ಒಕ್ಕೂಟದ ಪ್ರಬಲ ಶಕ್ತಿಯಾಗಿದೆ ಮತ್ತು ಯಾವುದೇ ಮುಕ್ತ ವ್ಯಾಪಾರ ಒಪ್ಪಂದದ ಪ್ರಯೋಜನವನ್ನು ಚೀನಾ ಪಡೆದುಕೊಳ್ಳಬಹುದು ಎಂಬ ಎಚ್ಚರಿಕೆ ಭಾರತಕ್ಕಿದೆ. ಇದೇ ಕಾರಣಕ್ಕಾಗಿಯೇ ಭಾರತವು ಈ ಹಿಂದೆ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆಯಿಂದ (RCEP) ಹಿಂದೆ ಸರಿದಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಒಕ್ಕೂಟದ ವ್ಯಾಪಾರ ಒಪ್ಪಂದದ ಬಗ್ಗೆ ನಮಗೆ ವಿಶ್ವಾಸ ಬರುವವರೆಗೆ, ಭಾರತವು ಬ್ರಿಕ್ಸ್ ದೇಶಗಳೊಂದಿಗೆ ಪ್ರತ್ಯೇಕ ಒಪ್ಪಂದಗಳನ್ನು ಪರಿಶೀಲಿಸಬೇಕು. ಹೇಗಾದರೂ ಮಾಡಿ, ಒಕ್ಕೂಟದೊಳಗಿನ ವ್ಯಾಪಾರ ಅಡಚಣೆಗಳನ್ನು ಸಂಪೂರ್ಣವಾಗಿ ತೆಗೆದುಹಾಕದಿದ್ದರೂ ಕಡಿಮೆ ಮಾಡುವುದು, ಸ್ಥಳೀಯ ಕರೆನ್ಸಿಗಳಲ್ಲಿ ವ್ಯವಹಾರ ನಡೆಸುವುದು, ವ್ಯಾಪಾರವನ್ನು ಉತ್ತೇಜಿಸುವುದು ಮತ್ತು ಬ್ರಿಕ್ಸ್‌ನ್ನು ಈಗಿರುವುದಕ್ಕಿಂತ ಇನ್ನೂ ಹೆಚ್ಚು ಅರ್ಥಪೂರ್ಣವಾಗಿ ಮಾಡುವುದು ನಮ್ಮ ಗುರಿಯಾಗಿರಬೇಕು.
ಆದ್ದರಿಂದ, ಬ್ರಿಕ್ಸ್ ಅಮೆರಿಕದ ವಿರುದ್ಧ ಯಾವುದೇ ಸಂಘರ್ಷ ನೀತಿಯನ್ನು ಅನುಸರಿಸಬೇಕಾದ ಅಗತ್ಯವಿಲ್ಲವಾದರೂ, ಅವೆಲ್ಲವೂ ಒಟ್ಟಾಗಿ ನಿಂತರೆ ಯಾರೂ ಅವರನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂಬ ಎಚ್ಚರಿಕೆ ಅದಕ್ಕಿರಬೇಕು. ಎಲ್ಲಕ್ಕೂ ಮೀರಿದಂತೆ, ಇದು ವಿಶ್ವದ ಜನಸಂಖ್ಯೆಯ ಸುಮಾರು ಶೇ. 50 ರಷ್ಟು, ಜಾಗತಿಕ ಜಿಡಿಪಿಯ ಶೇ. 40 ರಷ್ಟು ಮತ್ತು ಜಾಗತಿಕ ವ್ಯಾಪಾರದ ಸರಿಸುಮಾರು ಶೇ. 25-26 ರಷ್ಟು ಭಾಗವನ್ನು ಹೊಂದಿದೆ.
ಬ್ರಿಕ್ಸ್ ರಾಷ್ಟ್ರಗಳ ನಡುವಿನ ರಾಜಕೀಯ, ಕಾರ್ಯತಂತ್ರದ ಹಿತಾಸಕ್ತಿಗಳು ಮತ್ತು ಅರ್ಥ ವ್ಯವಸ್ಥೆಯಲ್ಲಿರುವ ಅಗಾಧ ವ್ಯತ್ಯಾಸಗಳನ್ನು ಗಮನಿಸಿದರೆ, ಒಮ್ಮುಖವನ್ನು ರೂಪಿಸುವುದು ಅನಿವಾರ್ಯವಾಗಿ ಪ್ರತಿಯೊಂದೂ ಕಟ್ಟುನಿಟ್ಟಾಗಿ ನಡೆಯಬೇಕು. ಆದ್ದರಿಂದ, 18ನೇ ಬ್ರಿಕ್ಸ್ ಸಭೆಯ ಪ್ರಮುಖ ವಿಷಯವಾದ ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಯನ್ನು ನಿರ್ಮಿಸುವ ವಿಚಾರದಲ್ಲಿ ಪ್ರಗತಿಯು ಸ್ಪಷ್ಟವಾದ ಮಾರ್ಗಸೂಚಿಯೊಂದಿಗೆ ತಾಳ್ಮೆಯಿಂದ ಮಾತ್ರ ಸಾಧ್ಯ.
ಮೋದಿಯವರು ತಮ್ಮ ಸಮಾರೋಪ ಭಾಷಣದಲ್ಲಿ ಉಲ್ಲೇಖಿಸಿದಂತೆ: "ಜಗತ್ತು ಈಗ ನಮ್ಮಿಂದ ಕೇವಲ ಕಲ್ಪನೆಗಳು ಮತ್ತು ಬದ್ಧತೆಗಳನ್ನು ಮಾತ್ರವಲ್ಲದೆ ಸ್ಪಷ್ಟ ಫಲಿತಾಂಶಗಳನ್ನು ನಿರೀಕ್ಷಿಸುತ್ತಿದೆ."
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು 'ದ ಫೆಡರಲ್ ಕರ್ನಾಟಕ'ದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

