ಹಸೀನಾಗೆ ಮಾತನಾಡಲು ಬಿಟ್ಟು ಭಾರತ ಎಸಗಿತೇ ಭಾರೀ ರಾಜತಾಂತ್ರಿಕ ಎಡವಟ್ಟು?
x
ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಅವರಿಗೆ ಕಳೆದ ಎರಡು ವರ್ಷಗಳಿಂದ ಭಾರತ ಆಶ್ರಯ ನೀಡುತ್ತ ಬಂದಿದೆ. ಹಸೀನಾ ಅವರ ಪುತ್ರ ಸಜೀಬ್‌ ವಜೆದ್‌ ಪ್ರಕಾರ ಭಾರತವು ಹಸೀನಾ ಅವರಿಗೆ ನೀಡುತ್ತಿರುವ ಗೌರವ ರಾಜಾತಿಥ್ಯಕ್ಕೇನೂ ಕಮ್ಮಿಯಿಲ್ಲ.

ಹಸೀನಾಗೆ ಮಾತನಾಡಲು ಬಿಟ್ಟು ಭಾರತ ಎಸಗಿತೇ ಭಾರೀ ರಾಜತಾಂತ್ರಿಕ ಎಡವಟ್ಟು?

ಹಸೀನಾ ಅವರ ದೆಹಲಿ ಮಾಧ್ಯಮ ಕಾರ್ಯಕ್ರಮದಿಂದಾದ ಅವಮಾನದಿಂದ ಬಾಂಗ್ಲಾ ಕುದಿಯುತ್ತಿದೆ. ಚೀನಾ ಸಾಧಿಸುತ್ತಿರುವ ಹಿಡಿತ, ಭಾರತ ಕಾರ್ಯತಂತ್ರದ ತಪ್ಪು ಲೆಕ್ಕಾಚಾರದ ನಡುವೆ ಉಭಯ ದೇಶಗಳ ಸಂಬಂಧ ಹಳಸಿದೆ.


Click the Play button to hear this message in audio format

ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಅವರು ಮೊನ್ನೆ ಅಗಸ್ಟ್‌ ಐದರಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲು ಭಾರತ ಅವಕಾಶ ಮಾಡಿಕೊಟ್ಟ ಕಾರಣಕ್ಕೆ ಬಾಂಗ್ಲಾದೇಶ ಸರ್ಕಾರ ಕೆರಳಿ ಕೆಂಡವಾಗಿದೆ. ಭಾರತದ ಕ್ರಮವನ್ನು ಅದು ಕಟು ಮಾತುಗಳಲ್ಲಿ ಟೀಕಿಸಿದೆ. ಇದರಿಂದಾಗಿ ಉಭಯ ದೇಶಗಳ ಸಂಬಂಧ ಅಪಾಯಕಾರಿ ತಿರುವಿನಲ್ಲಿ ಬಂದು ನಿಂತಿದೆ.

ತಮ್ಮ ಪದಚ್ಯುತಿಯ ಬಳಿಕ ಕಳೆದೆರಡು ವರ್ಷಗಳಿಂದ ಭಾರತದಲ್ಲಿಯೇ ಮೊಕ್ಕಾಂ ಹೂಡಿರುವ ಅವಾಮಿ ಲೀಗ್‌ ನಾಯಕಿ ಹಸೀನಾ ಅವರು ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳುವುದು ನಿಶ್ಚಿತ ಎಂಬುದನ್ನು ತಿಳಿಸಲು ಕಳೆದ ಬುಧವಾರ ವರ್ಚುವಲ್‌ ವಿಧಾನದ ಮೂಲಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ದೇಶದಿಂದ ಪಲಾಯನ ಮಾಡಿರುವ, ನರಮೇಧದ ಆರೋಪಕ್ಕೆ ಗುರಿಯಾಗಿರುವ ದೋಷಿ ಶೇಖ್‌ ಹಸೀನಾ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಬಾಂಗ್ಲಾ ಕೆಂಡಾಮಂಡಲವಾಗಿದೆ.

ʼಇದು ಬಾಂಗ್ಲಾದೇಶದ ಸಾರ್ವಭೌಮತೆಗೆ ಮಾಡಿರುವ ಅವಮಾನʼ ಎಂದು ವಿಶ್ಲೇಷಿಸಿರುವ ಬಾಂಗ್ಲಾದೇಶ ರಾಷ್ಟ್ರೀಯವಾದಿ ಪಕ್ಷ (ಬಿಎನ್‌ಪಿ)ದ ತಾರಿಕ್‌ ರೆಹಮಾನ್‌ ನೇತೃತ್ವದ ಸರ್ಕಾರವು, ಯಾವುದೇ ನೆಪವನ್ನು ಮುಂದೊಡ್ಡಿ ಮಾಧ್ಯಮಗಳೊಂದಿಗೆ ಮುಕ್ತವಾಗಿ ಸಂವಾದ ನಡೆಸಲು ಅವರಿಗೆ ಅವಕಾಶ ನೀಡಿರುವುದು ಬಾಂಗ್ಲಾ ಮತ್ತು ಭಾರತದ ನಡುವಿನ ಸೌಹಾರ್ದಯುತ ದ್ವಿಪಕ್ಷೀಯ ಸಂಬಂಧಕ್ಕೆ ಘಾಸಿಯುಂಟುಮಾಡಲಿದೆ ಎಂದು ಹೇಳಿದೆ.

ಬಾಂಗ್ಲಾದೇಶದ ಈ ಕಟುಟೀಕೆ ಎರಡು ನೆರೆಹೊರೆ ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧಗಳ ಮರುಹೊಂದಾಣಿಕೆಗೆ ಇದ್ದ ಅವಕಾಶ ಕೈತಪ್ಪಿ ಹೋಗುವಂತೆ ಮಾಡಿದೆ.

ನಾಯಕರ ಭೇಟಿ ಅಸಂಭವ

ಮುಂದಿನ ತಿಂಗಳು ನಡೆಯಲಿರುವ ಬ್ರಿಕ್ಸ್‌ ಶೃಂಗಸಭೆಯ ಔಟ್‌ರೀಚ್ ಅಧಿವೇಶನದಲ್ಲಿ ಭಾಗವಹಿಸಲು ಭಾರತ ನೀಡಿದ ಆಹ್ವಾನವನ್ನು ರೆಹಮಾನ್ ಸ್ವೀಕರಿಸುವುದು ಈಗ ಅಸಂಭವವೇ ಆಗಿದೆ. ಹಸೀನಾ ಪದಚ್ಯುತಿಯಾದ ದಿನದಿಂದ ಹದಗೆಟ್ಟಿರುವ ದ್ವಿಪಕ್ಷೀಯ ಸಂಬಂಧಗಳನ್ನು ತಿಳಿಗೊಳಿಸಲು ಉಭಯ ರಾಷ್ಟ್ರಗಳಿಗೆ ಇದೊಂದು ಉತ್ತಮ ಅವಕಾಶವೆಂದು ನಿರೀಕ್ಷಿಸಲಾಗಿತ್ತು. ಜೊತೆಗೆ ನೆರೆಹೊರೆಯ ದೇಶಗಳ ನಾಯಕರಾದ ರೆಹಮಾನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಇದು ಅವಕಾಶ ಮಾಡಿಕೊಡುತ್ತಿತ್ತು.

ಸಾರ್ವಭೌಮ ಸಮಾನತೆ, ಪರಸ್ಪರ ಗೌರವ, ಪರಸ್ಪರರ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡದಿರುವುದು ಮತ್ತು ರಾಷ್ಟ್ರೀಯ ಘನತೆಯ ಆಧಾರದ ಮೇಲೆ ಭಾರತದೊಂದಿಗೆ ರಚನಾತ್ಮಕ, ಪರಸ್ಪರ ಲಾಭದಾಯಕ ಮತ್ತು ಭವಿಷ್ಯಮುಖಿ ಸಂಬಂಧವನ್ನು ಬಯಸುವುದಾಗಿ ಢಾಕಾ ಬುಧವಾರ ಪುನರುಚ್ಚರಿಸಿದೆ. ಅಂದರೆ ಸಂದೇಶವು ಸ್ಪಷ್ಟವಾಗಿದೆ; ಬಾಂಗ್ಲಾ ಭಾರತದ ಅಧೀನದಲ್ಲಿರಲು ಸಿದ್ಧವಿಲ್ಲ, ಹಾಗೆಯೇ ತನ್ನ ಸಾರ್ವಭೌಮತೆಗೆ ಧಕ್ಕೆ ತರುವಂತಹ ಯಾವುದೇ ಕೃತ್ಯಗಳನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ.

ಹಸೀನಾ ಅವರು ಪತ್ರಿಕಾಗೋಷ್ಠಿಗೆ ಆಯ್ಕೆಮಾಡಿಕೊಂಡ ಸಮಯವೂ ಢಾಕಾದಲ್ಲಿ ಆಕ್ರೋಶ ಮೂಡಿಸಿದೆ. ಎರಡು ವರ್ಷಗಳ ಹಿಂದೆ ಅವರ ಸರ್ಕಾರ ಪತನಗೊಂಡ ದಿನವಾದ ಆಗಸ್ಟ್ 5 ರಂದೇ ಇದನ್ನು ನಡೆಸಲಾಗಿತ್ತು. ಬಾಂಗ್ಲಾದೇಶದಲ್ಲಿ ಇದನ್ನು 'ಜುಲೈ ಸಾಮೂಹಿಕ ದಂಗೆಯ ದಿನ' ಎಂದು ಆಚರಿಸಲಾಯಿತು. ಯಾವುದೇ ಮುಲಾಜಿಲ್ಲದೆ, ಢಾಕಾದಲ್ಲಿ ಹಸೀನಾ ಅವರನ್ನು "ಸಾಮೂಹಿಕ ಹಂತಕಿ" ಎಂದು ಬಣ್ಣಿಸಲಾಗುತ್ತಿದೆ.

ಲೆಕ್ಕಾಚಾರ ತಪ್ಪಿತೇ ಭಾರತ?

ಹಸೀನಾ ಅವರ ಪತ್ರಿಕಾಗೋಷ್ಠಿ ಕೇವಲ ಖಾಸಗಿ ಕಾರ್ಯಕ್ರಮ ಎಂದು ಹೇಳಿಕೆ ನೀಡುವ ಮೂಲಕ ಭಾರತವು ಆರಂಭದಲ್ಲಿ ಉಂಟಾದ ಹಾನಿಯ ಪ್ರಮಾಣವನ್ನು ತಗ್ಗಿಸಲು ಪ್ರಯತ್ನಿಸಿತು. ಆದರೂ, ಬಾಂಗ್ಲಾ ಈ ವಿವರಣೆಯಿಂದ ಸಮಾಧಾನಗೊಂಡಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ, ಭಾರತವು ಕಳೆದ ಎರಡು ವರ್ಷಗಳಿಂದ ಹಸೀನಾ ಅವರಿಗೆ ಆತಿಥ್ಯ ನೀಡುತ್ತ ಬಂದಿದೆ ಮತ್ತು ʼಹಸೀನಾ ಅವರನ್ನು ರಾಷ್ಟ್ರಾಧ್ಯಕ್ಷರಂತೆ ನೋಡಿಕೊಳ್ಳಲಾಗುತ್ತಿದೆ,ʼ ಎಂದು ಅವರ ಮಗ ಸಜೀಬ್ ವಜೆದ್ ಹೇಳಿಕೊಂಡಿದ್ದಾರೆ.

ಹಸೀನಾ ಅವರ ರಾಜಕೀಯ ಚಟುವಟಿಕೆಗಳ ಕುರಿತು ಬಾಂಗ್ಲಾದೇಶದ ಆಕ್ಷೇಪಣೆಗಳನ್ನು ಬಹಿರಂಗವಾಗಿ ಹಾಗೂ ರಾಜತಾಂತ್ರಿಕ ಮಾರ್ಗಗಳ ಮೂಲಕ ಅಲಕ್ಷಿಸಲು ಭಾರತ ತೆಗೆದುಕೊಂಡ ನಿರ್ಧಾರ ತಪ್ಪು ಲೆಕ್ಕಾಚಾರ. ಬಾಂಗ್ಲಾದೇಶದಲ್ಲಿ ತನ್ನದೇ ಆದ ದೀರ್ಘಕಾಲಿಕ ಕಾರ್ಯತಂತ್ರದ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವ ಬದಲು, ಭಾರತವು ಪದಚ್ಯುತ ನಾಯಕಿಯೊಬ್ಬರ ರಾಜಕೀಯ ಮಹತ್ವಾಕಾಂಕ್ಷೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಬಾಂಗ್ಲಾದೇಶದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬುದು ಚೆನ್ನಾಗಿ ತಿಳಿದಿದ್ದರೂ, ತನ್ನದೇ ಆದ ಭದ್ರತಾ ಹಿತಾಸಕ್ತಿಗಳನ್ನು ಬಲಿಕೊಟ್ಟು ಹಸೀನಾ ಅವರಿಗೆ ರಾಜಕೀಯ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಿರುವುದು ಭಾರತ ಮಾಡುತ್ತಿರುವ ರಾಜತಾಂತ್ರಿಕ ಎಡವಟ್ಟು ಎಂದೇ ಭಾವಿಸಬೇಕಾಗುತ್ತದೆ.

ಸರ್ಕಾರದ ವಿರುದ್ಧ ಹಸೀನಾ ವಾಗ್ದಾಳಿ

ಹಸೀನಾ ಅವರನ್ನು ಹಸ್ತಾಂತರ ಮಾಡುವಂತೆ ಬಾಂಗ್ಲಾ ಮತ್ತೆ ಮತ್ತೆ ಮನವಿ ಮಾಡುತ್ತಿದ್ದರೂ, ಪ್ರಧಾನಿಯಾಗಿದ್ದ ಅವರ ಅಧಿಕಾರ ಅವಧಿಯಲ್ಲಿ ಅವರ ಸರಕಾರವು ಭಾರತದ ಕಾರ್ಯತಂತ್ರದ ಹಿತಾಸಕ್ತಿಗಳಿಗೆ ಹೆಚ್ಚಿನ ಗಮನ ನೀಡಿದ್ದರಿಂದ, ನವದೆಹಲಿ ಇದಕ್ಕೆ ಒಪ್ಪಿಗೆ ಸೂಚಿಸುವ ಸಾಧ್ಯತೆ ಕ್ಷೀಣಿಸಿದೆ.

ಸುಮಾರು 30 ನಿಮಿಷಗಳ ಕಾಲ ನಡೆದ ತಮ್ಮ ಆಡಿಯೋ ಭಾಷಣದಲ್ಲಿ, 78 ವರ್ಷ ವಯಸ್ಸಿನ ನಾಯಕಿ ಹಸೀನಾ ಅವರು ವಿದ್ಯಾರ್ಥಿ ಚಳವಳಿಯ ಸಮಯದಲ್ಲಿ ತಮ್ಮ ಆಡಳಿತವು ತೆಗೆದುಕೊಂಡ ಕ್ರಮಗಳನ್ನು ಸಮರ್ಥಿಸಿಕೊಂಡರು ಮತ್ತು ತಮ್ಮ ಪದಚ್ಯುತಿಯ ನಂತರ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡಿದ್ದ ಅರ್ಥಶಾಸ್ತ್ರಜ್ಞ ಮುಹಮ್ಮದ್ ಯೂನುಸ್ ಸೇರಿದಂತೆ ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಭಾರೀ ವಿದೇಶಿ ಷಡ್ಯಂತ್ರದ ಸುಳಿವು ನೀಡಿದ ಅವರು, ಈ ಅಶಾಂತಿಯು "ಶಾಂತಿಯುತ ವಿದ್ಯಾರ್ಥಿ ಚಳವಳಿಯಾಗಿರಲಿಲ್ಲ, ಬದಲಿಗೆ ಹಿಂಸಾತ್ಮಕ ರಾಜಕೀಯ ಉದ್ದೇಶದೊಂದಿಗೆ ಅದೃಶ್ಯ ನಿರ್ದೇಶನಗಳ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಸಂಘಟಿತ ಗುಂಪುಗಳು ನಡೆಸಿದ ಕಾರ್ಯಾಚರಣೆಯಾಗಿತ್ತು" ಎಂದು ಆರೋಪಿಸಿದರು.

ಭಾವನಾತ್ಮಕ ವಾಕ್ಚಾತುರ್ಯ ಮತ್ತು ರಾಜಕೀಯ ಚತುರತೆಯ ಮಿಶ್ರಣವನ್ನು ಬಳಸಿಕೊಂಡು ಮಾತನಾಡಿದ ಹಸೀನಾ, ತಮ್ಮ ತಂದೆ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರನ್ನು ಮತ್ತು 1971ರ ವಿಮೋಚನಾ ಯುದ್ಧವನ್ನು ಇದೇ ಸಂದರ್ಭದಲ್ಲಿ ಸ್ಮರಿಸಿಕೊಂಡರು ಹಾಗೂ ಐತಿಹಾಸಿಕ ಸ್ಮಾರಕಗಳ ಧ್ವಂಸದ ಬಗ್ಗೆ ಮರುಗಿದರು. ಅವಾಮಿ ಲೀಗ್ ರಾಜಕೀಯ ಚಟುವಟಿಕೆಗಳಿಂದ ನಿಷೇಧಕ್ಕೆ ಒಳಗಾಗಿದ್ದರೂ ಮತ್ತು ಫೆಬ್ರವರಿಯಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ಹೇರಲಾಗಿದ್ದರೂ, ತಮ್ಮ ಜನರು ಸಂಕಷ್ಟಕ್ಕೆ ಸಿಲುಕಿದಾಗ ತನ್ನ ಸ್ವಂತ ಸುರಕ್ಷತೆಯ ಬಗ್ಗೆ ತಾನು ಯೋಚಿಸುವುದಿಲ್ಲ ಎಂದು ಪ್ರತಿಪಾದಿಸಿದರು. ಆ ಮೂಲಕ ಹಸೀನಾ ಅವರು ರಾಜಕೀಯ ಪುನರಾಗಮನಕ್ಕೆ ಚಿಂತನೆ ನಡೆಸುತ್ತಿರುವುದಾಗಿ ಸ್ಪಷ್ಟವಾಗಿ ತಿಳಿಸಿದರು. ಅವರು ತಮ್ಮ ಅಷ್ಟೂ ಅವಧಿಯ ಭಾಷಣದ ಆರಂಭಿಕದಲ್ಲಿ ತಮ್ಮ ಸರ್ಕಾರದ ಸಾಧನೆಗಳನ್ನು ಪ್ರಬಲವಾಗಿ ಬಿಂಬಿಸಿಕೊಳ್ಳಲು ಮರೆಯಲಿಲ್ಲ.

ಭಾರತದ ಭದ್ರತೆಗೆ ಅಪಾಯ

ಮರಣದಂಡನೆ ಶಿಕ್ಷೆಯನ್ನು ಎದುರಿಸುತ್ತಿರುವ ಹಸೀನಾ ಅವರು ಒಂದೊಮ್ಮೆ ಬಾಂಗ್ಲಾದೇಶಕ್ಕೆ ಮರಳಿದರೆ ಅದು ರಾಜಕೀಯ ಬಿರುಗಾಳಿಯನ್ನೇ ಸೃಷ್ಟಿಸಬಹುದು, ಹಾಗೇನಾದರೂ ಆಯಿತೆಂದರೆ ದೇಶದ ಪೂರ್ವ ಗಡಿಯಲ್ಲಿ ಪ್ರಾದೇಶಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವ ಭಾರತದ ಆಸೆಗಳನ್ನು ನುಚ್ಚುನೂರು ಮಾಡಲಿದೆ. ಅಸ್ಥಿರ ಬಾಂಗ್ಲಾದೇಶದಿಂದ ಭಾರತಕ್ಕೆ ಒದಗುವುದು ತೀವ್ರ ರಾಷ್ಟ್ರೀಯ ಭದ್ರತಾ ಅಪಾಯಗಳೇ ಹೊರತು ಇನ್ನೇನಲ್ಲ.

ಬಿಎನ್‌ಪಿ ನೇತೃತ್ವದ ಆಡಳಿತವು ಈ ವರ್ಷದ ಫೆಬ್ರವರಿಯಲ್ಲಿ ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತವನ್ನು ಗಳಿಸುವ ಮೂಲಕ ಅಧಿಕಾರಕ್ಕೆ ಬಂದಿತು. ರೆಹಮಾನ್ ಅವರು ಇನ್ನೂ ಭಾರತಕ್ಕೆ ಭೇಟಿ ನೀಡಿಲ್ಲ. ಇದು ಪ್ರಾದೇಶಿಕ ರಾಜಕೀಯ ಸಮೀಕರಣದಲ್ಲಿನ ಬದಲಾವಣೆಯನ್ನು ಎತ್ತಿ ತೋರಿಸುತ್ತದೆ. ಆದರೆ ಅವರು ಜೂನ್‌ನಲ್ಲಿ ಚೀನಾಕ್ಕೆ ಭೇಟಿ ನೀಡಿದ್ದರು. ಭಾರತದ ಪ್ರಮುಖ ಭೌಗೋಳಿಕ-ರಾಜಕೀಯ ಪ್ರತಿಸ್ಪರ್ಧಿಯಾದ ಚೀನಾದೊಂದಿಗೆ 17 ಒಪ್ಪಂದಗಳಿಗೆ ಸಹಿ ಹಾಕಿರುವುದು ಕೂಡ ಗಮನಾರ್ಹ ಸಂಗತಿ. ಅವರ ನಾಲ್ಕು ದಿನಗಳ ಭೇಟಿಯ ಸಮಯದಲ್ಲಿ, ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಏರಿಸಲಾಯಿತು.

ಮೊಂಗ್ಲಾ ಬಂದರನ್ನು ವಿಸ್ತರಿಸಲು ಢಾಕಾ ಮತ್ತು ಬೀಜಿಂಗ್ ನಡುವೆ ಸಹಿ ಮಾಡಲಾಗಿರುವ ಒಪ್ಪಂದ ಹಾಗೂ ಅದರ ನೆರೆಯ ಆರ್ಥಿಕ ವಲಯವನ್ನು ಅಭಿವೃದ್ಧಿಪಡಿಸುವ ಹಕ್ಕನ್ನು ಚೀನಾದ ಕಂಪನಿಗೆ ನೀಡುವ ನಿರ್ಧಾರವು ಭಾರತಕ್ಕೆ ಮತ್ತೊಂದು ಆತಂಕದ ವಿಷಯ.

ರೆಹಮಾನ್‌ ಸರ್ಕಾರಕ್ಕಿರುವ ಸವಾಲು

ಬಾಂಗ್ಲಾದೇಶದ ತೀಸ್ತಾ ನದಿ ಪುನರುಜ್ಜೀವನ ಯೋಜನೆಗೆ ಚೀನಾ ಬೆಂಬಲ ನೀಡುವುದಾಗಿ ಭರವಸೆ ನೀಡಿರುವುದು ಕೂಡ ಭಾರತಕ್ಕೆ ಕಳವಳ ತರಲಿದೆ. ಪಶ್ಚಿಮ ಬಂಗಾಳದಲ್ಲಿ ಆಗಿನ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ವಿರೋಧದಿಂದಾಗಿ ಭಾರತವು ಬಹುಕಾಲದಿಂದ ನಿರೀಕ್ಷಿಸಿದ್ದ ತೀಸ್ತಾ ನದಿ ನೀರು ಹಂಚಿಕೆ ಒಪ್ಪಂದವನ್ನು ಬಾಂಗ್ಲಾದೇಶಕ್ಕೆ ನೀಡುವಲ್ಲಿ ವಿಫಲವಾದ ನಂತರ, ಬಾಂಗ್ಲಾದೇಶವು ಚೀನಾದತ್ತ ಮುಖ ಮಾಡಿದೆ. ಪ್ರಸ್ತುತ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರವಿರುವುದರಿಂದ, ಬಾಂಗ್ಲಾದೇಶಕ್ಕೆ ತೀಸ್ತಾ ಒಪ್ಪಂದವನ್ನು ಒದಗಿಸುವುದು ಭಾರತಕ್ಕೆ ನಿಜಕ್ಕೂ ಕಷ್ಟಕರವಾಗಿ ಪರಿಣಮಿಸಿದರೆ ಅಚ್ಚರಿಯಿಲ್ಲ.

ರೆಹಮಾನ್ ಸರ್ಕಾರವು ಆಂತರಿಕ ರಾಜಕೀಯ ಸವಾಲುಗಳನ್ನು ಕೂಡ ಎದುರಿಸಬೇಕಾಗಿದೆ. ಅದರಲ್ಲೂ ವಿಶೇಷವಾಗಿ ನವದೆಹಲಿಯೊಂದಿಗೆ ಅತಿಯಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂದು ಸರ್ಕಾರದ ಬಗ್ಗೆ ಭಾವನೆ ಮೂಡಿದರೆ, ಅದು ವಿರೋಧ ಪಕ್ಷಗಳಿಂದ ತೀವ್ರ ವಿರೋಧವನ್ನು ಎದುರಿಸಬೇಕಾಗುವ ಅಪಾಯವಿದೆ.

ಸಂಸತ್ತಿನಲ್ಲಿ ಈಗ ವಿರೋಧ ಪಕ್ಷದ ನೇತೃತ್ವ ವಹಿಸಿರುವ ಪುನರುತ್ಥಾನಗೊಂಡ ಜಮಾತ್-ಎ-ಇಸ್ಲಾಮಿಯ ಒತ್ತಡವನ್ನು ರೆಹಮಾನ್ ಎದುರಿಸಬೇಕಾಗಿದೆ. ಸಂವಿಧಾನ ತಿದ್ದುಪಡಿಗಳನ್ನು ಪರಿಶೀಲಿಸುತ್ತಿರುವ ಸಂಸದೀಯ ಸಮಿತಿಯ ಭಾಗವಾಗಲು ಜಮಾತ್ ನಿರಾಕರಿಸಿದೆ. ವಿರೋಧ ಪಕ್ಷಗಳ ಬೆಂಬಲವಿದ್ದರೆ ಮಾತ್ರ ಸಾಧ್ಯವಿರುವ ಜುಲೈ ಒಪ್ಪಂದವನ್ನು ಕೂಡ ಅವರು ಜಾರಿಗೆ ತರಬೇಕಾಗಿದೆ. ಈ ಹಿನ್ನೆಲೆಯಲ್ಲಿ, ಅವರು ವಿರೋಧ ಪಕ್ಷಗಳನ್ನು ದೂರವಿಟ್ಟು ಏನನ್ನೂ ಸಾಧಿಸಲು ಸಾಧ್ಯವಿಲ್ಲ.

ಅಂತಿಮವಾಗಿ, ಹಸೀನಾ ಅವರ ಅಧಿಕಾರಾವಧಿಯಲ್ಲಿ ದ್ವಿಪಕ್ಷೀಯ ಸಂಬಂಧಗಳಲ್ಲಿ ಅನುಭವಿಸಿದ "ಸೊನಾಲಿ ಅಧ್ಯಾಯ" (ಸ್ವರ್ಣಯುಗದ ಅಧ್ಯಾಯ) ಮುಗಿದಿದೆ ಎಂಬುದನ್ನು ಭಾರತವು ಅರ್ಥ ಮಾಡಿಕೊಳ್ಳಲೇಬೇಕು. ಬಾಂಗ್ಲಾದೇಶದಲ್ಲಿ ಚೀನಾ ತನ್ನ ಹೆಜ್ಜೆಗುರುತನ್ನು ವಿಸ್ತರಿಸುತ್ತಿರುವುದರಿಂದ ಮತ್ತು ಅಮೆರಿಕವು ಹೆಚ್ಚು ಹೆಚ್ಚು ಸಕ್ರಿಯ ಪಾತ್ರ ವಹಿಸುತ್ತಿರುವುದರಿಂದ, ಭಾರತವು ತನ್ನ ನೆರೆಯ ದೇಶದೊಂದಿಗೆ ಹೆಚ್ಚು ವ್ಯಾವಹಾರಿಕ ಮತ್ತು ವಾಸ್ತವಿಕ ವಿದೇಶಾಂಗ ನೀತಿಯನ್ನು ಅನುಸರಿಸುವುದು ಅನಿವಾರ್ಯ. ಬಾಂಗ್ಲಾದೇಶದಲ್ಲಿನ ಹೊಸ ರಾಜಕೀಯ ವಾಸ್ತವತೆಗೆ ತಕ್ಕಂತೆ ಹೊಂದಿಕೊಳ್ಳಲು ವಿಫಲವಾದರೆ ಅದು ಭಾರತದ ಕಾರ್ಯತಂತ್ರ ಮತ್ತು ಭದ್ರತಾ ಹಿತಾಸಕ್ತಿಗಳನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Read More
Next Story