TK Arun

ಮೆಕಾಲೆ ಮತ್ತು ಭಾರತೀಯರಿಗೆ ದಕ್ಕಿದ ಇಂಗ್ಲಿಷ್ ಶಿಕ್ಷಣ: ಪ್ರಧಾನಿ ಮೋದಿ ಅರಿಯದ ಸತ್ಯಗಳು


ಮೆಕಾಲೆ ಮತ್ತು ಭಾರತೀಯರಿಗೆ ದಕ್ಕಿದ ಇಂಗ್ಲಿಷ್ ಶಿಕ್ಷಣ: ಪ್ರಧಾನಿ ಮೋದಿ ಅರಿಯದ ಸತ್ಯಗಳು
x
"ಥಾಮಸ್ ಬಾಬಿಂಗ್ಟನ್ ಮೆಕಾಲೆ ಭಾರತದ ಮೇಲೆ ಹೇರಿದ ಗುಲಾಮಗಿರಿಯ ಮನಸ್ಥಿತಿಯಿಂದ ನಾವೆಲ್ಲರೂ ಮುಕ್ತರಾಗಬೇಕು" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ನಾಗರಿಕರಿಗೆ ಕರೆ ನೀಡಿದರು.

ಇಂಗ್ಲಿಷ್ ಭಾಷಾ ಶಿಕ್ಷಣವನ್ನು ಪರಿಚಯಿಸಿದ್ದರಿಂದ ಭಾರತೀಯರಿಗೆ ಆಧುನಿಕ ಜ್ಞಾನದ ಜಗತ್ತನ್ನು ಪ್ರವೇಶಿಸಲು ಮತ್ತು ಶೋಷಿತ ಜಾತಿಗಳ ಜನರಿಗೆ ಕಲಿಕೆಯ ವಿಶಾಲ ಜಗತ್ತನ್ನು ಪ್ರವೇಶಿಸಲು ಅನುವಾಯಿತು.

ಮೆಕಾಲೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಲೆಕ್ಕಾಚಾರ ತಪ್ಪಾಗಿದೆ. ಭಾರತದಲ್ಲಿ ಇಂಗ್ಲಿಷ್ ಭಾಷೆಯ ಶಿಕ್ಷಣವನ್ನು ಪರಿಚಯಿಸಿದ್ದು ವಸಾಹತುಶಾಹಿಯು ಭಾರತಕ್ಕೆ ಮಾಡಿದ ಅತ್ಯುತ್ತಮ ಕೆಲಸಗಳಲ್ಲಿ ಒಂದು. ಇದಕ್ಕಾಗಿ ಅವರಿಗೆ ತಕ್ಕ ಗೌರವ ಸಲ್ಲಬೇಕು. ಇದು ಆಧುನಿಕ ಜ್ಞಾನದ ಜಗತ್ತನ್ನು ಪ್ರವೇಶಿಸಲು ಭಾರತೀಯರಿಗೆ ರಹದಾರಿಯನ್ನು ಕಲ್ಪಿಸಿತು. 16ನೇ ಮತ್ತು 17ನೇ ಶತಮಾನಗಳಲ್ಲಿ ಯುರೋಪಿನಾದ್ಯಂತ ಹರಡಿ ವಿದ್ವತ್ ಪ್ರಪಂಚವನ್ನೇ ಬುಡಮೇಲು ಮಾಡಿದ ವೈಜ್ಞಾನಿಕ ಕ್ರಾಂತಿಯ ಫಲವನ್ನು ಸವಿಯಲು, ಭಾರತೀಯ ಸಂಪ್ರದಾಯವು ಹೊರಗಿಟ್ಟಿದ್ದ ದೇಶದ ಶೋಷಿತ ಜಾತಿಗಳು ಕಲಿಕಾ ಜಗತ್ತನ್ನು ಪ್ರವೇಶಿಸಲು, ಮತ್ತು ಭಾರತದ ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಗಳ ಸಮೃದ್ಧಿ ಹಾಗೂ ಬೆಳವಣಿಗೆಗೆ ದಾರಿ ಮಾಡಿಕೊಟ್ಟಿದ್ದು ಇದೇ ಮೆಕಾಲೆ ಶಿಕ್ಷಣ ಪದ್ಧತಿ. ಇಂತಹ ಇಂಗ್ಲಿಷ್ ಶಿಕ್ಷಣವು ಭಾರತೀಯರಿಗೆ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಪರಿಕಲ್ಪನೆಗಳನ್ನು ಪರಿಚಯಿಸಿತು, ಅದು ರಾಜಪ್ರಭುತ್ವ ಮತ್ತು ಜಾತಿ ವ್ಯವಸ್ಥೆಗೆ ಹೊಚ್ಚ ಹೊಸತಾಗಿತ್ತು.

ಇಂಗ್ಲಿಷ್ ಶಿಕ್ಷಣಕ್ಕೆ ದಾರಿ ಮಾಡಿದ ನಿರ್ಧಾರ

ಮೆಕಾಲೆ ಅವರ ಶಿಕ್ಷಣದ ವರದಿಯನ್ನು ಖಂಡಿಸುವವರೆಲ್ಲರೂ, ಭಾರತದಲ್ಲಿ ಬ್ರಿಟಿಷರು ಅನುದಾನ ನೀಡುತ್ತಿದ್ದ ಸಾಂಪ್ರದಾಯಿಕ ಶಾಲಾ ಶಿಕ್ಷಣದ ಬದಲಿಗೆ ಇಂಗ್ಲಿಷ್ ಭಾಷೆಯ ಶಿಕ್ಷಣವನ್ನು ಶುರು ಮಾಡಿದ್ದಕ್ಕಾಗಿ, ಜೊತೆಗೆ ಇಂಗ್ಲಿಷ್ ಅನ್ನು “ಸಿಂಹಿಣಿಯ ಹಾಲು" ಎಂದು ಕರೆದ ಅಂಬೇಡ್ಕರ್ ಅವರನ್ನೂ ಖಂಡಿಸುತ್ತಾರೆ—ಅದನ್ನು ಕುಡಿದವರು ಗರ್ಜಿಸಲು ಶಕ್ತರಾದರು. ವಸಾಹತುಶಾಹಿ ಸರ್ಕಾರವು ಸಂಸ್ಕೃತ (ವರದಿಯಲ್ಲಿ ಅದನ್ನು 'Sanscrit' ಎಂದು ಉಲ್ಲೇಖಿಸಲಾಗಿದೆ) ಮತ್ತು ಅರೇಬಿಕ್ ಭಾಷೆಗೆ (ಪರ್ಷಿಯನ್-ನ್ನು ಅರೇಬಿಕ್ ಎಂದು ತಪ್ಪಾಗಿ ಭಾವಿಸುವಷ್ಟು ಮೆಕಾಲೆಗೆ ಅಜ್ಞಾನವಿತ್ತು) ಧನಸಹಾಯ ನೀಡುವುದನ್ನು ನಿಲ್ಲಿಸುವಂತೆ ಮೆಕಾಲೆ ಒತ್ತಡ ಹೇರಿದ್ದರಿಂದಲೇ ಸಿ.ವಿ. ರಾಮನ್, ಜಗದೀಶ್ ಚಂದ್ರ ಬೋಸ್, ಸತ್ಯೇಂದ್ರ ನಾಥ್ ಬೋಸ್, ಓ.ಎನ್. ರಾಮಚಂದ್ರನ್, ರವೀಂದ್ರನಾಥ ಟ್ಯಾಗೋರ್, ಗಾಂಧಿ ಮತ್ತು ನೆಹರು ಅವರಿಗೆ ಆಧುನಿಕ ಶಿಕ್ಷಣ ಪಡೆಯಲು ದಾರಿ ಮಾಡಿಕೊಟ್ಟಿತು.

ಇಂಗ್ಲಿಷ್ ಶಿಕ್ಷಣವು ಕೀಳರಿಮೆಯನ್ನು ಬಿತ್ತಿತು ಎಂಬ ಮಾತು ಸತ್ಯ. ಮೆಕಾಲೆ ನಿರೀಕ್ಷಿಸಿದಂತೆ ಅದು “ರಕ್ತ ಮತ್ತು ಬಣ್ಣದಲ್ಲಿ ಭಾರತೀಯರಾಗಿ, ಆದರೆ ಅಭಿರುಚಿ, ಅಭಿಪ್ರಾಯ, ನೈತಿಕತೆ ಮತ್ತು ಬುದ್ಧಿಶಕ್ತಿಯಲ್ಲಿ ಇಂಗ್ಲಿಷರೇ ಆಗಿರುವ ಒಂದು ವರ್ಗದ ಜನರನ್ನು" ಸೃಷ್ಟಿಸಿತು. ಆದರೆ ಮೆಕಾಲೆ ಹೇಳಿದಂತೆ ಅನೇಕ ಭಾರತೀಯರು ಭಾಷೆಯನ್ನು ಕಲಿತು, “ನಮಗೂ ಮತ್ತು ನಾವು ಆಳುವ ಕೋಟ್ಯಂತರ ಜನರ ನಡುವೆ ವ್ಯಾಖ್ಯಾನಕಾರರಾಗಿ ಕಾರ್ಯನಿರ್ವಹಿಸುವ ಒಂದು ವರ್ಗವನ್ನು ನಿರ್ಮಾಣ ಮಾಡುವುದಕ್ಕೆ" ಬದಲಾಗಿ, ವಸಾಹತುಶಾಹಿ ಆಡಳಿತದಿಂದ ಸ್ವಾತಂತ್ರ್ಯವನ್ನು ಗಳಿಸುವುದಕ್ಕಾಗಿ ಹೋರಾಟ ಆರಂಭಿಸಲು ಐರೋಪ್ಯ ಜ್ಞಾನೋದಯದ ಮೌಲ್ಯಗಳನ್ನು ಮತ್ತು ಪ್ರಜಾಪ್ರಭುತ್ವದ ಯೋಚನೆಗಳನ್ನು ಸವಿದರು.

ಬಹುಮಟ್ಟಿಗೆ ಭಾರತೀಯ ಭಾಷೆಗಳ ಔಪಚಾರಿಕ ವ್ಯಾಕರಣವನ್ನು ಸೃಜಿಸಿದವರು ಯುರೋಪಿಯನ್ನರು. ಸಹಜವಾಗಿ, ಅವರ ಮುಖ್ಯ ಉದ್ದೇಶವಿದ್ದುದು ಅವರು ದೇವರ ನುಡಿ ಎಂದೇ ನಂಬಿದ್ದ ಬೈಬಲ್‌ನ ಅನುವಾದವನ್ನು ಸರಿಯಾದ ರೀತಿಯಲ್ಲಿ ಮಾಡುವುದು. ಹೆಚ್ಚಿನ ಔಷಧೀಯ ಸಂಶೋಧನೆಯ ಉದ್ದೇಶ ಅಂತಹ ಸಂಶೋಧನೆ ಕೈಗೊಳ್ಳುವ ಕಂಪನಿಗಳಿಗೆ ಲಾಭ ಮಾಡಿಕೊಡುವುದು. ಆದರೆ, ಕೇವಲ ಲಾಭ ಗಳಿಸುವ ಕೆಟ್ಟ ಉದ್ದೇಶದಿಂದಲೇ ಸಿಪ್ರೊಫ್ಲೋಕ್ಸಾಸಿನ್ (ciprofloxacin) ಮತ್ತು ಅಜಿಥ್ರೊಮೈಸಿನ್ (azithromycin)ನ್ನು ಅಭಿವೃದ್ಧಿಪಡಿಸಲಾಗಿದೆ ಎಂಬ ಕಾರಣ ಮುಂದಿಟ್ಟು ಯಾರಾದರೂ ತಮ್ಮನ್ನು ತಾವು ಟೈಫಾಯಿಡ್‌ನಿಂದ ಗುಣಪಡಿಸಿಕೊಳ್ಳುವುದಿಲ್ಲ ಎಂದು ಹೇಳಲು ಸಾಧ್ಯವೇ? ಹೆಚ್ಚಿನ ಭಾರತೀಯ ಭಾಷೆಗಳು ಔಪಚಾರಿಕ ವ್ಯಾಕರಣದಿಂದ ಬಲಗೊಂಡು ಸಮೃದ್ಧವಾದವು. ಈ ಭಾಷೆಗಳಲ್ಲಿನ ಸಾಹಿತ್ಯವು ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಸಾಹಿತ್ಯಕ್ಕೆ ಸರಿಸಮನಾದ ಮಟ್ಟವನ್ನು ತಲುಪಿತು. ಅನುವಾದದ ಮೂಲಕ ಭಾರತೀಯ ಭಾಷೆಗಳ ಸಾಹಿತ್ಯಿಕ ಶ್ರೀಮಂತಿಕೆಯನ್ನು ಪ್ರವೇಶಿಸಲು ಬಯಸುವವರಿಗೆ ಇಂಗ್ಲಿಷ್ ಭಾಷೆಯೇ ವಿಫುಲ ಅವಕಾಶ ನೀಡುತ್ತದೆ.

ಮನುಸ್ಮೃತಿಯ ಧೋರಣೆಗಳು

ಬ್ರಿಟಿಷರು ಕಾನೂನುಗಳನ್ನು ಕ್ರೋಡೀಕರಿಸಿದರು ಮತ್ತು ಈ ಕಾನೂನುಗಳು ಎಲ್ಲಾ ಭಾರತೀಯರಿಗೂ ಅನ್ವಯವಾಗುತ್ತಿದ್ದವು, ಹಾಗೆಯೇ ಸಾಂಪ್ರದಾಯಿಕ ಕಾನೂನು ಮಾಡಿದಂತೆ ಇದು ಕೆಲವು ವಿಭಾಗಗಳಿಗೆ ವಿಶೇಷ ಸವಲತ್ತು ನೀಡಿರಲಿಲ್ಲ. ಅನೇಕ ಸಾಂಪ್ರದಾಯಿಕವಾದಿಗಳು ಹಿಂದೂ ಧರ್ಮದ ಪ್ರಾಚೀನ ಕಾನೂನು ಗ್ರಂಥವಾದ ಮನುಸ್ಮೃತಿಯನ್ನು ಪೂಜಿಸುತ್ತಾರೆ. ಬ್ರಾಹ್ಮಣನು ಎಲ್ಲಾ ಸೃಷ್ಟಿಯ ಒಡೆಯ ಎಂಬ ಪೂರ್ವಗ್ರಹದ ಮೇಲೆ ಈ ಗ್ರಂಥವು ನಿರ್ಮಿತವಾಗಿದೆ ಮತ್ತು ಉಳಿದ ಮನುಕುಲದ ಉದ್ದೇಶವು ಬ್ರಾಹ್ಮಣನ ಸೇವೆ ಮಾಡುವುದಾಗಿದೆ ಎಂದು ಹೇಳುತ್ತದೆ. ಒಬ್ಬ ಸಾಮಾನ್ಯ ಶ್ರಮಜೀವಿ ಅದೇ ಕಾಯಕವನ್ನು ಮಾಡಿದರೆ, ಅದನ್ನು ಅಪರಾಧ ಎಂದು ಪರಿಗಣಿಸಲಾಗುತ್ತಿತ್ತು, ಆದರೆ ಅದೇ ಕಾರ್ಯವನ್ನು ಪುರೋಹಿತ ವರ್ಗದ (ಬ್ರಾಹ್ಮಣರ) ಸದಸ್ಯರು ಮಾಡಿದರೆ ಅದನ್ನು ಅವರ ಹಕ್ಕು ಎಂದು ಪರಿಗಣಿಸಲಾಗುತ್ತಿತ್ತು.

ಮೆಕಾಲೆ ಅವರು ಭಾರತೀಯ ದಂಡ ಸಂಹಿತೆಯ (Indian Penal Code - IPC) ಲೇಖಕರೂ ಆಗಿದ್ದರು. ಇದು ಕನಿಷ್ಠ ಪಕ್ಷ ರೂಢಿಗತವಾಗಿ, ಎಲ್ಲಾ ಭಾರತೀಯರನ್ನು ನಿಯಂತ್ರಿಸಿತು ಮತ್ತು ಅಲ್ಪಸಂಖ್ಯಾತ ವಿಭಾಗಗಳಿಗೆ ಬಹುಸಂಖ್ಯಾತರ ಮೇಲೆ ಯಾವುದೇ ವಿಶೇಷ ಸವಲತ್ತು ನೀಡಿರಲಿಲ್ಲ. ಪ್ರಸ್ತುತ ಸರ್ಕಾರವು ಐಪಿಸಿಯನ್ನು ಸ್ಥಳೀಯ ಕಾನೂನಿನೊಂದಿಗೆ ಬದಲಾಯಿಸಿರುವುದಾಗಿ ಹೇಳಿಕೊಂಡಿದೆ. ಆದರೆ ಈ ಹೊಸ ಕಾನೂನು ಎನ್ನುವುದು, ಅಮಿತಾಬ್ ಬಚ್ಚನ್ ಅವರು 'ಝಂಜೀರ್' ಚಿತ್ರದಲ್ಲಿ ವಿಜಯ್ ಖನ್ನಾ ಪಾತ್ರ ಮಾಡಿದಾಗ ಇದ್ದುದಕ್ಕಿಂತ, 'ಶೋಲೆ' ಚಿತ್ರದಲ್ಲಿ ಜಯ್ ಪಾತ್ರ ಮಾಡಿದಾಗ ಹೊಸ ಮನುಷ್ಯನಾಗಿದ್ದರು ಅಥವಾ ಮಹಾಭಾರತದಲ್ಲಿ ದ್ರೌಪದಿಯನ್ನು ಪೀಡಿಸಿದ ಕೀಚಕನನ್ನು ಕೊಂದ ವಲಾಲ (ಕೆಲವು ಆವೃತ್ತಿಗಳಲ್ಲಿ ವಲ್ಲಭ) ಭೀಮನಿಗಿಂತ ಭಿನ್ನವಾಗಿದ್ದ ಎನ್ನುವಷ್ಟರ ಮಟ್ಟಿಗೆ ಮಾತ್ರ ಇದು ಹೊಸತಾಗಿದೆ ಎಂದು ಹೇಳಬಹುದು.

ಬ್ರಿಟಿಷ್ ಯುಗ ಮತ್ತು ಆಧುನಿಕ ಆಡಳಿತ ವ್ಯವಸ್ಥೆ

ಬ್ರಿಟಿಷರು ಆಧುನಿಕ ಆರೋಗ್ಯ ವ್ಯವಸ್ಥೆ, ಸಾರ್ವಜನಿಕ ಸುವ್ಯವಸ್ಥೆಯ ಯಂತ್ರೋಪಕರಣ, ವಿಕೇಂದ್ರೀಕೃತ ಆಡಳಿತ ಮತ್ತು ವ್ಯವಸ್ಥಿತ ಲೆಕ್ಕಪತ್ರ ನಿರ್ವಹಣೆಗೆ ಭದ್ರ ಬುನಾದಿಯನ್ನು ಹಾಕಿದರು. ಅವರು ಭಾರತದಲ್ಲಿ ಆಧುನಿಕ ಕೈಗಾರಿಕೆಯನ್ನು ಪರಿಚಯಿಸಿದರು, ಬಾಂಬೆ ಸ್ಟಾಕ್ ಎಕ್ಸ್-ಚೇಂಜ್ ತೆರೆದರು ಮತ್ತು ವಿಶಾಲವಾಗಿ ಹಂಚಿಕೆಯಾದ ಜಾಯಿಂಟ್ ಸ್ಟಾಕ್ ಕಂಪನಿ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.

ಬ್ರಿಟಿಷರು ಪ್ರತಿನಿಧಿ ಸರ್ಕಾರವನ್ನೂ ಸ್ಥಾಪಿಸಿದರು (ಸಹಜವಾಗಿ, ಇದು ಬ್ರಿಟಿಷ್ ರಾಜಪ್ರಭುತ್ವದ ಪ್ರಾಧಿಕಾರಕ್ಕೆ ಒಳಪಟ್ಟಿತ್ತು), ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಆರಂಭಿಕ ಸಮಾಲೋಚನೆಗಳಲ್ಲಿ ಭಾಗವಹಿಸಿದ ಕಾರ್ಮಿಕ ಸಂಘಗಳನ್ನು ಮತ್ತು ಕಾರ್ಖಾನೆಗಳು, ಗಣಿಗಳು ಹಾಗೂ ತೋಟಗಳಲ್ಲಿನ ಕೆಲಸದ ಪರಿಸ್ಥಿತಿಯನ್ನು ನಿಯಂತ್ರಿಸುವ ಕಾನೂನುಗಳನ್ನು ಕೂಡ ಜಾರಿಗೆ ತಂದರು.

ಬ್ರಿಟಿಷರು ಭಾರತದ ಸರ್ವೇ ಕೈಗೊಂಡರು—ಅದರ ಭೂಗೋಳ, ಸಸ್ಯ ಮತ್ತು ಪ್ರಾಣಿ ಸಂಕುಲದ ಸಮೀಕ್ಷೆ ನಡೆಸಿದರು. ಅವರು ದಶವಾರ್ಷಿಕ ಜನಗಣತಿಯೊಂದಿಗೆ ಭಾರತೀಯರ ಜನಗಣತಿ ಮಾಡಿದರು.

ಅತ್ಯಂತ ಗಮನಾರ್ಹ ಸಂಗತಿ ಏನೆಂದರೆ, ಬ್ರಿಟಿಷರು ಭಾರತವನ್ನು ಒಂದು ಪ್ರಾಚೀನ ನಾಗರಿಕತೆಯಿಂದ ಆಧುನಿಕ ರಾಷ್ಟ್ರವಾಗಿ ಪರಿವರ್ತಿಸಿದರು. ಸುಮಾರು ಒಂದು ಶತಮಾನದವರೆಗೆ ಹರಡಿದ್ದ ವಸಾಹತುಶಾಹಿ ವಿರೋಧಿ ಹೋರಾಟವು, ಮೊದಲ ಬಾರಿಗೆ, ರಾಜರು, ರಾಜಕುಮಾರರು, ನವಾಬರು ಮತ್ತು ತಮ್ಮದೇ ಆದ ಪ್ರಭುತ್ವದ ಆಡಳಿತಕ್ಕೆ ಒಳಗಾಗಿದ್ದ ಉಪಖಂಡದ ಜನರನ್ನೆಲ್ಲ ಒಗ್ಗೂಡಿಸಿ, ಪ್ರಜಾಪ್ರಭುತ್ವದ ಸಂವಿಧಾನ ಮತ್ತು ದೇಶವನ್ನು ಆಳಲು ಆಧುನಿಕ ಆಡಳಿತ ಯಂತ್ರೋಪಕರಣದ ಜೊತೆಗೆ ‘ಭಾರತದ ಜನರು’ ಎಂಬ ಪರಿವರ್ತನೆಗೆ ಒಳಗಾಯಿತು.

ಪ್ರಧಾನಿ ಮೋದಿ ಅವರು ಮಾತನಾಡುತ್ತ, ಪ್ರಾಚೀನ ಸ್ಮಾರಕಗಳನ್ನು ಮತ್ತು ಇತಿಹಾಸ ಹಾಗೂ ಸಂಸ್ಕೃತಿಯ ಬಗ್ಗೆ ಗೌರವವಿರುವವರು ತಮ್ಮ ಭೂತಕಾಲದ ಭೌತಿಕ ಅವಶೇಷಗಳನ್ನು ಹೇಗೆ ಸಂರಕ್ಷಿಸುತ್ತಾರೆ ಮತ್ತು ಅವುಗಳನ್ನು ಪ್ರವಾಸಿ ಆಕರ್ಷಣೆಯಾಗಿ ಹೇಗೆ ಪರಿವರ್ತಿಸುತ್ತಾರೆ ಎಂಬುದರ ಕುರಿತು ಪ್ರಸ್ತಾಪಿಸಿದರು. ಭಾರತದ ಅನೇಕ ಸ್ಮಾರಕಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ, ಮೆಕ್ಕಲು ಮಣ್ಣುಗಳು ಮತ್ತು ಕಾಡಿನ ಬೆಳವಣಿಗೆಯ ಪದರಗಳ ಅಡಿಯಲ್ಲಿ ಅವು ಹೂತುಹೋಗಿದ್ದವು. ಉದಾಹರಣೆಗೆ, ಬ್ರಿಟಿಷ್ ಆಡಳಿತಗಾರರು ಸಾಂಚಿ ಮತ್ತು ಖಜುರಾಹೊ ಅದ್ಭುತಗಳ ಮರುಶೋಧನೆ ನಡೆಸಿದರು. ಬ್ರಿಟಿಷ್ ಪುರಾತತ್ವಜ್ಞರು ಹರಪ್ಪಾ ಮತ್ತು ಮೊಹೆಂಜೊದಾರೊಗಳನ್ನು ಜಗತ್ತಿಗೆ ಅನಾವರಣ ಮಾಡಿದರು.

ಹೂತುಹೋದ ಉತ್ತಮ ಕಾರ್ಯಗಳು

ಬ್ರಿಟಿಷರು ಭಾರತಕ್ಕೆ ಮಾಡಿದ ಹಾನಿಯನ್ನು ಕೂಡ ಆಗಾಗ್ಗೆ ಪುನರುಚ್ಚರಿಸಲಾಗುತ್ತದೆ. ಆದರೆ ಅವರು ಮಾಡಿದ ಒಳ್ಳೆಯ ಕಾರ್ಯಗಳು ಇಲ್ಲಿ ಸಮಾಧಿ ಮಾಡಿದ ಬ್ರಿಟಿಷರ ಮೂಳೆಗಳೊಂದಿಗೆ ಹೂತುಹೋಗಿವೆ. ನಾವು ಕೆಟ್ಟದ್ದರ ಬಗ್ಗೆ ದೋಷಾರೋಪ ಮಾಡುವಾಗ, ಒಳ್ಳೆಯದಕ್ಕೆ ಗೌರವ ನೀಡುವ ಪ್ರಾಮಾಣಿಕತೆಯನ್ನು ಹೊಂದಿರಬೇಕು.

ಮೆಕಾಲೆ ಅವರ ವರದಿಯು ಪ್ರಾಚೀನ ಭಾರತವು ಗಣಿತ ಮತ್ತು ಖಗೋಳಶಾಸ್ತ್ರಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಮತ್ತು ಮಧ್ಯಕಾಲೀನ ಭಾರತವು ವಾಸ್ತುಶಿಲ್ಪ, ವ್ಯವಸ್ಥಾಪನಾ ತಂತ್ರ ಹಾಗೂ ನಗರ ಯೋಜನೆಯಲ್ಲಿ ಮಾಡಿದ ಪ್ರಗತಿಯ ಬಗ್ಗೆ ತೀವ್ರ ಅಜ್ಞಾನವನ್ನು ತೋರಿಸುತ್ತದೆ. ಭಾರತದ ಸಾಹಿತ್ಯಕ ಸಾಧನೆಗಳ ಮೇಲಿನ ಅವರ ತಿರಸ್ಕಾರವು ಭಾರತದ ವಿಜ್ಞಾನ, ಗಣಿತ ಮತ್ತು ತತ್ತ್ವಶಾಸ್ತ್ರಕ್ಕೆ ನೀಡಿದ ಕೊಡುಗೆಗಳ ಮೇಲಿನ ಅವರ ತಿರಸ್ಕಾರಕ್ಕಿಂತ ಕಡಿಮೆ ಎನ್ನುವುದನ್ನು ಗಮನಿಸಬೇಕು.

ಆ ಅಜ್ಞಾನವು ಭಾರತದ ಸಮಕಾಲೀನ ಗಣ್ಯರಲ್ಲಿ ತುಂಬಿಕೊಂಡಿದೆ. ಇವರು ತಮ್ಮ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಮತ್ತು ವಿದೇಶಿ ಪದವಿಗಳ ಬಗ್ಗೆ ಹೆಮ್ಮೆಯಿಂದ ಬೀಗುತ್ತಾರೆ, ಆದರೆ ಕಾಳಿದಾಸನ ಹೊರತು ಬೇರೆ ಯಾವ ಪ್ರಾಚೀನ ಕವಿಯ ಹೆಸರನ್ನೂ ಅವರು ಹೇಳುವುದಿಲ್ಲ, ಕಾಳಿದಾಸನ ಉಪಮೆಗಳಿಗಾಗಲಿ, ಭಾಸನ ಭಾಷಾ ಸೌಂದರ್ಯಕ್ಕಾಗಲಿ ಮತ್ತು ಮಾಘನ ಪಾಂಡಿತ್ಯಕ್ಕಾಗಲಿ ಅವರಲ್ಲಿ ಅಚ್ಚರಿಯ ನುಡಿಗಳಿಲ್ಲ.

“ಸಂಸ್ಕೃತವು ಎಲ್ಲಾ ಭಾರತೀಯ ಭಾಷೆಗಳ ತಾಯಿ" ಎಂಬ ಹುರುಳಿಲ್ಲದ ಮಾತನ್ನು ಅವರು ಆಗಾಗ ಹೇಳುತ್ತಲೇ ಇರುತ್ತಾರೆ. ಆದರೆ, ಸಂಸ್ಕೃತ ನಾಟಕಗಳಲ್ಲಿ ಮಾತ್ರ ಉಳಿದಿತ್ತು, ಕೇವಲ ಗಣ್ಯರು ಮಾತ್ರ ಸಂಸ್ಕೃತ ಮಾತನಾಡುತ್ತಿದ್ದರು ಎಂಬ ಸತ್ಯ ಅವರಿಗೆ ತಿಳಿದಿಲ್ಲ, ಕೇವಲ ಸಣ್ಣ ಪುಟ್ಟ ಪಾತ್ರಗಳು ಮತ್ತು ಬಹುತೇಕ ಮಹಿಳೆಯರು ಕೆಲವು ಪ್ರಾಕೃತಗಳನ್ನು ಮಾತನಾಡುತ್ತಿದ್ದರು. ಆಧುನಿಕ ಉತ್ತರ ಭಾರತದ ಭಾಷೆಗಳು ಹುಟ್ಟಿಕೊಂಡಿರುವುದು ವಿವಿಧ ಪ್ರಾಕೃತಗಳಿಂದ. ಆದರೆ, ದಕ್ಷಿಣ ಭಾರತದ ಭಾಷೆಗಳು ಹಾಗಲ್ಲ; ಅವು, ಒಂದು ಪ್ರೋಟೋ-ತಮಿಳಿನಿಂದ (ಮೂಲ ತಮಿಳು) ಬಂದಿದ್ದು, ಅವು ಉತ್ತರ ಭಾರತದ ಭಾಷಾ ಕುಟುಂಬಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿರುವ ಭಾಷಾ ಕುಟುಂಬಕ್ಕೆ ಸೇರಿವೆ.

ತಾಂತ್ರಿಕ ಪದಗಳ ಕೋಶ ಬೇಕು

ಇಂತಹ ಭಾರತೀಯ ಸಂಸ್ಕೃತಿಯಿಂದ ದೂರವಿರುವಿರುವುದಕ್ಕೆ ಇಂಗ್ಲಿಷ್ ಭಾಷೆಯನ್ನು ಕಲಿಯದೇ ಇರುವುದರಿಂದ ಉಂಟಾದದ್ದಲ್ಲ, ಬದಲಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವುದರಿಂದ ಆಗಿರುವ ಫಲ. ಇಂಗ್ಲಿಷ್‌ನಲ್ಲಿ ಪರಿಣತಿ ಇಲ್ಲದಿದ್ದರೂ ಒಬ್ಬ ಜಪಾನೀ ವಿಜ್ಞಾನಿಯು ನೊಬೆಲ್ ಪ್ರಶಸ್ತಿ ವಿಜೇತ ಸಂಶೋಧನೆಯನ್ನು ನಡೆಸಲು ಸಾಧ್ಯವಾಗಬಹುದು. ಅಂತಹ ಸಂಶೋಧನೆ ನಿರ್ವಹಿಸುವಂತೆ ಭಾರತೀಯ ಭಾಷೆಗಳನ್ನು ಸಜ್ಜುಗೊಳಿಸಲು, ವಿವಿಧ ವಿಭಾಗಗಳ ತಾಂತ್ರಿಕ ಪದಗಳ ಕೋಶಗಳನ್ನು ಅಭಿವೃದ್ಧಿಪಡಿಸಿ, ಪ್ರಮಾಣೀಕರಿಸಬೇಕು. ಅಲ್ಲದೆ, ಇಂಗ್ಲಿಷ್‌ನಲ್ಲಿ ಪರಿಣತಿ ಹೊಂದಿರುವ ಅನುವಾದಕರ ದೊಡ್ಡ ಗುಂಪನ್ನು ನಿರಂತರವಾಗಿ ಕೆಲಸಕ್ಕೆ ಹಚ್ಚಬೇಕು, ಇದರಿಂದ ಅವರು ಪ್ರಮಾಣಿತ ಪಠ್ಯಪುಸ್ತಕಗಳನ್ನು ಮಾತ್ರವಲ್ಲದೆ, ಹೊಸ ಸಂಶೋಧನಾ ಸಂಶೋಧನೆಗಳನ್ನೂ ಕೂಡ ಭಾರತೀಯ ಭಾಷೆಗಳಿಗೆ ಭಾಷಾಂತರಿಸುವ ಕೆಲಸ ಮಾಡಬೇಕು. ಇಂಗ್ಲಿಷ್‌ನಲ್ಲಿ ವ್ಯಾಪಕವಾದ ಪರಿಣತಿ ಇಲ್ಲದೆ, ಭಾರತೀಯ ಭಾಷೆಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯುವುದು ಕೇವಲ ಕನಸಿನ ಮಾತೇ ಸರಿ.

ಆದರೆ ಬ್ರಿಟಿಷರು ಮಾಡಿದ ಕೆಲವು ದುಷ್ಕೃತ್ಯಗಳು ಇಂದಿಗೂ ಜೀವಂತವಾಗಿವೆ, ಅವು ಇಂದಿನ ಭಾರತೀಯರ ಜೀವನವನ್ನು ವಿಷಮಯವಾಗಿ ಮಾಡುತ್ತಿವೆ. ಹಿಂದೂ ಮತ್ತು ಮುಸ್ಲಿಮರ ನಡುವಿನ ಕೋಮುವಾದದ ವಿಭಜನೆ ಅವುಗಳಲ್ಲಿ ಒಂದು. ಇದಕ್ಕಿಂತಲೂ ಹೆಚ್ಚು ಹಾನಿಕಾರಕವಾದದ್ದು ಏನೆಂದರೆ, ಒಂದು ಪ್ರದೇಶದಲ್ಲಿ ಏಕೈಕ ಭಾಷೆ, ಧರ್ಮ ಮತ್ತು ಏಕರೂಪದ ಸಂಸ್ಕೃತಿಯಿಂದ ವ್ಯಾಖ್ಯಾನಿಲಾಗಿರುವ ರಾಷ್ಟ್ರೀಯತೆಯ ಐರೋಪ್ಯ ಕಲ್ಪನೆ. ರಾಷ್ಟ್ರೀಯತೆಯ ಈ ಕಲ್ಪನೆಯು ವೈವಿಧ್ಯತೆಯನ್ನು ಅಪ್ಪಿಕೊಳ್ಳುವ ಭಾರತದ ನಾಗರಿಕತೆಯ ಪ್ರತಿಭೆಗೆ ವಿರುದ್ಧವಾಗಿದೆ. ಅಂತಹ ವೈವಿಧ್ಯತೆಯು ಅದರ ನಿಯಮಗಳಿಗೆ ಹೊಂದಿಕೆಯಾಗಿದ್ದರೆ ಮಾತ್ರ ಪ್ರಜಾಪ್ರಭುತ್ವವು ವೈವಿಧ್ಯತೆಯನ್ನು ಒಗ್ಗಟ್ಟಿನಲ್ಲಿ ವಿಲೀನಗೊಳಿಸಬಲ್ಲದು,

ಆದರೆ, ಭಾರತೀಯ ರಾಷ್ಟ್ರೀಯತೆಯ ಯುರೋಪಿಯನ್ ಆವೃತ್ತಿಯು "ಜೈ ಶ್ರೀ ರಾಮ್" ಅಥವಾ "ವಂದೇ ಮಾತರಂ" ಎಂಬ ಘೋಷಣೆಗಳೊಂದಿಗೆ, ಕತ್ತಿಯ ತುದಿಯಲ್ಲಿ ವೈವಿಧ್ಯತೆಯ ಪರಿಕಲ್ಪನೆಯನ್ನು ಬಲವಂತವಾಗಿ ನಿರ್ಮೂಲನೆ ಮಾಡಲು ಬಯಸುತ್ತದೆ. ರಾಷ್ಟ್ರೀಯತೆಯ ಈ ಭ್ರಷ್ಟ, ವಿಕೃತ ದೃಷ್ಟಿಕೋನವನ್ನು ನಿರ್ಮೂಲನೆ ಮಾಡುವುದು ಭಾರತದ ಐತಿಹಾಸಿಕ ನಿಜಸ್ಥಿತಿಯನ್ನು ಮರಳಿ ಪಡೆಯುವುದು ಅತ್ಯಂತ ತುರ್ತು ಕಾರ್ಯವಾಗಿದೆ.

Next Story