TK Arun

ಪ್ರಜಾಪ್ರಭುತ್ವದ ಅಸಲಿ ಹೀರೊ ಮತದಾರ: ಸಂಶಯದ ಲಾಭ ಆತನಿಗೇ ದಕ್ಕಲಿ, ಆಯೋಗಕ್ಕಲ್ಲ


ಪ್ರಜಾಪ್ರಭುತ್ವದ ಅಸಲಿ ಹೀರೊ ಮತದಾರ: ಸಂಶಯದ ಲಾಭ ಆತನಿಗೇ ದಕ್ಕಲಿ, ಆಯೋಗಕ್ಕಲ್ಲ
x
ಪಶ್ಚಿಮ ಬಂಗಾಲದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕೊಲ್ಕತ್ತಾದಲ್ಲಿ ಅಂಗಡಿಯಾತ ಟಿಎಂಸಿ ಮತ್ತು ಸಿಪಿಎಂ ಪಕ್ಷದ ಲಾಂಛನವನ್ನು ಹೊಂದಿರುವ ಧ್ವಜವನ್ನು ಪ್ರದರ್ಶಿಸುತ್ತಿರುವುದು.
Click the Play button to hear this message in audio format

ಪಶ್ಚಿಮ ಬಂಗಾಲದಲ್ಲಿ 60 ಲಕ್ಷಕ್ಕೂ ಅಧಿಕ ಮತದಾರರ ಅರ್ಹತೆ ಡೋಲಾಯಮಾನವಾಗಿದೆ. ಅವರಿಗೆ ಸೂಕ್ತ ನ್ಯಾಯ ದಕ್ಕಬೇಕಾಗಿದೆ. ಚುನಾವಣಾ ಆಯೋಗದ ವಿಳಂಬ ನೀತಿಯಿಂದ ಅವರ ಹಕ್ಕುಗಳಿಗೆ ಧಕ್ಕೆಯಾಗಬಾರದು.

ಪಶ್ಚಿಮ ಬಂಗಾಲದಲ್ಲಿ ಈ ತಿಂಗಳ 23 ಮತ್ತು 29ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಆದರೆ ಈ ರಾಜ್ಯದ ಸುಮಾರು ಆರವತ್ತು ಲಕ್ಷ ಮಂದಿ ಜನರು ಆ ದಿನಾಂಕಗಳಂದು ಮತ ಚಲಾವಣೆ ಮಾಡುವ ಬಗ್ಗೆ ಇನ್ನೂ ಅನಿಶ್ಚಿತತೆ ಎದುರಿಸುತ್ತಿದ್ದಾರೆ. ಹಕ್ಕು ಚಲಾಯಿಸುವ ಅವರ ಅರ್ಹತೆ ಈಗಲೂ ನ್ಯಾಯಾಂಗದ ಪರಿಶೀಲನೆಯಲ್ಲಿದೆ.

ಒಬ್ಬ ವ್ಯಕ್ತಿ ತಪ್ಪಿತಸ್ಥ ಎಂದು ಸಾಬೀತಾಗುವ ತನಕ ಆತನನ್ನು ನಿರಪರಾಧಿ ಎಂದು ಪರಿಗಣಿಸಬೇಕು ಎಂದು ಭಾರತದ ನ್ಯಾಯಶಾಸ್ತ್ರ ಹೇಳುತ್ತದೆ. ಈ ತತ್ವವು ಸೂಕ್ತವಾಗಿದೆ ಮತ್ತು ಮತದಾನದ ಹಕ್ಕು ಚಲಾಯಿಸಲು ಅನರ್ಹರು ಎಂಬ ಆರೋಪಕ್ಕೆ ಗುರಿಯಾಗಿರುವವರೀಗೂ ಇದು ಅನ್ವಯವಾಗಬೇಕು. ಮತದಾರರಾಗಿ ಅವರು ಹಕ್ಕು ಚಲಾಯಿಸಲು ಅರ್ಹರು ಹೌದೋ ಅಲ್ಲವೋ ಎಂಬುದನ್ನು ಶಂಕಿಸಲು ಇರುವ ಆಧಾರಗಳ ಸತ್ಯಾಸತ್ಯತೆ ಸ್ಥಾಪನೆಯಾಗುವ ತನಕವೂ ಅವರನ್ನು ಅನರ್ಹರು ಎಂದೇ ಭಾವಿಸಬೇಕಾಗುತ್ತದೆ. ಮತದಾರನಿಗೇ ಅನುಮಾನದ ಲಾಭ ಸಿಗಬೇಕು.

ಚುನಾವಣಾ ಆಯೋಗವು ಶುದ್ಧವಾದ ಮತದಾರರ ಪಟ್ಟಿಯನ್ನು ಹೊಂದಿರಬೇಕು ಎಂದು ಪಟ್ಟು ಹಿಡಿದು ಕುಳಿತಿರುವುದು ಅತ್ಯಂತ ಸಮರ್ಥನೀಯವಾಗಿದೆ. ಆದಾಗ್ಯೂ ಈ ಮೂಲಭೂತ ಅವಶ್ಯಕತೆ ವರ್ಷಪೂರ್ತಿ ಆಯೋಗದ ಕಾರ್ಯವೈಖರಿಗೆ ಬೆಳಕು ಚೆಲ್ಲುವ ನಿರಂತರ ಬೆಳಕಾಗಿ ಕಾರ್ಯನಿರ್ವಹಿಸುವುದಕ್ಕೆ ಬದಲಾಗಿ ಮುಂದಿನ ಸುತ್ತಿನ ಚುನಾವಣೆಗಳು ಹತ್ತಿರವಿರುವಾಗ ಆಯೋಗಕ್ಕೆ ಸಿಡಿಲು ಬಡಿದಂತೆ ಏಕಾಏಕಿ ನೆನಪಿಗೆ ಬಂದಿದೆ.

ಪರಿಷ್ಕರಣೆ ಎಂಬುದು ನಿರಂತರ ಪ್ರಕ್ರಿಯೆ

ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಪ್ರಕ್ರಿಯೆ ಏನಿದ್ದರೂ ನಿರಂತರವಾಗಿರಬೇಕು. ಅದು ವರ್ಷವಿಡೀ ಹಿನ್ನೆಲೆಯಲ್ಲಿ ನಡೆಯುತ್ತಿರಬೇಕು. ಜನನ ಮತ್ತು ಮರಣಗಳ ನೋಂದಣಿ, ಆಧಾರ್ ಕಾರ್ಡ್ನಲ್ಲಿ ವಿಳಾಸ ಬದಲಾವಣೆ, ಪಡಿತರ ಚೀಟಿಗಳನ್ನು ಒಂದು ರಾಜ್ಯದಿಂದ ಇನ್ನೊಂದಕ್ಕೆ ವರ್ಗಾಯಿಸುವುದು, ನಾನಾ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ವಾಹನ ನೋಂದಣಿ ಮತ್ತು ವರ್ಗಾವಣೆ, ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರ ಪಟ್ಟಿಗಳಲ್ಲಿ ದೀರ್ಘಕಾಲದ ಗೈರುಹಾಜರಿ, ಪಿಂಚಣಿ ಹಿಂದೆ ಪಡೆಯುವುದನ್ನು ಸ್ಥಗಿತಗೊಳಿಸುವುದು ಮೊದಲಾದ ನಾನಾ ಮೂಲಗಳಿಂದ ದತ್ತಾಂಶವನ್ನು ಸಂಗ್ರಹಿಸುವ ಮೂಲಕ ಈ ಪ್ರಕ್ರಿಯೆಗೆ ಚಾಲನೆ ನೀಡುತ್ತಿರಬೇಕು.

ಹಾಗೆ ಎಲ್ಲ ದತ್ತಾಂಶಗಳನ್ನು ಸಂಗ್ರಹಮಾಡಲು, ಒಗ್ಗೂಡಿಸಲು ಮತ್ತು ವಿಶ್ಲೇಷಣೆ ನಡೆಸಿ ಉಪಯುಕ್ತ ಮಾಹಿತಿ ಅಥವಾ ಇಂಟೆಲಿಜೆನ್ಸ್ ಸೃಷ್ಟಿಸಲು ತಂತ್ರಜ್ಞಾನ ಅವಕಾಶ ಮಾಡಿಕೊಡುತ್ತದೆ. ತೆರಿಗೆದಾರರ ಆದಾಯ, ಬಳಕೆ, ಉಳಿತಾಯ, ಆಸ್ತಿ ನಗದೀಕರಣ, ಬಂಡವಾಳದ ಲಾಭ ಮತ್ತು ನಷ್ಟಗಳಂತಹ ತರಹೇವಾರಿ ಚಟುವಟಿಕೆಗಳ ದತ್ತಾಂಶಗಳನ್ನು ಒಟ್ಟುಗೂಡಿಸಲು ಆದಾಯ ತೆರಿಗೆ ಇಲಾಖೆ ಶಕ್ತವಾಗಿದೆ. ಹಾಗಾಗಿ ತೆರಿಗೆದಾರರು ಸಲ್ಲಿಕೆ ಮಾಡುವ ತೆರಿಗೆ ರಿಟರ್ನ್ಸ್ ಗಳಲ್ಲಿನ ಹಕ್ಕುಗಳನ್ನು ಮಾತ್ರವೇ ಅವಲಂಬಿಸದೇ ಅವರ ತೆರಿಗೆ ಹೊಣೆಗಾರಿಕೆಯ ಸ್ಪಷ್ಟ ಚಿತ್ರಣವನ್ನು ಪಡೆಯಲು ಸಾಧ್ಯವಾಗುತ್ತಿದೆ.

ನಮ್ಮ ದೂರದೃಷ್ಟಿ ರಹಿತ ರಾಜಕಾರಣಿಗಳು ಮತ್ತು ನಾಗರಿಕ ಸೇವಾ ಅಧಿಕಾರಿಗಳು ಎಲೆಕ್ಟ್ರಾನಿಕ್ ವಿಶಿಷ್ಟ ಗುರುತಿನ ಯೋಜನೆ (ಆಧಾರ)ಯ ಆಧಾರದ ಮೇಲೆ ರೂಪಿಸಲಾದ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಅದರ ಪರಿಕಲ್ಪನೆ ಹಾಗೂ ಅನುಷ್ಠಾನ ಸಂದರ್ಭದಲ್ಲಿ ತೀವ್ರವಾಗಿ ವಿರೋಧಿಸಿದ್ದರು.

ಆದರೆ ಇಂದು? ಆ ಯೋಜನೆಯೇ ಬಹುತೇಕ ಜನರಿಗೆ ಹೆಮ್ಮೆಯ ಸಂಗತಿಯಾಗಿದೆ. ಅಂದು ಅದನ್ನು ಸಾರಾಸಗಟಾಗಿ ವಿರೋಧಿಸಿದ್ದ ರಾಜಕಾರಣಿಗಳು ಕೂಡ ಇಂದು ಅದರ ಬಗ್ಗೆ ಎದೆಯುಬ್ಬಿಸಿ ಮಾತನಾಡುತ್ತಾರೆ. ಆದರೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಮುಖ್ಯ ಉದ್ದೇಶ ರಾಜಕಾರಣಿಗಳಿಗೆ ಬಡಾಯಿ ಕೊಚ್ಚಿಕೊಳ್ಳಲು ಇರುವ ಅವಕಾಶವಲ್ಲ. ಬದಲಾಗಿ ಆಡಳಿತದಲ್ಲಿ ನೆರವಾಗುವುದಾಗಿದೆ. ನೇರ ಸೌಲಭ್ಯ ವರ್ಗಾವಣೆಯಷ್ಟೇ ಪ್ರಮುಖವಾದ ಆಡಳಿತಾತ್ಮಕ ಕಾರ್ಯವೆಂದರೆ ಈ ರೀತಿ ಕ್ರೋಢೀಕರಿಸಲು ಯೋಗ್ಯವಾದ ದತ್ತಾಂಶವನ್ನು ಸಿದ್ಧಪಡಿಸುವುದು.

ಜನರ ಕಲ್ಯಾಣವಲ್ಲ-ದಬಾವಣೆ

ಇವೆಲ್ಲವೂ 'ಕಣ್ಗಾವಲು ಸ್ಥಿತಿ'ಯನ್ನು ಪ್ರತಿಪಾದಿಸಿದಂತೆ ಆಗುತ್ತದೆಯೇ? ಖಂಡಿತ ಇಲ್ಲ. ಆಧುನಿಕ ರಾಷ್ಟ್ರವೊಂದು ಸಾರ್ವಜನಿಕ ಹಿತಾಸಕ್ತಿಯನ್ನು ಮುನ್ನಡೆಸಲು ತನ್ನ ನಾಗರಿಕರ ಬಗೆಗಿನ ಅಪಾರ ಪ್ರಮಾಣದ ದತ್ತಾಂಶದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಬ್ರಿಟನ್ನಲ್ಲಿ, ಸಂಭಾವ್ಯ ಹೊಸ ರೋಗಕಾರಕಗಳನ್ನು ಪತ್ತೆಹಚ್ಚಲು ಸರ್ಕಾರಿ ಪ್ರಯೋಗಾಲಯಗಳು ನಿಯಮಿತವಾಗಿ ಒಳಚರಂಡಿ ನೀರಿನ ಪರೀಕ್ಷೆಯನ್ನು ನಡೆಸುತ್ತವೆ; ಇಂತಹ ಪ್ರಕ್ರಿಯೆಯನ್ನು ನಡೆಸುವ ಮೂಲಕ ನಿರ್ದಿಷ್ಟ ಪ್ರದೇಶಗಳಲ್ಲಿ ಯಾವ ರೀತಿಯ ಮತ್ತು ಎಷ್ಟು ಪ್ರಮಾಣದ ಮಾದಕ ದ್ರವ್ಯಗಳನ್ನು ಸೇವಿಸಲಾಗುತ್ತಿದೆ ಎಂಬ ಮಾಹಿತಿಯೂ ಅವರಿಗೆ ಲಭ್ಯವಾಗುತ್ತದೆ. ಇದು ಉತ್ತಮ ಆರೋಗ್ಯ ಸೇವೆ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ದಾರಿಯಾಗುತ್ತದೆಯೇ ಹೊರತು, ಜನರ ಆಲೋಚನೆಗಳನ್ನು ನಿಯಂತ್ರಿಸುವ ಅಥವಾ ದಬ್ಬಾಳಿಕೆ ನಡೆಸುವ ಸಾಧನವಾಗುವುದಿಲ್ಲ.

ದತ್ತಾಂಶ ಆಧಾರಿತ ಆಡಳಿತ ಮತ್ತು ಕಣ್ಗಾವಲು ನಡುವಿನ ವ್ಯತ್ಯಾಸವೇನು ಎಂಬುದು ಒಂದು ಪ್ರತ್ಯೇಕ ವಿಷಯ. ಆದರೆ, ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ—ಸರ್ಕಾರಿ ಯಂತ್ರದ ಉದ್ದೇಶ ಹಾಗೂ ಜನರ ಕಡೆಗಿನ ಅದರ ಉತ್ತರದಾಯಿತ್ವ ಮತ್ತು ಮೇಲ್ವಿಚಾರಣಾ ಸಂಸ್ಥೆಗಳ ಅಸ್ತಿತ್ವವೇ ಸುಶಾಸನ ಮತ್ತು ಕಣ್ಗಾವಲಿನ ನಡುವಿನ ವಿಭಜಕ ರೇಖೆಯಾಗಿದೆ.

ಚುನಾವಣಾ ಆಯೋಗವು ವರ್ಷಪೂರ್ತಿ ಕಾರ್ಯನಿರ್ವಹಿಸಲು ವಿಫಲವಾಗಿ, ಚುನಾವಣೆಗಳು ಹತ್ತಿರವಿರುವಾಗ ಇದ್ದಕ್ಕಿದ್ದಂತೆ ಎಚ್ಚೆತ್ತುಕೊಂಡು, ಶುದ್ಧ ಮತದಾರರ ಪಟ್ಟಿಯನ್ನು ತಯಾರಿಸುವುದು ತನ್ನ ಕರ್ತವ್ಯ ಎಂಬುದು ಜ್ಞಾನೋದಯವಾಗಿ, ತನ್ನ ಆಡಳಿತಾತ್ಮಕ ಸಾಮರ್ಥ್ಯಕ್ಕೂ ಮೀರಿದ ಮಹತ್ವಾಕಾಂಕ್ಷೆಯ ಕಾರ್ಯಕ್ಕೆ ಕೈಹಾಕಿದರೆ—ಅದೂ ವಿಧಾನಸಭೆ ಚುನಾವಣೆಗಳನ್ನು ನಡೆಸುವ ಹೊತ್ತಿನಲ್ಲೇ ಹೀಗೆ ಮಾಡಿದರೆ—ಅದು ಮತದಾರರ ತಪ್ಪು ಎಂದು ಪರಿಗಣಿಸಲು ಸುತಾರಾಂ ಸಾಧ್ಯವಿಲ್ಲ.

ಮತದಾನದ ಹಕ್ಕು ಎಂಬುದು ಆಕಸ್ಮಿಕವೇ?

ಚುನಾವಣಾ ಆಯೋಗದ ಸ್ವಯಂಕೃತ ಲೋಪದೋಷಗಳಿಂದಾಗಿ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳುವುದು ಎಷ್ಟು ದೊಡ್ಡ ಅನ್ಯಾಯವೆಂದರೆ—ಕೈಗಾರಿಕಾ ಕ್ರಾಂತಿ ಮತ್ತು ಆರ್ಥಿಕ ಬೆಳವಣಿಗೆಯ ಭರದಲ್ಲಿ ಇಂದಿನ ಶ್ರೀಮಂತ ರಾಷ್ಟ್ರಗಳು ಹೊರಸೂಸಿದ ಹಸಿರುಮನೆ ಅನಿಲಗಳು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗಿ, ಇಂದು ಅಭಿವೃದ್ಧಿಶೀಲ ರಾಷ್ಟ್ರಗಳ ಬಡವರ ಜೀವನದ ಮೇಲೆ ತೀವ್ರ ಹವಾಮಾನ ವೈಪರೀತ್ಯಗಳ ಮೂಲಕ ಅನಾಹುತ ಸೃಷ್ಟಿಸುತ್ತಿರುವಷ್ಟೇ ದೊಡ್ಡ ಅನ್ಯಾಯವಾಗಿದೆ.

ಮತದಾರರ ಪಟ್ಟಿಯಲ್ಲಿರುವ ಕೆಲವು ಜನರ ಅರ್ಹತೆಯನ್ನು ಶಂಕಿಸಲು ನೀಡಲಾದ ಕಾರಣಗಳ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಗಳು ನಿಜಕ್ಕೂ ಆಘಾತಕಾರಿಯಾಗಿವೆ. ಮುಸ್ಲಿಂ ದಂಪತಿಗಳಾದ ಶಿಕ್ಷಕರಿಬ್ಬರು 1980ರ ದಶಕದಲ್ಲಿ ತಮ್ಮ ಮಗಳಿಗೆ 'ಅಮೃತಾ ಪ್ರಿಯದರ್ಶಿನಿ' ಎಂದು ಹೆಸರಿಡುವ ಧೈರ್ಯ ಮಾಡಿದ್ದರು.

ಮತದಾರರ ಪಟ್ಟಿಯನ್ನು ಸ್ಕ್ಯಾನ್ ಮಾಡುವ ಸಾಫ್ಟ್ವೇರ್ ಇದನ್ನು 'ಮಿಸ್ಮ್ಯಾಚ್ಡ್ ಸರ್ನೇಮ್' (ಹೆಸರು ಮತ್ತು ಉಪನಾಮ ತಾಳೆಯಾಗದ ಪ್ರಕರಣ) ಎಂದು ಗುರುತಿಸಿದೆ. ಇದರಿಂದಾಗಿ ಆ ಹೆಸರು ನ್ಯಾಯಾಂಗ ಪರಿಶೀಲನೆಯ ಪಟ್ಟಿಗೆ ಸೇರ್ಪಡೆಯಾಗಿದೆ. ಅದು ಪರಿಶೀಲನೆಗೆ ಬಂದಾಗ ಗೊಂದಲ ಬಗೆಹರಿಯುವುದು ಖಚಿತ. ಆದರೆ, ಅದು ಮತದಾರರ ಪಟ್ಟಿಯನ್ನು ಅಂತಿಮಗೊಳಿಸಬೇಕಾದ ಗಡುವು, ಅಂದರೆ ನಾಮಪತ್ರ ಸಲ್ಲಿಕೆಯ ದಿನಾಂಕಕ್ಕೂ ಮೊದಲು ಪರಿಶೀಲನೆಗೆ ಬರುತ್ತದೆಯೇ? ಅದು ಕೇವಲ ಆಕಸ್ಮಿಕ ಅಥವಾ ಅದೃಷ್ಟದ ವಿಷಯ.

ಆಯೋಗದ ವ್ಯಾಪ್ತಿ ಮೀರಿದ ಸಂಗತಿ

ಕೇವಲ ಮತದಾನದ ಉದ್ದೇಶಕ್ಕಾಗಿ ಮಾತ್ರ ಪೌರತ್ವವನ್ನು ನಿರ್ಧರಿಸುವುದು ತನ್ನ ಕೆಲಸ ಎಂದು ಚುನಾವಣಾ ಆಯೋಗವು ಪ್ರತಿಪಾದಿಸುತ್ತದೆ. ಇಲ್ಲ, ಯಾವುದೇ ಉದ್ದೇಶಕ್ಕಾಗಲಿ ಪೌರತ್ವವನ್ನು ನಿರ್ಧರಿಸುವುದು ಆಯೋಗದ ಕೆಲಸವಲ್ಲ. ಬೇರೊಬ್ಬರು ಪೌರರಲ್ಲ ಎಂಬುದಕ್ಕೆ ಯಾರಾದರೂ ನಂಬಲರ್ಹ ಪುರಾವೆಗಳನ್ನು ನೀಡಿದರೆ, ಆಯೋಗವು ಅದರ ಮೇಲೆ ಕ್ರಮ ಕೈಗೊಳ್ಳಬೇಕು. ಆದರೆ ಯಾವುದೇ ವ್ಯಕ್ತಿಯ ಪೌರತ್ವವನ್ನು ಸ್ಥಾಪಿಸುವುದು ಚುನಾವಣಾ ಆಯೋಗದ ವ್ಯಾಪ್ತಿ ಮತ್ತು ಸಾಮರ್ಥ್ಯ ಎರಡಕ್ಕೂ ಮೀರಿದ ವಿಷಯವಾಗಿದೆ.

ಇವೆಲ್ಲದರ ಜೊತೆಗೆ 'ಉದ್ದೇಶ-ಆಧಾರಿತ ಪೌರತ್ವ' ಎಂಬುದು ಯಾವುದೂ ಇಲ್ಲ. ಒಬ್ಬ ವ್ಯಕ್ತಿಯು ಪೌರನಾಗಿರಬೇಕು ಅಥವಾ ಪೌರನಲ್ಲದೇ ಇರಬೇಕು ಯಾರಾದರೂ ಮತದಾನದ ಉದ್ದೇಶಕ್ಕಾಗಿ ಪೌರನಲ್ಲದವನಾಗಿ ಮತ್ತು ಅದೇ ಸಮಯದಲ್ಲಿ ನೇರ ಸೌಲಭ್ಯ ವರ್ಗಾವಣೆಯನ್ನು ಪಡೆಯಲು ಪೌರನಾಗಿರಲು ಸಾಧ್ಯವಿಲ್ಲ.

ವೆನಿಸ್ನ ಆ ಹಳೆಯ ವರ್ತಕ ಶೈಲಾಕ್, ತಾನು ರಕ್ತ ಚೆಲ್ಲಿದರೂ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ, ತನಗೆ ಸೇರಬೇಕಾದ ಒಂದು ಪೌಂಡ್ ಮಾಂಸವನ್ನು ಹೇಗಾದರೂ ಪಡೆದೇ ತೀರುತ್ತೇನೆ ಎಂದು ಭಾವಿಸಿದ್ದ. ಆದರೆ ಶೈಲಾಕ್ ಯಶಸ್ವಿಯಾಗಲಿಲ್ಲ. ಭಾರತದ ಚುನಾವಣಾ ಆಯೋಗವು ಜನರ ಮತದಾನದ ಹಕ್ಕಿನ ಮೇಲೆ ತಾನು ಎಸಗುತ್ತಿರುವ ಹಿಂಸೆಯ ಗಂಭೀರ ಪರಿಣಾಮಗಳನ್ನು ನಿರ್ಲಕ್ಷಿಸಿ, ಅಂತಹದ್ದೇ ಪ್ರಯತ್ನಕ್ಕೆ ಕೈಹಾಕಿದರೆ ಅದಕ್ಕಿಂತ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಲು ಸಾಧ್ಯವೇ?


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story