
ಮತಗಳವು ಪ್ರಕರಣ: ವಿರೋಧಪಕ್ಷ ನಾಯಕ ಸ್ಥಾನದ ಗಟ್ಟಿತನ ಸಾಬೀತು ಮಾಡಿದ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕರ ಸ್ಫೋಟಕ ಆರೋಪಗಳು ಚುನಾವಣಾ ಆಯೋಗದ ವಿಶ್ವಾಸಾರ್ಹತೆಗೇ ಸವಾಲೆಸಗಿವೆ. ಪ್ರಜಾಪ್ರಭುತ್ವದ ಸಮಗ್ರತೆ ಕಾಪಾಡುವಲ್ಲಿ ವಿರೋಧ ಪಕ್ಷದ ನಾಯಕನ ಪಾತ್ರವನ್ನು ಒತ್ತಿಹೇಳುತ್ತವೆ.
ಇತ್ತೀಚಿನ ದಿನಗಳಲ್ಲಿ ನಡೆಸಿದ ಅತ್ಯಂತ ಮಹತ್ವದ ಸಾರ್ವಜನಿಕ ಪತ್ರಿಕಾಗೋಷ್ಠಿಯಲ್ಲಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮತದಾರರ ಪಟ್ಟಿಯನ್ನು ಹೇಗೆ ತಿರುಚಿದ್ದಾರೆ ಎಂಬುದರ ಕುರಿತು ಪುರಾವೆಗಳನ್ನು ಪ್ರಸ್ತುತಪಡಿಸಿದರು. 2024ರ ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಬಿಜೆಪಿ ಗೆಲುವಿನಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಪ್ರತಿಪಾದಿಸಿದರು.
ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ ಕಾಂಗ್ರೆಸ್ ಗೆದ್ದಿದ್ದರೂ, ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1,14,000 ಮತಗಳಿಗಿಂತ ಹೆಚ್ಚಿನ ಅಂತರದಿಂದ ಸೋತಿತ್ತು. ಚುನಾವಣಾ ಆಯೋಗವೇ ಒದಗಿಸಿದ ಮತದಾರರ ಪಟ್ಟಿಗಳ ಹಾರ್ಡ್-ಕಾಪಿಯ ವಿಶ್ಲೇಷಣೆಯನ್ನು ಉಲ್ಲೇಖಿಸಿ, ರಾಹುಲ್ ಗಾಂಧಿ ಐದು ವಂಚನೆಯ ವಿಧಾನಗಳ ಮೂಲಕ 1,00,250 ನಕಲಿ ಮತಗಳನ್ನು ಸೇರಿಸಲಾಗಿದೆ ಎಂದು ಆರೋಪಿಸಿದರು.
ಅವುಗಳೆಂದರೆ, ನಕಲಿ ಮತದಾರರು, ನಕಲಿ ವಿಳಾಸಗಳನ್ನು ಹೊಂದಿರುವ ಮತದಾರರು, ದೊಡ್ಡ ಸಂಖ್ಯೆಯ ಅಥವಾ ಒಂದೇ ವಿಳಾಸದಲ್ಲಿ ಇರುವ ಮತದಾರರು, ಅಮಾನ್ಯ ಛಾಯಾಚಿತ್ರಗಳನ್ನು ಹೊಂದಿರುವ ಮತದಾರರು ಮತ್ತು ಅಸ್ತಿತ್ವದಲ್ಲಿಲ್ಲದ ಹೊಸ ಮತದಾರರು. ಅವರ ಪ್ರಕಾರ, ದೇಶದಾದ್ಯಂತ ಅಲ್ಪ ಮತಗಳ ಅಂತರದ ಕ್ಷೇತ್ರಗಳಲ್ಲಿ ಬಿಜೆಪಿಗೆ ಅನಗತ್ಯ ಲಾಭ ನೀಡುವ ಸಂಘಟಿತ ಯೋಜನೆಯ ಭಾಗವಾಗಿ ಮತದಾರರ ಪಟ್ಟಿ ವಂಚನೆಯ ಮೂಲಕ "ಚುನಾವಣಾ ಕಳವು ಮಾಡಲಾಗಿದೆ".
ಚುನಾವಣಾ ಆಯೋಗದ ನಿರಾಕರಣೆ
ಚುನಾವಣಾ ಆಯೋಗವು ಈ ಆರೋಪಗಳನ್ನು ಆಧಾರರಹಿತ ಮತ್ತು ಈ ಹಿಂದೆ ನಿರಾಕರಿಸಲಾದ ಆರೋಪಗಳ ಪುನರಾವರ್ತನೆ ಎಂದು ತಳ್ಳಿಹಾಕಿದೆ. ರಾಹುಲ್ ಗಾಂಧಿ ಅವರು ಸರಿಯಾದ ಕಾರ್ಯವಿಧಾನದ ಮೂಲಕ ಔಪಚಾರಿಕ, ಪ್ರಮಾಣಬದ್ಧ ದೂರು ಸಲ್ಲಿಸಬೇಕು ಅಥವಾ ದೇಶದ ಕ್ಷಮೆ ಕೇಳಬೇಕು ಎಂದು ಅದು ಒತ್ತಾಯಿಸಿದೆ.
ಇದಾದ ಬಳಿಕ, ಕರ್ನಾಟಕ, ಮಹಾರಾಷ್ಟ್ರ ಮತ್ತು ಹರಿಯಾಣದ ಮುಖ್ಯ ಚುನಾವಣಾ ಅಧಿಕಾರಿಗಳು ಕೂಡ ರಾಹುಲ್ ಅವರಿಗೆ ಪತ್ರ ಬರೆದು, ಆರೋಪಗಳ ಬಗ್ಗೆ ಅಧಿಕೃತ ತನಿಖೆ ನಡೆಸಲು 1960ರ ಮತದಾರರ ನೋಂದಣಿ ನಿಯಮಗಳ ನಿಯಮ 20(3)(ಬಿ) ಅಡಿಯಲ್ಲಿ ಪ್ರಮಾಣ ವಚನಬದ್ಧ ಅಧಿಕೃತ ದೂರು ಸಲ್ಲಿಸುವಂತೆ ಕೇಳಿದ್ದಾರೆ.
ಮತದಾರರ ದತ್ತಾಂಶವು ಚುನಾವಣಾ ಆಯೋಗಕ್ಕೆ ಸೇರಿದ್ದು ಮತ್ತು ಪುರಾವೆಯ ಹೊರೆ ಅವರ ಮೇಲಿದೆಯೇ ಹೊರತು ತಮ್ಮ ಮೇಲಲ್ಲ ಎಂದು ವಾದಿಸಿದ ರಾಹುಲ್, ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿದರು. ಅಲ್ಲದೆ, ಸಂವಿಧಾನವನ್ನು ಎತ್ತಿಹಿಡಿಯುವುದಾಗಿ ಸಂಸತ್ತಿನಲ್ಲಿ ಈಗಾಗಲೇ ಪ್ರಮಾಣ ವಚನ ಸ್ವೀಕರಿಸಿದ್ದಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಪರಿಷ್ಕರಣೆಯ ನಂತರ ಕರಡು ಮತದಾರರ ಪಟ್ಟಿಗಳನ್ನು ಸಿದ್ಧಪಡಿಸಿದ್ದು, ಆ ಬಳಿಕ ಅಂತಿಮಗೊಂಡ ಕರಡು ಪಟ್ಟಿಯ ನಂತರ 30 ದಿನಗಳ ಅವಧಿಯಲ್ಲಿ ಸಲ್ಲಿಸಬೇಕಾದ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ನಿಯಮ 20(3)(ಬಿ) ಉಲ್ಲೇಖಿಸುತ್ತದೆ, ಆದ್ದರಿಂದ ಚುನಾವಣಾ ಆಯೋಗದ ಈ ಬೇಡಿಕೆ ಸಮರ್ಥನೀಯವಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆರಂಭಿಕ ತನಿಖೆಗೂ ನಿರಾಕರಿಸಿದ ಚುನಾವಣಾ ಆಯೋಗದ ನಿಲುವು, ಮತ್ತು ಸಂಪೂರ್ಣ ಹೊಣೆಯನ್ನು ರಾಹುಲ್ ಮೇಲೆ ವರ್ಗಾಯಿಸಲು ಮುಂದಾಗಿರುವುದು, ಚುನಾವಣಾ ಆಯೋಗವು ತಟಸ್ಥವಾಗಿಲ್ಲ ಅಥವಾ ಪಾರದರ್ಶಕವಾಗಿಲ್ಲ ಎಂಬ ದೀರ್ಘಕಾಲದ ಅನುಮಾನಗಳನ್ನು ಅನೇಕರಲ್ಲಿ ದೃಢಪಡಿಸಿದೆ.
ವಿರೋಧ ಪಕ್ಷದ ನಾಯಕನ ಹಕ್ಕು
ಈಗ ನಡೆಯುತ್ತಿರುವ ಪ್ರಹಸನದ ಹಿನ್ನೆಲೆಯಲ್ಲಿ, ಎರಡು ಪ್ರಮುಖ ಪ್ರಶ್ನೆಗಳು ಉದ್ಭವಿಸುತ್ತವೆ. ಮೊದಲನೆಯದು, ಒಬ್ಬ ಪ್ರಜೆ ಮತ್ತು ರಾಜಕಾರಣಿಯಾಗಿ ರಾಹುಲ್ ಗಾಂಧಿ ಮತ್ತು ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿಯ ನಡುವೆ ಇರುವ ವ್ಯತ್ಯಾಸವನ್ನು ಗುರುತಿಸಬೇಕೇ ಮತ್ತು ಚುನಾವಣಾ ಆಯೋಗವು ವಿರೋಧ ಪಕ್ಷದ ನಾಯಕನನ್ನು ಅಂತಹ ತಿರಸ್ಕಾರದಿಂದ ನಡೆಸಿಕೊಳ್ಳಬಹುದೇ?
ವಿರೋಧ ಪಕ್ಷದ ನಾಯಕ ಯಾರು? ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆ ಮತ್ತು ರಾಜ್ಯ ಆಡಳಿತ ಯಂತ್ರದ ಕಾರ್ಯನಿರ್ವಹಣೆಯಲ್ಲಿ ಅವರ ಪಾತ್ರವೇನು? 1977ರ ಕಾಯ್ದೆಯ ಪ್ರಕಾರ, ವಿರೋಧ ಪಕ್ಷದ ನಾಯಕರು ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಸರ್ಕಾರದಲ್ಲಿ ಇಲ್ಲದ ಅತಿದೊಡ್ಡ ರಾಜಕೀಯ ಪಕ್ಷದ ಸಂಸದೀಯ ಅಧ್ಯಕ್ಷರಾಗಿರುತ್ತಾರೆ, ಮತ್ತು ಅವರನ್ನು ಕ್ರಮವಾಗಿ ಲೋಕಸಭಾ ಸ್ಪೀಕರ್ ಅಥವಾ ರಾಜ್ಯಸಭೆಯ ಸಭಾಪತಿ ಅಧಿಕೃತವಾಗಿ ಗುರುತಿಸುತ್ತಾರೆ.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅವರು ಸಂಪುಟ ದರ್ಜೆ ಮಂತ್ರಿಯ ಸ್ಥಾನಮಾನದೊಂದಿಗೆ ಶಾಸನಾತ್ಮಕ ಅಧಿಕಾರವನ್ನು ಹೊಂದಿರುತ್ತಾರೆ ಮತ್ತು ಭಾರತೀಯ ಸರ್ಕಾರದ ಆದ್ಯತಾ ಕ್ರಮದಲ್ಲಿ ಏಳನೇ ಸ್ಥಾನವನ್ನು ಹೊಂದಿರುತ್ತಾರೆ. ಸಿಬಿಐ ನಿರ್ದೇಶಕರು, ಜಾರಿ ನಿರ್ದೇಶಕರು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು, ಲೋಕಪಾಲ ಅಧ್ಯಕ್ಷರು, ಮತ್ತು ಸರ್ಕಾರದ ಲೆಕ್ಕಪರಿಶೋಧನೆ ಮತ್ತು ವೆಚ್ಚ ಸಮಿತಿಗಳ ಅಧ್ಯಕ್ಷರಾಗಿಯೂ ವಿರೋಧ ಪಕ್ಷದ ನಾಯಕರು ಕಾರ್ಯನಿರ್ವಹಿಸುತ್ತಾರೆ.
ಅತ್ಯಂತ ಮುಖ್ಯವಾಗಿ, ಅವರು ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಲ್ಲೂ ಸೇವೆ ಸಲ್ಲಿಸುತ್ತಾರೆ. ಈ ನೇಮಕಾತಿಗಳಲ್ಲಿ ವಿರೋಧ ಪಕ್ಷದ ನಾಯಕರಿಗೆ ಯಾವುದಾದರೂ ನೈಜ ಅಧಿಕಾರವಿದೆಯೇ ಎಂಬುದು ಬೇರೆ ವಿಷಯ, ವಿಶೇಷವಾಗಿ 2023ರ ಮಸೂದೆಯ ನಂತರ ಪ್ರಧಾನಿ ನೇತೃತ್ವದ ಮೂರು ಸದಸ್ಯರ ಸಮಿತಿಯನ್ನು ಮರುರಚನೆ ಮಾಡಿ, ಭಾರತದ ಮುಖ್ಯ ನ್ಯಾಯಮೂರ್ತಿಗಳ ಬದಲಿಗೆ ಕೇಂದ್ರ ಕ್ಯಾಬಿನೆಟ್ ಮಂತ್ರಿಯನ್ನು ನೇಮಿಸಲಾಗಿದೆ. ಆದರೂ, ತಾತ್ವಿಕವಾಗಿ, ನೇಮಕಾತಿ ಸಮಿತಿಯಲ್ಲಿ ವಿರೋಧ ಪಕ್ಷದ ನಾಯಕರು ಇರುವ ಕಾರಣ, ಚುನಾವಣಾ ಆಯೋಗವು ಅವರಿಗೆ ಉತ್ತರದಾಯಿಯಾಗಿ ಉಳಿಯುತ್ತದೆ.
ಛಾಯಾ ಪ್ರಧಾನಿ ಸ್ಥಾನಮಾನ
ಇನ್ನೂ ಒಂದು ಗಮನಾರ್ಹ ಸಂಗತಿ ಎಂದರೆ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನನ್ನು ‘ಛಾಯಾ ಪ್ರಧಾನಿ’ ಎಂದು ಕರೆಯಲಾಗುತ್ತದೆ. ಒಂದು ವೇಳೆ ಸರ್ಕಾರ ರಾಜೀನಾಮೆ ನೀಡಿದರೆ ಅಥವಾ ಸದನದಲ್ಲಿ ವಿಶ್ವಾಸಮತ ಕಳೆದುಕೊಂಡರೆ ಆತ ಅಧಿಕಾರವನ್ನು ವಹಿಸಿಕೊಳ್ಳಲು ‘ಛಾಯಾ ಸಂಪುಟ’ವನ್ನು ರಚಿಸುತ್ತಾನೆ. 2012ರಲ್ಲಿ ಪ್ರಕಟವಾದ ಭಾರತೀಯ ಸಂಸತ್ತಿನ ಅಧಿಕೃತ ಕೈಪಿಡಿಯಲ್ಲಿಯೇ ಇದನ್ನು ತಿಳಿಸಲಾಗಿದೆ.
ಜಗತ್ತಿನಾದ್ಯಂತ ಪ್ರಜಾಪ್ರಭುತ್ವದ ಸಂಪ್ರದಾಯಗಳಿಗೆ ಅನುಗುಣವಾಗಿ ವಿರೋಧ ಪಕ್ಷದ ನಾಯಕರು ಸಂಸದೀಯ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಇದರಲ್ಲಿ ಈ ಕೆಳಗಿನ ಜವಾಬ್ದಾರಿಗಳು ಒಳಗೊಂಡಿರುತ್ತವೆ;
• ಸರ್ಕಾರದ ನೀತಿ-ನಿರ್ಧಾರಗಳು ಮತ್ತು ಕ್ರಮಗಳ ಬಗ್ಗೆ ರಚನಾತ್ಮಕ ಟೀಕೆಯನ್ನು ಮಾಡುವುದು.
• ಆಡಳಿತದಲ್ಲಿ ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆಯನ್ನು ಖಾತರಿಪಡಿಸುವುದು.
• ಪರ್ಯಾಯ ನೀತಿಗಳು ಮತ್ತು ದೃಷ್ಟಿಕೋನಗಳನ್ನು ಒದಗಿಸುವುದು.
• ಸಂಸದೀಯ ವ್ಯವಸ್ಥೆಯಲ್ಲಿ ನಿಯಂತ್ರಣ ಮತ್ತು ಸಮತೋಲನವನ್ನು ಕಾಯ್ದುಕೊಳ್ಳುವುದು
• ಬಲಿಷ್ಠ ಪ್ರಜಾಪ್ರಭುತ್ವದ ಚರ್ಚೆಗಳನ್ನು ಖಾತರಿಪಡಿಸುವುದು
• ತಮ್ಮ ಭಾಷಣಗಳು ಮತ್ತು ಅಭಿಪ್ರಾಯ ಮಂಡನೆಗಳು ಇತ್ಯಾದಿ ಕ್ರಮಗಳ ಮೂಲಕ ಶಾಸನಾತ್ಮಕ ರಚನೆಯನ್ನು ವಿಮರ್ಶಿಸುವುದು
ನಿರ್ಣಾಯಕ ಪಾತ್ರ
ಕಾರ್ಯಸೂಚಿಯ ಮೇಲೆ ಪ್ರಭಾವ ಬೀರುವುದು ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವುದು. ಒಂದು ದುರುಳ ಆಡಳಿತ ಪಕ್ಷವು ಪ್ರಜಾಪ್ರಭುತ್ವದ ನಿಯಮಗಳಿಗೆ ಅಂಟಿಕೊಳ್ಳುವ ಬದಲು ತನ್ನ ಮತ್ತು ತನ್ನ ನೀತಿಗಳ ಬಗ್ಗೆ ಮಾಡಿದ ಎಲ್ಲ ಟೀಕೆಗಳಿಗೆ ದೇಶದ್ರೋಹದ ಪಟ್ಟ ಕಟ್ಟಲು ಅಥವಾ ‘ಪಾಕಿಸ್ತಾನದ ಧ್ವನಿಯನ್ನು ಪ್ರತಿನಿಧಿಸುತ್ತಿದೆ’ ಎಂದು ಬಿಂಬಿಸಬಹುದು. ಆದರೆ ಸಂಸದೀಯ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷದ ನಾಯಕನ ಪಾತ್ರ ಮಾತ್ರ ನಿರ್ಣಾಯಕ.
ಒಬ್ಬ ವಿರೋಧ ಪಕ್ಷದ ನಾಯಕ ಮತದಾರರ ಪಟ್ಟಿಯನ್ನೇ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಸಾರ್ವಜನಿಕವಾಗಿಯೇ ಪುರಾವೆಗಳನ್ನು ಪ್ರಸ್ತುತಪಡಿಸಿದಾಗ, ಸ್ವತಂತ್ರ ಮತ್ತು ನ್ಯಾಯಸಮ್ಮತ ಚುನಾವಣೆಯ ಸಾಂವಿಧಾನಿಕ ಪಾಲಕರಾಗಿರುವ ಚುನಾವಣಾ ಆಯೋಗವು ದುರ್ಬಲ ಕಾನೂನಾತ್ಮಕ ವಾದಗಳ ಮೂಲಕ ಅದನ್ನು ತಿರಸ್ಕರಿಸುವ ಬದಲು ತಕ್ಷಣವೇ ಕ್ರಮ ಕೈಗೊಳ್ಳುವುದು ಕಡ್ಡಾಯವಾಗಿದೆ. ಆದರೆ, ಸದ್ಯದ ರಾಜಿಮಾಡಿಕೊಂಡಿರುವ ವ್ಯವಸ್ಥೆಯಲ್ಲಿ ಇದು ದೂರದ ಕನಸಾಗಿ ಕಾಣುತ್ತಿದೆ.
ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಲಿ
ಇಲ್ಲಿ ಇನ್ನೂ ಒಂದು ಪ್ರಮುಖ ಪ್ರಶ್ನೆ ಉದ್ಭವಿಸುತ್ತದೆ; ಒಂದು ವೇಳೆ ಚುನಾವಣಾ ಆಯೋಗವು ಕ್ರಮಕೈಗೊಳ್ಳಲು ಹಿಂಜರಿದರೆ ಮತ್ತು ಸ್ಪಷ್ಟವಾದ ಕಾರಣಗಳ ಹಿನ್ನೆಲೆಯಲ್ಲಿ ವಿಷಯವನ್ನು ಇನ್ನಷ್ಟು ಗೊಂದಲವಾಗಿ ಮಾಡಲು ಉದ್ದೇಶಿಸಿದರೆ ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ಯಾಕೆ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳಬಾರದು? ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಮಹತ್ವ ಉದ್ಭವಿಸಿದ ಅನೇಕ ಸಂದರ್ಭದಲ್ಲಿ ನ್ಯಾಯಾಲಯವು ಹಾಗೆ ಮಾಡಿದೆ ಎನ್ನುವುದು ಗಮನಾರ್ಹ.
ಈ ಸಂದರ್ಭದಲ್ಲಿ ಉಲ್ಲೇಖಿಸಬಹುದಾದ ಉದಾಹರಣೆಗಳೆಂದರೆ; ಕೋವಿಡ್-19 ಸಾಂಕ್ರಾಮಿಕ ರೋಗ ಪ್ರಪಂಚದಾದ್ಯಂತ ಹರಡಿದ್ದ ಸಂದರ್ಭದಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲು ಮತ್ತು ಆಸ್ಪತ್ರೆಗಳಲ್ಲಿ ಮೃತದೇಹಗಳನ್ನು ಸಮರ್ಪಕವಾಗಿ ನಿಭಾಯಿಸುವಂತೆ ಹೇಳಿರುವುದು ಮತ್ತು ಅವಶ್ಯಕ ಪೂರೈಕೆಗಳು ಹಾಗೂ ಸೇವೆಗಳ ವಿತರಣೆಯ ಮೇಲ್ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿರುವುದು.
ಮಣಿಪುರ ಸಂಘರ್ಷದ ಸಂದರ್ಭದಲ್ಲಿ ಲೈಂಗಿಕ ಹಿಂಸಾಚಾರ ಮಿತಿ ಮೀರಿದಾಗ ಮಧ್ಯಪ್ರವೇಶ ಮಾಡಿದ್ದು, ಆರ್.ಜಿ.ಕರ್ ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನಿರ್ದೇಶನ ನೀಡಿದ್ದು ಸುಪ್ರೀಂ ಕೋರ್ಟಿನ ಮಧ್ಯಪ್ರವೇಶಕ್ಕೆ ಉದಾಹರಣೆಗಳಾಗಿವೆ.
ಮತದಾರರ ಪಟ್ಟಿಯ ಮಾಹಿತಿಗಳನ್ನೇ ತಿರುಚಿರುವುದು ಮತ್ತು ಮತಗಳವು ದೇಶವು ಇಂದು ಎದುರಿಸುತ್ತಿರುವ ಬಹುದೊಡ್ಡ ಸವಾಲುಗಳಲ್ಲಿ ಒಂದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅದು ನಮ್ಮ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಶ್ರೇಷ್ಠತೆಗೆ ಕೊಡಲಿ ಪೆಟ್ಟು ನೀಡಿದೆ. ಇಂತಹ ವ್ಯವಸ್ಥೆಯ ಕಳವಳವು ಸುಪ್ರೀಂ ಕೋರ್ಟ್ ವ್ಯಾಪ್ತಿಯಲ್ಲಿಯೇ ಬರುತ್ತದೆ. ಯಾಕೆಂದರೆ ನ್ಯಾಯಸಮ್ಮತವಾದ ಪ್ರಜಾಸತ್ತಾತ್ಮಕ ಪ್ರಕ್ರಿಯೆ ನಡೆಯದೇ ಹೋದರೆ ಕಾನೂನು, ವ್ಯವಸ್ಥೆ ಜೊತೆಗೆ ಸಂವಿಧಾನವೂ ತನ್ನ ಅರ್ಥವನ್ನು ಕಳೆದುಕೊಳ್ಳುತ್ತದೆ.
ಪ್ರಜಾಪ್ರಭುತ್ವದ ಹೆಮ್ಮೆಯ ಕ್ಷಣ
ನ್ಯಾಯಾಂಗ ವ್ಯವಸ್ಥೆಯೂ ಕೂಡ ತನ್ನ ನ್ಯಾಯಸಮ್ಮತತೆಯನ್ನು ಸಂವಿಧಾನದಿಂದಲೇ ಪಡೆದುಕೊಂಡಿದ್ದಾಗಿದೆ. ಈ ಕಾರಣಕ್ಕಾಗಿಯೇ ಸುಪ್ರೀಂ ಕೋರ್ಟಿನ ಗೌರವಾನ್ವಿತ ನ್ಯಾಯಮೂರ್ತಿಗಳು ಈ ತುರ್ತು ಪರಿಸ್ಥಿತಿಯ ಕಡೆಗೆ ಗಮನಹರಿಸಿ ಪ್ರಜಾಪ್ರಭುತ್ವದ ರಕ್ಷಕರಾಗಿ ತಮ್ಮ ಪಾತ್ರವನ್ನು ನಿರ್ವಹಿಸುತ್ತಾರೆ ಎಂಬ ನಂಬಿಕೆ ನಮ್ಮದು. ಇದು ನಮ್ಮ ರಾಷ್ಟ್ರಕ್ಕೆ ಮಾತ್ರವಲ್ಲ, ಪ್ರಜಾಪ್ರಭುತ್ವದ ಮೂಲ ತತ್ವಕ್ಕೂ ಹೆಮ್ಮೆಯ ಕ್ಷಣವಾಗಲಿದೆ.
ಅಧಿಕಾರದಲ್ಲಿರುವ ಪಕ್ಷದ ಪ್ರಾಬಲ್ಯವನ್ನು ಕಂಡು ನಿಮಗೇನಾದರೂ ಅನುಮಾನಗಳು ಮೂಡಿದರೆ, ಇಂಗ್ಲಂಡಿನ ರಾಜ ಎಂಟನೇ ಹೆನ್ರಿಯ ನಿಷ್ಠಾವಂತ ಲಾರ್ಡ್ ಚಾನ್ಸಲರ್ ಆಗಿದ್ದ ಥಾಮಸ್ ಬೆಕೆಟ್ ಅವರ ಕಥೆಯನ್ನು ಒಮ್ಮೆ ನೆನಪುಮಾಡಿಕೊಳ್ಳಬಹುದು. ರಾಜನ ದುರುದ್ದೇಶಪೂರಿತ ಅಪೇಕ್ಷೆಗಳನ್ನು ಪೂರೈಸುವ ಸಲುವಾಗಿ ಅವರನ್ನು ಕ್ಯಾಂಟರ್-ಬರಿಯ ಆರ್ಚ್ ಬಿಷಪ್ ಆಗಿ ನೇಮಕ ಮಾಡಲಾಗುತ್ತದೆ. ಆದರೆ ಯಾವತ್ತು ಕೈಗೆ ಅಧಿಕಾರ ದೊರೆಯಿತೋ ಅಂದಿನಿಂದ ರಾಜನ ಆದೇಶಗಳಿಗೆ ಮನ್ನಣೆ ನೀಡಲು ನಿರಾಕರಿಸಿದರು. ಚರ್ಚ್ ಕಾನೂನು ಮತ್ತು ನಿಬಂಧನೆಗಳನ್ನು ಗಟ್ಟಿಗೊಳಿಸಿದರು. ತಮ್ಮ ಜನರಿಗೆ ರಕ್ಷಕನಾಗಿರುವುದೇ ಪವಿತ್ರ ಕರ್ತವ್ಯ ಎಂದು ಅವರು ನಂಬಿದ್ದರು. ಆ ಬಳಿಕ ಏನಾಯಿತೆಂದರೆ ಬೆಕೆಟ್ ಅವರನ್ನು ರಾಜನ ಹಿಂಬಾಲಕರೇ ಹತ್ಯೆ ಮಾಡಿದರು. ಇದರೊಂದು ದುರಂತ ಇತಿಹಾಸ.
ಮುಂದೊಂದು ದಿನ ತಮಗೆ ಇಂತಹ ಗತಿ ಬರುತ್ತದೆ ಎಂಬ ಅರಿವು ಬೆಕೆಟ್ ಅವರಿಗಿತ್ತು. ಆದರೂ ಅವರು ಸೇವಾ ಮನೋಭಾವವನ್ನು ಬಿಟ್ಟು ತ್ಯಾಗಮನೋಭಾವವನ್ನು ಆಯ್ಕೆಮಾಡಿಕೊಂಡರು. ಯಾಕೆಂದರೆ ಗೌರವವು ತ್ಯಾಗದಲ್ಲಿ ಅಡಗಿದೆ ಮತ್ತು ಅವಮಾನವು ಸೇವೆಯಲ್ಲಿ ಅಡಗಿದೆ.