
- ಮುಖಪುಟ
- ತಾಜಾ ಸುದ್ದಿತಾಜಾ ಸುದ್ದಿ
- ಕರ್ನಾಟಕಕರ್ನಾಟಕ
- ರಾಷ್ಟ್ರೀಯರಾಷ್ಟ್ರೀಯ
- ವಿಶೇಷ ಲೇಖನವಿಶೇಷ ಲೇಖನ
- ಅಭಿಮತ
- ಮನರಂಜನೆಮನರಂಜನೆ
- ಕ್ರೀಡೆಕ್ರೀಡೆ
- ಉದ್ಯೋಗ ವಾರ್ತೆ
- ವಿಡಿಯೋ

ಅಮೆರಿಕ- ಇಸ್ರೇಲ್, ಇರಾನ್ ಮೇಲೆ ಏಕಾಏಕಿ ದಾಳಿ ನಡೆಸಿವೆ. ಪ್ರತಿರೋಧ ತೋರಿಸಬೇಕಿರುವ, ಅಮೆರಿಕದ ಸೊಕ್ಕಿಗೆ ಕಡಿವಾಣ ಹಾಕಬೇಕಿರುವ ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ ಷಂಡರಂತೆ ಕೈಚೆಲ್ಲಿ ಕುಳಿತಿವೆ.
ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (ಐಎಇಎ)ಯ ಬಾಗಿಲು ಬಂದ್ ಮಾಡಲು ಇದು ಸಕಾಲ. ಹಾಗೆ ಮಾಡುವುದರಿಂದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ನಿರಾತಂಕವಾಗಿ ಇರಾನ್ ಮೇಲೆ ದಾಳಿ ನಡೆಸುವುದನ್ನು ಮತ್ತು ರಕ್ತಪಾತ ಮಾಡುವುದನ್ನು ಜಗತ್ತು ತಣ್ಣಗೆ ಕುಳಿತು ನೋಡಬಹುದು. ಇರಾನ್ ಪರಮೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆಯಾಗಿದ್ದು ಇಡೀ ಜಗತ್ತು ದಿಗ್ಭ್ರಮೆಗೆ ಒಳಗಾಗಿ ನೋಡುತ್ತಿದೆ.
ಇರಾನ್ ಮೇಲೆ ನಡೆಸಿರುವ ಈ ಅಪ್ರೇರಿತ ಕ್ಷಿಪಣಿ ದಾಳಿಗಳು ಅಮೆರಿಕ ಮತ್ತು ಇಸ್ರೇಲಿನ ಧಾರ್ಷ್ಟ್ಯ ಮತ್ತು ಅವಿವೇಕತನಕ್ಕೆ ಸಾಕ್ಷಿಯಾಗಿವೆ. ಇರಾನ್-ನಲ್ಲಿರುವ ಪರಮಾಣು ಸಾಮರ್ಥ್ಯವನ್ನು ಸಂಪೂರ್ಣ ನಾಶ ಮಾಡಿದ್ದೇವೆ ಎಂದು ಈ ಎರಡೂ ರಾಷ್ಟ್ರಗಳು ಎದೆಯುಬ್ಬಿಸಿ ಹೇಳಿಕೊಂಡಿದ್ದವು. ಅಷ್ಟಾಗಿಯೂ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತೃಪ್ತರಾದಂತೆ ಕಾಣಲಿಲ್ಲ.
ಅವರ ನಿರೀಕ್ಷೆಗಳನ್ನು ಹುಸಿ ಮಾಡಿದ ಇರಾನ್ ತನ್ನದೇ ಆದ ಶಕ್ತಿಯುತ ಖಂಡಾಂತರ ಕ್ಷಿಪಣಿಗಳ ಮೂಲಕ ಸರಣಿ ದಾಳಿ ನಡೆಸಿ ತಿರುಗೇಟು ಕೊಟ್ಟಿದ್ದರು. ಇದು ಆ ರಾಷ್ಟ್ರದ ಇಸ್ಲಾಮಿಕ್ ಆಡಳಿತಕ್ಕೆ ಶಕ್ತಿ ತುಂಬುತ್ತಿದೆ ಎಂಬುದನ್ನು ಅರಿತ ಟ್ರಂಪ್ ಇರಾನ್ ತನ್ನ ಖಂಡಾಂತರ ಕ್ಷಿಪಣಿ ಯೋಜನೆಯನ್ನು ತಕ್ಷಣ ಕೈಬಿಡಬೇಕು ಎಂದು ಇನ್ನಿಲ್ಲದ ಒತ್ತಡ ಹೇರಿದರು. ಅಯತೊಲ್ಲಾ ಖಮೇನಿ ನೇತೃತ್ವದ ಇಸ್ಲಾಮಿಕ್ ವ್ಯವಸ್ಥೆಯನ್ನು ಉರುಳಿಸಲು ಬಹಿರಂಗವಾಗಿಯೇ ಕರೆಕೊಟ್ಟರು.
ಇರಾನ್ ತನ್ನ ಪರಮಾಣು ಯೋಜನೆಯನ್ನು ಕೈಬಿಡಬೇಕು ಎಂದು ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಅಮೆರಿಕ ಮತ್ತು ಇಸ್ರೇಲ್ ಒತ್ತಾಯಿಸುತ್ತಲೇ ಬಂದಿವೆ. ಆದರೆ ಹಾಗೆ ಮಾಡುವಾಗ ಇರಾನಿನ ಖಂಡಾಂತರ ಕ್ಷಿಪಣಿಯ ಸಾಮರ್ಥ್ಯದ ಬಗ್ಗೆ ನಿರ್ಲಕ್ಷ್ಯ ಹೊಂದಿದ್ದವು. ಅಂತಿಮವಾಗಿ ಕಳೆದ ಜೂನ್ ತಿಂಗಳ ನಂತರ ಅದನ್ನೂ ಅವರ ನಿಷೇಧದ ಪಟ್ಟಿಗೆ ಸೇರಿಸಿಕೊಂಡರು. ಅಷ್ಟಕ್ಕೂ ಇರಾನ್ ತನ್ನ ಖಂಡಾಂತರ ಕ್ಷಿಪಣಿಯನ್ನು ಯಾಕಾದರೂ ಬಿಟ್ಟುಕೊಡುತ್ತದೆ. ಅವುಗಳಿಲ್ಲದೆ ಹೋದರೆ ಅದು ನಿರಾಯುಧವಾದಂತೆ ಸರಿ. ಆ ದೇಶ ಶತ್ರುಗಳಿಗೆ ಸುಲಭ ತುತ್ತಾಗಿ ಬಿಡುವುದು ಖಚಿತ. ಆ ಕಾರಣದಿಂದಲೇ ಟ್ರಂಪ್ ಮತ್ತು ಇರಾನ್ ನಡುವಿನ ಇತ್ತೀಚಿನ ಮಾತುಕತೆಗಳು ಯಾವುದೇ ಪ್ರಗತಿ ಕಾಣಲಿಲ್ಲ. ಯಾಕೆಂದರೆ ಇರಾನಿನ ಸಂಧಾನಕಾರರು ಒಂದು ಹಂತವನ್ನು ಮೀರಿ ಯಾವುದನ್ನೂ ಬಿಟ್ಟುಕೊಡಲು ಸಿದ್ಧರಿರಲಿಲ್ಲ.
ಜಗತ್ತು ಈಗ ಮೈಕೊಡವಿಕೊಂಡು ನಿಲ್ಲಬೇಕಿದೆ. ಯಾಕೆಂದರೆ ಇರಾನ್ ಮೇಲೆ ಅಮರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಈ ಸರಣಿ ಕ್ಷಿಪಣಿ ದಾಳಿಗಳು ವಿಶ್ವಸಂಸ್ಥೆ ಮತ್ತು ಅದರ ಭದ್ರತಾ ಮಂಡಳಿಗಳಂತಹ ಅಂತಾರಾಷ್ಟ್ರೀಯ ಸಂಸ್ಥೆಗಳು ಕೈಲಾಗದವು ಎಂಬುದನ್ನು ಎತ್ತಿ ತೋರಿಸುತ್ತಿವೆ. ಕಳೆದ ಎರಡು ವರ್ಷಗಳ ಕಾಲ ಗಾಜಾ ಮೇಲೆ ಇಸ್ರೇಲ್ ನಡೆಸಿದ ನರಮೇಧದ ದಾಳಿಯನ್ನು ತಡೆಯಲು ಮತ್ತು ಮಧ್ಯಪ್ರಾಚ್ಯದಲ್ಲಿ ಟ್ರಂಪ್ ನಡೆಸುತ್ತಿರುವ ಕುತಂತ್ರಗಳಿಗೆ ಕಡಿವಾಣ ಹಾಕಲು ವಿಫಲವಾದ ವಿಶ್ವಸಂಸ್ಥೆಯ ವಿಶ್ವಾಸಾರ್ಹತೆ ಈಗ ತಳಕಚ್ಚಿ ಹೋಗಿದೆ.
ಇನ್ನು ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ ತನಿಖಾಧಿಕಾರಿಗಳು ಇರಾನ್ ಇನ್ನೂ ಪರಮಾಣು ಬಾಂಬ್ ತಯಾರಿಸಲು ಸಿದ್ಧವಾಗಿಲ್ಲ ಎಂದು ಪದೇ ಪದೇ ಹೇಳುತ್ತ ಬಂದಿದ್ದಾರೆ. 2025ರ ಜೂನ್ ತಿಂಗಳಿನಲ್ಲಿ ಅದು ಕೊನೆಯ ಬಾರಿಗೆ ಇರಾನಿನ ಪರಮಾಣು ಸೌಲಭ್ಯಗಳ ಪರಿಶೀಲನೆ ನಡೆಸಿತ್ತು. ಇರಾನಿನ ಯುರೇನಿಯಂ ಪುಷ್ಟೀಕರಣವು ಶೇ. 60 ರಷ್ಟಿದೆ. ಅದು ಬಾಂಬ್ ತಯಾರಿಕಾ ಸಾಮರ್ಥ್ಯವನ್ನು ತಲುಪಲು ಅದು ಶೇ.90 ಕ್ಕಿಂತ ಹೆಚ್ಚು ಪುಷ್ಟೀಕರಣಗೊಳ್ಳುವ ಅಗತ್ಯವಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದರು.
ಆದರೆ ಈ ಸತ್ಯ ಸಂಗತಿಗಳು ಅಮೆರಿಕ ಮತ್ತು ಇಸ್ರೇಲ್-ಗೆ ಬೇಕಾಗಿಲ್ಲ. ಅವುಗಳ ಮನಸ್ಥಿತಿಯಲ್ಲಿ ಕಿಂಚಿತ್ತೂ ಬದಲಾವಣೆ ಕಂಡಿಲ್ಲ. ಇನ್ನೊಂದು ಕಡೆ ತನ್ನ ಪರಮಾಣು ಯೋಜನೆ ಏನಿದ್ದರೂ ಕೇವಲ ಶಾಂತಿಯುತ ಉದ್ದೇಶಗಳಿಗಾಗಿ ಮಾತ್ರ ಎಂದು ಇರಾನ್ ಪದೇ ಪದೇ ಸ್ಪಷ್ಟಪಡಿಸುತ್ತ ಬಂದಿದೆ.
ವಿಪರ್ಯಾಸ ಏನೆಂದರೆ ಇರಾನ್ ಮೇಲೆ ದಾಳಿ ಮಾಡಲು ಅಮೆರಿಕಕ್ಕೆ ಯಾವುದೇ ಬಲವಾದ ಕಾರಣವಿಲ್ಲ. ಇರಾನ್ ಯಾವುತ್ತೂ ಅಮೆರಿಕದ ಹಿತಾಸಕ್ತಿಗೆ ಧಕ್ಕೆ ತಂದಿಲ್ಲ. ಆದರೆ ಇಸ್ರೇಲ್ ಹಾಗಲ್ಲ. ಅದಕ್ಕೆ ಬಲವಾದ ಕಾರಣಗಳಿವೆ. ಅಲ್ಲಿ ಬೇರುಬಿಟ್ಟಿರುವ ಇಸ್ಲಾಮಿಕ್ ಆಡಳಿತವನ್ನು ಕಿತ್ತೊಗೆಯಬೇಕು, ಆ ರಾಷ್ಟ್ರವನ್ನು ಅಪ್ರಸ್ತುತವಾಗಿ ಮಾಡಬೇಕು ಎಂಬ ಜಿದ್ದು ಅದಕ್ಕಿದೆ. ಯಾಕೆಂದರೆ ಇರಾನ್ ಈವರೆಗೂ ಇಸ್ರೇಲ್ ದೇಶದ ಕಾನೂನುಬದ್ಧತೆಯನ್ನು ಒಪ್ಪಿಕೊಂಡಿಲ್ಲ.
ಇಸ್ರೇಲ್ ಪರ ನಿಂತ ಅಮೆರಿಕ
ಆದರೆ ಟ್ರಂಪ್ ಮಾತ್ರ ಇಸ್ರೇಲ್-ನ್ನು ಓಲೈಸುವಲ್ಲಿ ಯಾವತ್ತೂ ಒಂದು ಹೆಜ್ಜೆ ಮುಂದಿದ್ದಾರೆ. ಅದಕ್ಕಾಗಿ ಅವರು ನಿಯಮಗಳನ್ನು ಗಾಳಿಗೆ ತೂರುವ ಇತಿಹಾಸವನ್ನು ಕೂಡ ಹೊಂದಿದ್ದಾರೆ. ಇದಕ್ಕೆ ಪೂರಕವಾದಂತಹ ಉದಾಹರಣೆಗಳು ಸಾಕಷ್ಟಿವೆ. ಅವರು ತಮ್ಮ ಅಧಿಕಾರದ ಮೊದಲ ಅವಧಿಯಲ್ಲಿ ಅಂತಾರಾಷ್ಟ್ರೀಯ ಕಾನೂನನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಅಮೆರಿಕದ ರಾಯಭಾರ ಕಚೇರಿಯನ್ನು ಟೆಲ್ ಅವಿವ್-ನಿಂದ ಜೆರುಸಲೆಂಗೆ ಸ್ಥಳಾಂತರಿಸಿದರು ಮತ್ತು ಅದನ್ನು ಇಸ್ರೇಲಿನ ರಾಜಧಾನಿ ಎಂದು ಗುರುತಿಸಿದರು. ಆ ಬಳಿಕ ಅವರು ಭವಿಷ್ಯದ ಪ್ಯಾಲೆಸ್ತೀನ್ ರಾಷ್ಟ್ರದ ಬಗ್ಗೆ ಒಂದು ವಿಚಿತ್ರ ನಕ್ಷೆಯನ್ನು ಮುಂದಿಟ್ಟರು. ಯಹೂದಿ ವಷಾಹತುಗಳ ಕಾರಣದಿಂದಾಗಿ ಆ ನಕ್ಷೆ ಅಕ್ಷರಶಃ ರಂಧ್ರಗಳಿಂದ ತುಂಬಿದಂತಿತ್ತು. ಇದು ಪ್ಯಾಲೆಸ್ತೀನಿಯರ ಆಕ್ರೋಶಕ್ಕೆ ಗುರಿಯಾಯಿತು ಮತ್ತು ಜಾಗತಿಕ ಮಟ್ಟದಲ್ಲಿ ಟ್ರಂಪ್ ಅಪಹಾಸ್ಯಕ್ಕೆ ಗುರಿಯಾದರು.
2018ರಲ್ಲಿ ಆಗಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಆಡಳಿತ ಐರೋಪ್ಯ ಒಕ್ಕೂಟ, ರಷ್ಯಾ ಮತ್ತು ವಿಶ್ವಸಂಸ್ಥೆಯ ಜೊತೆಗೆ ಸೇರಿ ಒಂದು ಪರಮಾಣು ಒಪ್ಪಂದಕ್ಕೆ ಬಂದಿತ್ತು. ಆ ಬಳಿಕ ಅಧಿಕಾರಕ್ಕೆ ಬಂದ ಟ್ರಂಪ್ ಏಕಾಏಕಿ ಆ ಒಪ್ಪಂದವನ್ನು ರದ್ದುಗೊಳಿಸಿದರು. ಇಡೀ ವಿಶ್ವವೇ ಆ ಒಪ್ಪಂದವನ್ನು ಅನುಮೋದಿಸಿದ್ದರೂ ಇಸ್ರೇಲ್ ಮಾತ್ರ ಅದನ್ನು ವಿರೋಧಿಸಿತ್ತು. ಹಾಗಾಗಿ ಟ್ರಂಪ್ ಆ ಒಪ್ಪಂದವನ್ನೇ ಕಿತ್ತುಹಾಕಿ ನೆತನ್ಯಾಹು ಅವರಿಗೆ ಉಪಕಾರ ಮಾಡಿದರು.
ಡೊನಾಲ್ಡ್ ಟ್ರಂಪ್ ಅವರಿಗೆ ಯಾವ ನಿಯಮಗಳ ಮೇಲೂ ಕಿಂಚಿತ್ತೂ ಕಬರಿಲ್ಲ, ಅವರು ನಿಯಮ ಆಧಾರಿತ ಅಂತಾರಾಷ್ಟ್ರೀಯ ವ್ಯವಸ್ಥೆಯನ್ನೇ ಧಿಕ್ಕರಿಸುವ ಛಾತಿ ಉಳ್ಳವರು ಎಂಬುದನ್ನು ಈ ಜಗತ್ತು ಈಗಾಗಲೇ ಕಂಡಿದೆ. ಅವರು ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿ) ಯನ್ನೇ ದುರ್ಬಲಗೊಳಿಸಿದವರು. ಅತಿರೇಕ ಎನ್ನುವ ರೀತಿಯಲ್ಲಿ ಸುಂಕಗಳನ್ನು ಹೇರಿದರು.
ವಿಶ್ವಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ ನಾನಾ ಸಂಸ್ಥೆಗಳಿಗೆ ಅಮೆರಿಕ ನೀಡುತ್ತಿದ್ದ ಧನಸಹಾಯಕ್ಕೆ ಕತ್ತರಿ ಹಾಕಿದರು. ಇನ್ನೂ ಸಂಕ್ಷಿಪ್ತವಾಗಿ ಹೇಳುವುದಾದರೆ, ಯಾವತ್ತು ಎರಡನೇ ಬಾರಿ ಅಧಿಕಾರ ವಹಿಸಿಕೊಂಡರೋ ಅಂದಿನಿಂದ ಟ್ರಂಪ್ ಅವರು ಜಾಗತಿಕ ರಾಜಕೀಯದ ಹಾದಿಯನ್ನು ಅಕ್ಷರಶಃ ತಮಗೆ ತೋಚಿದ ರೀತಿಯಲ್ಲಿ ನಿರ್ದೇಶಿಸುತ್ತಿದ್ದಾರೆ.
ಸಾಧ್ಯವಾದಷ್ಟು ಸೌಹಾರ್ದದ ದಾರಿಯಲ್ಲಿ ಸಾಗುವ ಇರಾದೆಯನ್ನು ಇರಾನ್ ತೋರಿಸಿತು. ಹಾಗಂತ ಅದು ತನ್ನ ಮೂಲಭೂತ ಬೇಡಿಕೆಗಳ ವಿಚಾರದಲ್ಲಿ ರಾಜಿಯಾಗಲಿಲ್ಲ. ಕನಿಷ್ಠ ಮೂರು ಸುತ್ತಿನ ಮಾತುಕತೆಗಳು ನಡೆದಿದ್ದವು. ಆದರೆ 2025ರ ಜೂನ್ ನಲ್ಲಿ ಮಾಡಿದಂತೆಯೇ ಮಾತುಕತೆಗಳು ಜಾರಿಯಲ್ಲಿ ಇದ್ದಾಗಲೇ ಟ್ರಂಪ್ ಇಸ್ರೇಲ್ ಜೊತೆ ಸೇರಿಕೊಂಡು ಇರಾನ್ ಮೇಲೆ ಹಠಾತ್ ಮುಗಿಬಿದ್ದಿದ್ದಾರೆ.
ಏಕಾಂಗಿಯಾಯಿತು ಇರಾನ್
ಟೆಹ್ರಾನಿನ ಇಸ್ಲಾಮಿಕ್ ಆಡಳಿತವು ಬಹುಷಃ ಈಗ ಅನುಭವಿಸುತ್ತಿರುವ ಒಂಟಿತನವನ್ನು ಹಿಂದೆಂದೂ ಅನುಭವಿಸಿರಲಿಲ್ಲ ಅನಿಸುತ್ತದೆ. ಅದರ ಆಪ್ತ ಮಿತ್ರರೆಂದು ಗುರುತಿಸಿಕೊಂಡಿರುವ ರಷ್ಯಾ ಮತ್ತು ಚೀನಾ ಕೂಡ ಕೇವಲ ಸಮಾಧಾನದ ಹೇಳಿಕೆಗಳನ್ನು ನೀಡುತ್ತಿವೆಯೇ ಹೊರತು ಬೆಂಬಲಕ್ಕೆ ನಿಲ್ಲುವ ಧೈರ್ಯ ತೋರುತ್ತಿಲ್ಲ. ರಷ್ಯಾವಂತೂ ತಾನೇ ಸೃಷ್ಟಿಸಿಕೊಂಡ ಉಕ್ರೇನ್ ಯುದ್ಧದ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿದೆ. ಹೀಗಾಗಿ ಅದು ಇರಾನ್ ಬೆಂಬಲಕ್ಕೆ ನಿಲ್ಲುವ ಸ್ಥಿತಿಯಲ್ಲಿ ಇಲ್ಲ.
ಅಮೆರಿಕವನ್ನು ಎದುರಿಗೆ ಹಾಕಿಕೊಳ್ಳಬಲ್ಲ ಏಕೈಕ ರಾಷ್ಟ್ರವೇನಾದರೂ ಇದ್ದರೆ ಅದು ಚೀನಾ ಎಂದು ಬಿಂಬಿತವಾಗಿದ್ದರೂ ಅದು ಅತ್ಯಂತ ಸಾಧುತನ ತೋರಿಸುತ್ತಿರುವುದು ಕುತೂಹಲದ ಸಂಗತಿ. ಅದರ ಮೌನ ನಿಜಕ್ಕೂ ವಿಚಿತ್ರ ಅನಿಸುವಂತಿದೆ. ತಮ್ಮ ಮಿತ್ರರಿಗಾಗಿ ಹೋರಾಡುವ ಪಾಶ್ಚಿಮಾತ್ಯ ದೇಶಗಳಿಗಿಂತ ಭಿನ್ನವಾಗಿ (ಗ್ರೀನ್-ಲ್ಯಾಂಡ್ ವಶಪಡಿಸಿಕೊಳ್ಳುವ ಟ್ರಂಪ್ ಯೋಜನೆಯನ್ನು ಅವು ಹಿಮ್ಮೆಟ್ಟಿಸಿದ್ದವು), ಚೀನಾ ತನ್ನ ಮಾರುಕಟ್ಟೆ ಕೇಂದ್ರಿತ ಸಿದ್ಧಾಂತದ ಸುಳಿಯಲ್ಲಿ ಸಿಕ್ಕುಹಾಕಿಕೊಂಡಿದೆ.
ಇರಾನ್‌ನಿಂದ ತೈಲವನ್ನು ಖರೀದಿಸುವ ಚೀನಾ, ಜೊತೆಗೆ, ನಿಸ್ಸಂದೇಹವಾಗಿ ಇರಾನ್ನ ಮಿಲಿಟರಿ ಮತ್ತು ಪರಮಾಣು ಅಭಿವೃದ್ಧಿಗೆ ಬೆಂಬಲದ ಬೆನ್ನೆಲುಬಾಗಿದೆ. ಆದರೆ ಅದರ ಒಳಗೊಳ್ಳುವಿಕೆ ಅಲ್ಲಿಗೇ ಕೊನೆಗೊಳ್ಳುತ್ತದೆ. ಅಮೆರಿಕವನ್ನು ಮಿಲಿಟರಿ ಪರವಾಗಿ ಎದುರಿಸಿ ಇರಾನ್ ಪರವಾಗಿ ನಿಲ್ಲಲು ಅದಕ್ಕೆ ಎಂದಿಗೂ ಸಾಧ್ಯವಾಗಿಲ್ಲ. ವಿಶ್ವದ ಬಹುಪಾಲು ದೇಶಗಳಂತೆ, ಚೀನಾ ಕೂಡ ಅನೇಕ ಆರ್ಥಿಕ ಮತ್ತು ವ್ಯಾಪಾರ ವಿಷಯಗಳಲ್ಲಿ ಅಮೆರಿಕದೊಂದಿಗೆ ನಿಕಟ ಸಂಬಂಧ ಹೊಂದಿದೆ. ಆದ್ದರಿಂದಲೇ, ಇರಾನ್ ಮೇಲೆ ದಾಳಿಯಾದಾಗ ಅದಕ್ಕೆ ಏನೂ ಮಾಡಲು ಸಾಧ್ಯವಾಗುತ್ತಿಲ್ಲ.
ಭಾರತವೂ ದೂರ ದೂರ
ಇನ್ನು ಭಾರತದ ವಿಷಯಕ್ಕೆ ಬಂದರೆ, ದೀರ್ಘಕಾಲದಿಂದ ಇರಾನ್ನ ಕೆಲವೇ ಕೆಲವು ಮಿತ್ರರಾಷ್ಟ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದ್ದ ಭಾರತವು ಆ ದೇಶಕ್ಕೆ ನಿಜಕ್ಕೂ ನಿರಾಸೆ ಮೂಡಿಸಿದೆ. ಮೋದಿಯವರ ಸರ್ಕಾರವು ಅಮೆರಿಕದ ಒತ್ತಡವನ್ನು, ವಿಶೇಷವಾಗಿ ಪ್ರಸ್ತುತ ಟ್ರಂಪ್ ಆಡಳಿತದ ಒತ್ತಡವನ್ನು ತಡೆದುಕೊಳ್ಳಲು ಸಾಧ್ಯವಾಗದೆ, ಪ್ರಾಯೋಗಿಕವಾಗಿ ಟೆಹ್ರಾನ್ ಅನ್ನು ಕೈಬಿಟ್ಟಿದೆ. ಇದು ಚಾಬಹಾರ್ ಬಂದರಿನ ಅಭಿವೃದ್ಧಿಯನ್ನು ಸ್ಥಗಿತಗೊಳಿಸುವುದು ಮತ್ತು ಅಲ್ಲಿಂದ ತೈಲ ಖರೀದಿಯನ್ನು ಕಡಿಮೆ ಮಾಡುವ ವಿಚಾರದಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತಿದೆ.
ಇರಾನಿನ ಇಸ್ಲಾಮಿಕ್ ಆಡಳಿತವೂ ಟ್ರಂಪ್ ಪ್ರೇರಿತ ಸಮಕಾಲೀನ ಜಗತ್ತನ್ನು ಅರ್ಥ ಮಾಡಿಕೊಳ್ಳುವಲ್ಲಿ ಮೊಂಡುತನ ಪ್ರದರ್ಶಿಸಿದಂತೆ ತೋರುತ್ತದೆ. ಟ್ರಂಪ್ ಅವರ ಮನಸ್ಥಿತಿಯನ್ನು ಅರಿತು ಇರಾನ್ನ ಸಂಧಾನಕಾರರು ಇನ್ನಷ್ಟು ಸಮಯವನ್ನು ಮುಂದಕ್ಕೆ ತಳ್ಳಬಹುದಿತ್ತು ಎಂಬ ಅಭಿಪ್ರಾಯವಿದೆ. ಆದರೆ ಅದರ ಪರಮೋಚ್ಚ ನಾಯಕ ಖಮೇನಿಯವರ ಅಹಂ ಅಂತಹ ಸಾಧ್ಯತೆಗೆ ಅಡ್ಡಿಯಾಗಿರಬಹುದು.
ಮಧ್ಯಪ್ರಾಚ್ಯದ ನೆರೆಹೊರೆಯಲ್ಲಿ ಸೌದಿ ಅರೇಬಿಯಾ, ಟರ್ಕಿ ಮತ್ತು ಈಜಿಪ್ಟ್‌ನಂತಹ ಸುನ್ನಿ ಬಹುಸಂಖ್ಯಾತ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವಲ್ಲಿಯೂ ಈ ಆಡಳಿತವು ವಿಫಲವಾಗಿದೆ; ಈ ರಾಷ್ಟ್ರಗಳು ಹಲವು ವರ್ಷಗಳಿಂದ ಇರಾನ್‌ನಿಂದ ದೂರವೇ ಉಳಿದಿವೆ. ಕೆಲವು ಕೆಲಕಾಲದ ಹಿಂದೆ, ಚೀನಾವು ಸೌದಿ ಮತ್ತು ಇರಾನ್ ನಡುವೆ ಸಂಧಾನ ಮಾಡಿಸಿತ್ತು, ಆದರೆ ಅದು ಈವರೆಗೆ ಪ್ರಾಯೋಗಿಕವಾಗಿ ಯಾವುದೇ ಮಹತ್ವದ ಬದಲಾವಣೆ ತಂದಿಲ್ಲ. ವಾಸ್ತವವಾಗಿ, ಸೌದಿ ಅರೇಬಿಯಾವು ಟ್ರಂಪ್ ಬೆಂಬಲಿತ 'ಅಬ್ರಹಾಂ ಒಪ್ಪಂದ'ಕ್ಕೆ ಸೇರಲು ಮತ್ತು ಇಸ್ರೇಲ್‌ನೊಂದಿಗೆ ಸಂಬಂಧ ಸ್ಥಾಪಿಸಲು ಸಿದ್ಧವಾಗಿತ್ತು.
ಗಾಜಾ ಮೇಲಿನ ದಾಳಿಯು ಸದ್ಯಕ್ಕೆ ಆ ಸಾಧ್ಯತೆಯನ್ನು ತಡೆಹಿಡಿದಿದೆ.
ಮರುಚಿಂತನೆಗೆ ಸಕಾಲ
ಸಂಕ್ಷಿಪ್ತವಾಗಿ ಹೇಳುವುದಾದರೆ, ಯಾವುದೇ ಪ್ರಚೋದನೆಯಿಲ್ಲದೆ ಇರಾನ್ ಮೇಲೆ ದಾಳಿ ನಡೆಯುತ್ತಿರುವಾಗ ಇಡೀ ಜಗತ್ತು ಅದನ್ನು ಕೈಬಿಟ್ಟಿರುವುದನ್ನು ನಾವು ನೋಡುತ್ತಿದ್ದೇವೆ. ಅಂತರಾಷ್ಟ್ರೀಯ ವ್ಯವಸ್ಥೆಯ ಮೇಲೆ ಇಂದಿಗೂ ಅಚಲ ನಂಬಿಕೆ ಇಟ್ಟಿರುವವರು ಈಗ ಮರುಚಿಂತನೆ ಮಾಡಬೇಕಾದ ಸಮಯ ಬಂದಿದೆ.
ಗಾಜಾದಲ್ಲಿ ಪ್ಯಾಲೆಸ್ತೀನಿಯನ್ನರ ಮೇಲೆ ಇಸ್ರೇಲ್ ನಡೆಸಿದ ಅತಿರೇಕದ ದಾಳಿ ಮತ್ತು ನಂತರ ಇರಾನ್ ಮೇಲಿನ ಕ್ಷಿಪಣಿ ದಾಳಿಗಳು ಒಂದು ವಿಷಯವನ್ನಂತೂ ಸ್ಪಷ್ಟವಾಗಿ ತಿಳಿಸಿವೆ; ಅದೇನೆಂದರೆ, ನೆತನ್ಯಾಹು ಮತ್ತು ಟ್ರಂಪ್ ಜೋಡಿಯು ಯಾವುದಾದರೂ ದೇಶವನ್ನು ಗುರಿಯಾಗಿಸಿಕೊಂಡರೆ, ಉಳಿದ ಜಗತ್ತು ತಮ್ಮ ಸರದಿ ಬರುವವರೆಗೆ ಸುಮ್ಮನೆ ಕುಳಿತು ಪ್ರೇಕ್ಷಕರಂತೆ ನೋಡುತ್ತಿರುತ್ತದೆ.

