
ನಿಯಮಗಳು ಮತ್ತು ನಿಯಮಗಳನ್ನು ಜಾರಿಗೊಳಿಸುವವರು ಇಲ್ಲದ ಜಗತ್ತಿನಲ್ಲಿ ಭಾರತವು ತನ್ನ ಕಾರ್ಯತಂತ್ರದ ಸ್ವಾಯತ್ತತೆಯನ್ನು ಉಳಿಸಿಕೊಳ್ಳಲು ಅತ್ಯಗತ್ಯವಾದ ಶಕ್ತಿಯನ್ನು ವೃದ್ಧಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಡಿಸೆಂಬರ್ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ʼಅಮೆರಿಕದ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರ-2025ʼ ಒಂದು ದಸ್ತಾವೇಜು ಕಾರ್ಯತಂತ್ರಕ್ಕಿಂತ ಹೆಚ್ಚಾಗಿ ಒಂದು ತತ್ವಶಾಸ್ತ್ರದಂತೆ ಭಾಸವಾಗುತ್ತಿದೆ. ಈ ಸಿದ್ಧಾಂತವು ಮಾನವಕುಲವು ಒಂದು ಸಾಮಾನ್ಯ ಭವಿಷ್ಯಕ್ಕಾಗಿ ಒಟ್ಟಾಗಿ ಕೆಲಸ ಮಾಡಬೇಕು ಎಂಬ ಯೋಚನೆಯನ್ನು ತಿರಸ್ಕರಿಸುತ್ತದೆ. ಇದು ಜಾಗತಿಕತೆಯನ್ನು ಒಂದು ಆದರ್ಶವೆಂದೂ ಮತ್ತು ರಾಷ್ಟ್ರಗಳ ನಡುವಿನ ಪರಸ್ಪರ ಅವಲಂಬನೆಯ ಪ್ರಕ್ರಿಯೆಯಾದ ಜಾಗತೀಕರಣವನ್ನು ರಾಜಕೀಯ, ಆರ್ಥಿಕ ಅಥವಾ ಸಾಂಸ್ಕೃತಿಕ ಸಾರ್ವಭೌಮದ ಮೇಲಿನ ಭ್ರಷ್ಟ ಅತಿಕ್ರಮಣ ಎಂದು ಪರಿಗಣಿಸುತ್ತದೆ.
ಈ ಕಾರ್ಯತಂತ್ರದ ದಸ್ತಾವೇಜು ವ್ಯಕ್ತಪಡಿಸುವ ವಿಶ್ವದೃಷ್ಟಿಕೋನವು ಅಮೆರಿಕದ ಬಗ್ಗೆ ಮಾತ್ರ ಅತಿಯಾದ ವ್ಯಾಮೋಹವನ್ನು ಹೊಂದಿದೆ. ಉಳಿದ ಇಡೀ ಪ್ರಪಂಚವು ಅಮೆರಿಕಕ್ಕೆ ಅಗತ್ಯವಾದ ಖನಿಜಗಳನ್ನು ಪೂರೈಸುವ ಮತ್ತು ಅಮೆರಿಕದ ಸರಕುಗಳು, ಸೇವೆಗಳು, ತಂತ್ರಜ್ಞಾನ ಹಾಗೂ ಬಂಡವಾಳಕ್ಕೆ ಮಾರುಕಟ್ಟೆಯಾಗಿ ಬಳಕೆಯಾಗುವ ಒಂದು ಆಟದ ಮೈದಾನದಂತೆ ಗೋಚರಿಸುತ್ತಿದೆ.
ಅಮೆರಿಕ ತಾನೇ ರೂಪಿಸಿದ ನಿಯಮಗಳ ಆಧಾರದಲ್ಲಿ ಜಾಗತಿಕ ವ್ಯವಸ್ಥೆಯನ್ನು ಬೆಂಬಲಿಸಿದಾಗ ಮಾತ್ರ ಅಭಿವೃದ್ಧಿ ಹೊಂದುತ್ತದೆ ಎಂಬ ಪರಿಕಲ್ಪನೆಯನ್ನು ಇದು ಸಂಪೂರ್ಣವಾಗಿ ಗಾಳಿಗೆ ತೂರುತ್ತದೆ. ಈ ಜಾಗತಿಕ ನಿಯಮಗಳನ್ನು ಸಹಜವಾಗಿಯೇ ವಿಶ್ವಸಂಸ್ಥೆ, ವಿಶ್ವ ವಾಣಿಜ್ಯ ಸಂಸ್ಥೆ ಮತ್ತು ಬಹುಪಕ್ಷೀಯ ಹಣಕಾಸು ಸಂಸ್ಥೆಗಳಂತಹ ವೇದಿಕೆಗಳ ಮೂಲಕ ಪ್ರಚುರಪಡಿಸಲಾಗಿರುತ್ತದೆ.
ತನ್ನ ಹಿತಾಸಕ್ತಿಗಳ ಮೇಲೆ ಮೋಹ
ಅಮೆರಿಕವು 'ಪ್ಯಾಕ್ಸ್ ಅಮೆರಿಕಾನಾ' (Pax Americana)ದಂತಹ ಭವ್ಯ ಯೋಜನೆಗಳ ಮೇಲೆ ತನ್ನ ಸಂಪನ್ಮೂಲ ಮತ್ತು ಶಕ್ತಿ ವ್ಯರ್ಥ ಮಾಡಬಾರದು, ಬದಲಿಗೆ ತನ್ನದೇ ಆದ ತಕ್ಷಣದ ಹಿತಾಸಕ್ತಿಗಳ ಮೇಲೆ ಮಾತ್ರ ಗಮನ ಹರಿಸಬೇಕು ಎಂಬುದು ಇದರ ಹಿಂದಿನ ತತ್ವವಾಗಿದೆ. ಅಮೆರಿಕಕ್ಕೆ ಯಾವುದು ಉತ್ತಮವೋ ಅದು ಇಡೀ ಜಗತ್ತಿಗೂ ಉತ್ತಮವಾದುದು ಎಂಬ ಯಾವುದೇ ಸಲಹೆ ಅಥವಾ ಕನಿಷ್ಠಪಕ್ಷ ಅಂತಹ ತೋರಿಕೆಯ ನಂಬಿಕೆಯನ್ನೂ ಸಹ ಇಲ್ಲಿ ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ.
ಸ್ವಾತಂತ್ರ್ಯ ನಂತರ ಭಾರತವು 'ವ್ಯೂಹಾತ್ಮಕ ಸ್ವಾಯತ್ತತೆ'ಗೆ ನೀಡುತ್ತಾ ಬಂದಿರುವ ಪ್ರಾಮುಖ್ಯತೆಗೆ, ಅಮೆರಿಕದ ಈ ಕಾರ್ಯತಂತ್ರದ ದಸ್ತಾವೇಜು ಅನಿರೀಕ್ಷಿತ ಸಮರ್ಥನೆ ನೀಡಿದಂತೆ ಕಾಣುತ್ತಿದೆ. ಯಾಕೆಂದರೆ, ಈ ದಸ್ತಾವೇಜು ಅಮೆರಿಕದ ಪ್ರಾಬಲ್ಯ, ಸಂಕುಚಿತವಾಗಿ ವ್ಯಾಖ್ಯಾನಿಸಲಾದ ಅದರ ಹಿತಾಸಕ್ತಿಗಳು ಮತ್ತು ಇತರ ರಾಷ್ಟ್ರಗಳನ್ನು ಅಮೆರಿಕದ ಅಧಿಪತ್ಯದ ಸಾಧನಗಳನ್ನಾಗಿ ಬಳಸಿಕೊಳ್ಳುವ ಉದ್ದೇಶದ ಮೇಲೆ ಮಾತ್ರ ಗಮನ ಹರಿಸಿದೆ. ಅದರಲ್ಲೂ ಮುಖ್ಯವಾಗಿ ಈ ಇತರ ರಾಷ್ಟ್ರಗಳು ಪಶ್ಚಿಮ ಗೋಳಾರ್ಧದ ಹೊರಗೆ ಇಡಬೇಕಾದ ಪ್ರತಿಸ್ಪರ್ಧಿಗಳಲ್ಲದೇ ಇದ್ದಾಗ ಮಾತ್ರ ಅವುಗಳನ್ನು ಕೇವಲ ಸಾಧನಗಳಂತೆ ನೋಡಲಾಗಿದೆ.
ಅಮೆರಿಕದ 47ನೇ ಅಧ್ಯಕ್ಷರ ವಿಶಿಷ್ಟ ವಿನಮ್ರತೆಯೊಂದಿಗೆ ಟ್ರಂಪ್ ಉಪಸಿದ್ಧಾಂತ
ಈ ಕಾರ್ಯತಂತ್ರದ ದಸ್ತಾವೇಜು ಮನ್ರೋ ಸಿದ್ಧಾಂತಕ್ಕೆ “ಟ್ರಂಪ್ ಉಪಸಿದ್ಧಾಂತ”ವನ್ನು ಸೇರಿಸುವುದಾಗಿ ಪ್ರತಿಪಾದಿಸುತ್ತದೆ. 1823ರಲ್ಲಿ ಅಧ್ಯಕ್ಷ ಜೇಮ್ಸ್ ಮನ್ರೋ ಅವರು ಮಂಡಿಸಿದ ಈ ಸಿದ್ಧಾಂತವು, ಪಶ್ಚಿಮ ಗೋಳಾರ್ಧವನ್ನು ಅಮೆರಿಕದ ಪ್ರಭಾವದ ವಲಯವೆಂದು ವ್ಯಾಖ್ಯಾನಿಸಿತ್ತು ಮತ್ತು ಇಲ್ಲಿ ಐರೋಪ್ಯ ಶಕ್ತಿಗಳು ಹಸ್ತಕ್ಷೇಪ ಮಾಡಬಾರದೆಂದು ತಿಳಿಸಿತ್ತು. ಏಳೂವರೆ ದಶಕಗಳ ನಂತರ, ಸ್ಪೇನ್ ಮತ್ತು ಅಮೆರಿಕದ ನಡುವೆ ನಡೆದ ಅಲ್ಪಕಾಲದ ಯುದ್ಧವು ಅಮೆರಿಕ ಖಂಡಗಳಲ್ಲಿ ಐಬೇರಿಯನ್ ವಸಾಹತುಶಾಹಿಯ ಅಂತ್ಯಕ್ಕೆ ಸಾಕ್ಷಿಯಾಯಿತು.
ಕೆಲವು ಕೆರಿಬಿಯನ್ ದ್ವೀಪಗಳಲ್ಲಿ, ಲ್ಯಾಟಿನ್ ಅಮೆರಿಕದ ಕೆಲವು ಸಣ್ಣ ಪ್ರದೇಶಗಳಲ್ಲಿ ಮತ್ತು ಮುಖ್ಯವಾಗಿ ಗ್ರೀನ್‌ಲ್ಯಾಂಡ್‌ನಲ್ಲಿ ಐರೋಪ್ಯರ ಉಪಸ್ಥಿತಿಯು ಇಂದಿಗೂ ಮುಂದುವರಿದಿದೆ. ಮನ್ರೋ ಸಿದ್ಧಾಂತಕ್ಕೆ ಸೇರಿಸಲಾದ ಈ “ಟ್ರಂಪ್ ಉಪಸಿದ್ಧಾಂತ"ವು, ಸ್ಪಷ್ಟವಾಗಿ ಏನನ್ನೂ ಹೇಳದಿದ್ದರೂ ಕೂಡ, ಮೂಲಭೂತವಾಗಿ ಇಡೀ ಲ್ಯಾಟಿನ್ ಅಮೆರಿಕವನ್ನು 'ಬನಾನಾ ರಿಪಬ್ಲಿಕ್'ಗಳ ಸಮೂಹವೆಂದು ಮರು ವ್ಯಾಖ್ಯಾನ ಮಾಡುತ್ತದೆ. ಇದರ ಅನ್ವಯ, ಅಮೆರಿಕವು ಯಾವ 'ಯುನೈಟೆಡ್ ಫ್ರೂಟ್ ಕಂಪನಿ'ಗಳು ಯಾವ ವಲಯಗಳಲ್ಲಿ ಮತ್ತು ಎಂತಹ ರಿಯಾಯಿತಿಯೊಂದಿಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ನಿರ್ದೇಶಿಸುತ್ತದೆ. ವೆನೆಜುವೆಲಾದ ವಿರುದ್ಧ ಅಮೆರಿಕ ಕೈಗೊಂಡ ಕ್ರಮಗಳು ಈ ವಿಷಯದಲ್ಲಿ ಯಾವುದೇ ಸಂಶಯಕ್ಕೆ ಎಡೆಮಾಡುವುದಿಲ್ಲ.
“ಸಮಜ್ದಾರ್ ಕೋ ಇಶಾರಾ ಹೀ ಕಾಫಿ ಹೈ,” (ತಿಳುವಳಿಕೆಯುಳ್ಳವರಿಗೆ ಒಂದು ಸಣ್ಣ ಸುಳಿವೇ ಸಾಕು") ಎಂಬ ಹಿಂದಿ ಗಾದೆಯಂತೆ ಮೆಕ್ಸಿಕೋ ದೇಶವು ಏಷ್ಯಾದಿಂದ ಬರುವ ಆಮದುಗಳ ಮೇಲೆ ಕಟ್ಟುನಿಟ್ಟಾದ ಸುಂಕಗಳನ್ನು ವಿಧಿಸುವ ಮೂಲಕ ಅಮೆರಿಕಕ್ಕೆ ಪೂರಕವಾಗಿ ನಡೆದುಕೊಂಡಿದೆ. ಇದು ಭಾರತೀಯ ರಫ್ತುಗಳ ಮೇಲೂ ಕೆಟ್ಟ ಪರಿಣಾಮ ಬೀರಿದೆ.
ದುರ್ಬಲವಾದೀತೇ ನ್ಯಾಟೋ
ಯುರೋಪಿನ ಸಾಂಸ್ಕೃತಿಕ ಮತ್ತು ಭೂರಾಜಕೀಯ ಏಕರೂಪತೆಯ ಸ್ಥಿರೀಕರಣಕ್ಕೆ ಉಕ್ರೇನ್ ಯುದ್ಧವು ಒಂದು ಅಡ್ಡಿಯಾಗಿದೆ ಎಂದು ಈ ಕಾರ್ಯತಂತ್ರದ ದಸ್ತಾವೇಜು ಪರಿಗಣಿಸುತ್ತದೆ. ಐರೋಪ್ಯ ಒಕ್ಕೂಟದಂತಹ ಅತಿರಾಷ್ಟ್ರೀಯ ಗುಂಪು ಮತ್ತು ಅನಿಯಂತ್ರಿತ ವಲಸೆಯಿಂದಾಗಿ ಈ ಏಕರೂಪತೆಯು ಭ್ರಷ್ಟಗೊಳ್ಳುತ್ತಿದೆ ಎಂದು ಅದು ವಾದಿಸುತ್ತದೆ. ಇಂತಹ ಗುಂಪುಗಳು ವಲಸೆಯನ್ನು ಉತ್ತೇಜಿಸುವ ಮೂಲಕ ಯುರೋಪಿಯನ್ ಅಸ್ಮಿತೆಯನ್ನು ಮಲಿನವಾಗಿ ಮಾಡುತ್ತಿವೆ; ನಿಯಮಗಳು ಮತ್ತು ಕೆಂಪು ಪಟ್ಟಿ ಅಥವಾ ಸಂಕೀರ್ಣ ಅಧಿಕಾರಶಾಹಿ ಪ್ರಕ್ರಿಯೆಗಳ ಮೂಲಕ ಯುರೋಪಿಯನ್ ವ್ಯವಹಾರಗಳನ್ನು ಹತ್ತಿಕ್ಕುತ್ತಿವೆ; ಸಾರ್ವಭೌಮ ವ್ಯವಸ್ಥೆಯನ್ನು ಉಲ್ಲಂಘಿಸುವ ಮಾನದಂಡಗಳನ್ನು ಹೇರುವ ಮೂಲಕ ಯುರೋಪಿಯನ್ ಸರ್ಕಾರಗಳನ್ನು ತಮ್ಮದೇ ಜನರ ಇಚ್ಛೆಗೆ ವಿರುದ್ಧವಾಗಿ ನಿಲ್ಲಿಸಿ, ಅಲ್ಲಿನ ಭಿನ್ನಾಭಿಪ್ರಾಯ ಮತ್ತು ಪ್ರಜಾಪ್ರಭುತ್ವವನ್ನು ವಿನಾಶದ ಕಡೆಗೆ ಕೊಂಡೊಯ್ಯುತ್ತಿವೆ; ಮತ್ತು ಅಂತಿಮವಾಗಿ ನಾಗರಿಕತೆಯ ಶಕ್ತಿಯನ್ನೇ ಕುಂದಿಸುತ್ತಿವೆ ಎಂದು ಅದು ಪ್ರತಿಪಾದಿಸುತ್ತದೆ.
ಇದರ ಪರಿಣಾಮವಾಗಿ ಯುರೋಪ್ ಇಂದು ನಾಗರಿಕತೆಯ ಅಳಿವಿನ ಭೀತಿಯನ್ನು ಎದುರಿಸುತ್ತಿದೆ ಎಂದು ದಸ್ತಾವೇಜು ವಾದಿಸುತ್ತದೆ. ಇದು ಅಂತಿಮವಾಗಿ ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (NATO) ಯನ್ನೇ ದುರ್ಬಲಗೊಳಿಸುತ್ತದೆ; ಏಕೆಂದರೆ ತನ್ನ ಮೂಲ ಅಸ್ಮಿತೆಗಳಿಂದ ಕಳಚಿಕೊಂಡ ಕೆಲವು ರಾಷ್ಟ್ರಗಳು, ಯಾವ ಆದರ್ಶಗಳನ್ನು ರಕ್ಷಿಸಲು ಈ ಮಿಲಿಟರಿ ಮೈತ್ರಿಕೂಟವನ್ನು ರಚಿಸಲಾಗಿತ್ತೋ, ಆ ಆದರ್ಶಗಳನ್ನು ಇನ್ನು ಮುಂದೆ ಬೆಂಬಲಿಸುವುದಿಲ್ಲ ಅಥವಾ ಒಪ್ಪಿಕೊಳ್ಳುವುದಿಲ್ಲ.
ಉಕ್ರೇನ್ ಕನಸಿಗೆ ತಣ್ಣೀರು
ಇದರ ಸ್ಪಷ್ಟ ಸಂಕೇತವೆಂದರೆ ಐರೋಪ್ಯ ರಾಷ್ಟ್ರಗಳು, ಒಂದು ವೇಳೆ ತಮ್ಮ ಕಲ್ಯಾಣ ಯೋಜನೆಗಳಿಗೆ ಕತ್ತರಿ ಹಾಕಿಯಾದರೂ, ಅಮೆರಿಕವು ನಿರ್ದೇಶಿಸಿದ ಮಟ್ಟಕ್ಕೆ ತಮ್ಮ ರಕ್ಷಣಾ ವೆಚ್ಚವನ್ನು ಹೆಚ್ಚಿಸಲು, ನ್ಯಾಟೊ ಮೈತ್ರಿಕೂಟಕ್ಕೆ ಸಂಬಂಧಿಸಿದ ಅಮೆರಿಕದ ಬದ್ಧತೆಯನ್ನು ಇನ್ನು ಮುಂದೆ ಖಚಿತವೆಂದು ಭಾವಿಸಲು ಸಾಧ್ಯವಿಲ್ಲ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಇದರಿಂದ ಬಹುಧ್ರುವೀಯ ವ್ಯವಸ್ಥೆಗೆ ದೊಡ್ಡ ಉತ್ತೇಜನ ಸಿಕ್ಕಂತಾಗುತ್ತದೆ.
ಈ ದಸ್ತಾವೇಜು ಹೇಳುವ ಪ್ರಕಾರ, ಐರೋಪ್ಯ ರಾಷ್ಟ್ರಗಳು ರಷ್ಯಾವನ್ನು ಒಂದು ಬೆದರಿಕೆ ಎನ್ನುವ ರೀತಿಯಲ್ಲಿ ಪರಿಗಣಿಸುತ್ತಿರುವುದು ತಪ್ಪು ಮತ್ತು ರಷ್ಯಾ ಜೊತೆಗೆ ಹೊಂದಾಣಿಕೆ ಹಾಗೂ ಸ್ಥಿರತೆಯನ್ನು ಕಂಡುಕೊಳ್ಳಲು ಅವುಗಳನ್ನು ಪ್ರೋತ್ಸಾಹಿಸಬೇಕು.
ಇದರ ಆಂತರ್ಯ ಸ್ಪಷ್ಟವಾಗಿದೆ: ಈ ಪ್ರಕ್ರಿಯೆಗೆ ಅಡ್ಡಿಯಾಗಿರುವ ಉಕ್ರೇನ್ ಯುದ್ಧವು ಶೀಘ್ರ ಅಂತ್ಯಗೊಳ್ಳಬೇಕು. ಅಷ್ಟೇ ಅಲ್ಲದೆ, ನ್ಯಾಟೋ ತನ್ನ ವಿಸ್ತರಣೆಯ ಕೆಲಸವನ್ನು ನಿಲ್ಲಿಸಬೇಕು ಎಂದು ಈ ದಸ್ತಾವೇಜು ಧ್ವನಿಸುತ್ತದೆ. ಇದು ರಷ್ಯಾಕ್ಕೆ ಅನುಕೂಲಕರವಾಗಿದೆ ಮತ್ತು ನ್ಯಾಟೊ ಸದಸ್ಯತ್ವ ಪಡೆಯಬೇಕೆಂಬ ಉಕ್ರೇನ್ನ ಕನಸಿಗೆ ತಣ್ಣೀರು ಎರಚಿದಂತಾಗುತ್ತದೆ.
ಚೀನಾ ವಿಚಾರದಲ್ಲಿ ಎಚ್ಚರಿಕೆಯ ನಡೆ
ಈ ದಸ್ತಾವೇಜು ಯಾವುದೇ ದೇಶವನ್ನು 'ವ್ಯೂಹಾತ್ಮಕ ಎದುರಾಳಿ' ಅಥವಾ 'ಶತ್ರು' ಎಂದು ಬೊಟ್ಟು ಮಾಡುವುದರಿಂದ ದೂರ ಉಳಿದಿದೆ. ಆದರೆ, ಇದು ಚೀನಾಕ್ಕೆ ಸಂಬಂಧಿಸಿದಂತೆ ಅತ್ಯಂತ ಎಚ್ಚರಿಕೆಯ ನಿಲುವನ್ನು ಹೊಂದಿದೆ. ಬೌದ್ಧಿಕ ಆಸ್ತಿಯನ್ನು ಕದಿಯುವ; ಮಿತಿಮೀರಿದ ಉತ್ಪಾದನಾ ಸಾಮರ್ಥ್ಯ ಮತ್ತು ತಂತ್ರಜ್ಞಾನದ ಸೃಷ್ಟಿಗೆ ಸಹಾಯ ಮಾಡುವ; ನಿರ್ಣಾಯಕ ಪೂರೈಕೆ ಸರಪಣಿಯ ಮೇಲೆ ಪ್ರಾಬಲ್ಯ ಸಾಧಿಸುವ; ಮತ್ತು ರಫ್ತು ಹೆಚ್ಚುವರಿಯನ್ನು ಬಳಸಿ ವಿದೇಶಗಳ ಮೇಲೆ ಪ್ರಭಾವ ಬೀರುವ ಶಕ್ತಿಯಾಗಿ ಚೀನಾವನ್ನು ಇಲ್ಲಿ ಚಿತ್ರಿಸಲಾಗಿದೆ. ಅಷ್ಟೇ ಅಲ್ಲದೆ, ಯಾವುದೇ ಬೆಲೆ ತೆತ್ತಾದರೂ ಸರಿ, ಚೀನಾವನ್ನು 'ಬನಾನಾ ಲ್ಯಾಂಡ್' ಅಂದರೆ ಗೌರವಾನ್ವಿತವಾಗಿ ಕರೆಯಲ್ಪಡುವ ಪಶ್ಚಿಮ ಗೋಳಾರ್ಧದಿಂದ ಹೊರಗಿಡಲೇಬೇಕು ಎಂದು ಈ ದಸ್ತಾವೇಜು ಪ್ರತಿಪಾದಿಸುತ್ತದೆ.
ಇಂಡೋ-ಪೆಸಿಫಿಕ್ ವಲಯವನ್ನು ಮುಕ್ತವಾಗಿ ಮತ್ತು ಸ್ಥಿರವಾಗಿ ಇಡಬೇಕಾದ ಅಗತ್ಯವಿದೆ ಎಂದು ದಸ್ತಾವೇಜು ಪ್ರತಿಪಾದಿಸುತ್ತದೆ. ಇದಕ್ಕಾಗಿ ಜಪಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳು ರಕ್ಷಣಾ ವೆಚ್ಚವನ್ನು ಹೆಚ್ಚಿಸಬೇಕು; ಹಾಗೂ ಭಾರತವು 'ಕ್ವಾಡ್' (Quad) ಒಕ್ಕೂಟದ ಸದಸ್ಯ ರಾಷ್ಟ್ರವಾಗಿ, ಜಗತ್ತಿನ ಏಕೈಕ ನಿರ್ಣಾಯಕ ದೇಶದ (ಅಮೆರಿಕದ) ಅಬಾಧಿತ ಕಾರ್ಯಾಚರಣೆಯ ಸ್ವಾತಂತ್ರ್ಯವನ್ನು ರಕ್ಷಿಸಲು ತನ್ನ ಪಾಲಿನ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂಬುದು ಇದರ ಆಶಯವಾಗಿದೆ.
ಇಷ್ಟು ಮಾತ್ರವಲ್ಲದೆ ಆಫ್ರಿಕದಿಂದ ನಿರ್ಣಾಯಕ ಖನಿಜಗಳನ್ನು (ಲಿಥಿಯಂ, ಕೋಬಾಲ್ಟ್ ಇತ್ಯಾದಿ critical minerals) ಹೊರತೆಗೆಯಲು ಕೂಡ ಇದು ಸಹಕಾರಿಯಾಗಬಹುದು.
ಖನಿಜಗಳ ಮೂಲವಾಗಿರುವುದನ್ನು ಹೊರತುಪಡಿಸಿ, ಆಫ್ರಿಕದ ಮತ್ತೊಂದು ಗಮನಾರ್ಹ ಲಕ್ಷಣವೆಂದರೆ ಅದು ಯುದ್ಧಗಳ ಪೂರೈಕೆದಾರನಂತೆ ಕಾಣುವುದು; ಅಂತಹ ಯುದ್ಧಗಳನ್ನು ನಿಲ್ಲಿಸುವುದರಿಂದ ನೋಬೆಲ್ ಶಾಂತಿ ಪ್ರಶಸ್ತಿ ಆಸೆಯನ್ನು ಮತ್ತಷ್ಟು ಜೀವಂತ ಇರಿಸಬಹುದು.
ಪ್ರತಿಭೆಗಳು ಅಗತ್ಯವೆಂಬ ಹಸಿಸುಳ್ಳು
ಅಮೆರಿಕದ ವಿಜ್ಞಾನ, ತಂತ್ರಜ್ಞಾನ ಮತ್ತು ವ್ಯವಹಾರಗಳಿಗೆ ಪ್ರತಿಭೆಗಳನ್ನು ಕರೆತರಲು ವಲಸೆಯ ಅಗತ್ಯವಿದೆ ಎಂಬ ಮಾತುಗಳೆಲ್ಲವೂ ಹಸಿಸುಳ್ಳು. ಅಮೆರಿಕ ಮತ್ತು ಅಮೆರಿಕನ್ನರು ಅನ್ಯರ ಸಹಾಯವಿಲ್ಲದೆಯೇ ಎಲ್ಲವನ್ನೂ ಉತ್ತಮವಾಗಿ ನಿಭಾಯಿಸಬಲ್ಲರು. ಆದರೆ ಭಾರತವು ಅಮೆರಿಕದ ಸರಕು, ಸೇವೆ ಮತ್ತು ತಂತ್ರಜ್ಞಾನಕ್ಕೆ ಒಂದು ಉತ್ತಮ ಮಾರುಕಟ್ಟೆಯಾಗಬಹುದು; ಅಷ್ಟೇ ಅಲ್ಲದೆ, ಅಮೆರಿಕದ ಗುರಿಗ ಮತ್ತು ಹಿತಾಸಕ್ತಿಗಳನ್ನು ಪೂರೈಸಲು ಇತರ ರಾಷ್ಟ್ರಗಳ ಜೊತೆ ಸೇರಿ ಕೆಲಸ ಮಾಡಬಹುದು.
"ಬಂಡವಾಳಶಾಹಿ ವ್ಯವಸ್ಥೆಯು ಧಾರ್ಮಿಕ ಶ್ರದ್ಧೆಯ ಪರಮಾನಂದವನ್ನು, ವೀರೋಚಿತ ಉತ್ಸಾಹ ಮತ್ತು ಸಾಮಾನ್ಯ ಜನರ ಭಾವನಾತ್ಮಕತೆಯನ್ನು ಅಹಂಕಾರವೆಂಬ ಹಿಮಗಟ್ಟುವ ನೀರಿನಲ್ಲಿ ಮುಳುಗಿಸಿಬಿಟ್ಟಿದೆ. ಅದು ವ್ಯಕ್ತಿಯ ಘನತೆಯನ್ನು ಕೇವಲ ವಿನಿಮಯ ಮೌಲ್ಯವನ್ನಾಗಿ ಬದಲಿಸಿದೆ; ಮತ್ತು ಅಸಂಖ್ಯಾತ ಅಜೇಯ ಸನ್ನದಿನ ಸ್ವಾತಂತ್ರ್ಯಗಳ ಬದಲಿಗೆ, 'ಮುಕ್ತ ವ್ಯಾಪಾರ' ಎಂಬ ಏಕೈಕ, ವಿವೇಕಶೂನ್ಯ ಸ್ವಾತಂತ್ರ್ಯವನ್ನು ಪ್ರತಿಷ್ಠಾಪಿಸಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಧಾರ್ಮಿಕ ಮತ್ತು ರಾಜಕೀಯ ಭ್ರಮೆಗಳ ಮುಸುಕಿನಲ್ಲಿದ್ದ ಶೋಷಣೆಯ ಜಾಗದಲ್ಲಿ, ಅದು ನಗ್ನ, ನಾಚಿಕೆಯಿಲ್ಲದ, ನೇರ ಮತ್ತು ಕ್ರೂರ ಶೋಷಣೆಯನ್ನು ಜಾರಿಗೆ ತಂದಿದೆ." ಎಂದು ಕಾರ್ಲ್ ಮಾರ್ಕ್ಸ್ ಅವರು ತಮ್ಮ ಕಮ್ಯುನಿಸ್ಟ್ ಮೆನಿಫೆಸ್ಟೋದಲ್ಲಿ ಪ್ರತಿಪಾದಿಸಿದ್ದಾರೆ.
ಟ್ರಂಪ್ ಅವರ ಈ ಕಾರ್ಯತಂತ್ರದ ದಸ್ತಾವೇಜು ಕುತರ್ಕ ಮತ್ತು ಭಾವುಕತೆಯನ್ನು ಮೀರಿದ್ದು ಹಾಗೂ ಬಂಡವಾಳಶಾಹಿ ವಿಚಾರದಲ್ಲಿ ತಿರಸ್ಕಾರದಿಂದ ಕೂಡಿದೆ. ಇದು ಅತ್ಯಂತ ಪ್ರಾಯೋಗಿಕವಾಗಿದೆ. ಇಲ್ಲಿ ಯಾವುದೇ ಆಡಂಬರದ ಭಾಷೆಯನ್ನು ಬಳಸಲಾಗಿಲ್ಲ. ವಾಸ್ತವದ ಒರಟು ಸಂಗತಿಗಳನ್ನು ಯಾವುದೇ ಅಲಂಕಾರವಿಲ್ಲದ ಮೊಳೆಗಳಂತೆ ಪ್ರಸ್ತುತಪಡಿಸಿದೆ. ಬದಲಾಗಿ ಚೂಪಾದ ತುದಿಗಳನ್ನು ಮುಚ್ಚಿಟ್ಟಿರುವ ಚಿನ್ನದ ಹೊಳಪಿನಂತೆ ತೋರಿಸುವುದಿಲ್ಲ.
ಒಂದು ವೇಳೆ ವಾಸ್ತವ ಪ್ರಪಂಚವು ಟ್ರಂಪ್ ಅವರ ಕಲ್ಪನೆಯ ಪ್ರಪಂಚದ ರೂಪಕ್ಕೆ ಕನಿಷ್ಠ ಶೇಕಡಾ 10 ರಷ್ಟಾದರೂ ಬದಲಾದಲ್ಲಿ, ಭಾರತವು ತನ್ನ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಲು ಕಿಂಚಿತ್ತೂ ಸಮಯ ಪೋಲು ಮಾಡಬಾರದು. ಒಡಕಿನ ರಾಜಕಾರಣ, ಉಚಿತ ಕೊಡುಗೆಗಳ ಸ್ಪರ್ಧಾತ್ಮಕ ಆರ್ಥಿಕ ನೀತಿ ಮತ್ತು ಮಿಥ್ಯ ವೈಭವಕ್ಕೆಲ್ಲ ತಕ್ಷಣ ಅಂತ್ಯ ಹಾಡಬೇಕು ಹಾಗೂ ನೈಜವಾದ ಆಸಕ್ತಿಯೊಂದಿಗೆ ವ್ಯೂಹಾತ್ಮಕ ಶಕ್ತಿಯನ್ನು ವೃದ್ಧಿಸಿಕೊಳ್ಳುವತ್ತ ಕಾರ್ಯಪ್ರವೃತ್ತವಾಗಬೇಕು.


