TK Arun

ವೆನೆಜುವೆಲಾ ಮೇಲೆ ಟ್ರಂಪಾಟ: ಹೇಳುವುದು ನೀತಿ ಪಾಠ, ಮಾಡುವುದು ಅನಾಚಾರ!


ವೆನೆಜುವೆಲಾ ಮೇಲೆ ಟ್ರಂಪಾಟ: ಹೇಳುವುದು ನೀತಿ ಪಾಠ, ಮಾಡುವುದು ಅನಾಚಾರ!
x
ವೆನೆಜುವೆಲಾದ ಅಧ್ಯಕ್ಷ ನಿಕೋಲಸ್‌ ಮಡುರೊ ಅವರನ್ನು ವಶಕ್ಕೆ ಪಡೆದು ದೇಶದಿಂದ ಹೊರಕ್ಕೆ ಕರೆದೊಯ್ಯಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಘೋಷಿಸಿದ ಬಳಿಕ ವೆನೆಜುವೆಲಾದ ರಾಜಧಾನಿ ಕಾರಕಸ್‌ ನಲ್ಲಿ ರಸ್ತೆ ವಿಭಜಕದ ಮೇಲೆ ನಿಂತು ರಾಷ್ಟ್ರಧ್ವಜವನ್ನು ಬೀಸುತ್ತಿರುವ ಮಡುರೊ ಬೆಂಬಲಿಗರು.
Click the Play button to hear this message in audio format

ಅಮೆರಿಕದ ಹಸ್ತಕ್ಷೇಪ ಸಾರ್ವಭೌಮತ್ವದ ನಿಯಮಗಳನ್ನು ಗಾಳಿಗೆ ತೂರಿದೆ. ಲ್ಯಾಟಿನ್‌ ಅಮೆರಿಕವನ್ನು ಅಸ್ಥಿರಗೊಳಿಸಿ ಉಕ್ರೇನ್‌ ವಿಷಯದಲ್ಲಿ ಯುರೋಪ್‌ ನೈತಿಕವಾದವನ್ನು ಕುಗ್ಗಿಸಿದೆ. ಭಾರತ ದನಿ ಎತ್ತಲೇಬೇಕಾಗಿದೆ.

ಡೆನ್ಮಾರ್ಕ್‌ ಮತ್ತು ಗ್ರೀನ್‌ ಲ್ಯಾಂಡ್‌ ಎಚ್ಚರಿಕೆಯಿಂದಿರಿ! ಸಾಮ್ರಾಜ್ಯಶಾಹಿ ಮತ್ತೆ ಸವಾರಿ ಮಾಡುತ್ತಿದೆ!!

ಅಮೆರಿಕದ ಪಡೆಗಳು ವೆನೆಜುವೆಲಾದ ಮೇಲೆ ದಾಳಿ ನಡೆಸಿ ಅಧ್ಯಕ್ಷ ನಿಕೋಲಸ್‌ ಮಡುರೊ ಅವರ ನಿವಾಸಕ್ಕೆ ನುಗ್ಗಿ ಅವರನ್ನು ಮತ್ತು ಅವರ ಪತ್ನಿಯನ್ನು ಅಪಹರಿಸಿ ಅಮೆರಿಕಕ್ಕೆ ಕರೆದೊಯ್ದ ಘಟನೆಯ ವರೆಗೆ ಇದು ಹ್ಯಾಸ್ಯಾಸ್ಪದ ಅಥವಾ ಅತಿಶಯೋಕ್ತಿ ಎಂದು ಅನಿಸಿರಬಹುದು.

ನೊಬೆಲ್‌ ಶಾಂತಿ ಪುರಸ್ಕೃತ ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮರಿಯಾ ಕೊರಿನಾ ಮಚಾಡೊ ಅವರಿಗೆ ಜನರ ಬೆಂಬಲ ಅಥವಾ ಮನ್ನಣೆ ಇಲ್ಲ. ಹಾಗಾಗಿ ವಿವೇಕಯುತ ಪರಿವರ್ತನೆಯ ಸಮಯ ಬರುವ ತನಕ ಅಮೆರಿಕವೇ ವೆನೆಜುವೆಲಾವನ್ನು ಮುನ್ನಡೆಸುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ. ವೆನೆಜುವೆಲಾದ ತೈಲ ಸಂಬಂಧಿ ಅರ್ಥ ವ್ಯವಸ್ಥೆಯನ್ನು ಅಮೆರಿಕದ ತೈಲ ಕಂಪನಿಗಳು ನಡೆಸುತ್ತವೆ, ಇವೆಲ್ಲವೂ ಖಂಡಿತವಾಗಿ ಆ ರಾಷ್ಟ್ರದ ಜನರ ಹಿತದೃಷ್ಟಿಯಿಂದ ಎಂದೂ ಅವರು ಹೇಳಿದ್ದಾರೆ.

ಇದನ್ನು ಕೇವಲ ಬಾಹ್ಯ ಬೆಂಬಲದಿಂದ ಮಾಡುವ ಆಡಳಿತ ಬದಲಾವಣೆಯಲ್ಲ. ಬದಲಾಗಿ ದಿಗ್ವಿಜಯದ ಮೂಲಕ ವಶಪಡಿಸಿಕೊಳ್ಳುವುದಕ್ಕೆ ಸಮಾನವಾಗಿದೆ.

ಭಾರತವು ಇಂತಹುದೊಂದು ನಡೆಯನ್ನು ಸಾಧ್ಯವಾದಷ್ಟು ಬೇಗ ಗಂಭೀರವಾಗಿ ವಿರೋಧಿಸಬೇಕು. ಟ್ರಂಪ್‌ ಇಂತಹ ನಡೆಯನ್ನು ಕೂಡ ಆಕ್ಷೇಪಿಸಬಹುದೇ ಎಂಬ ಭಯವನ್ನು ಕೂಡ ಒತ್ತಟ್ಟಿಗಿಡಬೇಕು. ಮತ್ತೊಂದು ದೇಶದ ಸಾರ್ವಭೌಮತ್ವವನ್ನು ಸಾಮ್ರಾಜ್ಯಶಾಹಿ ಶಕ್ತಿಯಿಂದ ಉಲ್ಲಂಘನೆ ಮಾಡುವುದನ್ನು ಭಾರತವು ಸಾಮಾನ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ.

ಸೇನಾ ಬಲವನ್ನು ಹೊಂದಿರುವ ರಾಷ್ಟ್ರಗಳು ಮತ್ತು ಅಂತಹ ಶಕ್ತಿಇಲ್ಲದ ದೇಶಗಳ ನಡುವೆ ಸಹಬಾಳ್ವೆ ಸಾಧ್ಯವಾಗಿ ಮಾಡುವ ತತ್ವಗಳಿಗೆ ರಕ್ಷಣೆಯನ್ನು ಒದಗಿಸುವ ಸಮಯ ಈಗ ಬಂದಿದೆ. ಕೇವಲ ಪ್ರಬಲ ರಾಷ್ಟ್ರದ ಪರ ವಕಾಲತ್ತು ಮಾಡುವ ಮೂಲಕ ಪಡೆಯಬಹುದಾದ ಅಲ್ಪಾವಧಿಯ ಲಾಭಗಳತ್ತ ನೋಡುವ ಸಮಯ ಇದಲ್ಲ.

ಇಂತಹ ಹೊತ್ತಿನಲ್ಲಿ ಲ್ಯಾಟಿನ್‌ ಅಮೆರಿಕದ ಇತರ ರಾಷ್ಟ್ರಗಳು ಸಹಜವಾಗಿ ಆತಂಕಕ್ಕೆ ಒಳಗಾಗಬಹುದು. ಮಡುರೊ ಗಯಾನಾದ ತೈಲ ಸಂಪತ್ತಿನ ಮೇಲೆ ಹಕ್ಕು ಪ್ರತಿಪಾದಿಸಿದ್ದರು. ವೆನೆಜುವೆಲಾದ ಅಮೆರಿಕನ್‌ ಆಡಳಿತವು ಅಂತಹ ಹಕ್ಕಿನ ಮೇಲೆ ಕ್ರಮ ಕೈಗೊಂಡು ಆ ಸಣ್ಣ, ಆದರೆ ಸಿರಿವಂತ ರಾಷ್ಟ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನ ಮಾಡೀತೇ?

ʼಗನ್‌ ಬೋಟ್‌ ಡಿಪ್ಲಮಸಿʼ

ಅಮೆರಿಕ ತನ್ನ ಮಗ್ಗುಲಲ್ಲಿ ಇರುವ ಪ್ರದೇಶವನ್ನು ಯಾವತ್ತೂ ʼಹಿತ್ತಿಲುʼ ಎಂದು ಪರಿಗಣಿಸುತ್ತದೆ. ಈ ಪ್ರದೇಶದ ಮೇಲೆ ಟ್ರಂಪ್‌ ನಡೆಸಿರುವ ಈ ದಾಳಿಯಲ್ಲಿ ಪತರಗುಟ್ಟಲಿರುವ ಒಂಭತ್ತು ಗುರಿಗಳ ಪಟ್ಟಿಯಲ್ಲಿ ಕ್ಯೂಬಾ ಕೂಡ ಸೇರಿದೆ. ಕ್ಯೂಬಾ ಕ್ಷಿಪಣಿ ಬಿಕ್ಕಟ್ಟಿನ ನಂತರ ಸೋವಿಯತ್‌ ಒಕ್ಕೂಟದ ಜೊತೆಗೆ ಅಮೆರಿಕ ಮಾಡಿಕೊಂಡಿದ್ದ ಒಪ್ಪಂದವನ್ನು ಧಿಕ್ಕರಿಸುವ ನಿರ್ಧಾರಕ್ಕೆ ಟ್ರಂಪ್‌ ಬಂದರೂ ಬರಬಹುದು. ಅಂದು ದ್ವೀಪದಲ್ಲಿ ನಿಯೋಜಿಸಲಾಗಿದ್ದ ತನ್ನ ಕ್ಷಿಪಣಿಗಳನ್ನು ಸೋವಿಯತ್‌ ಒಕ್ಕೂಟ ಹಿಂದಕ್ಕೆ ಪಡೆದಿತ್ತು. ಅದಕ್ಕೆ ಪ್ರತಿಯಾಗಿ ಅಮೆರಿಕ ಕೂಡ ಆ ದ್ವೀಪ ರಾಷ್ಟ್ರದಿಂದ ದೂರವಿರಲು ಟರ್ಕಿಯಲ್ಲಿ ನಿಯೋಜಿಸಿದ್ದ ತನ್ನ ಜುಪಿಟರ್‌ ಕಿಪಣಿಗಳನ್ನು ವಾಪಸ್‌ ಪಡೆದಿತ್ತು. ಆದರೆ ಟ್ರಂಪ್‌ ತಮ್ಮ ʼಗನ್‌ ಬೋಟ್‌ ಡಿಪ್ಲಮಸಿʼ (ಬೆದರಿಕೆಯ ರಾಜತಾಂತ್ರಿಕತೆ)ಯನ್ನು ಕ್ಯೂಬಾಕ್ಕೂ ವಿಸ್ತರಿಸಿದರೆ ಅಚ್ಚರಿಯಿಲ್ಲ.

ಯಾವುದೇ ಸಂಕಷ್ಟದ ಸಂದರ್ಭದಲ್ಲಿ ವೆನೆಜುವೆಲಾ ಕ್ಯೂಬಾ ರಕ್ಷಣೆಗೆ ನಿಲ್ಲುತ್ತಿತ್ತು. ಅದನ್ನು ಪೋಷಿಸಲು ಬೇಕಾದ ಹಣ ಮತ್ತು ತೈಲದ ಪ್ರಮುಖ ನೆರವನ್ನು ಕಳುಹಿಸುತ್ತಿತ್ತು. ಅದು ಈಗ ಸಂಪೂರ್ಣ ನಿಂತುಹೋಗುತ್ತದೆ. ಇದು ಅಲ್ಲಿರುವ ದುರ್ಬಲ ಆಡಳಿತದ ಪತನವನ್ನು ಇನ್ನಷ್ಟು ತ್ವರಿತಗೊಳಿಸುತ್ತದೆ.

ನಿಕೋಲಸ್‌ ಮಡುರೊ ಪದಚ್ಯುತಿಯನ್ನು ಅಲ್ಲಿನ ವಿರೋಧಪಕ್ಷ ಸ್ವಾಗತಿಸಿದೆ. ಆದರೆ ಇತರ ಲ್ಯಾಟಿನ್‌ ಅಮೆರಿಕ ರಾಷ್ಟ್ರಗಳು ವೆನೆಜುವೆಲಾದ ಸಾರ್ವಭೌತ್ವದ ಉಲ್ಲಂಘನೆಯನ್ನು ಕಟು ಮಾತುಗಳಲ್ಲಿ ಖಂಡಿಸಿವೆ. ಹಾಗಿದ್ದೂ ವೆನೆಜುವೆಲಾ ವಿರೋಧಪಕ್ಷದ ಬದಲಾಗಿ ತನ್ನ ಅಮೆರಿಕವೇ ದೇಶವನ್ನು ನಡೆಸಲಿದೆ ಎಂದು ಟ್ರಂಪ್‌ ಹೇಳಿಕೊಂಡಿರುವುದರಿಂದ ವಿರೋಧ ಪಕ್ಷವು ತನ್ನ ನಿಲುವನ್ನು ಬದಲಿಸಿಕೊಳ್ಳಬಹುದು.

ಕಳಚಿಬಿದ್ದ ಮುಖವಾಡ

ಇದುವರೆಗೂ ಅಮೆರಿಕ ನಾಯಕತ್ವದ ಹಿಂದೆ ಅನೇಕ ದೇಶಗಳು ನಿಲ್ಲಲು ಮುಖ್ಯ ಕಾರಣವಾಗಿದ್ದು “ನಿಯಮ ಆಧಾರಿತ ಅಂತಾರಾಷ್ಟ್ರೀಯ ವ್ಯವಸ್ಥೆ”. ಅಮೆರಿಕವು ಈ ವ್ಯವಸ್ಥೆಯನ್ನು ಪ್ರತಿಪಾದಿಸುವ ತನ್ನ ನೈತಿಕ ಮುಖವಾಡವನ್ನು ಈಗ ಕಳಚಿಕೊಂಡಿದ್ದಾಗಿದೆ. ಆದರೆ ಪರಿಸ್ಥಿತಿ ಬದಲಾಗಿದೆ. ರಾಷ್ಟ್ರಗಳ ನಡುವಿನ ಸಂಬಂಧಗಳ ವಿಚಾರದಲ್ಲಿ ಯಾವತ್ತೂ ಆಳುವ ನಿಯಮಗಳನ್ನು ಬಯಸುವ ಮತ್ತು ಬಲವೇ ನ್ಯಾಯ ಎಂದು ನಂಬುವ ಉದ್ದಟ ಆಡಳಿತದ ವಿರುದ್ಧ ಮಿಲಿಟರಿ ಶಕ್ತಿಯೊಂದಿಗೆ ನಿಲ್ಲಲು ಬಯಸುವ ದೇಶಗಳಿಗೆ ಚೀನಾ ಒಂದು ಕೇಂದ್ರಬಿಂದುವಾಗಿ ಹೊರಹೊಮ್ಮುವ ಸಾಧ್ಯತೆ ನಿಚ್ಚಳವಾಗಿದೆ.

ಯಾವುದೇ ಪ್ರಬಲ ಶಕ್ತಿಯ ಜೊತೆ ಕಾಣಿಸಿಕೊಳ್ಳದ ಭಾರತದ ʼಅಲಿಪ್ತ ನೀತಿʼಯ ಚೌಕಟ್ಟು ಇಂದಿಗೂ ಪ್ರಸ್ತುತವಾಗಿದೆ. ಆದರೆ ಭಾರತ ಯಾವತ್ತೂ ತನ್ನ ಸಿದ್ಧಾಂತಗಳಿಗೆ ಬದ್ಧವಾಗಿ ನಿಲ್ಲಬೇಕು ಮತ್ತು ಯಾವುದೇ ಸಂದರ್ಭದಲ್ಲಿ ಸಿದ್ಧಾಂತಗಳ ಪರವಾಗಿ ನಿಲ್ಲುವ ಶಕ್ತಿಗಳೊಂದಿಗೆ ಅದು ತನ್ನ ನಿಲುವನ್ನು ಸ್ಪಷ್ಟವಾಗಿ ಹೊಂದಿಸಿಕೊಳ್ಳಬೇಕು.

ತೈವಾನ್-ನ್ನು ಬಲವಂತವಾಗಿ ವಶಕ್ಕೆ ತೆಗೆದುಕೊಳ್ಳಲು ಚೀನಾ ಇಂತಹ ಒಂದು ಸಮಯವನ್ನು ಸೂಕ್ತ ಅವಕಾಶ ಎಂದು ಪರಿಗಣಿಸುವ ಸಾಧ್ಯತೆಯಿದೆಯೇ ಎಂದು ಕೆಲವರು ಅಚ್ಚರಿಯಿಂದ ನೋಡುತ್ತಿದ್ದಾರೆ. ಆದರೆ ಚೀನಾ ಈ ವಿಚಾರದಲ್ಲಿ ದೀರ್ಘಕಾಲದ ಯೋಜನೆಯನ್ನು ರೂಪಿಸುವುದರಲ್ಲಿ ಹೆಚ್ಚಿನ ಆಸಕ್ತಿ ತೋರಿಸುವ ಸಾಧ್ಯತೆಯೇ ಹೆಚ್ಚು. ತಾನೇ ಮತ್ತೊಂದು ಸಾಮ್ರಾಜ್ಯಶಾಹಿ ಶಕ್ತಿಯಾಗಿ ಕಾಣಿಸಿಕೊಳ್ಳುವುದಕ್ಕೆ ಬದಲಾಗಿ ಅತಿರೇಕದ ಸಾಮ್ರಾಜ್ಯಶಾಹಿ ಧೋರಣೆಯ ವಿರುದ್ಧ ಪ್ರಬಲ ವಿರೋಧದ ಕೇಂದ್ರಬಿಂದುವಾಗಿ ಹೊರಹೊಮ್ಮುವುದರಲ್ಲಿಯೇ ಅದು ತನ್ನ ಲಾಭವನ್ನು ಕಾಣಬಹುದು.

ಐರೋಪ್ಯ ಒಕ್ಕೂಟ ಮತ್ತು ಉಕ್ರೇನ್‌ ಬಿಕ್ಕಟ್ಟು

ವೆನೆಜುವೆಲಾ ವಿರುದ್ಧ ಅಮೆರಿಕ ಕೈಗೊಂಡಿರುವ ಕ್ರಮದ ತರ್ಕವು ಉಕ್ರೇನ್‌—ಗೆ ಬೆಂಬಲ ನೀಡುವುದನ್ನು ಮುಂದುವರಿಸುವ ಯುರೋಪಿನ ವಾದವನ್ನು ದುರ್ಬಲಗೊಳಿಸುತ್ತದೆ. ರಷ್ಯಾ ಉಕ್ರೇನ್‌ ಮೇಲೆ ಆಕ್ರಮಣ ಮಾಡುವ ಮೂಲಕ ಅಂತಿಮವಾಗಿ ಕ್ರಿಮಿಯಾದ ಸೆವಸ್ಟಾಪೋಲ್‌ ನಲ್ಲಿರುವ ತನ್ನ ಏಕೈಕ ವಾರ್ಮ್‌ ವಾಟರ್‌ ನೌಕಾನೆಲೆಯನ್ನು ಭದ್ರಪಡಿಸಿಕೊಳ್ಳುತ್ತಿದೆ.

ಐರೋಪ್ಯ ಒಕ್ಕೂಟ ಉಕ್ರೇನ್‌‌ಗೆ ನೀಡುತ್ತಿರುವ ಬೆಂಬಲವು ಒಂದು ಮೂಲತತ್ವದ ಮೇಲೆ ನಿಂತಿದೆ. ಅದೆಂದರೆ ಯಾವುದೇ ಸರ್ಮಥನೆಗಳ ಹೊರತಾಗಿಯೂ ರಷ್ಯಾ ಉಕ್ರೇನಿನ ರಾಷ್ಟ್ರೀಯ ಸಾರ್ವಭೌಮತ್ವವನ್ನು ಉಲ್ಲಂಘಿಸಲು ಅವಕಾಶ ನೀಡಬಾರದು ಎಂಬುದು.

ಆದರೆ ಯುರೋಪಿನ ಪ್ರಮುಖ ಮಿತ್ರ ರಾಷ್ಟ್ರವಾಗಿರುವ ಅಮೆರಿಕವೇ ಇಂತಹುದೊಂದು ಕೃತ್ಯವನ್ನು ಮಾಡುತ್ತಿರುವಾಗ ಆ ದೇಶದ ಬೆಂಬಲದೊಂದಿಗೆ ಉಕ್ರೇನ್‌ ಸಾರ್ವಭೌಮತ್ವಕ್ಕಾಗಿ ಯುರೋಪ್‌ ನಡೆಸುತ್ತಿರುವ ಹೋರಾಟವು ತನ್ನ ನೈತಿಕ ತಳಹದಿಯನ್ನೇ ಕಳೆದುಕೊಳ್ಳುತ್ತದೆ. ಹಾಗಾಗಿ ಯುರೋಪ್‌ ಸಾಧ್ಯವಾದಷ್ಟು ಬೇಗ ಯುದ್ಧಕ್ಕೆ ಕೊನೆ ಹಾಡಲು ಪ್ರಯತ್ನ ನಡೆಸುವುದು ಹಾಗೂ ರಷ್ಯಾದ ಜೊತೆ ರಾಜತಾಂತ್ರಿಕ ಸಂಬಂಧಗಳನ್ನು ಮರುಸ್ಥಾಪಿಸುವುದು ಉತ್ತಮ ನಡೆಯಾಗುತ್ತದೆ.

ಒಂದು ವೇಳೆ ಐರೋಪ್ಯ ಒಕ್ಕೂಟ ಮತ್ತು ನ್ಯಾಟೊ ಸದಸ್ಯ ರಾಷ್ಟ್ರವಾದ ಡೆನ್ಮಾರ್ಕಿನ ಸಂರಕ್ಷಿತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ನ್ನು ಟ್ರಂಪ್‌ ವಶಕ್ಕೆ ತೆಗೆದುಕೊಳ್ಳಲು ಮುಂದಾದರೆ ರಷ್ಯಾದೊಂದಿಗೆ ಅದರ ರಾಜತಾಂತ್ರಿಕ ಸಂಬಂಧಗಳು ಸುಧಾರಿಸುವುದು ಖಚಿತ.

ನಾವಿನ್ನೂ ವಿಯೆಟ್ನಾಂ ಯುದ್ಧದ ದಿನಗಳಿಗೆ ಮರಳಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ವಿಶೇಷವಾಗಿ ಅಮೆರಿಕದ ಸಾರ್ವಜನಿಕರಿಗೆ ಮತ್ತು ಟ್ರಂಪ್‌ ಅವರ MAGA ಬೆಂಬಲಿಗರಿಗೆ ವಿದೇಶಿ ನೆಲದಲ್ಲಿ ಅಮೆರಿಕನ್ನರ ಪ್ರಾಣವನ್ನು ಕಳೆದುಕೊಳ್ಳುವ ಆಸಕ್ತಿ ಇಲ್ಲ.

ವೆನೆಜುವೆಲಾವನ್ನು ಅಮೆರಿಕದ ಆಡಳಿತಕ್ಕೆ ಒಳಪಡಿಸಲು ಮತ್ತು ಅಲ್ಲಿನ ದೈತ್ಯ ತೈಲ ಕಂಪನಿಗಳ ಮೇಲೆ ಅಮೆರಿಕ ನಿಯಂತ್ರಣ ಸಾಧಿಸಲು ಪೂರಕ ವಾತಾವರಣ ನಿರ್ಮಾಣ ಮಾಡುವ ಜಿದ್ದಿಗೆ ಬಿದ್ದರೆ ಅಮೆರಿಕದ ಸೈನಿಕರು ಹತರಾಗುವ ಹಂತ ನಿರ್ಮಾಣವಾಗುತ್ತದೆ. ಆಗ ಟ್ರಂಪ್‌ ಆಡಳಿತದ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು.

ಟ್ರಂಪ್‌ ಅವರ ಈ ವೆನೆಜುವೆಲಾ ಮೇಲಿನ ದಾಳಿಯ ಧೋರಣೆಯ ಒಳಗುಟ್ಟೇನೆಂದರೆ ಅಮೆರಿಕದ ಸಾರ್ವಜನಿಕರನ್ನು ಇನ್ನಷ್ಟು ಧ್ರುವೀಕರಣ ಮಾಡುವುದು. ಅಮೆರಿಕದ ಜನಸಂಖ್ಯೆಯಲ್ಲಿ ೬.೮ ಕೋಟಿ ಹಿಸ್ಪಾನಿಕ್‌ (ಲ್ಯಾಟಿನ್‌ ಅಮೆರಿಕ ಮೂಲದವರು) ಜನರಿದ್ದಾರೆ. ಅಮೆರಿಕದ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಇದು ಶೇ.೨೦ರಷ್ಟಾಗುತ್ತದೆ. ಇವರಲ್ಲಿ ಕೆಲವರು ಲ್ಯಾಟಿನ್‌ ಅಮೆರಿಕದಲ್ಲಿ ಇಂತಹ ನೇರ ಹಸ್ತಕ್ಷೇಪವನ್ನು ಬೆಂಬಲಿಸಬಹುದು. ಆದರೆ ಬಹುಪಾಲು ಜನರು ಅಮೆರಿಕ ಅಧ್ಯಕ್ಷರು ಇಡೀ ಪ್ರದೇಶವನ್ನು ಒಂದು ಭಾರೀ ಬಾಳೆಹಣ್ಣಿನ ತೋಟವನ್ನಾಗಿ ಪರಿಗಣಿಸಿ ಅದನ್ನು ಅಮೆರಿಕದ ನಾನಾ ಹಣ್ಣಿನ ಕಂಪನಿಗಳ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಬಹುದು.

ಇಂತಹ ಅಸಮಾಧಾನವನ್ನು ಉಗ್ರಗಾಮಿ ಅಂಶಗಳು ಅಮೆರಿಕದಲ್ಲಿ ಹಿಂಸಾತ್ಮಕ ಅಡೆತಡೆಗಳನ್ನು ಉಂಟುಮಾಡಲು ಬಳಸುತ್ತವೆಯೇ ಎಂಬುದು ಕೇವಲ ಊಹೆಗೆ ನಿಲುಕದ ವಿಷಯ. ಆದರೆ ಇಂತಹ ಊಹೆ ವಾಸ್ತವಿಕ ನೆಲೆಗಟ್ಟನ್ನು ಹೊಂದಿದೆಯೇ ಹೊರತು ಕೇವಲ ಜನರನ್ನು ಬೆದರಿಸುವ ತಂತ್ರವಾಗಿರುವುದಿಲ್ಲ.

Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ʼನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story