
ಅಮೆರಿಕ ಕಾಂಗ್ರೆಸ್ನಲ್ಲಿ ರಿಪಬ್ಲಿಕನ್ ಪಕ್ಷದ ಸೋಲು ವಿದೇಶಾಂಗ ನೀತಿಯ ಮೇಲೆ ಡೊನಾಲ್ಡ್ ಟ್ರಂಪ್ ಅವರ ಹಿಡಿತವನ್ನು ಸಡಿಲಗೊಳಿಸೀತು ಮತ್ತು ಇರಾನ್ ಕುರಿತ ಕಾರ್ಯತಂತ್ರದ ಮರುಚಿಂತನೆಗೂ ಒತ್ತಡ ಹೇರೀತು.
ಸೆ.23ರಂದು ವಿಶ್ವಸಂಸ್ಥೆಯ ಮಹಾಅಧಿವೇಶನದ 81ನೇ ಅಧಿವೇಶನದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಷಣ ಮಾಡಿದರು. ಅವರು ತಮ್ಮ ಭಾಷಣದ ಉದ್ದಕ್ಕೂ ಪ್ರಸ್ತಾಪ ಮಾಡಿದ್ದು ಇರಾನ್ ವಿರುದ್ಧದ ಯುದ್ಧವನ್ನು. ಇರಾನ್ ಜೊತೆಗೆ ಒಪ್ಪಂದ ಮಾಡಿಕೊಳ್ಳಬೇಕೇ ಅಥವಾ ಶಿಯಾ ರಾಷ್ಟ್ರವನ್ನು ಸರ್ವನಾಶ ಮಾಡಬೇಕೇ ಎಂಬುದನ್ನು ತಾವೇ ನಿರ್ಧರಿಸಬೇಕಾಯಿತು ಎಂದೂ ಅವರು ಹೇಳಿದರು. ಇರಾನ್ ಒಪ್ಪಂದ ಮಾಡಿಕೊಳ್ಳುತ್ತದೆ ಎಂಬ ದೃಢವಿಶ್ವಾಸ ಅವರದ್ದು.
“ಇರಾನ್ ಒಪ್ಪಂದ ಮಾಡಿಕೊಳ್ಳದೇ ಹೋದರೆ ಅದಕ್ಕೆ ಯಾವುದೇ ಅರ್ಥ ಇಲ್ಲ,” ಎಂದು ಹೇಳಲೂ ಅವರು ಮರೆಯಲಿಲ್ಲ.
ತಾವೇ ಪ್ರಸ್ತಾಪ ಮಾಡಿದ ಪ್ರಶ್ನೆಗೆ ಉತ್ತರಿಸುವ ಪ್ರಯತ್ನವನ್ನೂ ಅವರು ಮಾಡಿದರು. ಒಪ್ಪಂದದ ವಿಚಾರದಲ್ಲಿ ಇರಾನ್ನ ವಿಳಂಬಗೊಳಿಸುವ ತಂತ್ರ ತಪ್ಪಾಗಿದೆ ಎಂದೂ ಅವರು ಹೇಳಿದರು. ಅಂದು ಟ್ರಂಪ್ ಅವರು ಆಡಿದ ಮಾತುಗಳು ಅತ್ಯಂತ ನಿರ್ಣಾಯಕವಾಗಿದ್ದು ಅವುಗಳನ್ನು ಪೂರ್ತಿಯಾಗಿ ಉಲ್ಲೇಖಿಸುವುದು ಸೂಕ್ತವೂ ಆಗಿದೆ;
“ಮಧ್ಯಂತರ ಚುನಾವಣೆಯಲ್ಲಿ ನನ್ನ ಸಾಧನೆ ಹೇಗಿರುತ್ತದೆ ಎಂಬುದನ್ನು ನೋಡುವ ಕಾತರ ಅವರಿಗೆ. ನಾನು ಸ್ಪರ್ಧಿಸುತ್ತಿಲ್ಲ ಎಂದು ಅವರು ಅಂದುಕೊಂಡಿದ್ದಾರೆ. ಆದರೆ ನಾನು ಈಗಾಗಲೇ ಅದನ್ನು ಮಾಡಿದ್ದೇನೆ ಮತ್ತು ಭರ್ಜರಿ ಬಹುಮತ ಸಾಧಿಸಿದ್ದೇನೆ. ನಾವು ಬೃಹತ್ ಅಂತರದಿಂದ ಗೆದ್ದಿದ್ದೇವೆ ಕೂಡ. ಜೊತೆಗೆ ನಾನು ಇನ್ನೂ ಎರಡೂವರೆ ವರ್ಷಗಳ ಕಾಲ ಇಲ್ಲಿರುತ್ತೇನೆ. ರಿಪಬ್ಲಿಕನ್ ಪಕ್ಷವು ಕಣಕ್ಕೆ ಇಳಿದಿದೆ ಮತ್ತು ನಾನು ಅವರಿಗೆ ಸಹಾಯ ಮಾಡುತ್ತಿದ್ದೇನೆ. ಆದರೆ ನಾನು ಸ್ಪರ್ಧಿಸುತ್ತಿಲ್ಲ. ನಾನು ಚುನಾವಣೆಗೆ ಸಂಪೂರ್ಣವಾಗಿ ಯಾವುದೇ ಮಹತ್ವವನ್ನು ನೀಡಿಲ್ಲ. ನೀಡುವುದೂ ಇಲ್ಲ. ಇರಾನ್ ವಿಚಾರಕ್ಕೆ ಬಂದಾಗ ಅವೆಲ್ಲ ನನ್ನ ಮನಸ್ಸಿಗೂ ಬರುವುದಿಲ್ಲ. ನನಗೆ ಯಾವತ್ತೂ ಮುಖ್ಯವಾಗಿರುವ ಸಂಗತಿ ಎಂದರೆ ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಬಾರದು ಎಂಬುದು.”
ಮಧ್ಯಂತರ ಚುನಾವಣೆ: ಟ್ರಂಪ್‌ಗೆ ಅಗ್ನಿ ಪರೀಕ್ಷೆ
ಅಮೆರಿಕದ ಅಧ್ಯಕ್ಷರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದರತ್ತ ಸಂಪೂರ್ಣ ಗಮನ ಹರಿಸುವ ಮೊದಲು ಇರಾನ್ ಸದ್ಯ ಅಮೆರಿಕದ ಮಧ್ಯಂತರ ಚುನಾವಣೆಗಳಿಗಾಗಿ ಕಾಯುತ್ತಿದೆ ಎಂಬ ಟ್ರಂಪ್ ಅವರ ಮಾತಿನಲ್ಲಿ ಸತ್ಯವಿದೆ. ಆದಾಗ್ಯೂ, ಈ ಚುನಾವಣೆಗಳ ಫಲಿತಾಂಶಗಳ ಬಗ್ಗೆ ತನಗೇನೂ ಕಾಳಜಿಯಿಲ್ಲ ಎಂಬ ಟ್ರಂಪ್ ಅವರ ಮಾತು ಅವರ ನಡೆಗಳಿಗೆ ಸರಿಹೊಂದುವುದಿಲ್ಲ. ಈ ಚುನಾವಣೆಗಳಿಗೆ ಈಗ ಒಂದು ತಿಂಗಳಿಗಿಂತ ಕಡಿಮೆ ಸಮಯವಿದ್ದು, ನವೆಂಬರ್ 3 ರಂದು ಅದು ನಿಗದಿಯಾಗಿವೆ. 100 ಸದಸ್ಯರ ಅಮೆರಿಕದ ಸೆನೆಟ್ನ 35 ಸ್ಥಾನಗಳಿಗೆ ಮತ್ತು ಅಮೆರಿಕದ ಪ್ರತಿನಿಧಿ ಸಭೆಯ ಎಲ್ಲಾ ಸದಸ್ಯರಿಗೆ ಈ ಚುನಾವಣೆಗಳು ನಡೆಯಲಿವೆ.
ಟ್ರಂಪ್ ಅವರ ರಿಪಬ್ಲಿಕನ್ ಪಕ್ಷವು ಸೆನೆಟ್ ಮತ್ತು ಪ್ರತಿನಿಧಿ ಸಭೆ ಎರಡರಲ್ಲೂ ಬಹುಮತವನ್ನು ಹೊಂದಿದೆ. ಟ್ರಂಪ್ ಅವರು 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಚಲಾಯಿಸಲಾದ ಒಟ್ಟು ಮತಗಳಲ್ಲಿ ಬಹುಮತದೊಂದಿಗೆ ಗೆದ್ದರು. ರಿಪಬ್ಲಿಕನ್ ಪಕ್ಷದ ಮೇಲೆ ಅವರದ್ದೇ ಸಂಪೂರ್ಣ ವರ್ಚಸ್ಸು. 2020ರ ಚುನಾವಣೆಯ ಫಲಿತಾಂಶಗಳನ್ನು ಅಕ್ರಮ ಎಂದು ಅವರು ಕರೆದದ್ದನ್ನು ವಿರೋಧಿಸಿದ್ದ ಪಕ್ಷದೊಳಗಿನ ಎಲ್ಲಾ ಟೀಕಾಕಾರರನ್ನು ಮೂಲೆಗುಂಪು ಮಾಡಲಾಯಿತು. ಪಕ್ಷವು ಕಾಂಗ್ರೆಸ್ನ ನಿಯಂತ್ರಣ ಪಡೆದುಕೊಂಡ ತಕ್ಷಣವೇ ಅಧ್ಯಕ್ಷರಾಗಿ ಟ್ರಂಪ್ ಅವರ ಪ್ರಾಬಲ್ಯ ಹೆಚ್ಚಾಯಿತು. ಇದರೊಂದಿಗೆ, ಸಂಪ್ರದಾಯವಾದಿ ಬಹುಮತವಿರುವ ಸುಪ್ರೀಂ ಕೋರ್ಟ್ನಲ್ಲಿಯೂ ಅನೇಕ ಪ್ರಕರಣಗಳಲ್ಲಿ ಟ್ರಂಪ್ ತಮ್ಮ ಪರವಾದ ತೀರ್ಪುಗಳನ್ನು ಪಡೆದುಕೊಂಡರು. ಇದು ಅಧ್ಯಕ್ಷೀಯ ವಿನಾಯಿತಿ ಮತ್ತು ವಲಸೆಗೆ ಸಂಬಂಧಿಸಿದ ವಿಷಯಗಳನ್ನೂ ಒಳಗೊಂಡಿತ್ತು. ಇವೆಲ್ಲವೂ ಟ್ರಂಪ್ ಅವರನ್ನು ಇತ್ತೀಚಿನ ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಶಕ್ತಿಶಾಲಿ ಅಧ್ಯಕ್ಷರಲ್ಲಿ ಒಬ್ಬರನ್ನಾಗಿ ಮಾಡಿತು.
ಒಂದು ವೇಳೆ ರಿಪಬ್ಲಿಕನ್ ಪಕ್ಷವು ಸೆನೆಟ್ ಮತ್ತು ಪ್ರತಿನಿಧಿ ಸಭೆಯ ನಿಯಂತ್ರಣವನ್ನು ಕಳೆದುಕೊಂಡರೆ, ಟ್ರಂಪ್ ಅವರ ಅಧಿಕಾರವು ಗಣನೀಯವಾಗಿ ಕುಗ್ಗುತ್ತದೆ. ಕಾಂಗ್ರೆಸ್‌ನಲ್ಲಿ ರಿಪಬ್ಲಿಕನ್‌ಗಳು ಸೋತರೆ ಇರಾನ್ ವಿಚಾರದಲ್ಲಿ ತಾನು ಅನುಸರಿಸುತ್ತಿರುವ ಹಾದಿಯನ್ನು ಬದಲಾಯಿಸುವುದಿಲ್ಲ ಎಂಬ ಅವರ ಹೇಳಿಕೆಯ ಹೊರತಾಗಿಯೂ, ಇರಾನ್ಗೆ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಅನುಮತಿ ನೀಡಬಾರದು ಎಂಬ ದೃಷ್ಟಿಕೋನವನ್ನು ಅಮೆರಿಕದ ರಾಜಕೀಯ ವರ್ಗವು ಹೊಂದಿದ್ದರೂ, ರಿಪಬ್ಲಿಕನ್ ಪಕ್ಷವು ತಮ್ಮ ತಂತ್ರಗಳನ್ನು ಬದಲಾಯಿಸುವಂತೆ ಟ್ರಂಪ್ ಅವರನ್ನು ಒತ್ತಾಯಿಸುತ್ತದೆ ಎಂಬುದು ವಾಸ್ತವ. ತಮ್ಮ ಕಡೆಯಿಂದ, ಈ ಪ್ರದೇಶಕ್ಕೆ ವಿಮಾನವಾಹಕ ನೌಕಾ ಗುಂಪನ್ನು ಮತ್ತು 2,000 ಮರೀನ್ ಸೈನಿಕರನ್ನು ಕಳುಹಿಸುವ ಮೂಲಕ ಮಧ್ಯಂತರ ಚುನಾವಣೆಗಳಿಗೂ ತಮ್ಮ ಇರಾನ್ ನೀತಿಗೂ ಕಿಂಚಿತ್ತು ಸಂಬಂಧವಿಲ್ಲ ಎಂಬ ಸಂದೇಶವನ್ನು ಟ್ರಂಪ್ ಬಲಪಡಿಸುತ್ತಿದ್ದಾರೆ. ಆದಾಗ್ಯೂ, ಇರಾನ್ ಈ ನಡೆಯನ್ನು ಲಘುವಾಗಿ ಸ್ವೀಕರಿಸಿ ಮಧ್ಯಂತರ ಚುನಾವಣೆಯ ಫಲಿತಾಂಶಗಳಿಗಾಗಿ ಕಾಯುವ ಸಾಧ್ಯತೆ ನಿಚ್ಚಳವಾಗಿದೆ.
ರಿಪಬ್ಲಿಕನ್‌ಗಳಿಗೆ ಎದುರಾಗಿದೆ ಕಠಿಣ ಸ್ಪರ್ಧೆ
ಸೆನೆಟ್ನಲ್ಲಿ ಪ್ರಸ್ತುತ ಇರುವ ಸ್ಥಾನಗಳೆಂದರೆ, ರಿಪಬ್ಲಿಕನ್ಗಳು 53 ಸ್ಥಾನಗಳನ್ನು ಮತ್ತು ಡೆಮಾಕ್ರಟ್ಗಳು 45 ಸ್ಥಾನಗಳನ್ನು ಹೊಂದಿದ್ದಾರೆ. ಇಬ್ಬರು ಸೆನೆಟರ್ಗಳು ಸ್ವತಂತ್ರರಾಗಿದ್ದು ಡೆಮಾಕ್ರಟ್‌ಗಳೊಂದಿಗೆ ಕೈಜೋಡಿಸಿದ್ದಾರೆ. ಆದ್ದರಿಂದ, ಈ ಲೆಕ್ಕಾಚಾರದ ಪ್ರಕಾರ, ಡೆಮಾಕ್ರಟ್ಗಳು ಸದನದಲ್ಲಿ ಬಹುಮತ ಸಾಧಿಸಲು ಬೇಕಿರುವುದು ನಾಲ್ಕು ಸ್ಥಾನಗಳು ಮಾತ್ರ, ಆದರೆ ರಿಪಬ್ಲಿಕನ್ಗಳು ಎರಡು ಸ್ಥಾನಗಳನ್ನು ಕಳೆದುಕೊಂಡರೂ ತಮ್ಮ ಹಿಡಿತವನ್ನು ಉಳಿಸಿಕೊಳ್ಳಬಹುದು.
435 ಸದಸ್ಯರ ಬಲವಿರುವ ಪ್ರತಿನಿಧಿಗಳ ಸಭೆಯಲ್ಲಿ, ರಿಪಬ್ಲಿಕನ್ಗಳು 219 ಸ್ಥಾನಗಳನ್ನು ಹೊಂದಿದ್ದರೆ, ಡೆಮಾಕ್ರಟ್ಗಳು 212 ಸ್ಥಾನಗಳನ್ನು ಹೊಂದಿದ್ದಾರೆ. ನಾಲ್ಕು ಸ್ಥಾನಗಳು ಖಾಲಿ ಇವೆ. ಇದರ ಲೆಕ್ಕಾಚಾರ ಹೀಗಿದೆ: ಸದನವನ್ನು ಗೆಲ್ಲಲು ಡೆಮಾಕ್ರಟ್ಗಳಿಗೆ ಹೆಚ್ಚುವರಿಯಾಗಿ ಆರು ಸ್ಥಾನಗಳ ಅಗತ್ಯವಿದೆ. ಇವುಗಳಲ್ಲಿ ನಾಲ್ಕು ಪ್ರಸ್ತುತ ಭರ್ತಿಯಾಗಿರುವ ಸ್ಥಾನಗಳಿಂದ ಬರಬೇಕಾದರೆ, ಇನ್ನು ಎರಡು ಖಾಲಿ ಇರುವ ಸ್ಥಾನಗಳಿಂದ ಬರಬೇಕು ಎಂಬುದು ಅಂದಾಜು.
ಹತ್ತಿರದಲ್ಲಿಯೇ ಇರುವ ಚುನಾವಣೆಗಳನ್ನು ಹೀಗೆಯೇ ಎಂದು ಊಹಿಸುವುದು ಯಾವಾಗಲೂ ಕಷ್ಟ. ಈ ಕೆಲಸವನ್ನು ಕೈಗೊಳ್ಳುವವರು ತಮ್ಮೆಲ್ಲ ಪೂರ್ವಗ್ರಹಗಳನ್ನು ಎಂದಿಗೂ ಸಂಪೂರ್ಣವಾಗಿ ಒತ್ತಟ್ಟಿಗಿಡಲು ಸಾಧ್ಯವಿಲ್ಲ. ಅಮೆರಿಕದ ಚುನಾವಣಾ ವಿಶ್ಲೇಷಕರ ಎಲ್ಲಾ ಲೆಕ್ಕಾಚಾರದ ಹೊರತಾಗಿಯೂ ಚುನಾವಣಾಪೂರ್ವ ಸಮೀಕ್ಷೆಗಳು ವಿಶ್ವಾಸಾರ್ಹವಲ್ಲದ ದಾಖಲೆಯನ್ನು ಹೊಂದಿವೆ. ಈ ಎಚ್ಚರಿಕೆಗಳೊಂದಿಗೆ, ರಿಪಬ್ಲಿಕನ್ ಪಕ್ಷಕ್ಕೆ ಇದು ಸುಲಭದ ಹಾದಿಯಾಗದು ಎಂದು ಅಂದಾಜಿಸಲಾಗಿದೆ. ಇದು ಪಕ್ಷದಲ್ಲಿ ಒಂದು ಮಟ್ಟದ ಆತಂಕಕ್ಕೆ ಕಾರಣವಾಗುತ್ತಿದೆ. ಟ್ರಂಪ್ ಅವರು ತಮ್ಮ ಎಲ್ಲಾ ಭಂಡ-ಧೈರ್ಯದ ಹೊರತಾಗಿಯೂ, ಈ ಭಾವನೆಯನ್ನು ಹಂಚಿಕೊಳ್ಳುತ್ತಿದ್ದಾರೆ ಎಂಬುದರ ಸುಳಿವು ಕೂಡ ಕಾಣುತ್ತಿದೆ.
ಇಂಧನ ಬೆಲೆಯ ಹೊಡೆತ: ಹತಾಶ ಟ್ರಂಪ್
ಇರಾನ್ ಯುದ್ಧದ ದೆಸೆಯಿಂದಾಗಿ ಅಮೆರಿಕದಲ್ಲಿ, ವಿಶೇಷವಾಗಿ ಇಂಧನ ವಲಯದಲ್ಲಿ ಹಣದುಬ್ಬರದ ಒತ್ತಡಕ್ಕೆ ಕಾರಣವಾಗಿದೆ. ಪೆಟ್ರೋಲ್ ಬೆಲೆಯು ರಾಜ್ಯಗಳ ನಡುವೆ ದೊಡ್ಡ ವ್ಯತ್ಯಾಸಕ್ಕೆ ಕಾರಣವಾಗಿ ಸರಾಸರಿ ಶೇ. 40 ರಷ್ಟು ಏರಿಕೆಯಾಗಿದೆ. ಡೀಸೆಲ್ ಬೆಲೆ ಇನ್ನೂ ಹೆಚ್ಚಿನ ಏರಿಕೆ ಉಂಟಾಗಿದೆ ಮತ್ತು ವಿಮಾನ ಇಂಧನ ದರಗಳೂ ಏರುಗತಿಯಲ್ಲಿವೆ. ಇರಾನ್ ಯುದ್ಧ ಪ್ರಾರಂಭವಾದಾಗಿನಿಂದ ಅಮೆರಿಕದ ಗ್ರಾಹಕರು ಒಟ್ಟಾರೆಯಾಗಿ 100 ಬಿಲಿಯನ್ ಅಮೆರಿಕನ್ ಡಾಲರ್ಗಳಿಗಿಂತ ಹೆಚ್ಚು ಹಣವನ್ನು ಪಾವತಿಸಿದ್ದಾರೆ ಎಂದು ಸೆಪ್ಟೆಂಬರ್ ಮಧ್ಯದಲ್ಲಿ ಅಮೆರಿಕದ ಪ್ರಮುಖ ವಿತ್ತ ದೈನಿಕವೊಂದು ಅಂದಾಜು ಮಾಡಿದೆ. ಇಂಧನ ಬೆಲೆಗಳ ಹೆಚ್ಚಳವು ಇನ್ನೂ ಕೂಡ ಮುಂದುವರಿಯುವ ಪರಿಣಾಮವನ್ನು ಹೊಂದಿದೆ, ಇದು ವ್ಯಾಪಕ ಶ್ರೇಣಿಯ ಸರಕುಗಳ ಹಣದುಬ್ಬರದ ಒತ್ತಡಕ್ಕೆ ಕಾರಣವಾಗಿದೆ.
ಈ ಎಲ್ಲ ಬೆಳವಣಿಗೆಗಳು ಟ್ರಂಪ್ ಮತ್ತು ರಿಪಬ್ಲಿಕನ್ನರಿಗೆ ಕಿರಿಕಿರಿ ಉಂಟುಮಾಡುತ್ತಿರುವುದಂತೂ ಸತ್ಯ. ಮುಂಬರುವ ನಾಲ್ಕು ತಿಂಗಳುಗಳಲ್ಲಿ ತಮ್ಮ ಮೀಸಲು ನಿಧಿಯಿಂದ 100 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ಮತ್ತು ಡೀಸೆಲ್ ಬಿಡುಗಡೆ ಮಾಡಲು 67 ದೇಶಗಳು ಒಪ್ಪಿಗೆ ನೀಡಿವೆ.
ಅಮೆರಿಕದ ಒತ್ತಡದ ಮೇರೆಗೆ ಮತ್ತು ಈ ದೇಶಗಳಿಗೆ ಅಮೆರಿಕದಿಂದ ಡೀಸೆಲ್ ರಫ್ತು ಮಾಡುವುದನ್ನು ನಿಷೇಧಿಸುವುದಾಗಿ ಅಮೆರಿಕ ನೀಡಿದ ಬೆದರಿಕೆಗಳ ನಡುವೆ ಅಕ್ಟೋಬರ್ 2 ರಂದು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳುತ್ತವೆ.
ಇದು ತೈಲ ಮಾರುಕಟ್ಟೆಯಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಟ್ರಂಪ್ ಮಾಡುತ್ತಿರುವ ಹತಾಶ ಪ್ರಯತ್ನಗಳ ಒಂದು ಭಾಗ. ಇರಾನ್ ಒಪ್ಪಂದವು ಅಂತಿಮಗೊಂಡ ಕೂಡಲೇ ತೈಲ ಬೆಲೆಗಳು 'ಬಂಡೆಯಂತೆ ಕುಸಿಯುತ್ತವೆ' ಎಂಬ ಅವರ ಹೇಳಿಕೆಗಳಲ್ಲಿಯೂ ಅವರ ಹತಾಶೆ ಎದ್ದು ಕಾಣುತ್ತದೆ.
ಟ್ರಂಪ್ ರಾಜಕೀಯ ಹಿಡಿತ ದುರ್ಬಲ
ಟ್ರಂಪ್ ಅವರ ಜನಪ್ರಿಯತೆಯ ರೇಟಿಂಗ್ಗಳು ಶೇಕಡಾ 20 ರಿಂದ 30 ರ ನಡುವೆ ಸಾರ್ವಕಾಲಿಕ ಕನಿಷ್ಠ ಮಟ್ಟದಲ್ಲಿವೆ. ಹಿಂದಿನಂತೆ ಕಠಿಣವಾದ ಚುನಾವಣಾ ಕಣಗಳಲ್ಲಿ ರಿಪಬ್ಲಿಕನ್ ಅಭ್ಯರ್ಥಿಗಳಿಗೆ ಬೆಂಬಲ ನೀಡುವ ಸಾಮರ್ಥ್ಯ ಅವರಿಗಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಆದ್ದರಿಂದ ಕೆಲವು ರಿಪಬ್ಲಿಕನ್ ಅಭ್ಯರ್ಥಿಗಳು ಅವರಿಂದ ದೂರ ಉಳಿಯುತ್ತಿದ್ದಾರೆ. ಮುಂಬರುವ ಚುನಾವಣೆಗಳ ಸಂದರ್ಭದಲ್ಲಿ ಇದು ಪಕ್ಷಕ್ಕೆ ಒಳ್ಳೆಯ ಸುದ್ದಿಯೇನೂ ಅಲ್ಲ.
ಎರಡು ಅಂತಿಮ ಅಂಶಗಳು: ಕಾಂಗ್ರೆಸ್ ಮೇಲಿನ ಹಿಡಿತ ಕಳೆದುಕೊಳ್ಳುವುದು ಎಂದರೆ ಸಮಿತಿಯ ನಾಯಕತ್ವಗಳು ಡೆಮಾಕ್ರಟ್ಗಳಿಗೆ ಹಸ್ತಾಂತರಗೊಳ್ಳುತ್ತವೆ ಎಂದು ಅರ್ಥ. ಕಾಂಗ್ರೆಸ್ನ್ನು ಕಡೆಗಣಿಸುತ್ತಾ ಬಂದಿರುವ ಎಫ್ಬಿಐ ನಿರ್ದೇಶಕ ಕಾಶ್ ಪಟೇಲ್ ಮುಂತಾದವರ ಮೇಲೆ ಇದು ನಿಸ್ಸಂದೇಹವಾಗಿ ಒತ್ತಡವನ್ನು ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ, ಅವರು ಸಂಕೀರ್ಣ ಸಮಸ್ಯೆಗಳನ್ನು, ವಿಶೇಷವಾಗಿ ಇರಾನ್ ಯುದ್ಧವನ್ನು ಎದುರಿಸುವಲ್ಲಿ ಹೆಚ್ಚು ಎಚ್ಚರಿಕೆಯ ಹೆಜ್ಜೆಯನ್ನು ಇರಿಸುತ್ತಾರೆ. ಟ್ರಂಪ್ ಎಂದಿನಂತೆ ದೇಶೀಯ ಮತ್ತು ವಿದೇಶಿ ಶತ್ರುಗಳ ವಿರುದ್ಧ ವಾಗ್ದಾಳಿ ನಡೆಸಬಹುದು. ಆದರೆ ನಿಜವಾಗಿಯೂ ಕಚ್ಚಲು ಅವರಿಗೆ ಹಲ್ಲುಗಳಿರುತ್ತವೆಯೇ?
1980ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕ ರಾಯಭಾರ ಕಚೇರಿಯ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಇರಾನ್ ಒಪ್ಪದ ಕಾರಣದಿಂದ ಅವರು ಕಾರ್ಟರ್ ಅವರ ಸೋಲಿಗೆ ಹೇಗೆ ಕಾರಣರಾದರು ಎಂಬುದನ್ನು ಇರಾನಿಯನ್ನರು ನಿಸ್ಸಂದೇಹವಾಗಿ ನೆನಪಿಸಿಕೊಳ್ಳುತ್ತಾರೆ. ನಲವತ್ತಾರು ವರ್ಷಗಳ ನಂತರ, ಇದು ಅಧ್ಯಕ್ಷೀಯ ಚುನಾವಣೆಯಲ್ಲ, ಆದರೆ ಕಾಂಗ್ರೆಸ್ ತನ್ನ ಹಿಡಿತದಿಂದ ಜಾರಿದರೆ ಟ್ರಂಪ್ ಅಂತಿಮವಾಗಿ ಎಷ್ಟು ಶಕ್ತಿಯನ್ನು ಹೊಂದಿರುತ್ತಾರೆ ಎಂಬುದು ಒಗಟಾಗಿದೆ. ಕೋಪಗೊಂಡ ಟ್ರಂಪ್ ಯುದ್ಧವನ್ನು ಮುಂದುವರಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಒಲವು ತೋರಿದರೂ ಸಹ, ಇದು ಇರಾನ್ ಯುದ್ಧದ ಮೇಲೆ ಪ್ರಭಾವ ಬೀರುವುದರಲ್ಲಿ ಅನುಮಾನವಿಲ್ಲ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು 'ದ ಫೆಡರಲ್ ಕರ್ನಾಟಕ'ದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

