ರಷ್ಯಾ-ಉಕ್ರೇನ್ ಸಂಘರ್ಷಕ್ಕೆ ಕೊನೆ ಹಾಡೀತೇ ಟ್ರಂಪ್-ಪುಟಿನ್ ಮಾತು?
x
ರಷ್ಯಾ ಅಧ್ಯಕ್ಷ ಪುಟಿನ್ ಅವರ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ನೇರವಾಗಿ ಒಪ್ಪಲಿಲ್ಲ. ಆದರೆ ಪರೋಕ್ಷವಾಗಿ ಒಪ್ಪಿಕೊಂಡರು. ಪುಟಿನ್ ಮಾತ್ರ ಟ್ರಂಪ್ ಅಹಂಕಾರದ ಬಲೂನಿಗೆ ಸೂಜಿ ಚುಚ್ಚಿದರು.

ರಷ್ಯಾ-ಉಕ್ರೇನ್ ಸಂಘರ್ಷಕ್ಕೆ ಕೊನೆ ಹಾಡೀತೇ ಟ್ರಂಪ್-ಪುಟಿನ್ ಮಾತು?

2022ರ ಫೆಬ್ರುವರಿ ತಿಂಗಳಲ್ಲಿ ಉಕ್ರೇನ್ ಮೇಲೆ ದಂಡೆತ್ತಿ ಹೋದ ಬಳಿಕ ರಷ್ಯಾ ಗಳಿಸಿದ ಲಾಭಗಳಲ್ಲಿ ಭಾಗಶಃವಾದರೂ ಪಡೆಯದೇ ಇರುವಂತೆ ಮಾಡುವುದು ಉಕ್ರೇನ್-ಗಾಗಲಿ ಐರೋಪ್ಯ ರಾಷ್ಟ್ರಗಳಿಗಾಗಲಿ ಸುಲಭದ ಮಾತಲ್ಲ.


ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಲಾಸ್ಕದಲ್ಲಿ ತಮ್ಮ ಶೃಂಗಸಭೆಯನ್ನು ಮುಗಿಸಿ ನಲವತ್ತಕ್ಕೂ ಹೆಚ್ಚು ಗಂಟೆಗಳು ಕಳೆದುಹೋಗಿವೆ. ಎರಡು ರಾಷ್ಟ್ರಗಳ ಮುಖ್ಯಸ್ಥರ ನಡುವೆ ಈ ವರ್ಷ ನಡೆದ ಬಹುಮುಖ್ಯ ದ್ವಿಪಕ್ಷೀಯ ಸಭೆ ಇದಾಗಿದೆ. ಇದು ಉಕ್ರೇನ್ ಸಂಘರ್ಷ ಮತ್ತು ಐರೋಪ್ಯ ರಾಷ್ಟ್ರಗಳ ಭದ್ರತೆಯ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ ಎಂಬ ಆಶಾಭಾವನೆ ಹೊಂದಲಾಗಿದೆ.

ಈ ಮಾತುಕತೆ ಮುಂದೆ ಅನೇಕ ಅಂತಾರಾಷ್ಟ್ರೀಯ ಘಟನೆಗಳಿಗೆ ಮುನ್ನುಡಿ ಬರೆಯಬಹುದು ಎಂದು ಆಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನೆಕ್ಸಿ ಅವರು ಶ್ವೇತಭವನಕ್ಕೆ ನೀಡುವ ಭೇಟಿ ಅತ್ಯಂತ ನಿರ್ಣಾಯಕವಾಗಿದೆ. ಅಲ್ಲಿ ಶೃಂಗಸಭೆಯ ಹೊಳಹುಗಳು ಕಾಣಬಹುದು.

ತಮ್ಮ ಸಭೆಯ ಬಳಿಕ ಪುಟಿನ್ ಮತ್ತು ಟ್ರಂಪ್ ಮಾಧ್ಯಮಕ್ಕೆ ಹೇಳಿಕೆಯನ್ನು ನೀಡಿದ್ದಾರೆ. ಈ ಹೇಳಿಕೆಗಳ ಬಳಿಕ ಅಲಾಸ್ಕಾದಲ್ಲಿ ಟ್ರಂಪ್ ಅವರು ಫಾಕ್ಸ್ ನ್ಯೂಸ್ ಆ್ಯಂಕರ್ ಹಾಗೂ ಅವರ ಅಭಿಮಾನಿ ಸೀನ್ ಹ್ಯಾನಿಟಿ ಅವರಿಗೆ ವಿಶೇಷ ಸಂದರ್ಶನವನ್ನೂ ನೀಡಿದ್ದಾರೆ. ಅದು ಶೃಂಗಸಭೆ ಮತ್ತು ಅದರ ಫಲಿತಾಂಶಗಳ ಬಗ್ಗೆ ಒಂದು ಒಳನೋಟವನ್ನು ನೀಡುತ್ತದೆ. ಅವೆರಡನ್ನೂ ಸೂಕ್ಷ್ಮವಾಗಿ ತುಲನೆ ಮಾಡಿದಾಗ ಈ ಕೆಳಗಿನ ಪ್ರಮುಖ ಅಂಶಗಳು ಹೊರಹೊಮ್ಮುತ್ತವೆ. ಈ ವಿಷಯದಲ್ಲಿ ರೂಪುಗೊಂಡ ಅಪಾರ ಪ್ರಮಾಣದ ಮಾಧ್ಯಮ ವಿಶ್ಲೇಷಣೆಗಳು ಮತ್ತು ಅನೇಕ ನಾಯಕರ ಹೇಳಿಕೆಗಳಿಂದ ಇಬ್ಬರೂ ನಾಯಕರ ಹೇಳಿಕೆಗಳು ಮತ್ತು ಟ್ರಂಪ್ ಸಂದರ್ಶನದ ಮಹತ್ವವನ್ನು ತಗ್ಗಿಸಲು ಸಾಧ್ಯವಿಲ್ಲ.

ರಷ್ಯಾ ಅಧ್ಯಕ್ಷರ ಮಾತಿನ ಸ್ಪಷ್ಟತೆ

ಪುಟಿನ್ ಮತ್ತು ಟ್ರಂಪ್ ನೀಡಿದ ಹೇಳಿಕೆಗಳಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ. ಈ ನಾಯಕದ್ವಯರು ಉಭಯ ದೇಶಗಳ ನಡುವಿನ ಪ್ರಮುಖ ವಿಷಯಗಳ ಕುರಿತು ವ್ಯಾಪಕವಾದ ಚರ್ಚೆಗಳನ್ನು ನಡೆಸಲು ತಮ್ಮ ಸಲಹೆಗಾರರಿಗೆ ಸೂಚಿಸಿದ್ದರು. ಜೊತೆಗೆ ಇಬ್ಬರೂ ದೂರವಾಣಿ ಸಂಪರ್ಕದಲ್ಲಿಯೂ ಇದ್ದರು. ಕೆಲವರು ಊಹೆ ಮಾಡಿದಂತೆ ಮತ್ತು ಟ್ರಂಪ್ ಅವರೇ ತಮ್ಮ ಹೇಳಿಕೆಗಳಲ್ಲಿ ಸೂಚಿಸಿದಂತೆ ಈ ಸಭೆ ಕೇವಲ ‘ಒಬ್ಬರನ್ನೊಬ್ಬರು ತಿಳಿದುಕೊಳ್ಳುವ’ ಭೇಟಿಯಾಗಿರಲಿಲ್ಲ.

ಪುಟಿನ್ ಅವರ ಮಾತಿನಂತೆ, “ಒಟ್ಟಾರೆಯಾಗಿ ಅಧ್ಯಕ್ಷ ಟ್ರಂಪ್ ಮತ್ತು ನನ್ನ ನಡುವೆ ಉತ್ತಮವಾದ ನೇರ ಸಂಪರ್ಕವಿದೆ. ನಾವು ಹಲವಾರು ಬಾರಿ ಮಾತನಾಡಿದ್ದೇವೆ. ಜೊತೆಗೆ ದೂರವಾಣಿಯಲ್ಲಿ ಮುಕ್ತವಾಗಿ ಚರ್ಚಿಸಿದ್ದೇವೆ. ಇದರ ಜೊತೆಗೆ ಅಧ್ಯಕ್ಷರ ವಿಶೇಷ ಪ್ರತಿನಿಧಿ ವಿಟ್ಕಾಫ್ ಅವರು ಅನೇಕ ಬಾರಿ ರಷ್ಯಾಕ್ಕೆ ಭೇಟಿ ನೀಡಿದ್ದರು. ನಮ್ಮ ಸಲಹೆಗಾರರು ಮತ್ತು ವಿದೇಶಾಂಗ ಸಚಿವಾಲಯಗಳ ಮುಖ್ಯಸ್ಥರು ಎಲ್ಲ ಕಾಲದಲ್ಲಿಯೂ ಸಂಪರ್ಕದಲ್ಲಿದ್ದರು. ಇವೆಲ್ಲ ಸಂದರ್ಭಗಳಲ್ಲಿ ಎಲ್ಲರ ಗಮನವಿದ್ದುದು ಒಂದೇ ವಿಷಯದ ಮೇಲೆ-ಅದು ಉಕ್ರೇನ್ ಎಂಬುದು ಎಲ್ಲರಿಗೂ ತಿಳಿದ ಸಂಗತಿ.” –ಎಂದು ಸ್ಪಷ್ಟವಾಗಿ ಹೇಳಿದ್ದರು.

ಹಾಗಂತ ಟ್ರಂಪ್ ನೇರವಾಗಿ ಪುಟಿನ್ ಹೇಳಿಕೆಗಳನ್ನು ಅನುಮೋದಿಸಲಿಲ್ಲ. ಬದಲಾಗಿ ಅವರು ಪರೋಕ್ಷವಾಗಿ ಒಪ್ಪಿಕೊಂಡರು. ಪುಟಿನ್ ಜೊತೆಗೆ ಆಡಿದ ಮಾತುಗಳ ಹಿನ್ನೆಲೆಯಲ್ಲಿ ಉಕ್ರೇನ್ ಸಂಘರ್ಷದ ವಿಚಾರದಲ್ಲಿ ಝೆಲೆನೆಸ್ಕಿ ಮತ್ತು ಐರೋಪ್ಯ ರಾಷ್ಟ್ರಗಳ ಇತರ ನಾಯಕರ ಜೊತೆ ಸಮಾಲೋಚನೆ ನಡೆಸುವುದಾಗಿ ಅವರು ಹೇಳಿದರು.

ಡೋನಾಲ್ಡ್ ಟ್ರಂಪ್ ಹೇಳಿದ್ದು ಇಷ್ಟು

“ಮಾರ್ಕೊ (ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ) ಮತ್ತು ಸ್ಟೀವ್ (ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್) ಮತ್ತು ಟ್ರಂಪ್ ಆಡಳಿತದ ಕೆಲವು ಮಹಾನ್ ವ್ಯಕ್ತಿಗಳಾದ ಸ್ಕಾಟ್ (ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸ್ಸೆಂಟ್) ಮತ್ತು ಜಾನ್ ರಾಟ್ಕ್ಲಿಫ್ (ಸಿಐಎ ನಿರ್ದೇಶಕ) ಇಲ್ಲಿ ಚರ್ಚಿಸಿರುವ ವಿಷಯಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ತುಂಬಾ ಧನ್ಯವಾದಗಳು. ಆದರೆ ನಮ್ಮಲ್ಲಿ ನಿಜವಾಗಿಯೂ ಕೆಲವು ಮಂದಿ ಶ್ರೇಷ್ಠ ನಾಯಕರು ಇದ್ದಾರೆ. ಅವರು ಅದ್ಭುತವಾದ ಕೆಲಸ ಮಾಡುತ್ತಿದ್ದಾರೆ.”

ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಇರುವ ಮುಖ್ಯ ಅಂಶಗಳೆಂದರೆ ಅದರ ಗಡಿ ಪ್ರದೇಶ, ಭವಿಷ್ಯದಲ್ಲಿ ಉಕ್ರೇನಿನ ಭದ್ರತಾ ನೀತಿಗಳು, ಸ್ವಾಯತ್ತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹಾಗೂ ಸಂಘರ್ಷವನ್ನು ಕೊನೆಗೊಳಿಸುವ ಸಾಧ್ಯತೆ ಇರುವ ಯಾವುದೇ ಒಪ್ಪಂದಕ್ಕೆ ರಷ್ಯಾ ಅಂಟಿಕೊಳ್ಳುತ್ತದೆ ಎಂಬ ಭದ್ರತಾ ಖಾತರಿ. ಈ ವಿಚಾರಗಳಲ್ಲಿ ಉಕ್ರೇನ್ ಅಥವಾ ಇತರ ಐರೋಪ್ಯ ರಾಷ್ಟ್ರಗಳ ಪರವಾಗಿ ಟ್ರಂಪ್ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂಬುದು ಸಹಜ. ಯುರೋಪ್ ಭದ್ರತಾ ವಿಚಾರಗಳ ಬಗ್ಗೆ ಟ್ರಂಪ್ ಮತ್ತು ಪುಟಿನ್ ಒಪ್ಪಂದಕ್ಕೆ ಬಂದಿದ್ದಾರೆಯೇ ಎನ್ನುವುದು ಪ್ರಶ್ನೆ.

ಈ ವಿಚಾರದಲ್ಲಿ ಪುಟಿನ್ ಹೀಗೆ ಹೇಳುತ್ತಾರೆ: “ಇಂದಿನ ಒಪ್ಪಂದಗಳು ಆರಂಭಿಕ ಹಂತ ಎಂಬುದು ನನ್ನ ನಿರೀಕ್ಷೆ. ಇವು ಉಕ್ರೇನ್ ಸಮಸ್ಯೆಗೆ ಪರಿಹಾರ ಮಾತ್ರವಲ್ಲದೆ ರಷ್ಯಾ ಮತ್ತು ಅಮೆರಿಕ ನಡುವಿನ ವ್ಯವಹಾರ ಹಾಗೂ ಪ್ರಾಯೋಗಿಕ ಸಂಬಂಧಗಳನ್ನು ಮರಳಿ ಹಾದಿಗೆ ತರಲು ಸಹಾಯ ಮಾಡುತ್ತದೆ.”

ಅವರ ಈ ಹಿಂದಿನ ಹೇಳಿಕೆ ಕೂಡ ಹೀಗಿದೆ

“ನಾವಿಬ್ಬರೂ ಮಾಡಿಕೊಂಡ ಒಪ್ಪಂದವು ಆ ಗುರಿಯ ಹತ್ತಿರಕ್ಕೆ ನಮ್ಮನ್ನು ಕೊಂಡೊಯ್ಯಲು ಸಹಾಯ ಮಾಡುತ್ತದೆ ಮತ್ತು ಉಕ್ರೇನ್ ನಲ್ಲಿ ಕ್ರಮಿಸಬೇಕಾದ ಶಾಂತಿಯ ಹಾದಿಯನ್ನು ಮತ್ತಷ್ಟು ಸುಗಮಗೊಳಿಸುತ್ತದೆ ಎಂದು ಭಾವಿಸುತ್ತೇನೆ. ಈ ನಿಟ್ಟಿನಲ್ಲಿ ಉಕ್ರೇನ್ ಮತ್ತು ಐರೋಪ್ಯ ರಾಷ್ಟ್ರಗಳು ರಚನಾತ್ಮಕವಾಗಿ ಯೋಚಿಸುತ್ತವೆ ಮತ್ತು ಯಾವುದೇ ಅಡ್ಡಿ ಉಂಟುಮಾಡುವುದಿಲ್ಲ ಎಂಬುದು ನಮ್ಮ ನಿರೀಕ್ಷೆ. ಅವರು ಯಾವುದೇ ತಂತ್ರಗಳನ್ನು ಬಳಸಿಕೊಂಡು ಪ್ರಗತಿಯ ಹಾದಿಯನ್ನು ಹಾಳುಗೆಡಹಲು ಯಾವುದೇ ಪ್ರಯತ್ನ ಮಾಡುವುದಿಲ್ಲ ಎಂಬ ನಂಬಿಕೆ ನಮ್ಮದು”

‘ಆರಂಭಿಕ ಹಂತ’ ಎಂಬ ಮಾತಿನ ಅರ್ಥ: ಪುಟಿನ್ ಅವರ ಈ ಹೇಳಿಕೆಗಳಿಂದ ಎರಡು ಮಹತ್ವದ ಅಂಶಗಳು ಹೊರಹೊಮ್ಮುತ್ತವೆ. ತಮ್ಮ ಹಿಂದಿನ ಪ್ರತಿಕ್ರಿಯೆಯಲ್ಲಿ ಅವರು ಹೇಳಿದ್ದೇನೆಂದರೆ ನಾವು ಒಂದು ಒಪ್ಪಂದಕ್ಕೆ ಬಂದಿದ್ದೇವೆ ಎಂಬುದಾಗಿ. ಆದಾದ ಬಳಿಕ ಅವರು, ಉಕ್ರೇನ್ ಸಂಘರ್ಷ ಮತ್ತು ರಷ್ಯಾ-ಅಮೆರಿಕ ಸಂಬಂಧಗಳನ್ನು ತಿಳಿಗೊಳಿಸುವ ವಿಚಾರದಲ್ಲಿ ಇದು ‘ಆರಂಭಿಕ ಹಂತ’ವಾಗಲಿದೆ ಎಂದು ಹೇಳಿದರು. ಒಂದು ಒಪ್ಪಂದಕ್ಕೆ ಬಂದಿದ್ದೇವೆ ಎಂದರೆ ಅದು ನಿರ್ದಿಷ್ಟವಾದುದು ಮತ್ತು ಅಂತಿಮ ಎಂದು ಹಾಗೂ ‘ಆರಂಭಿಕ ಹಂತ’ ಎಂದರೆ ಹೆಚ್ಚಿನ ಮಾತುಕತೆಗಳಿಗೆ ಅವಕಾಶವಿದೆ ಎಂದು ಅರ್ಥ. ಅಂದರೆ ಇವೆರಡೂ ಹೇಳಿಕೆಗಳಲ್ಲಿ ವ್ಯತ್ಯಾಸಗಳಿವೆ ಎಂಬುದು ಸ್ಪಷ್ಟ.

ಆದರೆ ಟ್ರಂಪ್ ಹೇಳಿದ್ದೇನು? ಪ್ರಗತಿ ಸಾಧಿಸಲಾಗಿದೆ, ಆದರೆ ನಾವಿಬ್ಬರೂ ಒಪ್ಪಂದಕ್ಕೆ ಬಂದಿಲ್ಲ ಎಂದು. “ಕೆಲವು ಸಂಗತಿಗಳನ್ನು ನಾವಿನ್ನೂ ಚರ್ಚೆ ಮಾಡಿಲ್ಲ, ಆದರೆ ನಾವು ತಕ್ಕಮಟ್ಟಿಗೆ ಪ್ರಗತಿ ಸಾಧಿಸಿದ್ದೇವೆ ಎಂದು ನಾನು ಹೇಳಲು ಬಯಸುತ್ತೇನೆ. ಎಲ್ಲಿಯವರೆಗೆ ಒಂದು ಒಪ್ಪಂದ ಇರುತ್ತದೆಯೋ ಅಲ್ಲಿಯ ವರೆಗೆ ಇನ್ನೊಂದು ಒಪ್ಪಂದವಿಲ್ಲ,” ಎಂದು ಅವರು ಹೇಳಿದ್ದರು.

ಇನ್ನೊಂದು ಮಹತ್ವದ ಅಂಶವೆಂದರೆ, ಉಕ್ರೇನ್ ವಿಷಯವನ್ನು ಪರಿಹರಿಸುವ ನಿಟ್ಟಿನಲ್ಲಿ ಟ್ರಂಪ್ ಅವರು ಮಾಡಿದ ಪ್ರಗತಿಯಲ್ಲಿ ಅಡ್ಡಗಾಲು ಹಾಕದಿರಿ ಎಂದು ಉಕ್ರೇನ್ ಮತ್ತು ಇತರ ಐರೋಪ್ಯ ರಾಷ್ಟ್ರಗಳಿಗೆ ಎಚ್ಚರಿಕೆಯನ್ನು ನೀಡಿದ್ದು.

ಹಾಗಾಗಿ, 2022ರ ಫೆಬ್ರುವರಿ ತಿಂಗಳಲ್ಲಿ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ಬಳಿಕ ರಷ್ಯಾ ಗಳಿಸಿದ ಲಾಭಗಳಲ್ಲಿ ಭಾಗಶಃವಾದರೂ ಪಡೆಯದೇ ಇರುವಂತೆ ಮಾಡುವುದು ಉಕ್ರೇನ್-ಗಾಗಲಿ ಐರೋಪ್ಯ ರಾಷ್ಟ್ರಗಳಿಗಾಗಲಿ ಸುಲಭದ ಮಾತಲ್ಲ. ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಯುರೋಪ್ ಭದ್ರತೆಯ ವಿಚಾರದಲ್ಲಿ ರಾಜಿಗೆ ಒಪ್ಪಿಕೊಳ್ಳುವಂತೆ ಮಾಡುವಲ್ಲಿ ವ್ಯಾವಹಾರಿಕ ಸಂಧಾನಕಾರ ಟ್ರಂಪ್ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂಬುದು ಇಲ್ಲಿರುವ ಪ್ರಶ್ನೆ. ಯುರೋಪ್ ಎಷ್ಟೇ ನಟನೆ ಮಾಡಿದರೂ ಕೂಡ ಜಗತ್ತಿನಲ್ಲಿ ಅದರ ಸ್ಥಾನ ಕುಸಿಯುತ್ತಿದೆ ಎಂಬುದನ್ನು ಅದು ಒಪ್ಪಿಕೊಳ್ಳಬೇಕಾಗಿದೆ. ಈ ಸಂಗತಿಯು ಒಂದೆರಡು ದಿನಗಳಲ್ಲಿ ಸ್ಪಷ್ಟತೆಯನ್ನು ಪಡೆಯದೇ ಇದ್ದರೂ ಮುಂದಿನ ಕೆಲವು ವಾರಗಳಲ್ಲಂತೂ ಆಗುತ್ತದೆ.

ಟ್ರಂಪ್ ಅಹಂಕಾರಕ್ಕೆ ಪುಟಿನ್‌ ತಣ್ಣೀರು

ತಮ್ಮ ಹೇಳಿಕೆಗಳ ಮೂಲಕ ಪುಟಿನ್ ಅಮೆರಿಕ ಅಧ್ಯಕ್ಷರ ಅಹಂಕಾರಕ್ಕೆ ತಣ್ಣೀರು ಎರಚುವಲ್ಲಿ ಯಶಸ್ವಿಯಾದರು. ತಾನು ಅಧ್ಯಕ್ಷನಾಗಿದ್ದರೆ ಉಕ್ರೇನ್ ಸಂಘರ್ಷವೇ ನಡೆಯುತ್ತಿರಲಿಲ್ಲ ಎಂಬ ಟ್ರಂಪ್ ಅವರ ಮಾತನ್ನು ಅವರು ಒಪ್ಪಿಕೊಂಡರು. ಯುದ್ಧ ಆರಂಭವಾದ ದಿನದಿಂದ ಟ್ರಂಪ್ ಹೇಳಿಕೊಳ್ಳುತ್ತಿರುವುದು ಕೂಡ ಅದೇ ಆಗಿತ್ತು. ಪುಟಿನ್ ಅವರನ್ನು ‘ಮಹಾನ್ ತಂತ್ರಗಾರ’ ಎಂದು ಬಣ್ಣಿಸಲಾಗುತ್ತದೆ. ಈ ಹೇಳಿಕೆಗಳು ಅವರ ಕೌಶಲ್ಯವನ್ನು ಸಾಬೀತುಪಡಿಸುತ್ತವೆ. ಇದೇ ಸಂದರ್ಭದಲ್ಲಿ ರಷ್ಯಾ ಮತ್ತು ಅಮೆರಿಕ ನಡುವೆ ಆರ್ಥಿಕ ಹಾಗೂ ತಾಂತ್ರಿಕ ಸಹಕಾರಕ್ಕೆ ಸಾಕಷ್ಟು ಅವಕಾಶಗಳಿವೆ ಎಂಬುದನ್ನು ಇಬ್ಬರೂ ನಾಯಕರು ಒಪ್ಪಿಕೊಂಡರು.

ಭಾರತೀಯ ನೀತಿ ನಿರೂಪಕರು ವಿಶೇಷವಾಗಿ ಟ್ರಂಪ್ ಹ್ಯಾನಿಟಿಗೆ ನೀಡಿದ ಎರಡು ಹೇಳಿಕೆಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಬೇಕಾಗಿದೆ.

ರಷ್ಯಾ-ಚೀನಾ ಸಂಬಂಧಗಳ ಬಗ್ಗೆ ಟ್ರಂಪ್ ಹೀಗೆ ಹೇಳಿದರು, "ಆದ್ದರಿಂದ, ಬಿಡೆನ್ ಯೋಚಿಸಲೂ ಸಾಧ್ಯವಿಲ್ಲದ ಕೆಲಸ ಮಾಡಿದರು. ಅವರು ಚೀನಾ ಮತ್ತು ರಷ್ಯಾವನ್ನು ಒಂದುಗೂಡಿಸಿದರು. ಇದು ಒಳ್ಳೆಯದಲ್ಲ. ನೀವು ಇತಿಹಾಸದ ಒಬ್ಬ ಸಾಮಾನ್ಯ ವಿದ್ಯಾರ್ಥಿಯಾಗಿದ್ದರೆ, ಇದನ್ನು ನೀವು ಮಾಡಲು ಇಷ್ಟಪಡದ ವಿಷಯವಿದು, ಯಾಕೆಂದರೆ ಎರಡೂ ರಾಷ್ಟ್ರಗಳು ಸಹಜ ಶತ್ರುಗಳು. ರಷ್ಯಾ ಅಪಾರ ಪ್ರಮಾಣದ ಭೂಮಿಯನ್ನು ಹೊಂದಿದೆ. ಚೀನಾ ಅಪಾರ ಸಂಖ್ಯೆಯ ಜನರನ್ನು ಹೊಂದಿದೆ, ಮತ್ತು ಚೀನಾಕ್ಕೆ ರಷ್ಯಾದ ಭೂಮಿ ಬೇಕು. ಆದರೆ ಅವುಗಳನ್ನು ಒಟ್ಟಿಗೆ ಸೇರಿಸುವುದು ಮೂರ್ಖತನದ ಪರಮಾವಧಿ. ನಿಮಗೆ ಗೊತ್ತೇ? ಅದು ಹಾಗೇ ಇದೆ. ವಾಸ್ತವದಲ್ಲಿ ಅದು ಹಾಗೆಯೇ ಇರುತ್ತದೆ ಎಂಬುದು ನನಗೆ ತಿಳಿದಿಲ್ಲ, ಯಾಕೆಂದರೆ ನಿಜವಾಗಿಯೂ ಅಲ್ಲಿ ಒಂದು ನೈಸರ್ಗಿಕ ಘರ್ಷಣೆ ಇದೆ."

ರಷ್ಯಾ-ಚೀನಾ ಗಟ್ಟಿ ಸಂಬಂಧ

ಇದು ನಿಜ, ಇಂದು ರಷ್ಯಾ-ಚೀನಾ ಸಂಬಂಧಗಳು ಬಲಿಷ್ಠವಾಗಿವೆ. ಸಾಂಪ್ರದಾಯಿಕ ಯುದ್ಧದ ಕ್ಷೇತ್ರದಲ್ಲಿ ತನ್ನ ಭದ್ರತಾ ಅಗತ್ಯಗಳಿಗಾಗಿ ರಷ್ಯಾ ಚೀನಾವನ್ನು ಅವಲಂಬಿಸಿದೆ. ರಷ್ಯಾದ ಇಂಧನವನ್ನು ಚೀನಾ ಖರೀದಿಸುವುದು ಅದರ ಆರ್ಥಿಕತೆಯನ್ನು ಸುಸ್ಥಿರಗೊಳಿಸಿದೆ. ಆದರೆ ರಷ್ಯಾ-ಚೀನಾ ಸಂಬಂಧಗಳು ಯಾವಾಗಲೂ ಸ್ನೇಹಪರವಾಗಿಯೇ ಇದ್ದವು ಎಂದು ಹೇಳಲು ಸಾಧ್ಯವಿಲ್ಲ. ರಷ್ಯಾ-ಚೀನಾ ಸಂಬಂಧವನ್ನು ಹಾಳುಮಾಡಲು ತಾನು ಬಯಸುವುದಾಗಿ ಟ್ರಂಪ್ ಸುಳಿವು ನೀಡಿದ್ದಾರೆ. ಅವರು ಅದನ್ನು ಹೇಗೆ ಕಾರ್ಯರೂಪಕ್ಕೆ ತರುತ್ತಾರೆ ಎಂಬುದನ್ನು ಭಾರತೀಯ ಕಾರ್ಯತಂತ್ರ ಸಮುದಾಯವು ಮೇಲ್ವಿಚಾರಣೆ ಮಾಡಬೇಕಾಗುತ್ತದೆ.

ಹ್ಯಾನಿಟಿ ಪದೇ ಪದೇ ಟ್ರಂಪ್ ಒಬ್ಬ ಶಾಂತಿ ಸ್ಥಾಪಕ ಮತ್ತು ಯುದ್ಧಗಳನ್ನು ನಿಲ್ಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರು ಪಟ್ಟಿ ಮಾಡಿದವುಗಳಲ್ಲಿ ಇತ್ತೀಚಿನ ಭಾರತ-ಪಾಕಿಸ್ತಾನ ನಡುವಿನ ವೈಷಮ್ಯ ಸೇರಿವೆ. ಇದಕ್ಕೆ, ಟ್ರಂಪ್, "ಭಾರತ ಮತ್ತು ಪಾಕಿಸ್ತಾನವನ್ನು ನೋಡಿ. ಅವರು ಈಗಾಗಲೇ ವಿಮಾನಗಳನ್ನು ಹೊಡೆದುರುಳಿಸುತ್ತಿದ್ದಾರೆ, ಮತ್ತು ಅದು ಬಹುಶಃ ಪರಮಾಣು ಯುದ್ಧಕ್ಕೆ ಕಾರಣವಾಗುತ್ತಿತ್ತು. ಅದು ಪರಮಾಣು ಯುದ್ಧಕ್ಕೆ ತಿರುಗುತ್ತಿತ್ತು ಎಂದು ನಾನು ಹೇಳುತ್ತಿದ್ದೆ ಮತ್ತು ನಾನು ಅದನ್ನು ನಿಲ್ಲಿಸುವಲ್ಲಿ ಸಮರ್ಥನಾಗಿದ್ದೆ. ಮೊದಲನೆಯದು ಜೀವನ, ಮತ್ತು ಎರಡನೆಯದು ಇನ್ನೆಲ್ಲವೂ. ಯುದ್ಧಗಳು ಬಹಳ ಕೆಟ್ಟವು ಮತ್ತು ನೀವು ಅವುಗಳನ್ನು ತಪ್ಪಿಸಬಹುದಾದರೆ ಮತ್ತು ಅವುಗಳನ್ನು ಕೊನೆಗೊಳಿಸಲು ಮತ್ತು ಒಟ್ಟಾಗಿ ಮಾತುಕತೆ ನಡೆಸಲು ನಿಮಗೆ ಸಾಮರ್ಥ್ಯವಿದೆ."

ಭಾರತದ ಮೇಲೆ ಮುನಿಸು

ಇದರಿಂದ ವೇದ್ಯವಾಗುವ ಸಂಗತಿ ಏನೆಂದರೆ, ಭಾರತ-ಪಾಕಿಸ್ತಾನ ಯುದ್ಧವನ್ನು ಕೊನೆಗೊಳಿಸುವಲ್ಲಿ ತಾನು ಪಾತ್ರವಹಿಸಿದೆ ಎಂಬುದನ್ನು ಭಾರತ ಬಿಂಬಿಸದೇ ಹೋಯಿತು ಎಂಬ ಬಗ್ಗೆ ಟ್ರಂಪ್ ಅವರಿಗೆ ಕೋಪವಿದೆ. ಅದು ಈ ಹೇಳಿಕೆಯಲ್ಲಿ ಸ್ಪಷ್ಟವಾಗುತ್ತದೆ. ಅದನ್ನು ಅವರು ತೀರಾ ವೈಯಕ್ತಿಕವಾಗಿ ಪರಿಗಣಿಸಿದ್ದಾರೆ ಎಂಬುದು ಸ್ಪಷ್ಟ. ಯುದ್ಧವನ್ನು ಕೊನೆಗೊಳಿಸಿದ್ದಕ್ಕಾಗಿ ಪಾಕಿಸ್ತಾನ ಅವರಿಗೆ ಧನ್ಯವಾದ ಸಮರ್ಪಿಸಿದೆ ಮತ್ತು ಅವರಿಗೆ ನೋಬೆಲ್ ಶಾಂತಿ ಪುರಸ್ಕಾರ ಸಿಗಬೇಕು ಎಂಬ ಮನವಿಯನ್ನೂ ಮಾಡಿದೆ. ಈಗ ಅವರ ಚಿತ್ತ ಪಾಕಿಸ್ತಾನದ ಕಡೆಗಿದೆ ಎಂಬುದು ಸ್ಪಷ್ಟ.

ಪಾಕಿಸ್ತಾನ ತುಳಿದ ಹಾದಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ತುಳಿಯಲು ಸಾಧ್ಯವಿಲ್ಲ ಅಥವಾ ಪುಟಿನ್ ಅವರು ಟ್ರಂಪ್ ಅಹಂಕಾರಕ್ಕೆ ಹೇಗೆ ಮದ್ದೆರೆದರು ಎಂದು ಕುಹಕವಾಡುವಂತಿಲ್ಲ. ಮುಂಬರುವ ವಾರಗಳು ಮತ್ತು ತಿಂಗಳುಗಳಲ್ಲಿ ಅವರು ಹೇಗೆ ಟ್ರಂಪ್ ಜೊತೆಗೆ ಸಮಾಲೋಚನೆ ಮಾಡುತ್ತಾರೆ ಎಂಬುದು ಕುತೂಹಲದ ಸಂಗತಿ.

Read More
Next Story