TK Arun

ಸುಳ್ಳಿನ ಸರಮಾಲೆ ಪೋಣಿಸಿದ ಸುಂಕದ ಸರದಾರ: ಅಸತ್ಯದ ಅಬ್ಬರದಲ್ಲೂ ತುಂಬಿದ ಆತ್ಮವಿಶ್ವಾಸ!


ಸುಳ್ಳಿನ ಸರಮಾಲೆ ಪೋಣಿಸಿದ ಸುಂಕದ ಸರದಾರ: ಅಸತ್ಯದ ಅಬ್ಬರದಲ್ಲೂ ತುಂಬಿದ ಆತ್ಮವಿಶ್ವಾಸ!
x
ವಾಷಿಂಗ್ಟನ್ ಯುಎಸ್ ಕ್ಯಾಪಿಟಲ್ ಹೌಸ್ ಚೇಂಬರ್ನಲ್ಲಿ ಫೆಬ್ರವರಿ 24ರ ಮಂಗಳವಾರ ನಡೆದ ಕಾಂಗ್ರೆಸ್ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 'ಸ್ಟೇಟ್ ಆಫ್ ದಿ ಯೂನಿಯನ್' ಭಾಷಣ ಮಾಡಿದರು.
Click the Play button to hear this message in audio format

ಮೊನ್ನೆ ಮೊನ್ನೆ ʼಸ್ಟೇಟ್ ಆಫ್ ಯೂನಿಯನ್ʼನಲ್ಲಿ ಭಾಷಣ ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳ್ಳಿನ ಮಾಲೆಯನ್ನೇ ಪೋಣಿಸಿದ್ದಾರೆ. ಆರ್ಥಿಕ ಪ್ರಗತಿ, ಸುಂಕಗಳು, ವಲಸೆ ನೀತಿ… ಹೀಗೆ ಎಲ್ಲದರ ಬಗ್ಗೆ ಸತ್ಯವೇ ನಾಚುವಂತೆ ಮಾತನಾಡಿದ್ದಾರೆ.

ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಯ ಸಂದರ್ಭದಲ್ಲಿ ಅಬ್ಬರದ ಭಾಷಣ ಮಾಡುತ್ತ ʼರಾಜ ಪುರುಷೋತ್ತಮ (ಗ್ರೀಕರು ಆತನನ್ನು ಪೋರಸ್ ಎಂದು ಕರೆಯುತ್ತಿದ್ದರು) ಅಲೆಕ್ಸಾಂಡರ್-ನನ್ನು ಬಿಹಾರದಲ್ಲಿ ಸೋಲಿಸಿದ!ʼ ಎಂದು ಹೇಳಿದ್ದರು. ಭಾರತದ ಪ್ರಧಾನಿಯೊಬ್ಬರು ಈ ರೀತಿಯಾಗಿ ತಮ್ಮನ್ನು ಅಪಹಾಸ್ಯಕ್ಕೀಡು ಮಾಡಿಕೊಂಡಿದ್ದನ್ನು ಕಂಡು ಯಾರಾದರೂ ಮುಜುಗರಕ್ಕೆ ಒಳಗಾಗಿದ್ದರೆ, ಫೆ. 24ರಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ʼಸ್ಟೇಟ್ ಆಫ್ ದಿ ಯೂನಿಯನ್ʼನಲ್ಲಿ ಮಾಡಿದ ಭಾಷಣವನ್ನೇನಾದರೂ ಕೇಳಿದ್ದರೆ ಆಮೆಯಂತೆ ಚಿಪ್ಪಿನೊಳಗೆ ಹುದುಗಿಕೊಳ್ಳುವುದು ಅನಿವಾರ್ಯವಾಗುತ್ತಿತ್ತು.

ತಾವು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂಬುದನ್ನು ಟ್ರಂಪ್ ಮತ್ತೊಮ್ಮೆ ಸಾಬೀತುಪಡಿಸಿದರು. ಆದರೆ ಅಷ್ಟೂ ಸುಳ್ಳುಗಳನ್ನು ಅವರು ಅತ್ಯಂತ ಆತ್ಮವಿಶ್ವಾಸದಿಂದ ಹೇಳಿದರು. ಹಣದುಬ್ಬರ, ಆರ್ಥಿಕ ಪ್ರಗತಿ, ಉದ್ಯೋಗ, ಅಪರಾಧದ ಅಂಕಿ-ಸಂಖ್ಯೆಗಳು, ಆರೋಗ್ಯ ರಕ್ಷಣೆಯ ವೆಚ್ಚ, ಸುಂಕ, ವಲಸೆ, ವಲಸಿಗರಿಂದಲೇ ನಡೆಯುವ ಭ್ರಷ್ಟಾಚಾರ ಮತ್ತು ವಂಚನೆಗಳು, ಅಮೆರಿಕದ ಬಗ್ಗೆ ಡೆಮೊಕ್ರಾಟ್-ಗಳಿಗೆ ಇರುವ ಒಲವು… ಹೀಗೆ ಪುಂಖಾನುಪುಂಖ ಸುಳ್ಳುಗಳನ್ನೇ ಅವರು ಹೊಸೆದರು. ಅಷ್ಟು ಸಾಲದೆನ್ನುವಂತೆ ಯುದ್ಧ ಕೊನೆಗೊಳಿಸುವ ಮತ್ತು ಶಾಂತಿ ಸ್ಥಾಪಿಸುವ ಬಗ್ಗೆಯೂ ಅಬದ್ಧ ನುಡಿದರು.

ಅವರು ಎಷ್ಟು ಸುಳ್ಳು ಹೇಳಿದರೋ ಅಮೆರಿಕದ ಸಂಸತ್ತು (ಕಾಂಗ್ರೆಸ್) ಕೂಡ ಸಾಥ್ ನೀಡಿತು. ಸುಳ್ಳು ಹೇಳುವ ಅವರ ಹಕ್ಕುಗಳನ್ನೇ ಕೊಂಡಾಡಿತು. ಸೇಡಿನ ರಾಜಕೀಯವನ್ನು ಹುರಿದುಂಬಿಸಿತು. ಟ್ರಂಪ್ ಅವರ ಸುಂಕದ ಆಟಾಟೋಪಕ್ಕೆ ಸುಪ್ರೀಂ ಕೋರ್ಟ್ ಅಂಕುಶ ಹಾಕಿದ್ದರೂ ಕೂಡ ಈ ವಿಚಾರದಲ್ಲಿ ನಿಯಂತ್ರಣ-ಸಮತೋಲನ ಸಾಧಿಸುವಲ್ಲಿ ಸರ್ಕಾರದ ಶಾಸಕಾಂಗ ಸಂಪೂರ್ಣ ವಿಫಲವಾಯಿತು.

ಇರಾನ್ ಕುರಿತಾದ ತಮ್ಮ ಯೋಜನೆಗಳನ್ನು ಸ್ಪಷ್ಟಪಡಿಸಲು ಅವರು ನಿರಾಕರಿಸಿದ್ದು ಭಾರತೀಯರಲ್ಲಿ ಆತಂಕ ಮೂಡಿಸಬಹುದು. ಹಾಗೆಯೇ, ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಮಾಣು ಯುದ್ಧವನ್ನು ತಡೆದಿದ್ದೇನೆ ಎಂಬ ಅವರ ಹೇಳಿಕೆಯು ಕಿರಿಕಿರಿ ಉಂಟುಮಾಡಬಹುದು. ಅಂತಹ ಯುದ್ಧದಲ್ಲಿ 35 ಮಿಲಿಯನ್ (3.5 ಕೋಟಿ) ಜನರ ಸಾವನ್ನು ನಾನು ತಪ್ಪಿಸಿದ್ದೇನೆ ಎಂದು ಅವರು ಪ್ರತಿಪಾದಿಸಿದರು. ಈ ಅಂಕಿಅಂಶವನ್ನು ಅವರು ಪಾಕಿಸ್ತಾನದ ಪ್ರಧಾನಿಗೆ ಆರೋಪಿಸಿದ್ದು, ಆ ಪ್ರಧಾನಿಯಂತೂ ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಸ್ಪಷ್ಟಪಡಿಸಲು ಧಾವಿಸಿ ಬರುವ ಸಾಧ್ಯತೆ ಕಡಿಮೆ.

ಇರಾನ್ ವಿಷಯದ ಮೇಲಿನ ಅನಿಶ್ಚಿತತೆಯು ಅನಗತ್ಯವಾಗಿ ತೈಲ ಬೆಲೆಗಳನ್ನು ಹೆಚ್ಚಿಸುತ್ತದೆ ಮತ್ತು ಭಾರತೀಯ ವಲಸೆ ಕಾರ್ಮಿಕರು ಸೇರಿದಂತೆ ಆ ಪ್ರದೇಶದಲ್ಲಿ ವಾಸಿಸುವ ಲಕ್ಷಾಂತರ ಜನರ ಸುರಕ್ಷತೆಯ ಬಗ್ಗೆ ಕಳವಳ ಮೂಡಿಸುತ್ತದೆ. ಒಂದು ವೇಳೆ ಇರಾನ್ ಮೇಲೆ ಅಮೆರಿಕದ ದಾಳಿಯ ನಂತರ ಪ್ರಾದೇಶಿಕ ಯುದ್ಧ ಭುಗಿಲೆದ್ದರೆ, ಇಸ್ರೇಲ್ನಲ್ಲಿರುವ ಕೆಲವು ತಾತ್ಕಾಲಿಕ ಭಾರತೀಯ ವಲಸಿಗರು ತರಾತುರಿಯಲ್ಲಿ ಅಲ್ಲಿಂದ ಜಾಗ ಖಾಲಿ ಮಾಡುವುದು ಅನಿವಾರ್ಯವಾಗುತ್ತದೆ.

ಒಂದು ಕೋಟೆಯ ಕಥೆ

ಟ್ರಂಪ್ ಅವರು ನೇರವಾಗಿ ಹೇಳದಿದ್ದರೂ, ಕಾನ್ಫೆಡರೇಟ್ (ಅಂದರೆ ಗುಲಾಮಗಿರಿಯನ್ನು ಸಮರ್ಥಿಸುವ) ಮಿಲಿಟರಿ ನಾಯಕನ ಹೆಸರನ್ನು 'ಫೋರ್ಟ್ ಬ್ರ್ಯಾಗ್'ಗೆ ಮರುಸ್ಥಾಪಿಸಿದ್ದೇನೆ ಎಂಬ ಸೂಚನೆ ನೀಡಿದರು. ಈ ಕೋಟೆಗೆ 2023ರಲ್ಲಿ 'ಫೋರ್ಟ್ ಲಿಬರ್ಟಿ' ಎಂದು ಮರುನಾಮಕರಣ ಮಾಡಲಾಗಿತ್ತು. ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ಇದನ್ನು ಮತ್ತೆ 'ಫೋರ್ಟ್ ಬ್ರ್ಯಾಗ್' ಎಂದು ಬದಲಾಯಿಸಿದ್ದರು. ಆದರೆ ಈ ಬಾರಿ ಅದನ್ನು ಎರಡನೇ ಮಹಾಯುದ್ಧದ ವೀರ, ಬ್ಯಾಟಲ್ ಆಫ್ ದಿ ಬಲ್ಜ್ನಲ್ಲಿ ಹೋರಾಡಿದ ಪ್ರೈವೇಟ್ ಫಸ್ಟ್ ಕ್ಲಾಸ್ 'ರೋಲ್ಯಾಂಡ್ ಎ. ಬ್ರ್ಯಾಗ್' ಅವರ ಹೆಸರಿನಲ್ಲಿ ನಾಮಕರಣ ಮಾಡಲಾಗಿದೆ. ಇವರು ದಕ್ಷಿಣದ ರಾಜ್ಯಗಳಲ್ಲಿ ಗುಲಾಮಗಿರಿಯನ್ನು ಮುಂದುವರಿಸುವ ಹಕ್ಕಿಗಾಗಿ ಕಾನ್ಫೆಡರೇಟ್ ಪಡೆಗಳನ್ನು ಮುನ್ನಡೆಸಿದ್ದ ಜನರಲ್ ಬ್ರಾಕ್ಸ್ಟನ್ ಬ್ರ್ಯಾಗ್ ಅವರಿಗಿಂತ ಸಂಪೂರ್ಣವಾಗಿ ಭಿನ್ನರಾದವರು.

2020ರಲ್ಲಿ ಜಾರ್ಜ್ ಫ್ಲಾಯ್ಡ್ ಹತ್ಯೆ ಮತ್ತು ಅಮೆರಿಕ ಹಾಗೂ ಬ್ರಿಟನ್ನಾದ್ಯಂತ ವ್ಯಾಪಿಸಿದ 'ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಪ್ರತಿಭಟನೆಗಳ ನಂತರ, ಕಾನ್ಫೆಡರೇಟ್ ಯುದ್ಧ ವೀರರನ್ನು ಸ್ಮರಿಸುವ ಲಾಂಛನಗಳನ್ನು ತೆಗೆದುಹಾಕಲಾಗಿತ್ತು. ಇದರಿಂದ ಟ್ರಂಪ್ ಅವರ 'ಶ್ವೇತ ವರ್ಣೀಯ ಶ್ರೇಷ್ಠತಾವಾದಿ' ಬೆಂಬಲಿಗರು ಅಸಮಾಧಾನಕ್ಕೆ ಒಳಗಾಗಿದ್ದರು.

ಉತ್ತರ ಕೆರೊಲಿನಾದ ಕೋಟೆಗೆ 'ಬ್ರ್ಯಾಗ್' ಹೆಸರನ್ನು ಮರುಸ್ಥಾಪಿಸಿದ್ದನ್ನು ಸಮರ್ಥಿಸಿಕೊಳ್ಳುತ್ತಾ—ಅಮೆರಿಕ ಮೊದಲ ಮತ್ತು ಎರಡನೇ ಮಹಾಯುದ್ಧಗಳನ್ನು ಗೆದ್ದಾಗ ಈ ಸೇನಾ ನೆಲೆಯ ಹೆಸರು 'ಬ್ರ್ಯಾಗ್' ಎಂದೇ ಇತ್ತು ಎಂದು ಹೇಳುವ ಮೂಲಕ—ಟ್ರಂಪ್ ಅವರು ಈ ಹೆಸರನ್ನು ಮರುಸ್ಥಾಪಿಸಲು ಬಳಸಿದ ಕುತಂತ್ರವನ್ನು ಕಡೆಗಣಿಸಿದರು. ಅಷ್ಟೇ ಅಲ್ಲದೆ, ಶ್ವೇತ ವರ್ಣೀಯ ಶ್ರೇಷ್ಠತಾವಾದಿಗಳ ಜೊತೆಗೂಡಿ ಕಾನ್ಫೆಡರೇಟ್ ಯುದ್ಧ ವೀರರ ಇಂದಿಗೂ ಪಾಲಿಸಿಕೊಂಡು ಬಂದಿರುವ ಖ್ಯಾತಿಯನ್ನು ಸಂಭ್ರಮಿಸಿದರು.

ಸುಂಕದ ಸುಳ್ಳು

ಪ್ರಸ್ತುತ, ಫೆಡ್ಎಕ್ಸ್, ಕಾಸ್ಟ್ಕೊ, ರೆವ್ಲಾನ್ ಮತ್ತು ಇತರ ಸಾವಿರಾರು ಕಂಪನಿಗಳು ತಾವು ಸರಕುಗಳ ಮೇಲೆ ಪಾವತಿಸಿದ ಸುಂಕವನ್ನು ಮರುಪಾವತಿಸುವಂತೆ ಕೋರಿ ಟ್ರಂಪ್ ಆಡಳಿತದ ವಿರುದ್ಧ ಮೊಕದ್ದಮೆ ಹೂಡುತ್ತಿವೆ. ಆದರೂ, ಅಮೆರಿಕದ ಖಜಾನೆಯನ್ನು ಶ್ರೀಮಂತಗೊಳಿಸಿದ ಸುಂಕಗಳು ಬಂದಿದ್ದು ವಿದೇಶಗಳಿಂದ ಎಂಬ ಹಸಿ ಸುಳ್ಳನ್ನು ಪದೇ ಪದೇ ಹೇಳಲು ಅಮೆರಿಕ ಅಧ್ಯಕ್ಷರಿಗೆ ಯಾವ ಸಂಕೋಚವೂ ಇಲ್ಲ. ಒಂದು ವೇಳೆ ಈ ಸುಂಕಗಳನ್ನು ಕಂಪನಿಗಳಿಗೆ ಮರುಪಾವತಿಸಿದರೆ, ಅದು ದೊಡ್ಡ ಆರ್ಥಿಕ ಕೊರತೆಗೆ ಕಾರಣವಾಗಬಹುದು.

ತಮ್ಮ ಅಧಿಕಾರದ ಮೊದಲ ವರ್ಷದಲ್ಲೇ ಅಮೆರಿಕಕ್ಕೆ 18 ಟ್ರಿಲಿಯನ್ ಡಾಲರ್ ಹೂಡಿಕೆಯನ್ನು ತಂದಿರುವುದಾಗಿ ಟ್ರಂಪ್ ಅವರು ಪ್ರತಿಪಾದಿಸುತ್ತಿದ್ದಾರೆ. ಶ್ವೇತಭವನವು ಪ್ರಮುಖ ಹೂಡಿಕೆಗಳ ಬಗ್ಗೆ ನಿಗಾ ಇಡಲು ಟ್ರ್ಯಾಕರ್ ಒಂದನ್ನು ಹೊಂದಿದೆ ಮತ್ತು ಅಲ್ಲಿನ ಅಂಕಿಅಂಶದ ಪ್ರಕಾರ ಕೇವಲ 9.7 ಟ್ರಿಲಿಯನ್ ಡಾಲರ್ ಮಾತ್ರ ಇದೆ. ಅಲ್ಲಿಂದ 'ಸ್ಟೇಟ್ ಆಫ್ ದಿ ಯೂನಿಯನ್' ಭಾಷಣದ 18 ಟ್ರಿಲಿಯನ್ ಡಾಲರ್ ವರೆಗಿನ ಏರಿಕೆ ಕೇವಲ ಅವರ ಕಲ್ಪನೆಯ ವಿಮಾನದ ಹಾರಾಟವಷ್ಟೇ ಆಗಿದೆ.

ಶ್ವೇತಭವನದ ಈ ಅಂಕಿಅಂಶವೇ ಅಸ್ಪಷ್ಟ ಭರವಸೆಗಳ ಮತ್ತು ಅಮೆರಿಕದ ಸರಕುಗಳನ್ನು ಖರೀದಿಸುವ ಭರವಸೆಗಳ ಒಂದು ಮಿಶ್ರಣವಾಗಿದೆ. ಯುಎಇ 1.4 ಟ್ರಿಲಿಯನ್ ಡಾಲರ್ ಮತ್ತು ಕತಾರ್ 1.2 ಟ್ರಿಲಿಯನ್ ಡಾಲರ್ ಹೂಡಿಕೆ ಮಾಡುವ ಭರವಸೆಗಳು ಆಕರ್ಷಕವಾಗಿ ಕಂಡರೂ ವಾಸ್ತವಿಕವಾಗಿಲ್ಲ. ಯುಎಇಯ ಸಾರ್ವಭೌಮ ಸಂಪತ್ತು ನಿಧಿಗಳು ಮತ್ತು ಪಿಂಚಣಿ ನಿಧಿಗಳ ಒಟ್ಟು ಮೌಲ್ಯವೇ 2.4 ಟ್ರಿಲಿಯನ್ ಡಾಲರ್ ಆಗಿದೆ. ಆದರೆ ಅಲ್ಲಿನ ಶೇಖ್ಗಳು ಅಮೆರಿಕದಲ್ಲಿ ಹೊಸ ಹೂಡಿಕೆ ಮಾಡಲು ಹಣ ಸಂಗ್ರಹಿಸಲು ತಾವು ಹೊಂದಿರುವ ಎಲ್ಲವನ್ನೂ ಸುರಿಯುತ್ತಾರೆ ಎಂದು ನಿರೀಕ್ಷಿಸುವುದೇ ದೊಡ್ಡ ಭ್ರಮೆ. ಇದು ಆ ಭಾಗದ ಧಾರ್ಮಿಕ ಪದ್ಧತಿಗಳಿಗೆ ಸಂಬಂಧಿಸಿದ "ಲೂನಾರ್" (ಚಂದ್ರನಿಗೆ ಸಂಬಂಧಿಸಿದ) ಎಂಬ ಪದವನ್ನು "ಲೂನಾಟಿಕ್" (ಹುಚ್ಚುತನ) ಎಂಬ ಪದದೊಂದಿಗೆ ಗೊಂದಲ ಮಾಡಿಕೊಂಡಂತಿದೆ. ಈ ಎರಡೂ ಪದಗಳು 'ಲೂನಾ' (Luna-ಚಂದ್ರ) ಎಂಬ ಮೂಲ ಪದವನ್ನೇ ಹೊಂದಿದ್ದರೂ, ಇಲ್ಲಿನ ನಿರೀಕ್ಷೆ ಮಾತ್ರ ಅಸಂಬದ್ಧವಾಗಿದೆ.

ಆರ್ಥಿಕ ಪ್ರಗತಿಯ ಏರುಗತಿ

ಆದರೆ ಟ್ರಂಪ್ ಅವರ ಸುಂಕಗಳು ಮತ್ತು ಅದರ ಪರಿಣಾಮವಾಗಿ ಉಂಟಾದ ಅನಿಶ್ಚಿತತೆಯ ಹೊರತಾಗಿಯೂ, ಅಮೆರಿಕದ ಆರ್ಥಿಕತೆಯು ಇತರ ಶ್ರೀಮಂತ ದೇಶಗಳಿಗಿಂತ ವೇಗವಾಗಿ ಬೆಳೆಯುತ್ತಲೇ ಇದೆ. ಇದನ್ನು ನಾವು ಹೇಗೆ ವಿವರಿಸಬಹುದು? ಇದಕ್ಕೆ ತಾತ್ಕಾಲಿಕ ವಿವರಣೆಯು ಅಮೆರಿಕದ ಆರ್ಥಿಕತೆಯಲ್ಲಿನ ಸರಕುಗಳ ರಚನಾತ್ಮಕ ಸ್ವರೂಪದಲ್ಲಿ ಅಡಗಿದೆ. ಒಟ್ಟು ಜಿಡಿಪಿಯಲ್ಲಿ ಉತ್ಪಾದನಾ ವಲಯದ ಪಾಲು ಶೇ. 11-13 ರಷ್ಟು ಮಾತ್ರ ಇದೆ. ಟ್ರಂಪ್ ಅವರ ಸುಂಕಗಳು ಸರಕುಗಳ ಮೇಲೆ ಇದೆಯೇ ಹೊರತು ಸೇವೆಗಳ ಮೇಲಲ್ಲ. ಅಮೆರಿಕದ ಆರ್ಥಿಕ ಉತ್ಪಾದನೆಯಲ್ಲಿ ಸೇವಾ ವಲಯವು ಶೇಕಡಾ 80 ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ. ಇನ್ನು ಕೃಷಿ ಉತ್ಪಾದನೆಯ ಪಾಲು ಶೇ. 1 ಕ್ಕಿಂತ ಕಡಿಮೆ ಇದೆ (ಆದರೂ ಕೃಷಿ ಸಂಬಂಧಿತ ಎಲ್ಲಾ ವಲಯಗಳು ಜಿಡಿಪಿಗೆ ಒಂದಷ್ಟು ಗಮನಾರ್ಹ ಕೊಡುಗೆ ನೀಡುತ್ತವೆ).

ಅಮೆರಿಕಕ್ಕೆ ಕೃತಕ ಬುದ್ಧಿಮತ್ತೆ ಎಂಬುದು 'ಮಹಾನ್ ಭರವಸೆ'. ಪರಸ್ಪರ ಸ್ಪರ್ಧಿಸುತ್ತಿರುವ ಅನೇಕ ಪ್ರಮುಖ ತಂತ್ರಜ್ಞಾನ ಕಂಪನಿಗಳು ಕೃತಕ ಸಾಮಾನ್ಯ ಬುದ್ಧಿಮತ್ತೆಯನ್ನು ಉತ್ಪಾದಿಸುವ ಮೊದಲ ಕಂಪನಿಯಾಗಲು ಭಾರಿ ಹೂಡಿಕೆಗಳನ್ನು ಮಾಡುತ್ತಿವೆ. ಅವರು ದೈತ್ಯ ದತ್ತಾಂಶ ಕೇಂದ್ರಗಳಲ್ಲಿ ಮತ್ತು ಆ ಕೇಂದ್ರಗಳನ್ನು ನಡೆಸಲು ಅಗತ್ಯವಿರುವ ವಿದ್ಯುತ್ ಸ್ಥಾವರಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಅಮೆರಿಕದಲ್ಲೇ ಸುಧಾರಿತ ಚಿಪ್ಗಳನ್ನು ತಯಾರಿಸುವ ಬೈಡನ್ ಕಾಲದ ಕೈಗಾರಿಕಾ ನೀತಿಯು ಈಗ ಫಲ ನೀಡುತ್ತಿದೆ. ತೈವಾನ್ನ ಪ್ರಮುಖ ಚಿಪ್ ತಯಾರಿಕಾ ಕಂಪನಿ TSMC, ಅರಿಜೋನಾದಲ್ಲಿ ಮೂರು ಪ್ಲಾಂಟ್ಗಳಲ್ಲಿ ಹೂಡಿಕೆ ಮಾಡಿದೆ ಮತ್ತು ಇನ್ನೂ ಮೂರು ಪ್ಲಾಂಟ್ಗಳು ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸುವ ಯೋಜನೆಗಳನ್ನು ಹೊಂದಿದೆ.

ಸುಂಕದ ಅನಿಶ್ಚಿತತೆಯಿಂದಾಗಿ ಉತ್ಪಾದನಾ ವಲಯದ ಹೂಡಿಕೆಗೆ ಅಡ್ಡಿಯಾಗಬಹುದಾದರೂ, ಸೇವಾ ವಲಯದ ಹೂಡಿಕೆಗಳು ಮತ್ತು ವಸತಿ ವಲಯದ ಹೂಡಿಕೆಗಳು (ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರ) ಮುಂದುವರಿಯುತ್ತಿವೆ.

Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story