Sanket Upadhyay

ಪಶ್ಚಿಮ ಬಂಗಾಳ ಎಂಬ ಚಕ್ರವ್ಯೂಹ: ಟಿಎಂಸಿ ಪತನ ರೂಪಿಸಿದ ಪಕ್ಷಾಂತರಿಗಳ ರೂವಾರಿ ಬಿಜೆಪಿಗೆ ಅಗ್ನಿಪರೀಕ್ಷೆ


ಪಶ್ಚಿಮ ಬಂಗಾಳ ಎಂಬ ಚಕ್ರವ್ಯೂಹ: ಟಿಎಂಸಿ ಪತನ ರೂಪಿಸಿದ ಪಕ್ಷಾಂತರಿಗಳ ರೂವಾರಿ ಬಿಜೆಪಿಗೆ ಅಗ್ನಿಪರೀಕ್ಷೆ
x
2026ರಲ್ಲಿ ಎಷ್ಟು ಮಂದಿ ಶಾಸಕರು ಅಥವಾ ಸಂಸದರನ್ನು ಪಕ್ಷಾಂತರ ಮಾಡಿಸಲು ಸಾಧ್ಯವಿದೆ ಎಂಬುದರ ಮೇಲೆ ಬಿಜೆಪಿ ಸಾಮರ್ಥ್ಯ ನಿಂತಿಲ್ಲ. ಬದಲಾಗಿ ಟಿಎಂಸಿ ನಿರ್ಗಮನದಿಂದ ಸೃಷ್ಟಿಯಾಗಿರುವ ರಾಜಕೀಯ ನಿರ್ವಾತವನ್ನು ಇತರ ಶಕ್ತಿಗಳು ಆಕ್ರಮಿಸಿಕೊಳ್ಳದಂತೆ ತಡೆಯುವಲ್ಲಿ ಬಿಜೆಪಿ ಶಕ್ತವಾದೀತೇ? ಅಂತಹ ಆಡಳಿತವನ್ನು ಆ ಪಕ್ಷ ನೀಡಬಲ್ಲುದೇ ಎಂಬುದರ ಮೇಲೆ ಅದರ ಅಸ್ತಿತ್ವ ನಿಂತಿದೆ. –ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬಂಗಾಳದ ಬಿಜೆಪಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ.

ತೃಣಮೂಲ ಕಾಂಗ್ರೆಸ್ ಪತನವನ್ನು ವ್ಯವಸ್ಥಿತ ರೂಪದಲ್ಲಿ ಜಾರಿಗೆ ತಂದ ಬಿಜೆಪಿ ʼಕುದುರೆ ವ್ಯಾಪಾರʼದ ಆರೋಪಕ್ಕೆ ಗುರಿಯಾಗಿ ತನ್ನ ವರ್ಚಸ್ಸನ್ನೇ ಮಣ್ಣುಪಾಲು ಮಾಡಿಕೊಳ್ಳುವ ಅಪಾಯ ಎದುರಿಸುತ್ತಿದೆ.

ಪಶ್ಚಿಮ ಬಂಗಾಳದ ರಾಜಕೀಯ ರಂಗಮಂಚದಲ್ಲಿನ ನಾಟಕೀಯ ಘಟ್ಟ ಈಗ ಅತ್ಯಂತ ಉನ್ನತ ಹಂತ ತಲುಪಿದೆ. 2026ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಭರ್ಜರಿ ಗೆಲುವು ಸಾಧಿಸಿದ ವಾರಗಳ ಬಳಿಕ ಅಸಲಿ ಸುದ್ದಿ ಇರುವುದು ಆ ಪಕ್ಷದ ಗೆಲುವಿನ ಪ್ರಮಾಣದಲ್ಲಿ ಅಲ್ಲ, ಬದಲಾಗಿ ನಂತರ ನಡೆದ ತೃಣಮೂಲ ಕಾಂಗ್ರೆಸ್ಸಿನ ವ್ಯವಸ್ಥಿತ ಪತನದಲ್ಲಿ.

ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಗೆದ್ದಿರುವ ಸೀಟುಗಳ ಸಂಖ್ಯೆ 80. ಇವರಲ್ಲಿ ಸುಮಾರು 58 ಶಾಸಕರು ಪಕ್ಷದಿಂದ ಹೊರನಡೆದಿದ್ದಾರೆ. ವಿರೋಧಪಕ್ಷದ ನಾಯಕನ ಸ್ಥಾನವೂ ತಮಗೆ ಬೇಕು ಎಂದು ಹಕ್ಕು ಸಾಧಿಸಿರುವ ಅವರುಗಳು ಅದಕ್ಕಾಗಿ ಹಕ್ಕು ಸಾಧಿಸಿ ಸ್ಪೀಕರ್ಗೆ ಮನವಿ ಸಲ್ಲಿಸಿದ್ದಾರೆ. ಇದರೊಂದಿಗೆ ಅವರು ಬಹಿರಂಗವಾಗಿ ಮಮತಾ ಬ್ಯಾನರ್ಜಿ ಅವರಿಗೆ ಬೆನ್ನು ತೋರಿಸಿದಂತಾಗಿದೆ. ಇದೇ ವೇಳೆ ಟಿಎಂಸಿಯ 20 ಮಂದಿ ಸಂಸದರು ಎನ್ಡಿಎಗೆ ಬೇಂಬಲ ಘೋಷಿಸಿದ್ದಾರೆ. ತಮಗೆ ರಾಜಕೀಯ ಅಸ್ತಿತ್ವವನ್ನು ಕೊಟ್ಟ ಪಕ್ಷದ ಚಿಹ್ನೆ ಹಾಗೂ ನಾಯಕತ್ವದಿಂದ ಅವರು ಸಿಡಿದು ಈಚೆ ಬಂದಿದ್ದಾರೆ.

ಇದು ಸೋಲನ್ನಪ್ಪಿದ ಪ್ರಾದೇಶಿಕ ಶಕ್ತಿಯೊಂದು ಕ್ರಮೇಣ ಮರೆಯಾಗುತ್ತಿರುವ ಪ್ರಕ್ರಿಯೆಯಲ್ಲ. ಇದು ಸಾರ್ವಜನಿಕವಾಗಿ ಅಸ್ತವ್ಯಸ್ತವಾಗಿ ಮತ್ತತು ಮೇಲ್ನೋಟಕ್ಕೆ ವ್ಯವಸ್ಥಿತವಾಗಿ ನಡೆಸಿದ ರಾಜಕೀಯ ಹತ್ಯಕಾಂಡ. ಟಿಎಂಸಿಯ ಸಂಸದೆ ಮಹುವಾ ಮೊಯಿತ್ರಾ ಅವರು ಇದರನ್ನು ಅತ್ಯಂತ ಕರಾರುವಕ್ಕಾಗಿ ಗುರುತಿಸಿದ್ದಾರೆ. ಇದು ಬಿಜೆಪಿ ನಡೆಸುತ್ತಿರುವ ಒಂದು ʼಆಪರೇಷನ್.ʼ ಇದರಲ್ಲಿ ಆಮಿಷಗಳು ಮತ್ತು ಒಪ್ಪಿದವರಿಗೆ ಹಣದ ಹೊಳೆಯೇ ಹರಿಯುತ್ತಿದೆ.

ಇಂತಹ ಒಂದು ನಾಟಕವನ್ನು ಮೊಯಿತ್ರಾ ಅವರು ʼಕ್ಯೂಂಕಿ ಗದ್ದಾರ್ ಬೀ ಕಬಿ ಸಾಂಸದ್ ಥೆʼ ಎಂದು ಕರೆದಿರುವುದು ತೀರಾ ತೀಕ್ಷ್ಣವಾಗಿದ್ದರೂ ಕರಾರುವಕ್ಕಾಗಿದೆ.

ಕೀರ್ತಿ ಆಜಾದ್ ಅವರು "ಅಮಿತ್ ಶಾ ಕಾ ಖೇಲ್" (ಅಮಿತ್ ಶಾ ಅವರ ಆಟ) ಎಂದು ನೇರವಾಗಿ ಆರೋಪಿಸುವ ಮೂಲಕ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜಕೀಯದಲ್ಲಿ ನೈತಿಕತೆ ಸಂಪೂರ್ಣವಾಗಿ ಮಾಯವಾಗಿದೆ ಎಂದು ಖಡಕ್ ಮಾತುಗಳಲ್ಲಿ ತಿಳಿಸಿದ್ದಾರೆ. ಇವು ಕೇವಲ ಚಿಲ್ಲರೆ ಹೇಳಿಕೆಗಳಲ್ಲ; ತನ್ನದೇ ಪಕ್ಷದ ಆಂತರಿಕ ಕುಸಿತವನ್ನು ನೋಡುತ್ತಿರುವ ಒಂದು ಪಕ್ಷದ ಅಳಲನ್ನು ಇವು ಪ್ರತಿಬಿಂಬಿಸುತ್ತಿವೆ, ಆದರೆ ಇದರ ಮುಖ್ಯ ಲಾಭವನ್ನು ದೆಹಲಿಯಿಂದ ಕುಳಿತು ಬಿಜೆಪಿ ಪಡೆಯುತ್ತಿದೆ.

ಟಿಎಂಸಿಯ ನಷ್ಟ, ಬಿಜೆಪಿಯ ಗೆಲುವು

ಬಿಜೆಪಿಗೆ ಈ ರಾಜಕೀಯ ಲೆಕ್ಕಾಚಾರಗಳು ಆಕರ್ಷಕವಾಗಿವೆ. ಟಿಎಂಸಿ ದುರ್ಬಲಗೊಳ್ಳುವುದು ಎಂದರೆ ಕೋಲ್ಕತ್ತಾದ ಬೀದಿಗಳಲ್ಲಿ ಸಂಘಟಿತ ಪ್ರತಿಭಟನೆಗಳ ಸಂಖ್ಯೆ ಕಡಿಮೆಯಾಗುವುದು, ವಿಧಾನಸಭೆಯಲ್ಲಿ ವಿರೋಧ ಪಕ್ಷದ ಪ್ರಭಾವ ಕುಂದುವುದು ಮತ್ತು ಮಮತಾ ಬ್ಯಾನರ್ಜಿ ಅವರನ್ನು ಅಜೇಯರನ್ನಾಗಿಸಿದ್ದ ಅಲ್ಪಸಂಖ್ಯಾತ ಹಾಗೂ ಗ್ರಾಮೀಣ ಮತ ಬ್ಯಾಂಕ್ಗಳನ್ನು ಕ್ರೋಢೀಕರಿಸುವ ಸಾಮರ್ಥ್ಯ ಕ್ಷೀಣಿಸುವುದು ಎಂದೇ ಅರ್ಥ.

ಒಂದೊಮ್ಮೆ "ದೆಹಲಿಯ ಆಳ್ವಿಕೆ"ಗೆ ಏಕೈಕ ಪರ್ಯಾಯ ಎಂದು ಬಿಂಬಿಸಿಕೊಂಡಿದ್ದ ಪಕ್ಷವು, ಈಗ ತನ್ನ ಸ್ವಂತ ಶಾಸಕರನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಹೆಣಗಾಡುತ್ತಿದೆ.

ತೀರಾ ಅಲ್ಪಾವಧಿಯಲ್ಲಿ, ಈ ನಾಶವು ಬಿಜೆಪಿಯ ತಂತ್ರಗಾರರು ಏನು ಬಯಸಿದ್ದರೋ ಅದನ್ನೇ ನೀಡಿದೆ: ಭಾರತದ ಅತ್ಯಂತ ರಾಜಕೀಯ ಅಸ್ಥಿರತೆ ಹೊಂದಿರುವ ದೊಡ್ಡ ರಾಜ್ಯದಲ್ಲಿ ಒಂದು ವಿಭಜಿತ ಮತ್ತು ನೈತಿಕತೆ ಕಳೆದುಕೊಂಡ ಪ್ರಾದೇಶಿಕ ಎದುರಾಳಿ. ಈ ಹಿಂದೆ ಹಲವು ಬಾರಿ ವಿಫಲವಾಗಿದ್ದ 'ಆಪರೇಷನ್ ಕಮಲ', ಚುನಾವಣಾ ಅವಮಾನದಿಂದ ತತ್ತರಿಸಿರುವ ಪಕ್ಷವೊಂದರಲ್ಲಿ ಕೊನೆಗೂ ಯಶಸ್ವಿಯಾಗಿದೆ.

ಎಡಪಕ್ಷಗಳು ಮತ್ತು ಕಾಂಗ್ರೆಸ್‌ಗೆ ಅವಕಾಶ

ಆದರೆ, ಒಬ್ಬ ಎದುರಾಳಿಯನ್ನು ಮುಗಿಸಿಬಿಟ್ಟರೆ ರಾಜಕೀಯ ಅಖಾಡವು ತಾನಾಗಿಯೇ ತೆರವಾಗುತ್ತದೆ ಎಂಬುದು ಇದರ ಹಿಂದಿನ ಲೆಕ್ಕಾಚಾರ, ಭಾರತೀಯ ರಾಜಕೀಯದಲ್ಲಿ ಪದೇ ಪದೇ ವಿಫಲವಾಗುವ ಏಕಪಕ್ಷೀಯ ಚಿಂತನೆಯಾಗಿದೆ. ಬಂಗಾಳದ ರಾಜಕೀಯ ಜಾಗವು ಎಂದಿಗೂ ದೀರ್ಘಕಾಲದವರೆಗೆ ಕೇವಲ ಬಿಜೆಪಿ ಮತ್ತು ಟಿಎಂಸಿ ನಡುವಿನ ಪೈಪೋಟಿಯಾಗಿ ಇರಲಿಲ್ಲ.

2011ರಲ್ಲಿ ಟಿಎಂಸಿ 34 ವರ್ಷಗಳ ಎಡರಂಗದ ಆಳ್ವಿಕೆಯನ್ನು ಅಂತ್ಯಗೊಳಿಸುವುದಕ್ಕೂ ಮೊದಲು ಅಲ್ಲಿ ಮುಖ್ಯ ಸ್ಪರ್ಧೆ ಇದ್ದದ್ದು ಸಿಪಿಐ(ಎಂ) ನೇತೃತ್ವದ ಎಡಪಕ್ಷಗಳು ಮತ್ತು ಕಾಂಗ್ರೆಸ್ ನಡುವೆ. ಆ ಶಕ್ತಿಗಳು ಅಳಿಸಿಹೋಗಿರಲಿಲ್ಲ; ಅವು ಕೇವಲ ಸ್ಥಳಾಂತರಗೊಂಡಿದ್ದವು ಅಷ್ಟೆ. ಅವರ ಸಂಘಟನಾತ್ಮಕ ಅವಶೇಷಗಳು, ಸೈದ್ಧಾಂತಿಕ ನೆಲೆಗಳು ಮತ್ತು ಉಳಿದ ಕಾರ್ಯಕರ್ತರ ಜಾಲಗಳು ಗ್ರಾಮೀಣ ಬಂಗಾಳದಲ್ಲಿ, ಅಲ್ಪಸಂಖ್ಯಾತ ಸಮುದಾಯದ ಕೆಲವು ವರ್ಗಗಳಲ್ಲಿ ಮತ್ತು ನಗರ ಹಾಗೂ ಬೌದ್ಧಿಕ ಪ್ರತಿರೋಧದ ತಾಣಗಳಲ್ಲಿ ಇಂದಿಗೂ ಉಳಿದುಕೊಂಡಿವೆ.

ಈಗ ಟಿಎಂಸಿ ಕೇವಲ ಒಂದು ಸಣ್ಣ ಗುಂಪಾಗಿ ಕುಗ್ಗಿರುವುದರಿಂದ, ಆ ರಾಜಕೀಯ ಜಾಗದಲ್ಲಿ ಇದ್ದಕ್ಕಿದ್ದಂತೆ ಒಂದು ನಿರ್ವಾತ ಸೃಷ್ಟಿಯಾಗಿದ್ದು, ಅದನ್ನು ಮತ್ತೆ ದಕ್ಕಿಸಿಕೊಳ್ಳಲು ಅವಕಾಶ ತೆರೆದುಕೊಂಡಿದೆ. ಎಡಪಕ್ಷಗಳು ಮತ್ತು ಕಾಂಗ್ರೆಸ್ ಪ್ರಸ್ತುತತೆಯನ್ನು ಕಾಯ್ದುಕೊಳ್ಳಲು ಟಿಎಂಸಿಯ ಹೊಸ ಅವತಾರಗಳಾಗಿ ಉದ್ಭವಿಸುವ ಅಗತ್ಯವೇನೂ ಇಲ್ಲ. ಅವರು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ನಂಬಿಕಾರ್ಹವಾದ ಮತ್ತು ವ್ಯಕ್ತಿಪೂಜೆಯನ್ನು ಆಧರಿಸದ ಪರ್ಯಾಯಗಳಾಗಿ ಕಾಣಿಸಿಕೊಂಡರೆ ಸಾಕು.

ಕಾಂಗ್ರೆಸ್ ಮತ್ತು ಎಡಪಕ್ಷಗಳ ನಡುವಿನ ಹೊಂದಾಣಿಕೆ — ಅದು ಔಪಚಾರಿಕವಾಗಿರಲಿ ಅಥವಾ ತಾಂತ್ರಿಕವಾಗಿರಲಿ — ವಿಭಜಿತ ಟಿಎಂಸಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಬಿಜೆಪಿ ವಿರೋಧಿ ಮತಗಳನ್ನು ಕ್ರೋಢೀಕರಿಸಬಲ್ಲದು. ಮೈತ್ರಿ ಇಲ್ಲದಿದ್ದರೂ, ಈ ಎರಡು ಪಕ್ಷಗಳು ಸಮಾನಾಂತರವಾಗಿ ಕಾರ್ಯನಿರ್ವಹಿಸಿದರೆ, ವಿರೋಧ ಪಕ್ಷದ ಜಾಗವನ್ನು ಹಂಚಿಕೊಳ್ಳಬಹುದು. ಇದು ಪಶ್ಚಿಮ ಬಂಗಾಳದ 42 ಲೋಕಸಭಾ ಸ್ಥಾನಗಳಲ್ಲಿ 2026ರ ವಿಧಾನಸಭಾ ಚುನಾವಣೆಯ ಪ್ರಾಬಲ್ಯವನ್ನು ಬಳಸಿಕೊಂಡು, 2029ರಲ್ಲಿ ಬಿಜೆಪಿ ಅಧಿಪತ್ಯವನ್ನು ಸಾಧಿಸದಂತೆ ತಡೆಯಲು ಸಹಕಾರಿಯಾಗಬಹುದು.

ಇತಿಹಾಸ ಮರುಕಳಿಸುತ್ತದೆ

ಇತಿಹಾಸವು ಎಚ್ಚರಿಕೆಯ ಕನ್ನಡಿಯನ್ನು ಹಿಡಿಯುತ್ತದೆ. 2011ರಲ್ಲಿ ಟಿಎಂಸಿಯ ಉದಯವೇ ಎಡಪಕ್ಷಗಳ ಅವಶೇಷಗಳ ಮೇಲೆ ನಿರ್ಮಾಣವಾಗಿತ್ತು. ಒಂದು ಪ್ರಬಲ ಶಕ್ತಿಯನ್ನು ನಿರ್ಮೂಲನೆ ಮಾಡಲು ಬಳಸಿದ ವಿಧಾನಗಳೇ ಮತ್ತೊಂದು ಶಕ್ತಿಯ ಉದಯಕ್ಕೆ ದಾರಿ ಮಾಡಿಕೊಟ್ಟಿದ್ದವು. ಇಂದು, ಬಿಜೆಪಿ ಅದೇ ಚಕ್ರದ ಒಂದು ಆವೃತ್ತಿಯನ್ನು ಪುನರಾವರ್ತನೆ ಮಾಡುತ್ತಿದೆ. ಆದರೆ ಈ ಬಾರಿ ಅವರ ಗುರಿ, ಹಿಂದೆ ಹಳೆಯ ವ್ಯವಸ್ಥೆಯನ್ನು ಕಿತ್ತೊಗೆದಿದ್ದ ಪಕ್ಷವೇ ಆಗಿದೆ.

ಈ ಎಲ್ಲ ಹಿನ್ನಡೆಗೆ "ಕೌಟುಂಬಿಕ ನಿಯಂತ್ರಣ"ದ ಬಗ್ಗೆ ಅಸಮಾಧಾನ, "ಅಭಿವೃದ್ಧಿ"ಯ ಬಯಕೆ, ಅಥವಾ ಐ-ಪ್ಯಾಕ್ ಮಾದರಿಯ ಸಲಹೆಗಾರರ ಬಗ್ಗೆ ಹತಾಶೆ ಎಂದು ಪಕ್ಷಾಂತರಿಗಳು ಮುಂದಿಡುವ ಕಾರಣಗಳು. — ಇವುಗಳಲ್ಲಿ ಸ್ವಲ್ಪ ಸತ್ಯಾಂಶ ಇರಬಹುದು. ಆದರೆ ಈ ಪಕ್ಷಾಂತರದ ಸಮಯ, ಅದರ ವ್ಯಾಪ್ತಿ ಮತ್ತು ಆಮಿಷಗಳ ಸ್ಪಷ್ಟ ಕೈಚಳಕವು ಸಂಪೂರ್ಣವಾಗಿ ಭಿನ್ನವಾದ ಕಥೆಯನ್ನು ಹೇಳುತ್ತಿವೆ.

ಸುಮಾರು 20 ಸಂಸದರು ಮತ್ತು ಉಳಿದಿರುವ ಶಾಸಕರಲ್ಲಿ ಸ್ಪಷ್ಟ ಬಹುಮತವು ಏಕ ಕಾಲದಲ್ಲಿ ಪಕ್ಷಾಂತರ ಮಾಡಿದಾಗ, ಅದು ಸಹಜವಾದ ಭಿನ್ನಾಭಿಪ್ರಾಯವಾಗಿ ಕಾಣದೆ, ವ್ಯವಸ್ಥಿತವಾಗಿ ನಡೆಸಿದ ಕಾರ್ಯಾಚರಣೆಯಂತೆ ಕಾಣುತ್ತದೆ.

ಆಟಕ್ಕೆ ಬೆಲೆ ತೆರಬೇಕಾದೀತು

ಇದಕ್ಕೆ ತೆರಬೇಕಾದ ಬೆಲೆ ಕೇವಲ ಚುನಾವಣಾ ಸೋಲು-ಗೆಲುವಿನದ್ದಲ್ಲ. "ನಿಜವಾದ" ಮತ್ತು "ನಕಲಿ" ನಿಷ್ಠಾವಂತರನ್ನು ಸಾರ್ವಜನಿಕವಾಗಿ ಬೇರ್ಪಡಿಸುವ ಈ "ಶುದ್ಧೀಕರಣ"ದ ದೃಶ್ಯಗಳನ್ನು ಸುಲಭವಾಗಿ ಅಂದಾಜಿಸಲು ಸಾಧ್ಯವಿಲ್ಲ— ಇದು ರಾಜಕೀಯ ಅನೈತಿಕತೆ ಮತ್ತು ಕುದುರೆ ವ್ಯಾಪಾರದ ಮೇಲೆ ಈಗಾಗಲೇ ಇರುವ ಆರೋಪಗಳನ್ನು ಮತ್ತಷ್ಟು ಬಲಪಡಿಸುತ್ತವೆ. ಸಾಂಸ್ಥಿಕ ಸಮಗ್ರತೆ ಮತ್ತು ಭ್ರಷ್ಟಾಚಾರ ವಿರೋಧಿ ನಿಲುವಿನ ಮೇಲೆ ತನ್ನ ರಾಷ್ಟ್ರೀಯ ಬ್ರ್ಯಾಂಡ್ ರೂಪಿಸಿರುವ ಪಕ್ಷಕ್ಕೆ, ಸಾಮೂಹಿಕ ಪಕ್ಷಾಂತರಗಳ ರೂವಾರಿಯಾಗಿ ಕಾಣಿಸಿಕೊಳ್ಳುವುದು ದೀರ್ಘಾವಧಿಯಲ್ಲಿ ವರ್ಚಸ್ಸಿಗೆ ದೊಡ್ಡ ಪೆಟ್ಟು ನೀಡಲಿದೆ.

ಇದು ಒಂದು ಪೂರ್ವನಿದರ್ಶನವನ್ನು ಸೃಷ್ಟಿಸುತ್ತದೆ. ಇಂದು ಟಿಎಂಸಿಗೆ ಏನು ಮಾಡಲಾಗಿದೆಯೋ, ಅದನ್ನು ನಾಳೆ ಯಾವುದೇ ಪಕ್ಷಕ್ಕೆ ಮಾಡಬಹುದು, ಇದು ವಿರೋಧ ಪಕ್ಷದಲ್ಲಿರುವವರಿಗೂ ಅನ್ವಯ ಆಗಬಹುದು. ಪಕ್ಷಾಂತರ ವಿರೋಧಿ ಕಾನೂನಿನ ಸ್ಫೂರ್ತಿಯನ್ನು ಕ್ರಮೇಣ ದುರ್ಬಲಗೊಳಿಸುವುದು, ಸ್ಪೀಕರ್ ಹುದ್ದೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುವುದು ಮತ್ತು ಆಮಿಷಗಳನ್ನು ಸಹಜ ಎನ್ನುವಂತೆ ಮಾಡುವುದು ಸ್ಥಿರ ಪ್ರಜಾಪ್ರಭುತ್ವಕ್ಕೆ ಅಗತ್ಯವಿರುವ ರಕ್ಷಣಾ ಕವಚಗಳನ್ನೇ ಸವೆಯುವಂತೆ ಮಾಡಲಿದೆ ಎಂಬುದರಲ್ಲಿ ಅನುಮಾನವಿಲ್ಲ.

2029ರ ವೇಳೆಗೆ, ಬಿಜೆಪಿ ಒಂದು ಸಮಸ್ಯೆಯನ್ನು ಬಗೆಹರಿಸುವ ಭರದಲ್ಲಿ ಇನ್ನೆರಡು ಹೊಸ ಸಮಸ್ಯೆಗಳನ್ನು ಸೃಷ್ಟಿಸಿಕೊಂಡಿದೆ ಎಂದರೆ ತಪ್ಪಲ್ಲ. ಮಮತಾ ಬ್ಯಾನರ್ಜಿಯಂತಹ ವರ್ಚಸ್ವಿ ಮತ್ತು ಹೋರಾಟಗಾರ ನಾಯಕಿಯ ನೇತೃತ್ವದ ಒಂದೇ ಒಂದು ಪ್ರಾದೇಶಿಕ ಎದುರಾಳಿಯನ್ನು ಎದುರಿಸುವ ಬದಲು, ಅದು ಹೆಚ್ಚು ಸೈದ್ಧಾಂತಿಕ ವೈವಿಧ್ಯತೆ ಹೊಂದಿರುವ ವಿರೋಧ ಪಕ್ಷದ ಭೂದೃಶ್ಯವನ್ನು ಎದುರಿಸಬೇಕಾಗಬಹುದು.

ತನ್ನ ರಾಷ್ಟ್ರೀಯ ಶಕ್ತಿಯೊಂದಿಗೆ ಪೂರ್ವ ಭಾರತದಲ್ಲಿ ಅಸ್ತಿತ್ವವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್, ಮತ್ತು ಸಾಂಸ್ಥಿಕ ಶಿಸ್ತು ಹಾಗೂ ದೀರ್ಘಕಾಲದ ಆಡಳಿತದ ಅನುಭವವಿರುವ ಎಡಪಕ್ಷಗಳು ನಿರ್ಲಕ್ಷಿಸಬಹುದಾದ ಶಕ್ತಿಗಳಲ್ಲ. ಅವರ ಸಂಯೋಜಿತ ಅಥವಾ ಸಮಾನಾಂತರ ಒತ್ತಡವು, ವಿಭಜಿತ ಟಿಎಂಸಿ ಎಂದಿಗೂ ಮಾಡಲಾಗದ ರೀತಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಸ್ಥಾನಗಳ ಲೆಕ್ಕಾಚಾರವನ್ನು ಜಟಿಲಗೊಳಿಸಬಹುದು.

ಎನ್ಡಿಎ ಮೈತ್ರಿಕೂಟದ ಒಳಗೆ ಈ ಬಂಡುಕೋರರು ಒಂದೇ ಗುಂಪಾಗಿ ಉಳಿಯುವ ಸಾಧ್ಯತೆ ಕಡಿಮೆ; ಕೆಲವರು ಹೊಸ ದಾರಿ ಹುಡುಕಬಹುದು, ಅಥವಾ ಮುಂದಿನ ಚೌಕಾಶಿ ಶುರುವಾದಾಗ ಅವರು ಹೊರೆಯಾಗಬಹುದು.

ಬಿಜೆಪಿಯ ರಾಜಕೀಯ ಆಧಿಪತ್ಯ ಉಳಿದೀತೇ?

ಬಂಗಾಳವು ಎಂದಿಗೂ ಶಾಶ್ವತವಾದ ಏಕಪಕ್ಷೀಯ ಪ್ರಾಬಲ್ಯವನ್ನು ಮೆಚ್ಚಿಲ್ಲ. ಇಲ್ಲಿನ ಮತದಾರರು ಅಹಂಕಾರವನ್ನು ಶಿಕ್ಷಿಸುವ ಮತ್ತು ಹೊಸತನಕ್ಕೆ ಮಣೆ ಹಾಕುವ ಸ್ಥಿರ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಟಿಎಂಸಿಯ ಅವನತಿಯು ರಾಜಕೀಯ ಅಖಾಡವನ್ನು ಸ್ವಚ್ಛಗೊಳಿಸಿರಬಹುದು, ಆದರೆ ಇದು ವಿಶ್ವಾಸಾರ್ಹ ವಿರೋಧ ಪಕ್ಷದ ಅಗತ್ಯವನ್ನು ಅಳಿಸಿಹಾಕಿಲ್ಲ. ಇದು ಕೇವಲ ಪಾತ್ರಗಳನ್ನು ಬದಲಾಯಿಸಿದೆ ಅಷ್ಟೆ.

ಎಡಪಕ್ಷಗಳು ಮತ್ತು ಕಾಂಗ್ರೆಸ್ ಈಗಾಗಲೇ ಈ ಗೊಂದಲದ ಸ್ಥಿತಿಯನ್ನು ಬಹಳ ಆಸಕ್ತಿಯಿಂದ ಗಮನಿಸುತ್ತಿವೆ. ತಮ್ಮ ಅಧಿಕಾರದ ಮೇಲೆ ಕಣ್ಣಿಟ್ಟಿದ್ದ ಅತ್ಯಂತ ಪ್ರಮುಖ ಮತ್ತು ಪ್ರಬಲವಾದ ಅಡೆತಡೆಯನ್ನು (ಟಿಎಂಸಿ) ದೂರ ಮಾಡುವ ಮೂಲಕ, ಬಿಜೆಪಿ ಹೊಸ ರೀತಿಯ ಪರ್ಯಾಯಗಳು ಹುಟ್ಟಿಕೊಳ್ಳಲು ದಾರಿ ಮಾಡಿಕೊಟ್ಟಿದೆ. ಈ ಹೊಸ ಅಡೆತಡೆಗಳು ಹೆಚ್ಚು ಕಾಲ ಉಳಿಯುವ ಸಾಧ್ಯತೆಯಿದೆ, ಏಕೆಂದರೆ ಅವು ಒಂದೇ ಪಕ್ಷದ ಸಂಘಟನಾ ಯಂತ್ರ ಅಥವಾ ಒಬ್ಬ ವ್ಯಕ್ತಿಯ ವರ್ಚಸ್ಸಿನ ಮೇಲೆ ಅವಲಂಬಿತವಾಗಿಲ್ಲ.

ಅಸಲಿ ಪರೀಕ್ಷೆಯಿರುವುದು 2026ರಲ್ಲಿ ಎಷ್ಟು ಶಾಸಕರು ಅಥವಾ ಸಂಸದರನ್ನು ಪಕ್ಷಾಂತರ ಮಾಡಿಸಬಹುದು ಎಂಬುದರಲ್ಲಿ ಅಲ್ಲ. ಬದಲಾಗಿ, ತಾವೇ ಸೃಷ್ಟಿಸಿದ ಶೂನ್ಯವನ್ನು ನಿಭಾಯಿಸಲು ಕಲಿಯದ ಶಕ್ತಿಗಳು ಆವರಿಸಿಕೊಳ್ಳದಂತೆ ತಡೆಯಬಲ್ಲ ರೀತಿಯಲ್ಲಿ ಬಿಜೆಪಿ ಬಂಗಾಳವನ್ನು ಆಳಬಲ್ಲುದೇ ಎಂಬ ಸಂಗತಿಯಲ್ಲಿದೆ. ವಿರೋಧ ಪಕ್ಷವನ್ನು ನಾಶಪಡಿಸುವುದು ಕೇವಲ ಒಂದು ತಂತ್ರವಷ್ಟೇ.

ದೀರ್ಘಕಾಲೀನ ರಾಜಕೀಯ ಆಧಿಪತ್ಯಕ್ಕೆ ಹೆಚ್ಚಿನ ಸಾಮರ್ಥ್ಯ ಬೇಕಾಗುತ್ತದೆ. ತಾವು ನಿರ್ಮೂಲನೆ ಮಾಡಿದ್ದೇವೆ ಎಂದು ಹೇಳಿಕೊಳ್ಳುವ ಪರ್ಯಾಯ ಶಕ್ತಿಗಳು ಮರುಹುಟ್ಟು ಪಡೆಯದಂತೆ ತಡೆಯುವ ಸಾಮರ್ಥ್ಯ ಬಿಜೆಪಿಗೆ ಇದೆಯೇ? ಸದ್ಯಕ್ಕೆ ಬಂಗಾಳದಲ್ಲಿ ಬಿಜೆಪಿ ಒಂದು ಮಹತ್ವದ ಯುದ್ಧವನ್ನು ಗೆದ್ದಿರಬಹುದು, ಆದರೆ ಅದು ಬಹುಮುಖಿ ರಣರಂಗಗಳಲ್ಲಿ ಮತ್ತಷ್ಟು ಸಂಕೀರ್ಣವಾದ ಯುದ್ಧಗಳ ಬೀಜ ಬಿತ್ತಿದೆಯೇ ಎಂಬ ಪ್ರಶ್ನೆಯೇ ಮುಂದಿನ ಮೂರು ವರ್ಷಗಳ ರಾಜಕೀಯವನ್ನು ನಿರ್ಧರಿಸಲಿದೆ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story