TK Arun

ತಳಮುಖಿ ರೂಪಾಯಿ ಮೇಲೆ ರಫ್ತಿನ ಬರೋಬ್ಬರಿ ಸವಾರಿ


ತಳಮುಖಿ ರೂಪಾಯಿ ಮೇಲೆ ರಫ್ತಿನ ಬರೋಬ್ಬರಿ ಸವಾರಿ
x
ಕರೆನ್ಸಿ ಅತಿ ಮೌಲ್ಯಕ್ಕೆ ಒಳಗಾದಾಗ ಆಮದು ಮಾಡಿಕೊಳ್ಳುವ ಸರಕುಗಳು ನ್ಯಾಯಯುತ ವಿನಿಮಯ ದರಕ್ಕಿಂತ ಅಗ್ಗವಾಗುತ್ತವೆ. ಆದರೆ ಅಪಮೌಲ್ಯಕ್ಕೆ ಒಳಗಾದ ಕರೆನ್ಸಿ ರಫ್ತುಗಳನ್ನು ನ್ಯಾಯಯುತ ವಿನಿಮಯ ದರಕ್ಕಿಂತ ಅಗ್ಗವಾಗಿ ಮಾಡುತ್ತದೆ.
Click the Play button to hear this message in audio format

ಹಣದುಬ್ಬರಕ್ಕೆ ಅನುಗುಣವಾಗಿ ಹೊಂದಿಕೆ ಮಾಡಲಾದ ಬಡ್ಡಿಯ ನೈಜ ದರವು ಹೂಡಿಕೆಯನ್ನು ಉತ್ತೇಜಿಸಲು ತೀರಾ ಹೆಚ್ಚಾಗಿದೆ, ಮತ್ತು ಮೂಲಸೌಕರ್ಯದ ನಿರ್ಮಾಣಕ್ಕಾಗಿ ಸರ್ಕಾರವು ಭರವಸೆ ನೀಡಿದ ಸಾರ್ವಜನಿಕ ಖಾಸಗಿ ಸಹಭಾಗಿತ್ವ ನೀತಿಯನ್ನು ಇನ್ನೂ ಪ್ರಕಟಿಸಿಲ್ಲ.

ರೂಪಾಯಿ ಮೌಲ್ಯ ಕುಸಿಯುತ್ತಿರುವ ಬಗ್ಗೆ ತಮಗೆ ಯಾವುದೇ ಚಿಂತೆ ಇಲ್ಲ ಎಂದು ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತ್ ನಾಗೇಶ್ವರನ್ ಅವರು ಹೇಳಿದ್ದಾರೆ. ಅವರಿಗೆ ಸುದೀರ್ಘ ರಾತ್ರಿಯ ನೆಮ್ಮದಿಯ ನಿದ್ರೆ ಪ್ರಾಪ್ತವಾಗಲಿ ಎಂದು ನಾವು ಹಾರೈಸೋಣ. ಸ್ವತಃ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬಾಂಕ್ ತಣ್ಣಗೆ ವಿಶ್ರಾಂತಿಗೆ ಜಾರಿರುವಾಗ ಟ್ರಂಪ್ ಅವರು ಹೇರಿರುವ ಸುಂಕಗಳ ರಂಪಾಟದಿಂದ ನೊಂದಿರುವ ನಮ್ಮ ರಫ್ತುದಾರರಿಗೆ ಒಂದಷ್ಟು ನೆಮ್ಮದಿ ನೀಡಲು ರೂಪಾಯಿ ಸತತ ಒದ್ದಾಟ ನಡೆಸುತ್ತಿದೆ.

ಕರೆನ್ಸಿ ಅತಿಯಾದ ಮೌಲ್ಯಕ್ಕೆ ಒಳಗಾದಾಗ ಆಮದು ಮಾಡಿಕೊಳ್ಳುವ ಸರಕುಗಳು ನ್ಯಾಯಯುತ ವಿನಿಮಯ ದರಕ್ಕಿಂತ ಅಗ್ಗವಾಗುತ್ತವೆ. ಆದರೆ ಅಪಮೌಲ್ಯಕ್ಕೆ ಒಳಗಾದ ಕರೆನ್ಸಿಯ ಕಾರಣದಿಂದಾಗಿ ರಫ್ತುಗಳನ್ನು ನ್ಯಾಯಯುತ ವಿನಿಮಯ ದರಕ್ಕಿಂತ ಅಗ್ಗವಾಗಿ ಮಾಡುತ್ತವೆ. ಹಾಗಿದ್ದೂ ಬೆಳವಣಿಗೆಯ ಗತಿಯನ್ನು ಕಾಯ್ದುಕೊಳ್ಳಲು ಹತ್ತು ತಿಂಗಳ ಹಿಂದೆ ಬಜೆಟ್ನಲ್ಲಿ ಭರವಸೆ ನೀಡಲಾಗಿದ್ದ ಮೂಲಸೌಕರ್ಯ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಯನ್ನು ಹೆಚ್ಚಿಸಲು ಸರ್ಕಾರವು ಸಾರ್ವಜನಿಕ-ಖಾಸಗಿ ಪಾಲುದಾರಿಕೆ ನೀತಿಯನ್ನು ಘೋಷಣೆ ಮಾಡಲು ಈಗಲಾದರೂ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ.

ಅಂದು ಲೇವಡಿ ಮಾಡಿದವರು…

ಮೊಟ್ಟಮೊದಲನೆಯದಾಗಿ ಡಾಲರ್ ಎದುರು ರೂಪಾಯಿ ಮೌಲ್ಯವು ಕುಸಿಯುತ್ತಿರುವ ಬಗ್ಗೆ ಇರುವ ಆತಂಕವು ಮಿತಿಮೀರಿದ್ದು ಎಂಬುದನ್ನು ನಾವು ಒಪ್ಪಿಕೊಳ್ಳೋಣ. ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಜಾಗತಿಕ ಹಣಕಾಸು ಬಿಕ್ಕಟ್ಟು ಮತ್ತು ಅದರ ನಂತರದ ‘ಕೋಪ-ತಾಪ’ಗಳ ಕಾಲಘಟ್ಟದಲ್ಲಿ ರೂಪಾಯಿ ಕುಸಿತವನ್ನು ಗೇಲಿ ಮಾಡಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ದೂಷಿಸಿದ್ದರು. ಆಗ ಅವರು ಮಾಡಿದ ಆ ಬೊಗಳೇ ಟೀಕೆಯನ್ನು ಅವರಿಗೆ ಈಗ ನೆನಪು ಮಾಡಿಕೊಡುವುದು ಕಾವ್ಯಾತ್ಮಕ ನ್ಯಾಯವಾಗಿದೆ.

ಆದರೂ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳಿಂದಾಗಿ ರೂಪಾಯಿಗೆ ನಷ್ಟವಾದರೆ, ಮೋದಿ ಅವರು ಮಾಡಲು ಸಾಧ್ಯವಿರುವುದು ತೀರಾ ಅತ್ಯಲ್ಪ. ರೂಪಾಯಿಯ ನಾಮಮಾತ್ರ ಸವಕಳಿಯು ಅದರ ವಾಸ್ತವಿಕ ಸವಕಳಿಗಿಂತ ತೀಕ್ಷ್ಣ ಸ್ವರೂಪದ್ದಾಗಿದೆ ಎಂಬುದನ್ನು ಕೂಡ ನಾವು ಗಮನದಲ್ಲಿ ಇಟ್ಟುಕೊಳ್ಳಬೇಕು.

ರೂಪಾಯಿಯ ನಾಮಮಾತ್ರ ಪರಿಣಾಮಕಾರಿ ವಿನಿಮಯ ದರ (NEER)ವು ಆರು ಪ್ರಮುಖ ಕರೆನ್ಸಿಗಳ ವಾಣಿಜ್ಯ-ಆದ್ಯತಾ ಸರಾಸರಿಯಿಂದ ಲೆಕ್ಕಹಾಕಿದ ಸೂಚ್ಯಂಕವಾಗಿದ್ದು, 2022-23ರಲ್ಲಿ ಇದನ್ನು 100ಕ್ಕೆ ನಿಗದಿಪಡಿಸಲಾಗಿತ್ತು. ಅದು ಅಕ್ಟೋಬರ್ ತಿಂಗಳಿನಲ್ಲಿ ಶೇ.10 ಕ್ಕಿಂತ ಸ್ವಲ್ಪ ಹೆಚ್ಚು ಕುಸಿದು 89. 13ಕ್ಕೆ ಬಂದು ತಲುಪಿದೆ.

ಆದಾಗ್ಯೂ, ಏಷ್ಯಾದ ಕೆಲವು ಕರೆನ್ಸಿಗಳು ಡಾಲರ್ ಎದುರು ಬಲಗೊಂಡಿವೆ, ಅಂದರೆ ರೂಪಾಯಿಯು ಡಾಲರ್ ಎದುರು ಕುಸಿದಿರುವುದಕ್ಕಿಂತ ಈ ಕರೆನ್ಸಿಗಳ ಎದುರು ಕುಸಿದಿರುವ ಪ್ರಮಾಣ ಇನ್ನೂ ಅಧಿಕ. ಭಾರತವು ಡಾಲರ್-ಮೂಲದ ರಫ್ತುಗಳಿಗಾಗಿ ಈ ಕೆಲವು ದೇಶಗಳೊಂದಿಗೆ ಪೈಪೋಟಿಗೆ ಇಳಿಯುವುದರಿಂದ ರೂಪಾಯಿಯ ಸವಕಳಿಯು ಭಾರತೀಯ ರಫ್ತುಗಳಿಗೆ ಸಹಾಯ ಮಾಡುತ್ತದೆ.

ಡಾಲರ್ ರೂಪದಲ್ಲಿಯೇ ಬೆಲೆ ನಿಗದಿ

ರೂಪಾಯಿಯ ವಿನಿಮಯ ದರದಲ್ಲಿ ಉಂಟಾಗಿರುವ ಶೇ.10ರಷ್ಟು ಕುಸಿತವು, ಅಮೆರಿಕಕ್ಕೆ ರಫ್ತು ಮಾಡುವ ಸಂದರ್ಭದಲ್ಲಿ ಭಾರತದ ಮೇಲೆ ವಿಧಿಸಲಾದ ಶೇ.50 ರಷ್ಟು ಸುಂಕ ಮತ್ತು ಅಮೆರಿಕಕ್ಕೆ ರಫ್ತು ಮಾಡುವ ಬಹುತೇಕ ಇತರ ದೇಶಗಳ ಮೇಲೆ ವಿಧಿಸಲಾದ ಶೇ.15 ರಷ್ಟು ಸುಂಕದ ನಡುವಿನ ಶೇ.35ರಷ್ಟು ವ್ಯತ್ಯಾಸವನ್ನು ಸರಿದೂಗಿಸುವುದಿಲ್ಲ. ಆದರೂ, ಇದು ಭಾರತೀಯ ರಫ್ತುದಾರರಿಗೆ ಅಮೆರಿಕವನ್ನು ಹೊರತುಪಡಿಸಿ ಇತರ ರಫ್ತು ಮಾರುಕಟ್ಟೆಗಳನ್ನು ಗುರಿಯಾಗಿ ಮಾಡಿಕೊಳ್ಳಲು ಸಹಕಾರಿ. ರಫ್ತುದಾರರು ಯಾರೇ ಆಗಿರಲಿ ಮತ್ತು ಆಮದುದಾರರು ಯಾರೇ ಆಗಿರಲಿ, ಪ್ರಮಾಣದ ಆಧಾರದಲ್ಲಿ, ಎಲ್ಲಾ ವ್ಯಾಪಾರದ ಶೇ.60ಕ್ಕಿಂತ ಹೆಚ್ಚು ವಹಿವಾಟುಗಳು, ಡಾಲರ್ ರೂಪದಲ್ಲಿಯೇ ಬೆಲೆಯನ್ನು ನಿಗದಿಪಡಿಸುತ್ತವೆ.

ಆರ್ಬಿಐ ರೆಪೋ ದರವನ್ನು ಕೇವಲ 25 ಮೂಲ ಅಂಕಗಳಷ್ಟು ಕಡಿತಗೊಳಿಸಿದ್ದು, ತೀವ್ರ ನೈಜ ಬಡ್ಡಿ ದರವನ್ನು ಕಾಯ್ದುಕೊಂಡಿದೆ. ನೈಜ ಬಡ್ಡಿ ದರ ಎಂದರೆ ನಾಮಮಾತ್ರ ಬಡ್ಡಿ ದರ—ಅಂದರೆ, ನೀವು ಮತ್ತು ನಾನು ಸಾಲ ತೆಗೆದುಕೊಂಡಾಗ ಪಾವತಿಸುವ ದರ—ಮತ್ತು ಇವುಗಳ ನಡುವಿನ ವ್ಯತ್ಯಾಸವೇ ಹಣದುಬ್ಬರ ದರ.

ಬಡ್ಡಿದರದ ಅಸಲಿ ರೂಪ

ನೈಜ ಬಡ್ಡಿ ದರವು ಋಣಾತ್ಮಕವಾಗಿದ್ದರೆ, ಅಂದರೆ ನಮ್ಮ ಸಾಲಗಳ ಮೇಲಿನ ಬಡ್ಡಿ ದರವು ಹಣದುಬ್ಬರ ದರಕ್ಕಿಂತ ಕಡಿಮೆಯಿದ್ದರೆ, ಸಾಲದಾತರು ತಮ್ಮಲ್ಲಿರುವ ನಿಧಿಯನ್ನು ಸಾಲ ರೂಪದಲ್ಲಿ ನೀಡುವ ಮೂಲಕ, ತಮ್ಮ ಸ್ವತ್ತುಗಳ ನೈಜ ಮೌಲ್ಯದಲ್ಲಿ ಇಳಿಕೆಯನ್ನು ಅನುಭವಿಸುತ್ತಾರೆ. ಒಂದು ವೇಳೆ ನೈಜ ಬಡ್ಡಿ ದರವು ಹಣದುಬ್ಬರ ದರಕ್ಕೆ ಸಮಾನವಾಗಿದ್ದರೆ, ಸಾಲ ನೀಡುವವರು ಶೂನ್ಯ ನೈಜ ಆದಾಯವನ್ನು ಪಡೆಯುತ್ತಾರೆ.

ಸಾಮಾನ್ಯವಾಗಿ, ನೈಜ ಬಡ್ಡಿ ದರವು ಸುಮಾರು ಶೇ.2ರಷ್ಟು ಇರಬೇಕು. ಹಣದುಬ್ಬರವು ಶೇ.1.5ರಷ್ಟು ಇದ್ದರೆ, ನಾಮಮಾತ್ರ ಬಡ್ಡಿ ದರವು ಸುಮಾರು ಶೇ.3.5ರಷ್ಟು ಇರಬೇಕು. ಆರ್ಬಿಐ ಬ್ಯಾಂಕುಗಳಿಗೆ ಹಣವನ್ನು ಸಾಲವಾಗಿ ನೀಡುವ ರೆಪೋ ದರವು ಶೇ.5.25ರಷ್ಟು ಇದ್ದರೆ, ಒಂದು ಬ್ಯಾಂಕ್ನಿಂದ ಇನ್ನೊಂದು ಬ್ಯಾಂಕ್ಗೆ ರಾತ್ರಿಯ ಸಾಲ (overnight loan)ಗಳ ಮಾರುಕಟ್ಟೆಯಾದ ಕಾಲ್ ಮನಿ ದರವು ಅದರ ಸುತ್ತಲೂ ಸುತ್ತುತ್ತಿರುತ್ತದೆ.

ಬ್ಯಾಂಕುಗಳು ಸಾಲಗಾರರಿಗೆ ಸಾಲವಾಗಿ ಕೊಡುವ ದರವು, ಸಾಲಗಾರರ ಅಪಾಯದ ಮಟ್ಟಕ್ಕೆ ಅನುಗುಣವಾಗಿ ಹೆಚ್ಚುವರಿ ಶುಲ್ಕಗಳನ್ನು (ಪ್ರೀಮಿಯಂ) ಸೇರಿಸಿ, ಮೇಲೆ ಪ್ರಸ್ತಾಪ ಮಾಡಿದ ದರಕ್ಕಿಂತ ಸಾಕಷ್ಟು ಹೆಚ್ಚಾಗಿರುತ್ತದೆ.

ಅಕ್ಟೋಬರ್‌ ತಿಂಗಳಿನಲ್ಲಿ ಹಣದುಬ್ಬರ ದರವು ಶೇ.0.25ರಷ್ಟಿತ್ತು. ಅಂದರೆ, ಸಾಲಗಾರರಿಗೆ ಇರುವ ನೈಜ ಬಡ್ಡಿ ದರದಲ್ಲಿ ತೀವ್ರ ಇಳಿಕೆಯಾಗಿದೆ. ಮುಂಬರುವ ತಿಂಗಳುಗಳಲ್ಲಿ ಹಣದುಬ್ಬರವು ಇಷ್ಟು ಕಡಿಮೆ ಪ್ರಮಾಣದಲ್ಲಿಯೇ ಉಳಿಯುವುದಿಲ್ಲ ಎಂಬುದು ಖಚಿತ. ಆದರೆ, ಸದ್ಯೋ ಭವಿಷ್ಯದಲ್ಲಿ ಹಣದುಬ್ಬರ ದರವು ಶೇ.4ರ ಪ್ರಮಾಣವನ್ನೂ ಮೀರಿ ಏರುತ್ತದೆ ಎಂಬ ನೀರೀಕ್ಷೆಯಂತೂ ಆರ್.ಬಿ.ಐಗೆ ಇಲ್ಲ.

ಮುಕ್ತ ಮಾರುಕಟ್ಟೆ ಕಾರ್ಯಾಚರಣೆ

ಆರ್.ಬಿ.ಐ ರೆಪೋ ದರವನ್ನು ಕಾಲು ಪ್ರತಿಶತಕ್ಕಿಂತಲೂ ಹೆಚ್ಚು ಕಡಿಮೆ ಮಾಡಬಹುದಿತ್ತು. ಬಹುಶಃ, ಬಡ್ಡಿ ದರ ಕಡಿಮೆಯಾಗುವುದರಿಂದ ರೂಪಾಯಿ ಮೌಲ್ಯವು ಮತ್ತಷ್ಟು ಇಳಿಯುವಂತೆ ಮಾಡುವ ಮತ್ತೊಂದು ಪ್ರಚೋದಕ ಶಕ್ತಿಯಾಗದಂತೆ ತಡೆಯುವುದು ಅದರ ಪ್ರಯತ್ನವಾಗಿರಬಹುದು. ಇದೇ ವೇಳೆ ವಿನಿಮಯ ದರವನ್ನು ಇನ್ನಷ್ಟು ಹಗುರವಾಗಿಡಲು ಅದು ಕರೆನ್ಸಿ ಮಾರುಕಟ್ಟೆಗಳಲ್ಲಿ ಮಧ್ಯಪ್ರವೇಶ ಮಾಡಬಹುದು ಮತ್ತು ಆರ್ಬಿಐ ಕರೆನ್ಸಿ ಮಾರುಕಟ್ಟೆಯಲ್ಲಿ ಮುಕ್ತ ಮಾರುಕಟ್ಟೆ ಕಾರ್ಯಾಚರಣೆ ನಡೆಸುವುದಾಗಿಯೂ ಹೇಳಿದೆ.

ಭಾರತವು ಚಾಲ್ತಿ ಖಾತೆ ಕೊರತೆಯ ನಿರ್ವಹಣೆ ಮಾಡಬೇಕಾಗಿದೆ, ಸಾಮಾನ್ಯವಾಗಿ ತೈಲವು ಒಂದು ಪ್ರಮುಖ ಆಮದು. ರೂಪಾಯಿ ಅಪಮೌಲ್ಯಗೊಂಡಂತೆ, ರೂಪಾಯಿ ಲೆಕ್ಕದಲ್ಲಿ ಅದರ ಬೆಲೆ ಹೆಚ್ಚಾಗುತ್ತದೆ. ರೂಪಾಯಿ ಕುಸಿಯಲು ಮತ್ತು ಬೆಲೆ ಮಟ್ಟದಲ್ಲಿ ಏರಿಕೆ ಉಂಟಾಗಲು ಆರ್‌.ಬಿ.ಐ ಸಿದ್ಧವಾಗಿದೆಯೇ? ಹೌದು ಅದು ಸಿದ್ಧವಾಗಿದೆ ಎಂದು ಹೇಳುತ್ತದೆ.

ಸದ್ಯದ ಮಟ್ಟಿಗೆ ಹಣದುಬ್ಬರ ಸಾಕಷ್ಟು ಕಡಿಮೆ ಪ್ರಮಾಣದಲ್ಲಿದೆ, ಹಾಗಾಗಿ ಅದು ಒಂದೆರಡು ಶೇಕಡಾ ಪಾಯಿಂಟ್‌ಗಳಷ್ಟು ಹೆಚ್ಚಾದರೂ, ದೊಡ್ಡ ಮಟ್ಟದ ತಳಮಳವನ್ನೇನೂ ಉಂಟು ಮಾಡುವುದಿಲ್ಲ ಎಂಬುದು ಅತ್ಯಂತ ಸೌಮ್ಯ ವಿಶ್ಲೇಷಣೆ. ಹಣದುಬ್ಬರ ಏರಿಕೆಗೆ ಅವಕಾಶ ನೀಡುವ ಬಹುಮುಖ್ಯ ಕಾರಣವೆಂದರೆ - ರಫ್ತುಗಳನ್ನು ಹೆಚ್ಚಿಸುವ ವೆಚ್ಚವನ್ನು ಸಮಾಜದ ಉದ್ದಗಲಕ್ಕೂ ಹಂಚುವುದು.

ಕೊಳ್ಳುವ ಶಕ್ತಿಗೆ ಕಡಿವಾಣ

ವಿನಿಮಯ ದರದಲ್ಲಿ ಕುಸಿತ ಉಂಟಾಗುವುದರಿಂದ ವಿದೇಶಿ ಮಾರುಕಟ್ಟೆಗಳಲ್ಲಿ ರಫ್ತನ್ನು ಅಗ್ಗವಾಗಿ ಮಾಡುತ್ತದೆ, ಆದರೆ ಆಮದು ಮಾಡಿಕೊಂಡ ಇಂಧನ ಮತ್ತು ಇತರ ಕಚ್ಚಾ ವಸ್ತುಗಳನ್ನು ಹೆಚ್ಚು ದುಬಾರಿಯಾಗಿಸಿ, ಹಣದುಬ್ಬರಕ್ಕೆ ಕುಮ್ಮುಕ್ಕು ನೀಡುತ್ತದೆ. ಹಣದುಬ್ಬರವು ನಿಶ್ಚಿತ ಆದಾಯ ಹೊಂದಿರುವ ಎಲ್ಲ ಜನರ, ಅಂದರೆ ನಮ್ಮಲ್ಲಿ ಹೆಚ್ಚಿನವರ (ಯಾರು ವೇತನ ಅಥವಾ ದೈನಂದಿನ/ವಾರದ ಕೂಲಿ ಗಳಿಸುತ್ತಾರೋ, ಅಥವಾ ಪಿಂಚಣಿ ಅಥವಾ ನಿಶ್ಚಿತ ವರ್ಷಾಶನದಲ್ಲಿ ಬದುಕುತ್ತಾರೋ ಅವರ) ಕೊಳ್ಳುವ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಕಾಲಕ್ರಮೇಣ ತುಟ್ಟಿ ಭತ್ಯೆಯನ್ನು ಸೇರಿಸಿದರೂ ಕೂಡ ಮಧ್ಯಂತರ ಅವಧಿಯಲ್ಲಿ, ನೈಜ ಬಳಕೆಯನ್ನು ಕಡಿಮೆಯಾಗುತ್ತದೆ.

ಸರ್ಕಾರವೇನಾದರೂ ರಫ್ತುದಾರರಿಗೆ ಆರ್ಥಿಕ ನೆರವು ನೀಡುವ ಮೂಲಕ ರಫ್ತಿನ ಪ್ರ,ಮಾಣವನ್ನು ಹೆಚ್ಚಿಸಿದರೆ, ಅದು ವಿದೇಶಿ ರಾಜಧಾನಿಗಳಲ್ಲಿ ವ್ಯಾಪಾರವನ್ನು ವಿಕೃತಗೊಳಿಸುವ ಸಬ್ಸಿಡಿ ಎಂಬ ಟೀಕೆಗೆ ಒಳಗಾಗುತ್ತದೆ. ಏನೇ ಆದರೂ, ಸರ್ಕಾರವು ಆ ರಫ್ತಿಗೆ ಪ್ರೋತ್ಸಾಹ ನೀಡಲು ಸಾಲ ಮಾಡಲೇ ಬೇಕಾಗುತ್ತದೆ. ಹಾಗೇನಾದರೂ ಮಾಡಿದರೆ ಅದರಿಂದ ವಿತ್ತೀಯ ಕೊರತೆ ಹೆಚ್ಚುತ್ತದೆ, ಸರ್ಕಾರದ ಕಾರ್ಯನಿರ್ವಹಣೆಯ ಸ್ವಾತಂತ್ರ್ಯವನ್ನು ನಿರ್ಬಂಧಿಸುತ್ತದೆ ಮತ್ತು ಆರ್ಥ ವ್ಯವಸ್ಥೆಯಲ್ಲಿ ಹೆಚ್ಚುವರಿ ಬೇಡಿಕೆಯನ್ನು ಸೃಷ್ಟಿಸಿ ಹಣದುಬ್ಬರಕ್ಕೆ ಉತ್ತೇಜನ ನೀಡುವ ಸಾಮರ್ಥ್ಯವನ್ನು ಸೃಷ್ಟಿಸುತ್ತದೆ.

ಹಣಕಾಸಿನ ಬೆಂಬಲದ ಮೂಲಕ ಅಥವಾ ಅಗ್ಗದ ರೂಪಾಯಿಯ ಮೂಲಕ ರಫ್ತುಗಳಿಗೆ ಹೆಚ್ಚುವರಿ ಉತ್ತೇಜನ ನೀಡುವುದರಿಂದ ಹಣದುಬ್ಬರವು ತೀರಾ ಕಡಿಮೆ ಇರುವ ಸಂದರ್ಭದಲ್ಲಿ ಅದನ್ನು ಹೆಚ್ಚಿಸುವುದೇ ಆಗಿದ್ದರೆ, ರಫ್ತುದಾರರಿಗೆ ಸಹಾಯ ಮಾಡಲು ಎರಡೂ ಮಾರ್ಗಗಳನ್ನು ಯಾಕೆ ಅಳವಡಿಸಿಕೊಳ್ಳಬಾರದು?

ವಿದೇಶಿ ವಿನಿಮಯ ಮಾರಾಟದ ಪರಿಣಾಮ

ಕಡಿಮೆ ಬಂಡವಾಳದ ಒಳಹರಿವು ಮತ್ತು ಅರ್ಥ ವ್ಯವಸ್ಥೆಯ ಸ್ಥಿರವಾದ ಬಂಡವಾಳದ ಹೊರಹರಿವು ಇರುವುದರಿಂದಲೂ ರೂಪಾಯಿ ಕುಸಿಯುತ್ತಿದೆ. ನಿವ್ವಳ ಹರಿವೇನಾದರೂ ಹೊರಮುಖವಾಗಿದ್ದರೆ, ಡಾಲರ್ಗಳ ಬೇಡಿಕೆಯು ಹೆಚ್ಚಾಗುತ್ತದೆ, ಇದರಿಂದ ರೂಪಾಯಿ ಮೌಲ್ಯ ತಗ್ಗುತ್ತದೆ. ಸಹಜವಾಗಿ, ಆರ್ಬಿಐ ತನ್ನ ವಿದೇಶಿ ವಿನಿಮಯ ಮೀಸಲು ನಿಧಿಯಿಂದ ವಿದೇಶಿ ವಿನಿಮಯ ಮಾರುಕಟ್ಟೆಗೆ ಡಾಲರ್ಗಳನ್ನು ಪೂರೈಸಬೇಕಾದ ಅವಶ್ಯಕತೆ ಬರಬಹುದು.

ಆರ್ಬಿಐ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ಗಳನ್ನು ಮಾರಾಟ ಮಾಡಿದಾಗ, ಖರೀದಿದಾರರು ಸಮಾನ ಮೌಲ್ಯವಿರುವ ರೂಪಾಯಿಗಳನ್ನು ಆರ್ಬಿಐಗೆ ಹಸ್ತಾಂತರಿಸುತ್ತಾರೆ, ಅಂದರೆ ಆರ್ಬಿಐನ ವಿದೇಶಿ ವಿನಿಮಯ ಮಾರಾಟದಿಂದ ಹಣದ ಪೂರೈಕೆ ಕಡಿಮೆಯಾಗುತ್ತದೆ, ಇದು ಸಂಭಾವ್ಯವಾಗಿ ಇಳುವರಿಗಳನ್ನು ಹೆಚ್ಚಿಸುವ ಸಂಭವವಿರುತ್ತದೆ.

ಸದ್ಯಕ್ಕೆ, ಅರ್ಥ ವ್ಯವಸ್ಥೆಯಲ್ಲಿನ ಒಟ್ಟು ಸ್ಥಿರ ಬಂಡವಾಳ ರಚನೆಯು ಜಿಡಿಪಿಯ ಶೇ.30.5ರಷ್ಟು ಕಡಿಮೆ ಮಟ್ಟದಲ್ಲಿ ಸ್ಥಗಿತಗೊಂಡಿದೆ. ಇದರ ಜೊತೆಗೆ, ಪ್ರಸ್ತುತ ಹಣಕಾಸು ವರ್ಷದಲ್ಲಿ ಬ್ಯಾಂಕ್ ಸಾಲದ ಬೆಳವಣಿಗೆ ದರವು ಕೇವಲ ಶೇ.6 ರಷ್ಟಿದ್ದು, ಇದು ಜಿಡಿಪಿಯ ಒಟ್ಟಾರೆ ನಾಮಮಾತ್ರ ಬೆಳವಣಿಗೆ ದರಕ್ಕಿಂತ ತೀರಾ ಕಡಿಮೆಯಾಗಿದೆ. ಹೀಗಿರುವಾಗ, ಮಾರುಕಟ್ಟೆಯಲ್ಲಿ ಇಳುವರಿಗಳನ್ನು ಹೆಚ್ಚಿಸುವುದು ಸರಿಯಾದ ನಿರ್ಧಾರವಲ್ಲ. ಜೊತೆಗೆ ಇದು ಸರ್ಕಾರದ ಬಡ್ಡಿ ಪಾವತಿ ಹೊರೆಯನ್ನು ಮತ್ತಷ್ಟು ಹದಗೆಡಿಸುತ್ತದೆ.

ಹಾಗಾಗಿ ಆರ್ಬಿಐ ವಿದೇಶಿ ವಿನಿಮಯವನ್ನು ಮಾರಾಟ ಮಾಡಿದಾಗ, ಮಾರುಕಟ್ಟೆಯಲ್ಲಿ ರೂಪಾಯಿ ಪೂರೈಕೆ ತಗ್ಗುತ್ತದೆ. ಇದನ್ನು ಸರಿದೂಗಿಸಲು ಮತ್ತು ಆರ್ಥಿಕತೆಯಲ್ಲಿ ಹಣದ ಕೊರತೆಯಾಗದಂತೆ ತಡೆಯಲು, ಮುಕ್ತ ಮಾರುಕಟ್ಟೆ ಕಾರ್ಯಾಚರಣೆ (OMO) ನಡೆಸುತ್ತದೆ (ಅಂದರೆ ಮುಕ್ತ ಮಾರುಕಟ್ಟೆಯಲ್ಲಿ ಸರ್ಕಾರಿ ಬಾಂಡ್ಗಳ ಖರೀದಿ). ಇದರ ಪರಿಣಾಮವಾಗಿ ಈ ಹೊಸ ರೂಪಾಯಿಗಳು ಮಾರುಕಟ್ಟೆಗೆ ಬಿಡುಗಡೆಯಾಗಿ, ಮೊದಲಿಗೆ ಕಡಿಮೆಯಾಗಿದ್ದ ಹಣದ ಪೂರೈಕೆಯನ್ನು ಮತ್ತೆ ಹೆಚ್ಚಿಸುತ್ತವೆ.

ಮೂಲಸೌಕರ್ಯದ ಹೂಡಿಕೆ

ತೀರಾ ಇತ್ತೀಚಿನ ವಿತ್ತೀಯ ನೀತಿಯ ಕುರಿತು ಆರ್ಬಿಐ ಗವರ್ನರ್ ಅವರ ಹೇಳಿಕೆಯು, ಕರೆನ್ಸಿ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶ ಮಾಡುವುದರ ಜೊತೆಗೆ, ಮುಕ್ತ ಮಾರುಕಟ್ಟೆ ಕಾರ್ಯಾಚರಣೆ (OMO) ಮೂಲಕ ₹1,00,000 ಕೋಟಿ ಮೌಲ್ಯದ ಬಾಂಡ್ಗಳನ್ನು ಖರೀದಿಸಿ, ಹಣವನ್ನು ತುಂಬಿಸುವ ಮಾಡುವುದಾಗಿ ತಿಳಿಸುತ್ತದೆ.

ಇಷ್ಟೆಲ್ಲದರ ಹೊರತಾಗಿಯೂ, ಕೇವಲ ಹಣದ ಲಭ್ಯತೆಯನ್ನು ಖಚಿತಪಡಿಸುವುದು ಮತ್ತು ಬಡ್ಡಿ ದರಗಳಲ್ಲಿ ಬದಲಾವಣೆ ಮಾಡುವುದರಿಂದ ಸ್ಥಗಿತಗೊಂಡಿರುವ ಹೂಡಿಕೆಗೆ ಚೈತನ್ಯವನ್ನು ತುಂಬಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಒಂದು ಉತ್ತಮ ಆರಂಭವೆಂದರೆ, ಮೂಲಸೌಕರ್ಯದಲ್ಲಿ ಖಾಸಗಿ ಹೂಡಿಕೆಗಾಗಿ ಬಹಳ ಕಾಲದಿಂದ ವಿಳಂಬವಾಗಿರುವ ಪಿಪಿಪಿ ನೀತಿಯನ್ನು ಪ್ರಕಟಿಸುವುದು.

ಉತ್ಪಾದನಾ ಸಾಮರ್ಥ್ಯದ ಬಳಕೆ ಸರಿಸುಮಾರು ಶೇ. 75 ರಷ್ಟಿದೆ, ಆದ್ದರಿಂದ ಕೈಗಾರಿಕೆಗಳಿಗೆ ತಮ್ಮದೇ ಆದ ಉತ್ಪಾದನಾ ಸಾಮರ್ಥ್ಯವನ್ನು ತಕ್ಷಣ ಹೆಚ್ಚಿಸುವ ಅಗತ್ಯವಿಲ್ಲ. ಆದರೆ, ಅಂತಹ ಹೂಡಿಕೆಗಾಗಿ ಒಂದು ಕಾರ್ಯಸಾಧುವಾದ ನೀತಿ ಚೌಕಟ್ಟನ್ನು ರಚಿಸಿದರೆ, ಅದರಿಂದ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಬಹುದು.

Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ದ ಫೆಡರಲ್‌ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story