ದ. ಏಷ್ಯಾ ರಾಜಕೀಯದ ದಿಕ್ಕು ಬದಲಿಸಿದ ಭಾರತ-ತಾಲಿಬಾನ್ ಒಪ್ಪಂದ: ಪಾಕಿಸ್ತಾನ ಗಂಟಲಲ್ಲಿ  ಬಿಸಿತುಪ್ಪ
x
ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಆಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುಸ್ತಕಿ ಜೊತೆ ಮಾತುಕತೆ ನಡೆಸಿದ ಭಾರತ ವಿದೇಶಾಂಗ ಸಚಿವ ಎಸ್.ಜೈಶಂಕರ್.

ದ. ಏಷ್ಯಾ ರಾಜಕೀಯದ ದಿಕ್ಕು ಬದಲಿಸಿದ ಭಾರತ-ತಾಲಿಬಾನ್ ಒಪ್ಪಂದ: ಪಾಕಿಸ್ತಾನ ಗಂಟಲಲ್ಲಿ ಬಿಸಿತುಪ್ಪ

ತಾಲಿಬಾನ್ ಸರ್ಕಾರ ಪಾಕಿಸ್ತಾನದ ಭಾವನಾತ್ಮಕ ಬಿಗಿಹಿಡಿತದಿಂದ ಬಿಡಿಸಿಕೊಂಡು ಇತರ ರಾಷ್ಟ್ರಗಳೊಂದಿಗೆ, ವಿಶೇಷವಾಗಿ ದಕ್ಷಿಣ ಏಷ್ಯಾ ಪ್ರದೇಶದಲ್ಲಿ ತೊಡಗಿಸಿಕೊಳ್ಳಲು ಉತ್ಸುಕವಾಗಿದೆ.


Click the Play button to hear this message in audio format

1999ರಲ್ಲಿ ಕಂದಾಹಾರ್ ನಲ್ಲಿ ಇಂಡಿಯನ್ ಏರ್-ಲೈನ್ಸ್ IC-814 ವಿಮಾನವನ್ನು ಹೈಜಾಕ್ ಮಾಡಿದಾಗ ಈ ತಾಲಿಬಾನಿಗಳು ಕೂಡ ಮುಂದೊಂದು ದಿನ ಪಾಕಿಸ್ತಾನದಿಂದ ದೂರ ಸರಿದು ಭಾರತದೊಂದಿಗೆ ಸ್ಹೇಹಶೀಲರಾಗುವ ಸಾಧ್ಯತೆಯಿದೆ ಎಂದು ಅಪಾರ ಭವಿಷ್ಯಜ್ಞಾನವುಳ್ಳವರು ಕೂಡ ಅಂದುಕೊಂಡಿರಲು ಸಾಧ್ಯವಿರಲಿಲ್ಲ. ಆದರೆ ಈಗ ನಿಖರವಾಗಿ ನಡೆಯುತ್ತಿರುವುದೇ ಅದು.

ಭಾರತದ ಮಟ್ಟಿಗೆ ತಾಲಿಬಾನ್-2.0 ಅಡಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಅಫ್ಘಾನ್ ಸಂಬಂಧವು ನಿರೀಕ್ಷೆಯೇ ಇಲ್ಲದ ರಾಜತಾಂತ್ರಿಕ ಉತ್ತೇಜನವಾಗಿದೆ. ಯಾಕೆಂದರೆ ಆ ಕಡೆ, ಪರಮ ಎದುರಾಳಿ ಪಾಕಿಸ್ತಾನ ಸೌದಿ ಅರೇಬಿಯಾದೊಂದಿಗೆ ಪರಸ್ಪರ ರಕ್ಷಣಾ ಒಪ್ಪಂದ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮತ್ತು ಭಾರತದ ಬಹುಕಾಲದ ಮಿತ್ರ ರಷ್ಯಾದಿಂದಲೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದೆ.

ಆಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಖಿ ಅವರು ನವದೆಹಲಿಗೆ ಭೇಟಿ ನೀಡಿ ಭಾರತದ ವಿದೇಶಾಂಗ ವ್ಯವಹಾರಗಳ ಅಧಿಕಾರಿಗಳ ಜೊತೆ ವಿಸ್ತೃತ ಮಾತುಕತೆಗಳನ್ನು ನಡೆಸಿದ್ದು ಪಕ್ಕದ ಪಾಕಿಸ್ತಾನದ ಮುಖ ಕಪ್ಪಿಡಲು ಕಾರಣವಾಗಿದೆ. ಅದು ಈ ವಿದ್ಯಮಾನದ ಒಂದು ಭಾಗ ಮಾತ್ರ. ಆದರೆ ನಿಜಕ್ಕೂ ಆಟದ ದಿಕ್ಕು ಬದಲಿಸುವ ಅಂಶವೆಂದರೆ ಮುತ್ತಖಿ ಅವರ ಭೇಟಿಯು ಮುಂದಿನ ದಿನಗಳಲ್ಲಿ ದಕ್ಷಿಣ ಏಷ್ಯಾ ವ್ಯಾಪ್ತಿಯ ರಾಜಕೀಯವನ್ನು ಗಮನಾರ್ಹವಾಗಿ ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದ ನೆರೆಹೊರೆಯ ಭೂರಾಜಕೀಯದ ಸಮೀಕರಣಗಳು 180 ಡಿಗ್ರಿಗೆ ತಿರುಗಲು ಮೂರು ದಶಕಗಳೇ ಬೇಕಾದವು. ಆಗ ಇದ್ದದ್ದು ಸಂಪೂರ್ಣ ದ್ವೇಷ ಭಾವನೆ. ಈಗ ಅದು ನವದೆಹಲಿ ಮತ್ತು ಕಾಬುಲ್ ನಡುವೆ ನಿಕಟ ಸ್ನೇಹಕ್ಕೆ ತಿರುಗಿದೆ. ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ಆಗ ಇದ್ದುದು ಮಾರ್ಗದರ್ಶಕ ಸಂಬಂಧ. ಈಗದು ಬಹುತೇಕ ವೈರತ್ವಕ್ಕೆ ತಿರುಗಿದೆ.

ಕಂದಹಾರ್ ವಿಮಾನ ಅಪಹರಣದಿಂದ ಈತನಕ

ಸೋವಿಯತ್ ಒಕ್ಕೂಟ ಆಫ್ಘಾನಿಸ್ತಾನದ ಮೇಲೆ ಆಕ್ರಮಣ ಮಾಡಿದಾಗ ಪಾಕಿಸ್ತಾನದಲ್ಲಿ ಮೊಳಕೆಯೊಡೆದಿದ್ದು ತಾಲಿಬಾನ್. ಅದು ಪಾಕಿಸ್ತಾನದ ನೆರವಿನೊಂದಿಗೇ ಅಧಿಕಾರದ ಸೂತ್ರ ಹಿಡಿದಿದ್ದು 1996ರಲ್ಲಿ. ಅದಾಗಿ ಮೂರು ವರ್ಷಗಳ ಬಳಿಕ ಸಂಭವಿಸಿದ ಕಂದಹಾರ್ ವಿಮಾನ ಅಪಹರಣ ತಾಲಿಬಾನ್ ಮತ್ತು ಪಾಕಿಸ್ತಾನದ ನಡುವೆ ಎಷ್ಟು ನಿಕಟ ಸಂಬಂಧವಿತ್ತು ಎಂಬುದಕ್ಕೆ ಸಾಕ್ಷಿಯಾಗಿತ್ತು. ಅಪಹರಣಗೊಂಡ ವಿಮಾನದಲ್ಲಿ ಒತ್ತೆಯಾಳುಗಳಾಗಿದ್ದ ಪ್ರಯಾಣಿಕರನ್ನು ಬಿಡುಗಡೆ ಮಾಡಲು ಅಂದಿನ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಕಾಶ್ಮೀರದ ಜೈಲಿನಲ್ಲಿದ್ದ ಮಸೂದ್ ಅಝರ್, ಸಯೀದ್ ಶೇಖ್ ಮತ್ತು ಮುಸ್ತಾಕ್ ಅಹ್ಮದ್ ಝರ್ಗಾರ್-ನನ್ನು ಬಿಡುಗಡೆ ಮಾಡುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಯಿತು.

9/11 ದಾಳಿಯ ಬಳಿಕ ಪಾಕಿಸ್ತಾನ ಮತ್ತು ತಾಲಿಬಾನ್ ನಡುವಿನ ಸಂಬಂಧ ಹದಗೆಟ್ಟು ಹೋಯಿತು. ಅಮೆರಿಕ ನೇತೃತ್ವದ ಪಡೆಗಳು ಅಫ್ಘಾನಿಸ್ತಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡವು. ಆಗ ಅಮೆರಿಕದ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯು ಬುಶ್ ಅವರ ಆಡಳಿತದ ತೀವ್ರ ಒತ್ತಡಕ್ಕೆ ಮಣಿದ ಆಗಿನ ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ತಮ್ಮದೇ ದೇಶದಲ್ಲಿ ಆಶ್ರಯ ಪಡೆದ ತಾಲಿಬಾನ್ ಮತ್ತು ಅಲ್-ಖೈದಾ ಉಗ್ರರನ್ನು ಸೆದೆಬಡಿಯಬೇಕಾಯಿತು.

ಇದರ ಜೊತೆ ಜೊತೆಗೇ ಪಾಕಿಸ್ತಾನದ ಗುಪ್ತಚರ ಸಂಸ್ಥೆ-ಐಎಸ್ಐ ಮತ್ತು ದೇಶದ ಮಿಲಿಟರಿ ತಾಲಿಬಾನ್-ಗೆ ಖುಲ್ಲಂಖುಲ್ಲ ಬೆಂಬಲ ನೀಡುತ್ತ, ಹತ್ತಾರು ವಿಧಗಳಲ್ಲಿ ನೆರವು ಬಂದದ್ದು ಗುಟ್ಟಾಗಿ ಉಳಿಯಲಿಲ್ಲ. ತಾಲಿಬಾನ್ ಮತ್ತು ಮಿಲಿಟರಿ ಎರಡನ್ನು ಸಂತೋಷಪಡಿಸುವ ಭರದಲ್ಲಿ ಪಾಕಿಸ್ತಾನ ಅಮೆರಿಕ ಮತ್ತು ಕಾಬುಲ್ ನಲ್ಲಿರುವ ಅಮೆರಿಕ ನಿಯಂತ್ರಿತ ಸರ್ಕಾರದ ವಿರೋಧ ಕಟ್ಟಿಕೊಂಡಿತು.

ತಲೆ ಎತ್ತಿದ ತೆಹ್ರಿಕ್ –ಎ-ತಾಲಿಬಾನ್

ಇದರ ಗಂಭೀರ ಪರಿಣಾಮ ಎಂದರೆ ಪಾಕಿಸ್ತಾನದಲ್ಲಿ ತೆಹ್ರಿಕ್-ಎ-ತಾಲಿಬಾನ್ (ಟಿಟಿಪಿ) ಎಂಬ ಹೆಸರಿನ ಇಸ್ಲಾಂ ಉಗ್ರರು ತಲೆಎತ್ತಿದರು. ಇದ್ದಕ್ಕಿದ್ದಂತೆ ದೇಶದಲ್ಲಿ ಅವರ ಅಟ್ಟಹಾಸ ಜೋರಾಯಿತು. ಈ ವರ್ಷದ ಮೊದಲ ಮೂರು ತ್ರೈಮಾಸಿಕಗಳ ಅವಧಿಯಲ್ಲಿ ಟಿಟಿಪಿ ದಾಳಿಯಲ್ಲಿ ಸುಮಾರು 2400 ಮಂದಿ ಪಾಕಿಸ್ತಾನಿ ಭದ್ರತಾ ಸಿಬ್ಬಂದಿ ಹತರಾಗಿದ್ದಾರೆ ಎನ್ನುವ ಸುದ್ದಿ ಪರಿಸ್ಥಿತಿಯ ಗಂಭೀರತೆಯನ್ನು ಬಿಂಬಿಸುತ್ತದೆ.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಪಾಕಿಸ್ತಾನದಲ್ಲಿ ಸತತವಾಗಿ ಅಧಿಕಾರಕ್ಕೆ ಬಂದ ಸರ್ಕಾರಗಳು ಅಮೆರಿಕದ ಒತ್ತಡಕ್ಕೆ ಒಳಗಾಗಿ ಆಫ್ಘಾನಿಸ್ತಾನದಲ್ಲಿ ಸೋವಿಯತ್-ನ್ನು ಗುರಿ ಮಾಡಲು ಹೋಗಿ 9/11 ದಾಳಿಯ ನಂತರದ ಅವಧಿಯಲ್ಲಿ ದೇಶಕ್ಕೇ ತಿರುಗಿ ಬಿದ್ದಿದೆ.

ಪಾಕಿಸ್ತಾನವನ್ನು ಕ್ಷಮಿಸದ ತಾಲಿಬಾನ್

2021ರ ಆಗಸ್ಸ್ ತಿಂಗಳಿನಲ್ಲಿ ಕಾಬುಲ್ ನಲ್ಲಿ ಅಮೆರಿಕ ಬೆಂಬಲಿತ ಸರ್ಕಾರವನ್ನು ಕಿತ್ತೆಸೆದು ಎಲ್ಲರನ್ನೂ ದಿಗ್ಬ್ರಮೆಗೊಳಿಸುವ ರೀತಿಯಲ್ಲಿ ಅಧಿಕಾರಕ್ಕೆ ಬಂದಾಗ ಅದು 1996ರಲ್ಲಿ ಅಧಿಕಾರದಲ್ಲಿದ್ದ ಅದೇ ಸಂಘಟನೆಯಾಗಿ ಇರಲಿಲ್ಲ. 2001ರಿಂದ 2021ರ ನಡುವೆ ಎರಡು ಬಾರಿ ಅಧಿಕಾರಕ್ಕೆ ಬಂದ ಹೊಸ ಇಸ್ಲಾಮಿಕ್ ಆಡಳಿತವು ಪಾಕಿಸ್ತಾನದ ದ್ವಂದ್ವ ನೀತಿಯನ್ನು ಕ್ಷಮಿಸಲು ನಿರಾಕರಿಸಿತು.

ತನ್ನ ರಾಷ್ಟ್ರದೊಳಗೆ ಗೊಂದಲ ಸೃಷ್ಟಿಸುತ್ತಿದ್ದ ಟಿಟಿಪಿಯನ್ನು ತಾಲಿಬಾನ್ ನಿಯಂತ್ರಣದಲ್ಲಿಡಬೇಕು ಎಂಬುದು ಪಾಕಿಸ್ತಾನದಲ್ಲಿನ ಸರ್ಕಾರದ ನಿರೀಕ್ಷೆಯಾಗಿತ್ತು. ಆದರೆ ಅದರಿಂದ ಯಾವುದೇ ಪ್ರಯೋಜವಾಗಲಿಲ್ಲ. ಆಫ್ಗಾನಿಸ್ತಾನದಲ್ಲಿರುವ ತಾಲಿಬಾನ್ ಮಧ್ಯವರ್ತಿಗಳು ತಾವು ಸೈದ್ದಾಂತಿಕವಾಗಿ ಒಂದೇ ಆಗಿದ್ದರೂ ಕೂಡ ಟಿಟಿಪಿ ಮತ್ತು ತಮ್ಮದು ಪ್ರತ್ಯೇಕ ಸಂಘಟನೆಗಳು ಎಂದು ಪ್ರತಿಪಾದಿಸಿದವು.

ಟಿಟಿಪಿಯನ್ನು ನಿಯಂತ್ರಣದಲ್ಲಿ ಇಡಲು ತನ್ನಿಂದ ಸಾಧ್ಯವಿಲ್ಲ ಎಂಬ ತಾಲಿಬಾನ್-2.0 ಸರ್ಕಾರದ ಹೇಳಿಕೆಯನ್ನು ಒಪ್ಪಲು ಪಾಕಿಸ್ತಾನ ಸಿದ್ಧವಿರಲಿಲ್ಲ. ಇದರಿಂದ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಎರಡೂ ರಾಷ್ಟ್ರಗಳ ನಡುವಿನ ದ್ವೇಷ ತಾರಕಕ್ಕೇರಲು ಕಾರಣವಾಯಿತು. ಇದರ ತಾಜಾ ಸುದ್ದಿ ಎಂದರೆ ಕಳೆದ ವಾರವಷ್ಟೇ ಅಫ್ಘನ್-ಪಾಕಿಸ್ತಾನ ಗಡಿಯಲ್ಲಿ ನಡೆದ ಕಾದಾಟ. ಇದರಿಂದ 200ಕ್ಕೂ ಅಧಿಕ ತಾಲಿಬಾನಿ ಹೋರಾಟಗಾರರು ಮತ್ತು 58 ಮಂದಿ ಪಾಕ್ ಯೋಧರು ಹತರಾದರು.

ಪಾಕಿಸ್ತಾನ ಮತ್ತು ತಾಲಿಬಾನ್ ನಡುವಿನ ಸ್ನೇಹಕ್ಕೆ ಭಂಗ ಬಂದಿದ್ದು ಭಾರತದ ಮಟ್ಟಿಗೆ ಸ್ವಾಗತಾರ್ಹ ಸುದ್ದಿ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇಂತಹುದೊಂದು ಅವಕಾಶವನ್ನು ಅದು ಬಿಟ್ಟುಕೊಡಲು ಸಾಧ್ಯವೇ ಇರಲಿಲ್ಲ. ಇದು ಪಾಕಿಸ್ತಾನವನ್ನು ಮೂಲೆಗುಂಪು ಮಾಡುವ ಒಂದು ಕಾರ್ಯತಂತ್ರವೂ ಹೌದು. ಈ ಹಿನ್ನೆಲೆಯಲ್ಲಿಯೇ ಮೋದಿ ನೇತೃತ್ವದ ಮಿತ್ರ ಸರ್ಕಾರ ಮುತ್ತಖಿ ಅವರನ್ನು ನವದೆಹಲಿಗೆ ಆಹ್ವಾನಿಸಿತು. ಅದೀಗ ಆಫ್ಘಾನಿಸ್ತಾನದ ಜೊತೆ ಮಹತ್ವದ್ದೆನ್ನಬಹುದಾದ ದೀರ್ಘಾವಧಿ ಸಂಬಂಧವನ್ನು ಹೆಣೆಯುವ ಪ್ರಕ್ರಿಯೆ ಶುರುಹಚ್ಚಿಕೊಂಡಿದೆ.

ಪಾಕಿಸ್ತಾನದ ಹತಾಶ ಕೃತ್ಯ

ಮುತ್ತಖಿ ಅಕ್ಟೋಬರ್ 9ರಂದು ನವದೆಹಲಿಗೆ ಆಗಮಿಸಿದರು. ಅದೇ ದಿನ ಕಾಬುಲ್ ನಲ್ಲಿ ಎರಡು ಶಕ್ತಿಶಾಲಿ ಬಾಂಬ್ ಸ್ಫೋಟಗೊಂಡವು. ಇದರ ಜವಾಬ್ದಾರಿಯನ್ನೇನು ಪಾಕಿಸ್ತಾನ ಹೊತ್ತುಕೊಂಡಿಲ್ಲವಾದರೂ ಅದು ಪಾಕಿಸ್ತಾನ ಅಥವಾ ಅದಕ್ಕೆ ನಿಕಟವಾಗಿರುವ ಶಕ್ತಿಗಳು ನಡೆಸಿರುವ ಕೃತ್ಯ ಎಂದು ವ್ಯಾಪಕವಾಗಿ ನಂಬಲಾಗಿದೆ. ಭಾರತದ ಜೊತೆಗೆ ಸ್ನೇಹ ಬೆಳೆಸಿದರೆ ತಕ್ಕ ಶಾಸ್ತಿ ಮಾಡುತ್ತೇನೆ ಎಂಬುದು ಇದರ ಹಿಂದಿನ ಎಚ್ಚರಿಕೆಯಾಗಿದೆ.

ಇದು ನಿಜವೇ ಹೌದಾದಲ್ಲಿ, ಅದು ತಾಲಿಬಾನ್ನ ಮೇಲೆ ಹೇಗಾದರೂ ನಿಯಂತ್ರಣ ಸಾಧಿಸಲು ಮತ್ತು ತಾನು ನಿಗದಿಪಡಿಸಿದ ನಿಯಮಗಳಿಗೆ ಅನುಗುಣವಾಗಿ ಅದು ಕಾರ್ಯನಿರ್ವಹಿಸುವಂತೆ ಖಚಿತಪಡಿಸಿಕೊಳ್ಳಲು ಪಾಕಿಸ್ತಾನದ ಹತಾಶ ಪ್ರಯತ್ನಕ್ಕೆ ಸಂಕೇತವಾಗಿದೆ. ಆದರೆ, ತಾಲಿಬಾನ್ಗೆ ಬೇರೆ ಆಲೋಚನೆಗಳಿವೆ ಎಂಬುದು ಸ್ಪಷ್ಟ.

ಸ್ವಾವಲಂಭಿಯಾಗಲು ಪ್ರಯತ್ನ

ಮೊದಲನೆಯದಾಗಿ, ಅದು ಪಾಕಿಸ್ತಾನದ ಭಾವನಾತ್ಮಕ ಹಿಡಿತದಿಂದ ಬಿಡಿಸಿಕೊಂಡು ತನ್ನದೇ ಆದ ನಿಯಮಗಳ ಮೇಲೆ ಇತರ ರಾಷ್ಟ್ರಗಳೊಂದಿಗೆ, ವಿಶೇಷವಾಗಿ ದಕ್ಷಿಣ ಏಷ್ಯಾ ಪ್ರದೇಶದಲ್ಲಿ ತೊಡಗಿಸಿಕೊಳ್ಳಲು ಉತ್ಸುಕವಾಗಿದೆ ಎಂಬುದು ಇದರಿಂದ ವ್ಯಕ್ತವಾಗುತ್ತಿದೆ. ತಾಲಿಬಾನ್ ರಷ್ಯಾದ ಮಾನ್ಯತೆ ಪಡೆಯುವಲ್ಲಿ ಯಶಸ್ವಿಯಾಗಿದೆ, ಹೂಡಿಕೆಗಾಗಿ ಚೀನಾದೊಂದಿಗೆ ಕಾರ್ಯತಂತ್ರದ ಮಾತುಕತೆಗಳನ್ನು ನಡೆಸುತ್ತಿದೆ ಮತ್ತು ಭಾರತದೊಂದಿಗೆ ಹೊಸ ಸಂಬಂಧವನ್ನು ಸ್ಥಾಪಿಸುತ್ತಿದೆ.

9/11ರ ದಾಳಿ ವರೆಗಿನ ತಾಲಿಬಾನ್ನ ಮೊದಲ ಅವಧಿಯಲ್ಲಿ, ಅಮೆರಿಕ ಪಾಕಿಸ್ತಾನದ ಮೂಲಕ ತಾಲಿಬಾನ್ಗೆ ಬೆಂಬಲ ನೀಡಿತ್ತು ಮತ್ತು ಅಲ್ಲಿನ ಆ ಇಸ್ಲಾಮಿಕ್ ಗುಂಪು ತನ್ನ ನೆರೆಹೊರೆಯಲ್ಲಿನ ರಾಜತಾಂತ್ರಿಕ ವಾಸ್ತವ ಸಂಗತಿಗಳನ್ನು ನಿರ್ಲಕ್ಷಿಸಬಹುದಾಗಿತ್ತು. ಆದರೆ ಈಗ, ಅದಕ್ಕೆ ಮಾನ್ಯತೆ ಅತ್ಯಗತ್ಯವಾಗಿ ಬೇಕಾಗಿದೆ. ಚೀನಾ, ಪಾಕಿಸ್ತಾನ ಮತ್ತು ಭಾರತ ಇನ್ನೂ ಔಪಚಾರಿಕವಾಗಿ ಹಾಗೆ ಮಾಡಿಲ್ಲ.

ತಾನು ಜಾಗತಿಕ ಮನ್ನಣೆ ಪಡೆಯಬೇಕಿದ್ದರೆ, ತಾಲಿಬಾನ್ ಆಡಳಿತವು ತನ್ನ ಇಸ್ಲಾಂ ಧರ್ಮದ ಕರ್ಮಠ ಆಚರಣೆಯಲ್ಲಿ ಕಠಿಣವಾದ, ಅನಾದಿಕಾಲದ ನೀತಿಗಳನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಿಲ್ಲ. ವಿಶೇಷವಾಗಿ ಮಹಿಳೆಯರು ಮತ್ತು ಅಲ್ಪಸಂಖ್ಯಾತರ ವಿರುದ್ಧ ಅದು ಮಾಡುತ್ತಿರುವ ನಿರ್ಭೀತ ತಾರತಮ್ಯವು ಪ್ರಪಂಚದ ಹೆಚ್ಚಿನ ಭಾಗಕ್ಕೆ ಆಘಾತವನ್ನುಂಟು ಮಾಡಿದೆ.

ನವದೆಹಲಿಯಲ್ಲಿ ನಡೆದ ಮುತ್ತಖಿ ಅವರ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರಿಗೆ ಅವಕಾಶ ನೀಡಲಿಲ್ಲ. ಆ ಘಟನೆಯಿಂದ ಉಂಟಾದ ವ್ಯಾಪಕ ಆಕ್ರೋಶವು ಒಂದು ಸ್ಪಷ್ಟ ಉದಾಹರಣೆಯಾಗಿದೆ. ಒಂದು ಗೌರವಯುತ ರಾಷ್ಟ್ರವು ಇತರ ದೇಶಗಳೊಂದಿಗೆ ವ್ಯವಹರಿಸಲು ಬಯಸಿದರೆ, ತಾಲಿಬಾನ್ ತನ್ನ ಈ ಹಿಂದುಳಿದ ಸಾಮಾಜಿಕ ನೀತಿಗಳನ್ನು ಮತ್ತೆ ಒರೆಗೆ ಹಚ್ಚಬೇಕು ಎಂಬುದು ಇದರ ಸ್ಪಷ್ಟ ಸೂಚನೆಯಾಗಿದೆ.

ಮೋದಿ ಸರ್ಕಾರಕ್ಕೆ ದೇಶೀಯ ವಿರೋಧ

ತನ್ನ ಕಠಿಣ ಇಸ್ಲಾಮಿಕ್ ನೀತಿಗಳನ್ನು ಸಡಿಲಗೊಳಿಸಿದರೆ, ಭಾರತದಂತಹ ಪ್ರಜಾಪ್ರಭುತ್ವ ದೇಶಗಳಿಗೆ ಆಫ್ಘಾನಿಸ್ತಾನದೊಂದಿಎಗ ಸಂಬಂಧ ಮುಂದುವರಿಸಲು ಮತ್ತು ಗಟ್ಟಿಪಡಿಸಲು ಸುಲಭವಾಗುತ್ತದೆ. ತಾಲಿಬಾನ್ ಈಗಿರುವ ರೂಪದಲ್ಲಿ ಮುಂದುವರಿದರೆ, ನರೇಂದ್ರ ಮೋದಿ ಸರ್ಕಾರವು ಅಫ್ಘನ್-ಗೆ ನಿಕಟವಾಗಲು ಪ್ರಯತ್ನಿಸಿದರೆ ನಾಗರಿಕ ಸಮಾಜ ಮತ್ತು ವಿರೋಧ ಪಕ್ಷಗಳಿಂದ ಆಂತರಿಕ ವಿರೋಧವನ್ನು ಎದುರಿಸಬೇಕಾಗುತ್ತದೆ.

ಭಾರತಕ್ಕೆ ಇದು ನಿಶ್ಚಿತವಾಗಿ ಒಂದು ಜಟಿಲ ಪರಿಸ್ಥಿತಿ. ತನ್ನ ಪ್ರಬಲ ಪ್ರತಿಸ್ಪರ್ಧಿ ಪಾಕಿಸ್ತಾನಕ್ಕೆ ಮುಜುಗರ ಉಂಟು ಮಾಡುವುದು ಇದರ ಮುಖ್ಯ ಉದ್ದೇಶವಾದರೂ, ಅಫ್ಘನ್-ಗೆ ಹತ್ತಿರವಾಗಲು ಸಿಕ್ಕಿರುವ ಈ ಅನಿರೀಕ್ಷಿತ ಅವಕಾಶವನ್ನು ಭಾರತ ಕಳೆದುಕೊಳ್ಳಲು ಬಯಸುವುದಿಲ್ಲ. ಆದರೆ, ಅದು ತನ್ನ ಅನುಕೂಲಕ್ಕೆ ತಕ್ಕಂತೆ ಸಂಬಂಧವನ್ನು ರೂಪಿಸಲು ಮಹತ್ತರವಾದ ರಾಜತಾಂತ್ರಿಕ ಕುಶಲತೆ ತೋರಬೇಕಾಗುತ್ತದೆ.

ಎಲ್ಲರಿಗೂ ತಿಳಿದಿರುವ ಹಾಗೆ ಇಲ್ಲಿರುವ ದೊಡ್ಡ ಅಡಚಣೆಯೇ ಚೀನಾ. ಭಾರತದೊಂದಿಗಿನ ಸಂಬಂಧಗಳ ಬಗ್ಗೆ ಅದು ನೀಡುವ ಎಲ್ಲಾ ಭರವಸೆಗಳ ಹೊರತಾಗಿಯೂ, ಕ್ಸಿ ಜಿನ್ಪಿಂಗ್ ಸರ್ಕಾರವು ಪಾಕಿಸ್ತಾನಕ್ಕೆ ಅಸಾಧಾರಣ ಎನ್ನುವಷ್ಟು ಹತ್ತಿರವಾಗಿದೆ. ಅಫ್ಘನ್-ಪಾಕಿಸ್ತಾನ ಸಂಬಂಧವು ನಿಯಂತ್ರಣಕ್ಕೆ ಸಿಗದಿದ್ದರೆ, ಬೀಜಿಂಗ್ ಮಧ್ಯ ಪ್ರವೇಶಿಸಿ, ಪರಸ್ಪರ ದ್ವೇಷವನ್ನು ನಿವಾರಿಸಲು ಮತ್ತು ಇಬ್ಬರ ನಡುವೆ ಕೆಲ ಒಪ್ಪಂದಗಳನ್ನು ಮಾಡಿಕೊಳ್ಳಲು ಪ್ರಯತ್ನಿಸುವುದು ಸಹಜ.

ಕಾಬೂಲ್ನಲ್ಲಿರುವ ತಾಲಿಬಾನ್ 2.0 ಸರ್ಕಾರದೊಂದಿಗೆ ಮಾತುಕತೆ ಆರಂಭಿಸಿದ ಮೊದಲ ದೇಶಗಳಲ್ಲಿ ಚೀನಾ ಕೂಡ ಒಂದು. ಇದು ತನ್ನ ಮಹತ್ವಾಕಾಂಕ್ಷೆಯ ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ (Belt and Road Initiative - BRI)ಗೆ ಸೇರಲು ತಾಲಿಬಾನ್ಗೆ ಆಹ್ವಾನ ನೀಡಿದೆ. ತೀವ್ರವಾದ ಆರ್ಥಿಕ ಬಿಕ್ಕಟ್ಟಿನಲ್ಲಿರುವ ರಾಷ್ಟ್ರವನ್ನು ಆಳುತ್ತಿರುವ ಈ ಇಸ್ಲಾಮಿಕ್ ಗುಂಪಿಗೆ ಸರ್ಕಾರವನ್ನು ನಡೆಸಲು ಬೀಜಿಂಗ್ನ ಔದಾರ್ಯದ ಮೇಲೆ ಅವಲಂಬಿತವಾಗದೆ ಬೇರೆ ದಾರಿಯಿಲ್ಲ.

ನೆರೆಯ ದೇಶದಿಂದ ಮರಳಿ ಬಂದ ನಾಗರಿಕರು

ನೆರೆಯ ಇರಾನ್ ಮತ್ತು ಪಾಕಿಸ್ತಾನದಿಂದ ಬಲವಂತವಾಗಿ ಹೊರಹಾಕಲ್ಪಟ್ಟ ಲಕ್ಷಾಂತರ ಆಫ್ಘನ್ ನಾಗರಿಕರು ಈಗ ದೇಶಕ್ಕೆ ಮರಳಿದ್ದಾರೆ. ಇದರಿಂದ ಆರ್ಥಿಕ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ. ಹೀಗೆ ವಾಪಸ್ ಬಂದವರಿಗೆ ಕೆಲಸವಿಲ್ಲ ಮತ್ತು ಅವರು ನಾಲ್ಕು ವರ್ಷಗಳ ತಾಲಿಬಾನ್ 2.0 ಸರ್ಕಾರಕ್ಕೆ ದೊಡ್ಡ ಹೊರೆಯಾಗಿದ್ದಾರೆ. ಆದ್ದರಿಂದ, ಮುತ್ತಕಿ ಮತ್ತು ಅವರ ಸಹೋದ್ಯೋಗಿಗಳು ಚೀನಾವನ್ನು ನಿರ್ಲಕ್ಷಿಸುವ ಸ್ಥಿತಿಯಲ್ಲಿಲ್ಲ. ಪಾಕಿಸ್ತಾನದ ಮಟ್ಟಿಗೆ, ತಾಲಿಬಾನ್ ಭಾರತದೊಂದಿಗೆ ಇನ್ನಷ್ಟು ನಿಕಟವಾಗಲು ಪ್ರಯತ್ನಿಸಿದರೆ ಚೀನಾ ಅದರ ಪ್ರಬಲ ಅಸ್ತ್ರ ಆಗಲಿದೆ.

ಭಾರತವೂ ತಾಲಿಬಾನ್ ಮುಂದೆ ಸಾಕಷ್ಟು ಆಕರ್ಷಣೆಗಳನ್ನು ಮಂಡಿಸಿದೆ. ಮುತ್ತಖಿಯ ಇತ್ತೀಚಿನ ಭೇಟಿಯ ಸಂದರ್ಭದಲ್ಲಿ, ನವದೆಹಲಿಯು ಹಲವಾರು ಮೂಲಭೂತ ಸೌಕರ್ಯ ಯೋಜನೆಗಳಿಗೆ ಮಾರ್ಗದರ್ಶನ ನೀಡಲು, ಕಾಬೂಲ್ ಜೊತೆ ತೊಡಗಿಸಿಕೊಳ್ಳುವ ಪ್ರಕ್ರಿಯೆಯನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಏರಿಸಲು ಮತ್ತು ಗಣಿಗಾರಿಕೆಯಲ್ಲಿ ಹೂಡಿಕೆ ಮಾಡುವುದೂ ಸೇರಿದಂತೆ ಇತರ ಭರವಸೆಗಳ ಜೊತೆಗೆ ಆಶ್ವಾಸನೆ ನೀಡಿದೆ. ಆದ್ದರಿಂದ, ತಾಲಿಬಾನ್ಗೆ ಭಾರತದ ಜೊತೆ ತನ್ನ ಹಳೆಯ ಶೀತಲ ಸಂಬಂಧಕ್ಕೆ ಮರಳುವುದು ಸುಲಭವೇನೂ ಅಲ್ಲ ಮತ್ತು ಕಾರ್ಯತಂತ್ರದ ದೃಷ್ಟಿಯಿಂದ ಸಲಹೆ ನೀಡುವಂತಹದ್ದೂ ಅಲ್ಲ.

Read More
Next Story