ವಿದ್ಯಾರ್ಥಿ ಕ್ರಾಂತಿ ಎಂಬ ವಿಸ್ಮೃತಿ: ಗುಣಗ್ರಾಹಿ ಶಿಕ್ಷಣಕ್ಕೆ ಗಮನ ನೀಡದಿದ್ದರೆ ಭಾರತಕ್ಕೆ ಉಳಿಗಾಲವಿಲ್ಲ
x
ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದುದು ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ವಿರುದ್ಧ. ಇದು ಆಡಳಿತಕ್ಕಿಂತ ಹೆಚ್ಚಾಗಿ ಸಾಮಾಜಿಕ ಲಕ್ಷಣಗಳಾಗಿವೆ. ವಿದ್ಯಾರ್ಥಿ ಗುಂಪುಗಳು ಭ್ರಷ್ಟಾಚಾರ ನಿರ್ಮೂಲನೆ ಮಾಡುವುದನ್ನೇ ತಮ್ಮ ಕಾರ್ಯಸೂಚಿಯಾಗಿ ಉಲ್ಲೇಖಿಸಿದಾಗ ಅವರು ಯಾವುದೇ ನಿರ್ದಿಷ್ಟ ಯೋಜನೆ ಅಥವಾ ಅಂತ್ಯದ ಬಗ್ಗೆ ಯೋಚಿಸಿಲ್ಲ. ಆದರೆ ಅವರ ಗುರಿ ಇದ್ದುದು ಕಣ್ಣಿಗೆ ರಾಚುವಂತೆ ಕಾಣುವ ಸಾಮಾಜಿಕ ಪಿಡುಗು. ಅದು ಅವರನ್ನು ಚಳವಳಿಗೆ ಆಹ್ವಾನಿಸಿತು. ಆದರೆ ಬಾಂಗ್ಲಾದೇಶ ಮತ್ತು ನೇಪಾಳ ಎರಡರಲ್ಲಿಯೂ ಉಂಟಾದ ಅಶಾಂತಿಯ ಫಲಿತಾಂಶ ಆರ್ಥಿಕ ವಿನಾಶ.

ವಿದ್ಯಾರ್ಥಿ ಕ್ರಾಂತಿ ಎಂಬ ವಿಸ್ಮೃತಿ: ಗುಣಗ್ರಾಹಿ ಶಿಕ್ಷಣಕ್ಕೆ ಗಮನ ನೀಡದಿದ್ದರೆ ಭಾರತಕ್ಕೆ ಉಳಿಗಾಲವಿಲ್ಲ

ಭಾರತದಲ್ಲಿ ನೆರೆಯ ಬಾಂಗ್ಲಾದೇಶ ಮತ್ತು ನೇಪಾಳದ ರಾಜಕೀಯ ಸ್ಥಿತ್ಯಂತರಗಳು ಸುಲಭಕ್ಕೆ ಪುನರಾವರ್ತನೆಯಾಗದು. ಆದರೂ ಉದ್ಯೋಗಕ್ಕೆ ಅರ್ಹರಲ್ಲದ ದೊಡ್ಡ ಪ್ರಮಾಣದ ಯುವ ನಿರುದ್ಯೋಗಿ-ಸಮೂಹ ನಿಜವಾದ ಅಪಾಯ.


ದಕ್ಷಿಣ ಏಷ್ಯಾದಲ್ಲಿ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಯ ಮೂನ್ಸೂಚನೆ ಎಂದು ಸಕಾರಾತ್ಮಕವಾಗಿ ಪರಿಗಣಿಸಲಾಗುವ ಇತ್ತೀಚಿನ ಒಂದು ಬೆಳವಣಿಗೆ ಎಂದರೆ ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ನಡೆದ ವಿದ್ಯಾರ್ಥಿ ದಂಗೆಗಳು. ನಾನಾ ಹಂತಗಳಲ್ಲಿ ಆವರಿಸಿಕೊಂಡಿರುವ ಭ್ರಷ್ಟಾಚಾರದ ಆರೋಪಗಳು ಸರ್ಕಾರಗಳನ್ನು ಪದಚ್ಯುತಗೊಳಿಸುವಲ್ಲಿ ಈ ದಂಗೆಗಳು ಯಶಸ್ವಿಯಾದವು.

ಬಾಂಗ್ಲಾದೇಶದಲ್ಲಿ ಹಿಂದಿನ ಆಡಳಿತದ ಅವಧಿಯಲ್ಲಿ ಅತ್ಯುತ್ತಮವಾದ ಆರ್ಥಿಕ ಬೆಳವಣಿಗೆ ಕಂಡುಬಂದಿತ್ತು. ಕೆಲವೇ ಸಮಯದ ಹಿಂದೆ ದೇಶವನ್ನು ದಕ್ಷಿಣ ಏಷ್ಯಾಕ್ಕೇ ಮಾದರಿ ಎಂದು ಬಣ್ಣಿಸಲಾಗಿತ್ತು. ವಿಪರ್ಯಾಸವೆಂದರೆ ನೇಪಾಳದಲ್ಲಿ ಈಗ ಪದಚ್ಯುತಗೊಂಡ ಕಮ್ಯುನಿಸ್ಟ್ ನೇತೃತ್ವದ ಆಡಳಿತವೂ ಕೂಡ ಒಂದು ಬಹುದೊಡ್ಡ ಬದಲಾವಣೆಯ ಫಲವಾಗಿಯೇ ಬಂದಿದ್ದಾಗಿತ್ತು.

ಅಂದಿನಿಂದ ಭಾರತದ ಲಡಾಖ್ ಭಾಗದಲ್ಲಿ ಪ್ರತ್ಯೇಕ ರಾಜ್ಯದ ಸ್ಥಾನಮಾನಕ್ಕೆ ಬೇಡಿಕೆ ಇಟ್ಟು ಕೆಲವು ವಿದ್ಯಾರ್ಥಿ ನೇತೃತ್ವದ ಚಳವಳಿ ನಡೆದು ಅಶಾಂತ ವಾತಾವರಣ ನಿರ್ಮಾಣವಾಗಿದೆ.

ಭಾರತಕ್ಕೆ ವಿದ್ಯಾರ್ಥಿ ಚಳವಳಿಗಳು ಹೊಸದಲ್ಲ. ಹಿಂದೆಯೂ ಈ ರೀತಿಯ ಚಳವಳಿಗಳು ಸಾಕಷ್ಟು ನಡೆದಿದ್ದವು. ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದುದು ಎಂದರೆ ಜಯಪ್ರಕಾಶ್ ನಾರಾಯಣ ಅವರ ನೇತೃತ್ವದಲ್ಲಿ 1970ರಲ್ಲಿ ಇಂದಿರಾ ಗಾಂಧಿ ವಿರುದ್ಧ ಹೊತ್ತಿಕೊಂಡ ಚಳವಳಿ. ಆದರೆ ಆ ಚಳವಳಿಯನ್ನು ಅದಾಗಲೇ ಬೇರುಬಿಟ್ಟಿದ್ದ ರಾಜಕಾರಣಿಗಳು ಮುನ್ನಡೆಸಿದ್ದರು. ಆದರೆ ಇತ್ತೀಚಿನ ಚಳವಳಿಗಳಿಗೆ ಅಂತಹ ಯಾವುದೇ ಪ್ರೇರಣೆಗಳಿಲ್ಲ. ಅವು ಸ್ವಯಂ-ಪ್ರೇರಿತವಾದವು. ಬಾಂಗ್ಲಾದೇಶದಲ್ಲಿ ಕೆಲವು ಬಲಪಂಥೀಯ ರಾಜಕೀಯ ಗುಂಪುಗಳು ಭಾಗಿಯಾಗಿರುವ ಸಾಧ್ಯತೆ ಇದ್ದರೂ ಯಾವುದೇ ಸ್ಥಾಪಿತ ರಾಜಕೀಯ ಪಕ್ಷವು ಈ ಜವಾಬ್ದಾರಿಯನ್ನು ಹೊತ್ತುಕೊಂಡಿಲ್ಲ.

ಕ್ರಾಂತಿಕಾರಿ ಶಕ್ತಿಯಾಗಲು ಕಾರಣ

ಕ್ರಾಂತಿಕಾರಿ ರಾಜಕೀಯ ಚಳವಳಿಗಳನ್ನು ಮುನ್ನಡೆಸಿದ ರೈತರು ಮತ್ತು ಕೈಗಾರಿಕಾ ಕಾರ್ಮಿಕ ವರ್ಗಕ್ಕಿಂತ ಇದು ಭಿನ್ನ. ಇಲ್ಲಿ ವಿದ್ಯಾರ್ಥಿಗಳಿಗೆ ಒಂದು ಗುಂಪಾಗಿ ಯಾವುದೇ ಸ್ಪಷ್ಟತೆ ಇಲ್ಲ. ಹಾಗಾಗಿ ಅವರ ಸಾಮಾಜಿಕ ಸಂಯೋಜನೆಯ ಬಗ್ಗೆ ನಮಗೆ ಅನಿಶ್ಚಿತತೆ ಉಂಟುಮಾಡುತ್ತದೆ. ಇದು ಒಂದು ಕ್ರಾಂತಿಕಾರಿ ಶಕ್ತಿಯಾಗಿ ಹೊರಹೊಮ್ಮಲು ಮುಖ್ಯ ಕಾರಣವಾಗಿ ನಮಗೆ ಕಾಣುತ್ತದೆ. ಆದರೆ ನಾವಿಲ್ಲಿ ಸ್ಪಷ್ಟವಾಗಿ ಹೇಳಬಹುದಾದ ಸಂಗತಿ ಎಂದರೆ ವಿದ್ಯಾರ್ಥಿಗಳಿಗೆ ಯಾವುದೇ ಸ್ಪಷ್ಟವಾದ ಸಾಮಾಜಿಕ ಗುರುತು ಇಲ್ಲದೇ ಇರುವುದು. ಹಾಗಾಗಿಯೇ ಅವರಿಗೆ ನಿರ್ದಿಷ್ಟವಾದ ಕಾರ್ಯಸೂಚಿಯಿಲ್ಲ.

ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದುದು ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ವಿರುದ್ಧ. ಇದು ಆಡಳಿತಕ್ಕಿಂತ ಹೆಚ್ಚಾಗಿ ಸಾಮಾಜಿಕ ಲಕ್ಷಣಗಳಾಗಿವೆ. ಭಾರತದಲ್ಲಿ ಅಕ್ಬರನ ನೇತೃತ್ವವಿದ್ದ ಮೊಗಲರ ಕಾಲದಲ್ಲಿಯೂ ಕೂಡ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಸ್ವಾತಂತ್ರ್ಯ ನಂತರದ ತೀರಾ ಸ್ಪಷ್ಟವಾದ ಕಾರಣವೆಂದರೆ ಚುನಾವಣೆಗಳು ಅಪಾರವಾದ ವೆಚ್ಚವನ್ನು ಒಳಗೊಂಡಿರುವುದು. ಅದರ ಅರ್ಥವೇನೆಂದರೆ ಭ್ರಷ್ಟಾಚಾರದ ಅಭ್ಯಾಸಗಳು ಇದ್ದರೆ ಮಾತ್ರ ಇವೆಲ್ಲ ಸಾಧ್ಯ ಎಂಬುದು ಸ್ಥಾಯಿಯಾಯಿತು.

ಉದಾಹರಣೆಗೆ ಭಾರತದಲ್ಲಿ ಯಾವುದೇ ಚುನಾಯಿತ ಸರ್ಕಾರವು ಭ್ರಷ್ಟಾಚಾರದ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದರೆ ಯಾರೂ ಗಂಭೀರವಾಗಿ ನಂಬಲು ಸಿದ್ಧರಿಲ್ಲ. ಆದರೂ ಚುನಾವಣಾ ಬಾಂಡ್ ಗಳಂತಹ ಪರ್ಯಾಯ ರೂಪಗಳನ್ನು ಕಂಡುಕೊಳ್ಳಲಾಯಿತು. ಆದ್ದರಿಂದ ವಿದ್ಯಾರ್ಥಿ ಗುಂಪುಗಳು ಭ್ರಷ್ಟಾಚಾರವನ್ನು ತೊಡೆದುಹಾಕುವುದನ್ನೇ ತಮ್ಮ ಕಾರ್ಯಸೂಚಿಯಾಗಿ ಉಲ್ಲೇಖಿಸಿದಾಗ ಅವರು ಯಾವುದೇ ನಿರ್ದಿಷ್ಟ ಯೋಜನೆ ಅಥವಾ ಅಂತ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡಿಲ್ಲ. ಆದರೆ ಗುರಿ ಇದ್ದುದು ಕಣ್ಣಿಗೆ ರಾಚುವಂತೆ ಇರುವ ಸಾಮಾಜಿಕ ಪಿಡುಗು. ಅದು ಅವರನ್ನು ಚಳವಳಿಗೆ ಆಹ್ವಾನಿಸಿತು. ಆದರೆ ಬಾಂಗ್ಲಾದೇಶ ಮತ್ತು ನೇಪಾಳ ಎರಡರಲ್ಲಿಯೂ ಉಂಟಾದ ಅಶಾಂತಿಯ ಫಲಿತಾಂಶ ಆರ್ಥಿಕ ವಿನಾಶ.

ಯುವಜನತೆ ಎಂಬ ಪ್ರೇರಕ ಶಕ್ತಿ

ಯುವಕರ ಸಂಖ್ಯೆಯೇ ಹೆಚ್ಚಾಗಿರುವುದು ಒಂದು ದೇಶದ ಆರೋಗ್ಯಪೂರ್ಣ ಲಕ್ಷಣ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ವಯಸ್ಸಾದವರ ಜನಸಂಖ್ಯೆ ಹೆಚ್ಚಿರುವ ಚೀನಾಕ್ಕೆ ಹೋಲಿಸಿದರೆ ಭಾರತಕ್ಕಿರುವ ಅನುಕೂಲ ಕೂಡ ಇದೇ ಆಗಿದೆ ಎಂದು ಅನೇಕ ಮಂದಿ ಲೇಖಕರ ಅನಿಸಿಕೆ. ಭಾರತವು ಜಗತ್ತಿನಲ್ಲಿಯೇ ಯುವಕರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದು. ಅದು ಇನ್ನೂ ಕೆಲಕಾಲ ಮುಂದುವರಿಯಲಿದೆ. ಭಾರತದ ಜನಸಂಖ್ಯೆಯಲ್ಲಿ ಮೂರನೇ ಒಂದು ಭಾಗದಷ್ಟು ಜನ 15ಕ್ಕಿಂತ ಕಡಿಮೆ ವಯಸ್ಸಿನವರು ಮತ್ತು 15ರಿಂದ 24 ವರ್ಷ ವಯೋಮಾನದವರು ಶೇ.20ಕ್ಕಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.

ನಿರೀಕ್ಷಿತ ಜನಸಂಖ್ಯಾ ಪ್ರಕ್ರಿಯೆಯು ಬೆಳೆಯುತ್ತಿರುವ ಕಾರ್ಮಿಕ ಶಕ್ತಿಯ ಸಂಕೇತವಾಗಿದೆ. ಇದು ಅನೇಕ ಮಾರ್ಗಗಳ ಮೂಲಕ ಬೆಳವಣಿಗೆ ಮತ್ತು ಸಮೃದ್ಧಿಯ ರೂಪದಲ್ಲಿ ಲಾಭವಾಗುವ ನಿರೀಕ್ಷೆಯಿದೆ. ಇದರ ಅತ್ಯಂತ ಸ್ಪಷ್ಟವಾದ ಸಕಾರಾತ್ಮಕ ಪರಿಣಾಮವೆಂದರೆ ಅತ್ಯಧಿಕ ಬೆಳವಣಿಗೆಯ ಪಥವು ಕಾರ್ಮಿಕರ ಕೊರತೆಯಿಂದ ಉಂಟಾಗುವ ಅಡಚಣೆಗಳಿಗೆ ಸಿಲುಕುವ ಸಾಧ್ಯತೆಗಳು ಕಡಿಮೆ.

ಆದರೆ ಈ ಯುವಕರ ಬೆಳೆಯುತ್ತಿರುವ ಕಾರ್ಯಪಡೆಯನ್ನು ಹೊಸ ಹಾಗೂ ತಾಂತ್ರಿಕವಾಗಿ ಹೆಚ್ಚು ಚಲನಶೀಲವಾಗಿರುವ ಕೈಗಾರಿಕೆಗಳಿಗೆ ಅಗತ್ಯವಾದ ಕೌಶಲಗಳನ್ನು ಪಡೆದುಕೊಳ್ಳುವ ರೀತಿಯಲ್ಲಿ ತರಬೇತಿ ನೀಡಬಹುದು ಎನ್ನುವುದರ ಮೇಲೆ ಅವಲಂಬಿತವಾಗಿದೆ. ಹಾಗಾಗಿ ಈ ‘ಜನಸಂಖ್ಯಾ ಲಾಭಾಂಶ’ದ ಕಲ್ಪನೆಯು ಬಹುದೊಡ್ಡ ಜನಸಂಖ್ಯೆಯು ಆರ್ಥಿಕ ದೃಷ್ಟಿಕೋನದಿಂದ ಪ್ರಯೋಜನಕ್ಕಿಂತ ಸಮಸ್ಯೆಯೇ ಹೆಚ್ಚು ಎಂಬ ಹಳೆಯ ಜನಪ್ರಿಯ ಗ್ರಹಿಕೆಯನ್ನು ತಲೆಕೆಳಗು ಮಾಡಿಬಿಡುತ್ತದೆ.

ಶ್ರಮಿಕ ವರ್ಗದ ಬೆಳವಣಿಗೆ ಭ್ರಷ್ಟಾಚಾರ

ಒಂದು ರಾಷ್ಟ್ರದ ಜನಸಂಖ್ಯೆಯನ್ನು ಕಾರ್ಮಿಕ ಶಕ್ತಿಯ ಒಳಗಿರುವವರು (15ರಿಂದ 64 ವರ್ಷ ವಯಸ್ಸಿನವರು) ಮತ್ತು ಶ್ರಮಶಕ್ತಿಯ ಹೊರಗಿರುವವರು ಎಂದು ವಿಂಗಡಿಸಬಹುದು. ಶ್ರಮಶಕ್ತಿಯ ಹೊರಗಿರುವವರು ಪ್ರಸ್ತುತ ಉದ್ಯೋಗದಲ್ಲಿರುವ ಕಾರ್ಮಿಕರು ಉತ್ಪಾದಿಸುವ ಅಂಶವನ್ನು ಬಳಸಿಕೊಳ್ಳುತ್ತಾರೆ. ಆದ್ದರಿಂದ ಶ್ರಮಶಕ್ತಿಯ ಹೊರಗಿರುವವರ ಮತ್ತು ಒಳಗಿರುವವರ ಅನುಪಾತವು ಸದ್ಯದ ಬಳಕೆಯ ಬಳಿಕ ಹೂಡಿಕೆಗೆ ಲಭ್ಯವಿರುವ ಉಳಿತಾಯದ ಮೇಲೆ ಪ್ರಭಾವ ಬೀರುವ ಅಂಶಗಳಲ್ಲಿ ಒಂದಾಗಿದೆ. ಹಾಗಾಗಿ ಕೆಲಸ ಮಾಡುವವರ ಅನುಪಾತವು ಕೆಲಸ ಮಾಡದವರಿಗಿಂತ ಹೆಚ್ಚಿದ್ದರೆ ಉಳಿತಾಯವು ಹೆಚ್ಚಾಗಿರುತ್ತದೆ.

ಆದಾಗ್ಯೂ ವಾಸ್ತವದಲ್ಲಿ ಪ್ರಗತಿ ಸಂಭವಿಸಿದ್ದರೂ ಜನಸಂಖ್ಯಾ ಲಾಭಾಂಶದಿಂದಾಗಿ ಹುಟ್ಟಿಕೊಂಡ ಕ್ಷಿಪ್ರಗತಿಯಲ್ಲಿ ಬೆಳೆದ ಶ್ರಮಶಕ್ತಿಯನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಇದು ಸಹಜವಾಗಿ ಏರುತ್ತಿರುವ ಕಾರ್ಮಿಕ ಬೇಡಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಮಾತ್ರವಲ್ಲದೆ ಶ್ರಮ ಶಕ್ತಿಯ ಸ್ವರೂಪ ಹಾಗೂ ಅದರ ಉದ್ಯೋಗಾರ್ಹತೆ ಕುರಿತ ಸಮಸ್ಯೆಗಳನ್ನು ಮುನ್ನೆಲೆಗೆ ತರುತ್ತದೆ. ಇಂತಹ ಸನ್ನಿವೇಶದಲ್ಲಿ ಶಿಕ್ಷಣದ ಪ್ರಮಾಣ, ಗುಣಮಟ್ಟ ಮತ್ತು ಪ್ರಸ್ತುತತೆ ಎಲ್ಲವೂ ನಿರ್ಣಾಯಕವಾಗುತ್ತದೆ, ಶಿಕ್ಷಣವು ತಾಂತ್ರಿಕ ತರಬೇತಿಯನ್ನು ಒಳಗೊಳ್ಳಬೇಕಾಗುತ್ತದೆ.

ಉದ್ಯೋಗ ಭದ್ರತೆ ಮತ್ತು ಉದ್ಯೋಗಾರ್ಹತೆ

ಕರ್ನಾಟಕದಲ್ಲಿ ಎರಡು ದಶಕಗಳ ಹಿಂದೆ ಮೆಟ್ರುಕ್ಯುಲೇಷನ್ ಉತ್ತೀರ್ಣರಾದವರಲ್ಲಿ ಕೈಗೊಳ್ಳಲಾದ ಅಧ್ಯಯನವು ಉದ್ಯೋಗದ ಸಮಸ್ಯೆಗಳ ವಿಚಾರದಲ್ಲಿ ಕೆಲವು ಸ್ಪಷ್ಟ ತೀರ್ಮಾನವನ್ನು ಒದಗಿಸಿತು. ಕೈಗಾರಿಕಾ ತರಬೇತಿಗೆ ಸಂಬಂಧಿಸಿದಂತೆ ಕೋರ್ಸ್ ಪೂರ್ಣಗೊಳಿಸಿದ ಬಳಿಕ ತರಬೇತಿ ಪಡೆದವರು ಮುಖ್ಯವಾಹಿನಿಯ ಶಿಕ್ಷಣಕ್ಕೆ (ಬಿಕಾಂ/ಬಿಎಸ್ಸಿ/ಬಿಎ) ಮರಳುತ್ತಾರೆ ಎಂಬ ಅಂಶ ತಿಳಿದುಬಂದಿದೆ.

ಎರಡನೆಯದಾಗಿ ಕಚೇರಿ ಕೆಲಸಗಳಿಗೆ ಬೇಡಿಕೆ ಹೆಚ್ಚಾಗಿತ್ತು ಮತ್ತು ಮೇಸ್ತ್ರಿ, ಪ್ಲಂಬರ್ ಮತ್ತು ಎಲೆಕ್ಟ್ರೀಷಿಯನ್-ನಂತಹ ತಾಂತ್ರಿಕ ಕೌಶಲ್ಯಗಳನ್ನು ಯಶಸ್ವಿಯಾಗಿ ಅಭ್ಯಾಸ ಮಾಡುತ್ತಿರುವವರ ಪೈಕಿ ಅನೇಕರು ತಮ್ಮ ಮಕ್ಕಳು ಸರ್ಕಾರಿ ಉದ್ಯೋಗಗಳನ್ನು ಪಡೆಯಬೇಕು ಎಂದು ಬಯಸಿದ್ದರು ಮತ್ತು ಅದಕ್ಕಾಗಿ ಅವರಿಗೆ ಬೆಂಬಲ ನೀಡುತ್ತಿದ್ದರು. ಯುವಜನರಲ್ಲಿ ಉದ್ಯೋಗ ಭದ್ರತೆಗೆ ಹೆಚ್ಚು ಬೇಡಿಕೆಯಿದ್ದುದು ಗಮನಾರ್ಹ.

ಮಕ್ಕಳು ಆಯ್ಕೆ ಮಾಡಿಕೊಳ್ಳುವ ವಿಷಯ (ಸಬ್ಜೆಕ್ಟ್)ಗಳು ಎಷ್ಟು ಉಪಯುಕ್ತ ಎಂಬುದನ್ನು ಪರಿಗಣಿಸಿದರೆ ಶೇ.47ರಷ್ಟು ಎಸ್ಎಸ್ಎಸ್.ಸಿ ವಿದ್ಯಾರ್ಥಿಗಳು, ಶೇ.32ರಷ್ಟು ಪಿಯು ವಿದ್ಯಾರ್ಥಿಗಳು ಮತ್ತು ಶೇ.28ರಷ್ಟು ಐಟಿಐ ವಿದ್ಯಾರ್ಥಿಗಳು ಹೇಳಿದ್ದು ಯಾವ ಸಬ್ಜೆಕ್ಟ್ ಕೂಡ ಉಪಯುಕ್ತವಾಗಿಲ್ಲ ಎಂದು. ಸ್ವ-ಉದ್ಯೋಗದ ವಿಭಾಗದಲ್ಲಿ ಹೆಚ್ಚಿನವರು ಕುಟುಂಬದ ವ್ಯವಹಾರದಲ್ಲಿ ಹೆಚ್ಚುವರಿಯಾಗಿ ಸೇರಿಕೊಂಡವರು ಮತ್ತು ಇದು ವಾಸ್ತವವಾಗಿ ರಹಸ್ಯ ನಿರುದ್ಯೋಗವೇ ಆಗಿತ್ತು. ಎಸ್.ಎಸ್.ಎಲ್.ಸಿ.ಯಲ್ಲಿ ಅನುತ್ತೀರ್ಣರಾದವರು ಉತ್ತೀರ್ಣರಾದವರಿಗಿಂತ ಹೆಚ್ಚು ಉದ್ಯೋಗಾರ್ಹರು ಎನ್ನುವುದು ಮಹತ್ವದ ಸಂಗತಿಯಾಗಿತ್ತು.

ಅಧ್ಯಯನದ ಯಾವುದೇ ತೀರ್ಮಾನಗಳು ಆಶ್ಚರ್ಯಕರವಾಗಿಲ್ಲ. ಆದರೂ ಅವುಗಳ ವ್ಯಾಖ್ಯಾನ ಮಾಡಬೇಕಾಗಿದೆ. ದೈಹಿಕ ಕೆಲಸದ ವಿಚಾರದಲ್ಲಿ ಬ್ರಾಹ್ಮಣೀಯ ವಿರೋಧದ ಕಾರಣದಿಂದಾಗಿ ‘ವೈಟ್-ಕಾಲರ್ ಜಾಬ್’ಗಳಿಗೆ ಹೆಚ್ಚಿನ ಬೇಡಿಕೆಯಿದೆ. “ಉದ್ಯೋಗ ಭದ್ರತೆ” ಎನ್ನುವುದು ನಿರುಪದ್ರವಿಯಾಗಿ ಕಾಣಬಹುದು. ಆದರೆ ಅದು ಸ್ಪಷ್ಟವಾಗಿ ಸರ್ಕಾರಿ ಉದ್ಯೋಗಗಳನ್ನು ಸೂಚಿಸುತ್ತದೆ. ಅಲ್ಲಿ ಗಳಿಕೆಯು ಸಂಬಳಕ್ಕಿಂತ ಅಧಿಕ ಎನ್ನುವುದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳು ಹೆಚ್ಚು ಉದ್ಯೋಗಾರ್ಹತೆಯನ್ನು ಹೊಂದಿದ್ದಾರೆ ಎನ್ನುವ ಅಂಶವು ಶಿಕ್ಷಣವು ಒಂದು ಸ್ಥಾನಮಾನವನ್ನು ಕೊಡುವ ಮುದ್ರೆ ಇದ್ದಹಾಗೆ ಆದರೆ ಕೆಲವರಿಗೆ ಅದು ಲಭ್ಯವಿರುವ ಏಕೈಕ ಉದ್ಯೋಗಗಳನ್ನು ಪಡೆಯದಂತೆ ತಡೆಯಬಹುದು ಎಂಬುದನ್ನೂ ಸೂಚಿಸುತ್ತದೆ.

ಸಮರ್ಥ ಬೋಧಕರ ಕೊರತೆ

ಇಂದಿನ ಶಿಕ್ಷಣ ಕ್ಷೇತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಸ್ವಾಯತ್ತ ವಿಶ್ವವಿದ್ಯಾಲಯಗಳನ್ನು ಸೃಷ್ಟಿಸಿ ಅವುಗಳಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡಲಾಗುತ್ತಿರುವುದು ಪರಿಸ್ಥಿತಿ ಅತ್ಯಂತ ಆತಂಕಕಾರಿಯಾಗಿ ಕಾಣುತ್ತಿದೆ. ಪ್ರಭಾವಶಾಲಿಯಾದ ಪಠ್ಯಗಳನ್ನೇನೋ ರಚಿಸಲಾಗುತ್ತಿದೆ, ಆದರೆ ಅವುಗಳನ್ನು ಕಲಿಸಲು ಸಾಮರ್ಥ್ಯವಿರುವ ಉಪನ್ಯಾಸಕರು ಇಲ್ಲ ಎಂಬುದನ್ನು ಗಮನಿಸುತ್ತಿಲ್ಲ. ವಿಚಾರಗೋಷ್ಠಿಗಳು ಮತ್ತು ಚರ್ಚೆಗಳಂತಹ ವಿದ್ಯಾರ್ಥಿ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಆದರೆ ಇವುಗಳಲ್ಲಿ ಭಾಗವಹಿಸುವವರನ್ನು ಯಾವುದೇ ಮಾನದಂಡವಿಲ್ಲದೆ ಮನಸ್ಸಿಗೆ ತೋಚಿದಂತೆ ಆಯ್ಕೆ ಮಾಡಲಾಗುತ್ತಿದೆ. ಹಾಗಾಗಿ ಇವುಗಳು ಕೇವಲ ಸಂಭ್ರಮದ ಕೂಟಗಳಂತೆ ಆಗಿವೆ. ರೂಪಿಸಲಾದ ಚಟುವಟಿಕೆಯು ಒಂದು ನಿರ್ದಿಷ್ಟ ಉದ್ದೇಶವನ್ನು ಹೊಂದಿರಬೇಕು ಮತ್ತು ಆ ಉದ್ದೇಶವನ್ನು ಈಡೇರಿಸಬೇಕು. ಬದಲಾಗಿ ಪ್ರಶ್ನಾವಳಿಯಲ್ಲಿನ ಒಂದು ಖಾಲಿ ಚೌಕವನ್ನು ತುಂಬುವಂತಾಗಬಾರದು.

ಉದಾಹರಣೆಗೆ ಒಬ್ಬ ಚಿತ್ರನಟ ಚಿತ್ರ ಸಂಸ್ಕೃತಿಯ ಸಾಮಾಜಿಕ-ರಾಜಕೀಯ ಸ್ವರೂಪಗಳ ವಿಷಯದಲ್ಲಿ ವಿಚಾರಪೂರ್ಣವಾಗಿ ಮಾತನಾಡಲು ಸೂಕ್ತ ವ್ಯಕ್ತಿ ಅಲ್ಲದೇ ಇರಬಹುದು. ವಿದ್ಯಾರ್ಥಿಗಳು ತಮಗೆ ಕಲಿಸಲಾಗುತ್ತಿದೆ ಎಂದು ಹೇಳಲಾಗುವ ವಿಷಯದ ಬಗ್ಗೆ ಬಹಳ ಕಡಿಮೆ ಕಲಿತರೆ ಏನಾಗುತ್ತದೆ? ಈ ಹೊಸ ವಿಶ್ವವಿದ್ಯಾಲಯಗಳು ತೆಗೆದುಕೊಳ್ಳುವ ಪರಿಹಾರದ ಮಾರ್ಗವೆಂದರೆ ಪಠ್ಯಕ್ರಮಕ್ಕೆ ಯಾವುದೇ ಸಂಬಂಧವಿಲ್ಲದ, ಕೇವಲ ಸಾಮಾನ್ಯ ಜ್ಞಾನವನ್ನು ಪರೀಕ್ಷೆಗೆ ಒಡ್ಡುವಂತಹ ಪರೀಕ್ಷಾ ಪ್ರಶ್ನೆಗಳನ್ನು ಮಾತ್ರ ರೂಪಿಸುವುದಾಗಿರುತ್ತದೆ.

ಇಂದು ರೂಪಿಸಲಾಗುವ ನೀತಿಯಲ್ಲಿ ಗಹನವಾದ ವೈಫಲ್ಯವಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ನಾವು ಶಿಕ್ಷಣದ ಕಡೆಗೆ ಸರಿಯಾದ ಗಮನ ಕೊಡುತ್ತಿಲ್ಲ ಎಂದು ಅರ್ಥ ಮತ್ತು ಖಾಸಗಿ ಸಂಸ್ಥೆಗಳು ಕೇವಲ ಲಾಭ ಮಾಡಿಕೊಳ್ಳುವುದರಲ್ಲಿ ನಿರತವಾಗಿವೆ ಎಂದು ಅರ್ಥ. ಬ್ರಿಟಿಷ್ ಪ್ರಧಾನಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತದಲ್ಲಿ ಬ್ರಿಟನ್ ಯೂನಿವರ್ಸಿಟಿಗಳನ್ನು ಸ್ಥಾಪಿಸುವ ಬಗ್ಗೆ ಚರ್ಚೆ ಮುನ್ನೆಲೆಗೆ ಬಂದಿತ್ತು. ಹಾಗೆ ಮಾಡುವುದರಿಂದ ಬಹುಷಃ ಯಾವುದೇ ಫಲಿತಾಂಶ ದೊರೆಯುವುದಿಲ್ಲ. ಯಾಕೆಂದರೆ ಆಗ ನಾನಾ ಕಾಲೇಜು ಮತ್ತು ವಿವಿಗಳಲ್ಲಿ ಲಭ್ಯವಿರುವ ಅಧ್ಯಾಪಕರನ್ನೇ ಅಲ್ಲಿಗೆ ವರ್ಗಾಯಿಸಲಾಗುತ್ತದೆ.

ಬೋಧಕರಿಗೂ ಕೂಡ ಬೋಧಿಸುವ ಅರ್ಹತೆ ಇದೆಯೇ ಎಂದು ಖಚಿತಪಡಿಸಿಕೊಳ್ಳಲು ಇರುವ ಒಂದು ವಿಧಾನವೆಂದರೆ ಆತ ಅಥವಾ ಆಕೆಯ ಪ್ರಕಟಣೆಗಳ ಪರಿಶೀಲನೆಯನ್ನು ನಡೆಸುವುದು. ಉನ್ನತ ವಿವಿಗಳಲ್ಲಿ ಕೂಡ ಅರ್ಹ ಅಧ್ಯಾಪಕರೆಂದು ಆಯ್ಕೆಯಾದವರಲ್ಲಿ ಕೆಲವರು ಮಾತ್ರ ಸಮ ವಯಸ್ಕರ ಪರಾಮರ್ಶೆ (peer review)ಗೆ ಒಳಗಾಗಿರುತ್ತಾರೆ. ತಮ್ಮ ಮಕ್ಕಳಿಗೆ ಸರಿಯಾದ ಶಿಕ್ಷಣವೇ ಬೇಕು ಎಂದು ಬಯಸುವ ಶ್ರೀಮಂತ ಪೋಷಕರಿಗೆ ‘ಗುಣಮಟ್ಟ’ವನ್ನು ತಿಳಿಸಲು ಅಂತಾರಾಷ್ಟ್ರೀಯ ಶಾಲೆಗಳು ಯುವ ಬ್ರಿಟಿಷ್ ಪ್ರಜೆಗಳನ್ನು ನೇಮಕ ಮಾಡಿಕೊಳ್ಳುತ್ತವೆ ಎಂಬುದು ರಹಸ್ಯವಾಗೇನೂ ಉಳಿದಿಲ್ಲ.

ಅದೇ ರೀತಿ ದುಬಾರಿ ಖಾಸಗಿ ವಿವಿಗಳು ಪಾಶ್ಚಿಮಾತ್ಯ ದೇಶಗಳಿಂದ ಪಿ.ಎಚ್.ಡಿ ಪಡೆದವರನ್ನು ನೇಮಕ ಮಾಡಿಕೊಂಡು ನಾವು ಶ್ರೇಷ್ಠರು ಎಂದು ಸಾರುತ್ತವೆ ಮತ್ತು ಈ ವಿವಿಗಳನ್ನು ಭಾರತೀಯ ಶಿಕ್ಷಣದಲ್ಲಿ ‘ಅತ್ಯುತ್ತಮ’ ಎಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟ ಕ್ಷೀಣಿಸುತ್ತಿದೆ ಎಂಬ ಗ್ರಹಿಕೆಯ ಹಿನ್ನೆಲೆಯಲ್ಲಿ ಇದು ಸ್ಥಳೀಯವಾಗಿ ಪಡೆದ ವಿದೇಶಿ ಶಿಕ್ಷಣದಂತೆ ಕಾಣಬಹುದು.

ಶಿಕ್ಷಣ ನೀತಿಯಲ್ಲಿ ರಾಜಕೀಯದ ಬಣ್ಣ

ವಿದ್ಯಾರ್ಥಿ ಸಮುದಾಯದಲ್ಲಿ ಹೆಚ್ಚಾಗಿ ರಾಜಕೀಯ ಅಭಿಪ್ರಾಯವನ್ನು ಮೂಡಿಸುವುದೇ ಇಂದಿನ ಶಿಕ್ಷಣ ನೀತಿಯ ಒತ್ತು ಎನ್ನುವಂತಾಗಿದೆ. ‘ವಿದ್ಯಾರ್ಥಿ ಕಾರ್ಯಕರ್ತರ’ ಸಂಖ್ಯೆ ಹೆಚ್ಚುತ್ತಿದೆ. ಅದೇ ರೀತಿ ಬೋಧಕರಲ್ಲಿಯೂ ಕೂಡ. ಇದನ್ನು ಎಷ್ಟೇ ವೈಭವೀಕರಿಸಿದರೂ ಅದು ಸ್ವಾಗತಾರ್ಹವಲ್ಲ. ಯಾಕೆಂದರೆ ವಿದ್ಯಾರ್ಥಿಗಳಲ್ಲಿ ಅಂತಹುದೊಂದು ಪ್ರವೃತ್ತಿ ಬೆಳೆಸುವುದರಿಂದ ವಿವೇಚನಾರಹಿತ ಅಭಿಪ್ರಾಯಗಳನ್ನು ಹರಡಲು ವೇದಿಕೆ ಕಲ್ಪಿಸುತ್ತದೆ.

ಪ್ರಪಂಚದ ಬಗ್ಗೆ ತಿಳಿದುಕೊಳ್ಳುವುದು, ನಮ್ಮ ಯೋಚನೆಯ ದಿಕ್ಕು ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳುವುದು –ಇದು ಶಿಕ್ಷಣದ ಭಾಗಶಃ ಅಂಶಗಳಲ್ಲಿ ಒಂದು. ಆದರೆ ವಿದ್ಯಾರ್ಥಿಗಳು ಜನಪ್ರಿಯತೆ ಮತ್ತು ಆಕರ್ಷಕಣೆಯ ತಮ್ಮದೇ ಆದ ಬೆಂಬಲಿಗರಿಗಾಗಿ ಹುಡುಕುತ್ತಿರುವ ಆಕರ್ಷಕ ಬೋಧಕರ ಪ್ರಭಾವವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡರೆ ಮಧ್ಯಮ ವರ್ಗದಿಂದ ದೀರ್ಘಾವಧಿ ವರೆಗೆ ಭಾರತದಲ್ಲಿ ಅದು ಗಂಭೀರ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗಬಹುದು.

ಭಾರತವೊಂದು ಬೃಹತ್ ರಾಷ್ಟ್ರ. ಬಾಂಗ್ಲಾದೇಶ ಮತ್ತು ನೇಪಾಳದಲ್ಲಿನ ರಾಜಕೀಯ ಸ್ಥಿತ್ಯಂತರಗಳು ಇಲ್ಲಿ ಅಷ್ಟು ಸುಲಭಕ್ಕೆ ಪುನರಾವರ್ತನೆಯಾಗಲು ಸಾಧ್ಯವಿಲ್ಲ. ಹಾಗಿದ್ದರೂ ಕೌಶಲ್ಯಗಳೇ ಇಲ್ಲದ, ಉದ್ಯೋಗಕ್ಕೆ ಅರ್ಹರಲ್ಲದ ದೊಡ್ಡ ಪ್ರಮಾಣದ ಯುವ, ನಿರುದ್ಯೋಗಿ ಜನಸಮೂಹ ನಿಜವಾದ ಅಪಾಯ. ಸಾರ್ವಜನಿಕ ವಲಯದಲ್ಲಿ ತೀವ್ರ ಪ್ರಮಾಣದ ರಾಜಕೀಯ ಪ್ರಭಾವ ಬೀರುತ್ತಿರುವುದು ಮತ್ತು ಶಿಕ್ಷಣವೇ ನಾನಾ ಕಾರಣಕ್ಕೆ ರಾಜಕೀಯ ಸಾಧನವಾಗಿರುವುದು ಈ ಅಪಾಯವನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ.

ಸಾರ್ವಜನಿಕರ ಆರ್ಥಿಕ ಆಕಾಂಕ್ಷೆಗಳು ಮತ್ತು ಅವುಗಳನ್ನು ಪೂರೈಸಲು ಲಭ್ಯವಿರುವ ಅವಕಾಶಗಳ ನಡುವಿನ ಅಂತರವು ತೀವ್ರವಾಗಿ ಹೆಚ್ಚುವ ಮೂಲಕ ಅಪಾರವಾದ ಸಂಪತ್ತನ್ನು ಸೃಷ್ಟಿಸಿರುವುದು ಪರಿಸ್ಥಿತಿ ಇನ್ನಷ್ಟು ಹದಗೆಡಲು ಕಾರಣವಾಗಿದೆ. ಲೆಕ್ಕಕ್ಕೇ ಸಿಗದಷ್ಟು ಸಂಪತ್ತು ಚಲಾವಣೆಯಲ್ಲಿ ಇರುವುದರಿಂದ ಅಕ್ರಮ ರಾಜಕೀಯ ಕ್ರೋಢೀಕರಣಕ್ಕೆ ಹಣದ ಹರಿವು ವಿನಿಯೋಗವಾಗುವುದು ಕೂಡ ಅಪಾಯಕಾರಿ. ನಮಗಂತೂ ಈ ಅಶಾಂತಿ ಬರುತ್ತಿದೆ ಎಂಬುದು ತಿಳಿಯದೇ ಈ ಅಪಾಯ ನಮ್ಮ ಮೇಲೆ ಸುಲಭವಾಗಿ ಆವರಿಸಿಕೊಂಡು ಬಿಡಬಹುದು.

ಈ ಹಿನ್ನೆಲೆಯಲ್ಲಿಯೇ ಸೂಕ್ತ ರೀತಿಯ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಚಿಂತನಶೀಲ ಮತ್ತು ಉದ್ಯೋಗಾರ್ಹ ಯುವ ಜನರನ್ನು ಸೃಷ್ಟಿಸುವ ವಿಚಾರಕ್ಕೆ ತುರ್ತಾಗಿ ಗಮನ ಹರಿಸಬೇಕಾಗಿದೆ.

Read More
Next Story