Shikha Mukerjee

ಕೋಟಿ ಜನರ ಓಟು ಕಸಿದ ಎಸ್ಐಆರ್: ಮತದಾರರ ಆಕ್ರೋಶವನ್ನು ಜನಾಂದೋಲನವಾಗಿ ಪರಿವರ್ತಿಸೀತೇ ಇಂಡಿಯಾ ಒಕ್ಕೂಟ?


ಕೋಟಿ ಜನರ ಓಟು ಕಸಿದ ಎಸ್ಐಆರ್: ಮತದಾರರ ಆಕ್ರೋಶವನ್ನು ಜನಾಂದೋಲನವಾಗಿ ಪರಿವರ್ತಿಸೀತೇ ಇಂಡಿಯಾ ಒಕ್ಕೂಟ?
x
ತಮ್ಮದೇ ದೇಶದಲ್ಲಿ ತಮ್ಮದೇ ಹಕ್ಕುಗಳನ್ನು ದಕ್ಕಿಸಿಕೊಳ್ಳಲು ಪ್ರತಿ ದಿನವೂ ಭಾರತೀಯರು ದಾಖಲೆಗಳನ್ನು ಹಿಡಿದು ಅಲೆಯಬೇಕಾದ ಸ್ಥಿತಿಗೆ ಕಾರಣವಾದ ಎಸ್.ಐ.ಆರ್. ಪ್ರಕ್ರಿಯೆಯ ಬಗ್ಗೆ ಮುಂದಿನ ಯೋಜನೆಯನ್ನು ರೂಪಿಸಲು ನವದೆಹಲಿಯಲ್ಲಿ ಸಭೆ ಸೇರಿದ ಇಂಡಿಯಾ ಒಕ್ಕೂಟದ ನಾಯಕರು.
Click the Play button to hear this message in audio format

ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯಿಂದ ಮತದಾರರ ಮೇಲೆ ಆಗುತ್ತಿರುವ ಪರಿಣಾಮದ ಬಗ್ಗೆ ಆಕ್ರೋಶ ಮುಗಿಲು ಮುಟ್ಟಿದ ಅದೆಷ್ಟೋ ತಿಂಗಳುಗಳ ಬಳಿಕ ವಿರೋಧ ಪಕ್ಷಗಳ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿವೆ.

ತಡವಾಗಿ ಬರುವುದಕ್ಕಿಂತ ಬಾರದಿರುವುದೇ ಲೇಸು ಎಂಬ ಮಾತಿದೆ. ಚುನಾವಣಾ ಆಯೋಗ ಮತ್ತು ಅದರ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಅವರು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಮೂಲಕ ಪ್ರಜಾಪ್ರಭುತ್ವದ ವಿನಾಶಕ್ಕೆ ಹೊರಟಿದ್ದಾರೆ ಎಂದು ಆರೋಪಿಸುವ ವಿರೋಧ ಪಕ್ಷಗಳು ʼಪ್ರಜಾಪ್ರಭುತ್ವವನ್ನು ಉಳಿಸಲುʼ ರೂಪಿಸಲಾದ ಮೊದಲ ಹಂತದ ಆಂದೋಲನ ಈಗ ಚಾಲ್ತಿಯಲ್ಲಿದೆ. 19 ಪ್ರಾದೇಶಿಕ ಪಕ್ಷಗಳು ಮತ್ತು ರಾಷ್ಟ್ರೀಯ ಪಕ್ಷಗಳ ಸಭೆಯಲ್ಲಿ ಸಲ್ಪಮಟ್ಟಿಗೆ ಕುಗ್ಗಿರುವ ʼಇಂಡಿಯಾʼ ಒಕ್ಕೂಟವು ಈ ಕಾರ್ಯಯೋಜನೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಇದು ನಿರ್ದಿಷ್ಟ ಗುರಿಯನ್ನು ಹೊಂದಿರುವ ಕಾರಣ ತರ್ಕಬದ್ಧವಾಗಿದೆ.

ಎಸ್.ಐ.ಆರ್. ಪ್ರಕ್ರಿಯೆಯ ಅತಿಮಾನುಷ ನಿರ್ಧಾರಗಳು ಅಥವಾ ದೋಷಗಳು, ದಿಕ್ಕು ತೋಚದ ಹಾಗೂ ನಿರ್ಣಯಗಳನ್ನು ತೆಗೆದುಕೊಳ್ಳಲು ವಿಫಲವಾಗಿರುವ ವಿರೋಧ ಪಕ್ಷಗಳ ಪಾಲಿಗೆ ಚುನಾವಣಾ ಆಯೋಗವು ನೀಡಿದ ಉಡುಗೊರೆಯಂತಿವೆ. ಎಸ್.ಐ.ಆರ್. ಪ್ರಕ್ರಿಯೆಯ ಮೂಲಕ ಒಟ್ಟು ಅಳಿಸಿಹೋದ ಮತದಾರರ ಸಂಖ್ಯೆ 13 ಕೋಟಿ ದಾಟುವವರೆಗೆ ಪ್ರತಿಕ್ರಿಯಿಸಲು ವಿಳಂಬ ಮಾಡಿರುವುದು 'ಇಂಡಿಯಾ' ಒಕ್ಕೂಟದ ನಾಯಕತ್ವದ ದೌರ್ಬಲ್ಯವನ್ನು ಎತ್ತಿ ತೋರಿಸುತ್ತದೆ. ವಿಶೇಷವಾಗಿ ಒಂದು ಕಡೆ ಅತ್ಯಂತ ಅನುಭವಿ ಮತ್ತು ಹಳೆಯ ರಾಜಕೀಯ ಪಕ್ಷವಾದ ಕಾಂಗ್ರೆಸ್ ಮತ್ತು ಮತ್ತೊಂದು ಕಡೆ ತಮ್ಮ ರಾಜ್ಯಗಳಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಪ್ರತ್ಯೇಕವಾಗಿಯೇ ನೋಡುತ್ತಿದ್ದರೂ ಜೋರಾಗಿ ಅಥವಾ ತುರ್ತಾಗಿ ಧ್ವನಿ ಎತ್ತದ ಪ್ರಾದೇಶಿಕ ಪಕ್ಷಗಳ ವೈಫಲ್ಯಕ್ಕೆ ಇದು ಕನ್ನಡಿ ಹಿಡಿದಿದೆ.

ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಅಥವಾ ಅವರ ವಾಗ್ದಂಡನೆಗೆ ಆಗ್ರಹಿಸುವ ಅಥವಾ ಭಾರತದ ಮತದಾರರ ಮೇಲಿನ ಅವರ ದೌರ್ಜನ್ಯವನ್ನು ಪ್ರಶ್ನಿಸುವ ವ್ಯರ್ಥ ಪ್ರಯತ್ನದ ಹಾದಿಯಲ್ಲಿ ʼಇಂಡಿಯಾʼ ಒಕ್ಕೂಟವು ಮುನ್ನುಗ್ಗಿದ್ದೇ ಆಗಿದ್ದರೆ ಅದು ದೊಡ್ಡ ರಾಜಕೀಯ ಪ್ರಮಾದವೇ ಆಗಿರುತ್ತಿತ್ತು. ಆ ಗೊಂದಲದ ಹಾದಿಯನ್ನು ಎಸ್.ಐ.ಆರ್ ಪ್ರಕ್ರಿಯೆಯ ವಿನಾಶದಿಂದ ಬೇರೆಡೆಗೆ ಸೆಳೆಯಲು ಎಲ್ಲ ಸಿದ್ಧತೆಗಳನ್ನೂ ಮಾಡಲಾಗಿತ್ತು. ಈ ಎಸ್ಐಆರ್ ಪ್ರಕ್ರಿಯೆ ದೇಶದ ಹದಿಮೂರು ಕೋಟಿಗೂ ಅಧಿಕ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಬೆದರಿಕೆಯೊಡ್ಡಿದೆ. ಜೊತೆಗೆ 2024ರ ಲೋಕಸಭಾ ಚುನಾವಣೆಯಲ್ಲಿದ್ದ 97.97 ಕೋಟಿ ಮತದಾರರಲ್ಲಿಯೂ ಗೊಂದಲವನ್ನು ಸೃಷ್ಟಿಸಿದೆ.

ಈ ಯೋಜನೆಯು ವಿಪಕ್ಷಗಳಲ್ಲಿ ಹೊಸ ಭರವಸೆ ಮತ್ತು ವೇಗವನ್ನು ತಂದಿದೆ. ಇದು ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್ಡಿಎ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರವಾಗಿ ದೊಡ್ಡ ಹೊಡೆತ ನೀಡದಿದ್ದರೂ, ಅವರ ವಿರುದ್ಧ ಹೋರಾಡಲು ಬಲ ತಂದುಕೊಟ್ಟಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಚುನಾವಣಾ ಆಯೋಗದ ತ್ರಿಮೂರ್ತಿಗಳು ತಮ್ಮನ್ನು ಆ ಹುದ್ದೆಗೆ ನೇಮಿಸಿದ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಇಂಡಿಯಾ ಮೈತ್ರಿಕೂಟದ ಸ್ಪಷ್ಟ ಮತ್ತು ಸರ್ವಸಮ್ಮತ ತೀರ್ಮಾನವಾಗಿದೆ.

ತಂತ್ರಜ್ಞಾನ ತಂದ ಎಡವಟ್ಟು

ದೋಷಪೂರಿತವಾದ ದತ್ತಾಂಶದ ಕಾರಣದಿಂದಾಗಿ ಸಾಫ್ಟ್ವೇರ್ ತಾನಾಗಿಯೇ ಲಕ್ಷಾಂತರ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿದೆ. ಈ ತಪ್ಪನ್ನು ಸರಿಪಡಿಸಲು ಸ್ಥಳೀಯ ಚುನಾವಣಾಧಿಕಾರಿಗಳಿಗೆ ಇದ್ದ ಅಧಿಕಾರವನ್ನೂ ತಂತ್ರಜ್ಞಾನ ತಡೆಹಿಡಿದಿದೆ. 'ವಿಶೇಷ ಸಮಗ್ರ ಪರಿಷ್ಕರಣೆ' ಪ್ರಕ್ರಿಯೆಯಲ್ಲಿದ್ದ ಈ ದೊಡ್ಡ ಲೋಪವನ್ನು ವಿಪಕ್ಷಗಳು ಇದುವರೆಗೆ ಸ್ಪಷ್ಟವಾಗಿ ಗುರುತಿಸಿರಲಿಲ್ಲ. ಆದರೆ ಈಗ 'ಇಂಡಿಯಾ' ಮೈತ್ರಿಕೂಟವು ಈ ತಂತ್ರಜ್ಞಾನದ ಎಡವಟ್ಟನ್ನು ಬಹಿರಂಗಪಡಿಸುವ ಮೂಲಕ, ಕೋಟ್ಯಂತರ ಮತದಾರರಿಗೆ ಇದರಿಂದಾಗಿರುವ ಸಮಸ್ಯೆಯ ಗಂಭೀರತೆಯನ್ನು ಮುನ್ನೆಲೆಗೆ ತಂದಿದೆ.

ಯಂತ್ರಗಳು ಮತ್ತು ತಂತ್ರಜ್ಞಾನವು ಅಂತಿಮವಾಗಿ ಅಧಿಕಾರಿಗಳ ನಿರ್ಧಾರಗಳ ಮೇಲೆಯೇ ನಡೆಯುವುದರಿಂದ, ಈ ಪ್ರಕ್ರಿಯೆಯು ಒಂದೆಡೆ ಚುನಾವಣಾ ಆಯೋಗದ ನಿರ್ಲಕ್ಷ್ಯವನ್ನು, ಇನ್ನೊಂದೆಡೆ ಮತದಾರರ ಸಂಕಷ್ಟವನ್ನು ಬಯಲಿಗೆಳೆದಿದೆ. 2024ರ ಚುನಾವಣೆಯಲ್ಲಿ ಮತ ಚಲಾಯಿಸಿದ 97.97 ಕೋಟಿ ಮತದಾರರು, ತಮ್ಮ ಹಕ್ಕನ್ನು ಉಳಿಸಿಕೊಳ್ಳಲು ತಮ್ಮ ಅರ್ಹತೆಯನ್ನು ಸಾಬೀತುಪಡಿಸಲು ಅಲೆಯುವಂತಾಯಿತು.

ಭಾರತದಲ್ಲಿ ಜನರಿಗೆ ದಾಖಲೆಗಳನ್ನು ನಿರ್ವಹಿಸುವುದು ಎಷ್ಟು ಕಷ್ಟ ಎಂಬ ವಾಸ್ತವ ಸಂಗತಿ ಚುನಾವಣಾ ಆಯೋಗಕ್ಕೆ ತಿಳಿದಿಲ್ಲವೇನೋ ಎನ್ನುವಂತಿತ್ತು. ಏಕೆಂದರೆ, ಪಾಸ್ಪೋರ್ಟ್, ಪಡಿತರ ಚೀಟಿ, ಉದ್ಯೋಗ ಖಾತ್ರಿ ಕಾರ್ಡ್, ಆಸ್ತಿ ದಾಖಲೆಗಳು, ಜನನ ಪ್ರಮಾಣಪತ್ರ, ವಿವಾಹ ನೋಂದಣಿ ಪತ್ರ ಮತ್ತು ಸ್ವತಃ ಆಯೋಗವೇ ನೀಡಿದ ಮತದಾರರ ಗುರುತಿನ ಚೀಟಿಗಳನ್ನೂ ಸಹ "ಸಂಶಯಾಸ್ಪದ" ಎಂಬ ನೆಪವೊಡ್ಡಿ ತಿರಸ್ಕರಿಸಲಾಯಿತು. ತಮ್ಮ ಪೌರತ್ವ ಮತ್ತು ಮತದಾನದ ಹಕ್ಕನ್ನು ಸಾಬೀತುಪಡಿಸಲು ದೇಶದ ಮತದಾರರು ಈ ಪರಿಯಲ್ಲಿ ದಾಖಲೆಗಳನ್ನು ಹಿಡಿದು ಅಲೆಯಬೇಕಾಗಿ ಬಂದಿದ್ದು ಭಾರತದ ಇತಿಹಾಸದಲ್ಲೇ ಮೊದಲ ಬಾರಿಯಾಗಿದೆ.

ವಿಶೇಷ ಸಮಗ್ರ ಪರಿಷ್ಕರಣೆ' ಪ್ರಕ್ರಿಯೆಯು ಮುಂದಿನ ಪೀಳಿಗೆಯ ಮೇಲೆಯೂ ಗಂಭೀರ ಪರಿಣಾಮ ಬೀರುತ್ತದೆ. ಒಬ್ಬ ಮತದಾರನ ಪೋಷಕರ ಹೆಸರು 2002ರ ಪಟ್ಟಿಯಲ್ಲಿ ಇಲ್ಲದಿದ್ದರೆ, ಈಗ ಆತನ ಮತದಾನದ ಹಕ್ಕನ್ನು ಕಸಿಯಬಹುದು. ಈ ವ್ಯವಸ್ಥೆ ಮುಂದುವರಿದರೆ, ಇಂದಿನ ಮತದಾರನ ಹಕ್ಕು ಕಳೆದುಕೊಂಡರೆ ಆತನ ಮುಂದಿನ ಪೀಳಿಗೆಯೂ "ದಾಖಲೆಯಿಲ್ಲದವರು" ಎಂಬಂತಾಗಿ ಮತದಾನದ ಹಕ್ಕಿನಿಂದ ವಂಚಿತರಾಗುತ್ತಾರೆ. ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಎಸ್.ಐ.ಆರ್ ಪರಿಶೀಲನೆಯಾಗದ ಕಾರಣ ಲಕ್ಷಾಂತರ ಬಡವರು ಸರ್ಕಾರದ ಕಲ್ಯಾಣ ಯೋಜನೆಗಳಿಂದ ವಂಚಿತರಾಗಿ, ತೀವ್ರ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದಾರೆ.

ಪ್ರಶ್ನಾರ್ಹ ಸಂಗತಿಗಳು

ಚುನಾವಣಾ ಆಯೋಗವು ತನ್ನ ನಿರ್ಧಾರದ ಪರಿಣಾಮಗಳ ಬಗ್ಗೆ ಜಾಗರೂಕತೆಯಿಂದ ಇದ್ದಿದ್ದರೆ, 13 ಕೋಟಿಗೂ ಹೆಚ್ಚು ಮತದಾರರು ಮತದಾನದ ಹಕ್ಕು ಕಳೆದುಕೊಳ್ಳುವ ಭೀತಿಗೆ ಒಳಗಾಗುತ್ತಿರಲಿಲ್ಲ. ಆದ್ದರಿಂದ ಎಸ್.ಐ.ಆರ್ ಪ್ರಕ್ರಿಯೆಯ ಉದ್ದೇಶ ಮತ್ತು ವಿಧಾನವನ್ನು ಪ್ರಶ್ನಿಸುವುದು ಸಂಪೂರ್ಣವಾಗಿ ಸೂಕ್ತವಾಗಿದೆ. ಈ ಹೆಸರು ಅಳಿಸುವ ಪ್ರಕ್ರಿಯೆಯಲ್ಲಿ ಮುಖ್ಯವಾಗಿ ಮಹಿಳೆಯರು ಮತ್ತು ಮುಸ್ಲಿಂ ಮತದಾರರನ್ನು ಗುರಿಯಾಗಿ ಮಾಡಲಾಗಿದೆ. ಉದಾಹರಣೆಗೆ, ಪಶ್ಚಿಮ ಬಂಗಾಳದ ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳಲ್ಲಿ ಮತ್ತು ನವದೆಹಲಿಯ ಚಾಂದಿನಿ ಚೌಕ್ನ 'ಬೆಲಾ ಎಸ್ಟೇಟ್' ಕೊಳಚೆ ಪ್ರದೇಶ ಒಂದರಲ್ಲೇ 728 ಮತದಾರರಲ್ಲಿ 727 ಜನರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.

ಈ ಎಸ್.ಐ.ಆರ್ ಪ್ರಕ್ರಿಯೆಯ ಉದ್ದೇಶವನ್ನು ಕೇಂದ್ರ ಗೃಹಸಚಿವರಾದ ಅಮಿತ್ ಶಾ ಅವರು 2025 ರ ಡಿಸೆಂಬರ್ 10ರಂದು ಸಂಸತ್ತಿನಲ್ಲಿ ಸ್ಪಷ್ಟ ಮಾತುಗಳಲ್ಲಿ ಸಮರ್ಥಿಸಿಕೊಂಡಿದ್ದರು. ಅರ್ಹರಲ್ಲದ ಮತದಾರರನ್ನು "ಗುರುತಿಸುವುದು, ಅಳಿಸುವುದು ಮತ್ತು ಗಡೀಪಾರು ಮಾಡುವುದು" (DETECT, DELETE, DEPORT) ಇದರ ಉದ್ದೇಶ ಎಂದು ಅವರು ಹೇಳಿದ್ದರು. "ಗಡೀಪಾರು" ಎಂಬ ಪದವನ್ನು ಸೇರಿಸುವ ಮೂಲಕ, ಈ ಪ್ರಕ್ರಿಯೆಯನ್ನು ಅಕ್ರಮ ನುಸುಳುಕೋರರನ್ನು ಹುಡುಕುವ ಕಾರ್ಯಾಚರಣೆಯನ್ನಾಗಿ ಪರಿವರ್ತಿಸಲಾಯಿತು.

ರಾಜಕೀಯ ಮತ್ತು ಸಾಮಾಜಿಕ ಪರಿಣಾಮ

ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ನೆರೆದೇಶಗಳಿಂದ ಬಂದ ಹಿಂದೂಗಳಿಗೆ ಪೌರತ್ವ ನೀಡುವುದು ಬಿಜೆಪಿ ನೀತಿಯಾಗಿತ್ತು. ಆದರೆ, ಎಸ್.ಐ.ಆರ್ ಪ್ರಕ್ರಿಯೆ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (CAA) ಸರಿಯಾಗಿ ಸಮನ್ವಯಗೊಳ್ಳಲಿಲ್ಲ. ಇದರ ಪರಿಣಾಮವಾಗಿ, ಈ ಹಿಂದೆ ಬಿಜೆಪಿಗೆ ಮತ ನೀಡಿದ್ದ ಪಶ್ಚಿಮ ಬಂಗಾಳದ 'ಮಟುವಾ' (ಪರಿಶಿಷ್ಟ ಜಾತಿ) ಮತ್ತು 'ರಾಜಬಂಶಿ' ಸಮುದಾಯದ ಸಾವಿರಾರು ಹಿಂದೂ ಬಂಗಾಳಿಗಳ ಹೆಸರುಗಳೇ ಮತದಾರರ ಪಟ್ಟಿಯಿಂದ ಅಳಿಸಿಹೋಗಿ, ಈಗ ಅವರೇ ಗಡೀಪಾರಾಗುವ ಭೀತಿಗೆ ಸಿಲುಕಿದ್ದಾರೆ.

ವಿಪಕ್ಷಗಳ ಹೋರಾಟ ಮತ್ತು ಜನಾಕ್ರೋಶ

'ಇಂಡಿಯಾ' ಮೈತ್ರಿಕೂಟವು ಈಗ ನಡೆಸುತ್ತಿರುವ ರಾಜಕೀಯ ಹೋರಾಟವು ಕೇವಲ ಬಿಜೆಪಿ ಅಥವಾ ಪ್ರಧಾನಿ ಮೋದಿ ವಿರುದ್ಧ ಮಾತ್ರವಲ್ಲದೆ, ಇಡೀ ಆಡಳಿತ ವ್ಯವಸ್ಥೆಯ ವಿರುದ್ಧ ಜನರನ್ನು ಒಗ್ಗೂಡಿಸುವ ಕಡೆಗೆ ಸಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ವಂತ ಬಲದ ಮೇಲೆ ಸ್ಪಷ್ಟ ಬಹುಮತ ಸಿಗಲಿಲ್ಲ. ಆ ಚುನಾವಣೆಗೆ ಮುನ್ನವೇ ಜನರಲ್ಲಿದ್ದ ಅಸಮಾಧಾನವನ್ನು ಒಗ್ಗೂಡಿಸಿ ಹೋರಾಟ ರೂಪಿಸಲು ಇದು ಮೊದಲ ಹೆಜ್ಜೆಯಾಗಿದೆ. ಈ ಮೈತ್ರಿಕೂಟವು ತನ್ನ ಒಗ್ಗಟ್ಟು ಮತ್ತು ಉದ್ದೇಶವನ್ನು ಹಾಳುಮಾಡಿಕೊಳ್ಳದೆ ಸರಿಯಾಗಿ ಮುನ್ನಡೆದರೆ, ಈ ಕಾರ್ಯ ಯೋಜನೆಯು ಖಂಡಿತವಾಗಿಯೂ ಅವರಿಗೆ ರಾಜಕೀಯ ಯಶಸ್ಸು ತಂದುಕೊಡಲಿದೆ.

97.97 ಕೋಟಿ ಮತದಾರರಿಗೆ ತೊಂದರೆ ನೀಡಿದ ಮತ್ತು ಅವರನ್ನು ಆತಂಕಕ್ಕೆ ತಳ್ಳಿದ ಈ ವಿಷಯವು ವಿಪಕ್ಷಗಳಿಗೆ ಸಿಕ್ಕ ದೊಡ್ಡ ಅವಕಾಶ. ಏಕೆಂದರೆ ಈ ಸಮಸ್ಯೆಯು ದೊಡ್ಡ ರಾಜಕಾರಣಿಗಳಿಂದ ಹಿಡಿದು 'ಕೊಳಗೇರಿ' (JJ Colony) ನಿವಾಸಿಗಳವರೆಗೆ ಪ್ರತಿಯೊಬ್ಬರ ಮೇಲೆಯೂ ಪರಿಣಾಮ ಬೀರಿದೆ. ಹೀಗೆ ಹಂಚಿಕೆಯಾದ ಸಂಕಷ್ಟವು ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ತಂದು ನಿಲ್ಲಿಸಿದೆ. ಇದರಿಂದಾಗಿ ಜನರಲ್ಲಿದ್ದ ತೀವ್ರ ಅಸಮಾಧಾನವನ್ನು ಒಟ್ಟುಗೂಡಿಸಿ ಬೃಹತ್ ಹೋರಾಟ ಕಟ್ಟಲು ವಿಪಕ್ಷಗಳಿಗೆ ಹೆಚ್ಚು ಸುಲಭವೂ ಸಕಾಲವೂ ಆಗಿದೆ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು 'ದ ಫೆಡರಲ್ ಕರ್ನಾಟಕ'ದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story