Siddhaarth Mahan

ನೀಳಕಾಯದ ಡ್ಯಾಶಿಂಗ್ ಶಿವಂ ದುಬೆ: ಭಾರತದ ಚುಟುಕು ಕ್ರಿಕೆಟ್‌ಗೊಬ್ಬ ಪವರ್ ಹಿಟ್ಟರ್ ಉದಯ


ನೀಳಕಾಯದ ಡ್ಯಾಶಿಂಗ್ ಶಿವಂ ದುಬೆ: ಭಾರತದ ಚುಟುಕು ಕ್ರಿಕೆಟ್‌ಗೊಬ್ಬ ಪವರ್ ಹಿಟ್ಟರ್ ಉದಯ
x
ಶಿವಂ ದುಬೆ ಐಪಿಎಲ್‌ಗೆ ಕಾಲಿಟ್ಟಾಗ ಅವರ ಬೆನ್ನ ಹಿಂದೆ ನಿಂತು ಮಾರ್ಗದರ್ಶನ ಮಾಡಿದವರು ಕೂಲ್ & ಕೂಲ್ ಕ್ಯಾಪ್ಟನ್ ಎಂ.ಎಸ್.ಧೋನಿ. ಸಿಎಸ್ಕೆ ಪರಿಸರಕ್ಕೆ ತಕ್ಕಂತೆ ಬಹುಬೇಗ ಹೊಂದಿಕೊಂಡ ದುಬೆ ಒಬ್ಬ ವಿದ್ವಂಸಕ ಬ್ಯಾಟಿಂಗ್ ಪಟುವಾಗಿ ಹೊರಹೊಮ್ಮಿದರು.
Click the Play button to hear this message in audio format

ʼನೀಲಿ ದಿರಿಸಿನ ಹುಡುಗರುʼ ಈಗ ದಿಗ್ಗಜರ ನೆರಳಿನಿಂತ ಹೊರಬಂದಿದ್ದಾರೆ. ಇಂತಹ ಹೊತ್ತಿನಲ್ಲಿ ಸಾಂಪ್ರದಾಯಿಕ ಶೈಲಿಯ ನಂಬಿಕಸ್ತನ ಆಟದ ಬದಲಾಗಿ ತನ್ನ ಪಾತ್ರದ ಬಗ್ಗೆ ಸ್ಪಷ್ಟತೆ ಇರುವವರು ಈಗ ಬೇಕಾಗಿದೆ.

ಎಂಥಾ ಒತ್ತಡವಿದ್ದರೂ ಸಂಯಮ ಕಾಯ್ದುಕೊಂಡಿದ್ದು, ಹೊಸ ತಲೆಮಾರಿನ ಆಟಗಾರರಿಗೆ ಸುಗಮವಾಗಿ ಹಸ್ತಾಂತರವಾದ ಹೊಣೆಗಾರಿಕೆ, ಫೈನಲ್ ಪಂದ್ಯದಲ್ಲಿ ತೋರಿದ ಅಪೂರ್ವವಾದ ಪ್ರಾಬಲ್ಯ…. ಹೀಗೆ 2026ರ ಟಿ20 ವಿಶ್ವಕಪ್ನಲ್ಲಿ ಭಾರತದ ಐತಿಹಾಸಿಕ ಗೆಲುವು ಸ್ಮರಣೀಯ ಎನ್ನಲು ಹಲವು ಕಾರಣಗಳು ನಮಗೆ ಸಿಗುತ್ತವೆ.

ಆದರೆ ಈ ವಿಜಯದ ಅತ್ಯಂತ ಕುತೂಹಲಕಾರಿ ಅಂಶವೆಂದರೆ ಈ ಚುಟುಕು ಮಾದರಿಯ ಕ್ರಿಕೆಟ್ಗಾಗಿ ಭಾರತವು ಈಗ ಸಜ್ಜುಗೊಳಿಸುತ್ತಿರುವ ಮತ್ತು ನಂಬಿಕೆ ಇಡುತ್ತಿರುವ ಆಟಗಾರರ ಶೈಲಿ.

ಈ ಹೊಸ ಟಿ20 ಅಸ್ಮಿತೆಯ ಸಾರವನ್ನು ಒಬ್ಬ ಆಟಗಾರನಲ್ಲಿ ಕಾಣುವುದಾದರೆ, ಅದು ಶಿವಂ ದುಬೆ. ಈ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರಂತಹ ಆಟಗಾರರ ಪ್ರದರ್ಶನಗಳು ಹೆಚ್ಚು ಗಮನ ಸೆಳೆದರೂ, ದುಬೆ ಅವರ ಕೊಡುಗೆಗಳು ಭಾರತದ ಈ ಅಭಿಯಾನದ ಹಲವು ನಿರ್ಣಾಯಕ ಕ್ಷಣಗಳನ್ನು ಸದ್ದಿಲ್ಲದೇ ರೂಪಿಸಿದವು. ಹಲವು ವರ್ಷಗಳಿಂದ ಭಾರತೀಯ ಕ್ರಿಕೆಟ್ ಕೇವಲ ಪ್ರಮುಖ ಸ್ಟಾರ್ ಆಟಗಾರರ ಸುತ್ತಲೇ ಸುತ್ತುತ್ತಿದ್ದುದನ್ನು ನೀವು ಗಮನಿಸಿರಬಹುದು.

ಹಿಂದೆ ಬ್ಯಾಟಿಂಗ್ ವಿಭಾಗವು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಆಟಗಾರರ ನಂಬಿಕಸ್ತ ಪ್ರದರ್ಶನದ ಮೇಲೆ ಹೆಚ್ಚು ಅವಲಂಬಿತವಾಗಿತ್ತು, ಮತ್ತು ಮಧ್ಯಮ ಕ್ರಮಾಂಕವು ಅನುಭವದ ಆಧಾರದ ಮೇಲೆ ರೂಪಿತವಾಗಿತ್ತು.

ಪವರ್ ಹಿಟ್ಟರ್ ದುಬೆ ಉದಯ

ಆದರೆ 2024ರ ಟಿ20 ವಿಶ್ವಕಪ್ ನಂತರ, ಕೊಹ್ಲಿ, ರೋಹಿತ್ ಮತ್ತು ರವೀಂದ್ರ ಜಡೇಜಾ ಅವರಂತಹ ದಿಗ್ಗಜರು ಈ ಮಾದರಿಯಿಂದ ನಿವೃತ್ತರಾದಾಗ, ಭಾರತವು ವಿಭಿನ್ನ ಹಾದಿಯನ್ನು ತುಳಿಯಲು ಆರಂಭಿಸಿತು. ಈ ಹೊಸ ಯೋಜನೆಯ ಪ್ರಕಾರ, ಭರ್ಜರಿಯಾಗಿ ಚೆಂಡನ್ನು ಹೊಡೆಯಬಲ್ಲ, ಪಂದ್ಯದ ನಾನಾ ಸಂದರ್ಭಗಳಿಗೆ ತಕ್ಕಂತೆ ತತ್ಕ್ಷಣ ಹೊಂದಿಕೊಳ್ಳಬಲ್ಲ ಮತ್ತು ಆಟದ ಹಲವು ಹಂತಗಳಲ್ಲಿ ನೆರವಾಗಬಲ್ಲ ಆಟಗಾರರ ಅಗತ್ಯವಿತ್ತು.

ಶಿವಂ ದುಬೆ ಈ ಹೊಸ ಚೌಕಟ್ಟಿಗೆ ಅಚ್ಚುಕಟ್ಟಾಗಿ ಹೊಂದಿಕೊಳ್ಳುತ್ತಾರೆ. ಹಲವು ವಿಧಗಳಲ್ಲಿ ಅವರು ಭಾರತದ ಟಿ20 ಕ್ರಿಕೆಟ್‌ನ ಹೊಸ ಮಾದರಿಯನ್ನು ಪ್ರತಿನಿಧಿಸುತ್ತಾರೆ:

ಒಬ್ಬ ಎತ್ತರದ ಪವರ್ ಹಿಟ್ಟರ್

ಮಧ್ಯಮ ಕ್ರಮಾಂಕದ ವೇಗವರ್ಧಕ

ಸನ್ನಿವೇಶಕ್ಕೆ ತಕ್ಕಂತೆ ಬದಲಾಗಬಲ್ಲ ಬ್ಯಾಟರ್

ಅಗತ್ಯವಿದ್ದಾಗ ನೆರವಾಗುವ ಬೌಲಿಂಗ್ ಆಯ್ಕೆ

ದುಬೆ ಅವರಿಗೆ ಅವರ ಪಾತ್ರದ ಬಗ್ಗೆ ಸ್ಪಷ್ಟತೆ ಇದೆ. ಹಾಗಾಗಿಯೇ ಅವರು ಯಶಸ್ಸು ಕಂಡುಕೊಂಡಿದ್ದಾರೆ. ನೀಳಕಾಯದ, ಎಡಗೈ ಬ್ಯಾಟರ್ ಶಿವಂ ಮುಖ್ಯವಾಗಿ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಾರೆ, ಇದು ಆಧುನಿಕ T20 ಕ್ರಿಕೆಟ್ನ ಅತ್ಯಂತ ಸವಾಲಿನ ಸ್ಥಾನ. ಅವರು ಬ್ಯಾಟಿಂಗ್ಗೆ ಕಣಕ್ಕೆ ಇಳಿದಾಗ ಪಂದ್ಯದ ಪರಿಸ್ಥಿತಿ ಸ್ಥಿರವಾಗಿರುವುದು ಬಲು ಅಪರೂಪ. ಕೆಲವೊಮ್ಮೆ ತಂಡಕ್ಕೆ ಇನ್ನಿಂಗ್ಸ್ ಕಟ್ಟುವ ಅಗತ್ಯವಿರುತ್ತದೆ, ಇನ್ನು ಕೆಲವು ಬಾರಿ ಅಬ್ಬರದ ಬ್ಯಾಟಿಂಗ್ ಬೇಕಿರುತ್ತದೆ. ಈ ವಿಶ್ವಕಪ್ನಲ್ಲಿ ದುಬೆ ಅವರು ತಂಡಕ್ಕೆ ಏನು ಬೇಕೋ ಅದನ್ನು ನಿಖರವಾಗಿ ನೀಡಬಲ್ಲರು ಎಂದು ಪದೇ ಪದೇ ಸಾಬೀತುಪಡಿಸಿದರು.

ಪಂದ್ಯದ ಗತಿ ಬದಲಿಸಿದ ಬ್ಯಾಟಿಂಗ್

ಟೂರ್ನಿಯುದ್ದಕ್ಕೂ ಅವರು ಪಂದ್ಯದ ಗತಿಯನ್ನು ಬದಲಿಸುವಂತಹ ಹಲವಾರು ಪ್ರಮುಖ 'ಕ್ಯಾಮಿಯೋ' ಇನ್ನಿಂಗ್ಸ್ಗಳನ್ನು ಆಡಿದರು. ಗ್ರೂಪ್ ಹಂತದಲ್ಲಿ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ, ಅವರು ಸ್ಫೋಟಕ ಅರ್ಧಶತಕ ಸಿಡಿಸುವ ಮೂಲಕ ಭಾರತ ತಂಡವು ಬೃಹತ್ ಮೊತ್ತವನ್ನು ಪೇರಿಸಲು ನೆರವಾದರು ಮತ್ತು ಸುಲಭ ಜಯಕ್ಕೆ ದಾರಿ ಮಾಡಿಕೊಟ್ಟರು. ಈ ಇನ್ನಿಂಗ್ಸ್ನಲ್ಲಿ ಅವರು ಕ್ರೀಸ್ಗೆ ತಡವಾಗಿ ಬಂದರೂ ಬೌಲರ್ಗಳ ಮೇಲೆ ಹೇಗೆ ಸವಾರಿ ಮಾಡಬಲ್ಲರು ಎಂಬುದಕ್ಕೆ ಸಾಕ್ಷಿಯಾಗಿತ್ತು.

ವೆಸ್ಟ್ ಇಂಡೀಸ್ ವಿರುದ್ಧದ ಸೂಪರ್-8 ಹಣಾಹಣಿ ಭಾರತಕ್ಕೆ ಅಕ್ಷರಶಃ ಕ್ವಾರ್ಟರ್ಫೈನಲ್ನಂತಿತ್ತು. ಆ ಗುರಿ ಬೆನ್ನಟ್ಟುವ ಕೆಲಸವು ಅತ್ಯಂತ ಉದ್ವಿಗ್ನ ಘಟ್ಟಕ್ಕೆ ತಲುಪಿತ್ತು. ಸಂಜು ಸ್ಯಾಮ್ಸನ್ ಇನ್ನಿಂಗ್ಸ್ ನಿಭಾಯಿಸುತ್ತಿದ್ದರೂ ಒತ್ತಡ ಮಾತ್ರ ಹೆಚ್ಚಾಗುತ್ತಲೇ ಇತ್ತು. ಅಂತಹ ಸಮಯದಲ್ಲಿ ಕ್ರೀಸ್‌ಗೆ ಬಂದ ದುಬೆ, ತಕ್ಷಣವೇ ಆ ಒತ್ತಡವನ್ನು ಕಡಿಮೆ ಮಾಡಿದರು. ತಮ್ಮ ಅಲ್ಪಾವಧಿಯ ಬ್ಯಾಟಿಂಗ್‌ನಲ್ಲಿ, ಅವರು ಕೇವಲ ನಾಲ್ಕು ಎಸೆತಗಳಲ್ಲಿ ಎರಡು ಭರ್ಜರಿ ಬೌಂಡರಿಗಳ ನೆರವಿನಿಂದ 8 ರನ್ ಗಳಿಸಿದರು (200ರ ಸ್ಟ್ರೈಕ್ ರೇಟ್).

ನಂತರದ ಸರದಿ ಅಹಮದಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯ. ಭಾರತ ಅದಾಗಲೇ ಭದ್ರ ಬುನಾದಿಯನ್ನು ಹಾಕಿತ್ತು. ಆದರೆ ಕೀವಿಸ್‌ನ ಕರಾರುವಾಕ್ ಬೌಲಿಂಗ್ ಕಾರಣದಿಂದ ರನ್ ಗತಿಯಲ್ಲಿ ಸಲ್ಪ ಇಳಿಕೆ ಕಂಡಿತ್ತು. ಅಂತಹ ಹಂತದಲ್ಲಿ ಕಣಕ್ಕೆ ಇಳಿದವರು ದುಬೆ.

ಅಷ್ಟೂ ಹೊತ್ತು ಬಿಗಿಯಾದ ಬೌಲಿಂಗ್ ಮಾಡುತ್ತಿದ್ದ ಮ್ಯಾಟ್ ಹೆನ್ರಿ ಅವರನ್ನು ದುಬೆ ಎಗ್ಗಿಲ್ಲದೆ ದಂಡಿಸಿದರು. ಒಂದರ ಹಿಂದೆ ಒಂದು ಬೌಂಡರಿಗಳನ್ನು ಚಚ್ಚುವ ಮೂಲಕ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಇದರ ಫಲವಾಗಿಯೇ ಭಾರತ 250ರ ಗಡಿಯನ್ನು ದಾಟಲು ಸಾಧ್ಯವಾಯಿತು. ಹೀಗೆ ಏಕಾಏಕಿ ಬೆಟ್ಟದಂತೆ ಏರಿಬಿಟ್ಟ ರನ್ ಪರ್ವತವನ್ನು ನ್ಯೂಜಿಲೆಂಡ್ ಏರದಂತೆ ಮಾಡಿಬಿಟ್ಟಿತು.

ಆಧುನಿಕ ಟಿ20 ಕ್ರಿಕೆಟನ್ನು ವ್ಯಾಖ್ಯಾನಿಸಬೇಕಾಗಿದ್ದರೆ ಇಂತಹ ಇನ್ನಿಂಗ್ಸ್ ಕೊಡುಗೆ ಬೇಕಾಗಿರುತ್ತದೆ. ಈ ಚುಟುಕು ಮಾದರಿಯಲ್ಲಿ ರನ್‌ಗಳ ಮೊತ್ತಕ್ಕಿಂತಲೂ ಆಟದ ಮೇಲೆ ಬೀರುವ ಫಟಾಫಟ್ ಪ್ರಭಾವ ಹೆಚ್ಚು ಮುಖ್ಯವಾಗುತ್ತದೆ. ಕ್ಲಪ್ತ ಕಾಲದಲ್ಲಿ ಎಂಟೇ ಎಂಟು ಬಾಲ್ಗಳಲ್ಲಿ 25 ರನ್ ಸುರಿಮಳೆ ಗೆರೆಯುವ ಬ್ಯಾಟರ್ 40 ಎಸೆತಗಳ ಕಾಲ ಕ್ರೀಸ್ನಲ್ಲಿ ತಳಕಚ್ಚಿ ನಿಂತವನಿಗಿಂತ ಮುಖ್ಯವಾಗಿ ಬಿಡುತ್ತಾನೆ. ಆತ ಪಂದ್ಯದ ಗತಿಯನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಬದಲಿಸಿಬಿಡಬಲ್ಲ. ಆ ತಾಕತ್ತು ಇರುವುದು ದುಬೆ ಅವರಲ್ಲಿ. ಹಾಗಾಗಿ ಶಿವಂ ಸದ್ದಿಲ್ಲದೆ ಭಾರತದ ಅತ್ಯಂತ ನಂಬಿಕಸ್ಥ ʼಇಂಪ್ಯಾಕ್ಟ್ ಪ್ಲೇಯರ್ʼ ಆಗಿ ಹೊರಹೊಮ್ಮಿದ್ದಾರೆ ಎಂದು ಎದೆ ತಟ್ಟಿ ಹೇಳಬಹುದು.

ಡೆತ್ ಓವರ್‌ಗಳ ಡೇಂಜರ್

ದುಬೆ ಅವರಿಗಿರುವ ಪವರ್ ಮತ್ತು ಕ್ಲ್ಯಾರಿಟಿ ಉದ್ದೇಶವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವಂತೆ ಮಾಡಿದೆ. ಕಳೆದ ಕೆಲವು ವರ್ಷಗಳಿಂದ ಅವರು ತಮ್ಮ ಸ್ಟ್ರೈಕ್‌ರೇಟು ಗಮನಾರ್ಹವಾಗಿ ಸುಧಾರಿಸಿಕೊಂಡು ಬಂದಿದ್ದಾರೆ. ಅದರಲ್ಲೂ ವಿಶೇಷವಾಗಿ ವೇಗದ ಬೌಲಿಂಗ್ ವಿರುದ್ಧ ಮಧ್ಯಮ ಗತಿಯಲ್ಲಿ ಮತ್ತು ಡೆತ್ ಓವರ್ಗಳಲ್ಲಿ (ಕೊನೆಯ ಓವರ್ಗಳು) ಅಪಾಯಕಾರಿ ಹಿಟ್ಟರ್ ಆಗಿ ಬದಲಾಗಿದ್ದಾರೆ. ಇಷ್ಟಾಗಿಯೂ ತಂಡದಲ್ಲಿ ಅವರ ಸ್ಥಾನವನ್ನು ಭದ್ರಪಡಿಸಿರುವುದು ಬಹುಮುಖ ಪ್ರತಿಭೆ.

ಇವೆಲ್ಲಕ್ಕಿಂತ ಮುಖ್ಯವಾಗಿ ದುಬೆ ಕೇವಲ ಒಬ್ಬ ಫಿನಿಶರ್ ಅಲ್ಲ. ಸಂದರ್ಭಕ್ಕೆ ತಕ್ಕಂತೆ ಅವರು ಬ್ಯಾಟಿಂಗ್ ಕ್ರಮಾಂಕದಲ್ಲಿ ಮೇಲೆ ಬಂದೂ ಉಪಯುಕ್ತವಾದ ಕೊಡುಗೆ ನೀಡಬಲ್ಲರು. ಇಂಗ್ಲಂಡ್ ವಿರುದ್ಧದ ಸೆಮಿಫೈನಲ್ನಲ್ಲಿ ಅವರು ಮತ್ತೊಂದು ಚುರುಕಿನ ಇನ್ನಿಂಗ್ಸ್ ಕಟ್ಟಿದರು. ನಾಲ್ಕನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಕಣಕ್ಕಿಳಿದ ಶಿವಂ ಕೇವಲ 25 ಎಸೆತಗಳಲ್ಲಿ 43 ರನ್ ಪೇರಿಸಿ ಭಾರತದ ರನ್ ವೇಗದ ಗತಿ ತಗ್ಗದಂತೆ ಎಚ್ಚರಿಕೆ ವಹಿಸಿದರು.

ಇಂದಿನ ಕ್ರಿಕೆಟ್ ಮಾದರಿಯಲ್ಲಿ ತಂಡವನ್ನು ಹೇಗೆ ಕಟ್ಟಿದರೆ ಸರಿಹೋದೀತು, ಅದನ್ನು ಬ್ಯಾಲೆನ್ಸ್ ಹೇಗೆ ಮಾಡುವುದು ಎಂದು ತಲೆಕೆಡಿಸಿಕೊಳ್ಳುತ್ತಿರುವ ಕಾಲಘಟ್ಟದಲ್ಲಿ ಬಹುಮುಖ ಪಾತ್ರಗಳನ್ನು ನಿರ್ವಹಿಸಬಲ್ಲ ಒಬ್ಬ ಆಟಗಾರ ಹೆಚ್ಚು ಮೌಲ್ಯಯುತ ಅನ್ನಿಸಿಕೊಳ್ಳುತ್ತಾನೆ. ಅದಕ್ಕಾಗಿಯೇ ಭಾರತ ತಂಡದ ಮ್ಯಾನೇಜ್ಮೆಂಟ್ ಶಿವಂ ಅವರನ್ನು ಕೇವಲ ಒಬ್ಬ ಬ್ಯಾಟರ್ಗಿಂತ ಹೆಚ್ಚಾಗಿ ಒಬ್ಬ ʼತಾಂತ್ರಿಕ ಆಸ್ತಿʼ ಎಂದೇ ಪರಿಗಣಿಸುತ್ತಿದೆ.

ಪ್ರತಿ ಪಂದ್ಯಕ್ಕೂ ಬದಲಾಗುವ ಆಧುನಿಕ ಟಿ20 ತಂಡವನ್ನು ವ್ಯಾಖ್ಯಾನಿಸುವುದೇನಿದ್ದರೂ ಈ ಬಹು ಆಯಾಮದ ವಿಧಾನ. ಇಂತಹುದೊಂದು ರಚನೆಗೆ ಅಚ್ಚುಕಟ್ಟಾಗಿ ಫಿಟ್ ಆಗುವವರು ಶಿವಂ ದುಬೆ. ಹಾರ್ದಿಕ್ ಪಾಂಡ್ಯ ಅವರಂತೆ ದುಬೆ ಕೂಡ ತಂಡಕ್ಕೆ ಅಗತ್ಯವಾದ ʼಹೊಂದಾಣಿಕೆʼಯನ್ನು ನೀಡುತ್ತಾರೆ. ಇದು ನಾಯಕನಿಗೆ ಬೌಲಿಂಗ್ ಆಯ್ಕೆಗಳನ್ನು ಉಳಿಸಿಕೊಂಡೇ ಬ್ಯಾಟಿಂಗಿನ ಗಹನತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ವಿಶಾಲವಾದ ದಿಕ್ಕು-ದೆಸೆ

ಶಿವಂ ದುಬೆ ಅವರ ಪಾತ್ರವು ಭಾರತದ ಟಿ20 ತಂಡದ ವಿಶಾಲವಾದ ಬದಲಾವಣೆಯ ಪ್ರತೀಕವಾಗಿ ಕಾಣುತ್ತಿದೆ. ಇದು ಇನ್ನು ಮುಂದೆ ಕೇವಲ ಒಬ್ಬಿಬ್ಬರು ಸೂಪರ್ಸ್ಟಾರ್ಗಳ ಸುತ್ತ ಗಿರಕಿ ಹೊಡೆಯುವ ತಂಡವಲ್ಲ. ಬದಲಿಗೆ ಪಂದ್ಯದ ಮೇಲೆ ವಿಭಿನ್ನ ರೀತಿಯಲ್ಲಿ ಪ್ರಭಾವ ಬೀರಬಲ್ಲ ಹಲವು ಆಟಗಾರರನ್ನು ಒಳಗೊಂಡ ತಂಡವಾಗಿದೆ.

ಈಗ ಉದಾಹರಣೆಗೆ ಅಭಿಷೇಕ್ ಶರ್ಮಾ ಅವರನ್ನೇ ತೆಗೆದುಕೊಳ್ಳಿ, ಅವರ ನಿರ್ಭೀತ ಬ್ಯಾಟಿಂಗ್ ಶೈಲಿ ಹೊಸ ತಲೆಮಾರಿನ ಆಕ್ರಮಣಕಾರಿ ಮನಸ್ಥಿತಿಯನ್ನು ಪ್ರತಿನಿಧಿಸುತ್ತದೆ. ವಿಶ್ವಕಪ್ ಪೈನಲ್ ಪಂದ್ಯದಲ್ಲಿ ಅವರ ಸ್ಫೋಟಕ ಆರಂಭವು ಭಾರತದ ಬೃಹತ್ ಮೊತ್ತಕ್ಕೆ ನಾಂದಿ ಹಾಡಿತು. ಇನ್ನು ಟೂರ್ನಿಯ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರಲ್ಲಿ ಒಬ್ಬರಾಗಿ ಹೊರಹೊಮ್ಮಿದ ಸಂಜು ಸ್ಯಾಮ್ಸನ್ ಅಗ್ರ ಕ್ರಮಾಂಕಕ್ಕೆ ಹೊಸ ಆಯಾಮವನ್ನು ತಂದುಕೊಟ್ಟರು. ಇದರ ಜೊತೆ ಜೊತೆಗೇ ಸೂರ್ಯಕುಮಾರ್ ಯಾದವ್ ಅವರ ನಾಯಕತ್ವವು ಈ ಹೊಸ ಅಸ್ತಿತ್ವವನ್ನು ಗುರುತಿಸಲು ಸಹಾಯ ಮಾಡಿದೆ. ಇವರ ಸುತ್ತಲೂ ರಿಂಕೂ ಸಿಂಗ್, ತಿಲಕ್ ವರ್ಮಾ ಮತ್ತು ಅಕ್ಷರ್ ಪಟೇಲ್ ಅವರಂತಹ ಆಟಗಾರರಿದ್ದಾರೆ. ಇವರಲ್ಲಿ ಪ್ರತಿಯೊಬ್ಬರೂ ಕೂಡ ಫಿನಿಶಿಂಗ್ ಸಾಮರ್ಥ್ಯ ಅಥವಾ ಆಕ್ರಮಣಕಾರಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ನಂತಹ ವಿಶಿಷ್ಟ ಕೌಶಲ್ಯಗಳನ್ನು ತಂಡಕ್ಕೆ ತುಂಬುತ್ತಾರೆ.

ಇವೆಲ್ಲದರ ಪರಿಣಾಮವಾಗಿ ಇಂದು ತಂಡದ ಪ್ರತಿಯೊಬ್ಬ ಆಟಗಾರ ಕೂಡ ಒಂದಕ್ಕಿಂತ ಹೆಚ್ಚಿನ ರೀತಿಯಲ್ಲಿ ಪಂದ್ಯದ ಗತಿಯನ್ನೇ ಬದಲಿಸಬಲ್ಲ ತಾಕತ್ತು ಹೊಂದಿರುತ್ತಾನೆ.

ಒಂದು ಸ್ಪೂರ್ತಿದಾಯಕ ದಾರಿ

ಶಿವಂ ದುಬೆ ಅವರ ಕಥೆಯನ್ನು ಹೆಚ್ಚು ಆಕರ್ಷಕವಾಗಿ ಮಾಡುವುದು ಅವರ ಈವರೆಗಿನ ಪ್ರಯಾಣ. 2019ರಲ್ಲಿ ಅವರು ಮೊದಲ ಭಾರಿಗೆ ಭಾರತ ತಂಡವನ್ನು ಪ್ರವೇಶಿಸಿದಾಗ ಇದ್ದ ನಿರೀಕ್ಷೆಗಳು ಅಪಾರ. ಆದರೆ ಪ್ರದರ್ಶನದಲ್ಲಿ ಹೇಳಿಕೊಳ್ಳುವಂತಹ ಸ್ಥಿರತೆ ಇರಲಿಲ್ಲ. ಅನೇಕ ಕ್ರಿಕೆಟಿಗರಿಗೆ ಅದು ವೃತ್ತಿ ಜೀವನದ ಅಂತ್ಯವೇ ಆಗಬಹುದಿತ್ತು. ಆದರೆ ಐಪಿಎಲ್ ಅವರಿಗೆ ಎರಡನೇ ಅವಕಾಶವನ್ನು ನೀಡಿತು. ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವಾಗ ದುಬೆ ತಮ್ಮ ಬ್ಯಾಟಿಂಗ್ ಶೈಲಿಗೆ ಹೊಸ ಸ್ಪರ್ಶವನ್ನು ನೀಡಿದರು.

ಎಂ.ಎಸ್.ಧೋನಿ ಅವರ ಶಾಂತ ಸ್ವಭಾವದ ಮಾರ್ಗದರ್ಶನ ಮತ್ತು ಸಿಎಸ್ಕೆ ಪರಿಸರದಲ್ಲಿ ಅವರು ಲೀಗ್‌ನ ಅತ್ಯಂತ ವಿದ್ವಂಸಕ ಮಧ್ಯಮ ಕ್ರಮಾಂಕದ ಹಿಟ್ಟರ್ ಆಗಿ ಬೆಳೆದರು. ಅವರ ಆತ್ಮವಿಶ್ವಾಸ ಏರುಗತಿಯನ್ನು ಪಡೆದುಕೊಂಡಿತು ಮತ್ತು ಪವರ್ ಹಿಟ್ಟಿಂಗ್‌ನಲ್ಲಿ ಸ್ಥಿರತೆ ಬಂದಿತು. ಐಪಿಎಲ್‌ನ ಆ ಸೀಸನ್ನುಗಳು ಅವರ ವೃತ್ತಿಜೀವನವನ್ನೇ ಬದಲಿಸಿದವು. ಅವರು ಭಾರತ ತಂಡಕ್ಕೆ ಮರಳಿದಾಗ ಕೇವಲ ಕೆಲವೇ ಓವರ್‌ಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಒಬ್ಬ ಪಕ್ಕಾ ಪರಿಣಿತ ಆಟಗಾರನಾಗಿ ರೂಪುಗೊಂಡರು.

ಭಾರತವು ತನ್ನ ವೈಟ್-ಬಾಲ್ ಕ್ರಿಕೆಟ್ ಪಯಣದ ಮುಂದಿನ ಹಂತದತ್ತ ಗಮನ ಹರಿಸುತ್ತಿದೆ. ಇದರಲ್ಲಿ 2028ರ ಟಿ20 ವಿಶ್ವಕಪ್ ಮತ್ತು ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ನ ಸಂಭವನೀಯ ಪುನರಾಗಮನವೂ ಸೇರಿದೆ. ಇಂತಹ ಮಹತ್ವದ ಘಟ್ಟಗಳಲ್ಲಿ ಶಿವಂ ದುಬೆ ಅವರಂತಹ ಆಟಗಾರರು ಭಾರತೀಯ ತಂಡದ ಸ್ವರೂಪ ಮತ್ತು ಯಶಸ್ಸನ್ನು, ದಿಕ್ಕು-ದೆಸೆಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ನಿರೀಕ್ಷಿಸಬಹುದಾಗಿದೆ. ಡೆತ್ ಓವರ್ಗಳಲ್ಲಿ ಶಿವಂ ಮಾಡುವ ಡೇಂಜರಸ್ ಬ್ಯಾಟಿಂಗ್ ತಂಡಕ್ಕೆ ʼಶುಭʼ ಫಲಿತಾಂಶ ತರುವ ತಾಕತ್ತಿರುವುದಂತೂ ಸ್ಪಷ್ಟ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story