Sudeep Sudhakaran

ಮುಟ್ಟಿನ ರಜೆ ನಿರಾಕರಣೆ: ಮಹಿಳೆ ಮೇಲೇ ತಾರತಮ್ಯದ ಹೊರೆ ಹೊರಿಸಿದ ಸುಪ್ರೀ ಕೋರ್ಟ್?


ಮುಟ್ಟಿನ ರಜೆ ನಿರಾಕರಣೆ: ಮಹಿಳೆ ಮೇಲೇ ತಾರತಮ್ಯದ ಹೊರೆ ಹೊರಿಸಿದ ಸುಪ್ರೀ ಕೋರ್ಟ್?
x
ದೇಶಾದ್ಯಂತ ಮುಟ್ಟಿನ ರಜೆ ನೀತಿಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳದೇ ಇರಲು ಸುಪ್ರೀಂ ಕೋರ್ಟ್ ಉದ್ಯೋಗದಾತರರನ್ನು ಕಾರಣವಾಗಿ ಪರಿಗಣಿಸುವ ಮೂಲಕ ಸಾಂವಿಧಾನಿಕ ಘನತೆಯ ಭರವಸೆಗಿಂತ ತಾರತಮ್ಯ ಮಾಡುವ ಸ್ವಾತಂತ್ರ್ಯಕ್ಕೆ ಆದ್ಯತೆ ನೀಡಿದಂತಾಗಿದೆ.

ನ್ಯಾಯಾಂಗ ಸಾಮಾಜಿಕ ನ್ಯಾಯಕ್ಕಿಂತ ಉದ್ಯೋಗದಾತರ ಹಿಂಜರಿಕೆಗೆ ಆದ್ಯತೆ ನೀಡುವಂತಿದೆ. ಕಾರ್ಮಿಕ ರಕ್ಷಣೆ ಮತ್ತು ಕೆಲಸದ ಸ್ಥಳದ ಸಮಾನತೆಯಲ್ಲಿ ಸಾಧಿಸಿದ ದಶಕಗಳ ಪ್ರಗತಿಗೆ ಹಿನ್ನಡೆಯಾಗಿದೆ.

ಉದ್ಯೋಗಸ್ಥ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗಾಗಿ ದೇಶಾದ್ಯಂತ ʼಮುಟ್ಟಿನ ರಜೆʼ ನೀತಿಯನ್ನು ಜಾರಿಗೆ ತರಲು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಎಲ್ಐ)ಯನ್ನು ವಿಚಾರಣೆಗೆ ಒಳಪಡಿಸಲು ಭಾರತದ ಸುಪ್ರೀಂ ಕೋರ್ಟ್ ನಿರಾಕರಿಸುವ ಮೂಲಕ ದೇಶದಲ್ಲಿ ಕಾರ್ಮಿಕ ರಕ್ಷಣೆಗೆ ಮತ್ತೊಂದು ಕೊಡಲಿ ಪೆಟ್ಟು ಬಿದ್ದಂತಾಗಿದೆ.

ಋತುಸ್ರಾವಕ್ಕೆ ಸಂಬಂಧಿಸಿದ ದೈಹಿಕ ಅಸ್ವಸ್ಥತೆ ಮತ್ತು ಆರೋಗ್ಯ ತೊಂದರೆಗಳನ್ನು ನಿಭಾಯಿಸಲು ಮಹಿಳೆಯರಿಗೆ ಪ್ರತಿ ತಿಂಗಳು ಎರಡು ಅಥವಾ ಮೂರು ದಿನಗಳ ರಜೆ ನೀಡುವ ರೀತಿಯಲ್ಲಿ ನೀತಿಯನ್ನು ರೂಪಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಅವರು ಅರ್ಜಿ ಸಲ್ಲಿಸಿದ್ದರು.

ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ಘನತೆಯಿಂದ ಬದುಕುವ ಮೂಲಭೂತ ಹಕ್ಕನ್ನು ಎತ್ತಿಹಿಡಿಯಲು ಇಂತಹ ರಕ್ಷಣೆ ಅತ್ಯಗತ್ಯ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದ ಅತ್ಯುತ್ತಮ ಪದ್ಧತಿಗಳನ್ನು ಮತ್ತು ಮಹಿಳೆಯರ ವಿರುದ್ಧದ ಎಲ್ಲ ರೀತಿಯ ತಾರತಮ್ಯಗಳ ನಿರ್ಮೂಲನೆ ಸಮಾವೇಶದಂತಹ ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ಭಾರತ ಹೊಂದಿರಬೇಕಾದ ಬದ್ಧತೆಯನ್ನು ಕೂಡ ಇದರಲ್ಲಿ ಉಲ್ಲೇಖಿಸಲಾಗಿದೆ.

ನ್ಯಾಯಾಲಯದ ತರ್ಕವೇನು?

ಈ ಸಂಬಂಧದ ವಾದವನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಇಬ್ಬರು ನ್ಯಾಯಾಧೀಶರ ಪೀಠ, ಅಂತಹ ನೀತಿಯನ್ನು ನ್ಯಾಯಾಂಗದ ಮೂಲಕ ಕಡ್ಡಾಯವಾಗಿ ಮಾಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತು.

“ನೀವು ಇಂತಹುದನ್ನು ಯಾವ ಕ್ಷಣದಲ್ಲಿ ಕಾನೂನಾಗಿ ಜಾರಿಗೆ ತರುವಿರೋ ಮತ್ತು ಅದನ್ನು ಕಡ್ಡಾಯವಾಗಿ ಮಾಡುವಿರೋ ಆ ಕ್ಷಣದಿಂದಲೇ ಮಹಿಳೆಯರ ವೃತ್ತಿಜೀವನಕ್ಕೆ ಕಂಟಕಪ್ರಾಯರಾಗುವಿರಿ. ಅದರಿಂದ ನೀವು ಅವರಿಗೆ ಎಷ್ಟು ಹಾನಿ ಮಾಡುತ್ತಿದ್ದೀರಿ ಎಂಬುದನ್ನು ಅಂದಾಜು ಮಾಡಲು ಕೂಡ ಸಾಧ್ಯವಾಗದೇ ಇರಬಹುದು. ಹಾಗಾದಾಗ ಅವರಿಗೆ ಯಾರೂ ದೊಡ್ಡ ಜವಾಬ್ದಾರಿಯನ್ನು ನೀಡಲು ಹಿಂಜರಿಯಬಹುದು. ನ್ಯಾಯಾಂಗ ಸೇವೆಯಲ್ಲೇ ಆದರೂ ಜನರು ಅವರಿಗೆ ವಿಚಾರಣೆಗಳನ್ನು ವಹಿಸಿಕೊಡದೇ ಇರಬಹುದು,” ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿತು.

ಆದರೆ ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಉದ್ಯೋಗದಾತರು ʼಸ್ವಯಂಪ್ರೇರಿತವಾಗಿʼ ಈ ನೀತಿಗಳನ್ನು ಜಾರಿಗೆ ತರುವುದಕ್ಕೆ ನ್ಯಾಯಾಲಯ ಉತ್ತೇಜನ ನೀಡಿತು.

ಮಟ್ಟಿನ ರಜೆಗೆ ಕಡ್ಡಾಯ ನಿಬಂಧನೆ ಜಾರಿಗೆ ತರುವುದರಿಂದ ಕಾರ್ಮಿಕ ಮಾರುಕಟ್ಟೆಯಲ್ಲಿ, ಅದರಲ್ಲೂ ವಿಶೇಷವಾಗಿ ಖಾಸಗಿ ವಲಯದಲ್ಲಿ ನಕಾರಾತ್ಮಕ ಪರಿಣಾಮ ಬೀರುವ ಅಪಾಯವಿದೆ ಎಂಬ ಆತಂಕವನ್ನು ಪೀಠ ವ್ಯಕ್ತಪಡಿಸಿತು. ಇಷ್ಟು ಮಾತ್ರವಲ್ಲದೆ ಕೇವಲ ಮುಟ್ಟಿನ ಪ್ರಶ್ನೆಯನ್ನು ಮುಂದಿಟ್ಟುಕೊಂಡ ನೀತಿಯಿಂದಾಗಿ ಸಮಾಜದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ʼಮಹಿಳೆಯರು ಪುರುಷರಿಗೆ ಸಮಾನರಲ್ಲʼ ಎಂಬ ಗ್ರಹಿಕೆಯನ್ನು ಮತ್ತಷ್ಟು ಬಲಪಡಿಸುವ ಸಾಧ್ಯತೆ ಕೂಡ ಇದೆ ಎಂಬ ಎಚ್ಚರಿಕೆಯನ್ನೂ ನೀಡಿತು. ಇದರಿಂದ ಅವರ ವೃತ್ತಿಜೀವನದ ಪ್ರಗತಿ ಮತ್ತು ಉದ್ಯೋಗಿಗಳಲ್ಲಿ ಅವರ ಭಾಗವಹಿಸುವಿಕೆಯ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಬಹುದು ಎಂದು ನ್ಯಾಯಪೀಠ ತಿಳಿಸಿದೆ.

ಯಾರಿಗೆ ಯಾರು ತಲೆಬಾಗಬೇಕು?

ಮುಟ್ಟಿನ ರಜೆ ಅಥವಾ ಕಾರ್ಮಿಕ ರಕ್ಷಣೆಯ ಉದ್ದೇಶವನ್ನು ಹೊಂದಿರುವ ಅಂತಹ ಯಾವುದೇ ನೀತಿಯ ಫಲವಾಗಿ ಉದ್ಯೋಗದಾತರು ಮಹಿಳೆಯರನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳುವುದಕ್ಕೇ ಹಿಂಜರಿಯುವಂತೆ ಮಾಡುವ ಸಾಧ್ಯತೆಯಿದೆ ಎಂಬ ವಾದವು ಹಲವಾರು ಕಾರಣಗಳಿಂದ ತೀವ್ರ ಸಮಸ್ಯಾತ್ಮಕವಾಗಿ ಕಾಣುತ್ತಿದೆ.

ಇಲ್ಲಿರುವ ಇನ್ನೂ ಒಂದು ಮೂಲಭೂತ ಪ್ರಶ್ನೆ ಎಂದರೆ ಇಂತಹ ಒಂದು ನೀತಿಯನ್ನು ಅನುಷ್ಠಾನಕ್ಕೆ ತರುವ ವಿಚಾರದಲ್ಲಿ ಯಾವುದು ಆಧಾರವಾಗಬೇಕು? ಅದು ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಪ್ರಗತಿಪರ ಉದ್ದೇಶವನ್ನು ಹೊಂದಿರಬೇಕೇ ಅಥವಾ ಉದ್ಯೋಗದಾತರು ವ್ಯಕ್ತಪಡಿಸುವ ವಿರೋಧಕ್ಕೆ ತಲೆ ಬಾಗುವಂತಿರಬೇಕೇ?

ಈ ಪ್ರಕರಣದಲ್ಲಿ ದುರದೃಷ್ಟವಶಾತ್ ನ್ಯಾಯಾಲಯವು ಎರಡನೇ ಅಂಶದ ಪರವಾಗಿ ನಿಂತಂತೆ ಕಾಣಿಸುತ್ತಿದೆ. ಉದ್ದೇಶಪೂರ್ವಕ ಅಥವಾ ಅರಿವಿನ ಕೊರತೆಯ ಕಾರಣದಿಂದಲೋ ಮುಂದೆ ಜಾರಿಗೆ ಬರುವ ಶಾಸನಗಳು ಕೆಲಸದ ಸ್ಥಳದ ರಕ್ಷಣೆಯ ಉದ್ದೇಶಕ್ಕಿಂತ ಮುಖ್ಯವಾಗಿ ಉದ್ಯೋಗದಾತರ ತಾರತಮ್ಯ ಮಾಡುವ ಸ್ವಾತಂತ್ರ್ಯಕ್ಕೆ ಆದ್ಯತೆ ನೀಡಬೇಕು ಎಂಬ ವಾದವನ್ನು ನ್ಯಾಯಾಲಯ ಮುಂದಿಡುವಂತೆ ಭಾಸವಾಗುತ್ತಿದೆ.

ವಾಸ್ತವವಾಗಿ ಇದು ಕಾರ್ಮಿಕ ಕಾನೂನುಗಳ ಮೂಲ ಉದ್ದೇಶಕ್ಕೆ ಸಂಪೂರ್ಣ ವಿರುದ್ಧವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಉದ್ಯೋಗದಾತರ ಉದಾಸೀನತೆ

ಐತಿಹಾಸಿಕವಾಗಿ ನೋಡಿದರೆ ಕಾರ್ಮಿಕ ರಕ್ಷಣಾ ಕಾನೂನುಗಳ ಉಗಮಕ್ಕೆ ಅಗತ್ಯವಾಗಿರುವ ಬಹುಮುಖ್ಯ ಅಂಶವೆಂದರೆ ಕಾರ್ಮಿಕರ ಕಲ್ಯಾಣದ ಉದ್ಯೋಗದಾತರರು ತೋರಿಸುವ ಉದಾಸೀನತೆ. ಯಾವುದೇ ನಿರ್ಬಂಧವಿಲ್ಲದ ಕಾರ್ಮಿಕ ಕಲ್ಯಾಣ, ಆರೋಗ್ಯ ಮತ್ತು ಘನತೆಗಿಂತ ಹೆಚ್ಚಾಗಿ ದಕ್ಷತೆ ಮತ್ತು ಲಾಭಕ್ಕೆ ಆದ್ಯತೆ ನೀಡುತ್ತವೆ ಎಂಬ ವ್ಯಾಪಕ ಸಾಮಾಜಿಕ ಒಮ್ಮತದ ಆಧಾರದ ಮೇಲೆ ಈ ಕಾನೂನು ರೂಪುಗೊಂಡವು.

ಒಂದು ವೇಳೆ ರಕ್ಷಣಾತ್ಮಕ ಶಾಸನಗಳನ್ನು ಜಾರಿಗೆ ತರುವ ಸಂದರ್ಭದಲ್ಲಿ ಅದಕ್ಕೆ ಉದ್ಯೋಗದಾತರು ಹೇಗೆ ಪ್ರತಿಕ್ರಿಯೆ ವ್ಯಕ್ತಪಡಿಸಿಯಾರು ಎಂಬ ಭಯವನ್ನೇ ಮುಖ್ಯ ಮಾನದಂಡವಾಗಿ ಪರಿಗಣಿಸಿದರೆ ಕಾರ್ಮಿಕ ಮಾರುಕಟ್ಟೆಯ ನಿಯಂತ್ರಣದ ತರ್ಕವೇ ಕುಸಿದುಬೀಳುವ ಅಪಾಯವಿರುತ್ತದೆ.

ಹಿಂದೆಯೂ ಕೂಡ ಜಗತ್ತಿನಲ್ಲಿ ಅತ್ಯಂತ ವ್ಯಾಪಕವಾಗಿ ಅಂಗೀಕರಿಸಲಾಗಿರುವ ಕಾರ್ಮಿಕ ರಕ್ಷಣೆಗಳನ್ನು ಪರಿಚಯಿಸಿದಾಗ ಕೂಡ ಇಂತಹುದೇ ಆಕ್ಷೇಪಣೆಗಳಿಗೆ ಗುರಿಯಾಗಿದ್ದವು ಎಂಬುದರ ಕಡೆಗೆ ಗಮನ ಹರಿಸುವುದು ಮುಖ್ಯ. ಕಾರ್ಮಿಕರಿಗೆ ಕನಿಷ್ಠ ವೇತನವನ್ನು ನೀಡಬೇಕು ಎಂಬ ಪ್ರಸ್ತಾಪನೆ ಬಂದಾಗಲೂ ಕೂಡ ಅದು ವ್ಯವಹಾರಗಳನ್ನೇ ನುಂಗಿ ನೀರು ಕುಡಿದುಬಿಡುತ್ತದೆ ಎಂದು ವಾದವನ್ನು ಮುನ್ನಲೆಗೆ ತರಲಾಗಿತ್ತು.

ಅದೇ ರೀತಿ ಕೆಲಸದ ಅವಧಿಯನ್ನು ನಿಯಂತ್ರಿಸುವ ಕಾನೂನುಗಳನ್ನು ಅನುಷ್ಠಾನಕ್ಕೆ ತಂದಾಗಲೂ ಉದ್ಯೋಗದಾತರು ಕೆಲಸಕ್ಕೆ ನೇಮಿಸಿಕೊಳ್ಳುವ ಪ್ರಮಾಣವೇ ಕುಂಠಿತವಾಗುತ್ತದೆ ಎಂದೂ, ತಮ್ಮ ವ್ಯವಹಾರವನ್ನೇ ಬೇರೆಕಡೆ ಸ್ಥಳಾಂತರಿಸಿಬಿಡುತ್ತಾರೆ ಎಂಬ ವಾದವನ್ನು ವಿಶ್ಲೇಷಕರು ಮುಂದಿಟ್ಟಿದ್ದರು.

ಬೇಕು ದೂರದೃಷ್ಟಿ

ಇನ್ನು ಮಹಿಳೆಯರಿಗೆ ಹೆರಿಗೆ ಹಕ್ಕುಗಳನ್ನು ಒದಗಿಸಬೇಕು ಎಂಬ ವಿಚಾರ ಬಂದಾಗಲೂ ಅಷ್ಟೇ, ಮಹಿಳಾ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದು ಹೆಚ್ಚು ʼದುಬಾರಿʼಯಾಗಿ ಪರಿಣಮಿಸುತ್ತದೆ ಎಂಬ ಸುಳ್ಳೇ ಸುಳ್ಳು ವಾದಗಳ ಮೂಲಕ ತೀವ್ರ ವಿರೋಧ ವ್ಯಕ್ತವಾಗಿತ್ತು ಮತ್ತು ಉದ್ಯೋಗದಾತರೇ ಮಹಿಳೆಯರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಹಿಂಜರಿಯುತ್ತಾರೆ ಎಂದೂ ಬಿಂಬಿಸಲಾಗಿತ್ತು.

ಆದರೆ ಅಂತಿಮವಾಗಿ, ಸಮಾಜ ಮತ್ತು ಕಾನೂನು ಸಂಸ್ಥೆಗಳು ಇಂತಹ ರಕ್ಷಣೆಗಳು ಬೇಕೇಬೇಕು ಎಂದು ಗುರುತಿಸಿದವು. ಯಾಕೆಂದರೆ ನಿಯಂತ್ರಣವಿಲ್ಲದ ಕಾರ್ಮಿಕ ಮಾರುಕಟ್ಟೆಗಳು ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ವಿಫಲವಾಗುತ್ತವೆ. ಒಂದು ವೇಳೆ ನ್ಯಾಯಾಲಯಗಳು ಕಾರ್ಮಿಕ ಹಕ್ಕುಗಳನ್ನು ನಿರಾಕರಿಸಲು 'ಉದ್ಯೋಗದಾತರ ಹಿಂಜರಿಕೆ'ಯನ್ನೇ ಆಧಾರವಾಗಿ ಸ್ವೀಕರಿಸಿದ್ದರೆ, ಇಂದು ನಮ್ಮಲ್ಲಿರುವ ಬಹುತೇಕ ಕಾರ್ಮಿಕ ರಕ್ಷಣೆಗಳು ಅಸ್ತಿತ್ವಕ್ಕೆ ಬರುತ್ತಲೇ ಇರಲಿಲ್ಲ.

ಇದು ಸರ್ಕಾರದ ನೀತಿಗೆ ಸಂಬಂಧಿಸಿದ ವಿಷಯ ಎಂದು ನ್ಯಾಯಾಲಯ ಒತ್ತಿಹೇಳಿದ್ದರೂ ಸಹ, ಕೆಲವು ಕಾನೂನು ತಜ್ಞರು ಇದರ ಹಿಂದೆ ಇರುವ ಸಂವೇದನಾಶೀಲತೆಯ ಅಂಶವನ್ನು ಪ್ರಶ್ನಿಸಿದ್ದಾರೆ.

ಮದ್ರಾಸ್ ಹೈಕೋರ್ಟ್ನ ವಕೀಲರಾದ ರಾಮಪ್ರಿಯಾ ಗೋಪಾಲಕೃಷ್ಣನ್ ಅವರು ಪ್ರತಿಪಾದನೆ ಮಾಡಿರುವಂತೆ, ಮಟ್ಟಿನ ರಜೆಯ ಹಕ್ಕುಗಳು ಪ್ರಾಥಮಿಕವಾಗಿ ಶಾಸಕಾಂಗ ಮತ್ತು ಕಾರ್ಯಾಂಗವು ನಿರ್ಧರಿಸಬೇಕಾದ ವಿಷಯಗಳಾಗಿದ್ದರೂ, ಕೆಲಸದ ಸ್ಥಳದಲ್ಲಿ ಮಹಿಳೆಯರು ಎದುರಿಸುತ್ತಿರುವ ಐತಿಹಾಸಿಕ ಅನನುಕೂಲಗಳನ್ನು ಪರಿಗಣಿಸಿ ನ್ಯಾಯಾಂಗವು ಹೆಚ್ಚು ಸಂವೇದನಾಶೀಲವಾದ ಧೋರಣೆಯನ್ನು ಅಳವಡಿಸಿಕೊಳ್ಳಬಹುದಿತ್ತು ಎಂದಿದ್ದಾರೆ.

ಈ ವಾದದಲ್ಲಿ ಇನ್ನೂ ಗಹನವಾದ ಸಮಸ್ಯೆಯಿದೆ. ಅಷ್ಟಕ್ಕೂ ತಾರತಮ್ಯಕ್ಕೆ ಯಾರು ಉತ್ತರಿಸಬೇಕು? ಅಥವಾ ಅದರ ಜವಾಬ್ದಾರಿಯನ್ನು ಯಾರು ಹೊರಬೇಕು? ತಾರತಮ್ಯವನ್ನು ಎದುರಿಸುತ್ತಿರುವ ವರ್ಗವೇ ಅಥವಾ ತಾರತಮ್ಯವನ್ನು ಹೇರುತ್ತಿರುವ ಗುಂಪೇ?

ಮೇಲೆ ತಿಳಿಸಲಾದ ತರ್ಕದಲ್ಲಿರುವ ದೋಷವೇನೆಂದರೆ, ಇದು ತಾರತಮ್ಯದ ಹೊರೆಯನ್ನು ಮತ್ತೆ ಬಲಿಪಶುಗಳ ಮೇಲೆ ಹೊರಿಸಲಾಗುತ್ತದೆ. ಅಂದರೆ ಈ ಸಂದರ್ಭದಲ್ಲಿ ಮಹಿಳೆಯರ ಮೇಲೆಯೇ ಆ ಹೊರೆ ಬೀಳುತ್ತದೆ.

ಸದ್ಯ ಮಾರುಕಟ್ಟೆ ಮಾಡುತ್ತಿರುವುದೇ ಅಸಲಿ ತಾರತಮ್ಯ; ಅಂದರೆ, ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರನ್ನು ಕೆಲಸಕ್ಕೆ ತೆಗೆದುಕೊಳ್ಳದೇ ಇರುವುದು ಅಥವಾ ಅವರಿಗೆ ಅರ್ಹವಾದ ಬಡ್ತಿ ನೀಡದಿರುವುದು. ಅಷ್ಟೇ ಅಲ್ಲದೆ, ಕೆಲಸದ ಸ್ಥಳದಲ್ಲಿ ಅವರ ಯೋಗಕ್ಷೇಮವನ್ನು ಕಾಪಾಡುವ ಯಾವುದೇ ಪ್ರಯತ್ನ ನಡೆದರೂ, ನಾವು "ಇನ್ನಷ್ಟು ತಾರತಮ್ಯ ಮಾಡುತ್ತೇವೆ" ಎಂದು ಬೆದರಿಸುವ ಮೂಲಕ ಅಂತಹ ಪ್ರಯತ್ನಗಳನ್ನು ವಿರೋಧಿಸುವುದು. ನ್ಯಾಯಾಲಯವು ಈ ತರ್ಕವನ್ನು ಒಪ್ಪಿಕೊಂಡಾಗ, ಅದು ನೈಜ ತಾರತಮ್ಯವನ್ನು ಸರಿಪಡಿಸುವಲ್ಲಿ ವಿಫಲವಾಗುತ್ತದೆ ಮತ್ತು ಆ ಹೊರೆಯನ್ನು ಮರಳಿ ಬಲಿಪಶುಗಳ ಮೇಲೆ ಹೊರಿಸುತ್ತದೆ.

ಉದ್ಯೋಗದಾತರ ಪೂರ್ವಾಗ್ರಹಗಳು

ಭಾರತದ ಸಾಂವಿಧಾನಿಕ ಕಾನೂನು ವ್ಯವಸ್ಥೆಯು ಸಮಾನತೆಯನ್ನು ಮತ್ತು ಕಾರ್ಮಿಕರ, ವಿಶೇಷವಾಗಿ ದುರ್ಬಲ ವರ್ಗದವರ ಯೋಗಕ್ಷೇಮವನ್ನು ಎತ್ತಿಹಿಡಿಯುತ್ತದೆ. ಆದ್ದರಿಂದ, ಸಂಭವನೀಯ ತಾರತಮ್ಯಕ್ಕೆ ಸರಿಯಾದ ಪ್ರತಿಕ್ರಿಯೆ ಎಂದರೆ ತಾರತಮ್ಯ ವಿರೋಧಿ ತತ್ವಗಳನ್ನು ಇನ್ನಷ್ಟು ಬಲವಾಗಿ ಜಾರಿಗೆ ತರುವುದೇ ಹೊರತು ಬೇರೇನಲ್ಲ.

ಉದ್ಯೋಗದಾತರ ಪೂರ್ವಾಗ್ರಹಗಳು ಈ ಮೂಲಭೂತ ಸಾಂವಿಧಾನಿಕ ನಿಯಮವನ್ನು ಅಪಾಯಕ್ಕೆ ದೂಡಲು ಸಾಧ್ಯವಿಲ್ಲ. ಒಂದು ವೇಳೆ ಇದೇ ತರ್ಕವನ್ನು ಮುಂದುವರಿಸಲು ಬಿಟ್ಟರೆ, ಹೆರಿಗೆ ರಜೆ ಸೇರಿದಂತೆ ಪ್ರತಿಯೊಂದು ರಕ್ಷಣಾತ್ಮಕ ಕಾರ್ಮಿಕ ಹಕ್ಕನ್ನು ಇದೇ 'ಮಾರುಕಟ್ಟೆ ತರ್ಕ' ಬಳಸಿ ಪ್ರಶ್ನಿಸಬಹುದು.

ಇಂತಹ ತರ್ಕಗಳನ್ನೆಲ್ಲ ಒಪ್ಪಿಕೊಳ್ಳುವುದು ಎಂದರೆ ಸಂತಾನೋತ್ಪತ್ತಿ, ಆರೋಗ್ಯ ಮತ್ತು ಕೌಟುಂಬಿಕ ಜವಾಬ್ದಾರಿಗಳನ್ನು ಕಾರ್ಮಿಕ ನೀತಿಯ ಕಾನೂನುಬದ್ಧ ಪರಿಗಣನೆಗಳನ್ನಾಗಿ ರೂಪಿಸಲು ದಶಕಗಳಿಂದ ನಡೆಸಿದ ಪ್ರಗತಿಯನ್ನು ಗಾಳಿಗೆ ತೂರಿ ಇತಿಹಾಸದಲ್ಲಿ ಹಿಂದಕ್ಕೆ ಹೆಜ್ಜೆ ಹಾಕಿದಂತಾಗುತ್ತದೆ.

ಇಂತಹ ದೃಷ್ಟಿಕೋನಗಳಿಂದಾಗಿ ಬದಲಾಗುತ್ತಿರುವ ನಿಯಂತ್ರಕ ಪರಿಸರಕ್ಕೆ ಕಾರ್ಮಿಕ ಮಾರುಕಟ್ಟೆಗಳು ಹೊಂದಿಕೊಳ್ಳುವ ಸಾಧ್ಯತೆ ಕ್ಷೀಣಿಸುತ್ತವೆ ಎಂಬುದು ಗಮನಿಸಬೇಕಾದ ಸಂಗತಿ. ಐತಿಹಾಸಿಕವಾಗಿ, ಉತ್ತಮ ನಿಯಂತ್ರಕ ಮಾನದಂಡಗಳು ವ್ಯವಹಾರಗಳ ದೀರ್ಘಕಾಲೀನ ಹೊಂದಾಣಿಕೆಯನ್ನು ಖಚಿತಪಡಿಸಿವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ವೆಚ್ಚಗಳು ಹೆಚ್ಚಾದರೂ, ಪ್ರಪಂಚದಾದ್ಯಂತದ ಉದ್ಯಮಗಳು ಸಾಮಾಜಿಕ ವಾಸ್ತವಗಳನ್ನು ಒಪ್ಪಿಕೊಂಡು ತಮ್ಮ ಕೆಲಸದಲ್ಲಿ ಅಳವಡಿಸಿಕೊಂಡಿವೆ.

ವಾಸ್ತವವಾಗಿ, ಕೈಗಾರಿಕೆಗಳು ಪರಿಸರ ಸಂರಕ್ಷಣಾ ಕ್ರಮಗಳನ್ನು ವ್ಯಾಪಕವಾಗಿ ಒಪ್ಪಿಕೊಂಡಿರುವುದು ಇಂತಹ ಸಾಮಾನ್ಯ ಪ್ರವೃತ್ತಿಗೆ ಒಂದು ಉತ್ತಮ ಉದಾಹರಣೆಯಾಗಿದೆ.

ಬದಲಾಗುತ್ತಿರುವ ಜಗತ್ತು

ಸಂಸ್ಥೆಗಳು ಮಹಿಳೆಯರ ಜೀವನದ ಜೈವಿಕ ವಾಸ್ತವಗಳನ್ನು ನಿರ್ಲಕ್ಷಿಸುವುದನ್ನು ಮುಂದುವರಿಸಿದರೆ, ಅದು ಭಾರತದ ಮಹಿಳಾ ಕಾರ್ಮಿಕರಿಗೆ ಮಾಡುವ ದೊಡ್ಡ ಅನ್ಯಾಯವಾಗುತ್ತದೆ.

ಋತುಸ್ರಾವವು ಒಂದು ಜೈವಿಕ ಪ್ರಕ್ರಿಯೆಯಾಗಿದ್ದು, ಇದು ತೀವ್ರವಾದ ಸೆಳೆತ, ಆಯಾಸ, ವಾಕರಿಕೆ ಮತ್ತು ಅತಿಯಾದ ರಕ್ತಸ್ರಾವದಂತಹ ಲಕ್ಷಣಗಳನ್ನು ಒಳಗೊಂಡಿರುತ್ತದೆ. ಇದಲ್ಲದೆ, ಅನೇಕ ಮಹಿಳೆಯರಲ್ಲಿ 'ಎಂಡೊಮೆಟ್ರಿಯೊಸಿಸ್' ಮತ್ತು 'ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್' (PCOS) ನಂತಹ ವೈದ್ಯಕೀಯ ಸ್ಥಿತಿಗಳು ಋತುಸ್ರಾವದ ಪರಿಣಾಮಗಳನ್ನು ಉಲ್ಬಣಗೊಳಿಸಬಹುದು. ಇಂತಹ ಸಮಯದಲ್ಲಿ ಮಹಿಳೆಯರಿಗೆ ಸಾಂಸ್ಥಿಕ ಬೆಂಬಲವನ್ನು ಒದಗಿಸುವುದು ಒಂದು ಯೋಗ್ಯ ಕೆಲಸದ ಸ್ಥಳದ ಕನಿಷ್ಠ ಅವಶ್ಯಕತೆಯಾಗಿದೆ.

ಈ ಸಮಯದಲ್ಲಿ ಮಹಿಳೆಯರು ವಿರಾಮವಿಲ್ಲದೆ ಕೆಲಸ ಮಾಡಬೇಕೆಂದು ನಿರೀಕ್ಷಿಸುವುದು ಕ್ರೂರತನವೇ ಆಗಿದೆ, ವಿಶೇಷವಾಗಿ ಕೆಲಸದ ಸ್ಥಳಗಳು ಕೇವಲ ಪುರುಷರ ಜೈವಿಕ ಮಾನದಂಡಗಳ ಸುತ್ತ ವಿನ್ಯಾಸಗೊಳಿಸಲ್ಪಟ್ಟಿವೆ ಎಂಬ ಪೂರ್ವಾಗ್ರಹದಿಂದ ಇದು ಉದ್ಭವಿಸುತ್ತದೆ.

ಕರ್ನಾಟಕದಲ್ಲಿ ಒಂದು ದಿನದ ಮುಟ್ಟಿನ ರಜೆ

ವಿಶ್ವದಾದ್ಯಂತ ಅನೇಕ ರಾಷ್ಟ್ರಗಳು ಈಗಾಗಲೇ ಈ ಬೇಡಿಕೆಗೆ ಅನುಗುಣವಾಗಿ ಬದಲಾಗಿವೆ. ಜಪಾನ್, ದಕ್ಷಿಣ ಕೊರಿಯಾ, ಇಂಡೋನೇಷ್ಯಾ ಮತ್ತು ತೈವಾನ್ನಂತಹ ದೇಶಗಳು ಬಹಳ ಕಾಲದಿಂದಲೂ ವಿವಿಧ ರೂಪಗಳಲ್ಲಿ ಮುಟ್ಟಿನ ರಜೆಯನ್ನು ಒದಗಿಸುತ್ತಿವೆ. ಇತ್ತೀಚೆಗೆ ಸ್ಪೇನ್ ದೇಶವು ತೀವ್ರವಾದ ಋತುಸ್ರಾವದ ನೋವಿನ ಸಮಯದಲ್ಲಿ ವೇತನ ಸಹಿತ ರಜೆಯನ್ನು ಪರಿಚಯಿಸುವ ಮೂಲಕ ಈ ಗುಂಪನ್ನು ಸೇರಿಕೊಂಡಿದೆ.

ಭಾರತದಲ್ಲೂ ಸಹ ಈ ಚರ್ಚೆಯು ಈಗ ಕೇವಲ ಸೈದ್ಧಾಂತಿಕ ಸಾಧ್ಯತೆಗಳನ್ನು ಮೀರಿ ಬೆಳೆದಿದೆ. ಇತ್ತೀಚೆಗೆ, ಕರ್ನಾಟಕವು ತಿಂಗಳಿಗೆ ಒಂದು ದಿನದ ಮುಟ್ಟಿನ ರಜೆಯನ್ನು ಪರಿಚಯಿಸುವ ಮೂಲಕ ಪ್ರಮುಖ ಹೆಜ್ಜೆ ಇಟ್ಟಿದೆ. ಆದಾಗ್ಯೂ, ನಿರೀಕ್ಷೆಯಂತೆ ಈ ನೀತಿಯು ಉದ್ಯೋಗದಾತರಿಂದ ತೀವ್ರ ವಿರೋಧವನ್ನು ಎದುರಿಸುತ್ತಿದ್ದು, ಪ್ರಸ್ತುತ ಕರ್ನಾಟಕ ಹೈಕೋರ್ಟ್ನ ನ್ಯಾಯಾಂಗ ಪರಾಮರ್ಶೆಗೆ ಒಳಪಟ್ಟಿದೆ.

ಸಹಜವಾಗಿಯೇ, ಕಾರ್ಮಿಕ ಸಂಘಟನೆಗಳು ಇದಕ್ಕೆ ತೀವ್ರ ಪ್ರತಿಕ್ರಿಯೆ ನೀಡಿವೆ. ಐಟಿ ಉದ್ಯಮದ ಉದ್ಯೋಗಿಗಳ ಪ್ರಮುಖ ಧ್ವನಿಯಾಗಿ ಹೊರಹೊಮ್ಮಿರುವ 'ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ಉದ್ಯೋಗಿಗಳ ಸಂಘ', ಸರ್ಕಾರದ ಪ್ರಸ್ತಾವಿತ ನೀತಿಯನ್ನು ಸಮರ್ಥಿಸಿಕೊಳ್ಳಲು ಹೈಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣದಲ್ಲಿ ತನ್ನನ್ನು ತಾನು ಕಕ್ಷಿದಾರನನ್ನಾಗಿ ಸೇರಿಸಿಕೊಂಡಿದೆ. ಉದ್ಯೋಗದಾತರ ಹಿಂಜರಿಕೆಯ ಆತಂಕವನ್ನು ಕೆಲಸದ ಸ್ಥಳದ ರಕ್ಷಣೆಯನ್ನು ನಿರಾಕರಿಸಲು ಬಳಸಬಾರದು ಎಂದು ವಾದಿಸುವ ಮೂಲಕ ಅದು ಸುಪ್ರೀಂ ಕೋರ್ಟ್ನ ಅವಲೋಕನವನ್ನು ಟೀಕಿಸಿದೆ.

ಈ ಚರ್ಚೆಯು ಋತುಸ್ರಾವದ ಆರೋಗ್ಯವನ್ನು ಕೆಲಸದ ಸ್ಥಳದ ಒಂದು ಕಾಳಜಿಯ ವಿಷಯವನ್ನಾಗಿ ಗುರುತಿಸುವ ಜಾಗತಿಕ ಅಲೆಯ ಭಾಗವಾಗಿದೆ. ವಿಶ್ವದ ಅತಿದೊಡ್ಡ ಕಾರ್ಮಿಕ ಮಾರುಕಟ್ಟೆಗಳಲ್ಲಿ ಒಂದಾಗಿರುವ ಭಾರತವು, ತನ್ನ ಕಾರ್ಮಿಕ ವರ್ಗದ ಗಮನಾರ್ಹ ಭಾಗವು ಕೇವಲ ಉದ್ಯೋಗದಾತರ ನಿರ್ಲಕ್ಷ್ಯದ ಕಾರಣದಿಂದ ಅನ್ಯಾಯಕ್ಕೆ ಒಳಗಾಗುವುದನ್ನು ಮೂಕಪ್ರೇಕ್ಷಕನಂತೆ ಸುಮ್ಮನೆ ನೋಡುತ್ತಾ ದೂರ ನಿಲ್ಲಲು ಸಾಧ್ಯವಿಲ್ಲ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story