
ಪದ ಕುಸಿದರೂ ಇಮೊಜಿಗಳಿವೆ ಸಾವಿರಾರು: ಮಾರುಕಟ್ಟೆ ದಿಕ್ಕು ಬದಲಿಸಿದ ಡಿಜಿಟಲ್ ಐಕಾನ್‌ಗಳು
ಸ್ವಿಗ್ಗಿಯಿಂದ ಝೊಮೊಟೊ ತನಕ, ಫ್ಲಿಪ್-ಕಾರ್ಟ್-ನಿಂದ ರಿಲಯನ್ಸ್ ತನಕ ಭಾರತೀಯ ಬ್ರಾಂಡ್-ಗಳು ಈಗ ತೇಲಾಡುತ್ತಿರುವುದು ಇಮೊಜಿಗಳ ಅಲೆಯಲ್ಲಿ. ಅವು ಭಾಷೆಗಳು ಮತ್ತು ಪ್ರಾಂತಗಳನ್ನು ಮೀರಿ ಡಿಜಿಟಲ್ ಲೋಕದಲ್ಲಿ ವಿಹರಿಸುತ್ತಿರುವ ನಾನಾ ತಲೆಮಾರುಗಳನ್ನು ತಲುಪುವ ಪ್ರುಯತ್ನ ಮಾಡುತ್ತಿವೆ.
ನಕ್ಯಾಕೆ ಮರೆಸಿತೀ ದುಃಖ? ಎಂದು ತಮ್ಮ ಕವಿತೆಗಳಲ್ಲಿ ಭಾವಪೂರ್ಣವಾಗಿ ಧ್ವನಿಸಿರುವ ದ.ರಾ.ಬೇಂದ್ರೆ ಅವರು ‘ನಕ್ ಸಾಯ್ರೋ’ ಎಂದೂ ಕಿಚಾಯಿಸಿದ್ದಾರೆ ಕೂಡ. ಈಗೀಗ ಭಾವನೆಗಳನ್ನು ವ್ಯಕ್ತಪಡಿಸಲು ನೂರಾರು ಪದಗಳನ್ನು ಬಳಸಬೇಕಾಗಿಲ್ಲ. ಒಂದೆರಡು ಇಮೊಜಿಗಳನ್ನು ಕಳಿಸಿಬಿಟ್ಟರೆ ಸಾಕು...
ನಾವು ಮಾತನಾಡುತ್ತಲೇ ಕೆಲವು ಸನ್ನೆಗಳನ್ನು ಮಾಡುತ್ತೇವೆ. ಆದರೂ ನಮ್ಮ ದೈನಂದಿನ ಸಂಭಾಷಣೆಗಳು ಬಹುಪಾಲು ಅವಲಂಬಿತವಾಗಿರುವುದು ಮೌಖಿಕವಾಗಿ ವ್ಯಕ್ತವಾಗುವ ಭಾವನೆಗಳ ವಿನಿಮಯಗಳ ಮೇಲೆ ಎಂಬುದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಸಾಬೀತಾಗುತ್ತಿವೆ. ಅಸಲಿಗೆ ಅವು ನಮ್ಮ ಆಂಗಿಕ ಚಹರೆಗಳು....
ಅದೀಗ ನಾವು ಬರೆಯುವ ಪಠ್ಯಗಳಲ್ಲೂ, ಟಿಪ್ಪಣಿಗಳಲ್ಲೂ ಸ್ಥಾನ ಪಡೆದುಕೊಂಡಿದೆ. ನಾವು ಇಷ್ಟುದ್ದದ ಸಂದೇಶಗಳನ್ನು ಕಳುಹಿಸುವಾಗ ಜೊತೆಗೊಂದು ಇಮೊಜಿಯನ್ನೂ ಸೇರಿಸುತ್ತೇವೆ. ಬಹುತೇಕ ಸಂದರ್ಭಗಳಲ್ಲಿ ಸಂದೇಶಗಳ ಬದಲಿಗೆ ಒಂದು ಇಮೊಜಿ ಕಳುಹಿಸಿ ನಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತೇವೆ. ಯಾಕೆ ಬೇಕು ನಮಗೆ ಈ ಇಮೊಜಿಗಳು? ಅಷ್ಟ್ಯಾಕೆ ಅವುಗಳ ಮೋಹಕ್ಕೆ ಬಿದ್ದಿದ್ದೇವೆ? ಇತ್ತೀಚಿನ ಕೆಲವು ವರ್ಷಗಳಲ್ಲಿ ನಮ್ಮ ನಡುವಿನ ಸಂದೇಶಗಳಲ್ಲಿ, ಸಂವಹನಗಳಲ್ಲಿ ಇಮೊಜಿಗಳ ಬಳಕೆ ಯಾಕೆ ಇಷ್ಟೊಂದು ತೀವ್ರವಾಗಿ ಹೆಚ್ಚಿದೆ?
ಹೊಸ ತಲೆಮಾರಿನ ಚಹರೆಗಳು
ಇದಕ್ಕೆ ಸ್ಪಷ್ಟ ಕಾರಣ, ಅಷ್ಟುದ್ದದ ಬರಹವನ್ನು ಪೋಸ್ಟ್ ಮಾಡುವುದಕ್ಕಿಂತ ಒಂದು ಇಮೊಜಿ ಎಲ್ಲವನ್ನೂ ಧ್ವನಿಸುತ್ತದೆ ಎಂಬುದು. ಅದರಲ್ಲೂ ಮುಖ್ಯವಾಗಿ ಜೆನ್-ಝಡ್ ಮತ್ತು ಜೆನ್-ಆಲ್ಫಾ (2010ರ ನಂತರ ಜನಿಸಿದವರು) ತಲೆಮಾರಿನವರಲ್ಲಿ ಓದುವ ಮತ್ತು ಬರೆಯುವ ಆಸಕ್ತಿ ಕಡಿಮೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಯಾಕೆ ಇಮೊಜಿಗಳ ಬಳಕೆ ಪ್ರಮಾಣ ಜಾಸ್ತಿಯಾಗುತ್ತಿದೆ ಎಂಬುದರ ಬಗೆಗೊಂದು ಅವಲೋಕನ ಮಾಡಬೇಕಾಗಿದೆ.
ಇತ್ತೀಚಿನ ದಿನಗಳಲ್ಲಿ ಯುವಜನರ ಓದುವ ಅಭ್ಯಾಸದ ಬಗೆಗೆ ನಡೆಸಿದ ಅಧ್ಯಯನಗಳು ನಮಗೆ ಮಿಶ್ರ ಚಿತ್ರಣಗಳನ್ನು ನೀಡುತ್ತವೆ. ಅವರು ದಿನಕ್ಕೆ ಕೇವಲ ಏಳು ನಿಮಿಷ ಮಾತ್ರ ಓದುತ್ತಾರೆ ಎಂದು ಕೆಲವು ಅಧ್ಯಯನಗಳು ಹೇಳುತ್ತವೆ. ಆದರೆ ಇನ್ನು ಕೆಲವು ಅಧ್ಯಯನಗಳು ಅದಕ್ಕಿಂತ ಹೆಚ್ಚು ಓದುತ್ತಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿವೆ. ಕೈಬರಹದ ವಿಷಯದಲ್ಲಿಯೂ ಇದೇ ವ್ಯತ್ಯಾಸಗಳು ಕಂಡುಬರುತ್ತವೆ. ಒಂದು ಅಧ್ಯಯನದ ಪ್ರಕಾರ ಶೇ.40ರಷ್ಟು ಜೆನ್-ಝಡ್ ತಲೆಮಾರಿನವರು ಕೈಯಿಂದ ಬರೆಯಲು ಕಷ್ಟಪಡುತ್ತಾರೆ, ಆದರೆ ಸಾಮಾಜಿಕ ಮಾಧ್ಯಮಗಳನ್ನು ಬಳಸುವ ವಿಚಾರದಲ್ಲಿ ಮಾತ್ರ ಬಹಳ ನಿಪುಣರಾಗಿದ್ದಾರೆ ಎಂದು ಹೇಳುತ್ತದೆ.
ಹತ್ತಾರು ಪದಗಳಲ್ಲಿ ಹೇಳುವುದನ್ನು ಕೆಲವೇ ಇಮೊಜಿಗಳಲ್ಲಿ ಹೇಳಿಬಿಡಬಹುದು. ನಮ್ಮ ಭಾವನೆಗಳನ್ನು ಸಂಕ್ಷಿಪ್ತವಾಗಿ ಹೇಳಲು ಈ ಮಾಧ್ಯಮ ಸೂಕ್ತ ಎಂದು ಈ ಇಮೊಜಿಗಳನ್ನು ಹೆಚ್ಚಾಗಿ ಬಳಸುತ್ತಿರುವ ಮಂದಿ ಹೇಳುವ ಮಾತು. ಒಂದು ಸಂದೇಶವನ್ನು ಸಂಕ್ಷಿಪ್ತವಾಗಿ ಹೇಳುವುದಕ್ಕೆ ಇದಕ್ಕಿಂತ ಉತ್ತಮ ಮಾರ್ಗವಿಲ್ಲ ಎಂಬುದನ್ನು ಇದು ಸೂಚಿಸುತ್ತದೆ.
ಸರಳ ಸಂವಹನ ಸೂತ್ರಗಳು
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನಾವು ಪರಸ್ಪರ ಇಬ್ಬರು ವ್ಯಕ್ತಿಗಳು ಸನ್ನೆಗಳ ಮೂಲಕ ವ್ಯಕ್ತಪಡಿಸುವುದನ್ನು ಈ ಇಮೊಜಿಗಳು ಸರಳವಾಗಿ ಹೇಳಿಬಿಡುತ್ತವೆ. ಒಂದು ಇಮೊಜಿ ಮೂಲಕ ಹೇಳುವುದಕ್ಕೆ ಶಕ್ತವಾದುದನ್ನು ಪದಗಳಲ್ಲಿ ಯಾಕೆ ಹೇಳಬೇಕು ಎಂದು ಬಹುತೇಕರು ಭಾವಿಸಿರುವುದು ಸರಿಯಾಗಿಯೇ ಇದೆ.
ಇನ್ನೂ ಖಚಿತ ಮಾತುಗಳಲ್ಲಿ ಹೇಳುವುದಾದರೆ ಬಹುಷಃ ಮಾನವನ ಅನೇಕ ಅಭಿವ್ಯಕ್ತಿಗಳನ್ನು ಒಂದಷ್ಟು ಹೆಚ್ಚೇ ಅನ್ನುವ ರೀತಿಯಲ್ಲಿ ಇಮೊಜಿಗಳು ವ್ಯಕ್ತಪಡಿಸುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ನಿಮ್ಮ ಸಂತೋಷ, ಖುಷಿ, ಅಸಮಾಧಾನ, ಕೋಪ, ಹತಾಶೆ, ದುಃಖ ಎಲ್ಲವನ್ನೂ ವ್ಯಕ್ತಪಡಿಸಲು ಒಂದು ಇಮೊಜಿ ಸಾಕಾಗುತ್ತದೆ.
ಯೂನಿಕೋಡ್ 17.0ರ ಪ್ರಕಾರ ಸೆಪ್ಟೆಂಬರ್ 2025ರ ವರೆಗೆ ನಮಗೆ ಲಭ್ಯವಿರುವ ಇಮೊಜಿಗಳ ಸಂಖ್ಯೆ 3,953. ಇವು ಎಲ್ಲ ಸಾಮಾಜಿಕ ಮಾಧ್ಯಮಗಳು, ಮೊಬೈಲ್ ಸಂದೇಶಗಳು, ಇಮೇಲ್ ಮಾರ್ಕೆಟಿಂಗ್, ನೊಟಿಫಿಕೇಶನ್ ಗಳು, ಎಲೆಕ್ಟ್ರಾನಿಕ್ ಸಂದೇಶಗಳು ಮತ್ತು ವೆಬ್ ಪುಟಗಳಲ್ಲಿ ಇವು ವ್ಯಾಪಕವಾಗಿ ಕಂಡುಬರುತ್ತಿವೆ.
ಮೂರು ವಿಧಗಳು
ಈ ಇಮೊಜಿಗಳು ನಿರ್ವಹಿಸುವ ಕಾರ್ಯಗಳ ಆಧಾರದಲ್ಲಿ ಇವುಗಳನ್ನು ಮೂರು ವಿಧಗಳಾಗಿ ವಿಂಗಡಿಸಬಹುದು. ಪಠ್ಯದ ವಿಷಯಕ್ಕೆ ಪೂರಕವಾಗಿ ಅಥವಾ ಪೋಷಕವಾಗಿ ಕಾರ್ಯನಿರ್ವಹಿಸುವ ಇಮೊಜಿಗಳಿವೆ. ಉದಾಹರಣೆಗೆ ‘ಸನ್ನಿಯ ಅಪಾರ್ಟ್ಮೆಂಟು ಬೀಚ್ ಪಕ್ಕದಲ್ಲಿಯೇ ಇದೆ’ ಎಂದು ಹೇಳುವಾಗ ಅದಕ್ಕೆ ಸೂಕ್ತವಾದ ಒಂದು ಇಮೊಜಿಯನ್ನು ಸೇರಿಸಿ ಕಳುಹಿಸಬಹುದು. ಅಂದರೆ ಅದನ್ನು ಪೂರಕವಾಗಿ ನೀವು ಬಳಸಬಹುದು. ಅಥವಾ ಸನ್ನಿಯ ಅಪಾರ್ಟ್ಮೆಂಟು ಎಂಬ ಸಂದೇಶದ ಪಕ್ಕದಲ್ಲಿಯೇ ಬೀಚಿನ ಇಮೊಜಿ ಬಳಸಿ ಸಂದೇಶ ಕಳಿಹಿಸಲೂ ಸಾಧ್ಯವಿದೆ.
ಇನ್ನೊಂದು ವರ್ಗವೆಂದರೆ ಮುಖಭಾವವನ್ನು ಹೊಂದಿದ  ಮತ್ತು ಮುಖಭಾವ ಹೊಂದಿಲ್ಲದೇ ಇರುವ ಇಮೊಜಿಗಳನ್ನು ಬಳಸುವುದು. ಇದು ಹೆಚ್ಚು ಹೆಚ್ಚು ಬಳಕೆಯಾಗುತ್ತದೆ. ಯಾಕೆಂದರೆ ಅವು ಮನುಷ್ಯನ ಭಾವನೆಗಳನ್ನು ಸಶಕ್ತವಾಗಿ ವ್ಯಕ್ತಪಡಿಸುತ್ತವೆ. ಮುಖಭಾವವಿಲ್ಲದ ಇಮೊಜಿಗಳನ್ನು ‘ವಸ್ತುಗಳು, ವಿಚಾರಗಳು, ಕ್ರಿಯೆಗಳು ಮತ್ತು ಘಟನೆಗಳನ್ನು’ ಶಬ್ಧಾರ್ಥವಾಗಿ ಪ್ರತಿನಿಧಿಸಲು ಬಳಸುತ್ತೇವೆ.
ಮೂರನೇ ವಿಭಾಗವೆಂದರೆ ಸಮ್ಮತಿಯನ್ನು ಸೂಚಿಸುವ ಅಥವಾ ಅಸಮ್ಮತಿಯನ್ನು ಸೂಚಿಸುವ ಇಮೊಜಿಗಳು.ಅಸಮ್ಮತಿಯನ್ನು ಸೂಚಿಸುವ ಇಮೊಜಿಗಳು ಒಂದೆ ಕಡೆ ವಾಲಿಕೊಂಡಿರುತ್ತವೆ.
ಯುವಕರನ್ನು ಸೆಳೆಯುವ ಮಾರ್ಕೆಟ್ ಟೆಕ್ನಿಕ್
ಇಮೊಜಿಗಳ ಬಳಕೆಗೆ ಹೆಚ್ಚಿನ ಪ್ರೋತ್ಸಾಹ – ಉತ್ತೇಜನ ಅಂತ ಸಿಕ್ಕಿರುವುದು ವ್ಯಾಪಾರಗಳ ಮಾರ್ಕೆಟಿಂಗ್ ವಿಭಾಗಗಳಿಂದ. ಬಹುಷಃ ಅವರು ಬೇರೆಯವರಿಗಿಂತ ಸಾಕಷ್ಟು ಮೊದಲೇ ಯುವ ಪೀಳಿಗೆ ಹೇಗೆ ಮತ್ತು ಯಾವ ರೀತಿ ವರ್ತಿಸುತ್ತದೆ ಎಂಬುದರ ಪರಿಣಾಮಗಳನ್ನು ಅರಿತುಕೊಳ್ಳಲು ಯಶಸ್ವಿಯಾದರು.
ಈ ಮಾರಾಟಗಾರರು ಯುವಕರ ಜೊತೆ ರಚನಾತ್ಮಕ ಮತ್ತು ವ್ಯವಸ್ಥಿತವಾಗಿ ಸಂಭಾಷಣೆಗಳಲ್ಲಿ ತೊಡಗಿಕೊಳ್ಳಲು ವಿಶೇಷವಾಗಿ ಡಿಜಿಟಲ್ ಐಕಾನ್ ಗಳಾದ ಇಮೊಜಿಗಳನ್ನು ಪದಗಳ, ಟಿಪ್ಪಣಿಗಳ ಸ್ಥಾನದಲ್ಲಿ ಬಳಸುವ ಒಂದು ಹೊಸ ಟ್ರೆಂಡ್ ಅನ್ನು ಜಾರಿಗೆ ತಂದರು ಎಂಬುದರಲ್ಲಿ ಅನುಮಾನವಿಲ್ಲ..
ಕ್ರಮೇಣ ಈ ಪದ್ಧತಿಯು ವಿಶ್ವದಾದ್ಯಂತ ವ್ಯಾಪಿಸಿತು. 22ಕ್ಕೂ ಅಧಿಕ ಭಾಷೆಗಳನ್ನು ಮಾತನಾಡುವ ಮತ್ತು ಅದಕ್ಕೂ ಹೆಚ್ಚಿನ ಉಪಭಾಷೆಗಳಲ್ಲಿ ವ್ಯವಹರಿಸುವ ಭಾರತದಂತಹ ವೈವಿಧ್ಯಮಯ ರಾಷ್ಟ್ರಗಳಲ್ಲಿ ಒಂದು ಸಂದೇಶವನ್ನು ಕಳುಹಿಸುವುದು ಸುಲಭದ ಮಾತಲ್ಲ. ಮಾರುಕಟ್ಟೆಯನ್ನು ನಿರ್ವಹಿಸುವವರಿಗೆ ಇದು ನಿಜಕ್ಕೂ ಸವಾಲು.
ದಿಕ್ಕು ಬದಲಿಸಿದ ಡಿಜಿಟಲ್ ಐಕಾನ್-ಗಳು
ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ನಿಮ್ಮ ಕಂಪನಿಯ ಬ್ರಾಂಡ್ ಎಲ್ಲರನ್ನೂ ತಲುಪುವಂತೆ ಮಾಡುವುದು ಹೇಗೆ? ಹಾಗಾಗಿ ಇಲ್ಲಿ ಮಾರುಕಟ್ಟೆಯ ಪಾಲಿಗೆ ದಿಕ್ಕನ್ನೇ ಬದಲಿಸುವ ರೀತಿಯಲ್ಲಿ ಚಾಲ್ತಿಗೆ ಬಂದಿದ್ದು ಇದೇ ಇಮೊಜಿಗಳು. ಭಾರತದಲ್ಲಿ ಆಹಾರ ವಿತರಣಾ ಸಂಸ್ಥೆಗಳು ಈ ಡಿಜಿಟಲ್ ಐಕಾನ್ ಗಳನ್ನು ಧೈರ್ಯದಿಂದ ಬಳಸಿಕೊಂಡವು ಮತ್ತು ಹೊಸ ತಲೆಮಾರಿನವರು ಇದನ್ನು ಸುಲಭವಾಗಿ ಸ್ವೀಕರಿಸಿದರು ಕೂಡ.
ಹಸಿವು, ಉತ್ಸಾಹ ಅಥವಾ ತೃಪ್ತಿಯಂತಹ ಭಾವನೆಗಳನ್ನು ಕೆರಳಿಸಲು ಫ್ಲಿಪ್-ಕಾರ್ಟ್, ಜೊಮಾಟೊ ಮತ್ತು ಸ್ವಿಗ್ಗಿಯಂತಹ ಬ್ರಾಂಡ್-ಗಳು ಆಹಾರ ಮತ್ತು ಶಾಪಿಂಗ್ ಸಂಬಂಧಿತ ಇಮೊಜಿಗಳನ್ನು ಬಳಸಿಕೊಂಡವು. ಇದೇ ಮಾದರಿಯನ್ನು ಮ್ಯಾಕ್-ಡೊನಾಲ್ಡ್ಸ್ ಕೂಡ ಅನುಸರಿಸಿತು. ಅದು ತನ್ನ ಹ್ಯಾಪಿ ಮೀಲ್ಸ್ ಬಾಕ್ಸ್-ಗಳ ಮೇಲೆ ನಗುತ್ತಿರುವ ಇಮೊಜಿಯನ್ನು ಬಳಸುವ ಮೂಲಕ ಸಂತೋಷ ಮತ್ತು ಆಶಾವಾದದ ತನ್ನ ಸಂದೇಶವನ್ನು ಹರಡಿತು.
ಡಾಮಿನೋಜ್ ಪಿಜ್ಜಾ ಕೂಡ ಈ ಪೈಪೋಟಿಯಲ್ಲಿ ಹಿಂದೆ ಬೀಳಲಿಲ್ಲ. ಗ್ರಾಹಕರು ಚಾಟ್-ಬಾಟ್ ಮೂಲಕ ಪಿಜ್ಜಾ ಸ್ಲೈಸ್ ಕಳುಹಿಸಲು ಅನುಕೂಲಗಳನ್ನು ಕಲ್ಪಿಸಿತು. ಅದೊಂದು ಕ್ರಾಂತಿಕಾರಿ ಹೆಜ್ಜೆ. ಆ ಮೂಲಕ ಅದು ಆರ್ಡರ್ ಮಾಡುವ ಸಮಯವನ್ನು ಕೇವಲ ಐದು ಸೆಕೆಂಡ್-ಗಳಿಗೆ ಇಳಿಸಿತು.
ಉದ್ಯಮವೊಂದು ಇಮೊಜಿಯನ್ನು ಯಾಕೆ ಬಳಸುತ್ತಿದೆ ಎಂಬುದಕ್ಕಿಂತ ಹಾಗೆ ಬಳಸಿದ್ದನ್ನು ಜನ ಹೇಗೆ ಗ್ರಹಿಸುತ್ತಾರೆ ಎಂಬುದು ಮುಖ್ಯವಾಗಿದೆ. ಈ ಇಮೊಜಿಗಳು ಜಾಹೀರಾತು ಮತ್ತು ಸಾಮಾಜಿಕ ಮಾಧ್ಯಮದ ಪೋಸ್ಟ್-ಗಳನ್ನು ಜನರಿಗೆ ಇನ್ನಷ್ಟು ಹತ್ತಿರವಾಗುವಂತೆ ಮಾಡುತ್ತವೆ. ಅವು ಹೆಚ್ಚು ಮಾನವೀಯವೂ, ವಿನೋದಮಯವೂ ಆಗಿ ಮಾಡುತ್ತವೆ. ಒಂದು ನಗುತ್ತಿರುವ ಮುಖ, ಅರಳಿರುವ ಹೃದಯ ❤ ಅಥವಾ ಬೆಂಕಿಯ ಇಮೊಜಿಗಳು ಒಂದೇ ಒಂದು ಪದವೂ ಇಲ್ಲದೆ ಬಹಳಷ್ಟು ವಿಷಯಗಳನ್ನು ಹೇಳುವ ತಾಕತ್ತು ಹೊಂದಿರುತ್ತವೆ.
ಮಾನಸಿಕ ಆರೋಗ್ಯ ವೃದ್ಧಿ
2022ರಲ್ಲಿ ಅಡೋಬ್ ಅಧ್ಯಯನವೊಂದು ಪ್ರಕಟವಾಯಿತು. ಅದರ ಪ್ರಕಾರ ತಮ್ಮ ಸಂವಹನದಲ್ಲಿ ಇಮೊಜಿಯನ್ನು ಬಳಸುವವರಲ್ಲಿ ಶೇ.71ರಷ್ಟು ಮಂದಿ ಸ್ನೇಹಪರರು ಎಂದು ಭಾವಿಸುತ್ತಾರೆ. ಅವರಲ್ಲಿ ಶೇ.60ರಷ್ಟು ಜನರು ತಮಾಷೆಯ ಚಿತ್ರಲಿಪಿಗಳು (pictographs) ನಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸುವಲ್ಲಿ ಸಹಾಯಕ ಎಂದು ಅಭಿಪ್ರಾಯಪಟ್ಟಿದ್ದಾರೆ. ಸುಮಾರು ಐದು ಸಾವಿರ ಮಂದಿ ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.
ಅಡೋಬ್ ಸಮೀಕ್ಷೆಯ ಫಲಿತಾಂಶಗಳನ್ನು ಪರಿಗಣಿಸಿದರೆ ಇಮೊಜಿಗಳನ್ನು ಬಳಸುವುದರಿಂದ ಮಾರಾಟಗಾರರು ಈ ಸನ್ನಿವೇಶಕ್ಕೆ ಪ್ರಸ್ತುತರು, ಸಂಪರ್ಕ ಯೋಗ್ಯರು ಮತ್ತು ಯುವಕರಂತೆ ಕಾಣಿಸಿಕೊಳ್ಳುವುದು ಮಾತ್ರವಲ್ಲದೆ ಅವರು ಗ್ರಾಹಕರ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಲ್ಲರು ಎಂಬುದು ವೇದ್ಯವಾಗುತ್ತದೆ.
ಇನ್ನೊಂದು ಮುಖ
ಈ ಇಮೊಜಿಗಳ ಲೋಕದಲ್ಲಿ ಎಲ್ಲವೂ ಸುಗಮ-ಸುಲಲಿತವಾಗಿದೆ ಎಂದೇನೂ ಅಲ್ಲ. ಇವುಗಳು ತಕ್ಕಮಟ್ಟಿಗಷ್ಟೇ ಪ್ರಮಾಣೀಕರಣ ಇರುವುದರಿಂದ ಇದರ ಅರ್ಥ ವ್ಯಾಖ್ಯಾನವನ್ನು ಎಲ್ಲರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಅರೆ-ಸಾಕ್ಷರರು, ಅನಕ್ಷರಸ್ಥರು ಅಥವಾ ವಯಸ್ಸಾದ ಮಂದಿ ಇಂತಹ ಇಮೊಜಿಗಳ ಭಾವವನ್ನು ತಿಳಿದುಕೊಳ್ಳುವಲ್ಲಿ ಕಷ್ಟಪಡಬಹುದು. ಅವರು ತಮಗೆ ಪರಿಚಿತವಿಲ್ಲದೇ ಇರುವುದರ ಬಗ್ಗೆ ಹೇಗಾದರೂ ಪ್ರತಿಕ್ರಿಯಿಸುತ್ತಾರೆ?
2023ರಲ್ಲಿ ಕೆನಡಾದಲ್ಲಿ ನಡೆದ ಘಟನೆಯನ್ನೇ ನೋಡಿ; ಅಲ್ಲಿನ ರೈತನೊಬ್ಬ ತನ್ನ ಅಗಸೆ ಬೀಜವನ್ನು ಮಾರಾಟ ಮಾಡುವ ಸಂಬಂಧ ತನ್ನ ಖರೀದಿದಾರನಿಗೆ ಒಪ್ಪಂದವನ್ನು ಪೂರೈಸಲು ಥಂಪ್ಸ್-ಅಪ್ ಇಮೊಜಿಯನ್ನು ಕಳಿಸಿದ್ದ. ಇದರಿಂದಾಗಿ ಆತ ಸುಮಾರು 80000 ಡಾಲರ್ ಹಣವನ್ನು ಕಳೆದುಕೊಳ್ಳಬೇಕಾಯಿತು. ಯಾಕೆಂದರೆ ಆತ ಆ ಒಪ್ಪಂದದ ಪ್ರಕಾರ ಅಗಸೆಬೀಜವನ್ನು ಪೂರೈಸಲು ಸಾಧ್ಯವಾಗಲಿಲ್ಲ. ಹಾಗಂತ ಆ ರೈತ ಸುಮ್ಮನೆ ಕುಳಿತುಕೊಳ್ಳಲಿಲ್ಲ, ನ್ಯಾಯಾಲಯದ ಮೆಟ್ಟಿಲನ್ನೂ ಹತ್ತಿದ. ಆ ಥಂಪ್ಸ್-ಅಪ್ ಸಂದೇಶ ತನಗೆ ಅರ್ಥ ನೀಡಲಿಲ್ಲ ಎಂದು ಹೇಳಿದರೂ ಅದನ್ನು ನ್ಯಾಯಾಲಯ ಒಪ್ಪಿಕೊಳ್ಳಲಿಲ್ಲ.
ಹಾಗಾಗಿ, ಸ್ಪಷ್ಟ ಸಂದರ್ಭಗಳು ಇಲ್ಲದೇ ಹೋದಾಗ ಇಮೊಜಿಗಳನ್ನು ತಪ್ಪಾಗಿ ಅರ್ಥಮಾಡಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಅವು ಭಾಷೆಯ ಅಡೆ-ತಡೆಗಳನ್ನು ಮೀರಿ ಜನರನ್ನು ಭಾವನಾತ್ಮಕವಾಗಿ ಬೆಸೆಯುವ ಸಾಧನಗಳು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿಯೇ ಅವು ಶಕ್ತಿಯುತ ಸಂವಹನ ಸಾಧನಗಳಾಗಿವೆ. ಅವುಗಳನ್ನು ವಿವೇಚನೆಯಿಂದ ಬಳಸಿದಾಗ ಪದಗಳಿಗಿಂತ ಗಟ್ಟಿ ಧ್ವನಿಯಲ್ಲಿ ಮಾತನಾಡಬಲ್ಲವು.
“ಪದ ಕುಸಿಯೇ ನೆಲವಿಹುದು ಮಂಕುತಿಮ್ಮ!” ಎಂದು ಡಿವಿಜಿ ಅವರು ತಮ್ಮ ಕವಿತೆಗಳಲ್ಲಿ ಹೇಳಿದ್ದಾರೆ. ಈಗಿನ ಜಮಾನದಲ್ಲಿ ಭಾವನೆಗಳನ್ನು ವ್ಯಕ್ತಪಡಿಸಲು ಪದಗಳು ಇಲ್ಲದೇ ಹೋದರೂ ಇಮೊಜಿಗಳು ನಿಮ್ಮ ಸಹಾಯಕ್ಕೆ ಬರುತ್ತವೆ ಎಂಬುದು ದಿಟ.

