
ಲಕ್ಷಾಂತರ ಯುವಕರನ್ನು ನಿರುದ್ಯೋಗಿಗಳಾಗಿ ಮಾಡಿ, ಕೈಗೆ ಸ್ಮಾರ್ಟ್‌ಫೋನ್ ನೀಡುವ ಸಮಾಜ ತನ್ನ ವಿನಾಶವನ್ನು ರೂಪಿಸಿಕೊಳ್ಳುತ್ತಿವೆ. ಘನತೆ ಮಾಯವಾದಾಗ, ಧರ್ಮವೇ ಪರಿಣಾಮಕಾರಿ ಭಾಷೆಯಾಗುತ್ತದೆ!
ದಕ್ಷಿಣ ಏಷ್ಯಾದಲ್ಲಿ ಧಾರ್ಮಿಕ ಹಿಂಸಾಚಾರ ಎಂಬುದು ಈಗ ಕೇವಲ ಒಂದು ಅನಿರೀಕ್ಷಿತ ಘಟನೆಯಾಗಿ ಉಳಿದಿಲ್ಲ. ಅದು ಆತಂಕಕಾರಿಯಾದ ರೀತಿಯಲ್ಲಿ ದೈನಂದಿನ ಚಟುವಟಿಕೆಯಾಗಿ ಹೋಗಿದೆ.
ಕ್ರಿಸ್ಮಸ್ ಆಚರಿಸುವವರ ಮೇಲೆ ಏಕಾಏಕಿ ದಾಳಿ, ವದಂತಿಗಳಿಂದ ಪ್ರೇರಿತವಾದ ಹತ್ಯೆಗಳು, ಸಾಮಾಜಿಕ ಮಾಧ್ಯಮಗಳ ಮೂಲಕ ಕೆಲವೇ ಗಂಟೆಗಳಲ್ಲಿ ಸಜ್ಜುಗೊಳ್ಳುವ ಗುಂಪುಗಳು-ಇವೆಲ್ಲವೂ ಇನ್ನು ಮುಂದೆ ಪ್ರತ್ಯೇಕ ಘಟನೆಗಳೆಂದು ತಳ್ಳಿಹಾಕಲು ಸಾಧ್ಯವಿಲ್ಲ. ಅವೆಲ್ಲವೂ ಒಂದು ಪ್ರದೇಶದ ಸಾರ್ವಜನಿಕ ಜೀವನದಲ್ಲಿ ಮತ್ತೆ ಮತ್ತೆ ಮರುಕಳಿಸುವ ಲಕ್ಷಣಗಳಾಗಿವೆ. ಹಿಂಸಾಚಾರ ಎಂಬುದು ಇಷ್ಟೊಂದು ನಿಯಮಿತವಾಗುತ್ತ ಹೋದಾಗ ಕೇವಲ ಪೊಲೀಸ್ ವ್ಯವಸ್ಥೆ ಅಥವಾ ಗುಪ್ತಚರ ಇಲಾಖೆಯ ವೈಫಲ್ಯ ಎಂದು ಬೊಟ್ಟುಮಾಡಲು ಸಾಧ್ಯವಿಲ್ಲದಂತಾಗಿದೆ.
ನೈತಿಕ ಕಲ್ಪನಾಶಕ್ತಿಯು ನಮ್ಮ ಊಹೆಗೂ ನಿಲುಕದಷ್ಟು ಕುಸಿದು ಹೋಗಿದೆ. ಒಬ್ಬ ವ್ಯಕ್ತಿಯನ್ನು ಶತ್ರು ಎಂದು ಗುರುತಿಸುವುದಕ್ಕೂ ಮೊದಲು ಆತನಲ್ಲಿರುವ ಮಾನವೀಯ ಗುಣಗಳನ್ನು ಗುರುತಿಸುವ ಸಮಾಜದ ಸಾಮರ್ಥ್ಯವೇ ಕುಸಿದು ಕುಳಿತಿದೆ. ಇಂತಹ ಪರಿಸ್ಥಿತಿಯು ಈಗ ಭಾರತದ ನೆರೆಹೊರೆಯೂ ಸೇರಿದಂತೆ ಇಡೀ ಉಪಖಂಡದಾದ್ಯಂತ ಹರಡಿರುವುದು ನಮ್ಮನ್ನು ತೀವ್ರವಾಗಿ ಅಸಮಾಧಾನಕ್ಕೆ ಗುರಿಪಡಿಸಿದೆ. ಹಿಂದೆಲ್ಲ ಧಾರ್ಮಿಕ ಅಹಂಕಾರ ಮತ್ತು ನೈತಿಕತೆಯ ಅಧಃಪತನದ ಬಗ್ಗೆ ಗಹನವಾದ ವಿಮರ್ಶೆಯನ್ನು ನೀಡುತ್ತಿದ್ದ ಪ್ರದೇಶವೇ ನಾಗರಿಕತೆಯ ಹಿಂಜರಿತಕ್ಕೆ ಸಾಕ್ಷಿಯಾಗಿದೆ.
ನಮ್ಮ ನಡುವಿನ ಪರಮ ಸತ್ಯಗಳು
ದಕ್ಷಿಣ ಏಷ್ಯಾ ಕುರುಡು ನಂಬಿಕೆಗೆ ಕಟ್ಟುಬಿದ್ದ ನಾಗರಿಕತೆಯಾಗಿರಲಿಲ್ಲ. ಇಲ್ಲಿನ ದಾರ್ಶನಿಕ ಸಂಪ್ರದಾಯಗಳು ಯಾವುದೇ ಪರಮ ಸತ್ಯಗಳನ್ನು ಅನುಮಾನದ ಕಣ್ಣುಗಳಿಂದ ನೋಡುತ್ತಿದ್ದವು. ಅನುಮಾನದ ನೆಲೆಗಟ್ಟಿನಿಂದಲೇ ಜ್ಞಾನದ ಮಟ್ಟಕ್ಕೆ ಏರಿಸಿದ್ದು ಉಪನಿಷತ್ತುಗಳು. ಕಟ್ಟುನಿಟ್ಟಾದ ನಂಬಿಕೆಗಳನ್ನೇ ದುಃಖದ ಮೂಲವೆಂದು ಎಚ್ಚರಿಸಿದ್ದು ಬೌದ್ಧ ಚಿಂತನೆ. ನೈತಿಕ ವ್ಯರ್ಥ ಅಭಿಮಾನದ ಹಿಂದೆ ಕ್ರೌರ್ಯ ಅಡಗಿದೆ ಎಂಬುದನ್ನು ಬಯಲಿಗೆ ಎಳೆದವರು ಸೂಫಿ ಕವಿಗಳು. ಆಂತರಿಕ ಭಕ್ತಿ ಮತ್ತು ಕರುಣೆಯ ಪರವಾಗಿ ಶ್ರೇಣೀಕೃತ ವ್ಯವಸ್ಥೆಯನ್ನು ಕಿತ್ತೆಸೆಯುವ ಪ್ರಯತ್ನ ಮಾಡಿದವರು ಭಕ್ತಿ ಪಂಥದ ಸಂತರು.
ಈ ಸಂಪ್ರದಾಯಗಳು ಕೇವಲ ಸಹಬಾಳ್ವೆ ನಡೆಸಲಿಲ್ಲ, ಬದಲಾಗಿ ಅವೆಲ್ಲವೂ ಜೊತೆಯಲ್ಲಿ ಒಂದು ನೈತಿಕ ಪರಿಸರ ವ್ಯವಸ್ಥೆಯನ್ನೇ ರೂಪಿಸಿದವು. ಈ ವ್ಯವಸ್ಥೆಯಾದರೂ ಎಂಥಹುದು? ಇದು ಅಧಿಕಾರವನ್ನು ಪ್ರಶ್ನೆಗೆ ಒಡ್ಡುವಂತಹುದು, ಅಚಲವಾದ ನಿಶ್ಚಿತತೆಯನ್ನು ಅನುಮಾನದಿಂದ ನೋಡುವಂತಹುದು ಮತ್ತು ಧರ್ಮದ ಹೆಸರಿನಲ್ಲಿ ನಡೆಯುವ ಕ್ರೌರ್ಯವನ್ನು ವಿರೋಧಿಸುವಂತಹುದಾಗಿತ್ತು. ಇಂದು ನಾವು ಕಾಣುತ್ತಿರುವುದು ಅವುಗಳ ದ್ರೋಹದ ಮುಖವಲ್ಲ.
ಇಂದಿನ ಧಾರ್ಮಿಕ ಹಿಂಸಾಚಾರವನ್ನು ಪ್ರಚೋದಿಸುತ್ತಿರುವುದು ಧರ್ಮಶಾಸ್ತ್ರವಲ್ಲ. ಬದಲಾಗಿ ಅಧಿಕಾರ. ಯಾವುದೇ ಧರ್ಮಗ್ರಂಥವು ಗುಂಪು ಹತ್ಯೆ ಮಾಡುವಂತೆ ನಿರ್ದೇಶಿಸುವುದಿಲ್ಲ.
ಯಾವುದೇ ನಂಬಿಕೆಯು ಮನೆಗಳಿಗೆ ಬೆಂಕಿ ಹಚ್ಚುವುದನ್ನಾಗಲಿ ಅಥವಾ ಮುಗ್ಧರ ಹತ್ಯೆಯನ್ನಾಗಲಿ ಪವಿತ್ರವೆಂದು ಹೇಳುವುದಿಲ್ಲ. ಧರ್ಮವು ಅಹಂಕಾರವನ್ನು ನಿಯಂತ್ರಿಸುವ ಬದಲು ಯಾವತ್ತು ಅದನ್ನು ಸಮರ್ಥಿಸಲು ಮುಂದಾಯಿತೋ, ನಂಬಿಕೆಯು ರಾಜಕೀಯ ಅಧಿಕಾರದೊಂದಿಗೆ ಬೆರೆತು ಆತ್ಮ ವಿಮರ್ಶೆಯನ್ನು ಕೈಬಿಟ್ಟಾಗ ಹಿಂಸೆ ತಲೆ ಎತ್ತುತ್ತದೆ. ಆ ಹಂತದಲ್ಲಿ ಕ್ರೌರ್ಯ ನೈತಿಕತೆಯ ಮುಖವಾಡ ಧರಿಸುತ್ತದೆ.
ದ್ವೇಷವೇ ʼಸಾಹಸʼ ಎಂಬ ನಾಡಿನಲ್ಲಿ…
ಕೊಲೆಯು ರಕ್ಷಣೆಯ ಕವಚ ಧರಿಸುತ್ತದೆ, ದ್ವೇಷವು ʼಸಾಹಸʼ ಎಂದು ಮರುನಾಮಕರಣ ಹೊಂದುತ್ತದೆ. ಭಕ್ತಿಯು ಹೇಳಹೆಸರಿಲ್ಲದೆ ಮರೆಯಾಗುತ್ತದೆ. ಇದು ಒಂದು ಧರ್ಮವು ಇನ್ನೊಂದರ ಮೇಲೆ ತಿರುಗಿಬಿದ್ದ ಕಥೆಯಲ್ಲ. ಬದಲಾಗಿ ಯಾವುದೇ ನಂಬಿಕೆಯು ತಾನೇ ತೀರ್ಪು ನೀಡುವ, ಶಿಕ್ಷಿಸುವ ಮತ್ತು ಅಳಿಸಿಹಾಕುವ ಅಧಿಕಾರ ಹೊಂದಿದೆ ಎಂಬ ಪ್ರತಿಪಾದನೆಯನ್ನು ಮುಂದೆ ಮಾಡಿದಾಗ ಏನಾಗುತ್ತದೆ ಎಂಬುದರ ಚಿತ್ರ ನಮ್ಮ ಮುಂದೆ ಇದೆ.
ಈ ಬಗೆಯ ರೂಪಾಂತರವು ಒಂದು ಜನಸಂಖ್ಯಾ ಹಿನ್ನೆಲೆಯಲ್ಲಿ ತೆರೆದುಕೊಳ್ಳುತ್ತಿದೆ. ಇದು ಪರಿಸ್ಥಿತಿಯನ್ನು ಮತ್ತಷ್ಟು ಅಸ್ಥಿರವಾಗುವಂತೆ ಮಾಡಿದೆ.
ದಕ್ಷಿಣ ಏಷ್ಯಾ ಅಸಾಧಾರಣ ಯುವಶಕ್ತಿಯನ್ನು ಹೊಂದಿದೆ. ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಮೂವತ್ತಕ್ಕಿಂತ ಕಡಿಮೆ ವಯಸ್ಸಿನ ನೂರಾರು ಮಿಲಿಯನ್ ಯುವಕರಿದ್ದಾರೆ. ಇವರಾದರೂ ಎಲ್ಲಿಗೆ ಸೇರ್ಪಡೆಯಾಗುತ್ತಿದ್ದಾರೆ? ತಮ್ಮನ್ನು ಸೇರಿಸಿಕೊಳ್ಳಲಾಗದ ಕಾರ್ಮಿಕ ಮಾರುಕಟ್ಟೆಗೆ ಮತ್ತು ತಮಗೆ ಸರಿಯಾದ ಕೌಶಲ್ಯವನ್ನು ನೀಡಲಾಗದ ಶಿಕ್ಷಣ ವ್ಯವಸ್ಥೆಗಳಿಗೆ. ಇಲ್ಲಿರುವುದು ಕೇವಲ ಆರ್ಥಿಕ ಸವಾಲಲ್ಲ. ಬದಲಾಗಿ ಇದೊಂದು ತುರ್ತು ಪರಿಸ್ಥಿತಿ.
ಯಾವಾಗ ಶಿಕ್ಷಣವು ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸಲು ವಿಫಲವಾಗುವುದೋ, ಉದ್ಯೋಗವು ಘನತೆಯನ್ನು ದಕ್ಕಿಸುವಲ್ಲಿ ಸೋಲುವುದೋ ಆಗ ಯುವಜನತೆ ತಮಗೆ ಬೇಕಾದ ತಕ್ಷಣದ ಅಸ್ಮಿತೆ, ಸರಳ ವಿವರಣೆ ಮತ್ತು ಕಣ್ಣಿಗೆ ಕಾಣುವ ಶತ್ರುಗಳು ನೀಡುವ ಭರವಸೆಗಳಿಗೆ ಬಲಿಯಾಗುತ್ತಾರೆ. ಧಾರ್ಮಿಕ ಸಜ್ಜುಗೊಳಿಸುವಿಕೆಯು ಈ ಮೂರನ್ನೂ ಒದಗಿಸುತ್ತದೆ.
ಆರ್ಥಿಕ ಬಹಿಷ್ಕಾರವನ್ನು ನಾಗರಿಕತೆಯ ಗಾಯ ಅಥವಾ ಅವಮಾನ ಎಂದು ಹೊಸರೂಪದಲ್ಲಿ ಬಿಂಬಿಸಲಾಗುತ್ತಿದೆ. ಒಂದು ಕಾಲದಲ್ಲಿ ಸಿದ್ಧಾಂತಗಳನ್ನು ವರ್ಷಗಳ ಕಾಲ ತಲೆಯಲ್ಲಿ ತುಂಬುವ ಅಗತ್ಯವಿತ್ತು. ಆದರೆ ಈಗ ಅಲ್ಗಾರಿದಮ್ ಫೀಡ್ ಮಾಡಿದರೆ ಸಾಕು ಫಟಾಫಟ್ ಉತ್ತರ ಸಿಕ್ಕುಬಿಡುತ್ತದೆ. ದಕ್ಷಿಣ ಏಷ್ಯಾದಾದ್ಯಂತ ಗುಂಪು ಹಿಂಸಾಚಾರದಲ್ಲಿ ತೊಡಗಿರುವವರಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಭವಿಷ್ಯದ ಬಗ್ಗೆ ಕಿಂಚಿತ್ತೂ ನಿರೀಕ್ಷೆಗಳಿಲ್ಲದ ಆದರೆ ಕೈಯಲ್ಲೊಂದು ಸ್ಮಾರ್ಟ್ ಫೋನ್ ಹಿಡಿದಿರುವ ಯುವಕನನ್ನು ಈಗ ಕೆಲವೇ ಗಂಟೆಗಳಲ್ಲಿ ಕುಂದುಕೊರತೆಗಳ ಜಾಲಕ್ಕೆ ಸೇರಿಸಿಬಿಡಬಹುದು.
ಡಿಜಿಟಲ್ ತಂತ್ರಜ್ಞಾನವು ಈ ಅಸ್ಥಿರತೆಯನ್ನು ಮತ್ತಷ್ಟು ತೀವ್ರಗೊಳಿಸುವ ವೇಗವರ್ಧಕವಾಗಿ ಮಾರ್ಪಡಿಸಿದೆ. ಇಂದು ವದಂತಿಗಳಿಗಂತೂ ಮಾರಣಾಂತಿಕ ವೇಗ. ಹಿಂದೆ ವಿಷಯಗಳು ಒಂದು ದಿಕ್ಕಿನಿಂದ ಇನ್ನೊಂದಕ್ಕೆ ತಲುಪಲು ದಿನಗಟ್ಟಲೆ ಬೇಕಾಗಿತ್ತು. ಈಗ ಕೆಲವೇ ನಿಮಿಷಗಳಲ್ಲಿ ಕೋಟ್ಯಂತರ ಜನರನ್ನು ತಲುಪುತ್ತಿವೆ. ಕೇವಲ ಸಾಮಾಜಿಕ ಜಾಲತಾಣದ ವದಂತಿಗಳಿಂದಾಗಿ ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಹತ್ಯೆಯಾಗಿರುವುದು ಇದಕ್ಕೆ ಸ್ಪಷ್ಚ ನಿದರ್ಶನ.
ಇಂದು ಯಾವುದೇ ತನಿಖೆಗಳು ನಡೆಯುವ ಅಗತ್ಯವಿಲ್ಲ. ಸಂಯಮದಿಂದ ಕಾಯುವ ಪ್ರಮೇಯವೇ ಇಲ್ಲ. ಯಾವ ದೃಢೀಕರಣವೂ ಇಲ್ಲದ ಕ್ಲೈಮ್-ಗಳನ್ನು ಸತ್ಯದಂತೆ ಬಿಂಬಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳು ಕೇವಲ ಪೂರ್ವಗ್ರಹ ಸಂಗತಿಗಳನ್ನು ಹರಡುವುದು ಮಾತ್ರವಲ್ಲ, ಅವುಗಳನ್ನು ಸೃಷ್ಟಿಸುತ್ತವೆ ಕೂಡ.
ನೈತಿಕವಾಗಿ ಸಮರ್ಥಿಸಲಾಗದ್ದು
ಭಾರತದ ನಗರವಾಸಿ, ಸುಶಿಕ್ಷಿತ ಮಧ್ಯಮ ವರ್ಗದವರಿಗೆ ಈ ಹಿಂಸಾಚಾರವನ್ನು ಸಾಂದರ್ಭಿಕ ಅತಿರೇಕ ಎಂದು ಪರಿಗಣಿಸುವ ಪ್ರಲೋಭನೆ ಇದೆ. ಅದು ನಿಜಕ್ಕೂ ದುರದೃಷ್ಟಕರ. ಅಂತಹ ಪ್ರಲೋಭನೆಯನ್ನು ನೈತಿಕವಾಗಿ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಗಳು ನಾಟಕೀಯ ದಂಗೆಗಳ ಮೂಲಕ ಕುಸಿಯುವುದು ಅಪರೂಪ. ಅವು ಮೌನದಿಂದ, ಸ್ಥಿರತೆಯ ಹೆಸರಿನಲ್ಲಿ ನೀಡಲಾಗುವ ಸಮರ್ಥನೆಗಳಿಂದ ಮತ್ತು ಒಂದೊಂದೇ ಘಟನೆಯ ಮೂಲಕ ಕ್ರೌರ್ಯದ ಮಿತಿಗಳನ್ನು ತಗ್ಗಿಸುವುದರಿಂದ ಕ್ರಮೇಣ ಸವೆಯುತ್ತ ಹೋಗುತ್ತವೆ.
ಈಗಿನ ಡಿಜಿಟಲ್ ಯುಗದಲ್ಲಿ ಈ ಸವಕಳಿಗೆ ದಶಕಗಳು ಬೇಕಾಗುವುದಿಲ್ಲ,. ಅದು ಒಂದು ಸುದ್ದಿಯ ಚಕ್ರದ ಅವಧಿಯಲ್ಲಿಯೇ ಅನಾವರಣಗೊಳ್ಳಬಹುದು.
ಭಾರತದಲ್ಲಿ ಹಸು ಹತ್ಯೆಯ ವದಂತಿಗಳ ಆಧಾರದಲ್ಲಿ ಮುಸ್ಲಿಂ ಯುವಕರನ್ನು ಗುಂಪು ಹತ್ಯೆ ಮಾಡುವುದು ಒಂದು ಭೀಕರ ಮಾದರಿಯಾಗಿ ರೂಪುಗೊಂಡಿದೆ. ಇಲ್ಲಿ ಸಾಕ್ಷ್ಯದ ಸ್ಥಾನವನ್ನು ವದಂತಿ ಆಕ್ರಮಿಸಿಕೊಳ್ಳುತ್ತದೆ. ನ್ಯಾಯಾಂಗದ ಅಧಿಕಾರವನ್ನು ಜನಸಮೂಹವೇ ವಹಿಸಿಕೊಳ್ಳುತ್ತದೆ. ಹಲ್ಲೆಗಳನ್ನು ಚಿತ್ರೀಕರಿಸಿ ಸಂಭ್ರಮದಂತೆ ಹಂಚಿಕೆ ಮಾಡಲಾಗುತ್ತದೆ.
ಮತಾಂತರ ತಡೆಗಟ್ಟುವ ನೆಪದಲ್ಲಿ ಚರ್ಚ್ ಗಳ ಮೇಲೆ ದಾಳಿ ಮಾಡಲಾಗಿದೆ. ಕ್ರೈಸ್ತ ಸನ್ಯಾಸಿನಿಯರ ಮೇಲೆ ದೌರ್ಜನ್ಯ ಎಸಗಲಾಗಿದೆ. ಪಾದ್ರಿಗಳ ಮೇಲೆ ಹಲ್ಲೆ ಮಾಡಲಾಗಿದೆ. ಜಾತಿ ಶ್ರೇಣೀಕರಣಕ್ಕೆ ಧಾರ್ಮಿಕ ಸಂಪ್ರದಾಯದ ಹೊದಿಕೆ ಹಾಕಿದಾಗ ದಲಿತರ ಮೇಲೆ ಕ್ರೌರ್ಯ ಮೆರೆಯಲಾಗುತ್ತದೆ ಮತ್ತು ಆ ನೋವನ್ನು ಅಪಹಾಸ್ಯಕ್ಕಾಗಿ ಲೈವ್-ಸ್ಟ್ರೀಮ್ ಮಾಡಲಾಗುತ್ತದೆ.
ಆತಂಕಕಾರಿ ಹಿಂಸಾಚಾರ
ಬಾಂಗ್ಲಾದೇಶದಲ್ಲಿ, ಹಿಂದೂಗಳ ಮೇಲಿನ ಹಿಂಸಾಚಾರವು ಆತಂಕಕಾರಿ ರೀತಿಯಲ್ಲಿ ನಿರಂತರವಾಗಿ ನಡೆಯುತ್ತಿದೆ—ದೇವಾಲಯಗಳ ಧ್ವಂಸ, ಮನೆಗಳ ದಹನ, ಕುಟುಂಬಗಳ ಸ್ಥಳಾಂತರ—ಇವೆಲ್ಲವೂ ಆ ರಾಷ್ಟ್ರವು ಯಾವ ಜಾತ್ಯತೀತ ಭರವಸೆಯ ಮೇಲೆ ಸ್ಥಾಪಿತವಾಯಿತೋ, ಅದನ್ನೇ ಟೊಳ್ಳು ಎಂದು ಸಾಬೀತು ಮಾಡುತ್ತಿವೆ. ಪಾಕಿಸ್ತಾನದಲ್ಲಿ, ಅಸಹಿಷ್ಣುತೆಯು ಸಾಂಸ್ಥಿಕೀಕರಣಗೊಂಡಿದೆ; ಹಜಾರಾ ಶಿಯಾಗಳನ್ನು ಗುರಿಯಾಗಿ ಮಾಡಲಾಗುತ್ತಿದೆ, ಅಹ್ಮದೀಯರನ್ನು ಅಪರಾಧಿಗಳೆಂದು ಪರಿಗಣಿಸಲಾಗುತ್ತಿದೆ ಮತ್ತು ಆನ್‌ಲೈನ್ ಮೂಲಕ ಪ್ರೇರೇಪಿತಗೊಂಡ ಗುಂಪುಗಳು ದೈವನಿಂದನೆಯ ಆರೋಪಗಳನ್ನು ಮರಣದಂಡನೆಯಾಗಿ ಪರಿವರ್ತಿಸುತ್ತಿವೆ.
ಶ್ರೀಲಂಕಾ ಮತ್ತು ಮ್ಯಾನ್ಮಾರ್ ಈ ಹಾದಿಯ ತಾರ್ಕಿಕ ಅಂತ್ಯವನ್ನು ಪ್ರದರ್ಶಿಸುತ್ತಿವೆ. ಅಲ್ಲಿ ಕಿರುಕುಳ ಎನ್ನುವುದು ಕೇವಲ ಅತಿರೇಕವಾಗಿ ಉಳಿದಿಲ್ಲ. ಬದಲಾಗಿ ಅದು ಸರ್ಕಾರದ ನೀತಿಯೇ ಆಗಿಹೋಗಿದೆ.
ಭಾರತದ ಸಮಾಜವು ಅತಿಯಾದ ಬಹುತ್ವದಿಂದ ಕೂಡಿದೆ. ತರ್ಕಶೀಲವಾಗಿದೆ ಮತ್ತು ಸಾಂವಿಧಾನಿಕವಾಗಿ ಹಲವು ಸ್ತರಗಳನ್ನು ಹೊಂದಿದೆ. ಅಸಲಿ ಅಪಾಯ ಅತ್ಯಂತ ಸೂಕ್ಷ್ಮವಾದುದು ಮತ್ತು ದೀರ್ಘಕಾಲ ಉಳಿಯುವಂತಹದು. ಅದು ಕ್ರೌರ್ಯದ ಸಾಮಾನ್ಯೀಕರಣ. ಇದನ್ನು ಸ್ಥಳೀಯವಾಗಿ ಸಮರ್ಥಿಸಿಕೊಳ್ಳಲಾಗುತ್ತದೆ. ಸಾಂಸ್ಕೃತಿಕವಾಗಿ ತರ್ಕಬದ್ಧಗೊಳಿಸಲಾಗಿದೆ. ಡಿಜಿಟಲ್ ಮೂಲಕ ವರ್ಧಿಸಲಾಗಿದೆ ಹಾಗೂ ರಾಜಕೀಯ ರಕ್ಷಾ ಕವಚ ತೊಡಿಸಲಾಗಿದೆ.
ಬಲಿಷ್ಠರ ಮುಷ್ಟಿಯಲ್ಲಿ ಧರ್ಮ-ಸಂಸ್ಕೃತಿ
ಈ ಬದಲಾವಣೆ ಕೇವಲ ದಕ್ಷಿಣ ಏಷ್ಯಾಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರಪಂಚದಾದ್ಯಂತ ಉಗ್ರ ರಾಷ್ಟ್ರೀಯತೆ ಮತ್ತು ಬಲಿಷ್ಠ ವ್ಯಕ್ತಿಗಳ ರಾಜಕಾರಣವು ಧರ್ಮ ಮತ್ತು ಸಂಸ್ಕೃತಿಯನ್ನು ನಿಯಂತ್ರಣದ ಸಾಧನಗಳನ್ನಾಗಿ ಮಾಡಿಕೊಂಡಿವೆ. ಇಲ್ಲಿ ನಂಬಿಕೆ ಎನ್ನುವುದು ಕೇವಲ ವಿಧೇಯತೆಗೆ ಮಾತ್ರ ಸೀಮಿತವಾಗಿದೆ. ಭಿನ್ನಾಭಿಪ್ರಾಯದ ಸೊಲ್ಲೆತ್ತಿದರೆ ಅದಕ್ಕೆ ದೇಶದ್ರೋಹದ ಹಣೆಪಟ್ಟಿ ಕಟ್ಟಲಾಗುತ್ತದೆ.
ಇಂತಹ ಸಂದರ್ಭದಲ್ಲಿ ಸ್ಪಷ್ಟ ನುಡಿಗಳನ್ನು ಆಡಬೇಕಾಗಿದೆ. ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುವುದು, ಲೆಕ್ಕಾಚಾರದ ಅಸ್ಪಷ್ಚತೆ ಅಥವಾ ನೈತಿಕತೆಯ ಬೆಲೆಗೆ ಪ್ರತಿಯಾಗಿ ಚುನಾವಣಾ ಲಾಭವನ್ನು ಅಳೆಯುವ ಸಿನಿಕತನಕ್ಕೆ ನಾವು ಬೀಳಬಾರದು. ಸರ್ಕಾರ ಸುಮ್ಮನೇ ನೆವ ಹೇಳುವುದನ್ನು ಬಿಡಬೇಕು. ಕೋಮು ಹಿಂಸಾಚಾರವನ್ನು ಸಾಂವಿಧಾನಿಕ ಮತ್ತು ನಾಗರಿಕ ತುರ್ತುಪರಿಸ್ಥಿತಿ ಎಂದು ಪರಿಗಣಿಸಿ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಲು ಹಿಂಜರಿಯಬಾರದು.
ಹಿಂಸಾಚಾರ ಯಾವುದೇ ರೀತಿಯದ್ದಾಗಿರಲಿ ಅದನ್ನು ರಕ್ಷಸಿಸುವುದು ಅದು ನೀಚತನದ ಪರಮಾವಧಿ ಮತ್ತು ಅಷ್ಟೇ ಅನೈತಿಕವಾದುದು.
ಕಾನೂನಿನ ಆಳ್ವಿಕೆ ಯಾವತ್ತಿದ್ದರೂ ಧಾರ್ಮಿಕ ತಾರತಮ್ಯವಿಲ್ಲದೆ ನಡೆಯಬೇಕು. ದ್ವೇಷದ ಅಪರಾಧಗಳನ್ನು ಶೀಘ್ರ ತನಿಖೆಗೆ ಒಳಪಡಿಸಿ ಸಾರ್ವಜನಿಕವಾಗಿ ಶಿಕ್ಷೆಗೆ ಒಳಪಡಿಸಬೇಕು. ರಾಜಕೀಯ ಹಸ್ತಕ್ಷೇಪದಿಂದ ಪೊಲೀಸರು ಮುಕ್ತವಾಗಿರಬೇಕು. ವಿಳಂಬ ನ್ಯಾಯವು ಅಪರಾಧಗಳಲ್ಲಿ ಭಾಗಿಯಾಗುವುದಕ್ಕೆ ಸಮಾನ ಎಂದು ನ್ಯಾಯಾಲಯಗಳು ಗುರುತಿಸಬೇಕು. ಶಿಕ್ಷಣವು ವೈಚಾರಿಕ ಬಂಧನದಿಂದ ಹೊರಬರಬೇಕು. ಹಾಗೇಯೇ ಯುವಜನರ ನೈಜ ತರಗತಿಗಳು ಡಿಜಿಟಲ್ ಲೋಕದಲ್ಲಿವೆ ಎಂಬುದನ್ನು ಒಪ್ಪಿಕೊಳ್ಳಬೇಕು. ದ್ವೇಷದ ಹಿನ್ನೆಲೆಯಲ್ಲಿ ಕಲಿಸುವ ಇತಿಹಾಸವು ಆಕ್ರೋಶ ಮತ್ತು ಗುಂಪು ಹಿಂಸಾಚಾರಕ್ಕೆ ಕಾರಣವಾಗುತ್ತದೆ.
ಜವಾಬ್ದಾರಿ ಮರೆತ ನಾಗರಿಕ ಸಮಾಜ
ಧಾರ್ಮಿಕ ಸಂಸ್ಥೆಗಳು ತಮ್ಮ ಹೆಸರಿನಲ್ಲಿ ನಡೆಯುವ ಹಿಂಸಾಚಾರವನ್ನು ಸಾರಾಸಗಟಾಗಿ ತಿರಸ್ಕರಿಸಬೇಕು. ಮಾಧ್ಯಮ ಮತ್ತು ನಾಗರಿಕ ಸಮಾಜಕ್ಕೂ ಜವಾಬ್ದಾರಿಗಳಿವೆ ಎಂಬುದನ್ನು ಮರೆಯಬಾರದು. ಆದರೆ ನಿಜವಾದ ಸಮರ ನಡೆಯುತ್ತಿರುವುದು ಡಿಜಿಟಲ್ ವೇದಿಕೆಗಳಲ್ಲಿ—ಎಲ್ಲಿ ಆಕ್ರೋಶವೇ ಲಾಭ ತರುವ ವ್ಯವಹಾರವಾಗಿದೆಯೋ ಮತ್ತು ವಿಭಜನೆಯೇ ಪುರಸ್ಕಾರ ಪಡೆಯುತ್ತದೆಯೋ ಅಲ್ಲಿ.
ಎಲ್ಲಕ್ಕಿಂತ ಮಿಗಿಲಾಗಿ, ದೊಡ್ಡ ಮಟ್ಟದಲ್ಲಿ ಆರ್ಥಿಕ ಅವಕಾಶಗಳನ್ನು ಸೃಷ್ಟಿಸಬೇಕಾಗಿದೆ. ಲಕ್ಷಾಂತರ ಯುವಜನರನ್ನು ನಿರುದ್ಯೋಗಿಗಳನ್ನಾಗಿ ಮಾಡಿ, ಅವರ ಕೈಗೆ ಸ್ಮಾರ್ಟ್‌ಫೋನ್‌ಗಳನ್ನು ನೀಡುವ ಸಮಾಜ ತಮ್ಮ ವಿನಾಶವನ್ನು ತಾವೇ ರೂಪಿಸಿಕೊಳ್ಳುತ್ತಿವೆ. ಘನತೆ ಮಾಯವಾದಾಗ, ಸಂಘಟನೆಗೆ ಧರ್ಮವೇ ಅತ್ಯಂತ ಪರಿಣಾಮಕಾರಿ ಭಾಷೆಯಾಗುತ್ತದೆ.
ಭಾರತವು ಇಂದು ನೈತಿಕ ಸಂಧಿಸ್ಥಳದಲ್ಲಿದೆ. ಅದು ಧರ್ಮವನ್ನು ಭಯ ಮತ್ತು ಅಧಿಕಾರದ ಭಾಷೆಯನ್ನಾಗಿ ಬಳಸಿ, ಡಿಜಿಟಲ್ ಮಾಧ್ಯಮದ ಮೂಲಕ ಚಡಪಡಿಸುತ್ತಿರುವ ಯುವಜನರ ಮೇಲೆ ಪ್ರಯೋಗಿಸುವುದನ್ನು ಮುಂದುವರಿಸಬಹುದು. ಅಥವಾ, ಧರ್ಮವನ್ನು ಸಂಯಮ ಮತ್ತು ಹಂಚಿಕೊಂಡ ಪೌರತ್ವದ ಶಿಸ್ತನ್ನಾಗಿ ಮರುಸ್ಥಾಪಿಸಬಹುದು; ಜೊತೆಗೆ ಯುವಜನರಿಗೆ ಶತ್ರುಗಳನ್ನಲ್ಲ, ಬದಲಾಗಿ ಭರವಸೆಯನ್ನು ನೀಡುವ ಆರ್ಥಿಕ ಮತ್ತು ಶೈಕ್ಷಣಿಕ ಅಡಿಪಾಯವನ್ನು ನಿರ್ಮಿಸಬಹುದು.
ಇತಿಹಾಸವು ನಮ್ಮನ್ನು ನಾವು ಘೋಷಿಸಿಕೊಳ್ಳುವ ನಂಬಿಕೆಯ ಆಧಾರದ ಮೇಲೆ ಅಳೆಯುವುದಿಲ್ಲ, ಬದಲಾಗಿ ನಮ್ಮನ್ನು ನಾವು ಸಹಿಸಿಕೊಳ್ಳುವ ಕ್ರೌರ್ಯದ ಆಧಾರದ ಮೇಲೆ ನಿರ್ಣಯಿಸುತ್ತದೆ ಎಂದು ಮರೆತು ಜೀವಿಸಬಾರದು.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ʼನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.


