
ಪವಿತ್ರ ಹಿಮಾಲಯದತ್ತ ಮಾನವ ಪ್ರವಾಹ: ಮಿತಿಮೀರಿದ ಧಾರ್ಮಿಕ ಪ್ರವಾಸೋದ್ಯಮಕ್ಕೆ ಎಲ್ಲಿದೆ ಅಂಕುಶ?
ಅತ್ಯಂತ ಕಡಿದಾದ ಹಿಮಾಲಯದ ಕಣಿವೆಯಲ್ಲಿ ಪ್ರವಾಸಿಗರು ಪ್ರವಾಹೋಪಾದಿಯಲ್ಲಿ ಮುನ್ನುಗ್ಗುವ ಹೊತ್ತಿನಲ್ಲೇ ಮೇಘಸ್ಫೋಟಗಳು ಸಂಭವಿಸಿದರೆ ಉಂಟಾಗುವ ಪರಿಣಾಮಗಳನ್ನು ಊಹಿಸಿಕೊಳ್ಳುವುದೂ ಕಷ್ಟ.
ಭಾರತದಲ್ಲಿ ದೇವತೆಗಳ ಆವಾಸ ಸ್ಥಾನವೆಂದು ಅನಾದಿ ಕಾಲದಿಂದಲೂ ನಂಬಲಾಗಿರುವ ಹಿಮಾಲಯವು ಈಗ ಅಪಾಯಕಾರಿ ತಿರುವಿನಲ್ಲಿದೆ. ಭಕ್ತಿಯ ಅಭಿವ್ಯಕ್ತಿಯಾಗಿ ಶತಮಾನಗಳಷ್ಟು ಹಿಂದಿನಿಂದ ಗುರುತಿಸಿಕೊಂಡು ಬಂದಿರುವ ತೀರ್ಥಯಾತ್ರೆಯು ಈಗ ದುರ್ಬಲ ಪರಿಸರ, ಪ್ರಾಕೃತಿಕ ಅಸಮತೋಲನ ಹಾಗೂ ಹವಾಮಾನ ಬದಲಾವಣೆಯ ತೀವ್ರತರದ ಪರಿಣಾಮಗಳಿಂದಾಗಿ ಅವಸಾನದ ಹಾದಿಯಲ್ಲಿದೆ.
ಭೂಕುಸಿತ, ಮೇಘಸ್ಪೋಟ, ಪ್ರವಾಹದಂತಹ ಪ್ರಕೃತಿಕ ವಿಕೋಪಗಳ ನಡುವೆ ಅತ್ಯಂತ ಕಡಿದಾದ ಕಣಿವೆಗಳ ಮೂಲಕ ಪ್ರಯಾಣಿಸುವುದು ನಿಜಕ್ಕೂ ಸವಾಲಿನ ಕೆಲಸವಾಗಿದೆ, ಮಾತ್ರವಲ್ಲದೆ ದುರಂತವನ್ನೇ ಮೈಮೇಲೆ ಎಳೆದುಕೊಂಡಂತೆ.
ಯಾವ ನಿಯಂತ್ರಣಕ್ಕೂ ಸಿಗದ ಪ್ರವಾಸೋದ್ಯಮ, ಭೂವೈಜ್ಞಾನಿಕವಾಗಿ ಅಪಾಯಕಾರಿಯಾದ ಅಭಿವೃದ್ಧಿ ಮತ್ತು ಪ್ರತಿದಿನವೂ ತೀವ್ರಗೊಳ್ಳುತ್ತಿರುವ ಹವಾಮಾನ ವೈಪರೀತ್ಯಗಳು… ಇವೆಲ್ಲ ಕಾರಣಗಳಿಂದಾಗಿ ಇದು ಇಂದು ಕೇವಲ ಒಂದು ಪರಿಸರದ ಕಾಳಜಿಯಾಗಿ ಮಾತ್ರ ಉಳಿದಿಲ್ಲ, ಬದಲಾಗಿ ಪವಿತ್ರ ಭೂದೃಶ್ಯಗಳು ಹಾಗೂ ಅವುಗಳ ಉದ್ದಕ್ಕೂ ಸಾಗುವ ಪ್ರಯಾಣಿಕರ ಜೀವಗಳಿಗೆ ಗಂಡಾಂತರವನ್ನು ತಂದೊಡ್ಡಿ ಇದೊಂದು ಗಂಭೀರ ಮಾನವೀಯ ಬಿಕ್ಕಟ್ಟಾಗಿ ಪರಿಣಮಿಸಿದೆ ಎಂದರೆ ಅಚ್ಚರಿಯಿಲ್ಲ.
ಪ್ರವಾಸಿಗರ ಸಂಖ್ಯೆ ಹತ್ತು ಪಟ್ಟು ಅಧಿಕ
2012ರ ಆಜೂಬಾಜಿನಲ್ಲಿ ಉತ್ತರಾಖಂಡದ ಚಾರ್ ಧಾಮ್ ಯಾತ್ರೆಯ ಯಾತ್ರಿಕರ ಸಂಖ್ಯೆ ನಾಲ್ಕೂವರೆ ಲಕ್ಷವಿತ್ತು. ಆದರೆ ಅದೀಗ 2023ರ ಹೊತ್ತಿಗೆ ಭರೋಬ್ಬರಿ ಐವತ್ತು ಲಕ್ಷಕ್ಕೆ ಏರಿಕೆಯಾಗಿದೆ. ಅಂದರೆ ಕೇವಲ ಒಂದೇ ಒಂದು ದಶಕದಲ್ಲಿ ಹೆಚ್ಚಾಗಿರುವ ಪ್ರವಾಸಿಗರ ಸಂಖ್ಯೆ ಹತ್ತು ಪಟ್ಟು. ದುರ್ಬಲವಾಗಿರುವ ಪರ್ವತ ಪ್ರದೇಶಗಳಿಗೆ ಹರಿದು ಬರುತ್ತಿರುವ ಮಾನವ ಪ್ರವಾಹವು ಹಿಂದೆಂದೂ ಇಲ್ಲದಷ್ಟು ಹೆಚ್ಚಾಗಿದೆ.
ಇಂತಹ ‘ಮಾನವ ಪ್ರವಾಹ’ವನ್ನು ಇಲ್ಲಿನ ಪ್ರಕೃತಿ ಸಹಿಸಿಕೊಳ್ಳಬಲ್ಲುದೆ? ಭಾರತದ ಹಿಮಾಲಯ ಪ್ರದೇಶವು ಧಾರ್ಮಿಕ ಪ್ರವಾಸೋದ್ಯಮದ ಬಹುಮುಖ್ಯ ತಾಣವಾಗಿದೆ. ಇದು ವರ್ಷದಿಂದ ವರ್ಷಕ್ಕೆ ಶೇ.15ರಿಂದ 20ರಷ್ಟು ಬೆಳವಣಿಗೆ ಕಾಣುತ್ತ ಬಂದಿದೆ ಎಂಬುದು ನೀತಿ ಆಯೋಗದ ಅಂದಾಜು. ಈ ಅಂಕಿ-ಅಂಶವು ಯಾವುದೇ ಪರಿಸರದ ಮೇಲೆ ಸಹಿಸಲಾರದಷ್ಟು ಹೊರೆಯಾಗಿದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ.
ಅವ್ಯಾಹತವಾಗಿ ಹರಿದುಬರುತ್ತಿರುವ ಈ ಮಾನವ ಪ್ರವಾಹಕ್ಕೆ ವಸತಿ ವ್ಯವಸ್ಥೆಗಳನ್ನು ಮಾಡಲು ಹುಚ್ಚುಗಟ್ಟುವ ರೀತಿಯಲ್ಲಿ ಮೂಲಭೂತ ಸೌಕರ್ಯಗಳ ವ್ಯವಸ್ಥೆಗಳನ್ನು ಮಾಡಲಾಗಿದೆ. ಇದರಿಂದಾಗಿ ಭೂವೈಜ್ಞಾನಿಕ ವಾಸ್ತವತೆಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಇಂದು ಹಿಮಾಲಯ ಶಿಖರದಲ್ಲಿನ ಬಿಕ್ಕಟ್ಟು ಕೇವಲ ತಾಪಮಾನದ ಹೆಚ್ಚಳ, ತೇವಾಂಶದಿಂದ ಕೂಡಿದ ವಾತಾವರಣಕ್ಕೆ ಮಾತ್ರ ಸೀಮಿತವಾಗಿಲ್ಲ. ಕಡಿದಾದ ಇಳಿಜಾರುಗಳಲ್ಲಿ, ಕಣಿವೆ ಮಾರ್ಗಗಳಲ್ಲಿ, ನದಿ ಪಾತ್ರಗಳಲ್ಲಿ ನಾವು ಹೇಗೆ ರಸ್ತೆಗಳನ್ನು ನಿರ್ಮಿಸಿದ್ದೇವೆ, ಹೋಟೆಲ್ ಮತ್ತು ಧರ್ಮಶಾಲೆಗಳನ್ನು ತೆರೆದಿದ್ದೇವೆ, ಯಾತ್ರಾರ್ಥಿಗಳ ಪ್ರವಾಹವನ್ನು ಹೇಗೆ ಅತಿ ಸಣ್ಣ ದಾರಿಗಳಲ್ಲಿ ಹೇಗೆ ಕಳುಹಿಸುತ್ತಿದ್ದೇವೆ ಎಂಬುದರ ಮೇಲೆ ಅವಲಂಬಿಸಿದೆ.
ಭೂವೈಜ್ಞಾನಿಕ ವಿವೇಕಕ್ಕೆ ವ್ಯತಿರಿಕ್ತ
ಅಸ್ಥಿರವಾದ ಭೂಪ್ರದೇಶದಲ್ಲಿ ರಸ್ತೆ ಅಗಲೀಕರಣ ಯೋಜನೆಗಳು ಪರಿಸ್ಥಿತಿಯನ್ನು ಮತ್ತಷ್ಟು ನಾಚೂಕಾಗಿ ಮಾಡುತ್ತದೆ. ತೀರಾ ಕಡಿದಾದ ಇಳಿಜಾರು ಪ್ರದೇಶಗಳು ಮತ್ತು ನದಿಪಾತ್ರಗಳ ಮೇಲೆ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳುವುದು ಭೂವೈಜ್ಞಾನಿಕ ವಿವೇಕಕ್ಕೆ ವ್ಯತಿರಿಕ್ತವಾದುದು.
ಇಂತಹ ನಿರ್ಮಾಣದ ಬಳಿಕ ಕುಂಭದ್ರೋಣ ಮಳೆ ಸುರಿಯುತ್ತದೆ ಅಥವಾ ಹಿಮ ಕರಗುವಿಕೆಗೆ ಯಾವ ಇಳಿಜಾರೂ ಉಳಿಯುವುದಿಲ್ಲ. ಇದರಿಂದ ನದಿಯ ತುಂಬ ಅವಶೇಷಗಳು ತುಂಬಿಕೊಳ್ಳುತ್ತವೆ, ಹಠಾತ್ ಸಂಭವಿಸುವ ಪ್ರವಾಹಗಳು ವಸಾಹತುಗಳನ್ನು ಕೊಚ್ಚಿಕೊಂಡೊಯ್ಯುತ್ತವೆ. ಶಿಬಿರಗಳನ್ನು ಆಕ್ರಮಿಸುತ್ತವೆ… ಇವೆಲ್ಲವೂ ಪ್ರಕೃತಿಯ ಕೃತ್ಯಗಳೆಂದು ನಾವು ದೂರುವ ಹಾಗಿಲ್ಲ. ಇದಕ್ಕೆ ಮನುಷ್ಯರೂ ಅಷ್ಟೇ ಜವಾಬ್ದಾರರು.
ಇದಕ್ಕೆ ಇನ್ನಷ್ಟು ಪ್ರಹಾರ ಮಾಡಿರುವುದು ಹವಾಮಾನ ಬದಲಾವಣೆ. ಕಳೆದ ಕೆಲವು ದಶಕಗಳ ಅವಧಿಯಲ್ಲಿ ಪಶ್ಚಿಮ ಹಿಮಾಲಯದ ಭಾಗಗಳಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಹೆಚ್ಚಿದೆ ಎನ್ನುತ್ತದೆ ಹವಾಮಾನ ಇಲಾಖೆಯ ಅಂಕಿಅಂಶಗಳು. ನಿರ್ದಿಷ್ಟ ಸ್ಥಳಗಳಿಗೆ ಸೀಮಿತವಾದ ಈ ಅತಿವೃಷ್ಟಿ ಅರಣ್ಯನಾಶ, ನಿರ್ಮಾಣ ಕಾರ್ಯ, ಮುಚ್ಚಿಹೋಗಿರುವ ನೈಸರ್ಗಿಕ ಜಲಮಾರ್ಗಗಳು ನೀಡಿರುವ ಕೊಡುಗೆ. ಕಿಕ್ಕಿರಿದ ಜನಪ್ರವಾಹ ಮತ್ತು ಮೂಲಸೌಕರ್ಯಗಳ ನಿರ್ಮಾಣ ಇಡೀ ಕಣಿವೆಯನ್ನು ವಿನಾಶಕ್ಕೆ ಸಿಲುಕುವಂತೆ ಮಾಡಿದೆ.
2013ರಲ್ಲಿ ಸಂಭವಿಸಿದ ಕೇದಾರನಾಥ ದುರಂತ, 2021ರಲ್ಲಿ ಉಂಟಾದ ಚಮೋಲಿಯ ಋಷಿಗಂಗಾ ಪ್ರವಾಹ, 2022ರ ಅಮರನಾಥ ಮೇಘಸ್ಫೋಟ… ಹೀಗೆ ಸಾಲು ಸಾಲು ದುರಂತಗಳು ಸಂಭವಿಸಿರುವುದಕ್ಕೆ ಈ ಪ್ರಸ್ತಾಪ ಮಾಡಿದ ಅಂಶಗಳೇ ಕಾರಣ. ಇಷ್ಟು ಮಾತ್ರವಲ್ಲದೆ ಪ್ರತಿ ಋತುವಿನಲ್ಲೂ ಸಂಭವಿಸುವ ಭೂಕುಸಿತಗಳು ಯಾತ್ರಾ ಮಾರ್ಗಗಳನ್ನು ಕಡಿದು ಹಾಕುತ್ತಲೇ ಇವೆ.
ಪ್ಲಾಸ್ಟಿಕ್ ತ್ಯಾಜ್ಯದಿಂದ ತುಂಬಿದ ಗಂಗೋತ್ರಿ
ಇಲ್ಲಿ ಪ್ರಸ್ತಾಪ ಮಾಡಿದ ಪ್ರತಿಯೊಂದು ಘಟನೆಯೂ ಅತಿಯಾದ ಮಾನವ ಪ್ರವಾಹ, ಅಸ್ಥಿರಗೊಳಿಸುವ ಅಭಿವೃದ್ಧಿ ಮತ್ತು ಹವಾಮಾನ ವೈಪರೀತ್ಯಗಳ ಮಾರಕ ಸಂಯೋಜನೆಯ ಫಲ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.
ಪರಿಸರದ ಮೇಲೆ ಉಂಟಾಗುತ್ತಿರುವ ಪರಿಣಾಮ ಅಂತಿಂಥಹುದಲ್ಲ. ಅಧ್ಯಯನಗಳ ಪ್ರಕಾರ ಗಂಗೋತ್ರಿಯಂತಹ ಪ್ರಮುಖ ಯಾತ್ರಾಸ್ಥಳದಲ್ಲಿ ಪ್ರತಿದಿನ ಉತ್ಪಾದನೆಯಾಗುವ ಪ್ಲಾಸ್ಟಿಕ್ ತ್ಯಾಜ್ಯದ ಪ್ರಮಾಣವೇ 50 ಟನ್ ಎಂದರೆ ನಂಬಲು ಸಾಧ್ಯವಿಲ್ಲ. ಇದು ನೈಸರ್ಗಿಕವಾದ ಜಲಮಾರ್ಗಗಳ ಕತ್ತು ಹಿಸುಕುತ್ತಿದೆ.
ಕೇದಾರನಾಥ ಪ್ರದೇಶದಲ್ಲಿ ಶೇ.65ರಷ್ಟು ನೈಸರ್ಗಿಕ ಬುಗ್ಗೆಗಳು ಬತ್ತಿ ಹೋಗಿವೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಇದಕ್ಕೆಲ್ಲ ಕಾರಣವಾದರೂ ಏನು? ಹಿಮಾಲಯಕ್ಕೆ ಪ್ರವಾಹೋಪಾದಿಯಲ್ಲಿ ಬರುವ ಪ್ರವಾಸಿಗರ ಬೇಡಿಕೆಗೆ ತಕ್ಕಂತೆ ಹೆಚ್ಚುವರಿ ನೀರು ಪೂರೈಕೆ ಮಾಡಿರುವುದು ಮಮತ್ತು ಜಲ ಮರುಪೂರಣ ವಲಯಗಳಿಗೆ ಹಾನಿಯಾಗಿರುವುದೇ ನೇರ ಕಾರಣ.
ಹಾಗಾಗಿ ಹಿಮಾಲಯದಲ್ಲಿ ಅತಿಯಾದ ಧಾರ್ಮಿಕ ಪ್ರವಾಸೋದ್ಯಮದ ವಿಚಾರಕ್ಕೆ ಇರುವ ಟೀಕೆಗಳು ನಂಬಿಕೆ ಮತ್ತು ಪ್ರವೇಶಕ್ಕೆ ಸಂಬಂಧಿಸಿದ್ದಲ್ಲ. ಬದಲಾಗಿ ಅಪಾಯದ ಲೆಕ್ಕಾಚಾರಕ್ಕೆ ಸಂಬಂಧಿಸಿದ್ದು. ಪ್ರತಿ ದಿನ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರನ್ನು ಕಡಿದಾದ ಮಾರ್ಗಗಳಲ್ಲಿ ಕಳುಹಿಸುತ್ತ ಹೋದಾಗ ಸಂಭವಿಸುವ ಮೇಘಸ್ಫೋಟ ಮತ್ತು ಭೂಕುಸಿತಗಳು ಇಡೀ ವ್ಯವಸ್ಥೆಯನ್ನು ವಿಪತ್ತಿಗೆ ಸಿಲುಕುವಂತೆ ಮಾಡುತ್ತದೆ.
ಯಾತ್ರಿಗಳ ನಿಯಂತ್ರಣ ಸುಲಭವಲ್ಲ
ಒಟ್ಟಾರೆ ಹಿಮಾಲಯದ ಧಾರಣ ಸಾಮರ್ಥ್ಯ ಮೀರಿದೆ ಎಂಬುದು ಇದೆಲ್ಲದರಿಂದ ಸ್ಪಷ್ಟವಾಗುತ್ತದೆ. ಪವಿತ್ರ ದೇಗುಲಗಳನ್ನು ರಕ್ಷಿಸಲು ಮತ್ತು ಪದೇ ಪದೇ ಸಂಭವಿಸುವ ವಿಪತ್ತುಗಳನ್ನು ತಪ್ಪಿಸಲು ಯಾತ್ರಿಗಳ ಸಂಖ್ಯೆಯನ್ನು ನಿಯಂತ್ರಿಸಬೇಕಾಗಿದೆ. ಆದರೆ ಇದು ಹೇಳಿದಷ್ಟು ಸುಲಭವಲ್ಲ.
ಇಂತಹ ಯಾತ್ರೆಗಳನ್ನು ಪ್ರದರ್ಶನವನ್ನಾಗಿ ಮಾಡುವ, ಅದಕ್ಕಾಗಿ ಯಾತ್ರಾ ಮಾರ್ಗಗಳನ್ನು ನಿರ್ಮಿಸುವ ಮತ್ತು ವರ್ಷವಿಡೀ ಯಾತ್ರಾ ಕ್ಯಾಲೆಂಡರ್ ಗಳನ್ನು ತೆರೆದಿಡುವ ಈಗಿನ ರಾಜಕೀಯ ಅರ್ಥ ವ್ಯವಸ್ಥೆಯಲ್ಲಿ ಯಾತ್ರಿಗಳ ಸಂಖ್ಯೆಯ ಮೇಲೆ ನಿರ್ಬಂಧ ವಿಧಿಸಲು ಸಾಧ್ಯವೇ?
ನಮ್ಮ ರಾಜಕೀಯ ವ್ಯವಸ್ಥೆಯ ಸೈದ್ಧಾಂತಿಕ ಬದ್ಧತೆಯೇ ಧಾರ್ಮಿಕ ಪ್ರವೇಶಕ್ಕೆ ಆದ್ಯತೆ ನೀಡುತ್ತದೆ. ಹಾಗಾಗಿ ಪ್ರವಾಸಿಗರ ಸಂಖ್ಯೆಯ ಮೇಲೆ ನಿರ್ಬಂಧ ವಿಧಿಸುವುದು ಆಗದ ಕೆಲಸ. ಇಂತಹ ಧಾರ್ಮಿಕ ಪ್ರವಾಸೋದ್ಯಮವನ್ನು ಆಡಳಿತ ವ್ಯವಸ್ಥೆಯು ಸಾಂಸ್ಕೃತಿಕ ಹೆಗ್ಗುರುತು ಮತ್ತು ಆರ್ಥಿಕ ಅಭಿವೃದ್ಧಿಯ ಸಂಕೇತವಾಗಿ ನೋಡುತ್ತದೆ. ಹಾಗಾಗಿಯೇ ಹೆಚ್ಚುತ್ತಲೇ ಇರುವ ಪ್ರವಾಸಿಗರ ಸಂಖ್ಯೆಗೆ ತಕ್ಕುನಾಗಿ ಮೂಲ ಸೌಕರ್ಯಗಳನ್ನು ವಿಸ್ತರಿಸಲು ಇನ್ನಷ್ಟು ಪ್ರಭಾವಶಾಲಿಯಾದ ಉತ್ತೇಜನ ನೀಡಲು ಮುಂದಾಗುತ್ತದೆ.
ಭಾರತದ ಧಾರ್ಮಿಕ ಪ್ರವಾಸೋದ್ಯಮವು 2028ರ ಹೊತ್ತಿಗೆ ಸುಮಾರು 59 ಶತಕೋಟಿ ಡಾಲರ್ ತಲುಪುತ್ತದೆ ಎಂದು ಅಂದಾಜು ಮಾಡಲಾಗಿದೆ. ಆದರೆ ಆರ್ಥಿಕ ಪ್ರೋತ್ಸಾಹಗಳು ಪರಿಸರ ಸಮತೋಲನದ ಜೊತೆಗೆ ಹೊಂದಾಣಿಕೆಯಾಗುತ್ತಿಲ್ಲ. ಸರ್ಕಾರದ ಅಭಿವೃದ್ಧಿ ಮಾದರಿಯು ಪರಿಸರ ರಕ್ಷಣೆಗಿಂತ ಧಾರ್ಮಿಕ ಮೂಲಸೌಕರ್ಯಗಳ ವಿಸ್ತರಣೆಗಷ್ಟೇ ಆದ್ಯತೆ ನೀಡುತ್ತಿದೆ. ಹಾಗಾಗಿ ವೈಜ್ಞಾನಿಕವಾಗಿ ಎಚ್ಚರಿಕೆಯನ್ನು ನೀಡುತ್ತಿದ್ದರೂ ಹಿಮಾಲಯಕ್ಕೆ ಭೇಟಿ ನೀಡುವವರ ಸಂಖ್ಯೆಯನ್ನು ನಿಯಂತ್ರಿಸುವುದು ಕಷ್ಟದ ಕೆಲಸವಾಗಿದೆ.
ರಾಜಕೀಯ ಲಾಭವೇ ಹೆಚ್ಚು
ಸರ್ಕಾರದ ಧಾರ್ಮಿಕ ರಾಷ್ಟ್ರೀಯತೆಯ ಹಿನ್ನೆಲೆಯಲ್ಲಿ ಪವಿತ್ರ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆಯನ್ನು ನಿರ್ಬಂಧಿಸುವುದರಿಂದ ಆಗುವ ಪರಿಸರದ ಲಾಭಕ್ಕಿಂತ ರಾಜಕೀಯ ಲಾಭವೇ ಹೆಚ್ಚಾಗಿದ್ದರಿಂದ ಅಂತಹ ಕೂಗಿಗೆ ಯಾವುದೇ ಮಾನ್ಯತೆ ದೊರೆಯುವ ಸಾಧ್ಯತೆ ಕಡಿಮೆ.
ಈಗಿನ ವಿದ್ಯಮಾನವೇ ಮುಂದುವರಿಯುತ್ತ ಹೋದರೆ ಮತ್ತೆ ಮತ್ತೆ ಸಂಭವಿಸುವ ದುರಂತಗಳಷ್ಟೇ ನಮಗೆ ದೊರಕುವ ಫಲಿತಾಂಶವಾಗಬಹುದು. ಯಾತ್ರಾರ್ಥಿಗಳ ಸಂಖ್ಯೆ ಪ್ರತಿ ವರ್ಷ ಶೇ.7ರಿಂದ 10ರಷ್ಟು ಹೆಚ್ಚಾಗುತ್ತಿದೆ. ಮೂಲಸೌಕರ್ಯಗಳಿಗೆ ಪರಿಸರ ಸಂರಕ್ಷಣೆಯ ಕವಚಗಳಿಲ್ಲ. ಆದ್ದರಿಂದ ಹವಾಮಾನ ವೈಪರೀತ್ಯವೂ ಮಿತಿಮೀರುತ್ತಿದೆ.
ಮುಂದಿನ 10 ವರ್ಷಗಳ ಅವಧಿಯಲ್ಲಿ ಕೇವಲ ಚಾರ್ ಧಾಮ್ ಯಾತ್ರೆಗಾಗಿ ವಾರ್ಷಿಕವಾಗಿ ಒಂದು ಕೋಟಿಗೂ ಹೆಚ್ಚು ಯಾತ್ರಾರ್ಥಿಗಳು ಭೇಟಿ ನೀಡುವ ಸಾಧ್ಯತೆಯಿದೆ. ಇದಕ್ಕಾಗಿ ನಿರ್ಮಾಣ ಮತ್ತು ರಸ್ತೆ ಅಗಲೀಕರಣ ಕಾಮಗಾರಿಗಳು ತ್ವರಿತಗೊಳ್ಳುತ್ತವೆ. ಕಣಿವೆಗಳು ತ್ಯಾಜ್ಯ ಮತ್ತು ಅನಧಿಕೃತ ಕಟ್ಟಡಗಳಿಂದ ತುಂಬುತ್ತವೆ. ಹವಾಮಾನ ವೈಪರೀತ್ಯ ತೀವ್ರಗೊಳ್ಳುತ್ತದೆ. ಅದರ ಜೊತೆ ಜೊತೆಗೇ ಈ ಜನಸಂದಣಿಯೂ ಸೇರಿ, ಅಭೂತಪೂರ್ವ ಪ್ರಮಾಣದ, ಮಾರಕ ಭೂಕುಸಿತ ಹಾಗೂ ಹಠಾತ್ ಪ್ರವಾಹಗಳಿಗೆ ದಾರಿಯಾಗುತ್ತದೆ.
ಅಸ್ಥಿರ ಭೂಪ್ರದೇಶದಲ್ಲಿ ನಿರಂತರ ಪುನರ್ನಿರ್ಮಾಣಗೊಳ್ಳುವ ಮೂಲಸೌಕರ್ಯಗಳು ಹಾನಿಯನ್ನು ಇನ್ನಷ್ಟು ಹೆಚ್ಚಿಸುವುದು ನಿಶ್ಚಿತ. ನೈಸರ್ಗಿಕ ಜಲಮೂಲಗಳು ಮಾಯವಾಗುವುದರಿಂದ ಮತ್ತು ನದಿಗಳು ತೀವ್ರವಾಗಿ ಕಲುಷಿತಗೊಳ್ಳುವುದರಿಂದ ನೀರಿನ ಕೊರತೆಯ ತೀವ್ರ ಬಿಕ್ಕಟ್ಟು ಉಂಟಾಗುತ್ತದೆ. ಅಪಾಯ ದುಪ್ಪಟ್ಟಾಗುತ್ತದೆ, ಜನದಟ್ಟಣೆ ಮತ್ತು ಪರಿಸರ ಅವನತಿ ಮುಂದುವರಿಯುತ್ತದೆ. ಕೊನೆಗೆ ಯಾತ್ರೆಯ ಆಧ್ಯಾತ್ಮಿಕ ಸಾರವೂ ಮಾಯವಾಗುತ್ತದೆ.
ನಿರ್ಬಂಧಕ್ಕಿರಲಿ ವೈಜ್ಞಾನಿಕ ಮಾರ್ಗ
ಇದನ್ನು ತಪ್ಪಿಸಲು ಬೇಕಾಗಿರುವುದು ಕೇವಲ ಭಾವನಾತ್ಮಕ ಕಾರಣಗಳಲ್ಲ. ಬದಲಾಗಿ ವೈಜ್ಞಾನಿಕ ಪುರಾವೆ ಮತ್ತು ದಿಟ್ಟ ಆಡಳಿತವನ್ನು ಆಧರಿಸಿದ ಒಂದು ಮೂಲಭೂತ ಬದಲಾವಣೆ ಎಂಬುದನ್ನು ಮರೆಯಬಾರದು.
ಪರಿಸರ ಅವನತಿಯನ್ನು ತಪ್ಪಿಸಲು ರಾಜಕೀಯ ಇಚ್ಛಾಶಕ್ತಿಯನ್ನು ಮೀರಿ ತಕ್ಷಣದ ಮಧ್ಯಪ್ರವೇಶದ ಅಗತ್ಯವಿದೆ. ನಿಯಂತ್ರಣವೇ ಇಲ್ಲದ ನಗರೀಕರಣ, ಜಲವಿದ್ಯುತ್ನ ಅತಿಯಾದ ಅಭಿವೃದ್ಧಿ ಮತ್ತು ಸಂಪನ್ಮೂಲಗಳ ಮಿತಿಮೀರಿದ ಬಳಕೆಯ ಮೇಲೆ ಕಠಿಣ ನಿರ್ಬಂಧ ವಿಧಿಸಬೇಕು ಎಂಬುದನ್ನು ವೈಜ್ಞಾನಿಕ ಶಿಫಾರಸುಗಳು ಒತ್ತಿಹೇಳುತ್ತವೆ. ನಮಗೆ ಬೇಕಾಗಿರುವುದು ಆರ್ಥಿಕ ಸಾಮರ್ಥ್ಯಕ್ಕಿಂತ ಪರಿಸರದ ಸಂರಕ್ಷಣೆ. ಪ್ರವಾಸಿಗರ ಸಂಖ್ಯೆಯ ಮೇಲೆ ಹೇಗೆ ನಿರ್ಬಂಧ ವಿಧಿಸಬೇಕು ಎಂಬುದನ್ನು ವೈಜ್ಞಾನಿಕವಾಗಿ ನಿರ್ಧರಿಸಬೇಕು.
ಭೂವೈಜ್ಞಾನಿಕವಾಗಿ ಅಸ್ಥಿರವೆನ್ನುವ ಭೂಪ್ರದೇಶ ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಕಾಮಗಾರಿಗಳಿಗೆ ಮೂಲಸೌಕರ್ಯ ನಿಷೇಧದ ಮೂಲಕ ತಡೆಯೊಡ್ಡಬೇಕು. ಹಿಮನದಿಯ ಸರೋವರಗಳು ಒಡೆದು ಹರಿಯುವ ಪ್ರವಾಹಗಳು ಮತ್ತು ಭೂಕುಸಿತಗಳಿಂದಾಗುವ ಅಪಾಯವನ್ನು ತಗ್ಗಿಸಲು ಮುಂಚಿತವಾಗಿ ಎಚ್ಚರಿಕೆ ನೀಡುವ ವ್ಯವಸ್ಥೆಗಳನ್ನು ಅಳವಡಿಸಬೇಕು. ಹಿಮಾಲಯದ ಪರಿಸರ ವ್ಯವಸ್ಥೆ ನಮಗೆ ಮಾತ್ರ ಅನ್ವಯಿಸಿರುವುದಲ್ಲ, ಅದರ ವ್ಯಾಪ್ತಿ ಅಂತರರಾಷ್ಟ್ರೀಯ ಮಟ್ಟದ್ದು. ಹಾಗಾಗಿ ಹವಾಮಾನ ಮಾಹಿತಿ ಮತ್ತು ವಿಪತ್ತು ನಿರ್ವಹಣೆಯನ್ನು ಹಂಚಿಕೊಳ್ಳಲು ದೇಶಗಳ ನಡುವೆ ಸಹಕಾರ ಅತ್ಯಗತ್ಯ.
ಹಿಮಾಲಯದ ಸೂಕ್ಷ್ಮ ಸ್ಥಿತಿ ಒಂದು ನ್ಯೂನತೆಯಲ್ಲ, ಬದಲಾಗಿ ಗೌರವಕ್ಕೆ ಅರ್ಹವಾದ ಅದರ ಮೂಲಭೂತ ಗುಣಲಕ್ಷಣ. ಆ ಸಂಬಂಧ ನಮ್ಮ ಮುಂದೆ ಸ್ಪಷ್ಟ ವೈಜ್ಞಾನಿಕ ಪುರಾವೆಗಳಿವೆ. ವಿವೇಕ, ಸಂಯಮ ಮತ್ತು ಪರಿಸರ ಸಮಗ್ರತೆಯ ಬದ್ಧತೆಯೊಂದಿಗೆ ಯಾತ್ರೆಯನ್ನು ನಿರ್ವಹಿಸಬೇಕು. ಇಲ್ಲದೇ ಹೋದರೆ ಸರಿಪಡಿಸಲಾಗದ ಮಹಾ ನಷ್ಟದ ಯುಗಕ್ಕೆ ದೇವರ ಆವಾಸ ಸ್ಥಾನವು ಪತನ ಹೊಂದುವುದನ್ನು ಕಣ್ಣಾರೆ ನೋಡಿ.