
- ಮುಖಪುಟ
- ತಾಜಾ ಸುದ್ದಿತಾಜಾ ಸುದ್ದಿ
- ಕರ್ನಾಟಕಕರ್ನಾಟಕ
- ರಾಷ್ಟ್ರೀಯರಾಷ್ಟ್ರೀಯ
- ವಿಶೇಷ ಲೇಖನವಿಶೇಷ ಲೇಖನ
- ಅಭಿಮತ
- ಮನರಂಜನೆಮನರಂಜನೆ
- ಕ್ರೀಡೆಕ್ರೀಡೆ
- ಉದ್ಯೋಗ ವಾರ್ತೆ
- ವಿಡಿಯೋ

ಹಿಂದುಗಳನ್ನು ಕೆರಳಿಸಿರುವ ಅಯೋಧ್ಯೆ ಪ್ರಕರಣ ಬಿಜೆಪಿ ಮೇಲೆ ಮುಗಿಬೀಳಲು ಇಂಡಿಯಾ ಮೈತ್ರಿಕೂಟಕ್ಕೆ ಅವಕಾಶ ಒದಗಿಸಿದೆ. ಆದರೆ ಮೈತ್ರಿಕೂಟ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಮಾಡಿಕೊಳ್ಳುತ್ತಿದೆ.
ಇಪ್ಪತ್ತಮೂರು ವಿರೋಧ ಪಕ್ಷಗಳನ್ನು ಒಳಗೊಂಡಿರುವ ಇಂಡಿಯಾ ಮೈತ್ರಿಕೂಟವು ಮಂಗಳವಾರ ಜೂನ್ 30ರಂದು ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಜಸ್ಟೀಸ್ ಸೂರ್ಯಕಾಂತ್ ಅವರಿಗೆ ಒಂದು ಪತ್ರ ಬರೆದಿದ್ದು ದೇಶದಲ್ಲಿ ಮತದಾರರ ಪಟ್ಟಿಗಳ ತೀವ್ರ ಪರಿಷ್ಕರಣೆ ವಿಷಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ.
ಭಾರತೀಯ ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ತನ್ನ ಕಬ್ಜಾ ಮಾಡಿಕೊಂಡಿರುವ ಬಿಜೆಪಿ ಮತ್ತು ಆರ್ಎಸ್ಎಸ್ನ ಅಂಗಸಂಸ್ಥೆಗಳ ಸರ್ವಾಧಿಕಾರಿ ಹಿಡಿತದಿಂದ ಮುಕ್ತಿಗಾಣಿಸಲು ಇದು ಅತ್ಯಂತ ಪ್ರಮುಖ ವಿಷಯ ಎಂಬುದು ನಿಸ್ಸಂದೇಹ. ಆದರೆ ವಿರೋಧ ಪಕ್ಷಗಳು ಇಂತಹುದೊಂದು ವಿವಾದವನ್ನು ಕೈಚೆಲ್ಲಿ ಕುಳಿತಿರುವಂತೆ ಕಾಣುತ್ತಿದೆ. ಎಸ್ಐಆರ್ ನೀಡಬಹುದಾದ ರಾಜಕೀಯ ಲಾಭಕ್ಕಿಂತಲೂ ಅಧಿಕ ಲಾಭವನ್ನು ತಂದುಕೊಡುವ ವಿಷಯ ಅವರ ಮುಂದೆ ಸಜ್ಜಾಗಿ ಕುಳಿತಿದ್ದರೂ ತೀವ್ರ ಅಸಡ್ಡೆ ತೋರುತ್ತಿದ್ದಾರೆ.
ಅಯೋಧ್ಯೆ ರಾಮ ಮಂದಿರದಲ್ಲಿ ನಡೆದ ಕಳ್ಳತನ ಪಕ್ಷಾತೀತವಾಗಿ ಬಹುತೇಕ ಎಲ್ಲ ಹಿಂದುಗಳ ಮನಸ್ಸನ್ನು ಕೆರಳಿಸಿದೆ ಎಂಬುದು ನಿರ್ವಿವಾದ. ಇದರಲ್ಲಿ ಮೇಲ್ವರ್ಗೇತರ ಹಿನ್ನೆಲೆಯನ್ನು ಹೊಂದಿರುವ ನವ-ಹಿಂದುತ್ವವಾದಿಗಳೂ ಸೇರಿದ್ದಾರೆ. ಇವೆರೆಲ್ಲ ಆರ್ಎಸ್ಎಸ್ ಪಾಳಯದಲ್ಲಿ ಗುರುತಿಸಿಕೊಂಡವರು. ಅದರಲ್ಲೂ ವಿಶೇಷವಾಗಿ ಮೋದಿ ಯುಗದ ನಂತರ ಹಿಂದುತ್ವದ ಕಡೆಗೆ ಆಕರ್ಷಿತರಾದವರು. ಇಂತಹ ಕಾಲಘಟ್ಟದಲ್ಲಿ ವಿರೋಧ ಪಕ್ಷಗಳು ಅವರಲ್ಲಿರುವ ನಕಾರಾತ್ಮಕ ಭಾವನೆಗಳನ್ನು ಬಳಸಿಕೊಂಡು ಬಿಜೆಪಿಗೆ ತಿರುಗೇಟು ನೀಡುವ ಕೆಲಸವನ್ನು ಕೈಗೆತ್ತಿಕೊಳ್ಳಬೇಕಾಗಿದೆ.
ನೊಂದಿದ್ದಾರೆ ಹಿಂದೂಗಳು
ರಾಮ ಮಂದಿರದಲ್ಲಿ ಮನಸ್ಸಿಗೆ ತೋಚಿದಂತೆ ನಡೆಸಿದ ಲೂಟಿ ಆರ್ಎಸ್ಎಸ್ ಹಿನ್ನೆಲೆಯುಳ್ಳವರೇ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಇದರಿಂದಾಗಿ ಇಂದು ಬಹುತೇಕ ಹಿಂದೂಗಳು ನೊಂದಿದ್ದಾರೆ ಎಂಬುದು ಸತ್ಯ. ಈ ವಿಷಯವು ಈಗ ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ.
ಬಿಜೆಪಿಗೆ ರಾಜಕೀಯ ಲಾಭ ತಂದುಕೊಡಲು ಆರ್ಎಸ್ಎಸ್ ತಮ್ಮ ನಂಬಿಕೆಯನ್ನು ಬಳಸಿಕೊಂಡಿದೆ ಎಂಬುದು ಅವರಿಗೆ ವೇದ್ಯವಾಗಿದೆ. ಜೊತೆಗೆ ತಾವು ತಮ್ಮ ಹೃದಯ ಮಂದಿರದಲ್ಲಿಯೇ ಇಟ್ಟುಕೊಂಡ ಆರಾಧ್ಯ ದೈವದ ದೇವಸ್ಥಾನದಿಂದ ಕೋಟ್ಯಂತರ ರೂಪಾಯಿ ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿರುವುದು ಅವರನ್ನು ಇನ್ನಷ್ಟು ಸಂಕಟಕ್ಕೆ ದೂಡಿದೆ. ಇಂತಹ ವ್ಯವಸ್ಥೆಯ ನೇತೃತ್ವ ವಹಿಸುವ ಮೂಲಕ ತಮಗೆ ತೀವ್ರ ದ್ರೋಹ ಬಗೆದಿದೆ ಎಂಬುದು ಜನರ ಆಕ್ರೋಶ. ಆರ್ಎಸ್ಎಸ್-ಬಿಜೆಪಿ ವ್ಯವಸ್ಥೆಯ ಮೇಲಿದ್ದ ಅವರ ನಂಬಿಕೆಯನ್ನು ಸಂಪೂರ್ಣ ಅಳಿಸಿಹಾಕಿದಂತಾಗಿದೆ.
ನಿಖರವಾಗಿ ಇದೇ ಕಾರಣಕ್ಕಾಗಿ, ವಿರೋಧ ಪಕ್ಷಗಳು ಜನರ ಈ ಭಾವನೆಯನ್ನು ರಾಜಕೀಯವಾಗಿ ಬಳಸಿಕೊಳ್ಳಬೇಕಾಗಿದೆ.
ಆರ್ಎಸ್ಎಸ್-ಬಿಜೆಪಿ ಹಿನ್ನಡೆ
ಆರ್ಎಸ್ಎಸ್-ಬಿಜೆಪಿ ಮೈತ್ರಿಕೂಟವು ಕಳೆದ 12 ವರ್ಷಗಳಲ್ಲಿ ಸಂವಿಧಾನಕ್ಕೆ ಧಕ್ಕೆ ತರುವಂತಹ ಗಂಭೀರ ಕೆಲಸಗಳನ್ನು ಒಟ್ಟಾಗಿ ಮಾಡಿದೆ. ಇವುಗಳಲ್ಲಿ ಹೆಚ್ಚಿನ ವಿಷಯಗಳನ್ನು ವ್ಯಾಪಕವಾಗಿ ಚರ್ಚಿಸಲಾಗಿದೆ, ವಾದಿಸಲಾಗಿದೆ ಮತ್ತು ಅವುಗಳ ವಿರುದ್ಧ ಪ್ರತಿಭಟನೆಗಳೂ ನಡೆದಿವೆ. ಭಾರತೀಯ ರಾಜಕೀಯ ವ್ಯವಸ್ಥೆಯ ಜಾತ್ಯತೀತತೆಯನ್ನು ನಾಶಪಡಿಸಿದ್ದು ಮತ್ತು ಸಮಾಜವಾದಿ ಆದರ್ಶಗಳ ಬದಲಿಗೆ ಆಪ್ತ ಬಂಡವಾಳಶಾಹಿ ಹಾಗೂ ಆಯ್ದ ಕೆಲವೇ ಕೆಲವು ಶ್ರೀಮಂತರ ಏಕಸ್ವಾಮ್ಯದ ವ್ಯವಸ್ಥೆಯನ್ನು ತಂದಿದ್ದು ಇದರಿಂದ ಆಗಿರುವ ಹಾನಿ ಬಹಳ ದೊಡ್ಡದು.
ಆದರೆ, ತೀವ್ರವಾಗಿ ಘಾಸಿಗೊಂಡಿರುವ ಭಾರತದ ಪ್ರಜಾಪ್ರಭುತ್ವದ ಕ್ಷೀಣಿಸುತ್ತಿರುವ ಆರೋಗ್ಯವನ್ನು ಸುಧಾರಿಸುವಲ್ಲಿ ವಿರೋಧ ಪಕ್ಷಗಳ ಅಭಿಯಾನಗಳು ಇದುವರೆಗೆ ಹೆಚ್ಚಿನ ಯಶಸ್ಸನ್ನು ಕಂಡಿಲ್ಲ.
ಆದರೆ ಭ್ರಷ್ಟ, ಅಧಿಕಾರೋನ್ಮಾದ ಹಾಗೂ ನಿರ್ದಯಿ ಆರ್‌ಎಸ್‌ಎಸ್-ಬಿಜೆಪಿಯನ್ನು ಒಡಗೂಡಿದ ವ್ಯವಸ್ಥೆಯು ದೇವಸ್ಥಾನದ ಕಳ್ಳತನದ ಬಿರುಗಾಳಿ ಕಂಗಾಲಾಗುವಂತೆ ಮಾಡಿದೆ. ಇದ್ದಕ್ಕಿದ್ದಂತೆ ಕುಸಿಯುವ ಮರಳಿನಲ್ಲಿ ತನ್ನ ಕಾಲುಗಳು ಸಿಲುಕಿಕೊಂಡಿರುವುದನ್ನು ಅದು ಕಾಣುತ್ತಿದೆ. ಈ ಹಿಂದೆ ಎಂದೂ ಆರ್‌ಎಸ್‌ಎಸ್ ಮತ್ತು ಬಿಜೆಪಿ ಈ ವಿಷಯದಲ್ಲಿ ಇಷ್ಟೊಂದು ಹಿನ್ನಡೆಯನ್ನು ಅನುಭವಿಸಿರಲಿಲ್ಲ. ಈ ಆರೋಪಗಳನ್ನು ಖಂಡಿಸುವ ಅಥವಾ ತಿರಸ್ಕರಿಸುವ ಯಾವುದೇ ಹೇಳಿಕೆಯು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಂದಾಗಲಿ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಲಿ ಬಂದಿಲ್ಲ.
ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಬೇಜವಾಬ್ದಾರಿತನದಿಂದ ತಳ್ಳಿಹಾಕುವ ಅವರ ಸಾಮಾನ್ಯ ಶೈಲಿಗೆ ಇದು ಸಂಪೂರ್ಣ ವಿರುದ್ಧವಾಗಿ ಎದ್ದು ಕಾಣುತ್ತದೆ. ಮೋದಿಯವರ 12 ವರ್ಷಗಳ ಆಡಳಿತದಲ್ಲಿ ಮೊದಲ ಬಾರಿಗೆ, ಸಂಘ ಪರಿವಾರವು ಯಾವುದೇ ಸ್ಪಷ್ಟ ಪ್ರತಿಕ್ರಿಯೆಯನ್ನು ರೂಪಿಸಲು ಸಾಧ್ಯವಾಗದೆ ಸಂಕಷ್ಟದಲ್ಲಿ ತೊಳಲಾಡುತ್ತಿದೆ.
ಅಪರಾಧದ ಪರೋಕ್ಷ ಒಪ್ಪಿಗೆ
ಉತ್ತರ ಪ್ರದೇಶ ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡ (ಎಸ್.ಐ.ಟಿ) ನಡೆಸಿದ ತನಿಖೆಯ ನಂತರ, ದೇವಸ್ಥಾನದ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ಆರ್‌ಎಸ್‌ಎಸ್ನ ಇಬ್ಬರು ಉನ್ನತ ಮುಖಂಡರಾದ ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ರಾಜೀನಾಮೆ ನೀಡಿದ್ದಾರೆ ಹಾಗೂ ಇತರ ಎಂಟು ಜನರನ್ನು ಬಂಧಿಸಲಾಗಿದೆ. ಈ ಎಲ್ಲ ಬೆಳವಣಿಗೆಗಳಿಂದ ಸ್ಪಷ್ಟವಾಗಿ ಹೇಳಬೇಕೆಂದರೆ, ಅಪರಾಧದ ಒಪ್ಪಿಗೆ ಈಗಾಗಲೇ ಸಿಕ್ಕಿಬಿಟ್ಟಿದೆ.
ವಿರೋಧ ಪಕ್ಷಗಳು ಅರ್ಥಮಾಡಿಕೊಳ್ಳಬೇಕಾದ ವಿಷಯವೇನೆಂದರೆ, ಹಿಂದುತ್ವ ಬ್ರಿಗೇಡ್ನ ನಿಜವಾದ ಮುಖವಾಡವನ್ನು ಬಯಲು ಮಾಡಲು ಅಪೂರ್ವ ಅವಕಾಶ ಅವರಿಗೆ ಲಭ್ಯವಾಗಿದೆ. ಇದು ಯುಗದಲ್ಲೊಮ್ಮೆ ಸಿಗುವ ಅಪರೂಪದ ಅವಕಾಶ. ಈ ಪರಿಸ್ಥಿತಿಯನ್ನು ಅವುಗಳು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಬೇಕಾಗಿದೆ. ಕೋಟ್ಯಂತರ ಹಿಂದೂಗಳು ತಮ್ಮ ನಂಬಿಕೆ ಮತ್ತು ಕಷ್ಟಪಟ್ಟು ಗಳಿಸಿದ ಆಸ್ತಿಯನ್ನು ಧಾರೆ ಎರೆದಿದ್ದ ರಾಮ ಮಂದಿರವನ್ನೂ ಬಿಡದೆ, ಸಂಘ ಮತ್ತು ಬಿಜೆಪಿ ಹೇಗೆ ಹಿಂದೂ ಧರ್ಮವನ್ನು ಕಳ್ಳತನ ಮತ್ತು ದರೋಡೆಯ ಸಾಮ್ರಾಜ್ಯವನ್ನು ಸ್ಥಾಪಿಸಲು ಬಳಸಿಕೊಂಡಿವೆ ಎಂಬುದನ್ನು ಜನರ ಮನಸ್ಸಿನಲ್ಲಿ ಬಿತ್ತಲು ಒಂದು ನಿರಂತರ ಅಭಿಯಾನದ ತುರ್ತು ಅಗತ್ಯವಿದೆ.
ಆರ್‌ಎಸ್‌ಎಸ್ ಮತ್ತು ಬಿಜೆಪಿ ಈ ಆರೋಪಗಳಿಗೆ ತಮ್ಮ ಸಾಮಾನ್ಯ ಅಹಂಕಾರದಿಂದ ಪ್ರತಿಕ್ರಿಯಿಸಲು ಸಾಧ್ಯವಾಗುವುದಿಲ್ಲ ಎಂಬ ಸತ್ಯವೇ, ವಿರೋಧ ಪಕ್ಷಗಳಿಗೆ ಅವರ ಮೇಲೆಯೇ ತಿರುಗೇಟು ನೀಡಲು ಅಗತ್ಯವಿರುವ ಪ್ರಬಲ ಅಸ್ತ್ರವನ್ನು ಒದಗಿಸುತ್ತದೆ.
ಸಂಘಕ್ಕೆ ಕಠಿಣ ಪರೀಕ್ಷೆ
ಸಂಘ ಪರಿವಾರದ ವಿವಾದಿತ ಸ್ವಯಂಸೇವಕರಲ್ಲಿ ಒಬ್ಬರಾಗಿದ್ದ ನಾಥೂರಾಮ್ ಗೋಡ್ಸೆಯಿಂದ ಮಹಾತ್ಮಾ ಗಾಂಧಿಯವರ ಹತ್ಯೆಯಾದಾಗ ಆರ್‌ಎಸ್‌ಎಸ್ ತೀವ್ರ ಮುಖಭಂಗಕ್ಕೆ ಒಳಗಾಗಿತ್ತು. ಈಗ ಅದೇ ರೀತಿಯಲ್ಲಿ ರಾಮ ಮಂದಿರದ ಕಳ್ಳತನ ಸಂಘದ ಮೇಲೆ ತೀವ್ರ ಹಾನಿ ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಆಗ ಆರ್‌ಎಸ್‌ಎಸ್ ಯಾವುದೇ ರಾಜಕೀಯ ಅಧಿಕಾರವಿಲ್ಲದ ಅತ್ಯಂತ ದುರ್ಬಲ ಸಂಘಟನೆಯಾಗಿತ್ತು ಎಂಬುದನ್ನು ಈ ಸಂದರ್ಭದಲ್ಲಿ ನೆನಪುಮಾಡಿಕೊಳ್ಳಬೇಕು.
ಆದರೆ ಇಂದು, ಅದು ದೇಶವನ್ನು ಆಳುತ್ತಿದೆ ಮತ್ತು ಹಣ ಹಾಗೂ ತೋಳ್ಬಲದಿಂದ ತುಂಬಿ ತುಳುಕುತ್ತಿದೆ. ಸ್ಪಷ್ಟವಾಗಿ ಹೇಳಬೇಕೆಂದರೆ, ಗಾಂಧೀಜಿಯವರ ಹತ್ಯೆಯಾದಾಗಿನ ಸಮಯಕ್ಕೆ ಹೋಲಿಸಿದರೆ ಇಂದಿನ ಸವಾಲು ಅತ್ಯಂತ ಕಠಿಣವಾಗಿದೆ.
ಆರ್‌ಎಸ್‌ಎಸ್ ಈ ಎತ್ತರಕ್ಕೆ ಬೆಳೆಯಲು ಕಾರಣವಾಗಿದ್ದು ಹಿಂದುತ್ವ. ಅದನ್ನು ಬಳಸಿಕೊಂಡೇ ಭಾರತವನ್ನು ಒಂದು ಅರಾಜಕ ದೇಶವನ್ನಾಗಿ ಮಾಡಲು ಪಣತೊಟ್ಟಿರುವಂತೆ ಕಾಣುವ ಸುಳ್ಳು ಹಾಗೂ ವಂಚನೆಯ ಸಾಮ್ರಾಜ್ಯವನ್ನು ನಿರ್ಮಿಸಿದೆ. ಮನುಸ್ಮೃತಿಯ ಬ್ರಾಹ್ಮಣಶಾಹಿ ಆದರ್ಶಗಳ ಆಧಾರದ ಮೇಲಿನ ಅಸಹ್ಯಕರ 'ಹಿಂದೂ ರಾಷ್ಟ್ರ'ದ ತನ್ನ ಸಂವಿಧಾನ ವಿರೋಧಿ ಕನಸನ್ನು ಸಾಧಿಸುವ ಹಾದಿಯಲ್ಲಿ ಅದು ಈಗಾಗಲೇ ಸಾಕಷ್ಟು ಮುನ್ನಡೆದಿದೆ. ಆದರೆ ರಾಮ ಮಂದಿರದ ಕಳ್ಳತನವು ಅದರ ನಿಜವಾದ ಮುಖವನ್ನು ಬಯಲು ಮಾಡಿದೆ.
ವಿರೋಧ ಪಕ್ಷಗಳು ಈ ವಿಷಯದ ಕುರಿತು ಹಿಂದೂಗಳನ್ನು ಜಾಗೃತಗೊಳಿಸಲು ವಿಫಲವಾದರೆ, ತಟ್ಟೆಯಲ್ಲಿ ಇಟ್ಟು ಸಿಕ್ಕಿರುವಂತಹ ಈ ಸುವರ್ಣಾವಕಾಶವನ್ನು ಕೈಚೆಲ್ಲಿದಂತಾಗುತ್ತದೆ. ಒಂದು ವೇಳೆ ಈ ವಿಷಯವೂ ಸಹಾಯ ಮಾಡದಿದ್ದರೆ, ಮತ್ಯಾವುದೂ ಸಹಾಯ ಮಾಡಲು ಸಾಧ್ಯವಿಲ್ಲ.
ಮತಗಳ್ಳತನಕ್ಕಿಂತಲೂ ದುಷ್ಟ ನಡೆ
ಸದ್ಯಕ್ಕೆ, ವಿರೋಧ ಪಕ್ಷಗಳು ಈ ವಿಷಯವನ್ನು ಬಿಡಿಬಿಡಿಯಾಗಿ (ಅಲ್ಲೊಂದು ಇಲ್ಲೊಂದು ಎಂಬಂತೆ) ಖಂಡಿಸುತ್ತಿರುವಂತೆ ತೋರುತ್ತಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರಿಂದ ಈವರೆಗೆ ಯಾವುದೇ ಹೇಳಿಕೆ ಬಂದಿಲ್ಲ. ಅವರು ಬಹಳ ದಿನಗಳಿಂದ "ಮತಗಳ ಕಳ್ಳತನ" (ವೋಟ್ ಚೋರಿ) ಎಂಬ ವಿಷಯದ ಜಪ ಮಾಡುತ್ತಿದ್ದಾರೆ. ಆದರೆ ಅದರಿಂದ ಹೆಚ್ಚಿನ ಲಾಭವೇನೂ ಆಗಿಲ್ಲ. ಅವರು ಮರೆತಿರುವಂತೆ ಕಾಣುವ ವಿಷಯವೇನೆಂದರೆ, ಈ ಕಳ್ಳತನವು (ಮಂದಿರದ ಕಳ್ಳತನ) "ಮತಗಳ ಕಳ್ಳತನ"ಕ್ಕಿಂತಲೂ ಹೆಚ್ಚಾಗಿ ಜನರ ಮನಸ್ಸನ್ನು ತಟ್ಟುವ ಸಾಮರ್ಥ್ಯವನ್ನು ಹೊಂದಿದೆ.
ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧದ ಕುರಿತು ಭಾರತವು ಮೌನ ವಹಿಸಿರುವುದನ್ನು ಖಂಡಿಸಿ ಲೇಖನವೊಂದನ್ನು ಬರೆದಿದ್ದಾರೆ. ಆದರೆ ಇದು ಬಿಜೆಪಿಗೆ ಯಾವುದೇ ರೀತಿಯಲ್ಲೂ ಧಕ್ಕೆ ತರುವುದಿಲ್ಲ.
ಈ ವಿಷಯದಲ್ಲಿ ಬಿಜೆಪಿಯನ್ನು ಮತ್ತು ಆರ್‌ಎಸ್‌ಎಸ್ ಅನ್ನು ನಿರಂತರವಾಗಿ ಮೂಲೆಗುಂಪು ಮಾಡಲು ಕಾಂಗ್ರೆಸ್ ಪಕ್ಷವು ಇಡೀ ಇಂಡಿಯಾ ಮೈತ್ರಿಕೂಟವನ್ನು ಒಗ್ಗೂಡಿಸಿ ದೇಶಾದ್ಯಂತ ವ್ಯಾಪಕ ಅಭಿಯಾನವನ್ನು ಕೈಗೊಳ್ಳಬೇಕಾದ ಅಗತ್ಯವಿದೆ.
ರಾಮ ಮಂದಿರದ ದೇಣಿಗೆ ಕಳ್ಳತನದ ವಿಷಯವು ಆರ್‌ಎಸ್‌ಎಸ್-ಬಿಜೆಪಿಯ ಅತ್ಯಂತ ದುರ್ಬಲ ಉಸಿರಾಗಿ ಪರಿಣಮಿಸಿದೆ. ಇಡೀ ವಿರೋಧ ಪಕ್ಷಗಳು ಒಟ್ಟಾಗಿ ಸೇರಿ ಆರ್‌ಎಸ್‌ಎಸ್-ಬಿಜೆಪಿಗೆ ಎಲ್ಲಿ ಹೊಡೆದರೆ ತೀವ್ರವಾಗಿ ನೋವಾಗುತ್ತದೆಯೋ ಅಲ್ಲಿಯೇ ಹೊಡೆಯಬೇಕಾಗಿದೆ. ಆರ್‌ಎಸ್‌ಎಸ್ ಮತ್ತು ಬಿಜೆಪಿಗೆ ಅವರದ್ದೇ ಆದ ಹಿಂದುತ್ವದ ಶೈಲಿಯಲ್ಲಿ ತಿರುಗೇಟು ನೀಡುವ ಸಮಯ ಇದೀಗ ಬಂದಿದೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

