
ಪುಟಿನ್-ಟ್ರಂಪ್ ಮುಷ್ಟಿಕಾಳಗದ ನಡುವೆ ಸಿಕ್ಕಿಹಾಕಿಕೊಂಡ ಮೋದಿ
ಕ್ಷಣ ಚಿತ್ಥಂ ಕ್ಷಣ ಪಿತ್ಥಂ ಎನ್ನುವ ಮನಸ್ಥಿತಿಯಲ್ಲಿರುವ ಅಮೆರಿಕ ಅಧ್ಯಕ್ಷರನ್ನು ಎದುರಿಸುವುದಕ್ಕೆ ಬದಲಾಗಿ ಟ್ರಂಪ್ ಅವರನ್ನು ಸಮಾಧಾನಪಡಿಸುವುದೇ ಉತ್ತಮ ಮಾರ್ಗವೆಂದು ಮೋದಿ ಸರ್ಕಾರ ಭಾವಿಸಿದಂತಿದೆ.
ರಷ್ಯಾ-ಉಕ್ರೇನ್ ಕದನವನ್ನು ಕೊನೆಗೊಳಿಸುವ ಉತ್ಸಾಹಕ್ಕೆ ಬಿದ್ದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ನಿಜಕ್ಕೂ ಈ ಸಂಘರ್ಷವನ್ನು ಇನ್ನಷ್ಟು ಸಂಕೀರ್ಣಗೊಳಿಸುವ ಸಾಧ್ಯತೆಗಳೇ ನಿಚ್ಚಳವಾಗಿ ಕಾಣುತ್ತಿದೆ.
“ಒಂದೇ ಒಂದು ದಿನದಲ್ಲಿ ಯುದ್ಧವನ್ನು ಕೊನೆಗೊಳಿಸುತ್ತೇನೆ” ಎಂಬ ಪೌರುಷದ ಮಾತನಾಡಿದ್ದ ಟ್ರಂಪ್ ಈಗ ಬೆದರಿಕೆಯ ತಂತ್ರವನ್ನು ಪ್ರಯೋಗಿಸುತ್ತಿದ್ದು, ಪ್ರತಿಯೊಬ್ಬರೂ ತಮ್ಮ ಆದೇಶಕ್ಕೆ ಬಾಗುವುದಿಲ್ಲ ಎಂಬ ಕಟುವಾಸ್ತವ ಅರಿವಾಗುತ್ತಲೇ ಅವರ ಹತಾಶೆ ಹೆಚ್ಚಾಗುತ್ತ ಸಾಗಿದೆ.
ಈ ಭೀಕರ ಜಿದ್ದಾಜಿದ್ದಿಯ ನಡುವೆ ಸಿಕ್ಕಿಹಾಕಿಕೊಂಡಿರುವುದು ಭಾರತ. ರಷ್ಯಾದ ಜೊತೆಗೆ ವ್ಯಾಪಾರ ಮಾಡದಂತೆ ಫರ್ಮಾನು ಹೊರಡಿಸಿರುವ ಟ್ರಂಪ್, ಅದಕ್ಕೆ ಮಣಿಯದ ಕಾರಣಕ್ಕೆ ಭಾರತದ ಮೇಲೆ ಶೇ.25ರಷ್ಟು ಸುಂಕದ ಪ್ರಹಾರ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೆ ಇನ್ನೆಷ್ಟು ಪ್ರಮಾಣದ ದಂಡ ವಿಧಿಸುತ್ತೇನೆ ಎಂಬುದನ್ನು ಹೇಳಿಲ್ಲ. ಒಂದು ಕಡೆ ಮೊಲದ ಜೊತೆ ಓಟಕ್ಕೆ ಇಳಿದು ಇನ್ನೊಂದು ಕಡೆ ಬೇಟೆಯಾಡುವ ಭಾರತಕ್ಕೆ ಟ್ರಂಪ್ ಅವರ ಈ ನಡವಳಿಕೆ ದೊಡ್ಡ ಅಡ್ಡಿಯಾಗಿದೆ ಮತ್ತು ಮುಖಭಂಗವೂ ಹೌದು.
ಭಾರತವು ರಷ್ಯಾದಿಂದ ಕಚ್ಛಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದೇ ವ್ಲಾಡಿಮಿರ್ ಪುಟಿನ್ ಜೊತೆಗೆ ಸ್ನೇಹಪರತೆಯನ್ನು ಕಾಯ್ದುಕೊಳ್ಳುವ ಮಾರ್ಗವಾಗಿದೆ. ಇದು ಯುರೋಪ್ ನ ನ್ಯಾಟೊ ರಾಷ್ಟ್ರಗಳಿಗೆ ಕಣ್ಣುರಿ ತರಿಸಿದೆ ಎಂಬುದು ದಿಟ. ಎರಡನೇ ಅವಧಿಗೆ ಅಧ್ಯಕ್ಷರಾಗಿ ಬಂದ ಟ್ರಂಪ್ ಅವರಿಗೆ ಉಕ್ರೇನ್ ಜೊತೆಗಿನ ಯುದ್ಧವನ್ನು ಸಾಧ್ಯವಾದಷ್ಟು ಬೇಗ ಕೊನೆಗೊಳಿಸುವ ತಹತಹಿಕೆ ಹೆಚ್ಚಿತು. ಇದರಿಂದ ಅವರು ತಳೆದಿದ್ದು ರಷ್ಯಾ ಪರವಾದ ನಿಲುವು. ಈ ಕಾರಣದಿಂದಾಗಿಯೇ ಭಾರತ ರಷ್ಯಾದೊಂದಿಗಿನ ಸಂಬಂಧದ ವಿಚಾರದಲ್ಲಿ ಕಠಿಣ ನಿರ್ಧಾರ ಕೈಗೊಳ್ಳದಂತೆ ಕಾಪಾಡಿತು.
ಆದರೆ ಈಗ ಟ್ರಂಪ್ ಅವರ ಸ್ನೇಹದ ನಕಲೀ ಮುಖ ಕಳಚಿಬಿದ್ದಿದೆ. ಅವರು ಭಾರತ ಮತ್ತು ರಷ್ಯಾವನ್ನು ‘ಜಡ ಅರ್ಥ ವ್ಯವಸ್ಥೆ’ ಎನ್ನುವ ವಿವಾದಾತ್ಮಕ ಹೇಳಿಕೆಯ ಮೂಲಕ ಎರಡೂ ರಾಷ್ಟ್ರಗಳನ್ನು ಒಂದು ಚೌಕಟ್ಟಿನೊಳಗೆ ತಂದಿದ್ದಾರೆ. ಹಾಗಾಗಿ ಅಸ್ಥಿರಮತಿಯ ಅಮೆರಿಕ ಅಧ್ಯಕ್ಷರನ್ನು ಎದುರಿಸುವುದಕ್ಕೆ ಬದಲಾಗಿ ಟ್ರಂಪ್ ಅವರನ್ನು ಸಮಾಧಾನಪಡಿಸುವುದೇ ಉತ್ತಮ ಮಾರ್ಗವೆಂದು ಮೋದಿ ಸರ್ಕಾರ ಭಾವಿಸಿದಂತಿದೆ.
ರದ್ದಾದ ತೈಲ ಆಮದು ಪರಿಣಾಮ
ರಾಯಿಟರ್ಸ್ ಸುದ್ದಿ ಸಂಸ್ಥೆಯ ವರದಿಗಳನ್ನು ಉಲ್ಲೇಖಿಸುವುದಾದರೆ, ಕಳೆದೊಂದು ವಾರದ ಅವಧಿಯಲ್ಲಿ ಭಾರತದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಸಂಸ್ಥೆಗಳಾದ- ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಮತ್ತು ಮಂಗಳೂರು ರಿಫೈನರಿ ಪೆಟ್ರೊಕೆಮಿಕಲ್ ರಷ್ಯಾದ ಕಚ್ಛಾ ತೈಲವನ್ನು ಖರೀದಿಸಿಲ್ಲ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟ್ರಂಪ್, ಇಂದೊಂದು ಉತ್ತಮ ಹೆಜ್ಜೆ ಎಂದು ವಿಶ್ಲೇಷಿಸಿದ್ದಾರೆ.
“ಇಂತಹ ಇಂಧನ ಖರೀದಿಗಳು ಮಾರುಕಟ್ಟೆಯ ಶಕ್ತಿಗಳು ಹಾಗೂ ರಾಷ್ಟ್ರೀಯ ಹಿತಾಸಕ್ತಿಯ ಆಧಾರದಲ್ಲಿ ಕೈಗೊಂಡಿದ್ದಾಗಿರುತ್ತವೆ” ಎಂದು ಹೇಳುವ ಮೂಲಕ ಈ ಕ್ರಮ ಟ್ರಂಪ್ ಮೇಲಿನ ಭಯದಿಂದ ಕೈಗೊಂಡಿದ್ದಲ್ಲ ಎಂಬುದನ್ನು ತಿಳಿಸುವ ಪ್ರಯತ್ನ ಮಾಡಿದಂತೆ ಕಾಣುತ್ತದೆ.
ಒಂದು ವೇಳೆ ರಷ್ಯಾದಿಂದ ತೈಲ ಆಮದನ್ನು ನಿಲ್ಲಿಸಿರುವ ವರದಿಗಳು ನಿಜವೇ ಆಗಿದ್ದಿದ್ದರೆ ಭಾರತದ ಈ ಕ್ರಮವು ಪುಟಿನ್ ಅವರನ್ನು ಬೇಸರಪಡಿಸದೇ ಇರದು. ಕಳೆದ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಅಮೆರಿಕ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳ ಕಡೆಗೆ ಬದಲಾಗುತ್ತಿರುವ ಭಾರತದ ನಡೆಯನ್ನು ಅನುಮಾನದ ಕಣ್ಣಿನಲ್ಲಿ ನೋಡುತ್ತ ಬಂದಿರುವ ರಷ್ಯಾಕ್ಕೆ ಈಗ ಸ್ಪಷ್ಟ ಪುರಾವೆಯನ್ನು ಸಿಕ್ಕಂತಾಗುತ್ತದೆ. ಜೊತೆಗೆ ಭಾರತದ ವಿರುದ್ಧ ಅದು ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಬಹುದು. ರಷ್ಯಾ-ಉಕ್ರೇನ್ ಯದ್ಧವೇನಾದರೂ ಕೊನೆಗೊಳ್ಳದೇ ಹೋದರೆ ಭಾರತ ತನ್ನ ವಿದೇಶಾಂಗ ನೀತಿಯಲ್ಲಿ ಅಂತಹುದೊಂದು ನಿರ್ಧಾರವನ್ನು ತಡವಾಗಿಯಾದರೂ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ.
2022ರ ಫೆಬ್ರುವರಿ 24ರಂದು ಉಕ್ರೇನ್ ಮೇಲೆ ಮುಗಿಬಿದ್ದ ರಷ್ಯಾ ದಾಳಿಯಿಂದಾಗಿ ಉಂಟಾದ ಯುದ್ಧದ ಸ್ಥಿತಿ ಕೊನೆಗೊಳ್ಳದಂತಾಗಿದೆ. ಈ ದೀರ್ಘಕಾಲದ ಸಂಘರ್ಷ ಉಕ್ರೇನಿನ ನಕ್ಷೆಯನ್ನೇ ಬದಲಿಸಿದೆ. ರಷ್ಯಾದ ಪಡೆಗಳಂತೂ ಪೂರ್ವ ಗಡಿಯ ಉದ್ದಕ್ಕೂ, ಉತ್ತರದಿಂದ ದಕ್ಷಿಣದ ವರೆಗೂ ಇರುವ ವಿಶಾಲ ಭೂಪ್ರದೇಶವನ್ನು ಆಕ್ರಮಿಸಿಕೊಂಡು ಬಿಟ್ಟಿವೆ.
ಕದಲದ ಪುಟಿನ್
ಈ ಕದನ ಕೊನೆಗೊಳ್ಳಬೇಕಾದರೆ ರಷ್ಯಾದ ಪಡೆಗಳು ಯುದ್ಧಪೂರ್ವ ಸ್ಥಿತಿಗೆ ಮರಳಬೇಕು ಮತ್ತು 2014ರಲ್ಲಿ ರಷ್ಯಾ ವಶಪಡಿಸಿಕೊಂಡ ಕ್ರಿಮಿಯಾದಂತಹ ಪ್ರದೇಶಗಳನ್ನು ಮರಳಿ ಕೊಡಬೇಕು ಎಂದು ಉಕ್ರೇನ್ ತಾಕೀತುಮಾಡಿದೆ. ಈಗ ಸ್ವಾಧೀನಪಡಿಸಿಕೊಂಡಿರುವ ಪ್ರದೇಶದಿಂದ ಒಂದಿಂಚೂ ಕದಲುವುದಿಲ್ಲ ಎಂದು ಪುಟಿನ್ ಹೇಳಿದ್ದಾರೆ. ಈ ಪ್ರದೇಶವು ರಷ್ಯಾ ಮತ್ತು ಉಕ್ರೇನ್ ನಡುವಿನ ಬಫರ್ ಝೋನ್. ಅಲ್ಲಿ ಸೈನಿಕರಿರುವುದು ದೇಶದ ಭದ್ರತೆಯ ದೃಷ್ಟಿಯಿಂದ ಎಂಬುದು ಅವರು ಮುಂದಿಡುವ ವಾದ.
ಅಮೆರಿಕ ಮತ್ತು ಇತರ ನ್ಯಾಟೊ ರಾಷ್ಟ್ರಗಳ ನೆರವಿನ ಕಾರಣದಿಂದಾಗಿಯೇ ಉಕ್ರೇನ್ ರಷ್ಯಾ ವಿರುದ್ಧ ಎದೆ ಸೆಟೆದು ನಿಲ್ಲಲು ಮತ್ತು ಅದರ ದಾಳಿಯನ್ನು ದಿಟ್ಟವಾಗಿ ತಡೆಯಲು ಸಾಧ್ಯವಾಗಿದೆ. ಇನ್ನೊಂದು ಅರ್ಥದಲ್ಲಿ ಹೇಳಬೇಕೆಂದರೆ ರಷ್ಯಾ ಸೇನೆ ಎದುರಿಸುತ್ತಿರುವುದು ಕೇವಲ ಉಕ್ರೇನ್ ಪಡೆಯನ್ನು ಮಾತ್ರವಲ್ಲ, ಬದಲಾಗಿ ಅಮೆರಿಕ ನೇತೃತ್ವದ ಮಿತ್ರರಾಷ್ಟ್ರಗಳ ಪಡೆಗಳನ್ನು.
ಪುಟಿನ್ ಜೊತೆಗಿನ ತಮ್ಮ ಹಳೆಯ ಸ್ನೇಹ ಹಾಗೂ ಉಕ್ರೇನ್ ನಂಬಿಕೊಂಡಿರುವ ಅಮೆರಿಕದ ನೆರವಿನ ಹಿನ್ನೆಲೆಯಲ್ಲಿ ಎರಡೂ ಯುದ್ಧ ನಿರತ ರಾಷ್ಟ್ರಗಳು ಕದನ ತೊರೆದು ಬರುವಂತೆ ಮಾಡಲು ಒತ್ತಡ ಹೇರಬಹುದು ಎಂಬುದು ಟ್ರಂಪ್ ಲೆಕ್ಕಾಚಾರವಾಗಿತ್ತು. ಈ ವರ್ಷದ ಫೆಬ್ರುವರಿ ತಿಂಗಳಲ್ಲಿ ಶ್ವೇತಭವನದಲ್ಲಿ ನಡೆದ ಟ್ರಂಪ್ ಅವರ ಸಂಧಾನದ ಪ್ರಯತ್ನಗಳನ್ನು ಇಡೀ ಜಗತ್ತು ಕಣ್ಣು ಬಿಟ್ಟು ನೋಡಿತ್ತು.
ಜಗತ್ತಿನ ಮಾಧ್ಯಮದ ಮುಂದೆ ಟ್ರಂಪ್ ಮತ್ತು ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಅವರ ಬೆದರಿಕೆಯಿಂದ ತತ್ತರಿಸಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನಸ್ಕೀ ಅವರು ಅತ್ಯಂತ ಆಘಾತದಿಂದ ಒಂದು ದುರ್ಬಲವಾದ ಪ್ರತಿಭಟನೆಯನ್ನು ನಡೆಸಿ ಮನೆಗೆ ತೆರಳಿದರು. ಇದಾದ ನಂತರ ಟ್ರಂಪ್ ಉಕ್ರೇನ್ ಗೆ ಮಾಡಬೇಕಾಗಿದ್ದ ಶಸ್ತ್ರಾಸ್ತ್ರಗಳ ಸಾಗಣೆ ಮತ್ತು ಆರ್ಥಿಕ ನೆರವಿಗೆ ಕಡಿವಾಣ ಹಾಕಿದರು.
ಆದರೆ ಜಗತ್ತಿನ ಮುಂದೆ ಉಂಟಾದ ಅವಮಾನದ ಪೆಟ್ಟಿನಿಂದ ಕೆರಳಿ ಕೆಂಡವಾದ ಉಕ್ರೇನ್, ಜೂನ್ ಆರಂಭದಲ್ಲಿ ರಷ್ಯಾ ಗಡಿಯೊಳಗೆ ಬಹುದೂರ ನುಗ್ಗಿ ಪ್ರಮುಖ ಸೇನಾ ನೆಲೆಗಳ ಮೇಲೆ ದಿಟ್ಟವಾದ ದಾಳಿ ನಡೆಸಿದರು. ಅವರು ನಡೆಸಿದ ಸರಣಿ ಡ್ರೋನ್ ದಾಳಿಗೆ ಜಗತ್ತು ಬೆಚ್ಚಿಬೀಳುವಂತೆ ಮಾಡಿತು. ಆಪರೇಷನ್ ಸ್ಪೈಡರ್ ವೆಬ್ ಎಂದು ಕರೆಯಲಾದ ದಾಳಿ ರಷ್ಯಾದ ಹಲವಾರು ಬಾಂಬರ್ ಗಳನ್ನು ಪುಡಿಗಟ್ಟಿತು. ಟರ್ಕಿಯ ಇಸ್ತಾಂಬುಲ್ ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಸಂಬಂಧ ಮಾತುಕತೆ ಜಾರಿಯಲ್ಲಿ ಇರುವಾಗಲೇ ಈ ದಾಳಿ ನಡೆದಿದ್ದೊಂದು ಆಘಾತ.
ಅಂದಿನಿಂದ ಪುಟಿನ್ ಅವರ ಮೃದು ಧೋರಣೆಗಳು ಮರೆಯಾದವು. ಇದಕ್ಕೆ ಬಲವಾದ ಪ್ರತಿಕ್ರಿಯೆ ನೀಡಿದ ರಷ್ಯಾ ಉಕ್ರೇನ್ ನಾದ್ಯಂತ ಅನೇಕ ಗುರಿಗಳ ಮೇಲೆ ವ್ಯಾಪಕ ದಾಳಿ ನಡೆಸಿತು. ಅದಕ್ಕಾಗಿ ವ್ಯಾಪಕ ಶ್ರೇಣಿಯ ಡ್ರೋನ್ ಮತ್ತು ಕ್ಷಿಪಣಿಗಳನ್ನು ಬಳಸಲಾಗಿತ್ತು.
ಬದಲಾದ ಗೆಳೆಯ
ಇಷ್ಟು ದಿನಗಳಾದರೂ ಯುದ್ಧವನ್ನು ಕೊನೆಗೊಳಿಸಲು ಸಾಧ್ಯವಾಗದೇ ಇರುವುದು ಟ್ರಂಪ್ ಅವರ ಹತಾಶೆಗೆ ಕಾರಣವಾಗಿದೆ. ಪುಟಿನ್ ಅವರನ್ನು ಸದಾ ‘ಗೆಳೆಯಾ’ ಎಂದು ಇನ್ನಿಲ್ಲದ ಪ್ರೀತಿ ತೋರಿಸುತ್ತಿದ್ದ ಟ್ರಂಪ್ ಈಗ ಅವರನ್ನು ‘ಅಸಂಬದ್ಧ’ ಎಂದು ಟೀಕಿಸಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಮಾಡಿರುವ ದಾಳಿಯನ್ನು ‘ಅಸಹನೀಯ’ ಎಂದು ಕರೆದಿದ್ದಾರೆ.
ತಮಗೆ ದಕ್ಕಿದ ಅಧಿಕಾರವನ್ನು ಅತಿಯಾಗಿ ಬಳಸಲು ಮುಂದಾಗುವುದು ಅಮೆರಿಕ ಅಧ್ಯಕ್ಷರ ಬಹುದೊಡ್ಡ ತಪ್ಪುಗಳಲ್ಲಿ ಒಂದಾಗಿದೆ. ಶಾಂತಿಯನ್ನು ಮರಳಿ ಸ್ಥಾಪಿಸಬೇಕು ಎನ್ನುವ ಅವರ ಕಳಕಳಿಯನ್ನು ಯಾರೂ ತಪ್ಪಾಗಿ ಭಾವಿಸಲಾರರು. ಆದರೆ ರಾಜತಾಂತ್ರಿಕತೆ ಎಂದು ನಟಿಸುವ ಅವರ ಅತಿಯಾದ ದಬ್ಬಾಳಿಕೆ ಪ್ರವೃತ್ತಿ ಪ್ರತಿಕೂಲ ಪರಿಣಾಮಕ್ಕೆ ದಾರಿ ಮಾಡಿಕೊಟ್ಟಿದೆ.
ಎಲ್ಲಕ್ಕಿಂತ ಮುಖ್ಯವಾಗಿ, ತನ್ನ ಮಿತ್ರ ಎಂದು ಹೇಳಿಕೊಳ್ಳುವ ಪುಟಿನ್ ಅವರ ಮನಸ್ಸನ್ನು ಅರ್ಥಮಾಡಿಕೊಳ್ಳಲು ಅಮೆರಿಕ ಅಧ್ಯಕ್ಷರಿಗೆ ಇನ್ನೂ ಸಾಧ್ಯವಾಗದೇ ಇರುವುದು. ಒಂದು ವೇಳೆ ಈ ಹೊತ್ತಿಗೆ ಯುದ್ಧವನ್ನು ಕೊನೆಗೊಳಿಸಲು ಸಾಧ್ಯವಾಗಿದ್ದರೆ ಅದರ ಸಂಪೂರ್ಣ ಶ್ರೇಯಸ್ಸನ್ನು ತನ್ನದಾಗಿಸಿಕೊಂಡು ಎದೆ ಸೆಟೆದು ನಡೆದುಬಿಡಬಹುದಿತ್ತು ಮತ್ತು ನೋಬೆಲ್ ಪ್ರಶಸ್ತಿಯನ್ನೂ ದಕ್ಕಿಸಿಕೊಳ್ಳಬಹುದಿತ್ತು. ಆದರೆ ಹಿಂದಿನ ಸೋವಿಯತ್ ಒಕ್ಕೂಟದ ಅವಸಾನವನ್ನು ಇನ್ನೂ ಒಪ್ಪಿಕೊಳ್ಳದ ಪುಟಿನ್ ಅವರಂತಹ ರಷ್ಯನ್ನರಿಗೆ ಇಂತಹ ಪರಿಸ್ಥಿತಿಯಿಂದ ರಷ್ಯದ ಮೇಲೆ ರಷ್ಯಾದ ಸಂಪೂರ್ಣ ಪ್ರಾಬಲ್ಯ ಸಾಧಿಸಲು ಅವಕಾಶ ಮಾಡಿಕೊಟ್ಟಂತಾಗುತ್ತಿತ್ತು.
ಕರಾರುವಾಕ್ಕು ಕಾರ್ಯತಂತ್ರ
ಮತ್ತೊಂದು ಅಸ್ತಿತ್ವದ ಯುದ್ಧದಲ್ಲಿ ಅಮೆರಿಕ ಗೆದ್ದು ಬೀಗುವಂತೆ ಮಾಡಲು ಪುಟಿನ್ ಬಿಟ್ಟಾರೆಯೇ? ಸುತಾರಾಂ ಅದು ಸಾಧ್ಯವಿಲ್ಲದ ಮಾತು. ಅಮೆರಿಕ ಮತ್ತು ನ್ಯಾಟೊ ಮಿತ್ರರು ಉಕ್ರೇನನ್ನು ಪಾಶ್ಚಿಮಾತ್ಯ ಮಿಲಿಟರಿ ಮೈತ್ರಿಕೂಟದ ಸದಸ್ಯನನ್ನಾಗಿ ಒಪ್ಪಿಕೊಳ್ಳುವ ಮೂಲಕ ರಷ್ಯಾದ ಮೇಲೆ ತಮ್ಮ ಪ್ರಾಬಲ್ಯ ಸಾಧಿಸುವುದು ಅವರಿಗೆ ಇಷ್ಟವಿಲ್ಲದ ಮಾತು. ಈ ಕಾರಣದಿಂದಾಗಿಯೇ ಅವರು ಉಕ್ರೇನ್ ಮೇಲೆ ಸಮರ ಸಾರಿರುವುದು. ಅದೊಂದು ಕರಾರುವಕ್ಕಾದ ಕಾರ್ಯತಂತ್ರ.
ಟ್ರಂಪ್ ಯುದ್ಧೋತ್ಸಾಹಿಯಾಗಿ, ಶಾಂತಿದೂತನಂತೆ ವರ್ತಿಸುವುದನ್ನು ಬಿಟ್ಟು ಕಠೋರ ನಿಲುವು ತಾಳಿದ್ದಾರೆ ಎನ್ನುವುದರಲ್ಲಿ ಆಶ್ಚರ್ಯವೇನಿಲ್ಲ. ಉಕ್ರೇನ್ ನೊಂದಿಗೆ ಕದನ ವಿರಾಮದ ಒಪ್ಪಂದ ಮಾಡಿಕೊಳ್ಳಲು ಟ್ರಂಪ್ ಜುಲೈ 29ರಂದು ಹತ್ತು ದಿನಗಳ ಗಡುವು ವಿಧಿಸಿದರು. ಇಲ್ಲದೇ ಹೋದರೆ ನಿರ್ಬಂಧ ಮತ್ತು ಸುಂಕಗಳನ್ನು ಹೆಚ್ಚಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರಷ್ಯಾ, ಉಕ್ರೇನ್ ನೊಂದಿಗೆ ನಾವು ಶಾಂತಿ ಮಾತುಕತೆ ನಡೆಸಲು ಬಯಸುತ್ತೇವೆ ಎನ್ನುವುದರಲ್ಲಿ ಎರಡು ಮಾತಿಲ್ಲ ಎನ್ನುವ ಹೇಳಿಕೆಯ ಮೂಲಕ ಟ್ರಂಪ್ ಬೆದರಿಕೆಗಳಿಗೆ ನಾವು ಸೊಪ್ಪು ಹಾಕುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಉನ್ನತ ಶ್ರೇಣಿಯ ಪ್ಯಾಟ್ರಿಯಾಟ್ ಕ್ಷಿಪಣಿಗಳೂ ಸೇರಿದಂತೆ ಉಕ್ರೇನ್ ಗೆ ತನ್ನ ಸೇನಾ ನೆರವನ್ನು ಟ್ರಂಪ್ ಈಗಾಗಲೇ ಮುಂದುವರಿಸಿದ್ದು ಈ ಹಿಂದೆ ಮಾತು ಕೊಟ್ಟಂತೆ ಇನ್ನಷ್ಟು ನೆರವನ್ನು ಒದಗಿಸುವುದಾಗಿ ತಿಳಿಸಿದ್ದಾರೆ. ಟ್ರಂಪ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ವರದಿಯ ಪ್ರಕಾರ, “ಇದರಲ್ಲಿ ಎಲ್ಲವೂ ಒಳಗೊಂಡಿದೆ. ಪ್ಯಾಟ್ರಿಯಾಟ್ ಸೇರಿದಂತೆ ಪೂರ್ಣ ಪ್ರಮಾಣದ ಸಹಾಯ.” ಜೊತೆಗೆ ವಾಯು ರಕ್ಷಣಾ ವ್ಯವಸ್ಥೆಗಳು, ಕ್ಷಿಪಣಿಗಳು ಮತ್ತು ಮದ್ದುಗುಂಡುಗಳು ಇವೆ ಎಂದು ಅಮೆರಿಕದ ಅಧಿಕಾರಿಗಳು ವಿವರಿಸಿದ್ದಾರೆ.
ನೇರಾನೇರ ಯುದ್ಧದ ಎಚ್ಚರಿಕೆ
ಇವೆಲ್ಲದರ ನಡುವೆ, ರಷ್ಯಾದ ಮಾಜಿ ಅಧ್ಯಕ್ಷ ಮತ್ತು ಆ ದೇಶದ ಭದ್ರತಾ ಮಂಡಳಿಯ ಉಪಾಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಅವರು ಸಾಮಾಜಿಕ ಮಾಧ್ಯಮದಲ್ಲಿ ರಷ್ಯಾ ಮತ್ತು ಅಮೆರಿಕದ ನಡುವೆ ನೇರ ಯುದ್ಧ ನಡೆಯುವ ಎಚ್ಚರಿಕೆ ನೀಡುವ ಮೂಲಕ ತಮ್ಮ ಸೇಡು ತೀರಿಸಿಕೊಂಡಿದ್ದಾರೆ. ಇದಕ್ಕೂ ಟ್ರಂಪ್ ಪ್ರತಿಕ್ರಿಯೆ ನೀಡದೇ ಸುಮ್ಮನಾಗಿಲ್ಲ. ಯುದ್ಧಪೀಡಿತ ಪ್ರದೇಶದ ಸನಿಹದ “ಸೂಕ್ತ ಸ್ಥಳದಲ್ಲಿ” ಎರಡು ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು ಇರಿಸುವಂತೆ ಆದೇಶ ನೀಡಿದ್ದಾರೆ.
2022ರಲ್ಲಿ ಯುದ್ಧ ಶುರುವಾದಾಗ ಪುಟಿನ್ ಅವರನ್ನು ಹಿಂದೆ ಸರಿಯುವಂತೆ ಮಾಡಲು ನೇರವಾಗಿ ತೊಡಗಿಸಿಕೊಳ್ಳುವಂತೆ ಉಕ್ರೇನ್ ಅಧ್ಯಕ್ಷ ಝೆಲೆನ್ಸಿ ಅವರು ಅಮೆರಿಕಕ್ಕೆ ಮನವಿಮಾಡಿಕೊಂಡಿದ್ದರು. ಹಿಂದಿನ ಜೋ ಬಿಡೆನ್ ಸರ್ಕಾರವು ಇಂತಹ ನಡೆಯಿಂದ ಹಿಂದೆ ಸರಿದಿತ್ತು. ಹಾಗೆ ಮಾಡಿದರೆ ಪರಿಣಾಮ ಮಾರಕವಾಗುತ್ತದೆ ಮತ್ತು ಅದೊಂದು ಜಾಗತಿಕ ಯುದ್ಧವಾಗಿ ಪರಿವರ್ತಿಸಬಹುದು ಎಂಬುದು ಅದರ ಭಯವಾಗಿತ್ತು.
“ಶಾಂತಿಯನ್ನು ಕಾಪಾಡಲು ಮೊದಲ ಆದ್ಯತೆ” ತಮ್ಮ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಟ್ರಂಪ್ ಕೊಟ್ಟ ಭರವಸೆ. ಅಮೆರಿಕದ ಮಧ್ಯಪ್ರವೇಶವನ್ನು ಕಡಿಮೆಮಾಡಿ ಯುದ್ಧವನ್ನು ಕೊನೆಗೊಳಿಸುತ್ತೇನೆ ಎಂದು ಮಾತುಕೊಟ್ಟ ಅವರು ಈಗ ತಮ್ಮ ದೇಶವನ್ನು ಮಾತ್ರವಲ್ಲದೆ ಇತರರನ್ನೂ ಮುಂದಿನ ಅತಿದೊಡ್ಡ ಜಾಗತಿಕ ಯುದ್ಧದತ್ತ ಕೊಂಡೊಯ್ಯುವ ಸಾಧ್ಯತೆ ಕಾಣುತ್ತಿದೆ. ಅವರಿಗೆ ಕಿಂಚಿತ್ತು ವಿವೇಕ ಬಾರದೇ ಹೋದರೆ ಮತ್ತು ಈ ಭೌಗೋಳಿಕ ರಾಜಕೀಯ ಸಮೀಕರಣದಲ್ಲಿ ಉತ್ತಮ ಬದಲಾವಣೆ ಕಾಣದೇ ಇದ್ದರೆ ಇಂತಹ ಅಪಾಯ ನಿಚ್ಚಳವಾಗಿದೆ.