KS Dakshina Murthy

ಪೌರತ್ವದ ಪುರಾವೆಯಾಗದ ಪಾಸ್ಪೋರ್ಟ್: ಭಾರೀ ಹುನ್ನಾರದ ಕಾರ್ಯಸೂಚಿಯೇ?


ಪೌರತ್ವದ ಪುರಾವೆಯಾಗದ ಪಾಸ್ಪೋರ್ಟ್: ಭಾರೀ ಹುನ್ನಾರದ ಕಾರ್ಯಸೂಚಿಯೇ?
x
2013ರ ಪ್ರಕರಣಕ್ಕೆ ಸಂಬಂಧಿಸಿದಂತೆ, ಪಾಸ್ಪೋರ್ಟ್ನ್ನು ಪರಿಶೀಲಿಸಿದ ಸಮಯದಲ್ಲಿ ಅದು ಅವಧಿ ಮೀರಿದ್ದ ಕಾರಣ ನ್ಯಾಯಾಲಯವು ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಹಾಗಂತ ಕೋರ್ಟ್ ಪಾಸ್ಪೋರ್ಟ್ ಪೌರತ್ವದ ಪುರಾವೆಯಲ್ಲ ಎಂದು ತೀರ್ಪಿನಲ್ಲಿ ಎಲ್ಲಿಯೂ ಹೇಳಿಲ್ಲ.
Click the Play button to hear this message in audio format

ವಿದೇಶಾಂಗ ಸಚಿವಾಲಯದ ಪ್ರತಿಪಾದನೆಯು ನ್ಯಾಯಾಲಯದ 2013ರ ಆದೇಶವನ್ನು ತಪ್ಪಾಗಿ ಅರ್ಥಮಾಡಿಕೊಂಡಿದೆ. ನಿಜವಾಗಿ ಯಾರು ಭಾರತೀಯ ನಾಗರಿಕರು ಎಂಬುದಕ್ಕೆ ಮರುವ್ಯಾಖ್ಯಾನದ ಪ್ರಯತ್ನದಂತೆ ಕಾಣುತ್ತಿದೆ.

ಪತ್ರಿಕೋದ್ಯಮದ ಪರಿಭಾಷೆಯಲ್ಲಿ ʼಬಲೂನ್ ಬಿಡುವುದುʼ ಅಥವಾ ʼಗಾಳಿಪಟ ಹಾರಿಸುವುದುʼ ಎಂಬ ಅಭಿವ್ಯಕ್ತಿಯಿದೆ. ಅಂದರೆ ಅದರ ಅರ್ಥ, ಸಾರ್ವಜನಿಕರು ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಪರೀಕ್ಷಿಸುವ ಸಲುವಾಗಿ ಒಂದು ಪ್ರಾಯೋಗಿಕ ಯೋಚನೆಯನ್ನು ಗಾಳಿಯಲ್ಲಿ ವದಂತಿಗಳಾಗಿ ತೇಲಿಬಿಡುವುದು.

“ಪಾಸ್ಪೋರ್ಟ್ ಕೇವಲ ಒಂದು ಪ್ರಯಾಣದ ದಾಖಲೆ ಮಾತ್ರ, ಅದು ಪೌರತ್ವದ ಪುರಾವೆಯಲ್ಲ,” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರು ಇತ್ತೀಚೆಗೆ ನೀಡಿದ್ದಾರೆ ಎನ್ನಲಾದ ಹೇಳಿಕೆಯು ಕೂಡ ಈ ʼಗಾಳಿಪಟʼ ಅಭಿವ್ಯಕ್ತಿಗೆ ಹೆಚ್ಚು ಹೊಂದಿಕೆಯಾಗುತ್ತದೆ.

ಸರ್ಕಾರದ ಈ ʼಬಲೂನ್ ಬಿಡುವʼ ಪ್ರಾಯೋಗಿಕ ಪ್ರಯತ್ನವು ತನ್ನ ಕೆಲಸವನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಸಿದೆ. ಅಧಿಕಾರಿ ಅಂತಹುದೊಂದು ಹೇಳಿಕೆ ನೀಡಿ ವಾರವೇ ಕಳೆದುಹೋಗಿದೆ. ಆದರೆ ಈಗಲೂ ಮಾಧ್ಯಮಗಳಲ್ಲಿ ಇಂದಿಗೂ ಹರಿದುಬರುತ್ತಿರುವ ಪ್ರತಿಕ್ರಿಯೆಗಳು ಅಸಂಖ್ಯ. ಅದರ ನಡುವೆಯೇ ಸಾಕಷ್ಟು ಅಪಹಾಸ್ಯ, ಆಕ್ರೋಶ, ಕೋಪ-ತಾಪಗಳಿಗೆ ಈ ಹೇಳಿಕೆ ಕಾರಣವಾಗಿದೆ. ಅಪನಂಬಿಕೆಯನ್ನು ಕೆರಳಿಸಿದೆ. ಜೊತೆಗೆ ನೂರಾರು ಮೀಮ್ಗಳೂ ಹುಟ್ಟಿಕೊಂಡಿವೆ.

ಆದರೆ ಇದರ ಹಿಂದಿರುವ ಮೂಲಭೂತ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಮೇಲ್ನೋಟಕ್ಕೆ ಪಾಸ್ಪೋರ್ಟ್ನ ಪ್ರಾಮುಖ್ಯತೆಯನ್ನೇ ಕುಂದಿಸುವಂತಹ ಇಂತಹ ಆಲೋಚನೆಯನ್ನು ಸರ್ಕಾರ ಸಾರ್ವಜನಿಕವಾಗಿ ತೇಲಿಬಿಟ್ಟಿದ್ದಾದರೂ ಯಾಕೆ?

2013ರ ಬಾಂಬೆ ಹೈಕೋರ್ಟ್ ತೀರ್ಪು

ಇಂತಹುದೊಂದು ಹೇಳಿಕೆಗೆ ತೀವ್ರ ವಿರೋಧದ ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬಂದ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಸರ್ಕಾರ ಸ್ಪಷ್ಟನೆಗಳನ್ನು ಕೊಟ್ಟು ಪಾರಾಗಲು ಯತ್ನಿಸಿದವು. “ಇದೇನೂ ಹೊಸ ನಿರ್ಧಾರವಲ್ಲ, ಪಾಸ್ಪೋರ್ಟ್ನ ವ್ಯಾಪ್ತಿ ಏನು ಎಂಬುದರ ಈ ವ್ಯಾಖ್ಯಾನವನ್ನು ಈಗಾಗಲೇ 2013ರ ಬಾಂಬೆ ಹೈಕೋರ್ಟ್ ತೀರ್ಪಿನಲ್ಲಿಯೇ ಘೋಷಣೆ ಮಾಡಲಾಗಿತ್ತು,” ಎಂಬುದು ಅವರು ಕೊಟ್ಟಿರುವ ಸಮಜಾಯಿಷಿಯಾಗಿತ್ತು.

ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸುತ್ತಿದ್ದೇವೆ ಎಂದು ಹೇಳುವ ಮೂಲಕ ಪಾಸ್ಪೋರ್ಟ್ ಪೌರತ್ವದ ಪುರಾವೆಯಲ್ಲ ಎಂದು ನ್ಯಾಯಾಲಯ ಈಗಾಗಲೇ ಹೇಳಿದೆ ಮತ್ತು ಇಷ್ಟು ವರ್ಷಗಳಿಂದಲೂ ಇದೇ ನೀತಿ ಮುಂದುವರಿದುಕೊಂಡು ಬಂದಿದೆ ಎಂದು ಅವರು ಪ್ರತಿಪಾದಿಸುವ ಕೆಲಸ ಮಾಡಿದ್ದರು. ಹಾಗಾದರೆ ಈಗ ಯಾಕೆ ಈ ಪರಿಯಲ್ಲಿ ಹುಯಿಲೆದ್ದಿದೆ?

ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಒಂದು ವರ್ಷಕ್ಕೂ ಮುನ್ನ, ಅಂದರೆ ಹದಿಮೂರು ವರ್ಷಗಳಷ್ಟು ಹಿಂದೆಯೇ ನ್ಯಾಯಾಲಯವು ನಿಜವಾಗಿಯೂ ಇಂತಹ ಆದೇಶವನ್ನು ಹೊರಡಿಸಿದ್ದರೆ ಆ ಸಮಯದಲ್ಲಿ ಅಥವಾ ಅದಾದ ಬಳಿಕ ಯಾಕೆ ಯಾವ ಚರ್ಚೆಯೂ ಮುನ್ನೆಲೆಗೆ ಬರಲೇ ಇಲ್ಲ?

ಆದೇಶದಲ್ಲಿ ಇಲ್ಲದ ಸಂಗತಿ

ಇನ್ನೂ ವಿಚಿತ್ರವಾದ ಸಂಗತಿ ಏನೆಂದರೆ ಮಾಧ್ಯಮ ಸಂಸ್ಥೆಗಳು ಬಾಂಬೆ ಹೈಕೋರ್ಟಿನ ತೀರ್ಪಿನ ಕುರಿತಾಗಿ ಬಿಜೆಪಿ ನಿಲುವನ್ನು ಉಲ್ಲೇಖಿಸಿದವೇ ಹೊರತು ನಿಜವಾಗಿಯೂ ನ್ಯಾಯಾಲಯದ ಆದೇಶದ ಪ್ರಮುಖ ಭಾಗದಲ್ಲಿ ಏನಿತ್ತು ಎಂಬುದನ್ನು ವಿವರಿಸಲು ಯಥಾವತ್ತಾಗಿ ಪ್ರಕಟಿಸುವ ಗೊಡವೆಗೇ ಹೋಗಲಿಲ್ಲ. ಮೇಲ್ನೋಟಕ್ಕೆ ಆಡಳಿತ ಪಕ್ಷ ಅಥವಾ ಸರ್ಕಾರ ಏನು ಹೇಳಿದರೂ ಅದನ್ನು ಯಥಾಪ್ರಕಾರ ನಂಬಿಬಿಡುವ ಒಂದು ಅಲಿಖಿತ ನಂಬಿಕೆ ಮುಂದುವರಿದಿರುವ ಹಾಗೆ ಕಾಣುತ್ತಿದೆ.

ಹೀಗಿರುವಾಗಲೇ ʼಸಬರಂಗ್ʼ ಎಂಬ ಎನ್ಜಿಒ ಪೋರ್ಟಲ್ ಅಸಲಿ ಆದೇಶದ ಪ್ರತಿಯನ್ನು ಹೊರಹಾಕಿತು. ಅದರಲ್ಲಿ ಸರ್ಕಾರ ಅಥವಾ ಆಡಳಿತಾರೂಢ ಬಿಜೆಪಿ ಹೇಳಿಕೊಳ್ಳುವಂತಹ ರೀತಿಯ ಯಾವುದೇ ಉಲ್ಲೇಖಗಳೂ ಇರಲಿಲ್ಲ.

ʼಅನ್ವರ್ ಹುಸೇನ್ ಅಬ್ದುಲ್ ಖಾದರ್ ಶೇಖ್ ಮತ್ತು ಇತರರ ವಿರುದ್ಧ ಮಹಾರಾಷ್ಟ್ರ ಸರ್ಕಾರʼ ಪ್ರಕರಣದಲ್ಲಿ 2013ರ ಜೂಲೈ 26ರಂದು ನೀಡಲಾದ ತೀರ್ಪು ಹೀಗೆ ಹೇಳುತ್ತದೆ; ಮೇಲ್ಮನವಿದಾರರು ಸಲ್ಲಿಸಿದ ಪಾಸ್ಪೋರ್ಟ್ ಈಗಾಗಲೇ ಅವಧಿ ಮುಗಿದಿರುವ ದಾಖಲೆಯಾಗಿದ್ದು, ಹಾಗಾಗಿ ಅದನ್ನು ಮೇಲ್ಮನವಿದಾರರು ಕೋರಿದಂತೆ ನಾಗರಿಕತೆಯ ವಿಷಯವನ್ನು ನಿರ್ಧರಿಸುವ ಸಂದರ್ಭದಲ್ಲಿ ನ್ಯಾಯಾಲಯವು ಅದನ್ನು ಪರಿಗಣನೆಗೆ ತೆಗೆದುಕೊಂಡಿರಲಿಲ್ಲ.

ಕೋರ್ಟ್ ಆದೇಶ ಏನು ಹೇಳುತ್ತದೆ?

ಇನ್ನೂ ಒಂದು ಮಾತಿನಲ್ಲಿ ಹೇಳುವುದಾದರೆ ನ್ಯಾಯಾಲಯವು ಆ ಪಾಸ್ಪೋರ್ಸ್ನ್ನು ಪರಿಶೀಲಿಸಿದ ಸಂದರ್ಭದಲ್ಲಿ ಅದು ಚಾಲ್ತಿಯಲ್ಲಿ ಇಲ್ಲದ ಕಾರಣಕ್ಕೆ ನ್ಯಾಯಾಲಯ ಅದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಅಷ್ಟೇ ಹೊರತು ಪಾಸ್ಪೋರ್ಟ್ ನಾಗರಿಕತೆಯ ಪುರಾವೆಯಲ್ಲ ಎಂದು ತೀರ್ಪಿನಲ್ಲಿ ಎಲ್ಲಿಯೂ ಹೇಳಿಲ್ಲ ಎಂಬುದು ಗಮನಾರ್ಹ.

ಅದೇ ತೀರ್ಪಿನಲ್ಲಿ ಇರುವ ಮೂರನೇ ಪ್ಯಾರಾಗ್ರಾಫ್ನ ಪ್ರಮುಖ ಭಾಗವು ಹೀಗೆ ಓದಿಕೊಳ್ಳುತ್ತದೆ;

“ಆದಾಗ್ಯೂ ತಜ್ಞರ ಮಂಡಳಿ ಉಲ್ಲೇಖಿಸಿರುವ ಪಾಸ್ಪೋರ್ಟ್ ಈಗಾಗಲೇ ಅವಧಿ ಮುಗಿದಿರುವ ದಾಖಲೆಯಾಗಿದೆ. ಆದ್ದರಿಂದ ನಾವು ಅದರ ಮೇಲೆ ಭರವಸೆ ಇಡಲು ಯಾವುದೇ ಕಾನೂನು ಆಧಾರ ಸಿಗುವುದಿಲ್ಲ.”

2013ರ ನ್ಯಾಯಾಲಯದ ಈ ತೀರ್ಪಿನ ಬೆಳಕಿನಲ್ಲಿಯೇ ನೋಡಿದಾಗ ಆಡಳಿತಾರೂಢ ಬಿಜೆಪಿಯ ಬೆಂಬಲವನ್ನು ಹೊಂದಿರುವ ಸರ್ಕಾರದ ಪ್ರತಿಪಾದನೆಯೇ ಸಂಪೂರ್ಣ ಸುಳ್ಳಾಗಿ ಕಾಣುತ್ತದೆ. ಪೌರತ್ವವನ್ನು ಸಾಬೀತುಪಡಿಸಲು ಆ ರದ್ದಾಗಿದ್ದ ಪಾಸ್ಪೋರ್ಟ್ನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಅದು ಅವಧಿ ಮುಗಿದ ಪಾಸ್ಪೋರ್ಟ್ ಆಗಿದ್ದ ಕಾರಣ ನ್ಯಾಯಾಲಯದ ಆದೇಶವು ಆ ಸಾಕ್ಷ್ಯವನ್ನು ಸಂಕ್ಷಿಪ್ತವಾಗಿ ತಿರಸ್ಕರಿಸಿತೇ ಹೊರತು ಪೌರತ್ವವನ್ನು ಸಾಬೀತುಮಾಡುವ ದಾಖಲೆಯಾಗಿ ಪಾಸ್ಪೋರ್ಟ್ಗೆ ಇರುವ ಅರ್ಹತೆಯ ಬಗ್ಗೆ ಯಾವುದೇ ವಿಶ್ಲೇಷಣೆ ಮಾಡಲು ಹೋಗಲಿಲ್ಲ.

ಆಡಳಿತ ವ್ಯವಸ್ಥೆಯ ಕಾರ್ಯಸೂಚಿ

ಆದರೆ ಆ ಪ್ರಕರಣದ ತೀರ್ಪು ಹೊರಬಂದು ಹದಿಮೂರು ವರುಷಗಳು ಕಳೆದುಹೋಗಿವೆ. ಅದಕ್ಕೀಗ ಇಲ್ಲಸಲ್ಲದ ಅರ್ಥಗಳನ್ನು ಕಲ್ಪಿಸಲಾಗುತ್ತಿದೆ. ಈಗಿರುವ ಮೋದಿ ಸರ್ಕಾರದ ಆಡಳಿತದಲ್ಲಿ ಪೌರತ್ವವೇ ಒಂದು ವಿವಾದಾತ್ಮಕ ಸಂಗತಿಯಾಗಿ ಮಾರ್ಪಟ್ಟಿರುವುದನ್ನು ಗಮನಿಸದೇ ಇರುತ್ತಿದ್ದರೆ ಇದನ್ನು ಕೇವಲ ಒಂದು ಮೇಲ್ನೋಟದ ತಪ್ಪು ಅಥವಾ ಅಜಾಗರೂಕತೆ ಎಂದು ತಳ್ಳಿಹಾಕಬಹುದಾಗಿತ್ತು.

ಇದು ಯಾರನ್ನು ಹೊರಗಿಡಬೇಕು ಎನ್ನುವ ಬಗ್ಗೆ ಆಡಳಿತ ವ್ಯವಸ್ಥೆ ನಡೆಸುತ್ತಿರುವ ಕಾರ್ಯಸೂಚಿ. ಪೌರತ್ವ, ಮತದಾರರ ಪಟ್ಟಿ ಮುಂತಾದವುಗಳಿಂದ ಯಾರನ್ನು ಹೊರಗಿಡಬಹುದು ಎಂಬುದಕ್ಕೆ ಜನರನ್ನು ಅಥವಾ ಸಮುದಾಯಗಳನ್ನು ಹುಡುಕುವ ಕೆಲಸ ಇದಾಗಿದೆ. ಒಂದು ವೇಳೆ ಪಾಸ್ಪೋರ್ಟ್ನ್ನು ಕೇವಲ ಒಂದು ಪ್ರಯಾಣದ ದಾಖಲೆಯಾಗಿ ಮಾತ್ರ ವ್ಯಾಖ್ಯಾನಿಸಿದರೆ, ಒಬ್ಬ ವ್ಯಕ್ತಿಯ ಬಳಿ ಪಾಸ್ಪೋರ್ಟ್ ಇದ್ದಾಗ್ಯೂ, ʼಇದು ಪೌರತ್ವಕ್ಕೆ ನಿರ್ಣಾಯಕ ಪುರಾವೆ ಅಲ್ಲʼ ಎಂಬ ಆಧಾರದ ಮೇಲೆ ಆತನನ್ನು ಮತದಾರರ ಪಟ್ಟಿಯಿಂದ ಹೊರಗಿಡಲು ಇನ್ನೂ ಸಾಧ್ಯವಾಗುತ್ತದೆ.

2013ರ ಬಾಂಬೆ ಹೈಕೋರ್ಟ್ ಆದೇಶದ ಸಂಬಂಧಿತ ಸೆಕ್ಷನ್ 3 ರ ಸ್ಕ್ರೀನ್ಶಾಟ್.

ಇತ್ತೀಚಿನ ತಿಂಗಳುಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಲಕ್ಷಾಂತರ ಜನರನ್ನು ವಿವಾದಾತ್ಮಕವಾಗಿ ಮತದಾನದ ಹಕ್ಕಿನಿಂದ ವಂಚಿತರನ್ನಾಗಿ ಮಾಡಲಾಗಿದೆ. ಇವರಲ್ಲಿ ಬಹುತೇಕ ಮಂದಿ ಪೌರತ್ವದ ವಿಷಯದ ಮೇಲೆಯೇ ಹೊರಗೆ ದಬ್ಬಲ್ಪಟ್ಟವರು. ಇದು ಮೊದಲು ಕಂಡುಬಂದಿದ್ದು ಬಿಹಾರ ವಿಧಾನಸಭಾ ಚುನಾವಣೆ ಮತ್ತು ಬಳಿಕ ಪಶ್ಚಿಮ ಬಂಗಾಳ ಚುನಾವಣೆಯ ಸಂದರ್ಭದಲ್ಲಿ. ಮತದಾರರ ಪಟ್ಟಿಯಿಂದ ಹೊರಬೀಳುತ್ತಿರುವವರು ದೇಶದಲ್ಲಿ ಅತ್ಯಂತ ಆತಂಕಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಯಾಕೆಂದರೆ ಹಲವಾರು ಸವಲತ್ತುಗಳು ಮತ್ತು ಕಲ್ಯಾಣ ಯೋಜನೆಗಳ ಪ್ರಯೋಜನಗಳು ಒಬ್ಬ ವ್ಯಕ್ತಿಯನ್ನು ʼನಾಗರಿಕʼ ಎಂದು ಗುರುತಿಸಿದರೆ ಮಾತ್ರ ಲಭ್ಯವಾಗುತ್ತವೆ.

ಅಪಾಯದಲ್ಲಿ ಸಾವಿರಾರು ಮಂದಿ

ಆದ್ದರಿಂದ, ಪಾಸ್ಪೋರ್ಟ್ ಮತ್ತು ನಾಗರಿಕತೆಯನ್ನು ಪರಸ್ಪರ ಬೇರ್ಪಡಿಸಲು ಯತ್ನಿಸುತ್ತಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಯ ಈ "ಹೊಸ" ವ್ಯಾಖ್ಯಾನವನ್ನು ಜಾರಿಗೆ ತಂದರೆ, ಅದು ಅತ್ಯಂತ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು. ಇದರಿಂದಾಗಿ ಇನ್ನೂ ಸಹಸ್ರಾರು ಜನರಿಗೆ ಮತದಾರರ ಪಟ್ಟಿಗೆ ಸೇರ್ಪಡೆಯಾಗುವ ಅವಕಾಶ ನಿರಾಕರಿಸಲ್ಪಡಬಹುದು. ಕೇವಲ ಶೇಕಡಾ 10 ರಷ್ಟು ಭಾರತೀಯ ನಾಗರಿಕರು ಮಾತ್ರ ಪಾಸ್ಪೋರ್ಟ್ ಹೊಂದಿದ್ದಾರೆ ಎಂಬುದು ನಿಜವಾದರೂ, ಒಟ್ಟಾರೆ ಸಂಖ್ಯೆಯ ದೃಷ್ಟಿಯಿಂದ ನೋಡಿದಾಗ ಇದು ಸುಮಾರು 10 ಕೋಟಿಯನ್ನೂ ಮೀರುವ ಒಂದು ಬೃಹತ್ ಸಂಖ್ಯೆಯಾಗಿದೆ.

ಪದಗಳ ಜಾಲವೂ ಈ ಗೊಂದಲವನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಪಾಸ್ಪೋರ್ಟ್ ಹೊಂದಿರುವ ವ್ಯಕ್ತಿಯು ಬಹುತೇಕ ಯಾವಾಗಲೂ ಭಾರತೀಯ ನಾಗರಿಕನೇ ಆಗಿರುತ್ತಾನೆ; ಆದರೆ ಭಾರತೀಯ ನಾಗರಿಕರು ತಮ್ಮ ಪೌರತ್ವವನ್ನು ದೃಢೀಕರಿಸಲು ಪಾಸ್ಪೋರ್ಟ್ ಹೊಂದಿರಲೇಬೇಕು ಎಂದೇನೂ ಇಲ್ಲ. ಪೌರತ್ವ ಕಾಯ್ದೆ 1955 ರ ಅಡಿಯಲ್ಲಿ ಅದನ್ನು ಸ್ಥಾಪಿಸಲು ಇತರ ಹಲವಾರು ಮಾನದಂಡಗಳಿವೆ. ಅದೇ ಸಮಯದಲ್ಲಿ, ಒಬ್ಬ ವ್ಯಕ್ತಿಯು ಪಾಸ್ಪೋರ್ಟ್ ಹೊಂದಿದ್ದರೆ, ಆತ ಬಹುತೇಕ ಖಚಿತವಾಗಿ ನಾಗರಿಕನೇ ಆಗಿರುತ್ತಾನೆ.

ಅತ್ಯಂತ ಅಪರೂಪದ ಸಂದರ್ಭಗಳಲ್ಲಿ (ಇದು ಶೇಕಡಾ ಒಂದಕ್ಕಿಂತ ಕಡಿಮೆ ಎಂಬ ಅಂದಾಜು), ನಿರಾಶ್ರಿತರಂತಹ ನಾಗರಿಕರಲ್ಲದವರಿಗೂ ಪ್ರಯಾಣದ ದಾಖಲೆಗಳನ್ನು ನೀಡಲಾಗುತ್ತದೆ. ಆದರೆ, ನಿಯಮಿತ ಪಾಸ್ಪೋರ್ಟ್ ಹೊಂದಿರುವವರ ನಾಗರಿಕತೆಯನ್ನು ಶಂಕಿಸಲು ಈ ಅತ್ಯಲ್ಪ ಪ್ರಮಾಣದ ಉದಾಹರಣೆಯನ್ನು ಸಾರ್ವತ್ರಿಕಗೊಳಿಸಲು ಸಾಧ್ಯವಿಲ್ಲ; ಏಕೆಂದರೆ ಒಬ್ಬ ವ್ಯಕ್ತಿಯು ನಾಗರಿಕನಾಗಿದ್ದರೆ ಮಾತ್ರ ಪೂರೈಸಬಹುದಾದ ಕಟ್ಟುನಿಟ್ಟಾದ ನಿಯಮಗಳು ಪಾಸ್ಪೋರ್ಟ್ ಪಡೆಯಲು ಇರುತ್ತವೆ.

ಹೊಸ ರೂಪದಲ್ಲಿ ಎನ್ಆರ್‌ಸಿ

ಪಾಸ್ಪೋರ್ಟ್ಗೆ ಇರುವ ಶಕ್ತಿಯನ್ನು ಮರುವ್ಯಾಖ್ಯಾನಿಸುವ ಈ ಪ್ರಯತ್ನವು, 12 ವರ್ಷಗಳ ಹಿಂದೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪೌರತ್ವಕ್ಕೆ ಸಂಬಂಧಿಸಿದಂತೆ ಉದ್ಭವಿಸಿರುವ ವಿವಾದಗಳ ಸರಣಿಯಲ್ಲಿ ಇತ್ತೀಚಿನದ್ದಾಗಿದೆ. 2019 ರಲ್ಲಿ, ಅಸ್ಸಾಂನಲ್ಲಿ ನಡೆದ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್‌ಸಿ) ಪ್ರಕ್ರಿಯೆಯ ಫಲಿತಾಂಶವು ಅಸಂಖ್ಯಾತ ಲೋಪದೋಷಗಳಿಂದ ಕೂಡಿದ್ದರಿಂದ ಇಡೀ ದೇಶವು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿತ್ತು.

ಪೌರತ್ವ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗುವುದು (ಸಿಎಎ) ಎಂದು ಸರ್ಕಾರ ಘೋಷಿಸಿದಾಗ ಈ ಆಕ್ರೋಶವು ದೇಶಾದ್ಯಂತ ವ್ಯಾಪಿಸಿತು. ನೆರೆಹೊರೆಯ ದೇಶಗಳಿಂದ ಬಂದಿರುವ ದಾಖಲೆಗಳಿಲ್ಲದ ಮುಸ್ಲಿಂ ವಲಸಿಗರಿಗೆ ಪೌರತ್ವ ನೀಡುವುದರಿಂದ ಹೊರಗಿಡುವುದು ಸಿಎಎ ಅಭಿಯಾನದ ಉದ್ದೇಶವಾಗಿತ್ತು. ಆಗ ಇಡೀ ದೇಶಾದ್ಯಂತ ಜಾರಿಗೊಳಿಸಲು ಉದ್ದೇಶಿಸಲಾಗಿದ್ದ ಎನ್ಆರ್‌ಸಿ ಪ್ರಕ್ರಿಯೆಯೊಂದಿಗೆ ಇದನ್ನು ತಳಕು ಹಾಕಿ ನೋಡಿದಾಗ, ಇದು ಆ ಸಮುದಾಯದಲ್ಲಿ ಭೀತಿಯನ್ನು ಹುಟ್ಟುಹಾಕಿತು.

ಇದರಿಂದ ಉಂಟಾದ ಭಾರಿ ಪ್ರತಿಭಟನೆಯು ಸಿಎಎ ಜಾರಿಯಲ್ಲಿ ಸರ್ಕಾರ ನಿಧಾನಗತಿ ಅನುಸರಿಸುವಂತೆ ಮತ್ತು ಎನ್ಆರ್ಸಿ ಪ್ರಕ್ರಿಯೆಯನ್ನು ಕೈಬಿಡುವಂತೆ ಒತ್ತಾಯಿಸಿತು. ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಈಗಾಗಲೇ ಲಕ್ಷಾಂತರ ಜನರನ್ನು ಮತದಾನದ ಹಕ್ಕಿನಿಂದ ವಂಚಿತಗೊಳಿಸಲಾಗುತ್ತಿರುವುದನ್ನು, ಮಾರುವೇಷದಲ್ಲಿ ಬಂದಿರುವ ಎನ್ಆರ್ಸಿ ಎಂದೇ ನೋಡಲಾಗುತ್ತಿದೆ.

ಇದೇ ಹಿನ್ನೆಲೆಯಲ್ಲಿ, ನಾಗರಿಕತೆಯ ಭದ್ರ ಬುನಾದಿಯ ಪುರಾವೆಯಾಗಿ ಯಾವಾಗಲೂ ಪರಿಗಣಿಸಲ್ಪಡುತ್ತಿದ್ದ ಪಾಸ್ಪೋರ್ಟ್ನ ಮೌಲ್ಯವನ್ನು ಈಗ ಕುಂದಿಸಲಾಗುತ್ತಿದೆ. ಕಾಲದ ಪರೀಕ್ಷೆಗೆ ಒಳಪಟ್ಟ ಮತ್ತು ಕಾನೂನುಬದ್ಧವಾಗಿ ಅಂಗೀಕರಿಸಲ್ಪಟ್ಟ ನಾಗರಿಕತೆಯ ತತ್ವಗಳೊಂದಿಗೆ ಆಟವಾಡಲು ಸರ್ಕಾರ ನಿರಂತರವಾಗಿ ನಡೆಸುತ್ತಿರುವ ಪ್ರಯತ್ನಗಳೊಂದಿಗೆ ಇದನ್ನು ಜೋಡಿಸಿ ನೋಡಿದಾಗ, ಈ ಬಹಿಷ್ಕೃತ ವರ್ಗಗಳು ಒಂದು ಕರಾಳ ಭವಿಷ್ಯವನ್ನು ಎದುರಿಸುವಂತಾಗಿದೆ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story