KS Dakshina Murthy

ಪಕ್ಷಪಾತಿ ಅಮೆರಿಕ: ವಿಶ್ವಸಂಸ್ಥೆ ನಡೆಸುವ ನೈತಿಕತೆ ಕಳಕೊಂಡ ಸೂಪರ್‌ ಪವರ್


ಪಕ್ಷಪಾತಿ ಅಮೆರಿಕ: ವಿಶ್ವಸಂಸ್ಥೆ ನಡೆಸುವ ನೈತಿಕತೆ ಕಳಕೊಂಡ ಸೂಪರ್‌ ಪವರ್
x
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್.‌
Click the Play button to hear this message in audio format

ವಿಶ್ವಸಂಸ್ಥೆಯನ್ನು ಹೇಗಾದರೂ ಮಾಡಿ ನಿರ್ಲಕ್ಷಿಸಬೇಕು ಎಂದು ಅಮೆರಿಕ ಜಿದ್ದಿಗೆ ಬಿದ್ದಿರುವುದರಿಂದ ವಿಶ್ವಸಂಸ್ಥೆ ಕಚೇರಿಯನ್ನೇ ಸ್ಥಳಾಂತರ ಮಾಡಬೇಕು ಎಂಬ ಬೇಡಿಕೆಯಲ್ಲಿ ಹುರುಳಿದೆ.

ಕಾಲ ಸರಿದಂತೆ ವಿಶ್ವಸಂಸ್ಥೆ ಅಮೆರಿಕದ ಕೈಗೊಂಬೆಯಾಗಿ ಮಾರ್ಪಟ್ಟಿದೆಯೇ? ವಿಶ್ವಸಂಸ್ಥೆಯನ್ನು ಆರಂಭಿಸಿ ಎಂಟು ದಶಕಗಳು ಸಂದ ನಂತರವೂ ಅದರ ಸಾಮಾನ್ಯಸಭೆಯ ಅಧಿವೇಶನಗಳಿಗೆ ಯಾರು ಹಾಜರಾಗಬಹುದು ಮತ್ತು ಯಾರು ಹಾಜರಾಗಬಾರದು ಎಂಬಿತ್ಯಾದಿ ಸಾಂಸ್ಥಿಕ ಸಂಗತಿಗಳನ್ನು ಅಮೆರಿಕ ನಿಭಾಯಿಸಿಕೊಂಡು ಬರುತ್ತಿದೆ. ವಿಟೊ ಅಧಿಕಾರದ ಹೊರತಾಗಿಯೂ ಇದು ಮುಂದುವರಿದಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆ (ಯುಎನ್‌ಜಿಎ)ಯ 81ನೇ ಅಧಿವೇಶನದ ಉನ್ನತ ಮಟ್ಟದ ಚರ್ಚೆ ನ್ಯೂಯಾರ್ಕ್‌ನಲ್ಲಿ ನಡೆಯುತ್ತಿದೆ. ಇದರಲ್ಲಿ ಪಾಲ್ಗೊಳ್ಳಲು ಪ್ಯಾಲೆಸ್ತೀನ್‌ ಪ್ರಾಧಿಕಾರದ ಅಧ್ಯಕ್ಷ ಮಹಮೂದ್‌ ಅಬ್ಬಾಸ್‌ ನೇತೃತ್ವದ ನಿಯೋಗಕ್ಕೆ ಅಮೆರಿಕ ಸತತ ಎರಡನೆ ವರ್ಷವೂ ವೀಸಾ ನಿರಾಕರಿಸಿದೆ. ಸುಡಾನ್‌ನ ನಿಯೋಗ ಮತ್ತು ಯುಗಾಂಡ ನಿಯೋಗದ ಕೆಲವರಿಗೂ ವೀಸಾ ನಿರಾಕರಿಸಿದ ಸುದ್ದಿ ಸದ್ದುಮಾಡುತ್ತಿದೆ.

ಈ ವೀಸಾ ನಿರಾಕರಣೆಯು ವಿಶ್ವಸಂಸ್ಥೆಯ ಮೂಲಭೂತ ಸನ್ನದಿಗೆ ಸಂಪೂರ್ಣ ವಿರುದ್ಧವಾಗಿದೆ. ಯಾವುದೇ ಕಾರಣಕ್ಕೂ ಅಧಿಕೃತ ನಿಯೋಗಗಳಿ ವೀಸಾ ನಿರಾಕರಣೆ ಮಾಡದಂತೆ ಅದು ಅಮೆರಿಕಕ್ಕೆ ನಿಯಂತ್ರಣ ಹೇರುತ್ತದೆ. ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯಲ್ಲಿ ಶಾಶ್ವತ ವೀಕ್ಷಕ ರಾಷ್ಟ್ರ ಎಂಬ ಸ್ಥಾನಮಾನವನ್ನು ಹೊಂದಿದೆಈ ಸ್ಥಾನಮಾನವು ಮತದಾನವನ್ನು ಹೊರತುಪಡಿಸಿ ವಿಶ್ವಸಂಸ್ಥೆಯ ಎಲ್ಲ ನಡವಳಿಕೆಯಲ್ಲಿ ಭಾಗವಹಿಸಲು ಅದಕ್ಕೆ ಅವಕಾಶ ನೀಡುತ್ತದೆ.

ಖಂಡನೆಗೆ ಯಾವ ಕಿಮ್ಮತ್ತೂ ಇಲ್ಲ

ಅಮೆರಿಕ ಆಡಳಿತದ ಯೋಚನೆ ಮತ್ತು ಮನಸ್ಥಿತಿಗೆ ತಕ್ಕಂತೆ ನಡೆದುಕೊಳ್ಳದೇ ಇರುವ ನಿಯೋಗಗಳಿಗೆ ಅಮೆರಿಕ ವೀಸಾ ನಿರಾಕರಿಸುತ್ತಿರುವುದು ಇದೇನು ಮೊದಲ ಬಾರಿ ಅಲ್ಲ. ಅದೇ ರೀತಿ ಮುಂದೆಯೂ ಇದು ಮರುಕಳಿಸುವುದಿಲ್ಲ ಎಂಬ ಗ್ಯಾರೆಂಟಿಯೂ ಇಲ್ಲ. ಪ್ಯಾಲೆಸ್ತೀನ್‌ ನಿಯೋಗಕ್ಕೆ ವೀಸಾ ನಿರಾಕರಿಸಿದ ಕ್ರಮವನ್ನು ಖಂಡಿಸಿ ಸುಮಾರು 152 ರಾಷ್ಟ್ರಗಳು ಅಮೆರಿಕ ನಿರ್ಧಾರವನ್ನು ಟೀಕಿಸಿವೆ ಮತ್ತು ಆ ನಿರ್ಧಾರವನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿವೆ. ಆದರೆ ಅದರಿಂದ ಕಿಂಚಿತ್ತೂ ಪ್ರಯೋಜನ ಆಗಲಿಲ್ಲ. ಕೊನೆಯದಾಗಿ ಮಹಮೂದ್‌ ಅಬ್ಬಾಸ್‌ ಅವರು ವಿಡಿಯೋ ಮೂಲಕ ವಿಶ್ವಸಂಸ್ಥೆ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ʼಪ್ಯಾಲೆಸ್ತೀನ್‌ನ್ನು ಮುಕ್ತಗೊಳಿಸಿ” ಎಂದು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಹೊರಗೆ ಕಳೆದ ವರ್ಷ ನಡೆದ ಸಭೆಯಲ್ಲಿ ಕೊಲಂಬಿಯಾ ಅಧ್ಯಕ್ಷ ಗುಸ್ತಾವೊ ಪೆಟ್ರೊ ಅವರು ಕರೆ ನೀಡಿದ್ದರು. ಹಾಗಾಗಿ ಅವರ ವೀಸಾ ರದ್ದಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪೆಟ್ರೊ, ಅಮೆರಿಕದ ಈ ನಿರ್ಧಾರದಿಂದ ವಿಶ್ವಸಂಸ್ಥೆ ಮತ್ತು ಅದರ ಸಾಮಾನ್ಯ ಸಭೆಯ ಕಾರ್ಯನಿರ್ವಹಣೆಗೆ ಆಧಾರವಾಗಿರುವ ಎಲ್ಲ ವಿನಾಯ್ತಿ ನಿಯಮಗಳನ್ನು ಉಲ್ಲಂಘಿಸಿದಂತಾಗಿದೆ ಎಂದು ಹೇಳಿದ್ದರು. ʼವಿಶ್ವಸಂಸ್ಥೆಯ ಪ್ರಧಾನ ಕಚೇರಿ ನ್ಯೂಯಾರ್ಕ್‌ನಲ್ಲಿ ಮುಂದವರಿಯಲು ಸಾಧ್ಯವಿಲ್ಲʼ ಎಂದೂ ಅವರು ತಾಕೀತು ಮಾಡಿದ್ದರು.

ಇಲ್ಲಿ ಬೊಟ್ಟು ಮಾಡಬೇಕಿರುವ ಸಂಗತಿ ಎಂದರೆ ವಿಶ್ವಸಂಸ್ಥೆಯು ತನ್ನ ನಿರ್ಣಾಯಕ ಸಾಮಾನ್ಯ ಸಭೆಯ ಕಲಾಪ ನಡೆಸುವ ರೀತಿಯನ್ನು ತಿರುಚಲು ಮತ್ತು ನಿಯಂತ್ರಿಸಲು ಅಮೆರಿಕಕ್ಕೆ ಅಧಿಕಾರ ನೀಡಿದವರಾದರೂ ಯಾರು? ಎರಡನೇ ಮಹಾಯುದ್ಧವು ಮುಕ್ತಾಯಗೊಂಡ ಬಳಿಕ 1945ರಲ್ಲಿ ರಚನೆಯಾದ ವಿಶ್ವಸಂಸ್ಥೆಯು ಮಿತ್ರರಾಷ್ಟ್ರಗಳನ್ನು ವಿಜಯದತ್ತ ಕೊಂಡೊಯ್ದ ಪ್ರಮುಖ ರಾಷ್ಟ್ರವಾಗಿ ಅಮೆರಿಕ ಹೊರಹೊಮ್ಮಿದ್ದರ ಫಲವಾಗಿ ಸ್ವಾಭಾವಿಕ ಎಂಬಂತೆ ನ್ಯೂಯಾರ್ಕ್‌ನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ಆದರೆ ಅದೀಗ ಗತಿಸಿದ ಕಾಲದ ಮಾತು.

ಸ್ಥಳಾಂತರ ಕಾರ್ಯಸಾಧುವೇ?

ಅಲ್ಲಿಂದೀಚೆಗೆ ಸಾಕಷ್ಟು ನೀರು ಹರಿದುಹೋಗಿದೆ. ಜಾಗತಿಕ ಸಂಸ್ಥೆಯ ಜೊತೆ ಮತ್ತು ಅದರ ಮೌಲ್ಯಗಳಿಗೆ ತಕ್ಕುನಾಗಿ ಕೆಲಸ ಮಾಡಲು ಅಮೆರಿಕ ಅನೇಕ ಬಾರಿ ನಿರಾಕರಿಸಿದೆ. ಆದ್ದರಿಂದಲೇ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಜಾಗವು ವಿವಾದಾತ್ಮಕವಾಗಿ ಪರಿಣಮಿಸಿದೆ. ಇದನ್ನು ಸ್ಥಳಾಂತರಿಸಲೇಬೇಕು ಎಂದು ಅನೇಕ ರಾಷ್ಟ್ರಗಳು ಒತ್ತಾಯ ಮಾಡಿವೆ. 2005ರಲ್ಲಿ ಈ ಬೇಡಿಕೆಯನ್ನು ಮೊದಲ ಬಾರಿಗೆ ಮಾಡಿದವರು ವನೆಜುವೆಲಾದ ಮಾಜಿ ಅಧ್ಯಕ್ಷ ಹ್ಯೂಗೋ ಚಾವೆಜ್.‌ ಆ ಬಳಿಕ ಇನ್ನೂ ಅನೇಕ ದೇಶಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಕೂಡ ಪ್ರಧಾನ ಕಚೇರಿಯನ್ನು ನ್ಯೂಯಾರ್ಕ್‌ನಿಂದ ಜಿನಿವಾದಂತಹ ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸುತ್ತ ಬಂದಿವೆ.

ಪ್ರಧಾನ ಕಚೇರಿಯನ್ನು ಸ್ಥಳಾಂತರಿಸುವ ಪ್ರಸ್ತಾಪದ ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ವಿಶ್ವಸಂಸ್ಥೆ ಅಧಿಕಾರಿ ಸ್ಟೀಫನ್ ದುಜಾರಿಕ್ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ಹೇಳಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಆದರೆ ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಆದಾಗ್ಯೂ, ಅವರು ನೀಡಿದ ಹೇಳಿಕೆ ಜಾಗತಿಕವಾಗಿ ನೆಲೆಕಂಡಿರುವ ಸಂಸ್ಥೆಯನ್ನು ಸ್ಥಳಾಂತರಿಸುವ ಕಲ್ಪನೆಯು ಅಸಾಧ್ಯವಾದುದಲ್ಲ ಮತ್ತು ವಾಸ್ತವವಾಗಿ ಮಾಡಬಹುದಾದದ್ದು ಎಂಬುದಕ್ಕೆ ಸಾಕ್ಷಿ ಒದಗಿಸಿದೆ.

ಇದಕ್ಕೆ ಪೂರ್ವ ಉದಾಹರಣೆ ಕೂಡ ಇದೆ. 1988ರಲ್ಲಿ, ಯಾಸರ್ ಅರಾಫತ್ ನೇತೃತ್ವದ ಪ್ಯಾಲೆಸ್ತೀನ್ ನಿಯೋಗಕ್ಕೆ ಅಮೆರಿಕ ವೀಸಾ ನಿರಾಕರಿಸಿದ್ದನ್ನು ವಿರೋಧಿಸಿ, ಒಮ್ಮೆ ಸಾಮಾನ್ಯ ಸಭೆಯ ಕಲಾಪವನ್ನು ಜಿನೀವಾದಲ್ಲಿ ನಡೆಸಲಾಗಿತ್ತು.

ವಿಶ್ವಸಂಸ್ಥೆಯ ಆರು ಮುಖ್ಯ ಅಂಗಗಳಲ್ಲಿ, ಐದು ನ್ಯೂಯಾರ್ಕ್‌ನಲ್ಲಿವೆ: ವಿಶ್ವಸಂಸ್ಥೆಯ ಕಾರ್ಯಾಲಯ, ಭದ್ರತಾ ಮಂಡಳಿ, ಸಾಮಾನ್ಯ ಸಭೆ, ವಿಶ್ವಸಂಸ್ಥೆ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಮತ್ತು ಧರ್ಮದರ್ಶಿ ಮಂಡಳಿ. ಆರನೆಯದಾದ ಅಂತರರಾಷ್ಟ್ರೀಯ ನ್ಯಾಯಾಲಯವು ನೆದರ್ಲ್ಯಾಂಡ್ಸ್‌ನ ಹೇಗ್‌ನಲ್ಲಿದೆ.

ಅಮೆರಿಕದ ಇಚ್ಛಾಪೂರ್ವಕ ತಿರಸ್ಕಾರ

ವಾಷಿಂಗ್ಟನ್‌ನಲ್ಲಿ ಅಧಿಕಾರಕ್ಕೇರುವ ಆಡಳಿತಗಳು ನಿರಂತರವಾಗಿ ವಿಶ್ವಸಂಸ್ಥೆಯನ್ನು ತಿರಸ್ಕಾರದಿಂದ ಕಾಣುವ ಧೋರಣೆಯನ್ನು ಕ್ರಮೇಣ ಆಯ್ಕೆ ಮಾಡಿಕೊಂಡಿರುವುದರಿಂದ ಪ್ರಧಾನ ಕಚೇರಿಯನ್ನು ಸ್ಥಳಾಂತರಿಸುವ ಬೇಡಿಕೆಯಲ್ಲಿ ಹುರುಳಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಟ್ರಂಪ್ ಆಡಳಿತವು ಇವುಗಳಲ್ಲಿ ಅತ್ಯಂತ ಗಮನಾರ್ಹವಾದದ್ದಾಗಿದೆ, ಇದು ವಿಶ್ವಸಂಸ್ಥೆಯ ಅನೇಕ ಅಂಗಗಳಿಂದ ದೂರ ಸರಿದಿದೆ, ಅಸಂಖ್ಯಾತ ಸಂಘರ್ಷಗಳು ಮತ್ತು ಮುಕ್ತ ಯುದ್ಧಗಳಲ್ಲಿ ಸಿಲುಕಿರುವ ಜಗತ್ತಿನಲ್ಲಿ ನಿಷ್ಪಕ್ಷಪಾತವಾಗಿ ವರ್ತಿಸಲು ಪ್ರಯತ್ನಿಸುತ್ತಿದೆ ಎಂದು ವಿಶ್ವಸಂಸ್ಥೆಯನ್ನು ಟೀಕಿಸಿದೆ.

ಅಮೆರಿಕವು ವಿಶ್ವಸಂಸ್ಥೆಯ ದೃಷ್ಟಿಕೋನಕ್ಕೆ ಬದ್ಧವಾಗಿ ಉಳಿದಿದ್ದರೆ, ಜಾಗತಿಕ ಸಂಸ್ಥೆಯ ಪ್ರಧಾನ ಕಚೇರಿಯು ನ್ಯೂಯಾರ್ಕ್‌ನಲ್ಲಿಯೇ ಮುಂದುವರಿಯಬೇಕು ಎನ್ನುವುದರಲ್ಲಿ ಸ್ವಲ್ಪ ಮಟ್ಟಿಗೆ ತರ್ಕವಿರುತ್ತಿತ್ತು. ಆದರೆ ಅದಕ್ಕೆ ತದ್ವಿರುದ್ಧವಾಗಿ, ವಿಶ್ವಸಂಸ್ಥೆಯನ್ನು ಮತ್ತು ಅದರ ಅಧೀನದಲ್ಲಿರುವ ನಾನಾ ವೇದಿಕೆಗಳನ್ನು ಅಮೆರಿಕವು ಉದ್ದೇಶಪೂರ್ವಕವಾಗಿ ಕಡೆಗಣಿಸಿದ ವಿವಾದಾತ್ಮಕ ದಾಖಲೆ ಕೂಡ ಇದೆ.

ಅಮೆರಿಕದ ಉಲ್ಲಂಘನೆ ಒಂದೆರಡಲ್ಲ

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅನುಮತಿ ಪಡೆಯದೆ ಇರಾಕ್ ಮೇಲೆ ಅಮೆರಿಕ ಏಕಾಏಕಿ ಆಕ್ರಮಣ ಮಾಡಿದ್ದು ಮತ್ತು ಇತ್ತೀಚೆಗೆ, ವಿಶ್ವಸಂಸ್ಥೆಯ ರಕ್ಷಣಾ ಮಂಡಳಿ (ಯುಎನ್‌ಎಸ್‌ಸಿ) ಮುಂಚಿತವಾಗಿ ಪರಿಗಣಿಸಲು ಅವಕಾಶ ನೀಡದೆ ಏಕಪಕ್ಷೀಯವಾಗಿ ಇರಾನ್‌ನೊಂದಿಗೆ ಯುದ್ಧವನ್ನು ಪ್ರಾರಂಭಿಸಿದ್ದು ಮುಂತಾದವು ಪ್ರಮುಖ ಉಲ್ಲಂಘನೆಗಳಲ್ಲಿ ಸೇರಿವೆ.

ದಶಕಗಳಿಂದಲೂ ಅಮೆರಿಕ ತನ್ನ ವಿಟೋ ಅಧಿಕಾರವನ್ನು ಬಳಸಿಕೊಂಡು, ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುವ ಹಲವಾರು ಕ್ರಮಗಳಿಗಾಗಿ ಭದ್ರತಾ ಮಂಡಳಿಯಿಂದ ಯಾವುದೇ ಖಂಡನೆ ಅಥವಾ ದಂಡನಾತ್ಮಕ ಕ್ರಮವನ್ನು ಎದುರಿಸದಂತೆ ಇಸ್ರೇಲ್‌ ನ್ನು ಸತತವಾಗಿ ರಕ್ಷಿಸಿಕೊಂಡು ಬಂದಿದೆ. 70,000 ಕ್ಕೂ ಹೆಚ್ಚು ಜನರನ್ನು ಹತ್ಯೆಗೈದ ಗಾಜಾದ ಮೇಲೆ ಇಸ್ರೇಲ್‌ನ ಇತ್ತೀಚಿನ ನರಮೇಧದ ದಾಳಿ ಮತ್ತು ಪಶ್ಚಿಮ ದಂಡೆಯಲ್ಲಿನ ವಸಾಹತುಶಾಹಿಗಳನ್ನು ಬಳಸಿಕೊಂಡು ಪ್ಯಾಲೆಸ್ತೀನ್ ನಿವಾಸಿಗಳ ಮೇಲೆ ನಡೆಯುತ್ತಿರುವ ದಾಳಿಯು ಯುಎನ್‌ಎಸ್‌ಸಿ ಮುಂದೆ ಪ್ರಸ್ತಾಪಿಸದಂತೆ ಅಮೆರಿಕವು ತಡೆದಿರುವ ಇತರ ಇತ್ತೀಚಿನ ಚಟುವಟಿಕೆಗಳಾಗಿವೆ.

ಟ್ರಂಪ್ ತಮ್ಮ ಎರಡನೇ ಅವಧಿಯಲ್ಲಿ, "ಅಮೆರಿಕದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸುತ್ತವೆ" ಎಂಬ ಕಾರಣಕ್ಕಾಗಿ ವಿಶ್ವಸಂಸ್ಥೆಯ ಅಧೀನದಲ್ಲಿ ಕೆಲಸ ಮಾಡುವ ಕನಿಷ್ಠ 31 ಏಜೆನ್ಸಿಗಳಿಂದ ಹಿಂದೆ ಸರಿಯುವಂತೆ ಮಾಡಿದ್ದಾರೆ. ಇವುಗಳಲ್ಲಿ ಉನ್ನತ ಮಟ್ಟದ ವಿಶ್ವಸಂಸ್ಥೆ ಹವಾಮಾನ ಬದಲಾವಣೆ ಚೌಕಟ್ಟು ಸಮಾವೇಶ (UNFCCC), ಅಂತರರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ (WHO), ಯುನೆಸ್ಕೋ (UNESCO) ಮತ್ತು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿ ಸೇರಿವೆ.

ಅಮೆರಿಕದ ಪ್ರಭಾವ ಯಾಕಿದೆ?

ಟ್ರಂಪ್ ಅವರು ವಿಶ್ವಸಂಸ್ಥೆ ಜೊತೆಗಿನ ಅಮೆರಿಕದ ಒಳಗೊಳ್ಳುವಿಕೆಯನ್ನು ಗಣನೀಯವಾಗಿ ತಗ್ಗಿಸಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗಿ ಕಾಣಿಸುತ್ತಿದೆ. ಇದರಿಂದಾಗಿ ಜಾಗತಿಕ ಸಂಸ್ಥೆಯು ತನ್ನ ಪ್ರಧಾನ ಕಚೇರಿಯ ಸ್ಥಳ ಸೇರಿದಂತೆ ಅಮೆರಿಕದೊಂದಿಗೆ ತನ್ನ ಸಂಬಂಧವನ್ನು ಮರುಪರಿಶೀಲಿಸುವುದು ಹೆಚ್ಚು ಸೂಕ್ತ ಎಂಬಂತೆ ಮಾಡಿದೆ. ಆದಾಗ್ಯೂ, ಇದನ್ನು ಹೇಳುವುದು ಸುಲಭ ಆದರೆ ಕಾರ್ಯರೂಪಕ್ಕೆ ತರುವುದು ಸುಲಭದ ಮಾತಲ್ಲ. ಬದಲಾವಣೆಗಾಗಿ ಮತ ಚಲಾಯಿಸಲು ದೇಶಗಳಿಗೆ ಕಷ್ಟವಾಗುತ್ತಿರುವ ಏಕೈಕ ಅಂಶವೆಂದರೆ ಅಮೆರಿಕದಿಂದ ವಿಶ್ವಸಂಸ್ಥೆಗೆ ಸಿಗುವ ನಿಧಿಯ ಮೊತ್ತ.

ಎರಡನೇ ಅವಧಿಗೆ ಟ್ರಂಪ್ ಅಧಿಕಾರಕ್ಕೆ ಮರಳುವ ಎರಡು ವರ್ಷಗಳಿಗೂ ಮೊದಲು, ವಿಶ್ವಸಂಸ್ಥೆಗೆ ಅಮೆರಿಕದ ಕೊಡುಗೆ 14 ಬಿಲಿಯನ್ ಡಾಲರ್ ಆಗಿತ್ತು, ಇದು ಯಾವುದೇ ಏಕೈಕ ದೇಶದ ಅತ್ಯಧಿಕ ದೇಣಿಗೆ.

ಟ್ರಂಪ್ ವಿಶ್ವಸಂಸ್ಥೆಯಲ್ಲಿ ಅಮೆರಿಕದ ಭಾಗವಹಿಸುವಿಕೆಯನ್ನು ಕಡಿತಗೊಳಿಸಿದಾಗಿನಿಂದ, ಅಮೆರಿಕವು ಜಾಗತಿಕ ಸಂಸ್ಥೆಗೆ ಸುಮಾರು ಐದು ಶತಕೋಟಿ ಡಾಲರ್ ಬಾಕಿ ಉಳಿಸಿಕೊಂಡಿದೆ. ಇದರಲ್ಲಿ ಸಾಮಾನ್ಯ ವಿಶ್ವಸಂಸ್ಥೆ ಬಜೆಟ್‌ಗೆ 2 ಬಿಲಿಯನ್ ಡಾಲರ್ ಮತ್ತು ಉಳಿದ ಹಣವು ಅದರ ಶಾಂತಿಪಾಲನಾ ಕಾರ್ಯಾಚರಣೆಗಳಿಗಾಗಿ ಸೇರಿದೆ. ಇದರಲ್ಲಿ, ಅವರ ಆಡಳಿತವು ಸಾಮಾನ್ಯ ಬಜೆಟ್‌ಗಾಗಿ 725 ದಶಲಕ್ಷ ಡಾಲರ್ ಮತ್ತು ಶಾಂತಿಪಾಲನೆಗಾಗಿ 285 ದಶಲಕ್ಷ ಡಾಲರ್ ಪಾವತಿಸಿದೆ ಎಂದು ವರದಿಯಾಗಿದೆ.

ವಿಶ್ವಸಂಸ್ಥೆಯನ್ನು ನ್ಯೂಯಾರ್ಕ್‌ನ ಹೊರಗಿನ ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸುವುದು ಕಾರ್ಯಸಾಧು ಹೌದೋ ಅಲ್ಲವೋ ಎಂಬುದು ಗಣನೀಯ ಅಂಶ ಅಲ್ಲದೇ ಇರಬಹುದು. ಆದರೆ ಇದು ಸೂಪರ್ ಪವರ್‌ಗೆ ತಕ್ಕ ಜಾಗ ತೋರಿಸಲು ಸಹಾಯ ಮಾಡುತ್ತದೆ ಮತ್ತು ಅಮೆರಿಕದ ಹೊರಗಿದ್ದರೂ ಕೂಡ ವಿಶ್ವಸಂಸ್ಥೆ ಚೆನ್ನಾಗಿ ಕೆಲಸ ಮಾಡಬಲ್ಲದು ಎಂಬುದನ್ನು ಸಾಬೀತುಪಡಿಸುತ್ತದೆ. ವಿಶ್ವಸಂಸ್ಥೆಯ ಕೇಂದ್ರ ಕಚೇರಿಯನ್ನು ಬದಲಾಯಿಸುವುದರಿಂದ, ಭದ್ರತಾ ಮಂಡಳಿಯ ಐದು ಕಾಯಂ ಸದಸ್ಯರ 'ವಿಟೋ' ಅಧಿಕಾರ ರದ್ದುಗೊಳಿಸುವುದು ಸೇರಿದಂತೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸುಧಾರಣಾ ಪ್ರಸ್ತಾಪಗಳಿಗೆ ಮತ್ತೆ ಚಾಲನೆ ಸಿಕ್ಕರೆ ಅಚ್ಚರಿಯಿಲ್ಲ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು 'ದ ಫೆಡರಲ್ ಕರ್ನಾಟಕ'ದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story