
ಪ್ಯಾಲೆಸ್ತೀನ್, ಮಹಾತ್ಮಾ ಗಾಂಧಿ ಮತ್ತು ಭಾರತದ ನ್ಯಾಯಾಂಗ
ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯನ್ನು ಖಂಡಿಸಿ ಸಿಪಿಎಂ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲು ಬಯಸಿತು. ಆದರೆ ಬಾಂಬ್ ಹೈಕೋರ್ಟ್ ಆ ಸಂಬಂಧದ ಮನವಿಯನ್ನು ತಳ್ಳಿಹಾಕಿತು. ಗಾಜಾ, ಪ್ಯಾಲೆಸ್ತೀನ್ ಸಂಬಂಧಿತ ಪ್ರತಿಭಟನೆಗಳು ದೇಶೀಯ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವಂತೆ ಮಾಡುತ್ತದೆ ಎಂದು ಹೇಳಿದೆ.
“ಪ್ಯಾಲೆಸ್ತೀನ್ ಸೇರಿದ್ದು ಅರಬರಿಗೆ, ಅದೇ ರೀತಿ ಇಂಗ್ಲಂಡ್ ಸೇರಿದ್ದು ಇಂಗ್ಲಿಷರಿಗೆ ಅಥವಾ ಫ್ರೆಂಚರಿಗೆ ಸೇರಿದ್ದು ಫ್ರಾನ್ಸ್,” 1938ರಲ್ಲಿ ಪ್ಯಾಲೆಸ್ತೀನ್ ನಲ್ಲಿ ಹಿಂಸಾಚಾರ ಭುಗಿಲೆದ್ದ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ಅವರು ಹೀಗೆಂದು ಬರೆದಿದ್ದರು. ಅದಾದ ಎಂಟು ವರ್ಷಗಳ ಬಳಿಕ ಯಹೂದಿಗಳ ಸಮುದಾಯದ ಬಗ್ಗೆ ಅನುಕಂಪವನ್ನು ವ್ಯಕ್ತಪಡಿಸಿದರೂ ಯಹೂದಿಗಳಿಂದ ಉಂಟಾದ ಹಿಂಸಾಚಾರವನ್ನು ಕಟುಮಾತುಗಳಲ್ಲಿ ಖಂಡಿಸಿದ್ದರು.
1862ರಿಂದ ಕಾರ್ಯನಿರ್ವಹಿಸುತ್ತಿರುವ ಬಾಂಬೆ ಹೈಕೋರ್ಟ್. ಸಾವಿರಾರರು ಮೈಲುಗಳಷ್ಟು ದೂರದಲ್ಲಿ ನಡೆಯುತ್ತಿರುವ ವಿಷಯಗಳಲ್ಲಿ ಮೂಗು ತೂರಿಸದಂತೆ ಮತ್ತು ಭಾರತದ ಸಮಸ್ಯೆಗಳ ಮೇಲೆ ಗಮನ ಹರಿಸುವಂತೆ ಗಾಂಧೀಜಿ ಅವರಿಗೆ ತಾಕೀತು ಮಾಡಲಿಲ್ಲ.
ಆದರೆ, ಇದೇ ನ್ಯಾಯಾಲಯವು ಜುಲೈ 25ರಂದು ಗಾಜಾ ಯುದ್ದದ ವಿರುದ್ಧ ಮುಂಬೈನಲ್ಲಿ ನಡೆಯಲಿರುವ ಪ್ರತಿಭಟನೆಗೆ ಅನುಮತಿ ಕೇಳಿ ಸಿಪಿಎಂ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದು ಮಾತ್ರವಲ್ಲದೆ ಪಕ್ಷವನ್ನು ಸಾರ್ವಜನಿಕವಾಗಿ ಉಗ್ರಪದಗಳಲ್ಲಿ ತರಾಟೆಗೆ ತೆಗೆದುಕೊಂಡಿತು.
ಗಾಜಾ ಪಟ್ಟಿ-ವಿದ್ವಂಸದ ಹಾದಿ
2023ರ ಅಕ್ಟೋಬರ್ ತಿಂಗಳಲ್ಲಿ ಹಮಾಸ್ ಎಸಗಿದ ದುಷ್ಕೃತ್ಯಗಳ ಬಳಿಕ ಇಸ್ರೇಲಿನ ಮಿಲಿಟರಿ ಸೇನಾ ಕಾರ್ಯಾಚರಣೆಯಿಂದ ಗಾಜಾ ಪಟ್ಟಿಯನ್ನು ನಾಶಗೊಳಿಸಿದೆ. ಅಲ್ಲಿ ಸಾವನ್ನಪ್ಪಿದ ಜನರ ಸಂಖ್ಯೆ 60 ಸಾವಿರವನ್ನೂ ದಾಟುತ್ತದೆ. ಗಾಯಗೊಂಡವರ ಸಂಖ್ಯೆಯೂ ಸಾವಿರಾರು. ಹಮಾಸ್ ತೀವ್ರ ಹೊಡೆತ ತಿಂದಿರಬಹುದು. ಆದರೆ ಅದು ತನ್ನ ಹೋರಾಟವನ್ನು ಕೊನೆಗೊಳಿಸಿಲ್ಲ.
ಹಮಾಸ್ ನಡೆಸಿದ ಈ ಭಯಾನಕ ದಾಳಿಗೆ ಬೆಲೆ ತೆತ್ತವರು ಪ್ಯಾಲೆಸ್ತೀನ್ ನಾಗರಿಕರು. ಹಮಾಸ್ ಸಂಘಟನೆ ದಾಳಿ ನಡೆಸುವುದಕ್ಕೂ ಮುನ್ನ ಅನುಮತಿಯನ್ನು ಪಡೆದುಕೊಂಡಿರಲಿಲ್ಲ. ಆ ದಾಳಿಯಲ್ಲಿ 1200ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು ಮತ್ತು ಕೆಲವು ವಿದೇಶಿಯರನ್ನೂ ಒಳಗೊಂಡಂತೆ 250ಕ್ಕೂ ಹೆಚ್ಚು ಮಂದಿ ಇಸ್ರೇಲಿಯರನ್ನು ಅಪಹರಿಸಿದ್ದರು.
ಅಭೂತಪೂರ್ವವಾದ ರೀತಿಯ ಮಾನವೀಯ ಬಿಕ್ಕಟ್ಟಿಗೆ ಕಾರಣವಾದ ಇಸ್ರೇಲ್ ಸೇನಾ ದೌರ್ಜನ್ಯಗಳ ವಿರುದ್ಧ ಜಗತ್ತಿನಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಪ್ಯಾಲೆಸ್ತೀನಿಯರನ್ನು ಹಸಿವಿನಿಂದ ಸಾಯಿಸುವ ಇರಾದೆಯಿಂದ ಇಸ್ರೇಲ್ ಆಹಾರ ಬಿಕ್ಕಟ್ಟನ್ನು ಸೃಷ್ಟಿಸಿತ್ತು.
ದೇಶದ ಸಮಸ್ಯೆ ಮೊದಲು ಎಂದ ಕೋರ್ಟ್
ಇಂತಹ ದುಸ್ಥಿತಿಯ ವಿರುದ್ಧ ಪ್ರತಿಭಟನೆಯನ್ನು ನಡೆಸುವ ಇರಾದೆಯನ್ನು ಸಿಪಿಎಂ ಹೊಂದಿತ್ತು. ಮಧ್ಯಪ್ರಾಚ್ಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭಾರತೀಯ ವಲಸಿಗರಿದ್ದು, ಭಾರತದ ಶೇ.40ರಷ್ಟು ಇಂಧನ ಅಗತ್ಯವನ್ನು ಅದು ಪೂರೈಸುತ್ತದೆ ಎಂಬುದನ್ನು ಪರಿಗಣಿಸಿ ಮುಂಬೈಗಷ್ಟೇ ಸೀಮಿತವಾದ ಸಾರ್ವಜನಿಕ ಪ್ರತಿಭಟನೆಯನ್ನು ನಡೆಸುವುದರಿಂದ ಭಾರತದ ಹಿತಾಸಕ್ತಿಗೇನೂ ಕುಂದಾಗುತ್ತಿರಲಿಲ್ಲ. ಹಾಗೇನಾದರೂ ಇದ್ದಿದ್ದರೆ ಅದು ಗಾಜಾದಲ್ಲಿನ ಭೀಕರ ಸಂಕಷ್ಟವನ್ನು ಖಂಡಿಸಲು ಭಾರತ ಸರ್ಕಾರ ನಿರಾಕರಿಸಿದ ಕಾರಣ ಅಲ್ಲಿನ ಬೀದಿಗಳಲ್ಲಿ ತೀವ್ರ ಅಸಮಾಧಾನ ಉಂಟಾಗಿರುವ ಪ್ರದೇಶಗಳಿಗೆ ಅದು ಸಕಾರಾತ್ಮಕ ಸಂದೇಶವನ್ನೇ ರವಾನೆ ಮಾಡುತ್ತಿತ್ತು. ಆದರೆ ಬಾಂಬೆ ಹೈಕೋರ್ಟ್ ಸಂಪೂರ್ಣ ಭಿನ್ನವಾಗಿ ಯೋಚಿಸಿದೆ.
ಸಿಪಿಎಂ ಸಲ್ಲಿಸಿದ ಮನವಿಯನ್ನು ತಳ್ಳಿಹಾಕಿದ ನ್ಯಾಯಮೂರ್ತಿ ರವೀಂದ್ರ ಘುಗೆ ಮತ್ತು ಗೌತಮ್ ಅಂಕಡ್ ಅವರು, ಗಾಜಾ ಮತ್ತು ಪ್ಯಾಲೆಸ್ತೀನ್ ಸ್ಥಿತಿಗೆ ಸಂಬಂಧಿಸಿದ ಪ್ರತಿಭಟನೆಗಳು, ನಿರುದ್ಯೋಗ ಮತ್ತು ಮೂಲಸೌಕರ್ಯ ಕೊರತೆಯಂತಹ ದೇಶೀಯ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವಂತೆ ಮಾಡುತ್ತದೆ ಎಂದು ಹೇಳಿದರು.
“ನಮ್ಮ ರಾಷ್ಟ್ರದಲ್ಲಿ ಪರಿಹರಿಸಬೇಕಾದ ಅನೇಕ ಸಮಸ್ಯೆಗಳಿವೆ. ನಮಗೆ ಈ ರೀತಿಯ ವಿಷಯಗಳು ಬೇಕಾಗಿಲ್ಲ. ನಿಮ್ಮ ದೂರದೃಷ್ಟಿ ಇಲ್ಲದ ಯೋಚನೆಗಳು ಎಂದು ಹೇಳಲು ನನಗೆ ವಿಷಾದವಿದೆ” ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.
“ಇಲ್ಲಿ ಏನು ನಡೆಯುತ್ತಿದೆಯೋ ಅದನ್ನು ನಿರ್ಲಕ್ಷಿಸಿ ನೀವು ಪ್ಯಾಲೆಸ್ತೀನ್ ಮತ್ತು ಗಾಜಾ ಕಡೆಗೆ ದೃಷ್ಟಿ ಹಾಯಿಸಿದ್ದೀರಿ. ನಿಮ್ಮ ಸ್ವಂತ ದೇಶಕ್ಕಾಗಿ ಯಾಕೆ ಏನನ್ನಾದರೂ ಮಾಡಬಾರದು? ಮೊದಲು ದೇಶಭಕ್ತರಾಗಿರಿ” ಎಂದು ಅವರು ಹೇಳಿದರು.
ಗಾಂಧಿ ಸಹಾನುಭೂತಿ
1938 ಅಥವಾ 1946ರಲ್ಲಿನ ಇದೇ ವಿದ್ಯಮಾನವನ್ನು ಊಹಿಸಿಕೊಳ್ಳಿ. ಆಗಲೂ ಪ್ಯಾಲೆಸ್ತೀನಿಯರ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಮತ್ತು ಪ್ಯಾಲೆಸ್ತೀನಿ ಅರಬರ ವಿರುದ್ಧ ದಾಳಿ ನಡೆಸಿದ ಯಹೂದ್ಯರನ್ನು ಯಾವುದೇ ಮುಲಾಜಿಲ್ಲದೆ ಖಂಡಿಸಿದ್ದ ಮಹಾತ್ಮಾ ಗಾಂಧಿ ಅವರ ಬಗ್ಗೆ ನ್ಯಾಯಾಧೀಶರು ಇದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರೆ? ಹೆಚ್ಚಾಗಿ ನಾಸ್ತಿಕರನ್ನೇ ಹೊಂದಿರುವ ಸಿಪಿಎಂಗೆ ಹೋಲಿಸಿದರೆ ಗಾಂಧಿ ಅವರು ಕಟ್ಟಾ ಹಿಂದೂ. ಆದರೆ ಪ್ಯಾಲೆಸ್ತೀನ್ ನಲ್ಲಿ ನಡೆಯುತ್ತಿರುವ ಹಿಂಸೆಯ ವಿಚಾರದಲ್ಲಿ ಮಾನವೀಯ ನಿಲುವನ್ನು ಹೊಂದಿದ್ದರು. ಬೃಹತ್ ಸಂಖ್ಯೆಯ ಪ್ಯಾಲೆಸ್ತೀನಿಯರನ್ನು ಹೊರಹಾಕಿದ ಬಳಿಕ ಅಮೆರಿಕ ಮತ್ತು ಬ್ರಿಟನ್ ನೆರವನ್ನು ಪಡೆದು ಪ್ಯಾಲೆಸ್ತೀನ್ ನ್ನು ತಮ್ಮ ತಾಯ್ನಾಡಾಗಿ ಪರಿವರ್ತಿಸಲು ಯಹೂದ್ಯರು ಬಯಸಿದ್ದರು.
ತಮ್ಮ ಧರ್ಮದ ಕಾರಣಕ್ಕೆ ಹಿಂಸೆಯನ್ನು ಅನುಭವಿಸಿದ್ದ ಮತ್ತು ಆ ಬಳಿಕ ಹಿಟ್ಲರ್ ನಿಂದ ನರಮೇಧಕ್ಕೆ ಒಳಗಾದ ಯಹೂದಿಗಳ ಬಗ್ಗೆ ಸಹಾನುಭೂತಿಯನ್ನು ವ್ಯಕ್ತಪಡಿಸಲು ಗಾಂಧೀಜಿ ಹಿಂಜರಿದಿರಲಿಲ್ಲ. “ಅವರು ಕ್ರೈಸ್ತ ಧರ್ಮದಿಂದ ಅಸ್ಪೃಶ್ಯತೆಗೆ ಗುರಿಯಾಗಿದ್ದರು. ಕ್ರೈಸ್ತರು ಅವರೊಂದಿಗೆ ನಡೆದುಕೊಂಡ ರೀತಿ ಮತ್ತು ಹಿಂದುಗಳು ಅಸ್ಪೃಶ್ಯರೊಂದಿಗೆ ನಡೆದುಕೊಂಡ ರೀತಿಯ ನಡುವೆ ಅತ್ಯಂತ ನಿಕಟವಾದ ಸಾದೃಶ್ಯತೆ ಇದೆ” ಎಂದು ಗಾಂಧಿ ಹರಿಜನ ಪತ್ರಿಕೆಯಲ್ಲಿ ಬರೆದಿದ್ದರು.
ಭಯೋತ್ಪಾದನೆ ಮಾರ್ಗ ಯಾಕೆ
ಆದರೆ, ಮಹಾತ್ಮಾ ಗಾಂಧಿ ಅವರು ಪ್ಯಾಲೇಸ್ತೀನಿಯರನ್ನು ತಮ್ಮ ಮೇಲೆ ಹೇರಿಕೊಂಡ ಯಹೂದ್ಯರನ್ನು ಟೀಕಿಸುವಲ್ಲಿಯೂ ಹಿಂದೆ ಬೀಳಲಿಲ್ಲ. ಅದಕ್ಕಾಗಿ ಯಹೂದ್ಯರ ಸೀದಾಸಾದಾ ಭಯೋತ್ಪಾದನೆಯ ಕಾರ್ಯವಿಧಾನವನ್ನು ಅವರು ಉಲ್ಲೇಖಿಸಿದ್ದರು. ಇಸ್ರೇಲ್ ಸ್ಥಾಪನೆಯಾಗುವುದಕ್ಕೂ ಎರಡು ವರ್ಷ ಮೊದಲು ಅಂದರೆ 1946ರಲ್ಲಿ ಯಹೂದ್ಯರ ಅಮೋಘ ಸಾಧನೆಯನ್ನು ಶ್ಲಾಘಿಸಿದ್ದ ಗಾಂಧಿ, “ಅವರು ಎದುರಿಸಿದ ಕಷ್ಟಗಳು ಅವರಿಗೆ ಶಾಂತಿಯ ಪಾಠವನ್ನು ಕಲಿಸುತ್ತವೆ ಎಂದು ಯಾರಾದರೂ ಯೋಚಿಸಬಹುದು. ಅವರು ಅನಪೇಕ್ಷಿತವಾದ ನಾಡಿನಲ್ಲಿ ಬಲವಂತಕ್ಕೆ ಮಣಿದು ಅಮೆರಿಕದ ಹಣ ಮತ್ತು ಬ್ರಿಟಿಷರ ಶಸ್ತ್ರಾಸ್ತ್ರಗಳನ್ನು ಅವಲಂಬಿಸಿರಬೇಕು? ಪ್ಯಾಲೆಸ್ತೀನ್ ನಲ್ಲಿ ಬಲವಂತದಿಂದ ಪ್ರವೇಶಪಡೆಯಲು ಯಾಕೆ ಅವರು ಭಯೋತ್ಪಾದನೆಯ ಮೊರೆ ಹೋಗಬೇಕು?” ಎಂದು ಕೇಳಿದ್ದರು.
ಬ್ರಿಟಿಷ್ ಭಾರತದಲ್ಲಿ ಮೇರೆ ಮೀರಿದ್ದ ಸಂಕಟಗಳು ಮತ್ತು 1947ರಲ್ಲಿ ಉಪಖಂಡವನ್ನು ವಿಭಜಿಸಲು ದಾರಿಮಾಡಿದ ಹಿಂದೂ-ಮುಸ್ಲಿಂ ಹಿಂಸಾಚಾರವು ಭುಗಿಲೆದ್ದ ಕಾಲಘಟ್ಟದಲ್ಲಿ ಗಾಂಧಿ ಅವರಿಗಿದ್ದ ವೇದನೆಯಾಗಿತ್ತು. ಜೊತೆಗೆ ಇದು ಎರಡನೇ ಜಾಗತಿಕ ಯುದ್ಧ ಮತ್ತು ಬಂಗಾಲದ ಭೀಕರ ಕ್ಷಾಮದ ನಡುವೆ ಸ್ವಾತಂತ್ರ್ಯ ಹೋರಾಟವು ಏರಿಳಿತವನ್ನು ಕಾಣುತ್ತಿದ್ದ ಸಮಯವೂ ಆಗಿತ್ತು. ಆದ್ದರಿಂದ ಪ್ಯಾಲೆಸ್ತೀನ್ ಮತ್ತು ಯಹೂದಿಗಳಿಗೆ ಸಂಬಂಧಿಸಿದ ವಿಷಯಗಳ ಕಡೆಗೆ ಸಮಯ ಮತ್ತು ಶಕ್ತಿಯನ್ನು ವ್ಯಯ ಮಾಡದೆ ಅವಿಭಜಿತ ಭಾರತದಲ್ಲಿ ನಡೆಯುತ್ತಿರುವ ವಿಷಯಗಳ ಕಡೆಗಷ್ಟೇ ಆಸಕ್ತಿವಹಿಸುವಂತೆ ಗಾಂಧಿಯವರಿಗೆ ಅಂದಿನ ನ್ಯಾಯಾಧೀಶರೊಬ್ಬರು ಸೂಚಿಸಿದ್ದರೆ ಏನಾಗುತ್ತಿತ್ತು ಎಂಬುದನ್ನು ಸಲ್ಪ ಯೋಚಿಸಿ!
ಗಮನಿಸಬೇಕಾದ ಹೋಲಿಕೆ
ಬಾಂಬೆ ಹೈಕೋರ್ಟ್ ಮೊನ್ನೆ ಮೊನ್ನೆ ಸಿಪಿಎಂ ಪಕ್ಷಕ್ಕೆ ಮಾಡಿದ ತಾಕೀತನ್ನು ಗಮನಿಸಿದರೆ ಈ ಹೋಲಿಕೆ ಮನಸ್ಸಿಗೆ ನಾಟುವಂತಿದೆ. ಗಾಜಾ ಹಿಂಸಾಚಾರದ ವಿಚಾರದಲ್ಲಿ ಬೀದಿಗಿಳಿದು ಪ್ರತಿಭಟನೆ ಮಾಡಲು ನೀಡಿದ್ದ ನಿರಾಕರಣೆ ಆಡಳಿತಾತ್ಮಕ ನಿರ್ಧಾರವಾಗಿದ್ದು, ಅದರಲ್ಲಿ ತಾವು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ನ್ಯಾಯಾಧೀಶರು ಹೇಳಬಹುದಿತ್ತು. ಅದೂ ಅಲ್ಲದೇ ಹೋಗಿದ್ದರೆ ಪೊಲೀಸರ ನಿಲುವನ್ನು ಬೆಂಬಲಿಸಲು ಸಮರ್ಪಕವಾದ ಕಾನೂನಿನ ಕಾರಣಗಳನ್ನು ಕೂಡ ಉಲ್ಲೇಖ ಮಾಡಬಹುದಿತ್ತು.
ಆದರೆ ಜಾಗತಿಕವಾಗಿ ಉಗ್ರ ಮಾತುಗಳಲ್ಲಿ ಖಂಡಿಸಲಾಗುತ್ತಿರುವ ಗಾಜಾ ನರಮೇಧವನ್ನು ಖಂಡಿಸಲು ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದಾರೆ ಎಂಬ ಕಾರಣಕ್ಕೆ ಭಾರತದ ಒಂದು ನೋಂದಾಯಿತ ರಾಜಕೀಯ ಪಕ್ಷಕ್ಕೆ ಅದು ‘ದೂರದೃಷ್ಟಿಯ ಕೊರತೆ’ಯನ್ನು ಹೊಂದಿದೆ ಹಾಗೂ ‘ದೇಶಭಕ್ತರಾಗಬೇಕು’ ಎಂದು ಹೇಳಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ.
ಇವೆಲ್ಲದರ ಪರಿಣಾಮವಾಗಿ, ಈ ಯಹೂದ್ಯರ ರಾಷ್ಟ್ರದಿಂದ ಇಸ್ರೇಲಿನ ದೀರ್ಘಕಾಲದ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ದೂರ ಸರಿಯಲು ಆರಂಭಿಸಿದ್ದರೂ ಕೂಡ, ಭಾರತದ ನಾಗರಿಕರು ಗಾಜಾದಂತಹ ಘೋರ ದುರಂತವನ್ನು ನಿರ್ಲಕ್ಷಿಸಬೇಕು ಎಂದು ನ್ಯಾಯಾಂಗವು ಹೇಳಿದಂತಾಗಿದೆ- ಗಾಂಧೀಜಿ ಹಾಗೆ ಹೇಳಿರದೇ ಇದ್ದರೂ ಕೂಡ.