
ನಮ್ಮ ಬೀದಿಗಳಿರುವುದು ಮನುಷ್ಯರ ನಡಿಗೆಗೆ, ಬೀಡಾಡಿ ನಾಯಿಗಳಿಗಲ್ಲ
ಬೀದಿ ನಾಯಿಗಳನ್ನು ಸಾಮೂಹಿಕ ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ, ಕಾರ್ಯಕರ್ತರನ್ನು ನೀತಿ ಮತ್ತು ಕಾನೂನುಗಳನ್ನು ರೂಪಿಸಲು ಬಿಡುವುದು ಸರಿಯಲ್ಲ. ಯಾಕೆಂದರೆ ಅವರು ಕೈಗೊಳ್ಳುವ ನಿಲುವುಗಳು ತೀವ್ರ ಸ್ವರೂಪದ್ದಾಗಿರುತ್ತವೆ.
ನಾಯಿಗಳು ನಮ್ಮ ಬೀದಿಗಳಿಗೆ ಸೇರಿದ್ದಲ್ಲ. ಅವುಗಳನ್ನು ಏನಿದ್ದರೂ ಅಪಾರ್ಟ್ಮೆಂಟ್-ಗಳು, ಮನೆ ಮತ್ತು ನಿಮ್ಮ ಕಂಪೌಂಡ್ ಒಳಗೆ ಸಾಕುಪ್ರಾಣಿಗಳಾಗಿ ಇಟ್ಟುಕೊಳ್ಳಬಹುದು, ಅವುಗಳಿಗೆ ಪಟ್ಟಿ ಹಾಕಬಹುದು ಅಥವಾ ಹಾಕದೇ ಇರಬಹುದು, ಆದರೆ ಇಂತಹ ನಾಯಿಗಳನ್ನು ಅವುಗಳ ಪಾಡಿಗೆ ಬದುಕಲು ಅಥವಾ ದಾನಿಗಳ ದಯೆಯನ್ನು ಅವಲಂಬಿಸಲು ರಸ್ತೆಗಳಲ್ಲಿ, ಬೀದಿಗಳಲ್ಲಿ ಕೈಬಿಡಬಾರದು. ಬೀದಿಗಳೇನಿದ್ದರೂ ಮನುಷ್ಯರು ನಡೆಯುವುದಕ್ಕಾಗಿ ಇವೆ; ಅವು ಬೀದಿ ಪ್ರಾಣಿಗಳ ಆವಾಸ ಸ್ಥಾನವಾಗಲಾರವು.
ಇದಕ್ಕಾಗಿಯೇ ಬೀದಿ ನಾಯಿಗಳನ್ನು ಸಾಮೂಹಿಕ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವ ಸುಪ್ರೀಂ ಕೋರ್ಟ್ನ ಮಹತ್ವದ ಆದೇಶದ ಬಗ್ಗೆ ಚರ್ಚೆ ಮತ್ತು ಸಂವಾದ ಆಗಬೇಕಿದೆ.
2025ರ ಏಪ್ರಿಲ್ ತಿಂಗಳಿನಲ್ಲಿ, ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಒಂದು ವರದಿ ಪ್ರಕಟಿಸಿತು. 2024ರಲ್ಲಿ ಭಾರತದಲ್ಲಿ ನಾಯಿ ಕಚ್ಚಿದ 37.15 ಲಕ್ಷ ಪ್ರಕರಣಗಳು ದಾಖಲಾಗಿವೆ ಎಂದು. ಹಿಂದಿನ ವರ್ಷ, ಅಂತಹ 30.52 ಲಕ್ಷ ಪ್ರಕರಣಗಳು ದಾಖಲಾಗಿದ್ದವು. ದೆಹಲಿಯಲ್ಲಿ ಈ ಸಂಖ್ಯೆ ಕ್ರಮವಾಗಿ 25,210 ಮತ್ತು 17,874 ಆಗಿದ್ದವು. ಈ ಮಾಹಿತಿಯನ್ನು ಇಂಟಿಗ್ರೇಟೆಡ್ ಡಿಸೀಸ್ ಸರ್ವೆಲೆನ್ಸ್ ಪ್ರೋಗ್ರಾಮ್ನಿಂದ (IDSP) ಪಡೆಯಲಾಗಿದೆ. ಇದರಲ್ಲಿ 2024 ರಲ್ಲಿ ರೇಬಿಸ್ನಿಂದ 54 ಮತ್ತು 2022 ರಲ್ಲಿ 50 ಸಾವು ಸಂಭವಿಸಿದ ಬಗ್ಗೆ ವರದಿಯಾಗಿವೆ.
ಪ್ರಾಣಿ ಜನನ ನಿಯಂತ್ರಣ (ABC) ನಿಯಮಗಳು
ದೇಶದಲ್ಲಿನ ನಾಯಿಗಳ ಸಂಖ್ಯೆಯ ಬಗ್ಗೆ ಭಾರತದ ಪ್ರಾಣಿ ಕಲ್ಯಾಣ ಮಂಡಳಿ (AWBI) ಯಾವುದೇ ದತ್ತಾಂಶವನ್ನು ಹೊಂದಿಲ್ಲ. ಎಷ್ಟು ಶೇಕಡಾ ಪ್ರಮಾಣದ ನಾಯಿಗಳಿಗೆ ಸಂತಾನಹರಣ ಮತ್ತು ಲಸಿಕೆ ಹಾಕಲಾಗಿದೆ ಎಂಬ ಮಾಹಿತಿಯೂ ಅವರ ಬಳಿ ಇಲ್ಲ. 2023ರಲ್ಲಿ ಪರಿಷ್ಕರಿಸಲಾದ 2001ರ ಪ್ರಾಣಿ ಜನನ ನಿಯಂತ್ರಣ (ABC) ನಿಯಮಗಳ ಅಡಿಯಲ್ಲಿ, ಇದನ್ನು ವಾಸಿಯಾಗದಷ್ಟು ಅಸ್ವಸ್ಥಗೊಂಡ (ರೇಬಿಸ್ ಸೇರಿದಂತೆ) ಅಥವಾ ಮಾರಣಾಂತಿಕವಾಗಿ ಗಾಯಗೊಂಡ ನಾಯಿಗಳನ್ನು ಮಾತ್ರ ಸೋಡಿಯಂ ಪೆಂಟೋಬಾರ್ಬಿಟಲ್ನಂತಹ ಇಂಜೆಕ್ಷನ್ ಅಥವಾ ಪಶುವೈದ್ಯರು ಅನುಮೋದಿಸಿದ ಇತರ ಮಾನವೀಯ ರೀತಿಯಲ್ಲಿ ದಯಾಮರಣಕ್ಕೆ ಒಳಪಡಿಸಬಹುದು. ಅವುಗಳನ್ನು ಕೊಲ್ಲುವಂತಿಲ್ಲ.
ಕರ್ನಾಟಕ, ಮಹಾರಾಷ್ಟ್ರ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ಹೈಕೋರ್ಟ್-ಗಳು ಜನರ ಸುರಕ್ಷತೆಗಾಗಿ ಬೀದಿ ನಾಯಿಗಳನ್ನು ಕೊಲ್ಲುವ ಅಧಿಕಾರವನ್ನು ಪುರಸಭೆ, ನಿಗಮಗಳಿಗೆ ಮರುಸ್ಥಾಪನೆ ಮಾಡಿದ್ದರೂ, ಸುಪ್ರೀಂ ಕೋರ್ಟ್ ಅವುಗಳ ಆದೇಶಗಳಿಗೆ ತಡೆಯಾಜ್ಞೆ ನೀಡಿದೆ. ಬೀದಿ ನಾಯಿಗಳನ್ನು ಸಂತಾನಹರಣ ಮತ್ತು ಲಸಿಕೆ ಹಾಕುವುದಕ್ಕಾಗಿ (ರೇಬಿಸ್ ತಡೆಯಲು) ಹಿಡಿಯಬಹುದು, ಆ ಬಳಿಕ ಅವುಗಳನ್ನು ಹಿಡಿದ ಸ್ಥಳಕ್ಕೇ ಮರಳಿ ಬಿಡಬೇಕು. ಈ ನಿಯಮಗಳು ಸ್ಥಳೀಯ ಸಂಸ್ಥೆಗಳ ಅಥವಾ ಅಪಾರ್ಟ್ಮೆಂಟ್ ನಿವಾಸಿಗಳ ಸಂಘದ ಪ್ರತಿನಿಧಿಗಳು "ಸಮುದಾಯ" ನಾಯಿಗಳಿಗೆ ಆಹಾರ ನೀಡುವಂತೆ ಅಥವಾ ಆಹಾರ ನೀಡಲು ಬಯಸುವವರಿಗೆ ಪ್ರದೇಶಗಳನ್ನು ನಿಗದಿಪಡಿಸಲು ಹೇಳುತ್ತವೆ.
ಬೀದಿ ನಾಯಿಗಳ ಹಾವಳಿ
ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ಸಲಹಾ ಸಂಪಾದಕಿ ಕೂಮಿ ಕಪೂರ್, ಅವರು ಜುಲೈ 2020 ರಲ್ಲಿ ಬೀದಿ ನಾಯಿಗಳ ಹೆಚ್ಚುತ್ತಿರುವ ಹಾವಳಿಯ ಬಗ್ಗೆ ವಿವರವಾದ ಲೇಖನವನ್ನು ಬರೆದರು. ಇದಕ್ಕೆ ಅವರು ಪ್ರಾಣಿ ಹಕ್ಕುಗಳ ಕಾರ್ಯಕರ್ತರು ತೋರುವ ಮೃದು ಧೋರಣೆಯೇ ಕಾರಣ ಎಂದು ಹೇಳಿದರು. ಒಂದು ಹುಚ್ಚು ನಾಯಿ ತನ್ನನ್ನು ಕಚ್ಚಿದೆ ಎಂದೂ ಅವರು ಹೇಳಿದರು. ಅದು ಈ ಹಿಂದೆ ಮೂರು ವರ್ಷದ ಮಗು, ಎರಡು ಸಾಕು ನಾಯಿಗಳು ಮತ್ತು ಒಬ್ಬ ಭದ್ರತಾ ಸಿಬ್ಬಂದಿಗೂ ಕಚ್ಚಿತ್ತು. 270 ನಿವಾಸಿಗಳಿರುವ ತಮ್ಮ ದೆಹಲಿಯ ಪ್ರದೇಶದಲ್ಲಿ ನಾಯಿಗಳಿಗೆ 33 ಆಹಾರ ಒದಗಿಸುವ ತಾಣಗಳಿದ್ದವು, ಮತ್ತು ಕಾರ್ಯಕರ್ತರು ಅವುಗಳ ಸಂಖ್ಯೆಯನ್ನು 10ಕ್ಕೆ ಇಳಿಸಲು ಒಪ್ಪುತ್ತಿಲ್ಲ ಎಂದು ಅವರು ತಿಳಿಸಿದ್ದರು.
COVID-19ರ ಸಾಂಕ್ರಾಮಿಕ ರೋಗದ ಸಂದರ್ಭದ ಲಾಕ್‌ಡೌನ್‌ನಿಂದಾಗಿ ಆಹಾರದ ಸಾಮಾನ್ಯ ಪಾಲು ಸಿಗದೆ ಕಿರಿಕಿರಿಗೆ ಒಳಗಾದ ನಾಯಿಗಳು ವೃದ್ಧರನ್ನು ಕಚ್ಚಿದ್ದವು. ಬೀದಿ ನಾಯಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಕೋಲು ಹಿಡಿದು ಹೋಗುತ್ತಿದ್ದವರನ್ನು ಹೆದರಿಸುವವರು ಎಂದು ಕಾರ್ಯಕರ್ತರು ನೋಡುತ್ತಿದ್ದರು ಅಥವಾ ಪ್ರಚೋದನಕಾರಿಯಾಗಿ ಅವುಗಳ ದಾರಿಗೆ ಅಡ್ಡ ಬರುತ್ತಿದ್ದಾರೆ ಎಂದು ಭಾವಿಸುತ್ತಿದ್ದರು.
ಹಸಿದ ನಾಯಿ ಅಪಾಯಕಾರಿ
ಆ ಲೇಖನದ ನಂತರ, ಮಾಜಿ ಸಂಪಾದಕ ಮತ್ತು AWBI ಸಂಸ್ಥೆಯ ಮಾಜಿ ಸದಸ್ಯ ಹಿರಣ್ಮಯ್ ಕರ್ಲೆಕರ್, ಸಂತಾನಹರಣವನ್ನು ಬೆಂಬಲಿಸಿ ಒಂದು ಪ್ರತ್ಯುತ್ತರವನ್ನು ಬರೆದರು. ಇದು ಹೆಣ್ಣು ನಾಯಿಗಳಲ್ಲಿ ಆಕ್ರಮಣಶೀಲತೆಗೆ ಎರಡು ಪ್ರಮುಖ ಕಾರಣಗಳನ್ನು ನಿವಾರಿಸುತ್ತದೆ: ಗರ್ಭ ಧಾರಣೆ ಚಕ್ರಗಳು ಮತ್ತು ಮರಿಗಳ ಆರೈಕೆ. ಮೂರನೇ ಕಾರಣ ಹಸಿವು ಎಂದು ಅವರು ಹೇಳುತ್ತಾರೆ. “ಬೀದಿ ನಾಯಿಗಳಿಗೆ ಆಹಾರ ನೀಡುವುದು ಮುಖ್ಯ, ಹಸಿದ ನಾಯಿಗಿಂತ ಹೊಟ್ಟೆ ತುಂಬಿದ ನಾಯಿ ಹೆಚ್ಚು ಆಕ್ರಮಣಶೀಲತೆಯನ್ನು ಹೊಂದಿರುತ್ತದೆ”
ನಾಯಿಗಳು ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿರುವ ಕಾರಣ ಮತ್ತು ಇತರ ನಾಯಿಗಳನ್ನು ತಮ್ಮ ಪ್ರದೇಶಕ್ಕೆ ಪ್ರವೇಶಿಸಲು ಬಿಡದ ಕಾರಣ ಆಹಾರ ವಿತರಣೆ ಅಗತ್ಯ ಎಂದು ಅವರು ಹೇಳುತ್ತಾರೆ. (ಅವರು ಹೇಳದೇ ಇರುವ ವಿಷಯವೆಂದರೆ ಒಂದು ಪ್ರದೇಶಕ್ಕೆ ಒಳಪಟ್ಟ ನಾಯಿಗಳು ಮನುಷ್ಯರ ಜೊತೆಗೂ ಪ್ರಾಣಿಗಳಂತೆ ವರ್ತಿಸಬಹುದು.)
ಕಡಿಮೆ ಆಕ್ರಮಣಶೀಲವಾಗಿರುವ ಸಾಧ್ಯತೆ ಇದೆ ಎಂದ ಮಾತ್ರಕ್ಕೆ ಅವು ಆಕ್ರಮಣಶೀಲವಾಗಿರುವುದೇ ಇಲ್ಲ ಎಂದಲ್ಲ. ಜೊತೆಗೆ ಬೀದಿ ನಾಯಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ದಯೆ ತೋರದೇ ಹೋದರೆ ಹಸಿವು ಅವುಗಳನ್ನು ಕಾಡುತ್ತದೆ. ಬೀದಿಗಳು ನಾಯಿಗಳಿಗೂ ಸುರಕ್ಷಿತವಲ್ಲ. ಅವು ಯಾವುದೇ ಸಂದರ್ಭದಲ್ಲಿ ಸಾಯಬಹುದು ಅಥವಾ ಗಾಯಗೊಂಡು ಅಂಗವಿಕಲವಾಗಬಹುದು. ಅಂಗವಿಕಲ ಪ್ರಾಣಿಗಳಿಗೆ ತಮ್ಮ ಆರೈಕೆ ಮಾಡಿಕೊಳ್ಳಲು ಕಷ್ಟವಾಗಬಹುದು.
ಸಂತಾನಹರಣ ಬೀರಿದ ಪರಿಣಾಮ
ದೇಶದ ಪ್ರಾಣಿ ಹಕ್ಕುಗಳ ನೀತಿ ಮತ್ತು ಕಾನೂನುಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮೇನಕಾ ಗಾಂಧಿ ಕೂಡ ಸ್ಪಷ್ಟನೆ ನೀಡಿದ್ದಾರೆ. ಅವರು ಯಾವುದೇ ಮೂಲವನ್ನು ಉಲ್ಲೇಖಿಸದೆ, 1980ರಲ್ಲಿ ದೆಹಲಿಯಲ್ಲಿ 8 ಲಕ್ಷ ನಾಯಿಗಳಿದ್ದವು ಮತ್ತು 1987ರಲ್ಲಿ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ನಡೆಸಿದ ಸಮೀಕ್ಷೆಯ ಪ್ರಕಾರ, ವ್ಯಾಪಕ ಹತ್ಯೆಯ ಹೊರತಾಗಿಯೂ ಅವುಗಳ ಸಂಖ್ಯೆ 8 ಲಕ್ಷದಲ್ಲಿಯೇ ಉಳಿದಿದೆ ಎಂದು ಹೇಳಿದ್ದರು. ಹೆಚ್ಚು ನಾಯಿಗಳನ್ನು ಕೊಂದಾಗ, ನಾಯಿ ಕಚ್ಚುವ ಪ್ರಕರಣ ಕೂಡ ಹೆಚ್ಚಾಗಿದೆ ಎನ್ನುವ ಮೂಲಕ ಸಮೀಕ್ಷೆಯತ್ತ ಅವರು ಬೊಟ್ಟು ಮಾಡಿದ್ದಾರೆ (ಇದಕ್ಕೆ ಕಾರಣವನ್ನು ವಿವರಿಸಿಲ್ಲ).
ದೆಹಲಿಯಲ್ಲಿ ಒಂದು ಲಕ್ಷ ನಾಯಿಗಳಿವೆ ಎಂದು ಆ 2020ರ ಇಂಡಿಯನ್ ಎಕ್ಸ್‌ಪ್ರೆಸ್ ಲೇಖನದಲ್ಲಿ ತಿಳಿಸಲಾಗಿತ್ತು. (ಇದಕ್ಕೂ ಮೂಲ ಉಲ್ಲೇಖಿಸಿಲ್ಲ), ಇದು ಸಂತಾನಹರಣ ಪರಿಣಾಮ ಬೀರಿದೆ ಎಂಬುದನ್ನು ಸೂಚಿಸುತ್ತದೆ. ಆದರೆ ಈಗ, ಸುಪ್ರೀಂ ಕೋರ್ಟ್ ಆದೇಶದ ನಂತರ, ದೆಹಲಿಯಲ್ಲಿ ಅವುಗಳ ಸಂಖ್ಯೆ 3 ಲಕ್ಷ ಎಂದು ಅವರು ಹೇಳಿಕೊಂಡಿದ್ದಾರೆ. ಈ ಸಂಖ್ಯೆಗಳು ಏಕಾಏಕಿ ಹೇಗೆ ಹೆಚ್ಚಾದವು? ದೆಹಲಿಯಲ್ಲಿ ನಾಯಿ ಕಚ್ಚುವ ಪ್ರಕರಣಗಳು ವರ್ಷಕ್ಕೆ 72,000ದಿಂದ 12,000ಕ್ಕೆ ಇಳಿದಿವೆ ಎಂದು ಮೇನಕಾ ಹೇಳಿದ್ದರು. ಇದಕ್ಕೆ ಕಾರಣ, ಬೀದಿ ನಾಯಿಗಳಲ್ಲ, ಆದರೆ ತಮ್ಮ ಮಾಲೀಕರನ್ನು ರಕ್ಷಿಸಲು ಬಯಸುವ "ವಿದೇಶಿ ಸಾಕುಪ್ರಾಣಿಗಳು" ಎಂದು ಅವರು ವಾದಿಸುತ್ತಾರೆ.
ಬೀದಿ ನಾಯಿಗಳನ್ನು ಬೀದಿಗಳಿಂದ ಆಶ್ರಯತಾಣಗಳಿಗೆ ಸ್ಥಳಾಂತರಿಸಲು ಸುಪ್ರೀಂ ಕೋರ್ಟ್ ನೀಡಿರುವ ಆದೇಶವು ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ ಎಂಬ ಮೇನಕಾ ಅವರ ವಾದ ಸರಿಯಿದೆ. ಆ ಆಶ್ರಯ ತಾಣಗಳ ನಿರ್ಮಾಣ, ಅವುಗಳನ್ನು ಆರೋಗ್ಯಪೂರ್ಣವಾಗಿ ಇಡುವುದು ಮತ್ತು ನಾಯಿಗಳಿಗೆ ಆಹಾರ ನೀಡುವುದರಿಂದ ಸಂಪನ್ಮೂಲ ವ್ಯರ್ಥವಾಗಲಿದೆ. ವನ್ಯಜೀವಿಗಳನ್ನು ರೈತರಿಗೆ ಕಂಟಕವಾದಾಗ ಅವುಗಳನ್ನು ಕೀಟಗಳೆಂದು ಘೋಷಿಸಿ ಕೊಲ್ಲುವಂತೆ, ನಿಗದಿತ ಅವಧಿಯಲ್ಲಿ ಆರೈಕೆದಾರರನ್ನು ಕಾಣದ ಬೀದಿ ನಾಯಿಗಳನ್ನು ಕೊಲ್ಲಲು ಪುರಸಭೆಗಳು ಮತ್ತೆ ಅಧಿಕಾರವನ್ನು ಪಡೆಯಬೇಕು.
ವಿವೇಕಯುತ ನೀತಿ ನಿರೂಪಣೆ: ಕಾರ್ಯಕರ್ತರು ತೀವ್ರವಾದ ನಿಲುವುಗಳನ್ನು ತೆಗೆದುಕೊಳ್ಳುವುದರಿಂದ, ನೀತಿಗಳು ಮತ್ತು ಕಾನೂನುಗಳನ್ನು ರೂಪಿಸಲು ಅವರಿಗೆ ಅನುಮತಿ ನೀಡುವುದು ವಿವೇಕಯುತವಲ್ಲ. ಇದು 2017ರ ಮೇ ತಿಂಗಳಲ್ಲಿ ಅಧಿಸೂಚನೆ ಹೊರಡಿಸಿದ ಜಾನುವಾರು ಮಾರುಕಟ್ಟೆ ನಿಯಮಗಳನ್ನು ನೆನಪಿಸುತ್ತದೆ. ಆ ನಿಯಮಗಳ ಪ್ರಕಾರ ಯಾವುದೇ ಹೊಸ ಪ್ರಾಣಿ ಮಾರುಕಟ್ಟೆಯು ಮುಚ್ಚಿದ ಪ್ರದೇಶವಾಗಿರಬೇಕು. ಅವುಗಳಿಗೆ ಸಾಕಷ್ಟು ಆಹಾರ ಪೂರೈಕೆ ಮಾಡಲು ಮತ್ತು ಸಂಗ್ರಹಣಾ ಸ್ಥಳವಿರಬೇಕು. ಹತ್ತಾರು ನಳ್ಳಿ ಮತ್ತು ತೊಟ್ಟಿಗಳ ಮೂಲಕ ನೀರಿನ ಪೂರೈಕೆ ಖಚಿತಪಡಿಸಬೇಕು. ನೆಲಹಾಸು ಜಾರುವಂತಿರಬಾರದು. ಪ್ರಾಣಿಗಳು ಮಲಗಲು ಮತ್ತು ಹೊರಳಾಡಲು ಸಾಕಷ್ಟು ಸ್ಥಳಾವಕಾಶ ಕಲ್ಪಿಸಿರಬೇಕು. ಅನಾರೋಗ್ಯಕ್ಕೆ ಒಳಗಾದ ಪ್ರಾಣಿಗಳನ್ನು ಪ್ರತ್ಯೇಕವಾಗಿ ಇರಿಸಬೇಕು. ಸತ್ತ ಪ್ರಾಣಿಗಳನ್ನು ವಿಲೇವಾರಿ ಮಾಡಲು ಜಾಗ ಮತ್ತು ಸಗಣಿ ಮತ್ತು ಮೂತ್ರವನ್ನು ಹೊರಹಾಕಲು ಸೌಲಭ್ಯಗಳು ಇರಬೇಕು.
ಇವು ಜಾನುವಾರು ಮಾರುಕಟ್ಟೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಅರಿವೇ ಇಲ್ಲದವರು ಮಾಡಿದ ನಿಯಮಗಳಾಗಿವೆ. ಜಾನುವಾರುಗಳನ್ನು ರಾತ್ರಿಯಲ್ಲಿ ತರುವ ದೊಡ್ಡ ಮೈದಾನಗಳಿವು. ವ್ಯಾಪಾರ ಆರಂಭವಾಗುವುದು ಮುಂಜಾನೆಯ ವೇಳೆಗೆ. ಮತ್ತು ಮಧ್ಯಾಹ್ನದ ವೇಳೆಗೆ ವಹಿವಾಟುಗಳು ಮುಗಿದೇ ಹೋಗುತ್ತವೆ.
2017ರಲ್ಲಿ ಅಧಿಸೂಚನೆ ಹೊರಡಿಸಲಾದ ಜಾನುವಾರು ವ್ಯಾಪಾರಕ್ಕೆ ಸಂಬಂಧಿಸಿದ ನಿಯಮಗಳಿಗೆ ವ್ಯಾಪಕ ದಾಖಲೆಗಳ ಅಗತ್ಯವಿತ್ತು. ಜಾನುವಾರು ಮಾರಾಟ ಮಾಡುವ ವ್ಯಕ್ತಿಯು ಮಾಲೀಕರ ಹೆಸರು, ವಿಳಾಸ ಮತ್ತು ಫೋಟೋ ಐಡಿ, ಹಾಗೂ ಪ್ರಾಣಿಗಳ ವಿವರಗಳನ್ನು ಒದಗಿಸಬೇಕಿತ್ತು. ಮಾರಾಟಗಾರ ಗುರುತಿನ ಪುರಾವೆ ಮತ್ತು ತಾನು ಕೃಷಿಕನೆಂದು ಸಾಬೀತುಪಡಿಸುವ ಆದಾಯದ ದಾಖಲೆಯನ್ನು ಒದಗಿಸಬೇಕಿತ್ತು. ಖರೀದಿದಾರ ಮತ್ತು ಮಾರಾಟಗಾರ ಇಬ್ಬರೂ ಪ್ರಾಣಿಗಳು ಹತ್ಯೆಗಾಗಿ ಅಲ್ಲ ಎಂದು ಒಪ್ಪಿಕೊಳ್ಳಬೇಕಿತ್ತು. ಮಾರಾಟದ ಪುರಾವೆಯ ಐದು ಪ್ರತಿಗಳನ್ನು ವಿವಿಧ ಅಧಿಕಾರಿಗಳಿಗೆ ಸಲ್ಲಿಸಬೇಕಿತ್ತು. ಅವರು ಮತ್ತು ಮಾರಾಟಗಾರರು ಆರು ತಿಂಗಳ ಕಾಲ ದಾಖಲೆಗಳನ್ನು ಇಟ್ಟುಕೊಳ್ಳಬೇಕಾದ ಅಗತ್ಯವಿತ್ತು.
ಸಾಮಾನ್ಯ ಜ್ಞಾನದ ಅರಿವೇ ಇಲ್ಲದ ನಿಯಮಗಳು
ಆ ನಿಯಮಗಳು ಕಾರ್ಯಸಾಧುವಾಗಿರಲಿಲ್ಲ, ಹಾಗಾಗಿ ಅಧಿಸೂಚನೆ ಹೊರಡಿಸಿದ ಕೆಲವೇ ದಿನಗಳಲ್ಲಿ ಅವುಗಳನ್ನು ಹಿಂದಕ್ಕೆ ಪಡೆಯಲಾಯಿತು.
ಕಾನೂನು ರಚನೆ ಮಾಡುವವರು ನಾನಾ ಭಾಗಗಳಿಂದ ಅಭಿಪ್ರಾಯಗಳನ್ನು ಕಲೆಹಾಕಬೇಕು. ಕನಿಷ್ಠ ಸಾಮಾನ್ಯ ಜ್ಞಾನದ ನಿರ್ಧಾರಗಳನ್ನು ತೆಗೆದುಕೊಳ್ಳುವ ವಿವೇಕವಿರಬೇಕು. ಇಂತಹ ನೀತಿ-ರಚನೆಗೆ ನಾವು ಮರಳಬೇಕಾಗಿದೆ. ಇಂತಹ ಮಹತ್ವದ ಕಾರ್ಯವನ್ನು ಕಾರ್ಯಕರ್ತರಿಗೆ ಹೊರಗುತ್ತಿಗೆ ನೀಡಲು ಸಾಧ್ಯವಿಲ್ಲ. ಮೂಲಭೂತವಾದಿಗಳು ಕಾನೂನು ಮಾಡಲು ಕೈಹಾಕಿದಾಗ ಅವು ದಬ್ಬಾಳಿಕೆಯ ಸ್ವರೂಪ ತಾಳುವುದು ನಿಶ್ಚಿತ.
(ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ದ ಫೆಡರಲ್‌ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ.)