ಪೂಜಾ ಖೇಡ್ಕರ್ ಯಾರು? ನೇಮಕಾತಿ ಪ್ರಕ್ರಿಯೆಯಲ್ಲಿ ಯುಪಿಎಸ್‌ಸಿ ಎಡವಿತೇ?
x

ಪೂಜಾ ಖೇಡ್ಕರ್ ಯಾರು? ನೇಮಕಾತಿ ಪ್ರಕ್ರಿಯೆಯಲ್ಲಿ ಯುಪಿಎಸ್‌ಸಿ ಎಡವಿತೇ?

ತನ್ನ ಖಾಸಗಿ ಐಷಾರಾಮಿ ಕಾರಿಗೆ ತಾರಸಿಯ ದೀಪವನ್ನೂ, ಸರ್ಕಾರಿ ವಾಹನವೆಂಬ ಬರಹವನ್ನೂ ಹಾಕಿಕೊಂಡು ತನಗೆ ಎಲ್ಲ ರೀತಿಯ ಸವಲತ್ತುಗಳೂ ಮತ್ತು ರಾಜಮರ್ಯಾದೆಯೂ ಬೇಕೆಂದು ಗದ್ದಲವೆಬ್ಬಿಸಿ ದೇಶಾದ್ಯಂತ ಸುದ್ದಿ ಮಾಡಿದ ಮಹಾರಾಷ್ಟ್ರ ಕೇಡರ್‌ನ ಐ.ಎ.ಎಸ್ ಪ್ರಶಿಕ್ಷಣಾರ್ಥಿ ಡಾ. ಪೂಜಾ ಖೇಡ್ಕರ್‌ಳ ಪ್ರಕರಣವು ದೇಶದ ಹಿರಿಯ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ಬಗ್ಗೆಯೇ ಸಾರ್ವಜನಿಕರಲ್ಲಿ ಅನುಮಾನ ತರಿಸಿದೆ.


ತನ್ನ ಖಾಸಗಿ ಐಷಾರಾಮಿ ಕಾರಿಗೆ ತಾರಸಿಯ ದೀಪವನ್ನೂ, ಸರ್ಕಾರಿ ವಾಹನವೆಂಬ ಬರಹವನ್ನೂ ಹಾಕಿಕೊಂಡು ತನಗೆ ಎಲ್ಲ ರೀತಿಯ ಸವಲತ್ತುಗಳೂ ಮತ್ತು ರಾಜಮರ್ಯಾದೆಯೂ ಬೇಕೆಂದು ಗದ್ದಲವೆಬ್ಬಿಸಿ ದೇಶಾದ್ಯಂತ ಸುದ್ದಿ ಮಾಡಿದ ಮಹಾರಾಷ್ಟ್ರ ಕೇಡರ್‌ನ ಐ.ಎ.ಎಸ್ ಪ್ರಶಿಕ್ಷಣಾರ್ಥಿ ಡಾ. ಪೂಜಾ ಖೇಡ್ಕರ್‌ಳ ಪ್ರಕರಣವು ದೇಶದ ಹಿರಿಯ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ಬಗ್ಗೆಯೇ ಸಾರ್ವಜನಿಕರಲ್ಲಿ ಅನುಮಾನ ತರಿಸಿದೆ.

ಈ ಪ್ರಕರಣದ ಬೆನ್ನಲ್ಲೇ ಯು.ಪಿ.ಎಸ್.ಸಿ ಅಧ್ಯಕ್ಷ ಮನೋಜ್ ಸೋನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸುದ್ದಿ ಈ ಅನುಮಾನಕ್ಕೆ ರೆಕ್ಕೆಪುಕ್ಕ ಕಟ್ಟಿದೆ.

ಮಹಾರಾಷ್ಟ್ರ ರಾಜ್ಯದ ಪೂಜಾ ಖೇಡ್ಕರ್ ತಾನು ಅಲೆಮಾರಿ ಜನಾಂಗವೊಂದಕ್ಕೆ ಸೇರಿರುವುದಾಗಿ ಹೇಳಿಕೊಂಡು ಪುಣೆಯ ವೈದ್ಯಕೀಯ ಕಾಲೇಜೊಂದರಲ್ಲಿ ಪ್ರವೇಶವನ್ನು ಗಳಿಸಿ ಎಂ.ಬಿ.ಬಿ.ಎಸ್ ಪದವಿ ಪಡೆದಿದ್ದಾಳೆ. ಆಕೆಯ ತಂದೆ ದಿಲೀಪ್ರಾವ್ ಖೇಡ್ಕರ್ ಮಹಾರಾಷ್ಟ್ರಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಯಾಗಿ ನಿವೃತ್ತಿ ಹೊಂದಿದ್ದು ಆಕೆಯ ತಾಯಿ ಸಣ್ಣದೊಂದು ಉದ್ದಿಮೆ ನಡೆಸುತ್ತಿದ್ದಾರೆ. ಪದವಿಯ ನಂತರ ಪೂಜಾ ತಾನು ಇತರೆ ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಯೆಂದು ಯು.ಪಿ.ಎಸ್.ಸಿ ನಡೆಸುವ ಸಿವಿಲ್ ಸರ್ವಿಸಸ್ ಪರೀಕ್ಷೆಯನ್ನು ಬರೆದಿದ್ದಾಳೆ. ಕೆಲವು ಪ್ರಯತ್ನಗಳಲ್ಲಿ ಅಸಫಲಳಾದ ನಂತರ ಆಕೆ ತನಗೆ ಹಲವು ದೈಹಿಕ ನ್ಯೂನತೆಗಳಿವೆಯೆಂದು ಸರ್ಟಿಫಿಕೇಟ್ಗಳನ್ನಿತ್ತು ಆ ವರ್ಗಕ್ಕೆ ಸೇರಿದ ಮೀಸಲಾತಿಯನ್ನೂ ಬಳಸಿಕೊಂಡಿದ್ದಾಳೆ. ಪ್ರತಿ ಬಾರಿ ಪ್ರವೇಶ ಪರೀಕ್ಷೆಯನ್ನು ಬರೆದಾಗಲೂ ತನ್ನ ಹಾಗೂ ತನ್ನ ಮಾತಾಪಿತರ ವಿವರಗಳನ್ನು ತಪ್ಪಾಗಿ ನೀಡಿದ್ದಾಳೆ. ತಾನು ಸೇರದಿರುವ ಮೀಸಲಾತಿ ವರ್ಗಕ್ಕೆ ಸೇರಿರುವೆನೆಂದು ಸುಳ್ಳು ಹೇಳಿ ಪರೀಕ್ಷೆಯನ್ನು ಬರೆಯಲು ಹೆಚ್ಚುವರಿ ಪ್ರಯತ್ನಗಳನ್ನು ಗಳಿಸಿದ್ದಲ್ಲದೆ ವಯೋಮಿತಿಯ ಸಡಿಲಿಕೆಯ ಅವಕಾಶವನ್ನೂ ಪಡೆದಿದ್ದಾಳೆ.

ಕಡೆಗೆ 2022ರ ಸಿ.ಎಸ್.ಇ ಪರೀಕ್ಷೆಯಲ್ಲಿ 821 ನೆಯ ರ್ಯಾಂಕ್ ಗಳಿಸಿದ್ದಾಳೆ. ತಾನು ಕೊಟ್ಟ ಸುಳ್ಳು ಮೀಸಲಾತಿಗಳ ಪ್ರಭಾವದಿಂದ ಐ.ಎ.ಎಸ್ ಹುದ್ದೆಗೆ ಆಯ್ಕೆಯಾಗಿ 2023 ರಲ್ಲಿ ಮಸ್ಸೂರಿಯ ಲಾಲ್ ಬಹದೂರ್ ಶಾಸ್ತ್ರಿ ಪ್ರಶಾಸನ ಅಕಾಡೆಮಿಯಲ್ಲಿ ಮೂಲ ತರಬೇತಿಯನ್ನು ಪಡೆದು 2024 ರಲ್ಲಿ ಜಿಲ್ಲಾ ತರಬೇತಿಗಾಗಿ ಪುಣೆಗೆ ಬಂದಿದ್ದಾಳೆ. ತರಬೇತಿಯ ಸಮಯದಲ್ಲಿಯೇ ಆಕೆ ಹಲವು ಹತ್ತು ‘ನಖರಾ’ಗಳನ್ನು ಮಾಡಿ ಸಾರ್ವಜನಿಕರ ಗಮನಕ್ಕೆ ಬಂದಿದ್ದಾಳೆ.

ಪೂಜಾಳ ಕುಕೃತ್ಯಗಳ ಬಗ್ಗೆ ಯು.ಪಿ.ಎಸ್.ಸಿ ಆರಂಭಿಕ ತನಿಖೆಯನ್ನು ನಡೆಸಿ ದೆಹಲಿ ಪೊಲೀಸರಿಗೆ ಅವಳ ವಿರುದ್ಧ ಮೋಸ, ಯಾರದೋ ಹೆಸರಿನಲ್ಲಿ ದಸ್ತಾವೇಜಿನ ತಯಾರಿಕೆ, ಫೋರ್ಜರಿ, ಹಾಗೂ ಫೋರ್ಜರಿಯಾದ ದಾಖಲೆಯನ್ನು ನೈಜ ಎಂದು ಬಿಂಬಿಸಿದ ಆರೋಪವಿರುವ ದೂರನ್ನು ನೀಡಿದೆ. ಇದರನ್ವಯ ಪೂಜಾಳ ವಿರುದ್ಧ ದೆಹಲಿಯಲ್ಲಿ ಕ್ರಿಮಿನಲ್ ಪ್ರಕರಣವೊಂದು ದಾಖಲಾಗಿದೆ. ಇಷ್ಟೇ ಸಾಲದೆಂಬಂತೆ ಆಕೆ ದೈಹಿಕ ತೊಂದರೆಗಳಿರುವ ವ್ಯಕ್ತಿಗಳ ಹಕ್ಕು ಕಾಯ್ದೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿಯೂ ಆರೋಪಕ್ಕೆ ಗುರಿಯಾಗುವ ಸಂಭವವಿದೆ. ಪೂಜಾಳನ್ನು ಐ.ಎ.ಎಸ್ ಹುದ್ದೆಗಾಗಿ ಆಯ್ಕೆ ಮಾಡಲು ತಾನು ಕೇಂದ್ರ ಸರ್ಕಾರಕ್ಕೆ ನೀಡಿದ ಶಿಫಾರಸ್ಸನ್ನು ಹಿಂತೆಗೆದುಕೊಳ್ಳಬಾರದೇಕೆ ಹಾಗೂ ಮುಂದೆ ತಾನು ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಆಕೆಯನ್ನು ಡಿಬಾರ್ ಮಾಡಬಾರದೇಕೆ ಎಂದು ಕಾರಣ ಕೇಳುವ ನೋಟೀಸನ್ನೂ ಯು.ಪಿ.ಎಸ್.ಸಿ ನೀಡಿದೆ. ಇದಲ್ಲದೆ ಆಕೆ ಎಂಬಿ.ಬಿ.ಎಸ್ ಪ್ರವೇಶವನ್ನು ಗಿಟ್ಟಿಸಲೂ ಇದೇ ರೀತಿಯ ಮೋಸ ಮಾಡಿದಳೇ ಎನ್ನುವ ತನಿಖೆಯೂ ನಡೆಯುತ್ತಿದೆ.

ಇಲ್ಲಿಯವರೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಪೂಜಾ ಯಾವುದೇ ಮಿಸಲಾತಿಗೂ ಅರ್ಹಳಾಗಿಲ್ಲ. ಆಕೆಯ ತಂದೆಯ ಆದಾಯವೊಂದೇ ಆಕೆಯನ್ನು ಇತರೆ ಹಿಂದುಳಿದ ವರ್ಗಗಳ ಕೆನೆಪದರದ ಸ್ಥಾನಕ್ಕೆ ತಂದೊಯ್ಯುತ್ತದೆ. ಆಕೆಗೆ ಯಾವ ರೀತಿಯ ದೈಹಿಕ ನ್ಯೂನತೆಯೂ, ಮುಖ್ಯವಾಗಿ ದೃಷ್ಟಿ ಮಾಂದ್ಯತೆಯಿಲ್ಲ ಎನ್ನುವುದೂ ತಿಳಿದುಬಂದಿದೆ. ಪೂಜಾಳಂತೆಯೇ ಇನ್ನೊಬ್ಬ ಐ.ಎ.ಎಸ್ ಅಧಿಕಾರಿಯೂ ದೈಹಿಕ ನ್ಯೂನತೆಯಿಲ್ಲದಿದ್ದರೂ ಆ ಮೀಸಲಾತಿಯ ಪ್ರಭಾವದಿಂದ ಆಯ್ಕೆಯಾಗಿದ್ದಾನೆಂಬ ಸಂಶಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಬಂದಿದೆ. ಐ.ಎ.ಎಸ್ ಮುಂತಾದ ಪರೀಕ್ಷೆಗಳಿಗೆ ಸ್ಪರ್ಧಿಸುವವರು ಮೀಸಲಾತಿಗಳ ದುರುಪಯೋಗ ಮಾಡಿಕೊಳ್ಳುತ್ತಿರುವರೇ ಎನ್ನುವ ಅನುಮಾನ ಈಗ ಎಲ್ಲೆಡೆ ಹಬ್ಬಿದೆ.

ಪೂಜಾಳ ಪ್ರಕರಣವನ್ನೇ ತೆಗದುಕೊಂಡರೆ ಆಕೆ ಕೆನೆಪದರದಲ್ಲಿದ್ದರೂ ಹೇಗೆ ತನ್ನ ಮಾತಾಪಿತರ ಆದಾಯವನ್ನು ಮುಚ್ಚಿಟ್ಟಳು ಎಂಬ ಪ್ರಶ್ನೆ ಏಳುತ್ತದೆ. ಕೆಲವು ಮೂಲಗಳ ಪ್ರಕಾರ ಆಕೆ ತನ್ನ ತಂದೆ ಹಾಗೂ ತಾಯಿ ವಿಚ್ಛೇದನ ಪಡೆದಿರುವರೆಂದು ಸುಳ್ಳು ಹೇಳಿ ತನ್ನ ತಾಯಿಯ ಆದಾಯವನ್ನು ನಮೂದಿಸಿ ಸುಳ್ಳು ಸರ್ಟಿಫಿಕೇಟ್ ಪಡೆದಿದ್ದಾಳೆ. ಇದಲ್ಲದೆ ಪೂಜಾ 2019ರಲ್ಲಿ ಅಹ್ಮದ್ನಗರದ ಜಿಲ್ಲಾ ಆಸ್ಪತ್ರೆಯಿಂದ ತಾನು ದೃಷ್ಟಿಮಾಂದ್ಯಳು ಎನ್ನುವ ಸರ್ಟಿಫಿಕೇಟ್ ಪಡೆದಳು. ಆನಂತರ 2021 ರಲ್ಲಿ ಅದೇ ಆಸ್ಪತ್ರೆಯಿಂದ ತನಗೆ ದೃಷ್ಟಿಮಾಂದ್ಯತೆಯ ಜತೆಗೆ ಮಾನಸಿಕ ಅಸ್ವಸ್ಥತೆಯೂ ಇದೆಯೆಂಬ ಸರ್ಟಿಫಿಕೇಟ್ ಪಡೆದಳು. 2022 ರಲ್ಲಿ ಬೇರೊಂದು ಆಸ್ಪತ್ರೆಯಿಂದ ತನ್ನ ಚಲನಾ ಸಾಮರ್ಥ್ಯದಲ್ಲಿ ಊನವಿರುವಾಗಿ ಪ್ರಮಾಣ ಪತ್ರವನ್ನು ಪಡೆದಿದ್ದು ಈ ಮೂರೂ ಸರ್ಟಿಫಿಕೇಟ್ಗಳಿಗೆ ಬೇರೆ ಬೇರೆ ವಿಳಾಸಗಳನ್ನು ನೀಡಿದಳು ಎನ್ನುವ ಆರೋಪ ಅವಳ ಮೇಲಿದೆ.

ಯಕ್ಷಪ್ರಶ್ನೆಗಳು

ಸಿವಿಲ್ ಸರ್ವಿಸಸ್ ಪರೀಕ್ಷೆಗಳಲ್ಲಿ ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳನ್ನು ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ದೈಹಿಕ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಬಹುವಿಧದ ದೈಹಿಕ ನ್ಯೂನತೆಗಳ ಪ್ರಮಾಣಪತ್ರವನ್ನು ಪೂಜಾ ಸಲ್ಲಿಸಿದ್ದರಿಂದ ಆಕೆಯನ್ನು ಆಲ್ ಇಂಡಿಯಾ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ಸ್ನಲ್ಲಿ ಪರೀಕ್ಷೆಗೆ ಒಳಪಡಲು ತಿಳಿಸಲಾಯಿತು, ಆದರೆ ಆಕೆ ಬೇರೆ ಬೇರೆ ಕಾರಣಗಳನ್ನು ಕೊಟ್ಟು ಈ ಪರೀಕ್ಷೆಗೇ ಹಾಜರಾಗಲಿಲ್ಲವೆಂದು ವರದಿಯಾಗಿದೆ. ಇದೇ ನಿಜವಾಗಿದ್ದರೆ ಮೆಡಿಕಲ್ ಪರೀಕ್ಷೆಗೇ ಹಾಜರಾಗದೆ ಅವಳಿಗೆ ನೇಮಕಾತಿಯ ಆದೇಶ ಹೇಗೆ ಸಿಕ್ಕಿತು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಯು.ಪಿ.ಎಸ್.ಸಿ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವಾಗಲೂ ಒಬ್ಬ ವ್ಯಕ್ತಿಯ ಗುರುತು ಹಾಗೂ ವಿಳಾಸಕ್ಕಾಗಿ ಆಧಾರ್ ಕಾರ್ಡ್ ಸಂಖ್ಯೆಯನ್ನು ನೀಡಬೇಕಾಗಿದೆ. ಪೂಜಾ ತನ್ನ ಪರೀಕ್ಷೆಗಳಿಗೆ ಬೇರೆ ಬೇರೆ ವಿಳಾಸಗಳು ಹಾಗೂ ಹೆಸರುಗಳನ್ನು ಸಲ್ಲಿಸಿದಾಗ ಅವನ್ನು ಆಧಾರ್ ಕಾರ್ಡ್ ವಿವರಗಳೊಡನೆ ಹೋಲಿಸಲಿಲ್ಲವೇಕೆ? ಪ್ರತಿವರ್ಷವೂ ಹತ್ತು ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದರಿಂದ ಈ ಹೋಲಿಕೆ ಮಾಡುವುದು ಕಷ್ಟ ಎಂದು ಉತ್ತರಿಸಿದರೂ ಸಂದರ್ಶನದ ಹಂತಕ್ಕೆ ಸುಮಾರು 3000 ದಿಂದ 4000 ಅಭ್ಯರ್ಥಿಗಳಷ್ಟೇ ಬರುವಾಗ ಅವರಷ್ಟೇ ಜನರ ವಿವರಗಳನ್ನು ಪರಿಶೀಲನೆ ಮಾಡುವುದು ಕಷ್ಟವೇಕಾಗುತ್ತದೆ?

ಯು.ಪಿ.ಎಸ್.ಸಿ ಪರೀಕ್ಷೆಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿಗೆ ಕರೆಯುವ ಮೊದಲು ಅವರ ವಿವರಗಳನ್ನು ಸಂಬಂಧಪಟ್ಟ ಪೊಲೀಸ್ ಕಚೇರಿಗಳಿಗೆ ಕಳುಹಿಸಿ ವೆರಿಫಿಕೇಶನ್ ಮಾಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಪೊಲೀಸರು ಅವಳಿಗೆ ದೈಹಿಕ ದೌರ್ಬಲ್ಯಗಳಿಲ್ಲ, ಆಕೆ ಇತರ ಹಿಂದುಳಿದ ವರ್ಗದ ಕೆನೆಪದರಕ್ಕೆ ಸೇರಿದವಳು ಎಂದು ವರದಿಯನ್ನೇಕೆ ನೀಡಲಿಲ್ಲ?

ಪ್ರತಿ ಐ.ಎ.ಎಸ್ ಪ್ರಶಿಕ್ಷಣಾರ್ಥಿಯನ್ನು ಜಿಲ್ಲಾ ಕೇಂದ್ರಗಳಿಗೆ ತರಬೇತಿಗೆ ಕಳುಹಿಸಿದಾಗ ಅವರ ತರಬೇತಿಯ ಮೇಲ್ವಿಚಾರಣೆಯನ್ನು ಮಸ್ಸೂರಿಯ ಪ್ರಶಾಸನ ಅಕಾಡೆಮಿಯ ಹಿರಿಯ ಅಧಿಕಾರಿಯೊಬ್ಬರು ನೋಡಿಕೊಳ್ಳುತ್ತಾರೆ. ಅವರಿಗೆ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಗೆ ಬಂದಿರುವ ಪ್ರಶಿಕ್ಷಣಾರ್ಥಿಯು ಯಾವ ರೀತಿ ತರಬೇತಿಯನ್ನು ಹೊಂದುತ್ತಿದ್ದಾಳೆ ಎಂದು ಕಾಲಕಾಲಕ್ಕೆ ವರದಿಯನ್ನು ಕೊಡಬೇಕಾಗುತ್ತದೆ. ಆ ಸಮಯದಲ್ಲಿ ಪುಣೆಯ ಜಿಲ್ಲಾಧಿಕಾರಿ ಅವಳ ಬಗ್ಗೆ ಏಕೆ ಪ್ರತೀಕೂಲ ವರದಿಯನ್ನು ಕಳಿಸಲಿಲ್ಲ? ಪೂಜಾ ತನ್ನ ಖಾಸಗಿ ಕಾರನ್ನು ಸರ್ಕಾರಿ ವಾಹನವೆಂದು ಬಿಂಬಿಸಿದಾಗ ಅವರೇಕೆ ಸುಮ್ಮನಿದ್ದರು? ಆಕೆ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟರ ಕೋಣೆಗೆ ಹೊಂದಿಕೊಂಡಿದ್ದ ಕೋಣೆಯನ್ನು ಅತಿಕ್ರಮವಾಗಿ ಆಕ್ರಮಿಸಿಕೊಂಡಾಗ, ತನಗೆ ನೌಕರರು ಬೇಕು, ತನಗೆ ಲೆಟರ್ಹೆಡ್ ಬೇಕು, ತನ್ನ ಕಛೇರಿಯ ಮೇಲೆ ತನ್ನ ಹೆಸರಿನ ಫಲಕ ಇರಬೇಕು ಎಂದು ನಾನಾ ಬೇಡಿಕೆಗಳನ್ನು ಇಟ್ಟಾಗ ಅವರೇಕೆ ಅವಳನ್ನು ತರಾಟೆಗೆ ತೆಗೆದುಕೊಳ್ಳಲಿಲ್ಲ? ಸೇವಾ ನಿವೃತ್ತಿಯಾಗಿದ್ದು ರಾಜಕೀಯ ಪಕ್ಷವೊಂದಕ್ಕೆ ಸೇರಿದ್ದ ಅವಳ ತಂದೆ ದಿಲೀಪ್ರಾವ್ ಖೇಡ್ಕರ್ರ ಒತ್ತಡಕ್ಕೆ ಇಡೀ ಜಿಲ್ಲಾಡಳಿತವೇ ಮಣಿಯಿತೇ?

ಅಂದಹಾಗೆ ದಶಕಗಳ ಹಿಂದೆ ನಾನೇ ಜಿಲ್ಲೆಯೊಂದರ ಎಸ್.ಪಿ ಆಗಿದ್ದಾಗ ನನ್ನ ಜಿಲ್ಲೆಗೆ ತರಬೇತಿಗೆ ಬಂದಿದ್ದ ಪ್ರಶಿಕ್ಷಣಾರ್ಥಿಯೊಬ್ಬ ಪೊಲೀಸ್ ಠಾಣೆಯಲ್ಲಿ ಜಪ್ತಿ ಮಾಡಿದ್ದ ಕಾರೊಂದನ್ನು ತನ್ನ ಖಾಸಗಿ ಕೆಲಸಕ್ಕೆ ಉಪಯೋಗಿಸಿದನೆಂಬ ವಿಷಯ ನನ್ನ ಗಮನಕ್ಕೆ ಬಂದಾಗ ಅವನ ಮೇಲೆ ಪ್ರಕರಣವೊಂದನ್ನು ದಾಖಲಿಸಲು ಸೂಚಿಸಿ ಸರ್ಕಾರಕ್ಕೆ ವರದಿಯನ್ನು ನೀಡಿದ್ದೆ. ಪುಣೆಯ ಕಲೆಕ್ಟರ್ ಹೀಗೇಕೆ ಮಾಡಲಿಲ್ಲ? ಈಗ ತನಗೆ ಕಿರುಕುಳ ಕೊಟ್ಟರೆಂದು ಅವರ ಮೇಲೆಯೇ ಪೂಜಾ ಪ್ರಕರಣವೊಂದನ್ನು ದಾಖಲು ಮಾಡಿದ್ದಾಳೆ!

ಯುಪಿಎಸ್ಸಿ ಅಧ್ಯಕ್ಷ ರಾಜೀನಾಮೆ

ಏತನ್ಮಧ್ಯೆ ಇನ್ನೂ ಆರು ವರ್ಷಗಳ ಸೇವೆ ಬಾಕಿಯಿದ್ದ ಯು.ಪಿ.ಎಸ್.ಸಿ ಅಧ್ಯಕ್ಷ ಮನೋಜ್ ಸೋನಿ ವೈಯುಕ್ತಿಕ ಕಾರಣವನ್ನು ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪೂಜಾಳ ಪ್ರಕರಣ ಬೆಳಕಿಗೆ ಬರುವ ಒಂದು ತಿಂಗಳು ಮೊದಲೇ ಅವರು ರಾಜೀನಾಮೆ ಸಲ್ಲಿಸಿದ್ದರು ಎಂದು ಹೇಳಲಾಗುತ್ತಿದ್ದರೂ ಸಾರ್ವಜನಿಕರು ಇಡೀ ಪ್ರಕರಣವನ್ನು ಸಂಶಯದ ದೃಷ್ಟಿಯಿಂದ ನೋಡುತ್ತಿದ್ದಾರೆ.

ಈ ಪ್ರಕರಣದಲ್ಲಿ ಕೇಂದ್ರ ಲೋಕಸೇವಾ ಆಯೋಗ, ಮಹಾರಾಷ್ಟ್ರ ರಾಜ್ಯದ ವೈದ್ಯಕೀಯ ವ್ಯವಸ್ಥೆ ಹಾಗೂ ಪೊಲೀಸ್ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ರಾಷ್ಟ್ರೀಯ ಪ್ರಶಾಸನ ತರಬೇತಿ ಅಕಾಡೆಮಿ, ಪುಣೆಯ ಜಿಲ್ಲಾಡಳಿತ ಮತ್ತಿತರರು ಕ್ಲಿಷ್ಟ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ. ಇಲ್ಲಿಯವರೆಗೆ ತನ್ನ ಪಾರದರ್ಶಕತೆ, ಹಾಗೂ ನ್ಯಾಯೋಚಿತತೆಗೆ ಹೆಸರುವಾಸಿಯಾಗಿದ್ದ ಯು.ಪಿ.ಎಸ್.ಸಿ ಗ್ರಹಣ ಹಿಡಿದ ಚಂದ್ರನಂತಾಗಿದೆ. ಇಡೀ ಆಡಳಿತ ವ್ಯವಸ್ಥೆಯಲ್ಲಿರುವ ಹುಳುಕು ಇದೊಂದೇ ಪ್ರಕರಣದಿಂದ ಜಾಹೀರಾಗಿದೆ. ದೇಶದ ಲಕ್ಷಾನುಲಕ್ಷ ಯುವಕ ಯುವತಿಯರ ಆಶಾಕಿರಣವಾಗಿರುವ ಸಿವಿಲ್ ಸರ್ವಿಸಸ್ ಪರೀಕ್ಷೆಗಳಿಗೆ ಪೂಜಾಳಿಗೆ ಶಿಕ್ಷೆ ಕೊಡುವುದರ ಮೂಲಕ ವಿಶ್ವಾಸಾರ್ಹತೆಯು ಬರುವುದಿಲ್ಲ. ಹಿರಿಯ ಅಧಿಕಾರಿಗಳ ನೇಮಕಾತಿ ಹಾಗೂ ತರಬೇತಿಯ ವ್ಯವಸ್ಥೆಯನ್ನು ಸರಿಪಡಿಸಿ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತಂದಾಗ ಮಾತ್ರ ಅದು ಬರಲು ಸಾಧ್ಯ.


Read More
Next Story