KS Dakshina Murthy

ಶತ್ರುವಿನ ಜೊತೆ ಟ್ರಂಪ್ ಸಖ್ಯ: ಇರಾನ್ ಕದನದ ರಾಡಿ ತೊಳೆಯಲು ಚೀನಾ ಮುಂದೆ ಮಂಡಿಯೂರಿದ ಅಮೆರಿಕ


ಶತ್ರುವಿನ ಜೊತೆ ಟ್ರಂಪ್ ಸಖ್ಯ: ಇರಾನ್ ಕದನದ ರಾಡಿ ತೊಳೆಯಲು ಚೀನಾ ಮುಂದೆ ಮಂಡಿಯೂರಿದ ಅಮೆರಿಕ
x
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರು ಮೇ 14ರಂದು ಬೀಜಿಂಗ್ನ ಗ್ರೇಟ್ ಹಾಲ್ ಆಫ್ ದಿ ಪೀಪಲ್ನಲ್ಲಿ ಸ್ವಾಗತ ಸಮಾರಂಭದಲ್ಲಿ ಪಾಲ್ಗೊಂಡರು.
Click the Play button to hear this message in audio format

ಇರಾನ್ ಜೊತೆಗೆ ಇರುವ ಅತ್ಯುನ್ನತ ಸ್ಥಾನಮಾನ ಮತ್ತು ಅಮೆರಿಕದ ಮೇಲಿರುವ ಪ್ರಭಾವ ಬಳಿಸಿ ಯುದ್ಧ ನಿರತ ಉಭಯ ರಾಷ್ಟ್ರಗಳೂ ಶಾಂತಿ ಒಪ್ಪಂದಕ್ಕೆ ಒಳಗಾಗುವಂತೆ ಮನವೊಲಿಸಲು ಚೀನಾ ಅತ್ಯಂತ ಸೂಕ್ತವಾದ ಸ್ಥಾನದಲ್ಲಿದೆ.

ಭಾರತೀಯ ಕ್ರಿಕೆಟ್ ತಂಡವು ಬಹಳ ಕಾಲದ ವರೆಗೂ, ʼಸ್ವದೇಶದಲ್ಲಿ ಘರ್ಜಿಸುವ ಹುಲಿ, ವಿದೇಶದಲ್ಲಿ ಬೆದರುವ ಇಲಿʼ ಎಂಬ ಅಪಖ್ಯಾತಿಯನ್ನು ಹೊಂದಿತ್ತು. ಇಲ್ಲೀಗ ಸನ್ನಿವೇಶ ಬೇರೆ ಇದ್ದರೂ ಕೂಡ, ಚೀನಾ ಭೇಟಿಯ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಷಯದಲ್ಲಿಯೂ ಇದು ನಿಜವಾದಂತೆ ಕಾಣುತ್ತಿದೆ. ತಮ್ಮ ಎಂದಿನ ಅಹಂಕಾರದ ನಡವಳಿಕೆ ಮತ್ತು ಉದ್ಧಟತನದ ಮಾತುಗಳು ಹಾಗೂ ಎದುರಾಳಿಗಳನ್ನು ಮನಸ್ಸಿಗೆ ತೋಚಿದಂತೆ ನಿಂದಿಸುವ ಸ್ವಭಾವದಿಂದ ದೂರ ಸರಿದು ಅವದು ಅತ್ಯಂತ ವಿನಮ್ರ ವಿಧೇಯ ಮತ್ತು ಅವರ ಸ್ವಭಾವಕ್ಕೆ ತದ್ವಿರುದ್ಧವಾಗಿ ಶಾಂತ ಸ್ವಭಾವದ ವ್ಯಕ್ತಿಯಾಗಿ ಬದಲಾದಂತೆ ಕಂಡುಬಂದರು.

ಅಷ್ಟಕ್ಕೂ ಈ ಶೃಂಗಸಭೆಯ ಫಲಿತಾಂಶವಾದರೂ ಏನು? ಚೀನಾ ಅಮೆರಿಕದರಿಂದ 200 ಬೋಯಿಂಗ್ ವಿಮಾನಗಳು, ತೈಲ ಮತ್ತು ಸೋಯಾಬೀನ್ ಖರೀದಿ ಮಾಡಲು ಒಪ್ಪಿಕೊಂಡಿದೆ ಎಂಬ ಒಂದೆರಡು ಹೇಳಿಕೆಗಳನ್ನು ಹೊರತುಪಡಿಸಿದರೆ ಬೇರೆ ಇನ್ನೇನೂ ಘೋಷಣೆಯಾಗಿಲ್ಲ. ಇರಾನ್ ಯುದ್ಧದ ವಿಚಾರವನ್ನು ಕೇವಲ ಮೇಲ್ನೋಟಕ್ಕೆ ಎಂಬಂತೆ ಕೆಲವೇ ಕೆಲವು ಸಾಲುಗಳಲ್ಲಿ ಅದರ ಪ್ರಸ್ತಾಪ ಮಾಡಲಾಯಿತು.

ಚೀನಾ ಆಶಯಗಳೇನು?

ಅವುಗಳಲ್ಲಿ ಪ್ರಮುಖವಾದ ಸಂಗತಿಗಳೆಂದರೆ; ಸಂಘರ್ಷವನ್ನು ಬಗೆಹರಿಸಲು ಚೀನಾ ರಾಜತಾಂತ್ರಿಕತೆ ಮೂಲಕ ಸಹಾಯ ಮಾಡುತ್ತದೆ ಹಾಗೂ ಇರಾನ್ ಅಣ್ವಸ್ತ್ರಗಳನ್ನು ಹೊಂದುವಂತಿಲ್ಲ ಎಂಬುದು ಚೀನಾ ಆಶಯವೂ ಆಗಿದೆ ಮತ್ತು ಹೊರ್ಮುಜ್ ಜಲಸಂಧಿ ಮುಕ್ತವಾಗುವುದನ್ನು ನೋಡಲು ಕೂಡ ತಾನು ಉತ್ಸುಕವಾಗಿದೆ ಎಂಬುದು.

ಅಲ್ಲಿಂದ ಅಮೆರಿಕಕ್ಕೆ ಮರಳಿದ ಬಳಿಕ ಟ್ರಂಪ್ ಅವರಿಗೆ ಇನ್ನಷ್ಟು ಧೈರ್ಯ ಬಂದಂತೆ ಕಂಡಿತು. ʼಸಮಯ ಮೀರುತ್ತಿದೆʼ ಎಂದು ಹೇಳಿದ ಅವರು ಇರಾನ್ ತತಕ್ಷಣವೇ ಒಪ್ಪಂದಕ್ಕೆ ಬರಬೇಕಾದ ಅಗತ್ಯವಿದೆ ಎಂಬ ಬೆದರಿಕೆ ಹಾಕಿದರಾದರೂ ಈಗ ಕಳೆದ ಮೂರು ತಿಂಗಳಿಂದ ಜಗ್ಗಾಟ ನಡೆಸುತ್ತಿರುವ ಇರಾನ್ ಸಂಘರ್ಷದ ಪರಿಹಾರದ ಕೀಲಿ ಕೈ ಚೀನಾದ ಬಳಿಯೇ ಇದೆ ಎಂಬ ಸಂಗತಿ ಹೆಚ್ಚೂ ಕಡಿಮೆ ಸ್ಪಷ್ಟವಾಗಿದೆ.

ಕಳೆದ ಏಪ್ರಿಲ್ ಏಳರಿಂದ ಕದನ ವಿರಾಮ ಜಾರಿಯಲ್ಲಿ ಇದ್ದರೂ ಕೂಡ ಅದು ದುರ್ಬಲವಾಗಿದ್ದರೂ ಈ ಕ್ಷಣಕ್ಕೂ ಅದು ಮುಂದುವರಿದೇ ಇದೆ. ಪರ್ಷಿಯನ್ ಕೊಲ್ಲಿಯಲ್ಲಿ ಸಾಂದರ್ಭಿಕವಾಗಿ ನಡೆಯುತ್ತಿರುವ ಸಣ್ಣ ಪುಟ್ಟ ಸಂಘರ್ಷಗಳು ಅಂತಾರಾಷ್ಟ್ರೀಯ ಹಡಗು ಸಂಚಾರದ ಮೇಲೆ ಪರಿಣಾಮ ಬೀಡಿದೆ. ಇದರಿಂದಾಗಿ ಇಡೀ ಜಗತನ್ನು ಆತಂಕದ ತುತ್ತತುದಿಯಲ್ಲಿ ತಂದು ನಿಲ್ಲಿಸಿದಂತಾಗಿದೆ. ಇವೆಲ್ಲಕ್ಕಿಂತ ಮಿಗಿಲಾಗಿ ಈ ಸುದೀರ್ಘ ಬಿಕ್ಕಟ್ಟಿನ ಆರ್ಥಿಕ ಪರಿಣಾಮವು ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಆಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

ಈ ಉದ್ಭವಿಸಿರುವ ಬಿಕ್ಕಟ್ಟನ್ನು ಕೊನೆಗಾಣಿಸಲು ಸಹಾಯಹಸ್ತ ಚಾಚುವುದಾಗಿ ಚೀನಾ ಮಾಡಿರುವ ವಾಗ್ದಾನವು ಗಮನಾರ್ಹವಾಗಲು ಮುಖ್ಯ ಕಾರಣವೇನೆಂದರೆ ಚೀನಾದ ಒಟ್ಟು ಕಚ್ಚಾ ತೈಲದ ಅರ್ಧದಷ್ಟು ಭಾಗ ಇರಾನ್ನಿಂದಲೇ ಆಮದಾಗುತ್ತಿರುವುದು. ಇದೆಲ್ಲದರ ಜೊತೆಗೆ ಇರಾನ್ ಪಾಲಿಗೆ ಚೀನಾವೇ ಪ್ರಮುಖ ಆಶಾಕಿರಣವಾಗಿದೆ. ಯಾಕೆಂದರೆ ಇರಾನ್ನ ಸುಮಾರು ಶೇ.80ರಷ್ಟು ತೈಲವನ್ನು ಚೀನಾವೇ ಖರೀದಿ ಮಾಡುತ್ತದೆ.

ಇರಾನ್ ದೇಶದ ಜೊತೆಗೆ ತಾನು ಹೊಂದಿರುವ ಸರ್ವೋಚ್ಛ ಸ್ಥಾನಮಾನ ಹಾಗೂ ಟ್ರಂಪ್ ಮೇಲಿರುವ ತನ್ನ ಪ್ರಭಾವವನ್ನು ಬಳಿಸಿಕೊಂಡು ಉಭಯ ದೇಶಗಳೂ ಒಪ್ಪಂದಕ್ಕೆ ಬರುವಂತೆ ಮನವೊಲಿಸಲು ಷಿ ಜಿನ್ಪಿಂಗ್ ಅತ್ಯಂತ ಸೂಕ್ತವಾದ ಸ್ಥಾನದಲ್ಲಿದ್ದಾರೆ. ಆ ಮೂಲಕ ಅವರು ಸಮತೋಲನದ ಆಟವಾಡುವ ಸಾಧ್ಯತೆಯಿದೆ.

ಚೀನಾದ ಬಳಿ ಭರಪೂರವಾದ ತೈಲ ದಾಸ್ತಾನು ಇರುವುದರಿಂದ ಹಾಗೂ ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಯಲ್ಲಿ ಮುಂದಿರುವುದರಿಂದ ಸಧ್ಯಕ್ಕೆ ಯಾವುದೇ ತಕ್ಷಣದ ಆರ್ಥಿಕ ಬಿಕ್ಕಟ್ಟಿನ ಅಪಾಯದಲ್ಲಿ ಅದು ಇಲ್ಲದೇ ಇದ್ದರೂ ಇಡೀ ಜಗತ್ತು ಆರ್ಥಿಕ ಹಿಂಜರಿತಕ್ಕೆ ಜಾರುವ ಮುನ್ನ ಈ ಸಂಘರ್ಷವನ್ನು ಶಾಂತಗೊಳಿಸುವುದರ ಹಿಂದೆ ಅದರ ಸ್ವಂತ ಹಿತಾಸಕ್ತಿಯೂ ಅಡಗಿಕೊಂಡಿದೆ.

ನೆತನ್ಯಾಹುಗೆ ಟ್ರಂಪ್ ಮಾಹಿತಿ

ಶೃಂಗಸಭೆಯ ಮುಂದುವರಿದ ಭಾಗವಾಗಿ, ಇರಾನ್ನ ಇತ್ತೀಚಿನ ಪ್ರಸ್ತಾಪಗಳಿಗೆ ಅಮೆರಿಕ ಪ್ರತಿಕ್ರಿಯೆ ನೀಡಿದೆ ಮತ್ತು ಇದಕ್ಕೆ ಪ್ರತಿಯಾಗಿ ತಾನು ಶೀಘ್ರದಲ್ಲೇ ಪ್ರತಿಕ್ರಿಯೆ ನೀಡುವುವುದಾಗಿ ಇರಾನ್ ಹೇಳಿದೆ. ಇರಾನ್ ಯುದ್ಧದ ಕುರಿತು ಟ್ರಂಪ್ ಮತ್ತು ಷಿ ಜಿನ್ಪಿಂಗ್ ನಡುವಿನ ಚರ್ಚೆಯಲ್ಲಿ ನಿಖರವಾಗಿ ಏನೆಲ್ಲಾ ಮಾತುಕತೆ ನಡೆದಿದೆ ಎಂಬುದು ಇನ್ನೂ ಬಹಿರಂಗವಾಗಿ ತಿಳಿದುಬಂದಿಲ್ಲ. ಆದರೆ, ಇರಾನ್ ಅಣ್ವಸ್ತ್ರಗಳನ್ನು ಹೊಂದಲು "ಅನುಮತಿ ನೀಡುವುದಿಲ್ಲ" ಎಂಬ ತನ್ನ ಕಠಿಣ ನಿಲುವಿನಿಂದ ಹಿಂದೆ ಸರಿಯುವಂತೆ ಚೀನಾ ಅಧ್ಯಕ್ಷರು ಅಮೆರಿಕ ಅಧ್ಯಕ್ಷರನ್ನು ಕೇಳಿಕೊಂಡಿರುತ್ತಾರೆ ಎಂಬುದು ಯಾರು ಬೇಕಾದರೂ ಊಹಿಸಬಹುದಾದ ವಿಷಯವಾಗಿದೆ. ಯಾವ ಕಾರಣಕ್ಕೂ ಅಮೆರಿಕ ಮತ್ತು ಇಸ್ರೇಲ್ ಈ ಯುದ್ಧವನ್ನು ಆರಂಭ ಮಾರಬಾರದಾಗಿತ್ತು ಎಂಬುದು ಚೀನಾದ ಅಧಿಕೃತ ನಿಲುವು. ಆದರೆ ಈಗ ಅದು ನಡೆದುಹೋಗಿರುವ ವಿದ್ಯಮಾನ. ಹಾಗಾಗಿ ಈ ಯುದ್ಧವನ್ನು ಶೀಘ್ರದಲ್ಲೇ ಕೊನೆಗೊಳಿಸಬೇಕು ಎಂಬುದು ಅದರ ಆಶಯವಾಗಿದೆ

ಬೀಜಿಂಗ್ಗೆ ನೀಡಿದ ತಮ್ಮ ಎರಡು ದಿನಗಳ ಭೇಟಿಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಟ್ರಂಪ್, ಇರಾನ್ ತನ್ನ ಪರಮಾಣು ಚಟುವಟಿಕೆಗಳನ್ನು 20 ವರ್ಷಗಳ ಕಾಲ ಸ್ಥಗಿತಗೊಳಿಸುವ ಮುನ್ಸೂಚನೆ ನೀಡಿದೆ ಮತ್ತು ಅದಕ್ಕೆ ತಮ್ಮ ಸಮ್ಮತಿಯೂ ಇದೆ ಎಂದು ತಿಳಿಸಿದರು. ಆದರೆ ಈ ವಿಷಯದಲ್ಲಿ ಇರಾನ್ ಇನ್ನೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ.

ಅಮೆರಿಕ ಅಧ್ಯಕ್ಷರು ತಾಯ್ನಾಡಿಗೆ ಮರಳಿದ ತಕ್ಷಣವೇ, ಷಿ ಜಿನ್ಪಿಂಗ್ ಜೊತೆ ನಡೆದ ಚರ್ಚೆಗಳ ವಿವರಗಳನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ವರದಿ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಅವರು ಈ ರೀತಿ ಮಾಹಿತಿ ನೀಡಬೇಕಾಗಿ ಬಂದಿರುವುದು ಏನನ್ನು ತೋರಿಸುತ್ತದೆ ಎಂದರೆ—ಒಂದೆಡೆ ನೆತನ್ಯಾಹು ಮತ್ತು ಇನ್ನೊಂದೆಡೆ ಯುದ್ಧವನ್ನು ಕೊನೆಗೊಳಿಸಬಯಸುವ ಇಡೀ ಜಗತ್ತಿನ ನಡುವೆ ಟ್ರಂಪ್ ಸಿಲುಕಿಕೊಂಡಿದ್ದಾರೆ.

ಈ ಯುದ್ಧವು ಯಾವುದೇ ಉದ್ದೇಶವನ್ನು ಹೊಂದಿಲ್ಲದ ಮತ್ತು ಇರಾನ್‌ಗೆ ಹಾನಿ ಮಾಡಬೇಕೆಂಬ ಇಸ್ರೇಲ್ ಪ್ರಧಾನಿಯ ಏಕೈಕ ಆಸೆಯನ್ನು ಪೂರೈಸುವುದನ್ನು ಬಿಟ್ಟು ಬೇರೆ ಯಾವುದೇ ಪ್ರಯೋಜನವಿಲ್ಲದ ಒಂದು ಅರ್ಥಹೀನ ಸಂಘರ್ಷ ಎಂದು ಜಗತ್ತಿನಾದ್ಯಂತ ವ್ಯಾಪಕವಾಗಿ ಖಂಡಿಸಲಾಗಿದೆ.

ಇರಾನ್ನ ಪರಮಾಣು ಕಾರ್ಯಕ್ರಮವು ಅಮೆರಿಕನ್ನರಿಗೆ ಅಪಾಯಕಾರಿಯಾಗಿದೆ ಎಂಬ ಆಧಾರದ ಮೇಲೆ, ಅದರ ಮೇಲಿನ ಮಿಲಿಟರಿ ದಾಳಿಯಲ್ಲಿ ಅಮೆರಿಕ ಭಾಗಿಯಾಗಿರುವುದನ್ನು ಸಮರ್ಥಿಸಿಕೊಳ್ಳಲು ಟ್ರಂಪ್ ಪ್ರಯತ್ನಿಸಿದ್ದಾರೆ. ಆದರೆ ಅಮೆರಿಕ ಅಧ್ಯಕ್ಷರು ಇದಕ್ಕೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳನ್ನು ಎಲ್ಲಿಯೂ ಪ್ರಸ್ತುತಪಡಿಸಿಲ್ಲ, ಆ ಮೂಲಕ ತಾವು ಇಸ್ರೇಲ್ ಮಾತಿಗೆ ಮಣಿದು ಯುದ್ಧ ಮಾಡುತ್ತಿರುವುದನ್ನು ಅವರೇ ಸಾಬೀತುಪಡಿಸಿದ್ದಾರೆ. ಇದೇ ಮೊದಲಾದ ಕಾರಣಗಳಿಂದಾಗಿ ಟ್ರಂಪ್ ಅವರ ಜನಪ್ರಿಯತೆಯ ರೇಟಿಂಗ್ ಅತ್ಯಂತ ಕನಿಷ್ಠ ಮಟ್ಟಕ್ಕೆ (ಶೇಕಡಾ 32 ಕ್ಕೆ) ಕುಸಿದಿದೆ ಮತ್ತು ಅಮೆರಿಕದ ಬಹುಪಾಲು ನಾಗರಿಕರು ಈ ಯುದ್ಧದ ವಿರುದ್ಧ ತಮ್ಮ ದೃಢವಾದ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.

ಅಷ್ಟಕ್ಕೂ ಟ್ರಂಪ್ ಚೀನಾಕ್ಕೆ ಭೇಟಿ ನೀಡಿದ್ದು ಏಕೆ?

ವರದಿಗಳ ಪ್ರಕಾರ, ಟ್ರಂಪ್ ಅವರಿಗೆ ಚೀನಾಕ್ಕೆ ಭೇಟಿ ನೀಡಲು ವಿಶೇಷ ಆಸಕ್ತಿಯಿತ್ತು. ಯಾಕೆಂದರೆ ಅಮೆರಿಕದ ಬೇಡಿಕೆಗಳನ್ನು ಅರ್ಧದಷ್ಟಾದರೂ ಈಡೇರಿಸುವಂತೆ ಇರಾನ್ ಮೇಲೆ ಒತ್ತಡ ಹೇರಬಲ್ಲ ಸಾಮರ್ಥ್ಯ ಇರುವುದು ಕೇವಲ ಬೀಜಿಂಗ್ಗೆ ಮಾತ್ರ. (ಅಂದಹಾಗೆ, ಈ ಶೃಂಗಸಭೆಯ ಸಂದರ್ಭದಲ್ಲಿ, ಇರಾನ್ ಮತ್ತು ಅಮೆರಿಕ ದೇಶಗಳು ಚೀನಾದ ಹಲವಾರು ಸರಕು ಸಾಗಣೆ ಹಡಗುಗಳು ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅನುಮತಿ ನೀಡಿದ್ದವು).

ಇರಾನ್ ಯುದ್ಧವು ಈಗ ಕಂಗೆಟ್ಟ ಸ್ಥಿತಿಯಲ್ಲಿದೆ (ಬಿಕ್ಕಟ್ಟಿಗೆ ಸಿಲುಕಿದೆ). ಏಕೆಂದರೆ ಮೊದಲು ದಾಳಿ ಆರಂಭಿಸಿದ ಟ್ರಂಪ್ ಅವರಿಗೆ, ಈ ಸಂಘರ್ಷದಿಂದ ತಾವೊಬ್ಬ ವಿಜೇತನಂತೆ ಹೊರಹೊಮ್ಮುವುದು ಅತ್ಯಂತ ಮುಖ್ಯವಾಗಿದೆ. ತಮ್ಮ ಅಧಿಕಾರದ ಕೊನೆಯ ಎರಡು ವರ್ಷಗಳಲ್ಲಿ ಒಬ್ಬ ಸಕ್ರಿಯ ಅಧ್ಯಕ್ಷರಾಗಿ ಅವರ ಭವಿಷ್ಯವು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಗಳಲ್ಲಿನ ಸಾಧನೆಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ಮತ್ತು, ಆ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದರೆ, ಅವರು ಮೊದಲು ಈ ಯುದ್ಧದಿಂದ ಗೌರವಯುತವಾಗಿ ಹೊರಬರಬೇಕಾದುದು ಅನಿವಾರ್ಯ.

ಷಿ ಜಿನ್ಪಿಂಗ್ ಅವರ ಕುರಿತಾದ ಪ್ರಶ್ನೆಗಳಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಟ್ರಂಪ್, ಅವರು ನಿಜವಾಗಿಯೂ ತಮಗೆ ಆಪ್ತ ಸ್ನೇಹಿತರಾಗಿದ್ದಾರೆ ಎಂದು ಹೇಳುವುದನ್ನು ಮರೆಯಲಿಲ್ಲ.

ಆದರೆ, ಇನ್ನೊಂದೆಡೆ ಷಿ ಜಿನ್ಪಿಂಗ್ ಅವರು ವಿಶೇಷವಾಗಿ ತೈವಾನ್ ವಿಷಯದಲ್ಲಿ ಅತ್ಯಂತ ದೃಢವಾಗಿ ಮತ್ತು ಆಕ್ರಮಣಕಾರಿ ನಿಲುವನ್ನು ಹೊಂದಿದ್ದಾರೆ ಎಂಬುದು ಸ್ಪಷ್ಟವಾಗಿ ಕಂಡುಬಂದರು. ಎಷ್ಟರಮಟ್ಟಿಗೆ ಎಂದರೆ, ಅಮೆರಿಕದ ಇಂತಹ ಕ್ರಮಗಳು ಬೀಜಿಂಗ್ ಮತ್ತು ವಾಷಿಂಗ್ಟನ್ ನಡುವೆ ಯುದ್ಧಕ್ಕೆ ಕಾರಣವಾಗಬಹುದು ಎಂದು ಅವರು ಟ್ರಂಪ್ಗೆ ಎಚ್ಚರಿಕೆ ನೀಡುವ ಹಂತಕ್ಕೂ ತಲುಪಿದರು.

ಜಿನ್ಪಿಂಗ್ ಅಧಿಕಾರಯುತ ಹಾವಭಾವ

ತೈವಾನ್ ಮತ್ತು ಇರಾನ್ ವಿಷಯದಲ್ಲಿ ಷಿ ಜಿನ್ಪಿಂಗ್ ಅವರು ಅಮೆರಿಕ ಅಧ್ಯಕ್ಷರಿಗೆ ನೀಡಿದ ಎಚ್ಚರಿಕೆ, ಹಾಗೂ ಅಮೆರಿಕದ ಪಡೆಗಳಿಗೆ ಮಿಲಿಟರಿ ನೆರವು ನೀಡಬೇಕೆಂಬ ಟ್ರಂಪ್ ಅವರ ವಿನಂತಿಯನ್ನು ಚೀನಾ ಅಧ್ಯಕ್ಷರು ತಿರಸ್ಕರಿಸಿದ್ದಾರೆ ಎಂಬ ವರದಿಗಳು, ಒಂದೋ ವಾಷಿಂಗ್ಟನ್ ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತಿರುವುದರ ಸಂಕೇತವಾಗಿದೆ ಅಥವಾ ಬೀಜಿಂಗ್ನ ಬೆಳವಣಿಗೆಯನ್ನು ತೋರಿಸುತ್ತದೆ. ಟ್ರಂಪ್ ಅವರ ನಮ್ರತೆ ಮತ್ತು ಷಿ ಜಿನ್ಪಿಂಗ್ ಅವರ ಅಧಿಕಾರಯುತ ಹಾವಭಾವವನ್ನು ಕಂಡು, ಚೀನಾವು ಅಮೆರಿಕಕ್ಕೆ ಸಮಾನವಾದ ಮಹಾಶಕ್ತಿಯಾಗಿ ಹೊರಹೊಮ್ಮಿದೆ ಎಂದು ಅನೇಕರು ತೀರ್ಮಾನ ಕೈಗೊಳ್ಳಲು ಅನುಕೂಲವಾಯಿತು.

ಇದು ನಿಜವಿರಲಿ ಅಥವಾ ಇಲ್ಲದಿರಲಿ, ಇದಕ್ಕೆ ಬೇರೆ ಕೆಲವು ಕಾರಣಗಳೂ ಇವೆ. ಶೃಂಗಸಭೆಯಲ್ಲಿ ಟ್ರಂಪ್ ಅವರು ಅಷ್ಟೊಂದು ಶಾಂತವಾಗಿ ( ಅಸಲಿಗೆ ಮಂಕಾಗಿ) ಕಂಡುಬಂದಿದ್ದು ಬಹುಶಃ ಅಷ್ಟೇನೂ ದೊಡ್ಡ ಆಶ್ಚರ್ಯದ ಸಂಗತಿಯಲ್ಲ.

ಕಳೆದ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡ ಟ್ರಂಪ್, ತಾವು ಇಡೀ ಜಗತ್ತಿಗೆ ಷರತ್ತುಗಳನ್ನು ವಿಧಿಸಬಹುದು ಎಂದು ಭಾವಿಸಿದ್ದರು. ಆದರೆ ಕೆನಡಾದಂತಹ ಮಿತ್ರರಾಷ್ಟ್ರಗಳು ಮತ್ತು ಸ್ಪೇನ್, ಬ್ರಿಟನ್, ಫ್ರಾನ್ಸ್ ಹಾಗೂ ಜರ್ಮನಿ ಸೇರಿದಂತೆ ಯುರೋಪಿನ ನ್ಯಾಟೋ ಸಹೋದ್ಯೋಗಿ ರಾಷ್ಟ್ರಗಳು ತೋರಿದ ಪ್ರತಿರೋಧವು ಸದ್ಯದ ವಾಸ್ತವ ಸ್ಥಿತಿಯನ್ನು ನೆನಪಿಸುವಂತಿದೆ. ಇದನ್ನು ಜೀರ್ಣಿಸಿಕೊಳ್ಳಲು ಅಮೆರಿಕಕ್ಕೆ ಮತ್ತು ಅದರ ವಿಲಕ್ಷಣ ಅಧ್ಯಕ್ಷರಿಗೆ ಸ್ವಲ್ಪ ಸಮಯ ಹಿಡಿದೀತು.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story