ಸಾಲದ ಕರಾಳ ಕೂಪದಲ್ಲಿ ಸಿಕ್ಕಿದ ಬಿಹಾರ ಮಹಿಳೆಯರು ನಿಜಕ್ಕೂ ನಿತೀಶ್ ಬೆಂಬಲಕ್ಕೆ ನಿಂತರೇ?
x
ಬರೋಬ್ಬರಿ ಎರಡು ದಶಕಗಳಿಂದ ಆಡಳಿತದ ಚುಕ್ಕಾಣಿ ಹಿಡಿದು ಕುಂತಿರುವ ನಿತೀಶ್ ಕುಮಾರ್ ಅವರನ್ನು ಬಿಹಾರದ ಮಹಿಳೆಯರು ಕೇಳುತ್ತಿರುವುದು ಉದ್ಯೋಗ ಮತ್ತು ತಮ್ಮ ಮಕ್ಕಳಿಗೆ ಶಿಕ್ಷಣ. ಅವರೇನೂ ಆಕಾಶಕ್ಕೆ ಏಣಿ ಇಡುವಂತೆ ಕೇಳುತ್ತಿಲ್ಲ.

ಸಾಲದ ಕರಾಳ ಕೂಪದಲ್ಲಿ ಸಿಕ್ಕಿದ ಬಿಹಾರ ಮಹಿಳೆಯರು ನಿಜಕ್ಕೂ ನಿತೀಶ್ ಬೆಂಬಲಕ್ಕೆ ನಿಂತರೇ?

ಮುಖ್ಯಮಂತ್ರಿ ನಿತೀಶ್ ಕುಮಾರ್ ಆಡಳಿತಕ್ಕೀಗ 20 ವರ್ಷಗಳನ್ನು ಮುಗಿಸಿದೆ. ಇಷ್ಟೊಂದು ಸುದೀರ್ಘ ಅವಧಿ ಎನ್‌ಡಿಎ ಆಡಳಿತ ನಡೆಸಿದ ನಂತರವೂ ಬಿಹಾರದ ಮಹಿಳೆಯರನ್ನು ಸಾಲದ ಹೊರೆಯಿಂದ ಪಾರುಮಾಡಲು ಸಾಧ್ಯವಾಗಿಲ್ಲ.


ಬಿಹಾರದ ವಿಧಾನಸಭಾ ಚುನಾವಣೆಗೆ ಎರಡನೇ ಮತ್ತು ಅಂತಿಮ ಹಂತದ ಮತದಾನವು ನವೆಂಬರ್ 11 ರಂದು ಮುಕ್ತಾಯಗೊಂಡಿದೆ, ನವೆಂಬರ್ 14ರ ಫಲಿತಾಂಶಕ್ಕಾಗಿ ನಿರೀಕ್ಷಿಸುವ ಈ ಹೊತ್ತಿನಲ್ಲಿ ಕೆಲವು ಪ್ರಮುಖ ಪ್ರಶ್ನೆಗಳು ಗಾಳಿಯಲ್ಲಿ ತೂರಿ ಬಂದಿವೆ, ಆದರೆ ಬಹುಶಃ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರುವ ಪ್ರಶ್ನೆ ಎಂದರೆ ಮಹಿಳೆಯರು ಹೇಗೆ ಮತ ಚಲಾಯಿಸಿದರು?

ಅಷ್ಟಕ್ಕೂ ಮಹಿಳೆಯರದ್ದು ಸ್ಥಾಯಿ ಸ್ವರೂಪದ ವಿಭಾಗವಲ್ಲ. ಪುರುಷರಂತೆ, ಅವರ ಮತಗಳು ಕೂಡ ಜಾತಿ, ವರ್ಗ ಮತ್ತು ವಯಸ್ಸಿನ ಗುಂಪಿನ ಕ್ರಿಯಾಶೀಲತೆಯನ್ನು ಅವಲಂಬಿಸಿವೆ. ಇದು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಗಳಿಕೆಯ ನಿರೀಕ್ಷೆಗಳನ್ನು ಹೊಂದಿರುವ ಕೃಷಿ ಆರ್ಥಿಕತೆಯಲ್ಲಿ ಮಹಿಳೆಯರು ಸಾಮಾನ್ಯವಾಗಿ ಹೊರಬೇಕಾದ ಕೌಟುಂಬಿಕ ಜವಾಬ್ದಾರಿಗಳ ಭಾರದ ಮಟ್ಟವನ್ನು ಸೂಚಿಸುತ್ತದೆ.

ಬಿಹಾರದ ಇಲ್ಲಿ ವರೆಗಿನ ಕಥೆಯ ಪ್ರಕಾರ ಮಹಿಳಾ ಮತದಾರರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಅಚಲ ಬೆಂಬಲದ ನೆಲೆ. ಅವರೇ ನಿಜವಾದ ಶಕ್ತಿಯ ಸ್ತಂಭವಾಗಿದ್ದಾರೆ. ಇದಕ್ಕೆ ಕಾರಣವೂ ಇದೆ; 2016ರಲ್ಲಿ ಬಿಹಾರದಲ್ಲಿ ಮದ್ಯಪಾನ ನಿಷೇಧವನ್ನು ಜಾರಿಗೆ ತಂದಿದ್ದು. ಆನಂತರ, ಮಹಿಳೆಯರು ಮುಖ್ಯಮಂತ್ರಿಗಳ ಮುಂಚೂಣಿ ಬೆಂಬಲಿಗರಾಗಿ ಉಳಿದಿದ್ದಾರೆ; ನಿಜಕ್ಕೂ, ಮಹಿಳೆಯರು ಇಲ್ಲದಿದ್ದರೆ ಅವರು ರಾಜ್ಯದಲ್ಲಿ ಗೆಲುವಿಗಾಗಿ ಹೋರಾಟ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿಗೆ ಸಿಲುಕುತ್ತಿದ್ದರು.

ಮುಖ್ಯ ವಾಹಿನಿಗಳ ಮುಖವಾಡ

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳು ಈ ಕಥೆಯನ್ನು ಮತ್ತೆ ಮತ್ತೆ ಪ್ರಸಾರ ಮಾಡಿ ಸವಕಲಾಗಿದೆ. ವಿಶೇಷವಾಗಿ ಚುನಾವಣಾ ಸಮಯದಲ್ಲಿ, ಮತ್ತು ಈ ಪ್ರವೃತ್ತಿಯು 2025ರ ಚುನಾವಣಾ ಪ್ರಚಾರದ ಉದ್ದಕ್ಕೂ ಮುಂದುವರೆಯಿತು. ಬಹುಶಃ, ಈ ವೈಭವೀಕರಣವು—(ಏಕೆಂದರೆ ಸಿಎಂ ಅವರ ನೀತಿಗಳಿಂದ ಬಿಹಾರದ ಮಹಿಳೆಯರು "ಸಬಲರಾಗಿದ್ದಾರೆ" ಎಂಬುದು ಇದರ ಹಿಂದಿನ ಸಂದೇಶವಾಗಿದೆ). ಸಿಎಂ ಅವರು ಪ್ರಧಾನಿ ನರೇಂದ್ರ ಮೋದಿ ಅವರ ದೀರ್ಘಕಾಲದ ಮಿತ್ರರು ಎಂಬುದು ಈ ಅಂಶಕ್ಕೆ ಋಣಿಯಾಗಿದೆ. ಅಲ್ಲದೆ, ಇತ್ತೀಚಿನ ವರ್ಷಗಳಲ್ಲಿ ಪ್ರಧಾನಿಯವರ ಪರ ನಿಲ್ಲುವುದು ದೊಡ್ಡ ಉದ್ಯಮದೊಂದಿಗೆ ಸಂಪರ್ಕ ಹೊಂದಿರುವ ಭಾರತದ ಮುಖ್ಯವಾಹಿನಿಯ ಪತ್ರಿಕೋದ್ಯಮದ ಪ್ರಮುಖ ಲಕ್ಷಣವಾಗಿದೆ.

ಒಂದು ವೇಳೆ ಮೋದಿ ಮತ್ತು ನಿತೀಶ್ ಕುಮಾರ್ ಅವರು ಬೇರ್ಪಟ್ಟಿದ್ದರೆ, ಎನ್‌ಡಿಎಗೆ ಒಂದು ಅನುಕೂಲಕರ ಗ್ರಹಿಕೆಯನ್ನು ನೀಡುವ ಸಲುವಾಗಿ, ಮಹಿಳೆಯರ “ಸಬಲೀಕರಣ” ಸಂಗತಿಯು ಚುನಾವಣೆಯ ವೇಳೆ ನಿರಂತರ ಚರ್ಚೆಯ ವಿಷಯವಾಗುತ್ತಿತ್ತೇ ಎಂಬುದನ್ನು ಯೋಚಿಸಬೇಕಾದ್ದೇ ಆಗಿದೆ.

ಆದರೆ, 2020 ರ ಚುನಾವಣಾ ವಿಶ್ಲೇಷಣೆಯ ಯಾವುದೇ ಸಂದರ್ಭದಲ್ಲಿ ನಿತೀಶ್‌ಗೆ ಅಚಲ ಬೆಂಬಲ ಎಂಬ ಸಿದ್ಧಾಂತಕ್ಕೆ ಯಾವ ನೈಜ ಪುರಾವೆಯನ್ನೂ ಒದಗಿಸುವುದಿಲ್ಲ. ‘ವೈರ್ ವಿಶ್ಲೇಷಣೆ'ಯಲ್ಲಿ ಉಲ್ಲೇಖಿಸಲಾದ CSDS-ಲೋಕನೀತಿ 2020ರ ಸಮೀಕ್ಷೆಯ ಚುನಾವಣೋತ್ತರ ದತ್ತಾಂಶದ ಪ್ರಕಾರ, ನಿತೀಶ್ ನೇತೃತ್ವದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟಕ್ಕೆ ಶೇ.38ರಷ್ಟು ಮತ್ತು ವಿರೋಧ ಪಕ್ಷದ ಮೈತ್ರಿಕೂಟವಾದ ಮಹಾಘಟಬಂಧನಕ್ಕೆ ಶೇ.37ರಷ್ಟು ಮಹಿಳೆಯರು ಮತ ಚಲಾಯಿಸಿದ್ದಾರೆ.

ಆಕ್ರಮಣಕಾರಿ ಎಂದು ಬಿಂಬಿಸಲಾದ ದೊಡ್ಡ ಮಾಧ್ಯಮದ ಆದ್ಯತೆಗಳ ಹೊರತಾಗಿಯೂ, 2025ರಲ್ಲಿ ನಿರ್ಲಕ್ಷಿಸಲು ಸಾಧ್ಯವೇ ಇಲ್ಲದ ದೊಡ್ಡ ವಾಸ್ತವವಿದೆ ಮತ್ತು ಇದಕ್ಕೆ ಹಲವು ಮಗ್ಗಲುಗಳಿವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಒಂದು: ಬಿಹಾರದಲ್ಲಿ ತೀವ್ರ ವಿವಾದಕ್ಕೆ ಗುರಿಯಾದ ವಿಶೇಷ ತೀವ್ರ ಪರಿಷ್ಕರಣೆ (SIR) ಮೂಲಕ ಅಳಿಸಲಾದ ಹೆಸರುಗಳಲ್ಲಿ ಶೇ.60 ರಷ್ಟು ಮಹಿಳಾ ಮತದಾರರದ್ದಾಗಿವೆ.

ಮೌನದ ಮುಸುಕಿನಲ್ಲಿ ಆಯೋಗ

ಅಕ್ಟೋಬರ್ ಆರಂಭದಲ್ಲಿ ಪ್ರಕಟವಾದ ಪಿಟಿಐ ವರದಿಯ ಪ್ರಕಾರ, ಎಸ್‌ಐಆರ್ ಕಾರ್ಯಾಚರಣೆಯ ನಂತರ ಚುನಾವಣಾ ಆಯೋಗವು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದ ಕೆಲವೇ ದಿನಗಳಲ್ಲಿ, ವಿರೋಧ ಪಕ್ಷವಾದ ಕಾಂಗ್ರೆಸ್, ಅಳಿಸಿದ ಹೆಚ್ಚಿನ ಹೆಸರುಗಳು ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರದ್ದಾಗಿದ್ದು, 2020ರಲ್ಲಿ ಕಡಿಮೆ ಅಂತರದ ಸ್ಪರ್ಧೆಗಳಾಗಿದ್ದ 59 ಕ್ಷೇತ್ರಗಳಲ್ಲಿ ಇದು ಹರಡಿಕೊಂಡಿವೆ ಎಂದು ಆರೋಪಿಸಿತು. ಇದಕ್ಕೆ ಏನಾದರೂ ಸಿಂಧುತ್ವವಿದೆಯೇ? ದತ್ತಾಂಶವು ಕೇವಲ ಚುನಾವಣಾ ಆಯೋಗದ ಬಳಿ ಮಾತ್ರ ಇದೆ, ಮತ್ತು ಅದರ ಮೌನ ಎದ್ದು ಕಾಣುವಂತಿದೆ ಹಾಗೂ ಅನುಮಾನದಿಂದ ಕೂಡಿದೆ.

ಇನ್ನೂ ಸಂಕ್ಷಿಪ್ತವಾಗಿ ಹೇಳುವುದಾದರೆ, ನ. 6ರಂದು ಬಿಹಾರದ ಮೊದಲ ಹಂತದ ಮತದಾನದ ಬಳಿಕ, ಚುನಾವಣಾ ಆಯೋಗವು ಸಾಂವಿಧಾನಿಕ ಸಂಗತಿಯನ್ನು ನಿರ್ಲಕ್ಷಿಸಿ ಮತ್ತು ನಿಷ್ಪಕ್ಷಪಾತವನ್ನು ಬದಿಗಿಟ್ಟು, ಜನಪ್ರಿಯ ಗ್ರಹಿಕೆಯಲ್ಲಿ ಪದೇ ಪದೇ ಎನ್‌ಡಿಎ ಪರ ತನ್ನ ಆದ್ಯತೆ ಇರುವುದನ್ನು ಬಹಿರಂಗಪಡಿಸಿರುವವುದು ಸ್ಪಷ್ಟವಾಗಿ ಕಾಣುತ್ತಿದೆ. ಅದು ಮಹಿಳಾ ಮತದಾರರ ಬಗ್ಗೆ ಇನ್ನೂ ಯಾವುದೇ ದತ್ತಾಂಶವನ್ನು ಬಿಡುಗಡೆ ಮಾಡದಿರುವುದು ಆಸಕ್ತಿದಾಯಕವಾಗಿದೆ. ಉದಾಹರಣೆಗೆ, ಈ ಬಾರಿ ಎಷ್ಟು ಮಹಿಳೆಯರು ಮತ ಚಲಾಯಿಸಿದರು ಮತ್ತು ಪುರುಷರಿಗೆ ಹೋಲಿಸಿದರೆ ಅವರ ಪ್ರಮಾಣ ಎಷ್ಟು ಎಂಬ ಮಾಹಿತಿ ಇನ್ನೂ ಅಲಭ್ಯ.

‘ದಿ ವೈರ್' ನಡೆಸಿದ ಸಂಶೋಧನೆಯ ಪ್ರಕಾರ (ನವೆಂಬರ್ 3 ರಂದು ಪ್ರಕಟಗೊಂಡಿದೆ), 2010 ರಿಂದೀಚೆಗಿನ ಒಂದು ಪ್ರವೃತ್ತಿಗೆ ವಿರುದ್ಧವಾಗಿ ಚುನಾವಣೆಗಳಲ್ಲಿ ಮಹಿಳಾ ಮತದಾರರ ಪಾಲ್ಗೊಳ್ಳುವಿಕೆಯ ಶೇಕಡಾವಾರು ಪ್ರಮಾಣವು ಪುರುಷರಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ. 2015ರಲ್ಲಿ, ಶೇ. 60.5ರಷ್ಟು ಮಹಿಳಾ ಮತದಾರರು ಮತ ಚಲಾಯಿಸಲು ಬಂದಿದ್ದರೆ, ಪುರುಷರ ಪ್ರಮಾಣ ಶೇ.53.3ರಷ್ಟಿತ್ತು. 2020ರಲ್ಲಿ, ಮಹಿಳೆಯರ ಪ್ರಮಾಣ ಶೇ.59.7ರಷ್ಟು ಇತ್ತು, ಆದರೆ ಪುರುಷರ ಪ್ರಮಾಣ 54.5 ಪ್ರತಿಶತದಷ್ಟು ಇತ್ತು.

ಈ ವಿಶ್ಲೇಷಣೆಯನ್ನೇ ನಂಬುವುದಾದರೆ, ಹೆಚ್ಚಿನ ಸಂಖ್ಯೆಯ ಮುಸ್ಲಿಂ ಮತ್ತು ಯಾದವ ಮಹಿಳೆಯರು ವಿರೋಧ ಪಕ್ಷದ ಮೈತ್ರಿಕೂಟವಾದ ಮಹಾಘಟಬಂಧನಕ್ಕೆ ಮತ ಚಲಾಯಿಸುವ ಪ್ರವೃತ್ತಿ ಹೊಂದಿದ್ದರೆ, ಹೆಚ್ಚಿನ ಸಂಖ್ಯೆಯ ಮೇಲ್ಜಾತಿ, ಯಾದವರಲ್ಲದ ಒಬಿಸಿ ಮತ್ತು ದಲಿತ ಮಹಿಳೆಯರು ಆಡಳಿತಾರೂಢ ಎನ್‌ಡಿಎಗೆ ಮತ ಹಾಕುವ ಪ್ರವೃತ್ತಿ ಹೊಂದಿದ್ದಾರೆ ಎಂದು ಸೂಚಿಸುತ್ತದೆ. ಹಾಗಾದರೆ 2025ರಲ್ಲಿ ಕಥೆ ಏನಾಗಲಿದೆ? ಅದೇ ಅತ್ಯಂತ ಕುತೂಹಲದ ಪ್ರಶ್ನೆ.

ಮಹಿಳಾ ಸಬಲೀಕರಣ ಎಂಬ ಬೊಗಳೆ

ಇಲ್ಲಿ, ನಾವು ಸಾಕಷ್ಟು ಬೃಹತ್ ಪ್ರಮಾಣದ, ಕ್ಷೇತ್ರಾಧಾರಿತ ವರದಿ ಮಾಡುವ ಅಭ್ಯಾಸವನ್ನು ಹೊಂದಿದ್ದೇವೆ. ಇದನ್ನೊಂದು ಪಕ್ಕಾ ವೈಜ್ಞಾನಿಕ ಸಮೀಕ್ಷೆ ಅಥವಾ ತನಿಖೆ ಎಂದು ಕರೆಯಲಾಗದು ಮತ್ತು ಇದಕ್ಕೆ ದೃಢೀಕರಣದ ಅಗತ್ಯವಿರುತ್ತದೆ (ಅದರ ಬೇರುಗಳು ಅಸ್ಪಷ್ಟವಾಗಿ ಲಭ್ಯವಿದೆ). ಈ ಕಸರತ್ತನ್ನು ದೆಹಲಿ ಮೂಲದ ಸುಪ್ರಸಿದ್ಧ ಸಾಮಾಜಿಕ ಕಾರ್ಯಕರ್ತೆ ಶಬ್ನಮ್ ಹಾಶ್ಮಿ ಅವರು ವೈಯಕ್ತಿಕ ನೆಲೆಯಲ್ಲಿ ನಡೆಸಿದ್ದಾರೆ. ಅವರು ಇತ್ತೀಚೆಗೆ ತಮ್ಮ “ಶೋಧನೆಗಳನ್ನು” ಸತ್ಯಹಿಂದಿ ಆನ್ಲೈನ್ ವೀಡಿಯೊ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಪ್ರಕಟಿಸಿದ್ದಾರೆ. ಈ ಸಂದರ್ಶನವು ಹಿಂದಿ ಭಾಷೆಯ ಪರ್ಯಾಯ ಮಾಧ್ಯಮ ಪ್ರದರ್ಶನಗಳಲ್ಲಿ ಹೆಚ್ಚು ವೀಕ್ಷಣೆಗೆ ಒಳಗಾಗಿರುವವುಗಳಲ್ಲಿ ಒಂದಾಗಿದೆ.

ಸಬಲೀಕರಣದ ಬಗ್ಗೆ ನಿತೀಶ್ ಆಡಳಿತದಲ್ಲಿ ಎಷ್ಟೇ ಉತ್ಪ್ರೇಕ್ಷೆ ಇದ್ದರೂ, ಗ್ರಾಮೀಣ ಬಿಹಾರದ ಮಹಿಳೆಯರ ಕಷ್ಟದ, ಬಡತನದ ಜೀವನವನ್ನು ಸೂಚಿಸುವ ಪ್ರಮುಖ ಒಳನೋಟಗಳು ಇದರಲ್ಲಿವೆ, ಇದು ಕೇವಲ ಭಯಾನಕ ಪರಿಸ್ಥಿತಿಯನ್ನು ಅನಾವರಣ ಮಾಡುತ್ತದೆ. ಚುನಾವಣೆಗೆ ಕೆಲಕಾಲಕ್ಕೂ ಮುನ್ನ ಈ ಸಮಾಜಸೇವಾ ಕಾರ್ಯಕರ್ತರು ಸುಮಾರು ಒಂದೂವರೆ ತಿಂಗಳು, ಗ್ರಾಮೀಣ ಬಿಹಾರದ 38 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ ಬಹುತೇಕ ಪ್ರತ್ಯೇಕವಾಗಿ ಕಳೆದು ಅಲ್ಲಿನ ಚಿತ್ರಣವನ್ನು ಪಡೆದಿದ್ದಾರೆ. ಅವರು ಸಣ್ಣ ಸಣ್ಣ ಗುಂಪುಗಳಲ್ಲಿ 6,500 ಮಹಿಳೆಯರ ಜೊತೆ ಸಂವಾದ ನಡೆಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅವರು ಭೇಟಿಯಾದವರ ಪೈಕಿ ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ನಿತೀಶ್ ಕುಮಾರ್‌ಗೆ ಮತ ಹಾಕುವ ತಮ್ಮ ಇಚ್ಛೆ ವ್ಯಕ್ತಪಡಿಸಿದ್ದಾರೆ; ಉಳಿದವರು ಭಿನ್ನ ಧ್ವನಿಗಳಲ್ಲಿ ಮಾತನಾಡಿದ್ದಾರೆ ಎಂಬುದು ಅವರ ಸ್ಪಷ್ಟ ಅಭಿಪ್ರಾಯವಾಗಿದೆ.

ಮಹಿಳೆಯರ ಮೇಲೆ ಸಾಲದ ಸವಾರಿ

ಹಾಶ್ಮಿ ಅವರ ಮುಂದಿಟ್ಟಿರುವ ಪ್ರಮುಖ ಅಂಶವೆಂದರೆ, ಬಲವಂತದ ಬಡ್ಡಿದರಗಳನ್ನು ವಿಧಿಸುವ ಸಣ್ಣ ಸಣ್ಣ ಹಣಕಾಸು ಕಂಪನಿಗಳಿಂದಾಗಿ ಈ ಗ್ರಾಮೀಣ ಮಹಿಳೆಯರ ಮೇಲಿರುವ ಸಾಲದ ಹೊರೆ ಅಧಿಕವಾಗಿದೆ. ಇದು ಆತ್ಮಹತ್ಯೆಗಳಿಗೆ ಮತ್ತು ಮಹಿಳೆಯರ ಲೈಂಗಿಕ ಶೋಷಣೆಗೆ ಕಾರಣವಾಗಿದೆ. ಅವರು ನೀಡಿದ ಅಂಶಗಳು ನಿಜಕ್ಕೂ ಅಚ್ಚರಿ ಹುಟ್ಟಿಸುತ್ತವೆ. ಸತ್ಯಹಿಂದಿ ಸಂದರ್ಶನದ ಕೆಲವೇ ದಿನಗಳ ನಂತರ ಪ್ರಕಟವಾದ ಹಿಂದೂ ಪತ್ರಿಕೆಯ ಲೇಖನವೊಂದು (ನವೆಂಬರ್ 9, ಬೆಂಗಳೂರು ಆವೃತ್ತಿ), ಬಡ ಮಹಿಳೆಯರು (ಇಂತಹ ಸಾಲಗಳಿಲ್ಲದೆ ಜೀವನ ಸಾಗಿಸಲು ಸಾಧ್ಯವೇ ಇಲ್ಲದವರು ಮತ್ತು ಅವರ ಸಂಕಟವನ್ನು ನಿವಾರಿಸಲು ಸರ್ಕಾರ ಯಾವುದೇ ರೀತಿಯಲ್ಲಿ ಪ್ರಯತ್ನ ನಡೆಸಿಲ್ಲ) ಸಣ್ಣ ಹಣಕಾಸು ಸಂಸ್ಥೆಗಳ ಸಾಲದ ದಾಸರಾಗಿರುವುದನ್ನು ದೃಢಪಡಿಸುತ್ತದೆ

ಆರ್‌ಬಿಐ (RBI) ನಿಂದ ನೇಮಕಗೊಂಡ ಸೂಕ್ಷ್ಮ ಹಣಕಾಸು ವಲಯದ ಸ್ವಯಂ-ನಿಯಂತ್ರಕ ಸಂಸ್ಥೆಯಾದ ಸಾ-ಧನ್ (Sa-Dhan) ಅವರ ಭಾರತ್ ಮೈಕ್ರೋಫೈನಾನ್ಸ್ ವರದಿಯನ್ನು 'ದಿ ಹಿಂದೂ' ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಈ ವರದಿಯ ಪ್ರಕಾರ, ಈ ವಲಯದ ಒಟ್ಟು ಪೋರ್ಟ್‌ಫೋಲಿಯೊದಲ್ಲಿ ಬಿಹಾರದ ಪಾಲು ಸುಮಾರು ಶೇ.15ರಷ್ಟಿದ್ದು, ಇದು ದೇಶದಲ್ಲಿಯೇ ಅತಿ ಹೆಚ್ಚು. ಈ ವರ್ಷದ ಮಾರ್ಚ್‌ನಲ್ಲಿ, ಬಿಹಾರದಲ್ಲಿ ಬಾಕಿ ಉಳಿದಿರುವ ಸೂಕ್ಷ್ಮ ಹಣಕಾಸು ಸಾಲಗಳ ಮೊತ್ತವು 57,712 ಕೋಟಿ ರೂಗಳಷ್ಟಿತ್ತು.

ವಾಸ್ತವ ಚಿತ್ರಣ ಇಷ್ಟೊಂದು ವಿಶಾಲವಾಗಿರುವಾಗ, ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದಾಗಲೇ ನಿತೀಶ್ ಸರ್ಕಾರವು ಸುಮಾರು ಒಂದು ಕೋಟಿ ಮಹಿಳೆಯರಿಗೆ ನೀಡಿದ (ವಾಸ್ತವವಾಗಿ ಹಂಚಿದ) 10,000 ರೂ. ಹಣವು ಒಂದು ರೂಪಿತ ನಾಟಕೀಯ ಅಣಕದಂತೆ ಕಾಣುತ್ತದೆ. ಹೆಚ್ಚೆಂದರೆ, ಇದು ಬಹುತೇಕ ಮಹಿಳೆಯರಿಗೆ, ಸಾಲದ ಒಂದೆರಡು ಕಂತುಗಳನ್ನು ಪಾವತಿಸಲು ಮಾತ್ರ ಸಹಾಯವಾದೀತು ಎಂಬುದು ಹಾಶ್ಮಿ ಅವರ ಸಂದರ್ಶನದಿಂದ ವ್ಯಕ್ತವಾಗುವ ಅಂಶ.. ಆದರೆ ಮಹಿಳೆಯರ ಜೀವನ ಸಂಪೂರ್ಣ ಸಾಲದಲ್ಲಿ ಮುಳುಗಿ ಹೋಗಿದೆ. ಸಾಲ ವಸೂಲಿಗಾರರು ಪ್ರತಿ ವಾರ "ಕಂತು" ಸಂಗ್ರಹಿಸಲು ಅವರ ಮನೆಯನ್ನು ಎಡತಾಕುತ್ತಾರೆ!

ಉದ್ಯೋಗ ಕೊಡಿ, ಮಕ್ಕಳಿಗೆ ಶಿಕ್ಷಣ ಕೊಡಿ

ಹಾಶ್ಮಿ ಅವರು ಬಿಂಬಿಸುವ ಚಿತ್ರಣದ ಸುತ್ತ ಗಂಭೀರವಾದ, ದುರಂತಮಯವಾದ ನಿರಾಶೆಯ ವಾತಾವರಣವಿದೆ ಎಂಬುದು ಮಾತ್ರ ಸ್ಪಷ್ಟ. ಅವರು ಹೇಳುವ ಪ್ರಕಾರ, ಇಂದು ಗ್ರಾಮೀಣ ಬಿಹಾರದ ಮಹಿಳೆಯರ ಅತ್ಯಂತ ನಿರ್ಣಾಯಕ ಬೇಡಿಕೆ ಎಂದರೆ ಉದ್ಯೋಗ ಮತ್ತು ತಮ್ಮ ಮಕ್ಕಳಿಗೆ ಶಿಕ್ಷಣ. ಆ ಮಹಿಳೆಯರು ಆಕಾಶಕ್ಕೆ ಏಣಿ ಇಡಬೇಕು ಎಂದೇನೂ ಕೇಳುತ್ತಿಲ್ಲ

ಮುಖ್ಯಮಂತ್ರಿ ನಿತೀಶ್ ಕುಮಾರ್ ಆಡಳಿತಕ್ಕೀಗ 20 ವರ್ಷಗಳ ಆಯಸ್ಸು. ಇಷ್ಟೊಂದು ವರ್ಷ ಎನ್‌ಡಿಎ ಆಡಳಿತ ನಡೆಸಿದ ನಂತರವೂ ಬಿಹಾರದ ಮಹಿಳೆಯರನ್ನು ಈ ಕರಾಳ ವಾಸ್ತವವು ಕಾಡುತ್ತಿದ್ದರೆ, ಆ ವಾಸ್ತವವು ಆ ಮಹಿಳೆಯರು ನಂಬಿದ ಪುರುಷರನ್ನು ಬಿಡಲು ಸಾಧ್ಯವೇ? ಬಿಡುತ್ತದೆಯೇ? ಅಧಿಕಾರದ ರಾಜಕೀಯದಲ್ಲಿ ಮತ್ತು ದೊಡ್ಡ ಉದ್ಯಮಕ್ಕೂ ಅಧಿಕಾರಕ್ಕೂ ಇರುವ ಸಂಪರ್ಕವನ್ನು ಸುಗಮಗೊಳಿಸುವುದರಲ್ಲಿ ನಿರತವಾಗಿರುವ ರಾಷ್ಟ್ರೀಯ ಮುಖ್ಯವಾಹಿನಿ ಮಾಧ್ಯಮವು ಈ ಕಥೆಯನ್ನು ಸಂಪೂರ್ಣವಾಗಿ ಮರೆತಿದೆ. ಅದು ಸುದ್ದಿಗಳನ್ನು ಬಿಟ್ಟು ಪ್ರಚಾರವನ್ನು ಮುಂಚೂಣಿಯಲ್ಲಿ ಇರಿಸುವುದರಲ್ಲಿಯೇ ತಲ್ಲೀನವಾಗಿದೆ.

ಮತ ಎಣಿಕೆ ಮುಗಿಯುವವರೆಗೂ ನಾವು ಯಾವುದೇ ಚುನಾವಣಾ ಫಲಿತಾಂಶವನ್ನು ನಂಬಲು ಸಾಧ್ಯವಿಲ್ಲ. ಆದರೆ ನವೆಂಬರ್ 6 ರಂದು ನಡೆದ ಮೊದಲ ಸುತ್ತಿನ ಮತದಾನದ ನಂತರ ಪಾಟ್ನಾದಿಂದ ಬಂದ 'ದಿ ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಯು ಒಂದು ಆಸಕ್ತಿದಾಯಕ ವಿಶ್ಲೇಷಣೆಯನ್ನು ಪ್ರಕಟಿಸಿತ್ತು. ಈ ವಿಶ್ಲೇಷಣೆಯು ಇತಿಹಾಸದ ಪ್ರಕಾರ, ಒಟ್ಟಾರೆ ಮತದಾನವು ಶೇ.60ರ ಗಡಿ ದಾಟಿದಾಗ ಲಾಲೂ ಪ್ರಸಾದ್ ಗೆಲ್ಲುತ್ತಾರೆ ಮತ್ತು ಮತದಾನವು ಅದಕ್ಕಿಂತ ಕಡಿಮೆಯಿದ್ದಾಗ ನಿತೀಶ್ ಕುಮಾರ್ ಗೆಲ್ಲುತ್ತಾರೆ ಎಂದು ಸೂಚಿಸಿತ್ತು. ಈ ಕಥೆಯನ್ನು ಇಬ್ಬರು ಸ್ನೇಹಿತರು ಮತ್ತು ಬಳಿಕ ವೈರಿಗಳಾದವರ ಹಿನ್ನೆಲೆಯಲ್ಲಿ ರೂಪಿಸಲಾಗಿತ್ತು ಎಂಬುದನ್ನು ಮರೆಯಬಾರದು.

Read More
Next Story