
- ಮುಖಪುಟ
- ತಾಜಾ ಸುದ್ದಿತಾಜಾ ಸುದ್ದಿ
- ಕರ್ನಾಟಕಕರ್ನಾಟಕ
- ರಾಷ್ಟ್ರೀಯರಾಷ್ಟ್ರೀಯ
- ವಿಶೇಷ ಲೇಖನವಿಶೇಷ ಲೇಖನ
- ಅಭಿಮತ
- ಮನರಂಜನೆಮನರಂಜನೆ
- ಕ್ರೀಡೆಕ್ರೀಡೆ
- ಉದ್ಯೋಗ ವಾರ್ತೆ
- ವಿಡಿಯೋ

ಅಮೆರಿಕದ ಖಡಕ್ ವಾರ್ನಿಂಗ್ ಧಿಕ್ಕರಿಸಿ ಲೆಬನಾನ್ ಮೇಲೆ ದಾಳಿ ಮಾಡಿದ್ದಾರೆ. ಹಾಗೆ ಮಾಡುವ ಮೂಲಕ ಸಂಸತ್ತಿನ ಚುನಾವಣೆಗೂ ಮುನ್ನ ಆಂತರಿಕ ರಾಜಕೀಯ ತಂತ್ರಕ್ಕೇ ಇಸ್ರೇಲ್ ಪ್ರಧಾನಿ ಹೆಚ್ಚಿನ ಆದ್ಯತೆ ನೀಡಿದ್ದಾರೆ.
ಇತ್ತೀಚಿನ ಇಸ್ರೇಲ್-ಇರಾನ್ ದಾಳಿಯಲ್ಲಿ ಕೇಂದ್ರಬಿಂದುವಾಗಿರುವುದು ಲೆಬನಾನ್‌ನ ಹಿಜ್ಬುಲ್ಲಾ ವಿರುದ್ಧ ನಡೆಯುತ್ತಿರುವ ಸಮರ. ಕಳೆದ ವಾರ ಮತ್ತೊಂದು ಕದನ ವಿರಾಮ ಘೋಷಣೆಯಾಗಿದ್ದರೂ ಯುದ್ಧ ಮಾತ್ರ ಎಗ್ಗಿಲ್ಲದೆ ನಡೆದಿದೆ.
ಹಿಜ್ಬುಲ್ಲಾ ಭದ್ರಕೋಟೆಯಾಗಿರುವ ಬೇರೂತ್‌ನ ದಕ್ಷಿಣ ಉಪನಗರಗಳ ಮೇಲೆ ಯಾವುದೇ ದಾಳಿ ನಡೆದರೂ ನಾನು ಸಹಿಸಿಕೊಳ್ಳುವುದಿಲ್ಲ. ಪ್ರತೀಕಾರ ತೀರಿಸಿಕೊಂಡೇ ಸಿದ್ಧ ಎಂದು ಇರಾನ್ ಸ್ಪಷ್ಟ ಮಾತುಗಳಲ್ಲಿ ತಿಳಿಸಿತ್ತು. ಆದರೂ ಇಸ್ರೇಲ್ ರಕ್ಷಣಾ ಪಡೆ ಬೇರೂತ್ ಮೇಲೆ ದಾಳಿ ಮಾಡುವ ಮೂಲಕ ಇರಾನ್ ಹಾಕಿದ್ದ ʼಕೆಂಪುಗೆರೆʼಯನ್ನು ದಾಟಿದೆ.
ಇರಾನ್ ಕೂಡ ಸುಮ್ಮನೇ ಕೂರಲಿಲ್ಲ. ಅದಕ್ಕೆ ಪ್ರತಿಯಾಗಿ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿತು. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಮಹ್ಶಹರ್ ಪೆಟ್ರೋಕೆಮಿಲ್ ಸಂಕೀರ್ಣವನ್ನು ಟಾರ್ಗೆಟ್ ಮಾಡಿ ಇರಾನ್ ಒಳಭಾಗದಲ್ಲಿ ದಾಳಿ ನಡೆಸಿತು.
ಟ್ರಂಪ್ ವಾರ್ನಿಂಗ್‌ಗೆ ಚಿಕ್ಕಾಸಿನ ಬೆಲೆ ಇಲ್ಲ
ಇರಾನ್ ಜೊತೆ ಶಾಂತಿ ಒಪ್ಪಂದ ಮಾಡಿಕೊಂಡು ವಿಜಯದ ಘೋಷಣೆ ಮಾಡಿಕೊಂಡು ಜನಪ್ರಿಯವಲ್ಲದ ಇಂತಹ ಯುದ್ಧದಿಂದ ಹೊರಬರಲು ಶತಾಯಗತಾಯ ಪ್ರಯತ್ನ ನಡೆಸುತ್ತಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರಿಗೆ ಇದು ಅತ್ಯಂತ ಮುಜುಗರದ ಕ್ಷಣವಾಗಿದೆ. ಯಾಕೆಂದರೆ ಈಗ ನಡೆದಿರುವ ಘಟನೆಯು ಏಪ್ರಿಲ್ ಕದನ ವಿರಾಮದ ನಂತರದ ಅತ್ಯಂತ ಗಂಭೀರ ಉಲ್ಭಣ ಸ್ಥಿತಿ ಎಂದರೆ ತಪ್ಪಾಗಲಾರದು. ಬಿಕ್ಕಟ್ಟು ಉಲ್ಬಣಗೊಳ್ಳದಂತೆ ಎಚ್ಚರಿಕೆ ವಹಿಸುವಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಟ್ರಂಪ್ ವಾರ್ನಿಂಗ್ ಕೊಡುತ್ತಲೇ ಬಂದಿದ್ದಾರೆ. ಆದರೆ ನೆತನ್ಯಾಹು ಅಮೆರಿಕ ನಾಯಕನ ಸಲಹೆಗೆ ಚಿಕ್ಕಾಸಿನ ಬೆಲೆಯನ್ನೂ ಕೊಡುತ್ತಿಲ್ಲ.
ಇತ್ತ ಆತ್ಮವಿಶ್ವಾಸದಿಂದ ಬೀಗುತ್ತಿರುವ ಇರಾನ್ ಲೆಬನಾನ್ ಈ ಸಮೀಕರಣದ ಅವಿಭಾಜ್ಯ ಅಂಗವೇ ಆಗಿದೆ ಎಂಬ ಸ್ಪಷ್ಟ ಸಂದೇಶವನ್ನು ಇಸ್ರೇಲ್ ಮತ್ತು ಅಮೆರಿಕಕ್ಕೆ ರವಾನಿಸಿದೆ. ಇರಾನ್ ನಡೆಸಿದ ಕ್ಷಿಪಣಿ ದಾಳಿಯು ಕೇವಲ ಹಿಜ್ಬುಲ್ಲಾಗೆ ನೀಡಿದ ಬೆಂಬಲವಲ್ಲ ಬದಲಾಗಿ ತಾನು ಈ ಮೊದಲೇ ಘೋಷಿಸಿದ ʼಕೆಂಪು ರೇಖೆʼ (ಅಪಾಯದ ಗೆರೆ)ಯನ್ನು ಜಾರಿಗೊಳಿಸಿದ ಕ್ರಮವೇ ಆಗಿದೆ ಎಂದು ತಿಳಿಸಿದೆ.
ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಬಂಡುಕೋರರ ಮೇಲೆ ದಾಳಿ ನಡೆಸುವುದನ್ನು ನಿಲ್ಲಿಸದೇ ಹೋದರೆ ಶಾಂತಿ ಸ್ಥಾಪನೆ ಕನಸಿನ ಮಾತೇ ಸರಿ. ಕದನ ವಿರಾಮ ಘೋಷಣೆಯ ಹೊರತಾಗಿಯೂ ಇಸ್ರೇಲ್ ಈ ದಾಳಿಯನ್ನು ಮುಂದುವರಿಸಿದೆ. ಲೆಬನಾನ್‌ನ ಹಿಜ್ಬುಲ್ಲಾ, ಇರಾಕಿನ ಶಿಯಾ ಮಿಲಿಷಿಯಾ ಮತ್ತು ಯೆಮನ್‌ನ ಹೂತಿಗಳನ್ನು ಒಳಗೊಂಡಿರುವ ʼಪ್ರತಿರೋಧದ ಕೂಟʼಕ್ಕೆ ಬೆಂಬಲ ನೀಡುವುದನ್ನು ನಿಲ್ಲಿಸುವುದಿಲ್ಲ ಎಂದು ಇರಾನ್‌ನ ಹೊಸ ಆಡಳಿತ ತಿಳಿಸಿದೆ.
ಗಾಜಾ ಬಳಿಕ ಇಸ್ರೇಲ್ ಲೆಬನಾನ್‌ನ ಹಿಜ್ಬುಲ್ಲಾ ಕಡೆಗೆ ತನ್ನ ಗಮನ ಹರಿಸಿದ ಸಂದರ್ಭದಲ್ಲಿ ಇರಾನ್‌ನ ʼದೂರ ಸರಿದು ನಿಲ್ಲುವʼ ನೀತಿಯನ್ನು ತಪ್ಪು ನಡೆ ಎಂದು ಪರಿಗಣಿಸಲಾಗಿದ್ದು, ಅದನ್ನೀಗ ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ.
ಈ ಹಿಂದೆ ತಮ್ಮ ದೇಶದ ಸರ್ಕಾರವು ಪ್ರತಿರೋಧ ಒಡ್ಡುವ ಗುಂಪುಗಳ ಮೇಲೆ ಹಣ ಮತ್ತು ಸಂಪನ್ಮೂಲಗಳನ್ನು ಖರ್ಚು ಮಾಡುವುದನ್ನು ಇರಾನ್ ಜನತೆ ಟೀಕಿಸುತ್ತಿದ್ದರು. ಆದರೆ ಇಂತಹ ಸಂಘಟನೆಗಳು ಇರಾನ್ ಪಾಲಿಗೆ ರಕ್ಷಣಾತ್ಮಕ ಭದ್ರತಾ ವರ್ತುಲವಾಗಿ ಕೆಲಸ ಮಾಡುತ್ತಿವೆ ಎಂಬುದು ಈಗ ಬಹುತೇಕರಿಗೆ ಮನವರಿಕೆಯಾಗಿದೆ.
ಈ ಗುಂಪುಗಳು ಇರಾನ್ ಪಾಲಿಗೆ ಜೀವಾಳ ಮತ್ತು ಅವು ದೇಶದ ಪ್ರಮುಖ ಭದ್ರತಾ ಕಾರ್ಯವನ್ನು ನಿರ್ವಹಿಸುತ್ತವೆ. ಹಾಗಾಗಿ, ಹಿಜ್ಬೊಲ್ಲಾವನ್ನು ಕೈಬಿಟ್ಟು ಅಮೆರಿಕದ ಜೊತೆ ಒಪ್ಪಂದ ಮಾಡಿಕೊಳ್ಳುವುದು ಇರಾನ್‌ನ ದೀರ್ಘಾವಧಿಯ ಭದ್ರತಾ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ಇದೇ ಕಾರಣಕ್ಕೆ, ಅಮೆರಿಕದೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳುವ ಮುನ್ನ ಲೆಬನಾನ್‌ನಲ್ಲಿ ಕದನ ನಿಲ್ಲಬೇಕು ಎಂಬ ಇರಾನ್‌ನ ಪಟ್ಟು ಮುಂದುವರಿದಿದೆ.
ಭಾನುವಾರದ ಉಲ್ಬಣಕ್ಕೆ ಸಂಬಂಧಿಸಿದಂತೆ ಮೊದಲ ಪ್ರತಿಕ್ರಿಯೆಯಾಗಿ, ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣವಾದ 'ಟ್ರೂತ್ ಸೋಶಿಯಲ್'ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ: "ಉಭಯ ಬಣಗಳಾದ ಇಸ್ರೇಲ್ ಮತ್ತು ಇರಾನ್, ತಕ್ಷಣವೇ ಕದನ ವಿರಾಮಕ್ಕೆ ಮುಂದಾಗುತ್ತಿವೆ. 'ಶಾಂತಿ' ಮಾತುಕತೆಗಳು ಅಂತಿಮ ಹಂತದಲ್ಲಿವೆ; ಅಜ್ಞಾನ ಅಥವಾ ಮೂರ್ಖತನ ಅಡ್ಡಬಾರದಿದ್ದರೆ ಇವು ಯಶಸ್ವಿಯಾಗಲಿವೆ. ಅಂತಿಮ ಒಪ್ಪಂದಕ್ಕೆ ಬರುವವರೆಗೆ ದಿಗ್ಬಂಧನವು ಜಾರಿಯಲ್ಲಿರುತ್ತದೆ ಮತ್ತು ಸಂಪೂರ್ಣ ಬಲದೊಂದಿಗೆ ಮುಂದುವರಿಯುತ್ತದೆ. ಈ ಕುರಿತಂತೆ ವಿಷಯಗಳು ವೇಗವಾಗಿ ಪ್ರಗತಿ ಕಾಣಬೇಕು. ಈ ಸಂಬಂಧದ ನಿಮ್ಮ ಗಮನಕ್ಕೆ ಧನ್ಯವಾದಗಳು! - ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್."
ಇಲ್ಲಿ ಅಮೆರಿಕದ ಅಧ್ಯಕ್ಷರು ಪರಿಸ್ಥಿತಿಯನ್ನು ತಿಳಿಗೊಳಿಸಲು ಕರೆ ನೀಡುತ್ತಿರುವುದು ಸ್ಪಷ್ಟವಾಗಿ ತಿಳಿಯುತ್ತದೆ.
ಅಮೆರಿಕ ಮತ್ತು ಇಸ್ರೇಲ್ ಕೆಟ್ಟ ನಾಟಕ?
ದಕ್ಷಿಣ ಬೇರೂತ್ ಮತ್ತು ಇರಾನ್ ಎರಡರ ಮೇಲೂ ದಾಳಿ ನಡೆಸುವ ಮೂಲಕ, ನೆತನ್ಯಾಹು ವಾಸ್ತವವಾಗಿ ಟ್ರಂಪ್ ಅವರನ್ನು ಧಿಕ್ಕರಿಸಿದ್ದಾರೆ. ಈ ದಾಳಿಗಳು ವಾಷಿಂಗ್ಟನ್‌ನ ರಾಜತಾಂತ್ರಿಕ ಗುರಿಗಳು ಮತ್ತು ಇಸ್ರೇಲ್‌ನ ಮಿಲಿಟರಿ ಲೆಕ್ಕಾಚಾರಗಳ ನಡುವೆ ಎಷ್ಟರಮಟ್ಟಿಗೆ ಭಿನ್ನತೆಯಿದೆ ಎಂಬುದನ್ನು ಎತ್ತಿ ತೋರಿಸುತ್ತವೆ.
ಇದೆಲ್ಲವೂ ಮೊದಲೇ ನಿರ್ಧಾರವಾದ ನಾಟಕವೇ ಎಂಬ ಅನುಮಾನ ವ್ಯಕ್ತಪಡಿಸುವವರೂ ಇಲ್ಲದಿಲ್ಲ. ಇಸ್ರೇಲ್ ಮತ್ತು ಅಮೆರಿಕ 'ಒಳ್ಳೆಯ ಪೊಲೀಸ್-ಕೆಟ್ಟ ಪೊಲೀಸ್' ಆಟವಾಡುತ್ತಿವೆಯೇ? ಟ್ರಂಪ್‌ಅವರನ್ನು ಧಿಕ್ಕರಿಸಿದ್ದಕ್ಕೆ ಇಸ್ರೇಲ್‌ಗೆ ತಕ್ಕ ಶಾಸ್ತಿಯಾದರೆ ಮಾತ್ರ ಈ ವಿಷಯದಲ್ಲಿ ಸ್ಪಷ್ಟತೆ ಕಾಣುತ್ತದೆ. ಇಸ್ರೇಲ್‌ನ ಅತಿಕ್ರಮಣಗಳನ್ನು ಅಮೆರಿಕವೇನಾದರೂ ನಿರ್ಲಕ್ಷಿಸಿದ್ದೇ ಹೌದಾದರೆ ಅಮೆರಿಕದ ಮಾಧ್ಯಮಗಳಲ್ಲಿ ಕೆಲವರು ಸೂಚಿಸಿದಂತೆ ಅಮೆರಿಕಕ್ಕೆ ಈ ವಿಷಯ ಮೊದಲೇ ತಿಳಿದಿತ್ತು ಎಂಬುದು ಸ್ಪಷ್ಟವಾಗುತ್ತದೆ.
ಅಮೆರಿಕದಲ್ಲಿ ಪ್ರಬಲ ಇಸ್ರೇಲಿ ಲಾಬಿ ಕಾರ್ಯನಿರ್ವಹಿಸುತ್ತಿದೆ. ಟ್ರಂಪ್ ಎಷ್ಟೇ ದೊಡ್ಡ ಮಾತುಗಳನ್ನು ಆಡಿದರೂ ಕೂಡ, ಈ ಪ್ರಬಲ ಲಾಬಿಯನ್ನು ಧಿಕ್ಕರಿಸುವುದು ಅವರಿಗೆ ಸುಲಭದ ಕೆಲಸವಲ್ಲ.
ಒಂದು ವಿಷಯ ಸ್ಪಷ್ಟ: ನೆತನ್ಯಾಹು ಯುದ್ಧವನ್ನು ಮುಂದುವರಿಸಲು ಬಯಸುತ್ತಾರೆ ಮತ್ತು ಇರಾನ್‌ನೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳಲು ಅವರಿಗೆ ಬಿಲ್‌ಕುಲ್ ಇಷ್ಟವಿಲ್ಲ. ಕೇವಲ ನೆತನ್ಯಾಹು ಮಾತ್ರವಲ್ಲ, ಇಡೀ ಇಸ್ರೇಲಿ ಆಡಳಿತವು ಇರಾನ್‌ನ್ನು ತನ್ನ ಅಸ್ತಿತ್ವಕ್ಕೇ ಬೆದರಿಕೆಯೆಂದು ಪರಿಗಣಿಸುತ್ತದೆ. ಯಹೂದಿ ರಾಷ್ಟ್ರಕ್ಕೆ ಇನ್ನು ಮುಂದೆ ಎಂದಿಗೂ ಅಪಾಯವಾಗದಂತೆ ಆ ಆಡಳಿತವನ್ನು ನಿಶ್ಯಕ್ತಗೊಳಿಸಲು ಮತ್ತು ನಾಶಪಡಿಸುವುದೇ ಅವರ ಇರಾದೆ.
ನೆತನ್ಯಾಹು ರಾಜಕೀಯ ತಂತ್ರ
2023ರ ಅಕ್ಟೋಬರ್ 7ರ ಹಮಾಸ್ ದಾಳಿಯ ನಂತರ, ಗಾಜಾದಲ್ಲಿ ಹಮಾಸ್‌ನ ಮತ್ತು ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಬಂಡುಕೋರ ರಾಜಕೀಯ ಮತ್ತು ಮಿಲಿಟರಿ ನಾಯಕತ್ವವನ್ನು ಹತ್ಯೆಗೈಯುವ ಮೂಲಕ ಇಸ್ರೇಲ್ ಮಿಲಿಟರಿ ಯಶಸ್ಸನ್ನು ಸಾಧಿಸಿದ್ದರೂ, ಈ ಎರಡೂ ಗುಂಪುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವಲ್ಲಿ ಇಸ್ರೇಲ್ ಯಶಸ್ವಿಯಾಗಿಲ್ಲ ಎಂಬುದು ದಿಟ.
ಗಾಜಾವನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಕೆಲಸವನ್ನು ಹಮಾಸ್ ಮುಂದುವರಿಸಿದೆ. ಹಸನ್ ನಸ್ರಲ್ಲಾ ಅವರ ಹತ್ಯೆಯ ನಂತರವೂ ಹಿಜ್ಬುಲ್ಲಾ ಕುಸಿದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಆದಾಗ್ಯೂ, ವಿಶೇಷವಾಗಿ ಹಮಾಸ್ ಗಣನೀಯವಾಗಿ ದುರ್ಬಲಗೊಂಡಿದೆ ಎಂಬುದನ್ನು ಒಪ್ಪಲೇಬೇಕಾಗಿದೆ.
ವರ್ಚಸ್ಸು ವೃದ್ಧಿಸುವ ಲೆಕ್ಕಾಚಾರ
ಈ ವರ್ಷದ ಸೆಪ್ಟೆಂಬರ್ ಅಥವಾ ಅಕ್ಟೋಬರ್ ಅಂತ್ಯದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಂಸದೀಯ ಚುನಾವಣೆಗಳನ್ನು ಎದುರಿಸುತ್ತಿದ್ದಾರೆ. ಅಮೆರಿಕವನ್ನು ಇರಾನ್ ವಿರುದ್ಧ ಯುದ್ಧಕ್ಕೆ ಎಳೆತಂದ ಏಕೈಕ ನಾಯಕ ಎಂಬ ವರ್ಚಸ್ಸು ಅವರಿಗೆ ಬೇಕಾಗಿದೆ. ಹಾಗೆ ಮಾಡುವ ಮೂಲಕ ಬಲವಾದ ಸ್ಥಾನದಲ್ಲಿ ನಿಂತು ಮತದಾರರನ್ನು ಎದುರಿಸಬೇಕು ಎಂಬುದು ಅವರ ಬಯಕೆ.
ಈ ರಾಜಕೀಯ ಲೆಕ್ಕಾಚಾರಗಳು ರಾಷ್ಟ್ರೀಯ ಚುನಾವಣೆಯ ಮುನ್ನಾದಿನದಂದು ನೆತನ್ಯಾಹು ಅವರ ತಂತ್ರದ ಭಾಗವಾಗಿರಲಿವೆ. ಸದ್ಯಕ್ಕೆ ಅವರು ನೀಡುತ್ತಿರುವ ಸಂದೇಶ ಇರಾನ್‌ಗಾಗಲಿ, ಹಿಜ್ಬುಲ್ಲಾಗಾಗಲಿ ಅಥವಾ ಅಮೆರಿಕಕ್ಕಾಗಲಿ ಅಲ್ಲ; ಇದು ಪ್ರಾಥಮಿಕವಾಗಿ ಅವರ ದೇಶೀಯ ಪ್ರೇಕ್ಷಕರನ್ನು (ಇಸ್ರೇಲಿ ಮತದಾರರಿಗಾಗಿ) ಉದ್ದೇಶಿಸಿದ್ದಾಗಿದೆ.
ಹಿಂದೆ ಸರಿಯದ ಇರಾನ್
ಆದರೆ, ಯುದ್ಧವನ್ನು ಮುಂದುವರಿಸುವುದು ಇರಾನ್‌ನ ಹಿತಾಸಕ್ತಿಯಲ್ಲ. ಇಸ್ರೇಲ್ ಮೇಲೆ ಮೂರು ಹಂತದ ಕ್ಷಿಪಣಿ ದಾಳಿಗಳನ್ನು ನಡೆಸುವ ಮೂಲಕ ತಾವು ಹೇಳಬೇಕಾದ್ದನ್ನು ಹೇಳಿದ ನಂತರ, ಇರಾನ್ ಮಿಲಿಟರಿಯ 'ಖತಮ್ ಅಲ್-ಅನ್ಬಿಯಾ ಕೇಂದ್ರ ಪ್ರಧಾನ ಕಛೇರಿ' ಸೋಮವಾರ ಮಧ್ಯಾಹ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನಿರ್ವಹಿಸುವ 'ಫಾರ್ಸ್ ನ್ಯೂಸ್ ಏಜೆನ್ಸಿ'ಯಲ್ಲಿ ಹೇಳಿಕೆಯೊಂದನ್ನು ಪ್ರಕಟಿಸಿದೆ. ಅದರ ಪ್ರಕಾರ, ಈ ದಾಳಿಗಳು ಬೇರೂತ್‌ನ ದಾಹಿಯೆ ಪ್ರದೇಶದ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿದ್ದು, ಈಗ ಮುಕ್ತಾಯಗೊಂಡಿವೆ. ಆದರೆ, ಒಂದು ವೇಳೆ ಇಸ್ರೇಲ್ ತನ್ನ ಆಕ್ರಮಣಕಾರಿ ಧೋರಣೆಯನ್ನು ಮುಂದುವರಿಸಿದರೆ, "ಇನ್ನೂ ಹೆಚ್ಚಿನ ತೀವ್ರ ಮತ್ತು ಭೀಕರ ಕ್ರಮಗಳನ್ನು ಕೈಗೊಳ್ಳಲಾಗುವುದು" ಎಂದು ಅದು ಎಚ್ಚರಿಕೆ ನೀಡಿದೆ.
ಲೆಬನಾನ್‌ನಲ್ಲಿ ಕದನ ವಿರಾಮವು ಸಂಘರ್ಷವನ್ನು ಕೊನೆಗೊಳಿಸುವ ಷರತ್ತುಗಳಲ್ಲಿ ಒಂದೆಂದು ಇರಾನ್ ಈ ಮೊದಲೇ ಹೇಳಿತ್ತು. ಇದರಾಚೆಗೆ, ಈ ಕ್ರಮವು ತನ್ನ ವಿರೋಧಿಗಳಿಗೆ ಮತ್ತು ಈ ಪ್ರದೇಶದ ಅರಬ್ ರಾಷ್ಟ್ರಗಳಿಗೆ, ಅಗತ್ಯಬಿದ್ದರೆ ಸಂಘರ್ಷಕ್ಕೆ ಇರಾನ್ ಸಿದ್ಧವಿದೆ ಎಂಬ ಸಂದೇಶವನ್ನು ರವಾನಿಸುವಂತಿದೆ. ಈ ದೃಷ್ಟಿಕೋನದಿಂದ ನೋಡಿದಾಗ, ಈ ಉಲ್ಬಣವು ಕೇವಲ ತಕ್ಷಣದ ಮಿಲಿಟರಿ ಸನ್ನಿವೇಶದ ಭಾಗ ಮಾತ್ರವಲ್ಲದೆ, ತನ್ನ ಪ್ರತಿಬಂಧಕ ಶಕ್ತಿಯನ್ನು ಕಾಯ್ದುಕೊಳ್ಳಲು ಮತ್ತು ತನ್ನ ದೃಢಸಂಕಲ್ಪವನ್ನು ಪ್ರದರ್ಶಿಸುವ ವಿಶಾಲ ಪ್ರಯತ್ನದ ಭಾಗವಾಗಿದೆ ಎಂದು ಪರಿಗಣಿಸಬಹುದು.
ಒಪ್ಪಂದವು ಕೈಗೆಟುಕುವ ಹಂತದಲ್ಲಿದೆ ಎಂದು ಟ್ರಂಪ್ ನಂಬಿರಬಹುದು, ಆದರೆ ಆ ಒಪ್ಪಂದವು ಯಶಸ್ವಿಯಾಗುತ್ತದೆಯೋ ಅಥವಾ ವಿಫಲವಾಗುತ್ತದೆಯೋ ಎಂಬುದನ್ನು ನಿರ್ಧರಿಸುವ ನಿಜವಾದ ರಣರಂಗವಾಗಿ ಲೆಬನಾನ್ ಹೊರಹೊಮ್ಮಿದೆ. ಲೆಬನಾನ್‌ನಲ್ಲಿ ಕದನ ಮುಂದುವರಿದರೆ, ಪ್ರತಿಯೊಂದು ಕದನ ವಿರಾಮವೂ ಮುಂದಿನ ಯುದ್ಧಕ್ಕೆ ಮುನ್ನ ಕೇವಲ ಒಂದು ಸಣ್ಣ ವಿರಾಮದಂತೆ ಸಾಬೀತಾದರೆ ಅಚ್ಚರಿಯಿಲ್ಲ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

