
ದಿಢೀರ್ ಮಳೆ, ಪ್ರವಾಹ, ಸುದೀರ್ಘ ಬರ: ವಿಕ್ಷಿಪ್ತ ಹವಾಮಾನದಿಂದ ತತ್ತರಿಸಿದ ನೇಪಾಳ
(ತೀವ್ರ ಮತ್ತು ಸುದೀರ್ಘ ಬರಗಾಲ, ಹಠಾತ್ ಸುರಿಯುವ ಮಳೆ, ದಿಢೀರ್ ಬಂದ ಪ್ರವಾಹಗಳು, ಏರುತ್ತಿರುವ ತಾಪಮಾನ... ಇದು ಹಿಮಾಲಯ ಸಾಮ್ರಾಜ್ಯದ ಸ್ಥಿತಿ. ದುರ್ಬಲ ಹವಾಮಾನ ದೀರ್ಘಾವಧಿಯ ಪರಿಸರ ಕ್ರಮದ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತವೆ.
ದೀರ್ಘಾವಧಿ ಬರಗಾಲ ಮತ್ತು ಏಕಾಏಕಿ ಸುರಿಯುವ ಭಾರೀ ಮಳೆ.
ಇಂತಹುದೊಂದು ವಿಚಿತ್ರ ಹವಾಮಾನ ಬದಲಾವಣೆಯ ನಡುವೆ ನೇಪಾಳ ಸಿಕ್ಕಿಹಾಕಿಕೊಂಡಿದೆ. ಇದು ಈ ರಾಷ್ಟ್ರದ ಇತಿಹಾಸದಲ್ಲಿಯೇ ಕಂಡರಿಯದ ಚಿತ್ರಣ. ಈ ರೀತಿಯ ಎರಡು ವ್ಯತಿರಿಕ್ತವಾದ ಹವಾಮಾನ ಪರಿಸ್ಥಿತಿಗಳು ಜನರು, ಕೃಷಿ ಮತ್ತು ಪರಿಸರಕ್ಕೆ ಗಂಭೀರ ಸಮಸ್ಯೆಗಳನ್ನು ಸೃಷ್ಟಿಸಿದ್ದು ಈಗ ಇದೊಂದು ರಾಷ್ಟ್ರೀಯ ಬಿಕ್ಕಟ್ಟಾಗಿ ಪರಿವರ್ತನೆಯಾಗಿದೆ. ತುರ್ತು ಮತ್ತು ದೀರ್ಘಾವಧಿಯ ಗಮನದ ಅಗತ್ಯವನ್ನು ಒತ್ತಿಹೇಳುತ್ತಿದೆ.
ಅನಿರೀಕ್ಷಿತ ಹವಾಮಾನ
ಇತ್ತೀಚಿನ ವರ್ಷಗಳಲ್ಲಿಯೇ ನೇಪಾಳದ ಹವಾಮಾನ ಅತ್ಯಂತ ಅನಿರೀಕ್ಷಿತವಾಗಿದೆ. 2025ರಲ್ಲಿ ದಾಖಲಾದ ಬೇಸಿಗೆ ಕೂಡ ಅತ್ಯಂತ ಧಗೆಯ ದಿನಗಳಲ್ಲಿ ಒಂದಾಗಿದೆ. ತಾಪಮಾನ ಅದೆಷ್ಟು ವಿಕೋಪಕ್ಕೆ ತಲುಪಿತ್ತೆಂದರೆ ಜನ ದೈನಂದಿನ ಜೀವನ ನಡೆಸುವುದೇ ದುಸ್ತರವಾಗಿ ಪರಿಣಮಿಸಿತ್ತು. ಅದರಲ್ಲೂ ವಿಶೇಷವಾಗಿ ಶುಷ್ಕ ವಾತಾವರಣವಿರುವ ತರಿ ಪ್ರದೇಶದಲ್ಲಿ ಬದುಕು ಅಸಹನೀಯವಾಗಿತ್ತು.
ಮಳೆ ಸುರಿಯಬಹುದು ಎಂದು ಕಾದು ಕುಳಿತ ತಿಂಗಳುಗಳಲ್ಲಿ, ಬಹುತೇಕ ಮಳೆಯೇ ಬರಲಿಲ್ಲ. ನಂತರ, ಇನ್ನೇನು ಮುಂಗಾರು ಹಂಗಾಮು ಮುಗಿಯಿತು ಅನ್ನುವ ಹೊತ್ತಿಗೆ, ಥಟ್ಟನೆ ಸುರಿದ ಮಳೆ ಭಾರಿ ಪ್ರಮಾಣದಲ್ಲಿ ಅಪ್ಪಳಿಸಿ ದೇಶದ ಅನೇಕ ಭಾಗಗಳಲ್ಲಿ ಪ್ರವಾಹ ಸೃಷ್ಟಿಸಿತು. ಬರಗಾಲದ ನಂತರ ತೀವ್ರ ಮಳೆ ಬರುವ ಈ ಅಸಾಮಾನ್ಯ ಮಾದರಿಯು 2024 ಮತ್ತು 2025 ಎರಡರಲ್ಲೂ ಸಂಭವಿಸಿತು.
ಗುಡ್ಡಗಾಡು, ಪರ್ವತ ಪ್ರದೇಶಗಳಲ್ಲಿಯೂ ತಾಪಮಾನ ಏರಿಕೆಯ ಚಿಹ್ನೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಒಮ್ಮೆ ಶಾಶ್ವತವಾಗಿ ಹಿಮದಿಂದ ಆವೃತವಾಗಿದ್ದ ಸ್ಥಳಗಳಲ್ಲಿ ಈಗ ಮರಗಳು ಮತ್ತು ಪೊದೆಗಳು ಬೆಳೆಯುತ್ತಿರುವ ವಿಚಿತ್ರವನ್ನು ಕಾಣಬಹುದು. ಅಂತಹ ವರದಿಗಳು ಮೌಂಟ್ ಎವರೆಸ್ಟ್‌ನ ಹತ್ತಿರದ ಪ್ರದೇಶಗಳಿಂದಲೂ ಬಂದಿದ್ದು, ಅಲ್ಲಿ ಹಿಮದ ಸಾಲು ಹಿಮ್ಮೆಟ್ಟುತ್ತಿದೆ.
ಎಲ್ಲೆಲ್ಲೂ ಹಾವುಗಳು!
ಕಠ್ಮಂಡು ಕಣಿವೆಯಲ್ಲಿ ಇನ್ನೂ ಒಂದು ವಿಚಿತ್ರ ಪ್ರಕರಣಗಳಿಗೆ ಜನ ಸಾಕ್ಷಿಯಾಗುತ್ತಿದ್ದಾರೆ. ಇಲ್ಲಿ ಹಾವು ಕಡಿತದ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಹಿಂದೆ, ನಗರದಲ್ಲಿ ಹಾವುಗಳು ಅಪರೂಪವಾಗಿ ಕಾಣುತ್ತಿದ್ದವು. ಈಗ, ಬೆಚ್ಚಗಿನ ತಾಪಮಾನ ಮತ್ತು ಆವಾಸಸ್ಥಾನದ ಬದಲಾವಣೆಗಳು ಅವುಗಳನ್ನು ಬೆಟ್ಟಗಳಲ್ಲಿರುವ ಮಾನವ ವಸಾಹತುಗಳಿಗೆ ಹತ್ತಿರ ತಳ್ಳಿದೆ. ಈ ಉದಾಹರಣೆಗಳು ಹವಾಮಾನ ಬದಲಾವಣೆಯು ಪ್ರಕೃತಿ ಮತ್ತು ಮಾನವ ಜೀವನ ಎರಡರ ಮೇಲೂ ಅನಿರೀಕ್ಷಿತ ರೀತಿಯಲ್ಲಿ ಪರಿಣಾಮ ಬೀರುತ್ತಿದೆ ಎಂಬುದಕ್ಕೆ ಸಾಕ್ಷಿ ಹೇಳುತ್ತಿವೆ
ತರಿ ಬಯಲು ಪ್ರದೇಶಗಳು ಹೆಚ್ಚು ತೊಂದರೆ ಅನುಭವಿಸಿವೆ. ಇದು ಒಂದು ಕಾಲದಲ್ಲಿ "ನೇಪಾಳದ ಆಹಾರ ಬುಟ್ಟಿ" ಎಂದು ಜನಪ್ರಿಯವಾಗಿತ್ತು, ಆದರೆ ಈಗ ತಿಂಗಳುಗಳ ಕಾಲ ಶುಷ್ಕ ವಾತಾವರಣ. ಮಳೆಯ ಕೊರತೆಯಿಂದಾಗಿ ರೈತರು ಬೇಸಾಯ ಮಾಡಲು ಸಾಧ್ಯವಾಗಲಿಲ್ಲ. ಅಂತರ್ಜಲ ಕುಸಿದು ಪಾತಾಳಕ್ಕೆ ಇಳಿದ ಕಾರಣ, ಕೊಳವೆ ಬಾವಿಗಳು ಮತ್ತು ಕೈಪಂಪ್‌ಗಳು ಕೆಲಸ ಮಾಡುವುದನ್ನು ನಿಲ್ಲಿಸಿವೆ.
ಕುಡಿಯುವ ನೀರಿಗೆ ತತ್ವಾರ
ಜನರು ಕುಡಿಯುವ ನೀರಿನ ತೀವ್ರ ಕೊರತೆಯನ್ನು ಎದುರಿಸಿದರು. ಅನೇಕ ಕುಟುಂಬಗಳು ಕುಡಿಯುವ ನೀರಿಗಾಗಿ ಅನೇಕ ಕಿ.ಮೀ. ದೂರ ನಡೆದು ಹೋಗಬೇಕಾಯಿತು ಅಥವಾ ಟ್ಯಾಂಕರ್‌ಗಳನ್ನು ಅವಲಂಬಿಸಬೇಕಾಯಿತು. ನೀರಿನ ಕೊರತೆ ಜಾನುವಾರುಗಳ ಮೇಲೂ ಪರಿಣಾಮ ಬೀರಿದೆ, ಇದರಿಂದ ಮತ್ತಷ್ಟು ಆರ್ಥಿಕ ಸಂಕಷ್ಟ ಸೃಷ್ಟಿಸಿತು.
ಧಗೆ ಕೇವಲ ತರಿ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಒಣ ಹವಾಮಾನವಿದ್ದ ಹೊತ್ತಿನಲ್ಲಿ ಅನೇಕ ಗುಡ್ಡಗಾಡು ಪ್ರದೇಶಗಳಲ್ಲಿ ಕಾಡ್ಗಿಚ್ಚುಗಳು ಕಾಣಿಸಿಕೊಂಡವು. ಬನಪಾ-ಬರ್ದಿಬಾಸ್ ಹೆದ್ದಾರಿಗಳಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಕಾಡುಗಳು ಹೊತ್ತಿ ಉರಿಯುವುದಕ್ಕೆ ಪ್ರಯಾಣಿಕರು ಸಾಕ್ಷಿಯಾದರು. ಜೊತೆ ದಟ್ಟವಾದ ಹೊಗೆ ಗಾಳಿಯಲ್ಲಿ ತುಂಬಿ ಹೋಗಿತ್ತು, ಮತ್ತು ಪ್ರಯಾಣಿಕರು ಉಸಿರಾಡಲು ವೇದನೆ ಅನುಭವಿಸಿದರು.
ಕಾಡ್ಗಿಚ್ಚಿನ ಪರಿಣಾಮ
ಕಾಡ್ಗಿಚ್ಚಿನಿಂದ ಉಂಟಾದ ಪರಿಣಾಮಗಳು ದೊಡ್ಡದು. ಅದರಿಂದ ಲಕ್ಷಾಂತರ ಮರಗಳು ನಾಶವಾದವು, ವನ್ಯಜೀವಿಗಳಿಗೆ ಹಾನಿ ಉಂಟಾಯಿತು ಮತ್ತು ವಾಯು ಮಾಲಿನ್ಯ ಹೆಚ್ಚಿತು. ಅರಣ್ಯದ ಹೊದಿಕೆಯ ನಷ್ಟದಿಂದಾಗಿ ಮಣ್ಣು ಸವೆತ ಮತ್ತು ಭೂಕುಸಿತದ ಪ್ರಕರಣಗಳು ವರದಿಯಾಗಿವೆ.
ಕೊನೆಗೂ ಮುಂಗಾರು ಪ್ರತ್ಯಕ್ಷವಾದಾಗ ಜನ ಖುಷಿಗೊಳ್ಳುವ ಬದಲು ಇನ್ನಷ್ಟು ಸಂಕಷ್ಟಕ್ಕೆ ಒಳಗಾದರು. ಅದು ಭಾರಿ ಮತ್ತು ವಿನಾಶಕಾರಿ ಮಳೆಯನ್ನು ತಂದಿತು. ನದಿಗಳು ಉಕ್ಕಿ ಹರಿದವು ಮತ್ತು ಅನೇಕ ಹಳ್ಳಿಗಳು ಪ್ರವಾಹದಲ್ಲಿ ಸಿಲುಕಿ ಹಾಕಿಕೊಂಡವು.
ಭೂಕುಸಿತ ವ್ಯಾಪಕವಾಗಿದ್ದ ಕಾರಣ ರಸ್ತೆಗಳು ನಿರ್ಬಂಧಿಸಲ್ಪಟ್ಟವು, ಮತ್ತು ದೇಶಾದ್ಯಂತ ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ದೂರದ, ಆಯಕಟ್ಟಿನ ಪ್ರದೇಶಗಳಲ್ಲಿ ವಾಸಿಸುವ ಜನರು ಮಾರುಕಟ್ಟೆಗಳು, ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಹೋಗದೇ ಇರುವ ಪರಿಸ್ಥಿತಿ ನಿರ್ಮಾಣವಾಯಿತು.
ಅತಿವೃಷ್ಟಿಯಿಂದಾಗಿ ಸೇತುವೆ, ನೀರಾವರಿ ವ್ಯವಸ್ಥೆ ಹದಗೆಟ್ಟವು. ನೂರಾರು ಮನೆಗಳಿಗೂ ಹಾನಿ ಉಂಟಾಯಿತು. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಪ್ರವಾಹ ಮತ್ತು ಭೂಕುಸಿತಗಳಿಂದ 53 ಜನರು ಸಾವನ್ನಪ್ಪಿದರು, ಒಟ್ಟಾರೆ ಈ ವಿಪತ್ತು 224 ಜನರ ಪ್ರಾಣ ಕಸಿದಿದೆ. ಈ ಅಂಕಿಅಂಶಗಳು ಪ್ರತಿ ವರ್ಷವೂ ಸಮಸ್ಯೆ ಉಲ್ಬಣಗೊಳ್ಳುತ್ತಿದೆ ಎಂಬುದನ್ನು ತೋರಿಸುತ್ತವೆ.
ವಿಪತ್ತು ಸಿದ್ಧತೆಯ ಕೊರತೆ
ರಾಷ್ಟ್ರೀಯ ವಿಪತ್ತು ಅಪಾಯ ಮತ್ತು ನಿರ್ವಹಣಾ ಪ್ರಾಧಿಕಾರ ಸೇರಿದಂತೆ ನಾನಾ ಸರ್ಕಾರಿ ಸಂಸ್ಥೆಗಳು ಹಾನಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರೂ, ಆ ಪ್ರಯತ್ನಗಳು ಸಾಕಾಗಲಿಲ್ಲ. ಇಂತಹ ವಿಪತ್ತು ಹಿಮಾಲಯ ರಾಷ್ಟ್ರಕ್ಕೆ ಅನಿರೀಕ್ಷಿತವಾಗಿತ್ತು. ಹಾಗಾಗಿ ಪೂರ್ವಸಿದ್ಧತೆ ಅತ್ಯಲ್ಪವಾಗಿತ್ತು. ಮುನ್ಸೂಚನಾ ವ್ಯವಸ್ಥೆಗಳು ದುರ್ಬಲವಾಗಿದ್ದವು ಮತ್ತು ಪರಿಹಾರ ಕಾರ್ಯಗಳು ನಿಧಾನವಾಗಿದ್ದವು.
ವಿಪತ್ತಿನ ಸಿದ್ಧತೆಯಲ್ಲಿ ಸರಿಯಾದ ಯೋಜನೆ ಮತ್ತು ಹೂಡಿಕೆ ಮಾಡಿದ್ದರೆ, ಅನೇಕ ಜೀವಗಳನ್ನು ಮತ್ತು ಆಸ್ತಿಪಾಸ್ತಿಗಳನ್ನು ಉಳಿಸಬಹುದಿತ್ತು. ದುರದೃಷ್ಟವಶಾತ್, ದೇಶವು ವಿಪತ್ತುಗಳು ಸಂಭವಿಸುವ ಮೊದಲು ತಡೆಗಟ್ಟುವ ಕೆಲಸಕ್ಕಿಂತ, ಅವು ಸಂಭವಿಸಿದ ನಂತರದ ಪರಿಹಾರಕ್ಕಾಗಿ ಹೆಚ್ಚು ಖರ್ಚು ಮಾಡುತ್ತದೆ.
ದೀರ್ಘಕಾಲೀನ ಯೋಜನೆಯ ಅಗತ್ಯ
ಪ್ರತಿ ವರ್ಷ ಪ್ರವಾಹ, ಭೂಕುಸಿತ ಮತ್ತು ಬರಗಾಲಗಳು ಮರುಕಳಿಸುತ್ತವೆ, ಆದರೆ ಅವುಗಳನ್ನು ಎದುರಿಸಲು ಇನ್ನೂ ಸ್ಪಷ್ಟ ಮತ್ತು ದೀರ್ಘಕಾಲೀನ ಯೋಜನೆ ಇಲ್ಲ. ಸರ್ಕಾರ ಮತ್ತು ಸಂಬಂಧಪಟ್ಟ ಸಂಸ್ಥೆಗಳಿಗೆ ಏನು ಮಾಡಬೇಕೆಂದು ತಿಳಿದಿದೆ, ಆದರೆ ಅವರಲ್ಲಿ ಇಚ್ಛಾಶಕ್ತಿಯಿಲ್ಲ. ರಾಜಕೀಯ ನಾಯಕರಂತೂ ಅಧಿಕಾರವನ್ನು ಕಾಪಾಡಿಕೊಳ್ಳುವ ಹೋರಾಟಗಳಲ್ಲಿ ನಿರತರಾಗಿರುತ್ತಾರೆ. ಪರಿಸರ ಸಮಸ್ಯೆಗಳಿಗೆ ಅವರ ಕಾಳಜಿ ಕಿಂಚಿತ್ತೂ ಇಲ್ಲ.
ಪರಿಣಾಮವಾಗಿ, ಪರಿಣಾಮಕಾರಿಯಾಗಿ ತಡೆಗಟ್ಟಬಹುದಾದ ವಿಪತ್ತುಗಳಿಂದ ಜನ ನಿರಂತರವಾಗಿ ನರಳುವಂತಾಗಿದೆ. ರಾಷ್ಟ್ರೀಯ ಮಹತ್ವದ ಈ ವಿಷಯಗಳ ಕುರಿತು ಅಧಿಕಾರಿಗಳು ಕಾರ್ಯಪ್ರವೃತ್ತರಾಗುವಂತೆ ಮಾಡಲು ಸಾರ್ವಜನಿಕ ಒತ್ತಡದ ತುರ್ತು ಅವಶ್ಯಕತೆ ಕೂಡ ಇದೆ.
ಸುಧಾರಿಸಿದ ನೀರು ನಿರ್ವಹಣೆ ಪದ್ಧತಿ
ತಡವಾಗಿ ಬಂದ ಮುಂಗಾರು ತನ್ನ ಹಾನಿಯ ಹೊರತಾಗಿಯೂ ಕೆಲವು ಪ್ರಯೋಜನಗಳನ್ನು ತಂದಿದೆ. ಇದು ಅಂತರ್ಜಲ ಮೂಲಗಳನ್ನು ಮರುಭರ್ತಿ ಮಾಡಲು ಸಹಾಯ ಮಾಡಿದೆ. ಬತ್ತಿಹೋಗಿದ್ದ ಅನೇಕ ಕೆರೆಗಳು, ಬಾವಿಗಳು ಮತ್ತು ಕೈಪಂಪ್‌ಗಳು ಮತ್ತೆ ಕಾರ್ಯನಿರ್ವಹಿಸಲು ಪ್ರಾರಂಭಿಸಿದವು. ಅತಿಯಾದ ಸಾಮಾನ್ಯ ಬರ ಮತ್ತು ಬೇಸಿಗೆಯ ವಿಪರೀತ ತಾಪಮಾನವು ಕಡಿಮೆಯಾಯಿತು.
ಆದರೆ, ದೇಶವು ನೀರು ನಿರ್ವಹಣಾ ಪದ್ಧತಿಗಳನ್ನು ಅಳವಡಿಸಿಕೊಳ್ಳುವಲ್ಲಿ ದಕ್ಷತೆ ತೋರಿದ್ದರೆ ಈ ಪ್ರಯೋಜನವು ಇನ್ನಷ್ಟು ಪರಿಣಾಮಕಾರಿಯಾಗಿರುತ್ತಿತ್ತು. ಸರಳ ಮತ್ತು ಕಡಿಮೆ-ವೆಚ್ಚದ ಕ್ರಮಗಳು ಬರ ಮತ್ತು ಪ್ರವಾಹ ಎರಡರ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.
ಪರಿಸರ ಸಮತೋಲನಕ್ಕೆ ಕ್ರಮಬೇಕಿದೆ
ರಸ್ತೆಬದಿಗಳಲ್ಲಿ ಮತ್ತು ಎತ್ತರದ ಪ್ರದೇಶಗಳಲ್ಲಿ ನಿರ್ಮಿಸಲಾದ ಕೆರೆ ಮತ್ತು ಕಾಲುವೆಗಳಲ್ಲಿ ನೀರನ್ನು ಸಂಗ್ರಹಿಸಬಹುದು ಮತ್ತು ಅತಿವೃಷ್ಟಿಯ ಸಂದರ್ಭದಲ್ಲಿ ಪ್ರವಾಹವನ್ನು ನಿಯಂತ್ರಿಸಬಹುದು. ಬೆಟ್ಟದ ಇಳಿಜಾರುಗಳಲ್ಲಿ ಮತ್ತು ನದಿ ದಡಗಳಲ್ಲಿ ಮರಗಳನ್ನು ನೆಡುವುದರಿಂದ ಮಣ್ಣಿನ ಸವೆತ ಮತ್ತು ಪ್ರವಾಹವನ್ನು ತಡೆಯಬಹುದು. ಮರಗಳು ಅಂತರ್ಜಲವನ್ನು ಮರುಭರ್ತಿ ಮಾಡಲು ಮತ್ತು ಪರಿಸರ ಸಮತೋಲನವನ್ನು ಕಾಪಾಡಲು ಸಹಾಯ ಮಾಡುತ್ತವೆ.
ಮತ್ತೊಂದು ಉಪಯುಕ್ತ ವಿಧಾನವೆಂದರೆ, ನೀರು ಇಳಿದು ಹೋಗಲು ಮತ್ತು ಅಂತರ್ಜಲ ಭಂಡಾರಗಳನ್ನು ತಲುಪಲು ನೆಲದಲ್ಲಿ ಸಣ್ಣ ಗುಂಡಿಗಳು ಅಥವಾ ಹೊಂಡಗಳನ್ನು ಮಾಡುವುದು. ಈ ವಿಧಾನಗಳು ದುಬಾರಿಯಲ್ಲ, ಆದರೆ ಅವುಗಳಿಗೆ ನಿರಂತರ ಅನುಷ್ಠಾನ ಮತ್ತು ಮೇಲ್ವಿಚಾರಣೆ ಬೇಕಾಗುತ್ತದೆ.
ವಿಜ್ಞಾನ ಆಧಾರಿತ ನೀತಿಗಳ ಅಗತ್ಯ
ಹವಾಮಾನ ಬದಲಾವಣೆಯ ಹೆಚ್ಚುತ್ತಿರುವ ಬೆದರಿಕೆಯನ್ನು ಎದುರಿಸಲು, ನೇಪಾಳವು ಪ್ರಾಯೋಗಿಕ ಮತ್ತು ವಿಜ್ಞಾನ ಆಧಾರಿತ ನೀತಿಗಳನ್ನು ಅಳವಡಿಸಿಕೊಳ್ಳಬೇಕು. ಹವಾಮಾನ ಮತ್ತು ವಿಪತ್ತು ನಿರ್ವಹಣಾ ವ್ಯವಸ್ಥೆಗಳನ್ನು ಬಲಪಡಿಸಬೇಕು. ತುರ್ತು ಪರಿಸ್ಥಿತಿಗಳಿಗೆ ಸ್ಪಂದಿಸಲು ಮತ್ತು ತಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಲು ಸ್ಥಳೀಯ ಸಮುದಾಯಗಳಿಗೆ ತರಬೇತಿ ನೀಡಬೇಕು. ಹವಾಮಾನಕ್ಕೆ ಹೊಂದಿಕೊಳ್ಳುವ ಬೆಳೆಗಳು ಮತ್ತು ನೀರಾವರಿ ತಂತ್ರಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಬೆಂಬಲದ ಅವಶ್ಯಕತೆಯಿದೆ.
ಶಾಲಾ-ಕಾಲೇಜುಗಳು ತಮ್ಮ ಪಠ್ಯಕ್ರಮದಲ್ಲಿ ಪರಿಸರ ಶಿಕ್ಷಣವನ್ನು ಸೇರಿಸಬೇಕು, ಇದರಿಂದ ಯುವಕರು ಪ್ರಕೃತಿಯನ್ನು ರಕ್ಷಿಸುವ ತುರ್ತು ಅಗತ್ಯವನ್ನು ಅರ್ಥಮಾಡಿಕೊಳ್ಳುತ್ತಾರೆ. ಇದರ ಜೊತೆಗೆ, ಸರ್ಕಾರಿ ಸಂಸ್ಥೆಗಳು, ನಾಗರಿಕ ಸಮಾಜ ಮತ್ತು ಖಾಸಗಿ ಸಂಸ್ಥೆಗಳ ನಡುವಿನ ಸಮನ್ವಯವು ಸುಧಾರಿಸಬೇಕು.
ಅತ್ಯಂತ ಮುಖ್ಯವಾಗಿ, ರಾಜಕೀಯ ನಾಯಕರು ರಾಜಕೀಯ ಆಟಗಳಿಗಿಂತ ಜನರ ಕಲ್ಯಾಣಕ್ಕೆ ಆದ್ಯತೆ ನೀಡಬೇಕು. ಹವಾಮಾನ ಬದಲಾವಣೆಯು ಇನ್ನು ಮುಂದೆ ದೂರದ ವಿಷಯವಲ್ಲ; ಇದು ಹಿಮಾಲಯ, ಬೆಟ್ಟಗಳು ಅಥವಾ ಬಯಲು ಪ್ರದೇಶಗಳಲ್ಲಿ ವಾಸಿಸುವ ಪ್ರತಿಯೊಬ್ಬರ ಮೇಲೂ ಪರಿಣಾಮ ಬೀರುವ ವಾಸ್ತವ ಸಂಗತಿ.
ಜಗತ್ತಿಗೆ ಪ್ರಕೃತಿಯ ಎಚ್ಚರಿಕೆ
ಹೆಚ್ಚುತ್ತಿರುವ ಬರಗಾಲ, ಪ್ರವಾಹ ಮತ್ತು ಭೂಕುಸಿತ ಪ್ರಕರಣಗಳು ಪ್ರಕೃತಿ ನಮಗೆ ಹೇಗೆ ಎಚ್ಚರಿಕೆ ನೀಡುತ್ತಿದೆ ಎಂಬುದರ ಸೂಚನೆ. ಇಂತಹ ಸೂಚನೆಗಳನ್ನು ನಿರ್ಲಕ್ಷಿಸುವುದರಿಂದ ಭವಿಷ್ಯದಲ್ಲಿ ಇನ್ನೂ ದೊಡ್ಡ ವಿಪತ್ತುಗಳಿಗೆ ಮುಖಾಮುಖಿಯಾಗುವ ಪರಿಸ್ಥಿತಿ ಉಂಟುಮಾಡಬಹುದು.
ಸುದೀರ್ಘ ಬರ ಮತ್ತು ಅತಿಯಾದ ಮಳೆಗಾಗಿ ನೇಪಾಳ ಮಾಡುತ್ತಿರುವ ಹೋರಾಟವು ಇಡೀ ಜಗತ್ತಿಗೆ ಒಂದು ಎಚ್ಚರಿಕೆಯ ಸಂಕೇತವಾಗಿದೆ. ನಮ್ಮ ಪರಿಸರವು ಎಷ್ಟು ದುರ್ಬಲವಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಏರುತ್ತಿರುವ ತಾಪಮಾನ, ಕರಗುತ್ತಿರುವ ಹಿಮನದಿಗಳು, ಕಡಿಮೆಯಾಗುತ್ತಿರುವ ಮಳೆ ಇತ್ಯಾದಿಗಳು ದೇಶದ ಚರಹರೆಯನ್ನೇ ಬದಲಾಯಿಸುತ್ತಿವೆ.
ತುರ್ತು ಮತ್ತು ಪರಿಣಾಮಕಾರಿಯಾದ ಕ್ರಮಗಳನ್ನು ತೆಗೆದುಕೊಳ್ಳದ ಹೊರತು, ಬಿಕ್ಕಟ್ಟಿನ ಇದೇ ಚಕ್ರವು ಪ್ರತಿ ವರ್ಷ ಪುನರಾವರ್ತನೆಯಾಗುವುದು ನಿಶ್ಚಿತ. ಕಾರ್ಯಪ್ರವೃತ್ತರಾಗಲು ಇದು ಸಕಾಲ. ಭವಿಷ್ಯದ ಪೀಳಿಗೆಗಾಗಿ ಜನರು ಮತ್ತು ಪರಿಸರವನ್ನು ರಕ್ಷಿಸಲು ನೇಪಾಳವು ಬರೀ ಮಾತಿನ ಚಾಳಿ ಬಿಟ್ಟು ತಡೆಗಟ್ಟುವುದು ಹೇಗೆ ಎನ್ನುವುದರ ಕಡೆಗೆ ಮತ್ತು ನಿರ್ಲಕ್ಷ್ಯದಿಂದ ಸರ್ವ ಸನ್ನದ್ಧತೆ ಕಡೆಗೆ ಸಾಗಬೇಕು

