Soumya Sarkar

ನೇಪಾಳ ಜಲಪ್ರಳಯ: ಹಿಮಾಲಯದ ಮಗ್ಗುಲಲ್ಲಿ ಎಸಗಿದ ಮನುಷ್ಯ ವಿಕೃತಿಯ ಫಲ


ನೇಪಾಳ ಜಲಪ್ರಳಯ: ಹಿಮಾಲಯದ ಮಗ್ಗುಲಲ್ಲಿ ಎಸಗಿದ ಮನುಷ್ಯ ವಿಕೃತಿಯ ಫಲ
x
ಆಗಸ್ಟ್‌ ಕೊನೆಯಲ್ಲಿ ಸಂಭವಿಸಿದ ವಿಧ್ವಂಸಕಾರಿ ಪ್ರವಾಹದ ಬಳಿಕ ನೇಪಾಳದ ರಸುವಾದಲ್ಲಿ ಪತ್ತೆ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು.
Click the Play button to hear this message in audio format

ಹಿಮನದಿಗಳು ಕುಸಿಯುತ್ತಿವೆ, ಕಣಿವೆಗಳು ಜಲಾವೃತವಾಗುತ್ತಿವೆ, ಆದರೆ ಹಿಮಾಲಯದ ವಿಪತ್ತಿನ ಹಾದಿಯಲ್ಲೇ ಸಾಲು ಸಾಲು ಕಟ್ಟಡಗಳು, ರಸ್ತೆ, ಡ್ಯಾಮ್‌ಗಳನ್ನು ನಿರ್ಮಿಸುತ್ತಲೇ ಸಾಗಿದ್ದೇವೆ…

ನೇಪಾಳ-ಟಿಬೇಟ್‌ ಗಡಿಯಲ್ಲಿ ಮುನ್ನುಗ್ಗಿ ಬಂದ ರಕ್ಕಸ ಸ್ವರೂಪಿ ಪ್ರವಾಹ ದೇವರ ಸೃಷ್ಟಿ ಎಂದು ನೆವ ಹೇಳುವ ಮಾಡುವ ಪ್ರಯತ್ನ ನಡೆಸದಿರಿ. ಇದು ದಶಕ ದಶಕಗಳಿಂದ ಮುಂದುವರಿಯುತ್ತಲೇ ಬಂದಿರುವ ಹಿಮಾಲಯ ಕಣಿವೆಯ ವಿಪತ್ತಿನ ಸರಣಿಯ ಇತ್ತೀಚಿನ ಉದಾಹರಣೆ. ಹಿಮನದಿ ಸರೋವರದ ಪ್ರಳಯ ಪ್ರವಾಹಗಳು, ಹಠಾತ್‌ ಮಂಜುಗಡ್ಡೆಯ ಕುಸಿತ ಹಾಗೂ ಭೀಕರ ಪ್ರವಾಹ… ಇವುಗಳಲ್ಲಿ ಪ್ರತಿಯೊಂದರ ಮುನ್ನೆಚ್ಚರಿಕೆಯನ್ನೂ ವೈಜ್ಞಾನಿಕ ನೆಲೆಯಲ್ಲಿ ನೀಡಲಾಗಿದ್ದರೂ ಅವುಗಳನ್ನು ಸಾರಾಸಗಟು ನಿರ್ಲಕ್ಷಿಸುತ್ತಲೇ ಬಂದವರು ನಾವು.

ಹಿಂದೂ ಕುಶ್‌ ಹಿಮಾಲಯದ ಹಿಮನದಿಗಳು ಅತಿಯಾದ ವೇಗದಿಂದ ಕರಗುತ್ತಿವೆ ಹಾಗೂ ಶತಮಾನದಿಂದೀಚೆಗೆ ಮಂಜುಗಡ್ಡೆಯ ಕುಸಿತದ ಪ್ರಮಾಣ ಎರಡು ಪಟ್ಟು ಹೆಚ್ಚಾಗಿದೆ ಎಂದು ಹವಾಮಾನ ಸಂಶೋಧನಾ ಸಂಸ್ಥೆ ಇಂಟರ್‌ನ್ಯಾಷನಲ್‌ ಸೆಂಟರ್‌ ಫಾರ್‌ ಇಂಟಗ್ರೇಟೆಡ್‌ ಮೌಂಟೇನ್‌ ಡೆವಲಪ್ಮೆಂಟ್‌ (ICIMOD) ಈ ವರ್ಷದ ಆರಂಭದಲ್ಲಿಯೇ ವರದಿ ಮಾಡಿತ್ತು. ಈ ಪ್ರದೇಶದಾದ್ಯಂತ ವ್ಯಾಪಿಸಿಕೊಂಡಿರುವ ಹಿಮನದಿಗಳು ಸರಾಸರಿ ಪ್ರತಿವರ್ಷ ಸುಮಾರು ಅರ್ಧ ಮೀಟರ್‌ನಷ್ಟು ತೆಳ್ಳಗಾಗುತ್ತ ಸಾಗಿದೆ ಮತ್ತು ಇನ್ನು ಕೆಲವು 1975ರಿಂದಲೇ ತನ್ನ ಆಳವನ್ನು ಕಳೆದುಕೊಂಡಿವೆ. ಅದರ ಪ್ರಮಾಣವೇ 27 ಮೀಟರ್‌ಗಿಂತ ಅಧಿಕ ಎಂದು ಅಂದಾಜು ಮಾಡಲಾಗಿದೆ. ಪರ್ವತಗಳು ಕುಸಿಯುತ್ತಿದ್ದರೂ ಅದೇನೂ ನಮಗೆ ಲೆಕ್ಕಕ್ಕೇ ಇಲ್ಲ ಎಂಬಂತೆ ನಾವು ನಿರ್ಮಾಣ ಕಾರ್ಯಗಳನ್ನು ಮಾಡುತ್ತ ಸಾಗಿದ್ದೇವೆ.

ಜಾಗತಿಕ ಸರಾಸರಿಗೆ ಹೋಲಿಸಿದರೆ ಹಿಮಾಲಯವು ಸರಿಸುಮಾರು ಎರಡು ಪಟ್ಟು ವೇಗವಾಗಿ ಬಿಸಿ ಏರುತ್ತಿದೆ. ಮುಂಬರುವ ದಶಕಗಳಲ್ಲಿ ಹಿಮನದಿಗಳು ಕರಗುವ ಅಪಾಯಗಳು ಮೂರು ಪಟ್ಟು ಹೆಚ್ಚಾದರೆ ಅಚ್ಚರಿಯೇನೂ ಇಲ್ಲ. ಮುಂದಿನ ದಿನಗಳಲ್ಲಿ ಇಂತಹ ವಿಪತ್ತುಗಳು ಸಂಭವಿಸುತ್ತವೆಯೋ ಇಲ್ಲವೋ ಎಂಬುದು ಮುಖ್ಯವಲ್ಲ, ನಾವು ಅವುಗಳನ್ನು ಎದುರಿಸಲು ಎಷ್ಟರ ಮಟ್ಟಿಗೆ ಸಿದ್ಧರಾಗಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಈ ವಿಚಾರದಲ್ಲಿ ನಾವು ಮತ್ತೆ ಮತ್ತೆ ವಿಫಲರಾಗಿದ್ದೇವೆ ಎಂಬುದು ಮಾತ್ರ ಸತ್ಯ.

ಸಾಲು ಸಾಲು ಕಟ್ಟಡಗಳು

ಭಾರತ ಮತ್ತು ಹಿಮಾಲಯ ವ್ಯಾಪ್ತಿಯ ರಾಜ್ಯಗಳಲ್ಲಿ ನಿರ್ಮಾಣ ಕಾರ್ಯಗಳ ಮೇಲೆ ನಿಯಂತ್ರಣವೇ ಇಲ್ಲದಂತಾಗಿದೆ. ಇದರ ಫಲವಾಗಿ ನದಿ ಕಣಿವೆಗಳು ಮತ್ತು ಅಸ್ಥಿರ ಇಳಿಜಾರು ಪ್ರದೇಶಗಳು ಸಾವಿನ ಕೂಪಗಳಾಗಿವೆ. ಪ್ರವಾಸೋದ್ಯಮ ಹಾಗೂ ಜನಸಂಖ್ಯೆಯ ಒತ್ತಡದ ಪರಿಣಾಮವಾಗಿ ನದಿದಂಡೆಗಳು ಮತ್ತು ಕಣಿವೆಗಳ ಸುತ್ತಲೂ ವಸತಿ ಪ್ರದೇಶಗಳು ಎಗ್ಗಿಲ್ಲದೆ ಬೆಳೆದಿವೆ. ಹಾಗಾಗಿ ಹಠಾತ್‌ ಪ್ರವಾಹ ಸಂದರ್ಭಗಳಲ್ಲಿ ಸಮುದಾಯ ನೇರ ಗಂಡಾಂತರಕ್ಕೆ ಸಿಲುಕುವಂತಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) 2023ರ ಹಿಮಾಚಲ ಪ್ರದೇಶದ ಪ್ರವಾಹಕ್ಕೆ ಸಂಬಂಧಿಸಿದ ತನ್ನ ಮೌಲ್ಯಮಾಪನದಲ್ಲಿ ತಿಳಿಸಿತ್ತು. ಈ ನಿರ್ಮಾಣಗಳು ಅಗತ್ಯವಾಗಿ ಅನುಸರಿಸಬೇಕಾಗಿರುವ ಮಾರ್ಗಸೂಚಿಗಳನ್ನು ಕಡೆಗಣಿಸುತ್ತವೆ. ಅದರ ಫಲವಾಗಿ ಸಾಲು ಸಾಲು ಕಟ್ಟಡಗಳು ತಲೆ ಎತ್ತಲು ಕಾರಣವಾಗಿವೆ.

2013ರಲ್ಲಿ ಕೇದಾರನಾಥದಲ್ಲಿ ಸಂಭವಿಸಿದ ವಿಪತ್ತು ಎಲ್ಲರ ಮನಸ್ಸಿನಿಂದ ಇನ್ನೂ ಮಾಸಿರಲಾರದು. ಸಾವಿರಾರು ಜನರನ್ನು ಆಪೋಶನ ತೆಗೆದುಕೊಂಡ ಹಠಾತ್‌ ಪ್ರವಾಹದ ಬಳಿಕ ವಾಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಹಿಮಾಲಯನ್‌ ಜಿಯಾಲಜಿಯ ವಿಜ್ಞಾನಿಗಳು ದೇಗುಲದ ಸುತ್ತಮುತ್ತ ಯಾವುದೇ ಹೊಸ ನಿರ್ಮಾಣ ಕಾಮಗಾರಿಗೆ ಸಂಪೂರ್ಣ ನಿಷೇಧ ಹೇರಬೇಕು ಎಂದು ಶಿಫಾರಸು ಮಾಡಿದರು. ಆ ದುರಂತದಿಂದ ಧ್ವಂಸಗೊಂಡಿದ್ದ ಪಟ್ಟಣವನ್ನು ಎರಡರಿಂದ ಮೂರು ಕಿ.ಮೀ. ದೂರದ ಕೆಳಭಾಗಕ್ಕೆ ಸ್ಥಳಾಂತರ ಮಾಡಬೇಕು ಎಂದು ವಿಜ್ಞಾನಿಗಳು ಸೂಚಿಸಿದ್ದರು. ಆದರೆ ಆ ಎಲ್ಲ ಎಚ್ಚರಿಕೆಗಳ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳಲಿಲ್ಲ. ಇಂದು ಅದೇ ದುರ್ಬಲ ವಲಯದಲ್ಲಿ ಕಟ್ಟಡಗಳು ಹಾಗೂ ಹೋಟೆಲ್‌ಗಳು ಹಲವು ಪಟ್ಟು ಹೆಚ್ಚಾಗಿರುವುದು ಕಣ್ಣಿಗೆ ಕಾಣುತ್ತದೆ.

ಕಳೆದ ಎರಡು ದಶಕಗಳಲ್ಲಿ ಹಿಮಾಲಯದ ಕಣಿವೆ ಭಾಗಗಳಲ್ಲಿ ಮೂಲಸೌಕರ್ಯಗಳ ದಟ್ಟಣೆ ಗಣನೀಯವಾಗಿ ಹೆಚ್ಚಾಗಿದೆ ಎಂಬುದಕ್ಕೆ ಉಪಗ್ರಹ ಚಿತ್ರಗಳೇ ಸಾಕ್ಷಿ. ಪ್ರವಾಹದ ನೀರು ತಪ್ಪಿಸಿಕೊಳ್ಳಲು ದಾರಿಯೇ ಇಲ್ಲದ ಹಾಗೆ ಅವು ನಾಯಿಕೊಡೆಗಳಂತೆ ಬೆಳೆದಿವೆ. ನಿರ್ಮಾಣ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರಿದಿರುವ ಹೊತ್ತಿನಲ್ಲೇ 2026ರ ಪ್ರವಾಹವು ಕಣಿವೆಗಳ ಮೂಲಕ ಹರಿದುಹೋಗಿದೆ.

ಜಲವಿದ್ಯುತ್ ಯೋಜನೆಗಳ ಸಂಕಷ್ಟ

ಒಂದು ಕಡೆ ನಿರ್ಮಾಣ ಕಾರ್ಯಗಳು ಮನುಷ್ಯನ ವಿವೇಚನಾಹೀನತೆಗೆ ಸಾಕ್ಷಿ ಒದಗಿಸಿದರೆ, ಇನ್ನೊಂದು ಕಡೆ ಜಲವಿದ್ಯುತ್ ಯೋಜನೆಗಳಂತೂ ಸಂಪೂರ್ಣವಾಗಿ ಅಪಾಯಕಾರಿಯಾಗಿವೆ. ಮಾದರಿ ಯೋಜನೆಗಳಲ್ಲಿ ಶೇಕಡಾ 66ರಷ್ಟು ಯೋಜನೆಗಳು ಸಂಭಾವ್ಯ ಹಿಮನದಿ ಸರೋವರ ಪ್ರಳಯದ ಹಾದಿಯಲ್ಲಿಯೇ ಇವೆ ಎಂಬುದು 257 ಹಿಮಾಲಯನ್ ಜಲವಿದ್ಯುತ್ ಯೋಜನೆಗಳನ್ನು ಪರಿಶೀಲಿಸಿದ 2025ರ ಅಧ್ಯಯನದಿಂದ ಕಂಡುಕೊಂಡ ಸತ್ಯವಾಗಿದೆ. ಅಲ್ಲದೆ ಇವುಗಳಲ್ಲಿ ಮೂರನೇ ಒಂದು ಭಾಗದಷ್ಟು ಯೋಜನೆಗಳು ತಾವು ತಡೆದುಕೊಳ್ಳಬಲ್ಲ ಸಾಮರ್ಥ್ಯಕ್ಕಿಂತ ಹೆಚ್ಚಿನ ಮಟ್ಟದ ಪ್ರವಾಹವನ್ನು ಎದುರಿಸಬೇಕಾಗಿ ಬಂದಿವೆ.

ಅಭಿವೃದ್ಧಿ ಕಾರ್ಯಗಳು ಹಿಮನದಿ ಸರೋವರಗಳಿಗೆ ಹತ್ತಿರವಿರುವ ಅತ್ಯಂತ ಎತ್ತರದ, ಹೆಚ್ಚು ಅಪಾಯಕಾರಿ ಸ್ಥಳಗಳನ್ನು ತಲುಪುತ್ತಿವೆ. ಇದು ಪ್ರವಾಹದ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ.

ಇದರ ಸಾಕ್ಷ್ಯವು ಅವಶೇಷಗಳಲ್ಲಿ ಗೋಚರಿಸುತ್ತದೆ. ಫೆಬ್ರವರಿ 2021ರಲ್ಲಿ, ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಬೃಹತ್ ಬಂಡೆ ಮತ್ತು ಮಂಜುಗಡ್ಡೆಯ ಹಿಮಪಾತ ಸಂಭವಿಸಿತು. ಎರಡು ಜಲವಿದ್ಯುತ್ ಸ್ಥಾವರಗಳು ಧ್ವಂಸಗೊಂಡವು. 13.2 ಮೆಗಾವ್ಯಾಟ್ ಸಾಮರ್ಥ್ಯದ ರಿಷಿಗಂಗಾ ಯೋಜನೆ ಕೊಚ್ಚಿಹೋಯಿತು. ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್‌ನ (ಎನ್‌ಟಿಪಿಸಿ) 480 ಮೆಗಾವ್ಯಾಟ್ ಸಾಮರ್ಥ್ಯದ ತಪೋವನ್ ವಿಷ್ಣುಗಡ್ ಯೋಜನೆಯು ಅನುಭವಿಸಿದ ನಷ್ಟ ಅಂದಾಜು 1,500 ಕೋಟಿ ರೂ. ಈ ವಿಪತ್ತು ಸಂಭವಿಸಿದ್ದು ಸರೋವರದ ಪ್ರಳಯದಿಂದಲ್ಲ, ಬದಲಿಗೆ ಹಠಾತ್ ಕುಸಿತದಿಂದ. ಇದು ಯೋಜಕರು ಊಹಿಸಿದ್ದಕ್ಕಿಂತ ಅಪಾಯವು ಹೆಚ್ಚು ಗಣನೀಯವಾಗಿದೆ ಮತ್ತು ಅನಿರೀಕ್ಷಿತವಾಗಿದೆ ಎಂಬುದನ್ನು ಸಾಬೀತುಪಡಿಸಿತು.

ಅಕ್ಟೋಬರ್ 2023ರಲ್ಲಿ, ಸಿಕ್ಕಿಂನ ದಕ್ಷಿಣ ಲೊನಾಕ್ ಸರೋವರಕ್ಕೆ ಹೆಪ್ಪುಗಟ್ಟಿದ ಮೆಕ್ಕಲು ಮಣ್ಣು ಕುಸಿದು ಸುನಾಮಿಯಂತಹ ಅಲೆಯನ್ನು ಸೃಷ್ಟಿಸಿತು. ಇದು ಹಿಮನದಿಗಳ ಸಂಚಯನವನ್ನೇ ನುಚ್ಚುನೂರು ಮಾಡಿತು ಮತ್ತು ಸುಮಾರು 14,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಭಾರತದ ಎರಡನೇ ಅತಿ ದೊಡ್ಡ ತೀಸ್ತಾ ಅಣೆಕಟ್ಟನ್ನು ನಾಶಪಡಿಸಿತು. ಈ ಪ್ರವಾಹದಿಂದ ಸತ್ತವರ ಸಂಖ್ಯೆ 55 ಮಂದಿ. 74 ಮಂದಿ ನಾಪತ್ತೆಯಾದರು ಮತ್ತು ಕೆಳಭಾಗದಲ್ಲಿ 385 ಕಿ.ಮೀ ದೂರದ ವರೆಗೆ ಮೂಲಸೌಕರ್ಯಗಳು ಹಾನಿಗೆ ಒಳಗಾದವು. ಇದು ಯಾವುದೇ ಅಪರೂಪದ ಘಟನೆಯಾಗಿರಲಿಲ್ಲ, ಅದೊಂದು ಎಚ್ಚರಿಕೆಯ ಕರೆಗಂಟೆಯಾಗಿತ್ತು.

ಇದು ಕೇವಲ ಸುರಕ್ಷತೆಯ ಬಿಕ್ಕಟ್ಟಲ್ಲ. ಇದು ಶಕ್ತಿ ಭದ್ರತೆಯ ಬಿಕ್ಕಟ್ಟು ಕೂಡ ಹೌದು. ಸಟ್ಲೆಜ್ ಜಲಾನಯನ ಪ್ರದೇಶದಲ್ಲಿ ಹಿಮನದಿಗಳ ಹೊದಿಕೆಯು 2000 ರಲ್ಲಿ 1,482 ಚದರ ಕಿ.ಮೀ ಇತ್ತು. ಅದು 2020ರ ವೇಳೆಗೆ 1,384 ಚದರ ಕಿ.ಮೀ ಗೆ ಕುಸಿದಿತ್ತು ಎಂಬುದನ್ನು ಹಿಮಾಚಲ ಪ್ರದೇಶ ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ ಮಂಡಳಿಯ ಅಧ್ಯಯನದಿಂದ ಬಯಲಾಗಿದೆ. ಈ ಪ್ರದೇಶದ ಶೇಕಡಾ 80 ಕ್ಕಿಂತ ಹೆಚ್ಚು ಹಿಮನದಿಗಳು ಹಿಂದೆ ಸರಿದಿವೆ. ಹಿಮಾಚಲದ ಹೆಚ್ಚಿನ ಜಲವಿದ್ಯುತ್ ಯೋಜನೆಗಳು ಹಿಮನದಿಯಿಂದ ಪೋಷಿತವಾದ ನದಿಗಳನ್ನು ಅವಲಂಬಿಸಿವೆ. ಹಿಮನದಿಗಳ ವರ್ತನೆಯಲ್ಲಿ ಉಂಟಾಗುವ ಯಾವುದೇ ಬದಲಾವಣೆಯು ನೇರವಾಗಿ ವಿದ್ಯುತ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ.

ಜಲವಿದ್ಯುತ್‌ನ ಸುಸ್ಥಿರತೆ ಮತ್ತು ದೀರ್ಘಕಾಲೀನ ಇಂಧನ ಭದ್ರತೆ ಎರಡೂ ಅಪಾಯದ ಅಲಗಿನಲ್ಲಿ ಬಂದು ಕುಳಿತಿವೆ. ಭಾರತದ ಮಹತ್ವಾಕಾಂಕ್ಷೆಯ ಜಲವಿದ್ಯುತ್ ಯೋಜನೆಗಳು ಬದಲಾಗುತ್ತಿರುವ ಹವಾಮಾನದ ವಾಸ್ತವ ಸ್ಥಿತಿಯನ್ನು ತಡೆದುಕೊಳ್ಳಲು ಸಾಧ್ಯವಾಗದೇ ಇರುವ ಅಡಿಪಾಯದ ಮೇಲೆ ರೂಪುಗೊಂಡಿವೆ.

ರಾಜತಾಂತ್ರಿಕ ನಿರ್ಲಕ್ಷ್ಯಕ್ಕೆ ತೆತ್ತ ಬೆಲೆ

ಆಗಸ್ಟ್ ತಿಂಗಳ ಅಂತ್ಯದಲ್ಲಿ ಸಂಭವಿಸಿದ ಪ್ರವಾಹವು ಟಿಬೆಟ್‌ ಗಡಿಯಿಂದ ನೇಪಾಳವನ್ನು ತಲುಪಲು ತೆಗೆದುಕೊಂಡ ಸಮಯ 26 ನಿಮಿಷಗಳು ಮಾತ್ರ. ಆದರೆ ಈ ಬಗ್ಗೆ ನೀಡಲಾದ ಎಚ್ಚರಿಕೆಗಳು ಮಾತ್ರ ರಾಜತಾಂತ್ರಿಕ ಇಮೇಲ್‌ಗಳಿಗಿಂತ ವೇಗವಾಗಿ ಚಲಿಸುವುದಿಲ್ಲ. ಸದೃಢ ಪ್ರಾದೇಶಿಕ ಸಹಕಾರ, ವಿಸ್ತೃತ ಮೇಲ್ವಿಚಾರಣೆ, ಪ್ರಮಾಣೀಕೃತ ವಿಧಾನಗಳು ಮತ್ತು ನಿರಂತರ ಹೂಡಿಕೆಗೆ ICIMOD ದೀರ್ಘಕಾಲದಿಂದ ಕರೆ ನೀಡುತ್ತ ಬಂದಿದೆ.

2025ರ ಆಗಸ್ಟ್ ತಿಂಗಳಲ್ಲಿ ನಡೆದ HKH ಕ್ರೈರೋಸ್ಫೇರ್ ಅಡ್ವೈಸರಿ ವರ್ಕಿಂಗ್ ಗ್ರೂಪ್‌ನ ಮೊದಲ ಸಭೆಯು ಭಾರತ, ಚೀನಾ, ನೇಪಾಳ, ಭೂತಾನ್ ಮತ್ತು ಪಾಕಿಸ್ತಾನವನ್ನು ಒಂದೆಡೆ ತರುವಲ್ಲಿ ಯಶಸ್ವಿಯಾಗಿತ್ತು. ಆದರೆ ಔಪಚಾರಿಕ ಮತ್ತು ಬದ್ಧತೆಯ ಒಪ್ಪಂದಗಳು ಇನ್ನೂ ಏರ್ಪಟ್ಟಿಲ್ಲ. ಮುಂಚಿತ ಎಚ್ಚರಿಕೆಗಾಗಿ ಭಾರತ-ಚೀನಾ ನಡುವೆ ಮೀಸಲಾದ ಹಾಟ್‌ಲೈನ್ ಸ್ಥಾಪಿಸಬೇಕು ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳು ಒತ್ತಾಯಿಸಿದ್ದಾರೆ. ಆ ಕರೆಯನ್ನು ಸ್ವೀಕರಿಸಬೇಕು ಮತ್ತು ನೇಪಾಳಕ್ಕೂ ವಿಸ್ತರಿಸಬೇಕಾದ ಅಗತ್ಯ ಈಗಂತೂ ಹೆಚ್ಚಾಗಿದೆ.

ವಿಪತ್ತಿಗೆ ಯಾವುದೇ ಗಡಿಗಳಿರುವುದಿಲ್ಲ. ಅದಕ್ಕೆ ತಕ್ಕನಾದ ಸಹಕಾರದ ಅಗತ್ಯವಿರುತ್ತದೆ. ಕೋಶಿ ಜಲಾನಯನ ಪ್ರದೇಶವೊಂದರಲ್ಲೇ ಎರಡು ಡಜನ್‌ಗೂ ಹೆಚ್ಚು ಹಿಮನದಿ ಸರೋವರದ ಪ್ರಳಯ ಘಟನೆಗಳು ಸಂಭವಿಸಿವೆ, ಇವೆಲ್ಲವೂ ಗಡಿಯಾಚೆಗೂ ಪರಿಣಾಮಗಳನ್ನು ಬೀರಿವೆ. ಆದರೂ ಪ್ರವಾಹದಿಂದ ಹೆಚ್ಚು ಪರಿಣಾಮಕ್ಕೆ ಒಳಗಾದ ದೇಶಗಳ ನಡುವೆ ನೈಜ-ಸಮಯದ ದತ್ತಾಂಶ ಹಂಚಿಕೆಗಾಗಿ ಯಾವುದೇ ವ್ಯವಸ್ಥೆಯಿಲ್ಲ. ಅದು ಇಲ್ಲದೆ ಹೋದರೆ, ಭವಿಷ್ಯದ ಪ್ರತಿಯೊಂದು ತಾಪಮಾನ ಏರಿಕೆಯ ಎಚ್ಚರಿಕೆಯು ಸಕಾಲದಲ್ಲಿ ತಲುಪಲು ಸಾಧ್ಯವಾಗುವುದಿಲ್ಲ.

ಬದಲಾಗಬೇಕಿರುವುದು ಏನು?

ಈ ಹಿನ್ನೆಲೆಯಲ್ಲಿ ನಾವು ಕಾರ್ಯಪ್ರವೃತ್ತರಾಗದ ಹೊರತು ಹಿಮಾಲಯನ್ ವಿಪತ್ತುಗಳ ಮಾನವ ಮತ್ತು ಅಭಿವೃದ್ಧಿ ವೆಚ್ಚಗಳು ಹೆಚ್ಚಾಗುತ್ತಲೇ ಇರುತ್ತವೆ. ಮೊದಲನೆಯದಾಗಿ, ಅಪಾಯದ ವಲಯಗಳಲ್ಲಿ ನಿರ್ಮಾಣಗಳ ಮೇಲೆ ತುರ್ತಾಗಿ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾದ ಅಗತ್ಯವಿದೆ. ಸಂಪೂರ್ಣ ನಿಷೇಧಗಳು ಅವಾಸ್ತವಿಕವಾಗಿದ್ದರೂ, ಅಪಾಯ-ಸೂಕ್ಷ್ಮವಾದ ಭೂ-ಬಳಕೆಯ ಯೋಜನೆ ಆಧಾರಿತ ಕಠಿಣ, ಜಾರಿಗೊಳಿಸಬಹುದಾದ ಮಾನದಂಡಗಳು ಬೇಕಾಗುತ್ತವೆ.

ನಿರ್ಮಾಣ ಅಭ್ಯಾಸಗಳು ಕಠಿಣ ಮೌಲ್ಯಮಾಪನಕ್ಕೆ ಒಳಗಾಗಬೇಕು ಮತ್ತು ಕಟ್ಟಡ ನಿಯಂತ್ರಣಗಳನ್ನು ನವೀಕರಿಸಬೇಕು ಹಾಗೂ ಬಲಪಡಿಸಬೇಕು ಎಂದು NDMA ಈಗಾಗಲೇ ಒತ್ತಿಹೇಳಿದೆ. ಆ ಶಿಫಾರಸು ಸ್ವತಂತ್ರ ಮೇಲ್ವಿಚಾರಣೆ ಮತ್ತು ಉಲ್ಲಂಘನೆಗಳಿಗೆ ದಂಡ ವಿಧಿಸುವ ಕಾನೂನು ಜಾರಿಗೆ ಬರಬೇಕು. ಸಂಬಂಧಪಟ್ಟ ಇತರ ರಾಷ್ಟ್ರಗಳು ಕೂಡ ಇದನ್ನು ಅನುಸರಿಸಬೇಕು.

ಎರಡನೆಯದಾಗಿ, ಐತಿಹಾಸಿಕ ಸರಾಸರಿಗಳಿಗಿಂತ ಭೀಕರ ಪ್ರವಾಹದ ಸನ್ನಿವೇಶಗಳಿಗಾಗಿ ಜಲವಿದ್ಯುತ್ ಸುರಕ್ಷತಾ ಮಾನದಂಡಗಳನ್ನು ಮರುರೂಪಿಸಬೇಕು. ಅಸ್ತಿತ್ವದಲ್ಲಿರುವ ಮತ್ತು ಯೋಜಿತವಾಗಿರುವ ಎಲ್ಲಾ ಯೋಜನೆಗಳ ಸ್ವತಂತ್ರ ಲೆಕ್ಕಪರಿಶೋಧನೆ ಅತ್ಯಗತ್ಯ. ಕೇವಲ ಸ್ಥಾಪಿತ ಸಾಮರ್ಥ್ಯವಲ್ಲದೆ, ಚೇತರಿಸಿಕೊಳ್ಳುವ ಮೂಲಸೌಕರ್ಯಗಳ ಮೇಲೆ ಇಂಧನ ಭದ್ರತೆಯು ಅವಲಂಬಿತವಾಗಿದೆ.

ನದಿ ಜಲಾನಯನ ಪ್ರದೇಶಗಳಲ್ಲಿ ನಿರ್ಮಾಣ ಮಾಡುವ ಜಲವಿದ್ಯುತ್ ಯೋಜನೆಗಳಿಂದ ಪರಿಸರದ ಮೇಲೆ ಉಂಟಾಗುವ ಪರಿಣಾಮಗಳನ್ನು ಒಟ್ಟಾರೆಯಾಗಿ ಮೌಲ್ಯಮಾಪನ ಮಾಡಬೇಕು ಮತ್ತು ಯೋಜನಾ ಸ್ಥಳಗಳಲ್ಲಿ ವಿಪತ್ತು ನಿರ್ವಹಣೆಗಾಗಿ ಪ್ರಮಾಣಿತ ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸಬೇಕು ಎನ್ನುವ NDMA ಸೂಚನೆ ಸರಿಯಾಗಿಯೇ ಇದೆ.

ಮೂರನೆಯದಾಗಿ, ಭಾರತ, ಚೀನಾ ಮತ್ತು ನೇಪಾಳದ ನಡುವೆ ತ್ರಿಪಕ್ಷಗಳ ಮೇಲ್ವಿಚಾರಣೆ ಮತ್ತು ಮುಂಚಿತವಾಗಿಯೇ ಎಚ್ಚರಿಕೆ ನೀಡಬೇಕು ಎನ್ನುವ ಒಪ್ಪಂದವಿರಬೇಕು, ಜೊತೆಗೆ ನೈಜ-ಸಮಯದ ದತ್ತಾಂಶ ಹಂಚಿಕೆ ಮತ್ತು ನಿಯಮ ಪಾಲನೆಗೆ ಬದ್ಧವಾದ ನಿಧಿ ಹಂಚಿಕೆಯ ವ್ಯವಸ್ಥೆ ಕೂಡ ಇರಬೇಕು. ತ್ವರಿತ ಗತಿಯಲ್ಲಿ ಬದಲಾಗುತ್ತಿರುವ ಭವಿಷ್ಯವನ್ನು ಎದುರಿಸಲು ಹೊರಟಿರುವ ನಮ್ಮ ಮುಂದೆ ಇರುವುದು ಅಪೂರ್ಣ ನಕ್ಷೆ ಎಂದು ICIMOD ಎಚ್ಚರಿಸಿದೆ. ಅಂತಹ ನಕ್ಷೆಯನ್ನು ನಾವು ಮೊದಲು ಪೂರ್ಣಗೊಳಿಸಬೇಕು ಮತ್ತು ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕು.

ಹಿಮಾಲಯದ ಮಂಜುಗಡ್ಡೆ ಕರಗುವುದು ಅನಿವಾರ್ಯ, ಆದರೆ ವಿಪತ್ತುಗಳು ಅನಿವಾರ್ಯವಾಗಬಾರದು. ನಿರ್ಲಕ್ಷ್ಯವೇ ನಮ್ಮ ನೀತಿಯಾಗಬಾರದು. ಬೆಟ್ಟ-ಗುಡ್ಡಗಳಿಗೆ ಗಡಿಗಳಿಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಮತ್ತು 2026ನೇ ಇಸವಿ ನಮ್ಮ ಪಾಲಿಗೆ ಸಾಮಾನ್ಯವಾಗಬಾರದು.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story