Prabhat Patnaik

ನವ-ಉದಾರೀಕರಣದಿಂದ ನವಫ್ಯಾಸಿಸಂ ವರೆಗೆ: ಭಾರತದ ಅಸಮಾನತೆಯ ಸವಾಲುಗಳು


ನವ-ಉದಾರೀಕರಣದಿಂದ ನವಫ್ಯಾಸಿಸಂ ವರೆಗೆ: ಭಾರತದ ಅಸಮಾನತೆಯ ಸವಾಲುಗಳು
x
ವಿಪರೀತ ಆರ್ಥಿಕ ಅಸಮಾನತೆಯಿಂದಾಗಿ, ಭಾರತದ ಎರಡು ಭಿನ್ನ ಮುಖಗಳು ಇಂದು ಢಾಳಾಗಿ ಕಣ್ಣಿಗೆ ಕಟ್ಟುತ್ತಿವೆ.
Click the Play button to hear this message in audio format

ನವಫ್ಯಾಸಿಸಂನ್ನು ಸೋಲಿಸಲು, ಹೆಚ್ಚುತ್ತಿರುವ ಅಸಮಾನತೆಯನ್ನು ಹೋಗಲಾಡಿಸುವುದು ಅತ್ಯಗತ್ಯ. ಇದನ್ನು ಆಗುಮಾಡಲು ಸಂವಿಧಾನದಲ್ಲಿ ಆರ್ಥಿಕ ಹಕ್ಕುಗಳ ಗುಂಪನ್ನು ಅಳವಡಿಸುವುದು ಒಂದು ಪ್ರಜಾಪ್ರಭುತ್ವದ ಮಾರ್ಗವಾಗಿದೆ.

ಭಾರತದಲ್ಲಿ ನವ-ಉದಾರವಾದಿ ಆರ್ಥಿಕ ನೀತಿಗಳನ್ನು ಅಳವಡಿಸಿಕೊಂಡ ಬಳಿಕ ಆದಾಯ ಮತ್ತು ಸಂಪತ್ತಿನ ಅಸಮಾನತೆಯಲ್ಲಿ ಅಪಾರ ಪ್ರಮಾಣದ ಏರಿಕೆ ಉಂಟಾಗಿದೆ. 1951ರಲ್ಲಿ ದೇಶದ ರಾಷ್ಟ್ರೀಯ ಆದಾಯದಲ್ಲಿ ಅಗ್ರ ಶೇಕಡಾ ಒಂದರಷ್ಟು ಜನರ ಪಾಲು ಸುಮಾರು ಶೇ.12ರಷ್ಟಿತ್ತು. ಅದು 1982ರ ಹೊತ್ತಿಗೆ ಶೇ.6ಕ್ಕೆ ಕುಸಿದಿತ್ತು. ಆದರೆ 2022-23ರ ವೇಳೆಗೆ ಇದು ಸುಮಾರು ಶೇ.23ಕ್ಕೆ ಜಿಗಿದಿದೆ. ಇದು ಕಳೆದ ನೂರು ವರ್ಷಗಳಲ್ಲೇ ಅತ್ಯಂತ ಅಧಿಕ ಎಂದು ಪ್ಯಾರಿಸ್ ಮೂಲದ ʼವರ್ಲ್ಡ್ ಇನ್ ಈಕ್ವಾಲಿಟಿ ಡೇಟಾಬೇಸ್ʼ ನಡೆಸಿದ ಸಮೀಕ್ಷೆಯಿಂದ ಬಯಲಾಗಿದೆ.

ಅಂದರೆ ಈ ಸಮೀಕ್ಷೆಯ ಪ್ರಕಾರ 2022-23ರಲ್ಲಿ ದೇಶದ ಸಂಪತ್ತಿನ ಅಗ್ರ ಶೇಕಡ ಜನರ ಪಾಲು ಶೇ.40.1ರಷ್ಟು ಇರಬಹುದು ಎಂದು ಅಂದಾಜು ಮಾಡಲಾಗಿದೆ.

ಅಸಲಿಗೆ ಈ ಆದಾಯ ಅಸಮಾನತೆಯ ಏರಿಕೆಯ ಜೊತೆ ಜೊತೆಗೇ ಪೌಷ್ಟಿಕಾಂಶದ ಆಧಾರದಲ್ಲಿ ವ್ಯಾಖ್ಯಾನ ಮಾಡಲಾದ ʼಸಂಪೂರ್ಣ ಬಡತನʼದ ಪ್ರಮಾಣ ಕೂಡ ಹೆಚ್ಚಾಗಿದೆ. ಈ ಹಿಂದೆ ಯೋಜನಾ ಆಯೋಗವು ನಿಗದಿಪಡಿಸಿದ ಮಾನದಂಡದ ಪ್ರಕಾರ ದಿನಕ್ಕೆ ಒಬ್ಬ ವ್ಯಕ್ತಿಗೆ 2200 ಕ್ಯಾಲೋರಿ ಆಹಾರ ಲಭ್ಯವಿಲ್ಲದ ಗ್ರಾಮೀಣ ಜನಸಂಖ್ಯೆಯ ಪ್ರಮಾಣ 1993-94ರಲ್ಲಿ ಶೇ.58ರಷ್ಟಿತ್ತು. ಇದು 2011-12ರಲ್ಲಿ ಶೇ.68 ಏರಿದ್ದರೆ 2017-18ರಲ್ಲಿ ಶೇ. 80ಕ್ಕಿಂತಲೂ ಅಧಿಕವಾಗಿದೆ.

ಈ ಅಂಕಿ-ಅಂಶಗಳು ಎಷ್ಟೊಂದು ಶಾಕಿಂಗ್ ಆಗಿತ್ತು ಎಂದರೆ ಸರ್ಕಾರವು ಈ ದತ್ತಾಂಶವನ್ನು ಸಾರ್ವಜನಿಕ ವಲಯದಿಂದಲೇ ಹಿಂದಕ್ಕೆ ಪಡೆಯಿತು. ಅಷ್ಟು ಮಾತ್ರವಲ್ಲದೆ ದತ್ತಾಂಶ ಸಂಗ್ರಹ ಮಾಡುವ ವಿಧಾನದಲ್ಲಿಯೇ ಬದಲಾವಣೆ ಉಂಟುಮಾಡಿತು. (ಇದು 2022-23ರ ಅಂಕಿ-ಅಂಶಗಳು ಜೊತೆ ಹೋಲಿಕೆ ಮಾಡುವುದೇ ಕಷ್ಟವಾಗಿಸಿದೆ). ನಗರ ಪ್ರದೇಶದ ಭಾರತಕ್ಕೆ ಸಂಬಂಧಿಸಿದಂತೆ ಪೌಷ್ಟಿಕಾಂಶದ ಮಾನದಂಡವನ್ನು 2100 ಕ್ಯಾಲೊರಿ ಎಂದು ನಿಗದಿಪಡಿಸಲಾಗಿತ್ತು. ಅದರ ಅಂಕಿ-ಅಂಶಗಳು 1993-94ರಲ್ಲಿ ಶೇ.57ರಷ್ಟಿದ್ದರೆ 2011-12ರಲ್ಲಿ ಶೇ.65ಕ್ಕೆ ಏರಿಕೆಯಾಗಿತ್ತು. (ಮೂಲ: ಯು.ಪಟ್ನಾಯಕ್ ಅವರ ಎಕ್ಸ್ಪ್ಲೋರಿಂಗ್ ದಿ ಪಾವರ್ಟಿ ಕ್ವಶ್ಚನ್).

ಹಾಗಂತ ಈ ಬೆಳೆಯುತ್ತಿರುವ ಅಸಮಾನತೆ ಕೇವಲ ಭಾರತಕ್ಕೆ ಸೀಮಿತವಾದ ವಿದ್ಯಮಾನವೇನೂ ಅಲ್ಲ. ಇದು ನವ ಉದಾರವಾದದ ಅಡಿಯಲ್ಲಿ ಕಂಡುಬರುವ ಜಾಗತಿಕ ವಿದ್ಯಮಾನ. ಯಾಕೆಂದರೆ ನವಉದಾರವಾದದ ಅಡಿಯಲ್ಲಿ ಬಂಡವಾಳವು ಜಾಗತಿಕವಾಗಿ ಚಲನಶೀಲವಾಗಿರುತ್ತದೆ.

ಆದರೆ ಕಾರ್ಮಿಕರ ವಿಷಯದಲ್ಲಿ ಹಾಗಾಗುವುದಿಲ್ಲ. ಕಾರ್ಮಿಕ ಸಂಘಟನೆಗಳು ಇಂದಿಗೂ ರಾಷ್ಟ್ರ ಮಟ್ಟದಲ್ಲಿಯೇ ಸಂಘಟಿತವಾಗಿವೆ. ಈ ಅಸಮತೋಲನವು ಕಾರ್ಮಿಕರ ಚೌಕಾಶಿ ಮಾಡುವ ಶಕ್ತಿಯನ್ನು ಕುಂದಿಸುತ್ತದೆ. ಇದರ ಪರಿಣಾಮವಾಗಿ ಎಲ್ಲ ಕಡೆ ವಾಸ್ತವಿಕವಾದ ವೇತನವು ಕಾರ್ಮಿಕ ಉತ್ಪಾದಕತೆಗಿಂತ ಹಿಂದಕ್ಕೆ ಉಳಿಯುತ್ತದೆ.

ಇನ್ನೂ ಒಂದು ಮಾತಿನಲ್ಲಿ ಹೇಳುವುದಾದರೆ, ಮುಂದುವರಿದ ಬಂಡವಾಳಶಾಹಿ ದೇಶಗಳ ಕಾರ್ಮಿಕರು ಅಭಿವೃದ್ಧಿಶೀಲ ರಾಷ್ಟ್ರಗಳ ಕಾರ್ಮಿಕರೊಂದಿಗೆ ಸ್ಪರ್ಧಿಸುವಂತೆ ಮಾಡಲಾಗುತ್ತದೆ. ಈ ಅಭಿವೃದ್ಧಿಶೀಲ ರಾಷ್ಟ್ರಗಳ ಕಾರ್ಮಿಕರು ವಸಾಹತುಶಾಹಿ ಕಾಲದಿಂದಲೂ ಬಂದಿರುವ ಬೃಹತ್ ಕಾರ್ಮಿಕ ಮೀಸಲು ಪಡೆಯ ಭಾಗವಾಗಿದ್ದಾರೆ ಮತ್ತು ಅವರು ಕೇವಲ ಜೀವನ ನಿರ್ವಹಣೆಗೆ ತಕ್ಕುನಾದ ವೇತನವನ್ನು ಪಡೆಯುತ್ತಿದ್ದಾರೆ.

ತೃತೀಯ ಜಗತ್ತಿನ ರಾಷ್ಟ್ರಗಳ ಈ ಕಾರ್ಮಿಕ ಮೀಸಲು ಪಡೆಯ ಪ್ರಮಾಣವು ಒಟ್ಟು ಕಾರ್ಯಪಡೆಗೆ ಹೋಲಿಸಿದರೆ ಕಡಿಮೆಯೇನೂ ಆಗುತ್ತಿಲ್ಲ. ಬದಲಾಗಿ ಬಂಡವಾಳದ ಜಾಗತಿಕ ಚಲನಶೀಲತೆಯ ಹೊರತಾಗಿಯೂ ಅದು ಏರಿಕೆಯಾಗುತ್ತಿದೆ. ಇದರಿಂದಾಗಿ ಕಾಲಕ್ರಮೇಣ ಆದಾಯದ ಅಸಮಾನತೆಯ ಅಂತರ ಬೆಳೆಯುತ್ತಲೇ ಹೋಗುವುದನ್ನು ಕಾಣಬಹುದು.

ಪ್ರಜಾಪ್ರಭುತ್ವಕ್ಕೆ ಮಾರಕ

ಆದಾಯದ ಅಸಮಾನತೆಯಲ್ಲಿ ದಾಖಲಾಗುತ್ತಿರುವ ಇಂತಹ ಬೃಹತ್ ಏರಿಕೆಯು ಪ್ರಜಾಪ್ರಭುತ್ವಕ್ಕೆ ಅತ್ಯಂತ ಮಾರಕ ಎಂಬ ಸಂಗತಿಯನ್ನು ವಿಶ್ವದ ಎಲ್ಲೆಡೆ ಒಪ್ಪಿಕೊಳ್ಳಲಾಗುತ್ತಿದೆ. ಜಗತ್ತಿನ ಸಿರಿವಂತರೇ ತುಂಬಿರುವ ʼದಾವೋಸ್ ಶೃಂಗಸಭೆʼಯಲ್ಲಿ ಮಾಡಿದ ಭಾಷಣಗಳಲ್ಲಿಯೂ ಈ ವಿಷಯ ವ್ಯಕ್ತವಾಗಿರುವುದು ಗಮನಾರ್ಹ.

ಆದರೆ ಬೆಳೆಯುತ್ತಿರುವ ಅಸಮಾನತೆ ಹಾಗೂ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕ್ರಿಯೆಯ ನಡುವೆ ಒಂದು ಗಹನ ಸಂಬಂಧವೂ ಇದ್ದು ಅದನ್ನು ಅಷ್ಟಾಗಿ ಗುರುತಿಸಲಾಗಿಲ್ಲ. ಬಡವರು ತಮ್ಮ ಆದಾಯದ ಬಹುದೊಡ್ಡ ಪಾಲನ್ನು ಸಿರಿವಂತರಿಗಿಂತ ಹೆಚ್ಚಾಗಿ ಬಳಕೆ ಮಾಡುತ್ತಾರೆ, ಹೀಗಾಗಿ ಬೆಳೆಯುತ್ತಿರುವ ಅಸಮಾನತೆಯಿಂದಾಗಿ ಆದಾಯವು ಬಡವರಿಗಿಂತ ಶ್ರೀಮಂತರಿಗೆ ವರ್ಗಾವಣೆಯಾದಾಗ ಅದು ಜಾಗತಿಕ ಅರ್ಥ ವ್ಯವಸ್ಥೆ ಮತ್ತು ದೇಶಗಳ ಒಳಗಿರುವ ಒಟ್ಟಾರೆ ಬೇಡಿಕೆಯನ್ನು ತಗ್ಗಿಸುತ್ತದೆ.

ಇದು ಆರ್ಥಿಕವಾಗಿ ಸ್ಥಗಿತ ಉಂಟಾಗಲು ಕಾರಣವಾಗುತ್ತದೆ ಹಾಗೂ ನಿರುದ್ಯೋಗ ಇನ್ನಷ್ಟು ಹೆಚ್ಚಾಗುವಂತೆ ಮಾಡುತ್ತದೆ. ಇದು ದುಡಿಯುವ ಜನರ ಪರಿಸ್ಥಿತಿಯನ್ನು ಇನ್ನಷ್ಟು ಕುಲಗೆಡಿಸುವುದು ಮಾತ್ರವಲ್ಲದೆ ಬೃಹತ್ ಬಂಡವಾಳಶಾಹಿಗಳು ʼನವಫ್ಯಾಸಿಸ್ಟ್ʼ ಶಕ್ತಿಗಳೊಂದಿಗೆ ಕೈಜೋಡಿಸುವ ಮೂಲಕ ತಮ್ಮ ಬಲವನ್ನು ಕಾಯ್ದುಕೊಳ್ಳಲು ಪ್ರೇರೇಪಿಸುತ್ತದೆ.

ಇಂದು ಜಗತ್ತಿನಾದ್ಯಂತ 'ನವಫ್ಯಾಸಿಸಂ' ಉಚ್ಛ್ರಾಯ ಸ್ಥಿತಿಯನ್ನು ತಲುಪುತ್ತಿರುವುದು ಅಚ್ಚರಿಯ ಸಂಗತಿಯೇನೂ ಅಲ್ಲ. 1930ರ ದಶಕದ ಫ್ಯಾಸಿಸಂನ್ನು ನೆನಪಿಸುವ ಹಲವಾರು ಸಾಮಾನ್ಯ ಗುಣಲಕ್ಷಣಗಳು ಇದರಲ್ಲಿರುವುದು ವಿಶೇಷ. ಇವುಗಳ ಪ್ರಮುಖ ಲಕ್ಷಣಗಳೆಂದರೆ: ದಮನಕಾರಿ ಆಡಳಿತದ ಉಗಮ, ಸರ್ಕಾರದ ದಮನ ನೀತಿಯ ಜೊತೆಗೆ ನವಫ್ಯಾಸಿಸ್ಟ್ ಬೀದಿ ಗುಂಪುಗಳ ಹಾವಳಿ, ನವಫ್ಯಾಸಿಸ್ಟ್ಗಳು ಮತ್ತು ಬೃಹತ್ ಉದ್ಯಮಿಗಳ ನಡುವಿನ ನಿಕಟ ಸಂಬಂಧ, ವಿಶೇಷವಾಗಿ ಬೃಹತ್ ಉದ್ಯಮ ವಲಯದ ಹೊಸ ಸ್ತರದೊಂದಿಗೆ ಇವರಿಗಿರುವ ಗಾಢ ನಂಟು, ಯಾವುದೋ ಒಂದು ಅಸಹಾಯಕ ಅಲ್ಪಸಂಖ್ಯಾತ ಸಮುದಾಯವನ್ನು "ಪರಕೀಯರು" ಎಂದು ಬಿಂಬಿಸಿ ಅವರ ವಿರುದ್ಧ ದ್ವೇಷವನ್ನು ಬಿತ್ತುವುದು, ಮತ್ತು ರಾಷ್ಟ್ರದೊಂದಿಗೆ ಗುರುತಿಸಲ್ಪಡುವ ಒಬ್ಬ "ನಾಯಕನ” ಆರಾಧನೆಯನ್ನು ಉತ್ತೇಜಿಸಿ, ಜನರು ಅವರನ್ನು ದೈವೀಕರಿಸುವಂತೆ ಪ್ರೇರೇಪಿಸುವುದು.

ನವಫ್ಯಾಸಿಸಂನ ಭೀತಿ

ಅರ್ಜೆಂಟೀನಾದಿಂದ ಆರಂಭಿಸಿ ಅಮೆರಿಕ, ಇಸ್ರೇಲ್, ಇಟಲಿ, ಹಂಗೇರಿ ಮತ್ತು ಟರ್ಕಿಯವರೆಗೆ—ಎಲ್ಲಿ ನವಫ್ಯಾಸಿಸ್ಟ್ಗಳು ಅಧಿಕಾರದಲ್ಲಿದ್ದಾರೋ ಅಲ್ಲಿ ಈ ಲಕ್ಷಣಗಳು ನಾನಾ ಹಂತಗಳಲ್ಲಿ ವ್ಯಕ್ತವಾಗುತ್ತಿವೆ. ಅಷ್ಟೇ ಅಲ್ಲದೆ, ಫ್ರಾನ್ಸ್, ಜರ್ಮನಿ ಮತ್ತು ಬ್ರಿಟನ್ ಸೇರಿದಂತೆ ಇತರ ದೇಶಗಳಲ್ಲಿ ನವಫ್ಯಾಸಿಸ್ಟ್ಗಳು ಅಧಿಕಾರದ ಬಾಗಿಲು ತಟ್ಟುತ್ತಿರುವ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಪ್ರಸ್ತುತ ಭಾರತವನ್ನು ಆಳುತ್ತಿರುವ 'ಕಾರ್ಪೊರೇಟ್-ಹಿಂದುತ್ವ' ಮೈತ್ರಿಯು ಈ ಜಾಗತಿಕ ವಿದ್ಯಮಾನದ ಒಂದು ಅಭಿವ್ಯಕ್ತಿಯಾಗಿದೆ.

ನವಫ್ಯಾಸಿಸಂ ಶಕ್ತಿಗಳನ್ನು ಸೋಲಿಸಲು ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು, ಈ ಅಸಮಾನತೆಯ ಬೆಳವಣಿಗೆಯನ್ನು ಹಿಮ್ಮೆಟ್ಟಿಸಲೇಬೇಕು. ದುಡಿಯುವ ಜನರ ಸಂಕಷ್ಟಗಳನ್ನು ಕಡಿಮೆ ಮಾಡುವ ಅಗತ್ಯವು ಎಷ್ಟು ಸ್ಪಷ್ಟವಾಗಿದೆಯೆಂದರೆ, "ನಗದು ಹಂಚಿಕೆ" ಅಥವಾ ನೇರ ನಗದು ವರ್ಗಾವಣೆಯ ಪದ್ಧತಿಯು ಈಗ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಸಾಮಾನ್ಯವಾಗಿದೆ.

ಇಷ್ಟಿದ್ದೂ ಈ "ನಗದು ಹಂಚಿಕೆ" ಅಥವಾ ಉಚಿತ ಯೋಜನೆಗಳು ಕೆಲವು ಸ್ಪಷ್ಟ ಮಿತಿಗಳನ್ನು ಹೊಂದಿವೆ: ಮೊದಲನೆಯದಾಗಿ, ಇವುಗಳನ್ನು ಒಂದು 'ಉದಾರ ಕೊಡುಗೆ' ಎನ್ನುವ ರೀತಿಯಲ್ಲಿ ಪರಿಗಣಿಸಲಾಗುತ್ತದೆ, ಇದಕ್ಕಾಗಿ ಫಲಾನುಭವಿಗಳು ಕೃತಜ್ಞರಾಗಿರಬೇಕು ಎಂದು ನಿರೀಕ್ಷಿಸಲಾಗುತ್ತದೆ.


ಇದು ಕೊಡುಗೆ ಸ್ವೀಕರಿಸುವವರ ಘನತೆಗೆ ಕುಂದು ತರುತ್ತದೆ. ಎರಡನೆಯದಾಗಿ, ಇವುಗಳ ಗುರಿ ಏನಿದ್ದರೂ ನಿರ್ದಿಷ್ಟ ವರ್ಗವನ್ನು ತಲುಪುವುದು ಮತ್ತು ಇಂತಹ ಎಲ್ಲಾ ಯೋಜನೆಗಳಂತೆ, ಇವು ಕೂಡ ಅನೇಕ ಅರ್ಹ ವರ್ಗಗಳನ್ನು ಕೈಬಿಡುತ್ತವೆ. ಮೂರನೆಯದಾಗಿ, ಸರ್ಕಾರದ ಹಣಕಾಸಿನ ಸ್ಥಿತಿಯನ್ನು ಅವಲಂಬಿಸಿ ಇವುಗಳನ್ನು ಯಾವಾಗ ಬೇಕಾದರೂ ಹಿಂದಕ್ಕೆ ಪಡೆಯಬಹುದು.

ಅಸಮಾನತೆಯನ್ನು ಕಡಿಮೆ ಮಾಡಲು ಇರುವ ಪ್ರಜಾಪ್ರಭುತ್ವದ ಮಾರ್ಗವೆಂದರೆ, ಸಂವಿಧಾನದಲ್ಲಿ ಈಗಾಗಲೇ ಇರುವ ನಾಗರಿಕ ಮತ್ತು ರಾಜಕೀಯ ಹಕ್ಕುಗಳಂತೆಯೇ 'ಸಾರ್ವತ್ರಿಕ ಮತ್ತು ನ್ಯಾಯಸಮ್ಮತ' ಮೂಲಭೂತ ಆರ್ಥಿಕ ಹಕ್ಕುಗಳ ಗುಂಪನ್ನು ಪರಿಚಯಿಸುವುದು. ವಾಸ್ತವವಾಗಿ, ಐದು ಪ್ರಮುಖ ಹಕ್ಕುಗಳನ್ನು ಭಾರತದಲ್ಲಿ ಜಾರಿಗೆ ತರಬಹುದು: ಆಹಾರದ ಹಕ್ಕು, ಉದ್ಯೋಗದ ಹಕ್ಕು, ರಾಷ್ಟ್ರೀಯ ಆರೋಗ್ಯ ಸೇವೆಯ ಮೂಲಕ ಉಚಿತ ಆರೋಗ್ಯ ರಕ್ಷಣೆಯ ಹಕ್ಕು, ಉಚಿತ ಶಿಕ್ಷಣದ ಹಕ್ಕು ಮತ್ತು ಅಂಶಾದಾಯವಲ್ಲದ ಜೀವನಾಧಾರಿತ ಪಿಂಚಣಿ ಮತ್ತು ವಿಕಲಚೇತನರ ಸೌಲಭ್ಯಗಳ ಹಕ್ಕು

ಕೇವಲ ಎರಡು ರೀತಿಯ ತೆರಿಗೆಗಳನ್ನು ವಿಧಿಸುವ ಮೂಲಕ ಇವುಗಳಿಗೆ ಹಣಕಾಸು ಒದಗಿಸಬಹುದು, ಅದೂ ಕೇವಲ ದೇಶದ ಮೇಲ್ಸ್ತರದ ಶೇಕಡಾ ಒಂದರಷ್ಟು ಜನಸಂಖ್ಯೆಯ ಮೇಲೆ ಮಾತ್ರ: ಶೇಕಡಾ ಎರಡರಷ್ಟು ಸಂಪತ್ತು ತೆರಿಗೆ ಮತ್ತು ಶೇಕಡಾ 33 ರಷ್ಟು ಉತ್ತರಾಧಿಕಾರ ತೆರಿಗೆ (ಮೂಲ: ಪಿ. ಪಟ್ನಾಯಕ್ ಮತ್ತು ಜೆ. ಘೋಷ್ ಅವರ ಲೇಖನ - 'ವಿ ದಿ ಪೀಪಲ್: ಎಸ್ಟಾಬ್ಲಿಷಿಂಗ್ ರೈಟ್ಸ್ ಅಂಡ್ ಡೀಪನಿಂಗ್ ಡೆಮಾಕ್ರಸೀಸ್').

ಸಹಜವಾಗಿಯೇ, ಇಂತಹ ತೆರಿಗೆಗಳನ್ನು ವಿಧಿಸುವುದು ಮತ್ತು ಈ ಆರ್ಥಿಕ ಹಕ್ಕುಗಳಿಗೆ ಅರ್ಥ ನೀಡಬಲ್ಲ ಬದಲಾವಣೆಗಳನ್ನು ತರುವುದು 'ನವ ಉದಾರವಾದಿ' ವ್ಯವಸ್ಥೆಯನ್ನು ಮೀರಿದ ಕ್ರಮಗಳಾಗಿವೆ. ಇದನ್ನು ಭಾರತದ ದೊಡ್ಡ ಉದ್ಯಮಿಗಳು, ಮುಂದುವರಿದ ಬಂಡವಾಳಶಾಹಿ ಜಗತ್ತು ಮತ್ತು ದೇಶದ ವೃತ್ತಿಪರ ವರ್ಗದ ಮೇಲ್ಸ್ತರದವರು ವಿರೋಧಿಸುತ್ತಾರೆ. ದುಡಿಯುವ ಜನರು ಇಂತಹ ಹಕ್ಕುಗಳ ಸ್ಥಾಪನೆಗಾಗಿ ಮತ್ತು ಬೆಳೆಯುತ್ತಿರುವ ಅಸಮಾನತೆಯನ್ನು ಹಿಮ್ಮೆಟ್ಟಿಸಲು ಒಗ್ಗೂಡಿ ಒತ್ತಾಯಿಸಿದಾಗ ಮಾತ್ರ ಈ ವಿರೋಧವನ್ನು ಮೀರಲು ಸಾಧ್ಯ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story