
ವಿದ್ಯಾರ್ಥಿಗಳು ಪ್ರಶ್ನೆ ಮಾಡಬೇಕು, ಚರ್ಚಿಸಬೇಕು, ಸಾರ್ವಜನಿಕ ವಿಷಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಹೇಳಲಾಗುತ್ತದೆ. ಹಾಗೆ ಮಾಡಿದಾಗ ವಿವಿಗಳು ವಿರುದ್ಧ ಸಲಹೆಗಳನ್ನು ನೀಡುತ್ತವೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ಇತ್ತೀಚೆಗೆ ನಡೆದ ನೀಟ್-ಯುಜಿ ಪ್ರತಿಭಟನೆಗಳು ಉನ್ನತ ಶಿಕ್ಷಣದಲ್ಲಿ ಅಡಕವಾಗಿರುವ ಒಂದು ಅಹಿತಕರ ವಿರೋಧಾಭಾಸವನ್ನು ಬಯಲು ಮಾಡಿದವು.
ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ, ಸಹಕಾರ, ನಾಗರಿಕ ಜವಾಬ್ದಾರಿ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಬೆಳೆಸುವ ಕೆಲಸದಲ್ಲಿ ತೊಡಗಿಕೊಳ್ಳುತ್ತಿರುವುದಾಗಿ ವಿಶ್ವವಿದ್ಯಾಲಯಗಳು ಪದೇ ಪದೇ ಹೇಳಿಕೊಂಡು ಬಂದಿವೆ. ವಿದ್ಯಾರ್ಥಿಗಳು ಪ್ರಶ್ನಿಸಲು, ವಿಶ್ಲೇಷಣೆ ಮಾಡಲು, ಚರ್ಚೆ ನಡೆಸಲು ಹಾಗೂ ಸಾರ್ವಜನಿಕ ವಿಷಯಗಳಲ್ಲಿ ತೊಡಗಿಸಿಕೊ:ಳ್ಳಲು ಉತ್ತೇಜನ ನೀಡಲಾಗುತ್ತದೆ ಎಂದು ಅವು ಹೇಳುತ್ತವೆ. ಆದಾಗ್ಯೂ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ನೇರವಾಗಿ ಪರಿಣಾಂ ಬೀರುವ ವಿಷಯದ ಮೇಲೆ ವಿದ್ಯಾರ್ಥಿಗಳು ಈ ತತ್ವದ ಆಧಾರದಲ್ಲಿಯೇ ಕಾರ್ಯಪ್ರವೃತ್ತರಾದಾಗ ಹಲವು ವಿಶ್ವವಿದ್ಯಾಲಯಗಳು ಅದಕ್ಕೆ ಉತ್ತೇಜನ ನೀಡದೇ ಹಿಂಜರಿದವು ಮತ್ತು ಭಾಗವಹಿಸದೇ ಇರುವಂತೆ ವಿದ್ಯಾರ್ಥಿಗಳಿಗೆ ತಾಕೀತು ಕೂಡ ಮಾಡಿದವು.
ಈ ವಿದ್ಯಮಾನವು ಒಂದು ಪ್ರಮುಖ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ: ಪ್ರಜಾಸತ್ತಾತ್ಮಕ ಪಾಲ್ಗೊಳ್ಳುವಿಕೆಯನ್ನು ತರಗತಿಗಳ ಒಳಗೆ ಮಾತ್ರ ಪ್ರೋತ್ಸಾಹಿಸಬೇಕೇ ಅಥವಾ ವಿದ್ಯಾರ್ಥಿಗಳು ಈ ಮೌಲ್ಯಗಳನ್ನು ವ್ಯವಹಾರದಲ್ಲಿಯೂ ಆಚರಣೆಗೆ ತಂದಾಗ ಅವುಗಳಿಗೆ ಬೆಂಬಲ ನೀಡಬೇಕೆ?
ವಿದ್ಯಾರ್ಥಿಗಳಿಗೆ ವಿವಿ ತಾಕೀತು
ವಿದ್ಯಾರ್ಥಿಗಳು ನೀಟ್ ಪ್ರತಿಭಟನೆ-ಪ್ರದರ್ಶನಗಳಿಂದ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಅಸೋಸಿಯೇಷನ್ ಆಫ್ ಇಂಡಿಯನ್ ಯೂನಿವರ್ಸಿಟಿ (ಎಐಯು), ದೆಹಲಿ ವಿಶ್ವವಿದ್ಯಾನಿಲಯ, ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು), ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಐಐಟಿ-ರೂರ್ಕಿ ಮತ್ತು ಐಐಟಿ ಮದ್ರಾಸ್ ಸೂಚನೆಗಳನ್ನು ನೀಡಿವೆ. ಇದರಿಂದ ವೈಯಕ್ತಿಕ ಸುರಕ್ಷತೆ, ಸಾರ್ವಜನಿಕ ಸಭೆಗಳ ಮೇಲಿನ ನಿಷೇಧಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿಯನ್ನು ಹರಡುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಅವು ಸಮಜಾಯಿಷಿ ನೀಡಿವೆ.
ಉದಾಹರಣೆಗೆ, ಜೆ.ಎನ್.ಯು ಹೊರಡಿಸಿರುವ ಒಂದು ಸೂಚನೆಯಲ್ಲಿ, ವಿದ್ಯಾರ್ಥಿಗಳು "ಜಂತರ್ ಮಂತರ್‌ನಲ್ಲಿ ಅಥವಾ ಅದರ ಸುತ್ತಮುತ್ತಲಿನ ಸಭೆಗಳಲ್ಲಿ ಭಾಗವಹಿಸುವುದರಿಂದ ಅಥವಾ ಭೇಟಿ ನೀಡುವುದರಿಂದ ದೂರವಿರಬೇಕು" ಎಂದು ತಿಳಿಸಿದೆ. ಇದಕ್ಕಾಗಿ ಅದು ಸಾರ್ವಜನಿಕ ಪ್ರದರ್ಶನಗಳ ಕುರಿತ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಕೂಡ ಉಲ್ಲೇಖಿಸಿದೆ.
ವಿಶ್ವವಿದ್ಯಾಲಯಗಳು ಎಚ್ಚರಿಕೆವಹಿಸಲು ಮತ್ತು ಶೈಕ್ಷಣಿಕ ಚಟುವಟಿಕೆಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣ ಹಕ್ಕನ್ನು ಹೊಂದಿವೆ. ಆದಾಗ್ಯೂ, ಜಂತರ್ ಮಂತರ್‌ನಲ್ಲಿನ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಗಳಿಗೆ ಹೊರತಾದ ವಿಷಯದ ಬಗ್ಗೆ ಪ್ರತಿಭಟನೆ ನಡೆಸುತ್ತಿರಲಿಲ್ಲ ಎಂಬುದು ಕೂಡ ಸ್ಪಷ್ಚ.
ಅವರು ಲಕ್ಷಾಂತರ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಪ್ರವೇಶವನ್ನು ನಿರ್ಧರಿಸುವ ಭಾರತದ ಪರೀಕ್ಷಾ ವ್ಯವಸ್ಥೆಯ ಸಮಗ್ರತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸಿದ ಪರೀಕ್ಷೆಗಳಲ್ಲಿ ಆರೋಪಿಸಲಾದ ಸಂಗತಿಗಳ ಬಗೆಗೆ ಜವಾಬ್ದಾರಿ ವಹಿಸಿಕೊ:ಳ್ಳುವಂತೆ ಅವರು ಒತ್ತಾಯಿಸಿದರು ಮತ್ತು ಪುನರಾವರ್ತಿತ ವಿವಾದಗಳನ್ನು ಎದುರಿಸಿದ ವ್ಯವಸ್ಥೆಯಲ್ಲಿ ವಿಶ್ವಾಸವನ್ನು ಮರುಸ್ಥಾಪಿಸಲು ಸುಧಾರಣೆಗಳನ್ನು ತರಬೇಕು ಎಂದು ಕೋರಿದರು.
ಇಂದಿನ ವಿದ್ಯಾರ್ಥಿಗಳಿಗೆ ಪ್ರವೇಶಾತಿಗೆ ಸಂಬಂಧಿಸಿದ ವಿಶ್ವಾಸಾರ್ಹತೆ ವಿಶ್ವವಿದ್ಯಾಲಯಗಳ ಮೇಲೆ ನೇರವಾದ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಚೆನ್ನಾಗಿ ಅರಿವಿದೆ, ಯಾಕೆಂದರೆ ಇದು ಅವರ ತರಗತಿಗಳಿಗೆ ಯಾರು ಪ್ರವೇಶ ಪಡೆಯುತ್ತಾರೆ ಎಂಬುದನ್ನು ನಿರ್ಧರಿಸುತ್ತದೆ ಮತ್ತು ಉನ್ನತ ಶಿಕ್ಷಣದಲ್ಲಿ ಸಾರ್ವಜನಿಕ ನಂಬಿಕೆಯ ಮೇಲೆ ಪ್ರಭಾವ ಬೀರುತ್ತದೆ.
ಹೊರಗುಳಿಯಲಾಗದ ಸ್ಥಿತಿ
ಆದ್ದರಿಂದ, ವಿಶ್ವವಿದ್ಯಾಲಯಗಳು ಎಲ್ಲ ವಿದ್ಯಮಾನಗಳಿಂದ ಹೊರಗುಳಿಯಲು ಸಾಧ್ಯವಿಲ್ಲ. ಅವುಗಳ ಜವಾಬ್ದಾರಿಯು ಪಠ್ಯಕ್ರಮ ಸುಧಾರಣೆ, ಮಾನ್ಯತೆ, ಸಂಶೋಧನಾ ನಿಧಿ ಮತ್ತು ಉನ್ನತ ಶಿಕ್ಷಣ ನೀತಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದನ್ನೂ ಮೀರಿ ವಿಸ್ತರಿಸುತ್ತದೆ. ವಾಸ್ತವವಾಗಿ, ಪ್ರವೇಶ ಪ್ರಕ್ರಿಯೆಯ ಸಮಗ್ರತೆಯ ಬಗ್ಗೆ ಅಷ್ಟೇ ಗಮನ ಹರಿಸಬೇಕಾಗುತ್ತದೆ.
ಇಲ್ಲಿ ಮತ್ತೊಂದು ವಿರೋಧಾಭಾಸವಿದೆ: ವಿಶ್ವವಿದ್ಯಾಲಯಗಳು ಯಾವ ವ್ಯವಸ್ಥೆಯ ಮೇಲೆ ಹೆಚ್ಚು ಅವಲಂಬಿತವಾಗಿವೆಯೋ, ಆ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಬಲಪಡಿಸುವ ಸುಧಾರಣೆಗಳ ಬಗ್ಗೆ ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದರು. ಹೆಚ್ಚಿನ ಪಾರದರ್ಶಕತೆ, ಬಲವಾದ ಜವಾಬ್ದಾರಿ ಮತ್ತು ಹೆಚ್ಚು ವಿಶ್ವಾಸಾರ್ಹ ಪರೀಕ್ಷಾ ಪ್ರಕ್ರಿಯೆಯು ಉನ್ನತ ಶಿಕ್ಷಣದಲ್ಲಿ ಸಾರ್ವಜನಿಕ ವಿಶ್ವಾಸವನ್ನು ಬಲಪಡಿಸುವ ಇರಾದೆಯನ್ನು ಹೊಂದಿದೆ.
ಆದರೆ ದುರದೃಷ್ಟವಶಾತ್, ಪ್ರತಿಭಟನಾಕಾರರು ಎತ್ತಿದ ಸಮಸ್ಯೆಗಳ ಬಗ್ಗೆ ಅದೇ ರೀತಿಯ ಕಳಕಳಿಯನ್ನು ವ್ಯಕ್ತಪಡಿಸದೆ, ಭಾಗವಹಿಸುವಿಕೆಯನ್ನು ನಿರುತ್ಸಾಹಗೊಳಿಸುವ ಮೂಲಕ, ಅಂತಿಮವಾಗಿ ತಮ್ಮದೇ ಸಾಸ್ಥಾನಿಕ ಹಿತಾಸಕ್ತಿಗಳಿಗೆ ಸೇವೆ ಸಲ್ಲಿಸಬೇಕಿದ್ದ ಸುಧಾರಣೆಗಳನ್ನು ಸಾರ್ವಜನಿಕವಾಗಿ ಬೆಂಬಲಿಸಲು ವಿಶ್ವವಿದ್ಯಾಲಯಗಳು ಹಿಂದೇಟು ಹಾಕಿದಂತೆ ತೋರಿದವು (ಕನಿಷ್ಠ ಪಕ್ಷ ಮೌನದ ಮೂಲಕವಾದರೂ).
ತಟಸ್ಥವಾಗಿರುವುದು ಎಂದರೆ ಮೌನವಲ್ಲ
ಇಲ್ಲಿಯೇ ಈ ಸಲಹಾ ಸೂಚನೆಗಳು ಹಿನ್ನಡೆ ಅನುಭವಿಸಿದವು. ಅವು ಸಾಂಸ್ಥಿಕ ವೈಫಲ್ಯಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳ ನಡವಳಿಕೆಯ ಮೇಲೆಯೇ ಸಂಪೂರ್ಣ ಗಮನಹರಿಸಿದವು. ಹಾಗಾಗಿ ವಿದ್ಯಾರ್ಥಿಗಳು ಪ್ರತಿಭಟನೆಗಳಿಂದ ದೂರವಿರಲು, ತಮ್ಮ ಅಧ್ಯಯನದ ಮೇಲೆ ಗಮನಹರಿಸಲು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಹಂಚಿಕೊಳ್ಳುವುದನ್ನು ತಡೆಯಲು ಸೂಚಿಸಲಾಯಿತು. ಅಲ್ಲದೆ, ಸಂಭವಿಸಬಹುದಾದ ಶಿಸ್ತುಕ್ರಮ ಹಾಗೂ ಕಾನೂನು ಕ್ರಮಗಳ ಬಗ್ಗೆಯೂ ಅವರಿಗೆ ನೆನಪಿಸಲಾಯಿತು.
ಈ ಲೇಖನಕ್ಕಾಗಿ ಪರಿಶೀಲಿಸಲಾದ ಯಾವುದೇ ಸಲಹಾ ಸೂಚನೆಗಳು ಪರೀಕ್ಷೆಯ ಸಮಗ್ರತೆಯ ಬಗ್ಗೆ ಸಾರ್ವಜನಿಕವಾಗಿ ಕಳವಳ ವ್ಯಕ್ತಪಡಿಸಲಿಲ್ಲ ಅಥವಾ ಹೆಚ್ಚಿನ ಪಾರದರ್ಶಕತೆ, ಸ್ವತಂತ್ರ ತನಿಖೆ ಅಥವಾ ಸಾಂಸ್ಥಿಕ ಜವಾಬ್ದಾರಿಗೆ ಕರೆ ನೀಡಲಿಲ್ಲ.
ಹಾಗಂತ ವಿಶ್ವವಿದ್ಯಾಲಯಗಳು ಪ್ರತಿಭಟನೆಗಳಿಗೆ ಅನುಮೋದನೆ ನೀಡಬೇಕಾಗಿರಲಿಲ್ಲ ಅಥವಾ ಪ್ರತಿ ಬೇಡಿಕೆಯನ್ನು ಬೆಂಬಲಿಸಬೇಕಾಗಿಯೂ ಇರಲಿಲ್ಲ, ಹಾಗೂ ಅವು ರಾಜಕೀಯ ನಿಲುವುಗಳನ್ನು ತಾಳುವ ನಿರೀಕ್ಷೆಯೂ ಇರಲಿಲ್ಲ. ಆದರೆ ಉನ್ನತ ಶಿಕ್ಷಣದ ಮೇಲೆ ನೇರವಾಗಿ ಪರಿಣಾಮ ಬೀರುವ ವಿಷಯಗಳ ಬಗ್ಗೆ ತಟಸ್ಥವಾಗಿರುವುದು ಎಂದರೆ ಮೌನವಾಗಿರುವುದು ಎಂದೇನೂ ಅಲ್ಲ.
ವಿಶ್ವವಿದ್ಯಾಲಯಗಳು ಸಂಯಮ ಕಾಯ್ದುಕೊಳ್ಳಲು ಸಲಹೆ ನೀಡುತ್ತಲೇ, ಪರೀಕ್ಷೆಯ ಸಮಗ್ರತೆಯ ಬಗ್ಗೆ ಇರುವ ಕಳವಳಗಳು ಗಂಭೀರ ಸಾರ್ವಜನಿಕ ಗಮನಕ್ಕೆ ಅರ್ಹವಾಗಿವೆ ಎಂಬುದನ್ನು ಗುರುತಿಸಬಹುದಿತ್ತು. ಅದರ ಫಲಿತಾಂಶವನ್ನು ಮುಂಚಿತವಾಗಿ ನಿರ್ಧರಿಸದೆ, ವಿಶ್ವಾಸಾರ್ಹ ತನಿಖೆಗಾಗಿ ಅದು ಒತ್ತಾಯ ಮಂಡಿಸಬಹುದು. ಅದು ಪ್ರವೇಶ ಪ್ರಕ್ರಿಯೆ ಮತ್ತು ಶೈಕ್ಷಣಿಕ ಸಮಗ್ರತೆಯ ಬಗೆಗಿನ ವಿಶ್ವವಿದ್ಯಾಲಯಗಳ ಸ್ವಂತ ಬದ್ಧತೆ ಎರಡರ ಮೇಲೂ ಸಾರ್ವಜನಿಕ ವಿಶ್ವಾಸವನ್ನು ಬಲಪಡಿಸುತ್ತಿತ್ತು.
ತೀವ್ರ ವೈರುಧ್ಯಗಳು
ಮತ್ತೊಂದು ಗಮನಾರ್ಹ ಲಕ್ಷಣವೆಂದರೆ, ಅತ್ಯಂತ ಭಿನ್ನವಾದ ಆಡಳಿತಾತ್ಮಕ ರಚನೆಗಳು ಮತ್ತು ಶೈಕ್ಷಣಿಕ ಸಂಸ್ಕೃತಿಗಳನ್ನು ಹೊಂದಿರುವ ಸಂಸ್ಥೆಗಳು ಹೊರಡಿಸಿದ ಸಲಹಾ ಸೂಚನೆಗಳ ನಡುವೆ ಇರುವ ಸಾಮ್ಯತೆ. ಅವುಗಳ ಭಾಷೆಯು ಎಐಯುನ ಹಿಂದಿನ ಮನವಿಗೆ ಸನಿಹವಾಗಿತ್ತು. ಆ ಸಮನ್ವಯದ ನಿಖರವಾದ ಸ್ವರೂಪವು ಸಾರ್ವಜನಿಕವಾಗಿ ತಿಳಿದಿಲ್ಲದಿದ್ದರೂ, ಸಂಸ್ಥೆಗಳ ನಡುವೆ ನಿರ್ದಿಷ್ಟ ಮಟ್ಟದ ಸಮನ್ವಯವಿತ್ತು ಎಂಬುದನ್ನು ಇದು ಸೂಚಿಸುತ್ತದೆ.
ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಗಮನಹರಿಸುವಂತೆ ಮತ್ತು ಪರೀಕ್ಷಾ ವ್ಯವಸ್ಥೆಯ ಮೇಲೆ ನಂಬಿಕೆ ಇಡುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಲು ಎಐಯು ಕುಲಪತಿಗಳನ್ನು ಕೇಳಿಕೊಂಡಿತ್ತು. ಜೆಎನ್‌ಯು ತನ್ನ ವಿದ್ಯಾರ್ಥಿಗಳಿಗೆ "ಶೈಕ್ಷಣಿಕ ಜವಾಬ್ದಾರಿಯ ಮೌಲ್ಯಗಳನ್ನು ಎತ್ತಿಹಿಡಿಯಲು" ನೀಡಿದ ಕರೆ ಮತ್ತು ಇತರ ಸಲಹಾ ಸೂಚನೆಗಳಲ್ಲಿನ ಇದೇ ರೀತಿಯ ಪದಪ್ರಯೋಗಗಳಲ್ಲಿ ಈ ಚೌಕಟ್ಟು ಕಂಡುಬರುತ್ತದೆ.
ಆದಾಗ್ಯೂ, ಸಾಕಷ್ಟು ವಿಪರ್ಯಾಸವೆಂದರೆ, ಉನ್ನತ ಶಿಕ್ಷಣದ ಮೇಲೆ ನೇರವಾಗಿ ಪರಿಣಾಮ ಬೀರುವ ವಿಷಯದಲ್ಲಿ ಹೆಚ್ಚಿನ ಪಾರದರ್ಶಕತೆ ಅಥವಾ ಜವಾಬ್ದಾರಿಯನ್ನು ಒತ್ತಾಯಿಸುವ ವಿಚಾರ ಬಂದಾಗ ಅದೇ ಸಾಮೂಹಿಕ ಧ್ವನಿ ಕಾಣೆಯಾಗಿತ್ತು. ಈ ವೈರುಧ್ಯವನ್ನು ಕಡೆಗಣಿಸುವುದು ಕಷ್ಟಕರವಾಗಿತ್ತು.
ವ್ಯವಸ್ಥೆಯ ಸಮಷ್ಟೀ ರೂಪ
ವಿಶ್ವವಿದ್ಯಾಲಯಗಳು ತಮ್ಮ ಶೈಕ್ಷಣಿಕ ಪಾತ್ರವನ್ನು ಗ್ರಹಿಸುವ ರೀತಿಯಲ್ಲಿ ಈ ಘಟನೆಯು ಗಹನವಾದ ಅಸಂಗತತೆಯನ್ನು ಬಹಿರಂಗಪಡಿಸಿದೆ. ನೀತಿ ದಾಖಲೆಗಳು, ಪಠ್ಯಕ್ರಮದ ಚೌಕಟ್ಟುಗಳು ಮತ್ತು ಸಾಂಸ್ಥಿಕ ದೃಷ್ಟಿಕೋನ ಸಂಬಂಧಿ ಹೇಳಿಕೆಗಳಲ್ಲಿ, ವಿಶ್ವವಿದ್ಯಾಲಯಗಳು ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ, ಸಹಕಾರ, ನಾಗರಿಕ ತೊಡಗಿಸಿಕೊಳ್ಳುವಿಕೆ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಅತ್ಯಗತ್ಯ ಕಲಿಕಾ ಫಲಿತಾಂಶಗಳೆಂದು ಒತ್ತಿಹೇಳುತ್ತವೆ. ಇವು ನಿಜಕ್ಕೂ ಉನ್ನತ ಮಹತ್ವಾಕಾಂಕ್ಷೆಗಳು. 21ನೇ ಶತಮಾನದಲ್ಲಿ ಜವಾಬ್ದಾರಿಯುತ ನಾಗರಿಕತ್ವಕ್ಕೆ ಅಗತ್ಯವಿರುವ ಸಾಮರ್ಥ್ಯಗಳೆಂದು ಇವುಗಳನ್ನು ಪ್ರಸ್ತುತಪಡಿಸಲಾಗಿದೆ.
ವಾಸ್ತವವಾಗಿ ನೀಟ್ ಪ್ರತಿಭಟನೆಗಳು ವಿದ್ಯಾರ್ಥಿಗಳಿಗೆ ಆ ನಿರ್ದಿಷ್ಟ ಸಾಮರ್ಥ್ಯಗಳಲ್ಲಿ ಹೆಚ್ಚಿನ ಅನುಭವ ಪಡೆಯಲು ಅವಕಾಶ ನೀಡಿದವು. ಆದ್ದರಿಂದ ಅವರು ತಮ್ಮನ್ನು ತಾವು ಸಂಘಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಸಂಘಟನೆಗಳ ಜೊತೆಗೆ ಕಾರ್ಯನಿರ್ವಹಿಸಲೂ ಅವಕಾಶ ಪಡೆದುಕೊಂಡರು. ಸಾರ್ವಜನಿಕ ನೀತಿಗಳ ಪರಿಶೀಲನೆಯನ್ನೂ ನಡೆಸಿದರು, ಸ್ಪರ್ಧಾತ್ಮಕ ವಾದಗಳ ಮೌಲ್ಯಮಾಪನ ಮಾಡಿದರು ಮತ್ತು ಪ್ರಜಾಸತ್ತಾತ್ಮಕ ಚಟುವಟಿಕೆಯಲ್ಲಿ ಶಾಂತಿಯುತವಾಗಿ ತೊಡಗಿಕೊಂಡರು.
ಒಂದು ರೀತಿಯಲ್ಲಿ ಪ್ರತಿಭಟನಾ ಸ್ಥಳವೇ ತರಗತಿಯ ವಿಸ್ತರಣೆಯಾಯಿತು, ಉಪನ್ಯಾಸಗಳಲ್ಲಿ ಚರ್ಚಿಸಲಾದ ವಿಚಾರಗಳನ್ನು ಸಾರ್ವಜನಿಕ ವಲಯದಲ್ಲಿ ಪರೀಕ್ಷಿಸಲು ಅಲ್ಲಿ ಅವಕಾಶ ಸಿಕ್ಕಿತು. ಅಲ್ಲಿನ ಪ್ರದರ್ಶನ, ಪ್ರತಿಭಟನೆಗಳು ಕೇವಲ ಅಸಮಾಧಾನದ ಅಭಿವ್ಯಕ್ತಿಯಾಗಿರಲಿಲ್ಲ, ಅವು ನಾಗರಿಕ ಕಲಿಕೆಯ ಒಂದು ಪಾಠವೂ ಆಗಿದ್ದವು.
ಇಷ್ಟೆಲ್ಲದರ ಹೊರತಾಗಿಯೂ ವಿಶ್ವವಿದ್ಯಾಲಯಗಳು ಬಹಳ ಎಚ್ಚರಿಕೆಯಿಂದ ಪ್ರತಿಕ್ರಿಯೆ ನೀಡುವ ಆಯ್ಕೆ ಮಾಡಿಕೊಂಡವು. ಉನ್ನತ ಶಿಕ್ಷಣದ ಮೇಲೆ ನೇರವಾಗಿ ಪರಿಣಾಮ ಬೀರುವ ವಿಷಯಗಳಲ್ಲಿ ಪ್ರಜಾಸತ್ತಾತ್ಮಕವಾಗಿ ಪಾಲ್ಗೊಳ್ಳುವ ವಿಚಾರದಲ್ಲಿ ವಿದ್ಯಾರ್ಥಿಗಳನ್ನು ನಿರುತ್ಸಾಹಗೊಳಿಸುತ್ತಾ, ಪ್ರಜಾಸತ್ತಾತ್ಮಕ ಭಾಗವಹಿಸುವಿಕೆಗಾಗಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತೇವೆ ಎಂದು ಅವು ಹೇಳಿಕೊಳ್ಳಲು ಸಾಧ್ಯವಿಲ್ಲ. ನಾಗರಿಕ ವಿಚಾರಗಳಲ್ಲಿ ತೊಡಗಿಸಿಕೊಳ್ಳುವ ಪ್ರಕ್ರಿಯೆಯನ್ನೇ ಕಲಿಕಾ ಫಲಿತಾಂಶವೆಂದು ಪ್ರಸ್ತುತಪಡಿಸಿದರೆ, ತರಗತಿಯ ಆಚೆಯೂ ಅದನ್ನು ಜವಾಬ್ದಾರಿಯುತವಾಗಿ ಚಲಾಯಿಸಲು ವಿದ್ಯಾರ್ಥಿಗಳನ್ನು ನಂಬಲೇಬೇಕಾಗುತ್ತದೆ.
ವಿಶ್ವವಿದ್ಯಾಲಯಗಳಿಗೆ ಒಂದು ಪರೀಕ್ಷೆ
ಹಾಗಂತ ಇದರರ್ಥ ವಿಶ್ವವಿದ್ಯಾಲಯಗಳು ರಾಜಕೀಯ ಚಳುವಳಿಗಳ ಕೇಂದ್ರಗಳಾಗಬೇಕು ಎಂಬುದು ಸುತಾರಾಮ್ ಸಲ್ಲ. ಅವುಗಳ ಜವಾಬ್ದಾರಿ ಭಿನ್ನವಾಗಿರುತ್ತದೆ ಎಂಬುದು ಅಷ್ಟೇ ಸ್ಪಷ್ಟ. ತಮ್ಮದೇ ಆದ ವಿಶ್ವಾಸಾರ್ಹತೆಯು ಯಾವುದರ ಮೇಲೆ ನಿಂತಿದೆಯೋ, ಆ ಶೈಕ್ಷಣಿಕ ವ್ಯವಸ್ಥೆಯ ಸಮಗ್ರತೆಯನ್ನು ರಕ್ಷಿಸಬೇಕು ಎಂಬುದನ್ನು ಅವುಗಳಿಂದ ನಿರೀಕ್ಷಿಸುವುದು ಸಹಜವೇ ಆಗಿದೆ. ವಿಶ್ವವಿದ್ಯಾಲಯಗಳು ಪ್ರತಿಯೊಂದು ಪ್ರತಿಭಟನೆ ಅಥವಾ ಪ್ರತಿಯೊಂದು ಘೋಷಣೆಯನ್ನು ಅನುಮೋದಿಸಬೇಕಾಗಿಲ್ಲ. ಆದಾಗ್ಯೂ, ಅವುಗಳ ಹಿಂದಿನ ತತ್ವಗಳನ್ನು ದೃಢಪಡಿಸಲು ಅವು ಸಿದ್ಧರಿರಬೇಕು.
ಆದ್ದರಿಂದ, ಉನ್ನತ ಶಿಕ್ಷಣದ ದೃಷ್ಟಿಕೋನದಿಂದ ನೀಟ್ ಸಂಬಂಧಿ ಪ್ರತಿಭಟನೆಗಳ ಪ್ರಾಮುಖ್ಯತೆ ಏನೆಂದರೆ, ವಿಶ್ವವಿದ್ಯಾಲಯಗಳು ಕೇವಲ ಆಡಳಿತಾತ್ಮಕ ಸುವ್ಯವಸ್ಥೆಗಾಗಿ ನಿಲ್ಲುತ್ತವೆಯೋ ಅಥವಾ ತಾವು ಪ್ರತಿಪಾದಿಸುವುದಾಗಿ ಹೇಳಿಕೊಳ್ಳುವ ಶೈಕ್ಷಣಿಕ ಮೌಲ್ಯಗಳಿಗಾಗಿಯೂ ನಿಲ್ಲುತ್ತವೆಯೋ ಎಂಬುದನ್ನು ಅವು ಪರೀಕ್ಷೆಗೆ ಒಡ್ಡಿಕೊಂಡವು. ದುರದೃಷ್ಟವಶಾತ್, ಅದರಿಂದ ದಕ್ಕಿದ ಫಲಿತಾಂಶವು ನಿರಾಶಾದಾಯಕವಾಗಿದೆ.
ʼಎಚ್ಚರಿಕೆಯಿಂದಿರಿʼ ಎಂದು ಸಲಹೆ ನೀಡುವುದು ಬಹುಶಃ ಸ್ವೀಕಾರಾರ್ಹವೇ ಆಗಿರಬಹುದು. ಆದರೆ ತಮ್ಮದೇ ವಿದ್ಯಾರ್ಥಿಗಳು ಸುಧಾರಿಸಲು ಬಯಸಿದ ವ್ಯವಸ್ಥೆಯ ಸಮಗ್ರತೆಯನ್ನು ರಕ್ಷಿಸುವಲ್ಲಿ ಅವು ವಿಫಲವಾದವು. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬೋಧಿಸುವುದರಿಂದ ಮಾತ್ರವಲ್ಲದೆ, ಅವುಗಳನ್ನು ಆಚರಣೆಯಲ್ಲಿಡಲು ಆಯ್ಕೆಮಾಡುವ ವಿದ್ಯಾರ್ಥಿಗಳ ಮೇಲೆ ವಿಶ್ವಾಸ ತೋರಿಸಬೇಕು. ಅದರಿಂದ ಉನ್ನತ ಶಿಕ್ಷಣವು ತನ್ನ ನ್ಯಾಯಬದ್ಧತೆಯನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ವಿಶ್ವವಿದ್ಯಾಲಯದ ನಾಯಕರು ನೆನಪಿನಲ್ಲಿಡುವುದು ಉತ್ತಮ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.


