
- ಮುಖಪುಟ
- ತಾಜಾ ಸುದ್ದಿತಾಜಾ ಸುದ್ದಿ
- ಕರ್ನಾಟಕಕರ್ನಾಟಕ
- ರಾಷ್ಟ್ರೀಯರಾಷ್ಟ್ರೀಯ
- ವಿಶೇಷ ಲೇಖನವಿಶೇಷ ಲೇಖನ
- ಅಭಿಮತ
- ಮನರಂಜನೆಮನರಂಜನೆ
- ಕ್ರೀಡೆಕ್ರೀಡೆ
- ಉದ್ಯೋಗ ವಾರ್ತೆ
- ವಿಡಿಯೋ

"ಒಂದು ಸಣ್ಣ ಕಿಡಿ ಇಡೀ ಹುಲ್ಲುಗಾವಲಿಗೆ ಕಿಚ್ಚು ಹಚ್ಚುವ ತಾಕತ್ತು ಹೊಂದಿದೆ" ಭಾರತದಲ್ಲಿ 60 ವರ್ಷಗಳ ಹಿಂದೆ ನಕ್ಸಲಿಸಂ ಹುಟ್ಟಿಕೊಂಡಾಗ ಹೇಳಿದ ಮಾತು ಇದಾಗಿತ್ತು.
ಅವರನ್ನು ಭಾರತದ ಮಾವೋವಾದಿಗಳು ಎಂದು ಕರೆಯಲಾಗುತ್ತದೆ. ಆದರೆ ಜನರು ಅವರನ್ನು ಹೆಚ್ಚಾಗಿ ʼನಕ್ಸಲೀಯರುʼ ಎನ್ನುತ್ತಾರೆ. ಇನ್ನೇನು ಈ ತಿಂಗಳ ಕೊನೆಯ ಹೊತ್ತಿಗೆ ಅವರು ಔಪಚಾರಿಕ ಹಾಗೂ ಅವಮಾನಕಾರಿಯಾದ ಅಂತ್ಯ ಕಾಣುವುದು ನಿಶ್ಚಿತವಾಗಿದೆ. ಶ್ರೀಲಂಕಾದ ತಮಿಳು ಈಳಂ ವಿಮೋಚನಾ ಹುಲಿಗಳ (ಎಲ್ಟಿಟಿಇ) ರೀತಿಯಲ್ಲಿಯೇ ಮಾವೋವಾದಿಗಳ ಗತಿಯೂ ಆಗಲಿದೆ.
ಭಾರತದ ಕಮ್ಯುನಿಸ್ಟ್ ಪಾರ್ಟಿ (ಮಾವೋವಾದಿ) ಮುಂದೆ ಇರುವುದು ಯಾವುದೇ ಮುಚ್ಚುಮರೆ ಇಲ್ಲದ ಮಿಲಿಟರಿ ಸೋಲಲ್ಲ(ದೀರ್ಘ ಕಾಲದ ವರೆಗೆ ಇದು ಅಸಾಧ್ಯವೆಂದೇ ಭಾವಿಸಲಾಗಿತ್ತು) ಬದಲಾಗಿ ದೀರ್ಘಕಾಲೀನ ಪರಿಣಾಮಗಳನ್ನು ಬೀರುವ ಒಂದು ಸಿದ್ಧಾಂತದ ಪತನವೂ ಹೌದು.
ಮಾವೋವಾದಿಗಳ ಭಿನ್ನ ಯುಗ
ಭಾರತದ ಮಾವೋವಾದಿ ಚಳವಳಿ ಜನ್ಮ ತಾಳಿದ್ದು 1967ರಲ್ಲಿ ಪಶ್ಚಿಮ ಬಂಗಾದ ನಕ್ಸಲ್ಬರಿಯಲ್ಲಿ. ಅದು ಇಂದಿನ ದುಸ್ಥಿತಿಗೆ ತಲುಪಲು ಅನೇಕ ಕಾರಣಗಳಿವೆ. ಈ ಅವಮಾನದ ಪರಾಕಾಷ್ಠೆ ಏನೆಂದರೆ ದಶಕಗಳ ಹಿಂದೆ ಭೂಗತರಾಗಿದ್ದ ಮಾವೋವಾದಿ ನಾಯಕರು ಹಿಂದಿನ ಯುಗದ ಮಾವೋ ತಂತ್ರಗಳನ್ನು ಇಲ್ಲಿಯೂ ನಕಲು ಮಾಡುವ ಕನಸು ಕಂಡು ಮಕಾಡೆ ಮಲಗಿರುವುದು.
ನಮ್ಮ ದೇಶದ ನಗರಗಳಲ್ಲಿ ಮತ್ತು ಇತರ ಪ್ರದೇಶಗಳಲ್ಲಿ ಇರುವ ಭಾರತದ ಬಹುಪಾಲು ಯುವಜನತೆಯ ಚಿಂತನೆ ಬದಲಾಗಿದೆ. ಅವರು ವರ್ಗ ಸಂಘರ್ಷ ಮತ್ತು ಈಗ ಅಸ್ತಿತ್ವದಲ್ಲಿ ಇರುವ ವ್ಯವಸ್ಥೆಯನ್ನು ಹಿಂಸಾತ್ಮಕವಾಗಿ ಕಿತ್ತೊಗೆಯುವ ಸಿದ್ಧಾಂತಕ್ಕೆ ಇನ್ನು ಮುಂದೆ ಆಕರ್ಷಿರಾಗುವುದಿಲ್ಲ ಎಂಬುದು ಬಹಳಷ್ಟು ಹಿಂದೆಯೇ ಸ್ಪಷ್ಟವಾಗಿ ಹೋಗಿದೆ.
ಭಾರತವು ಇಂದಿಗೂ ಲಕ್ಷಾಂತರ ಬಡವರನ್ನು ಹೊಂದಿರುವುದು ನಿಜ. ಆದರೂ ೧೯೬೦ ಮತ್ತು ೭೦ರ ದಶಕಗಳಲ್ಲಿ ಕಂಡುಬಂದ ತೀವ್ರ ಬಡತನ ಎನ್ನುವುದು ಈಗ ಇಲ್ಲ. ಅದು ಸುಧಾರಿತ ಜೀವನಮಟ್ಟಕ್ಕೆ ದಾರಿ ಮಾಡಿಕೊಟ್ಟಿದೆ ಎಂಬುದು ಸ್ಪಷ್ಟ. ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ, ಆದರೆ ವ್ಯಾಪಕವಾಗಿ ಟೀಕೆಗೆ ಒಳಗಾಗಿರುವ ಉದಾರೀಕೃತ ಆರ್ಥಿಕತೆ ಇದಕ್ಕೆ ಕಾರಣಗಳಲ್ಲಿ ಒಂದಾಗಿದೆ.
ಭಾರತದ ಕಮ್ಯುನಿಸ್ಟರು ಏನೇ ಭಾವಿಸಿದ್ದರೂ ಕೂಡ ಸೋವಿಯತ್ ಒಕ್ಕೂಟ ಮತ್ತು ಅದರ ಆಶ್ರಿತ ರಾಷ್ಟ್ರಗಳ ಪತನದಿಂದಾಗಿ ಮಾರ್ಕ್ಸ್ವಾದವನ್ನು ಬಂಡವಾಳಶಾಹಿ ದುರಾಸೆಗೆ ಪರ್ಯಾಯವಾಗಿ ನೋಡುತ್ತಿದ್ದ ಕಾಲದ ಅಂತ್ಯವನ್ನು ಸಾರಿತು.
ಕಮ್ಯುನಿಸ್ಟ್ ಸಿದ್ಧಾಂತದಂತೆ ಕೆಂಪು ಉಡುಪನ್ನು ಧರಿಸಿದ್ದರೂ ಚೀನಾದ ಪ್ರಭಾವಶಾಲಿ ಆರ್ಥಿಕ ಬೆಳವಣಿಗೆ ಮತ್ತು ಲಕ್ಷಾಂತರ ಜನರನ್ನು ಬಡತನದಿಂದ ಮೇಲೆತ್ತುವ ಅದರ ಸಾಮೃಥ್ಯವು ಬಂಡವಾಳಶಾಹಿ ಮತ್ತು ಮಾರುಕಟ್ಟೆ ಆಧಾರಿತ ಹಾದಿಯನ್ನು ಅಳವಡಿಸಿಕೊಳ್ಳುವ ಅದರ ನಿರ್ಧಾರದ ಫಲಿತಾಂಶವಾಗಿದೆ.
ಒಂದು ಕಾಲದಲ್ಲಿ ನಕ್ಸಲೀಯರ ಪಾಲಿಗೆ ಪವಿತ್ರ ಗ್ರಂಥದಂತಿದ್ದ ಮಾವೋ ಅವರ ʼಲಿಟಲ್ ರೆಡ್ ಬುಕ್ʼ ಇಂದು ಅವರದ್ದೇ ನಾಡಿನಲ್ಲಿ ಅಪ್ರಸ್ತುತವಾಗಿದೆ.
ಕಮ್ಯುನಿಸ್ಟ್ ನೆಲೆಗಳ ಪತನ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಲಾನಂತರದಲ್ಲಿ ದಲಿತರು ಮತ್ತು ಬಡವರಿಗಾಗಿ ಜಾರಿಗೆ ತಂದ ಸರಣಿ ಕಲ್ಯಾಣ ಯೋಜನೆಗಳು ಸೌಲಭ್ಯ ವಂಚಿತ ಕುಟುಂಗಳು ಸಾಮಾಜಿಕ-ಆರ್ಥಿಕ ಏಣಿಯನ್ನು ಕ್ರಮೇಣ ಏರಲು ನೆರವಾದವು.
ದಲಿತರು ಮತ್ತು ಇತರ ಹಿಂದುಳಿತ ವರ್ಗಗಳ ಬಹುತೇಕ ಮಂದಿ ಕಳೆದ ಎರಡು ಅಥವಾ ಮೂರು ದಶಕಗಳ ಅವಧಿಯಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಗಳನ್ನು ಪಡೆಯುತ್ತಿರುವುದನ್ನು ನಾವು ಗಮನಿಸಿದ್ದೇವೆ. ಈ ಬೆಳವಣಿಗಳು ಅವರ ಅನಕ್ಷರಸ್ಥ ಪೋಷಕರಿಗೆ ಕೇವಲ ಒಂದು ಕನಸಿನಂತೆ ಕಂಡಿದ್ದರಲ್ಲಿ ಅಚ್ಚರಿಯಿಲ್ಲ.
ಇಂದು ನಮ್ಮ ವಿಶ್ವ ವಿದ್ಯಾಲಯಗಳಲ್ಲಿ ಮಾರ್ಕ್ಸ್ವಾದ ಮತ್ತು ಕ್ರಾಂತಿಗಳ ವಿಷಯಕ್ಕೆ ಸಂಬಂಧಿಸಿದಂತೆ ಆಸಕ್ತಿ ಇರುವವರು ಕಡಿಮೆ. ಉತ್ತಮ ಭೌತಿಕ ಜೀವನದ ಆಕರ್ಷಣೆ, ಹಂಬಲ ಇರುವವರ ಸಂಖ್ಯೆಯೇ ಇಂದು ಪ್ರಬಲವಾಗಿದೆ.
ಇದೇ ಕಾರಣಕ್ಕಾಗಿ ನಮ್ಮ ದೇಶದ ಮುಖ್ಯವಾಹಿನಿಯ ಕಮ್ಯುನಿಸ್ಟ್ ಪಕ್ಷಗಳು ಕೂಡ ತಮ್ಮ ಬೆಂಬಲಿಗರನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಹೆಣಗಾಡುತ್ತಿವೆ. ಅವರ ಪ್ರಭಾವವು ಪ್ರಸ್ತುತ ಇರುವ (ಮತ್ತು ಕುಸಿತ ಕಾಣುತ್ತಿರುವ) ಸಣ್ಣ ನೆಲೆಗಳಿಂದ ಹೊಸ ಪ್ರದೇಶಗಳಿಗೆ ವಿಸ್ತರಿಸಲು ಸಾಧ್ಯವಾಗುತ್ತಿಲ್ಲ.
ಸೈದ್ಧಾಂತಿಕ ಕುರುಡತನ
ಹೀಗೆ ಅವರು ವೈಫಲ್ಯ ಹೊಂದುತ್ತಿರುವುದಕ್ಕೆ ಕಾರಣವಾದರೂ ಏನು? ಅವರಿಗಿರುವ ಸೈದ್ಧಾಂತಿಕ ಕುರುಡತನವೇ ಕಾರಣವೆನ್ನಬಹುದು. ಅರಣ್ಯ ಪ್ರದೇಶಗಳಲ್ಲಿ ತಾವೇ ನಿರ್ಮಿಸಿಕೊಂಡಿದ್ದ ʼರಾಜ್ಯದೊಳಗೊಂದು ರಾಜ್ಯʼಕ್ಕೆ ಎಂದಿಗೂ ಧಕ್ಕೆ ಬರುವುದಿಲ್ಲ ಎಂದು ಅವರು ನಂಬಿಕೊಂಡಿದ್ದರು. ಒಂದು ದಿನ ಇಡೀ ಭಾರತವನ್ನೇ ನಾವು ಗೆಲ್ಲಬಹುದು ಎಂಬ ಮಾವೋವಾದಿ ನಾಯಕತ್ವದ ಯೋಚನೆ ವಾಸ್ತವಕ್ಕೆ ಹತ್ತಿರವಾಗಿರಲಿಲ್ಲ.
ಹಿಂದಿನ ಒಂದು ಶತಮಾನದಲ್ಲಿ ಮಾವೋವಾದಿಗಳಿಗೆ ಯಶಸ್ಸನ್ನು ತಂದುಕೊಟ್ಟಿತ್ತು. ಆದರೆ ಇಂದಿನ ಭಾರತದಲ್ಲಿ ಮಾತ್ರ ಅವರ ಕನಸು ಎಂದಿಗೂ ಸಾಕಾರಗೊಳ್ಳಲು ಸಾಧ್ಯವಿರಲಿಲ್ಲ.
ತುರ್ತು ಪರಿಸ್ಥಿತಿಯ ಬಳಿಕ ಮಾವೋವಾದಿಗಳ ಒಂದು ಬಣ ಈ ಬಗ್ಗೆ ತೀರ್ಮಾನಕ್ಕೆ ಬಂದು ಸಂಸದೀಯ ರಾಜಕಾರಣವನ್ನು ಅಳವಡಿಸಿಕೊಂಡಿತು. ಅವರನ್ನು ಅನೇಕರು ʼಪರಿಷ್ಕರಣವಾದಿಗಳುʼ ಎಂದು ಕರೆಯಲಾಗುತ್ತಿತ್ತು. ಆದರೆ ಅದೇ ಭೂಗತ ಕ್ರಾಂತಿಕಾರಿಗಳು ಇಂದು ನಿಶ್ಚಿತವಾದ ಸಾವಿನಿಂದ ಪಾರಾಗಲು ಶರಣಾಗತಿಯ ಮೊರೆಹೋಗುತ್ತಿದ್ದಾರೆ.
ನಾಮಾವಶೇಷವಾಗಿ ಹೋದ ಎಲ್ಟಿಟಿಇಗಳ ರೀತಿಯಲ್ಲಿಯೇ ಮಾವೋವಾದಿಗಳಿಗೆ ಯಾವಾಗ ಹೋರಾಟದಿಂದ ಹಿಂದೆ ಸರಿದು ನಿಲ್ಲಬೇಕು ಎಂಬುದರ ಅರಿವು ಇರಲಿಲ್ಲ. ತಾವು ಅಜೇಯರು ಎಂದು ಎರಡೂ ಸಂಘಟನೆಗಳು ಭಾವಿಸಿದ್ದವು. ಅವರಿಗೆ ಅರಿವಿರದ ಲೋಕದಲ್ಲಿ ಅಸಾಧಾರಣ ರೀತಿಯಲ್ಲಿ ಬದಲಾವಣೆಗಳು ನಡೆಯುತ್ತ ಹೋದಾಗಲೂ ಅಂತಹ ಬೆಳವಣಿಗೆಗಳಿಂದ ಕಲಿಯಲು ನಿರಾಕರಿಸಿದರು. ರಾಜಕೀಯಕ್ಕಿಂತ, ಬಂದೂಕಿಗಿಂತ ಅದು ಹೆಚ್ಚು ಪ್ರಾಮುಖ್ಯತೆ ಪಡೆದಿತ್ತು.
ಹುಲಿಗಳಂತೆ ಮಾವೋಗಳೂ ಮರಳಿ ಬಾರರು…
ಎಲ್ಟಿಟಿಇ ಮತ್ತು ಅದರ ನಾಯಕತ್ವ ನಿರ್ನಾಮವಾಗಿ ಹೋದ ಬಳಿಕ ಕೆಲಕಾಲ ಎಂದಾದರೂ ಒಂದು ದಿನ ಮತ್ತೆ ʼಟೈಗರ್ʼಗಳು ಚಿಗಿತುಕೊಳ್ಳುತ್ತವೆ ಎಂಬ ವದಂತಿಗಳು ದಟ್ಟವಾಗಿ ಹರಡಿದ್ದವು. ಆದರೆ ಎಲ್ಟಿಟಿಇ ಸಂಘಟನೆಯ ಬಗ್ಗೆ ಸುದೀರ್ಘ ಅಧ್ಯಯನ ನಡೆಸಿರುವ ನನಗೆ ಇದು ಸಾಧ್ಯವಿಲ್ಲದ ಮಾತು ಎಂಬುದು ತಿಳಿದಿತ್ತು. ಅದನ್ನು ನಿರಂತರವಾಗಿ ಪ್ರತಿಪಾದಿಸುತ್ತ ಬಂದಿದ್ದೆ ಕೂಡ.
ಈಗಲೂ ಅಷ್ಟೇ, ನಕ್ಸಲೀಯರನ್ನು ನಿರ್ಮೂಲನೆ ಮಾಡಲು ನಿಗದಿಪಡಿಸಿರುವ ಮಾರ್ಚ್ 31ರ ಗಡುವಿನ ನಂತರವೂ ಅವರ ಪಳೆಯುಳಿಕೆಗಳು ಉಳಿಯುತ್ತವೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೌದು, ಕಾಡುಗಳಲ್ಲಿ ಅಡಗಿರುವ ಕೆಳಹಂತದ ಕಾರ್ಯಕರ್ತರು ಕೆಲವು ತೊಂದರೆಗಳನ್ನು ಸೃಷ್ಟಿಸಬಹುದು, ಆದರೆ ಅಂತಿಮವಾಗಿ ಅವರನ್ನು ಬೇಟೆಯಾಡಿ ಹತ್ತಿಕ್ಕಲಾಗುವುದು. ಅವರ ಸ್ಥಾನವನ್ನು ತುಂಬಲು ಮುಂದೆ ಯಾರೂ ಇರುವುದಿಲ್ಲ ಎಂಬುದು ಮಾತ್ರ ನಿಶ್ಚಿತ.
1970ರ ದಶಕದ ಮಧ್ಯಭಾಗದಿಂದ ಮಾವೋವಾದಿಗಳ ಚಟುವಟಿಕೆಗಳ ಬಗ್ಗೆ ಹತ್ತಿರದಿಂದ ಗಮನಿಸಿದ ನನಗೆ, ನಾವು ಹಿಂದೆ ನೋಡಿದ ರೀತಿಯಲ್ಲಿ ನಕ್ಸಲೈಟ್ ಚಳವಳಿ ಮತ್ತೆ ಪುಟಿದೇಳುವ ಸಾಧ್ಯತೆಯಿಲ್ಲ ಎಂಬ ವಿಶ್ವಾಸವಿದೆ. ನಕ್ಸಲೀಯರಿಗೂ ಮತ್ತು ಈಗ ಪರಾಜಿತಗೊಂಡಿರುವ ಎಲ್ಟಿಟಿಇಗೂ ಇರುವ ಪ್ರಮುಖ ವ್ಯತ್ಯಾಸವಿದು.
ಎರಡು ಚಳವಳಿಗಳು -ದೊಡ್ಡ ವ್ಯತ್ಯಾಸ
ಕರಾರುವಕ್ಕಾಗಿ ವಿಶ್ಲೇಷಣೆ ಮಾಡಿದರೆ, ಎಲ್ಟಿಟಿಇ ಸಂಘಟನೆಯನ್ನು ಮುಖ್ಯವಾಗಿ ಶ್ರೀಲಂಕಾದ ಸೇನೆ ಪುನರುತ್ಥಾನಗೊಂಡು ಹತ್ತಿಕ್ಕಿತು. ಎಲ್ಟಿಟಿಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಹೋರಾಡುತ್ತಲೇ ಮೃತಪಟ್ಟರು. ಅವರು ಮತ್ತು ಅವರ ಆಪ್ತ ಸಹಚರರು ಶರಣಾಗಲು ನಿರಾಕರಿಸಿದ್ದರು.
ಆದರೆ ನಕ್ಸಲೀಯರ ವಿಷಯದಲ್ಲಿ ಹಾಗಲ್ಲ; ದಶಕಗಳ ಕಾಲ ಇತರರನ್ನು (ಹೆಚ್ಚಾಗಿ ಬುಡಕಟ್ಟು ಜನರು ಮತ್ತು ಗ್ರಾಮೀಣ ಬಡವರನ್ನು) ತಮ್ಮ ಕುಟುಂಬಗಳನ್ನು ಬಿಟ್ಟು ಭಾರತ ಸರ್ಕಾರದ ವಿರುದ್ಧ ಹೋರಾಡಲು ಪ್ರೇರೇಪಿಸಿದ ಗೆರಿಲ್ಲಾ ನಾಯಕರು, ಈಗ ತಾವೇ ಹೋರಾಟವನ್ನು ಕೈಬಿಟ್ಟು "ಮುಖ್ಯವಾಹಿನಿ" ಸೇರುವ ಅವಸರದಲ್ಲಿದ್ದಾರೆ.
ಯಾರು ಸ್ವಲ್ಪ ಸಮಯದ ಹಿಂದೆಯಷ್ಟೇ ಚುನಾವಣಾ ಸ್ಪರ್ಧಿಗಳನ್ನು ಕೊಂದರೋ, ಮತದಾರರನ್ನು ಬೆದರಿಸಿದರೋ ಮತ್ತು ಮತದಾನ ಕೇಂದ್ರಗಳಿಗೆ ಬಾಂಬ್ ಎಸೆದರೋ, ಅವರೇ ಇಂದು ತಾವು ಈ ಹಿಂದೆ ನಿರಾಕರಿಸಿದ್ದ ಅದೇ ಚುನಾವಣಾ ವ್ಯವಸ್ಥೆಯ ಭಾಗವಾಗುವುದಾಗಿ ಬಹಿರಂಗವಾಗಿ ಭರವಸೆ ನೀಡುತ್ತಿದ್ದಾರೆ!
ಇದು ಅವರು ಇದುವರೆಗೆ ಬೋಧಿಸಿದ ಎಲ್ಲ ಸಿದ್ಧಾಂತಗಳ ಸಂಪೂರ್ಣ ನಿರಾಕರಣೆ ಮತ್ತು ಒಟ್ಟಾರೆ ಸೋಲಿನ ಸೂಚನೆ ಎಂಬುದು ಸ್ಪಷ್ಟ.
ಕ್ರೂರ ಸರ್ಕಾರಕ್ಕಿಲ್ಲ ದಯೆ
ದಶಕಗಳ ಕಾಲ ಅಧಿಕಾರದಲ್ಲಿ ಯಾವುದೇ ರಾಜಕೀಯ ಪಕ್ಷವಿದ್ದರೂ ತಮ್ಮೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿತ್ತು ಎಂಬುದನ್ನು ನಕ್ಸಲೀಯ ನಾಯಕತ್ವ ಅರಿತುಕೊಳ್ಳಲಿಲ್ಲ. ಸರ್ಕಾರವು ಆಗೊಮ್ಮೆ ಈಗೊಮ್ಮೆ ಮಾವೋವಾದಿಗಳನ್ನು ಕೊಲ್ಲುತ್ತಿತ್ತು ಮತ್ತು ಉಳಿದ ಸಮಯದಲ್ಲಿ ಅವರನ್ನು ಬದುಕಲು ಬಿಡುತ್ತಿತ್ತು.
ಆದರೆ ಮೊದಲ ಬಾರಿಗೆ, ಕೇಂದ್ರ ಸರ್ಕಾರವೊಂದು ಮಾವೋವಾದಿ ಚಿಂತನೆಗೆ ಕನಿಷ್ಠ ಗೌರವವನ್ನೂ ನೀಡಲು ನಿರಾಕರಿಸಿತು. ಈ ಚಳವಳಿಯನ್ನು "ದೇಶವಿರೋಧಿ ಮತ್ತು ಒಂದು ವ್ಯಸನ" ಎಂದು ಕರೆದ ಆಡಳಿತವು, ತಾನು ಪ್ರಯೋಗಿಸಬಹುದಾದ ಮಾರಕ ಶಕ್ತಿಯನ್ನು ಪ್ರದರ್ಶಿಸಿತು.
ಒಮ್ಮೆ ಭಾರತ ಸರ್ಕಾರವು ಸಂಪೂರ್ಣ ಮತ್ತು ಕ್ಷಮೆಗೆ ಅವಕಾಶವೇ ಇಲ್ಲದ ಯುದ್ಧವನ್ನು ಪ್ರಾರಂಭಿಸಿದ ಮೇಲೆ, ದಟ್ಟ ಅರಣ್ಯಗಳು ಮತ್ತು ಗ್ರಾಮೀಣ ಪ್ರದೇಶಗಳು ಅವರಿಗೆ ಸುರಕ್ಷತೆಯ ಭರವಸೆ ನೀಡಲು ಸಾಧ್ಯವಾಗಲಿಲ್ಲ. ಸ್ಥಳೀಯ ಪೊಲೀಸರ ಜೊತೆಗೆ ಸೇನೆ, ಅರೆಸೇನಾ ಪಡೆಗಳು ಮತ್ತು ಕಮಾಂಡೋಗಳು ಸೇರಿಕೊಂಡರು. ಅಷ್ಟೇ ಅಲ್ಲದೆ, ಮಾಜಿ ಮಾವೋವಾದಿಗಳೂ ಸೇರಿದಂತೆ ಅನೇಕ ಸ್ಥಳೀಯರು ಭದ್ರತಾ ಪಡೆಗಳೊಂದಿಗೆ ಕೈಜೋಡಿಸಿದರು.
ಹೊತ್ತಿಕೊಳ್ಳದ ಹುಲ್ಲುಗಾವಲಿನ ಕಿಚ್ಚು
ವಾರಗಳು ಉರುಳಿ ತಿಂಗಳುಗಳಾದಂತೆ ಪರಿಸ್ಥಿತಿ ಸ್ಪಷ್ಟವಾಯಿತು: "ಶರಣಾಗಿ ಅಥವಾ ಸಾವನ್ನಪ್ಪಿ." ಸಿಪಿಐ (ಮಾವೋವಾದಿ) ನಾಯಕತ್ವವು ಸುಲಭದ ದಾರಿಯನ್ನು ಆರಿಸಿಕೊಂಡಿತು—ಅದೇ ಶರಣಾಗತಿ.
ಹಿಂದೆ 1967ರಲ್ಲಿ ಚಾರು ಮಜುಂದಾರ್ ನಕ್ಸಲೀಯ ಚಳವಳಿಯನ್ನು ಪ್ರಚೋದಿಸಿದ ನಂತರ, ಚೀನಾದ 'ಪೀಪಲ್ಸ್ ಡೈಲಿ' ಪತ್ರಿಕೆಯು ಒಂದು ಲೇಖನದಲ್ಲಿ ಸಂಭ್ರಮದಿಂದ ಭವಿಷ್ಯ ನುಡಿದಿತ್ತು—"ಒಂದು ಸಣ್ಣ ಕಿಡಿ ಇಡೀ ಹುಲ್ಲುಗಾವಲಿಗೆ ಕಿಚ್ಚು ಹಚ್ಚಬಲ್ಲದು" ಎಂದು.
ಆದರೆ ಅದು ಎಂದಿಗೂ ಸಂಭವಿಸಲಿಲ್ಲ. ಹೌದು, ಕೆಲವು ಸಣ್ಣ ಕಿಚ್ಚುಗಳು ಹೊತ್ತಿಕೊಂಡವು ಎಂಬುದೇನೋ ನಿಜ. ಆದರೆ ಕಾಲಾನಂತರದಲ್ಲಿ ಅವು ಒಂದೊಂದಾಗಿ ತಮ್ಮ ಕಾಂತಿಯನ್ನು ಕಳೆದುಕೊಂಡವು.
ಮಧ್ಯ ಭಾರತದಲ್ಲಿ ದೀರ್ಘಕಾಲದವರೆಗೆ ಉರಿಯುತ್ತಿದ್ದ ಈ ಕೊನೆಯ ಜ್ವಾಲೆಯು ಮಾರ್ಚ್ 31ರಂದು ಸಂಪೂರ್ಣವಾಗಿ ಆರಿಹೋಗಲಿದೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

