
- ಮುಖಪುಟ
- ತಾಜಾ ಸುದ್ದಿತಾಜಾ ಸುದ್ದಿ
- ಕರ್ನಾಟಕಕರ್ನಾಟಕ
- ರಾಷ್ಟ್ರೀಯರಾಷ್ಟ್ರೀಯ
- ವಿಶೇಷ ಲೇಖನವಿಶೇಷ ಲೇಖನ
- ಅಭಿಮತ
- ಮನರಂಜನೆಮನರಂಜನೆ
- ಕ್ರೀಡೆಕ್ರೀಡೆ
- ಉದ್ಯೋಗ ವಾರ್ತೆ
- ವಿಡಿಯೋ

ನೆರೆಯ ಬಾಂಗ್ಲಾದೇಶದ ಜೊತೆ ಸಂಘರ್ಷ ಯಾವ ಕಾರಣಕ್ಕೂ ಔಚಿತ್ಯವಾದುದಲ್ಲ ಎಂಬುದು ಮೋದಿ ಸರ್ಕಾರಕ್ಕೆ ಗೊತ್ತಿದ್ದರೂ ಕೂಡ ಮುಸ್ತಫಿಜುರ್ ಪ್ರಸಂಗ ನಡೆಯಲು ಯಾಕಾದರೂ ಅವಕಾಶ ನೀಡಲಾಯಿತು?
ಇನ್ನೇನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಗಳು ಶುರುವಾಗುವ ಹೊತ್ತಿಗೆ ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಫಿಜುರ್ ರೆಹಮಾನ್ ಅವರನ್ನು ಕೈಬಿಟ್ಟಿರುವುದು ಒಂದು ರಾಜಕೀಯ ತಪ್ಪೆಂದು ಸಾಬೀತಾಗಬಹುದು. ಇದರಿಂದ ತನ್ನ ನೆರೆಯ ರಾಷ್ಟ್ರದೊಂದಿಗೆ ತನ್ನ ಸಂಬಂಧವನ್ನು ತಹಬಂದಿಗೆ ತರಲು ಭಾರತಕ್ಕೆ ಮತ್ತಷ್ಟು ಕಷ್ಟವಾಗಬಹುದು. ಯಾಕೆಂದರೆ ಪ್ರಸ್ತುತ ಈ ಸಂಬಂಧ ಅತ್ಯಂತ ತಳಮಟ್ಟದಲ್ಲಿದೆ.
ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆಯನ್ನು ಹೊಂದಿರುವ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ (ಬಿ.ಎನ್.ಪಿ) ಭಾರತದ ಜೊತೆ ತನ್ನ ಬಾಂಧವ್ಯವನ್ನು ಸುಧಾರಿಸುತ್ತದೆ ಎಂಬ ನಿರೀಕ್ಷೆ ದೊಡ್ಡದಾಗಿದೆ. ಆದರೆ ಮುಸ್ತಫಿಜುರ್ ವಿಚಾರದಲ್ಲಿ ಭಾರತ ತನ್ನ ನಡವಳಿಕೆಯಲ್ಲಿ ಎಡವಿ ಬಿದ್ದಿದೆ. ಇದರಿಂದಾಗಿ ಬಾಂಗ್ಲಾದಲ್ಲಿ ವ್ಯಕ್ತವಾಗುತ್ತಿರುವ ತೀವ್ರ ಆಕ್ರೋಶವನ್ನು ಗಮನಿಸಿದರೆ ಆ ದೇಶದೊಂದಿಗೆ ಮೊದಲಿನ ಸೌಹಾರ್ದ ಸಂಬಂಧವನ್ನು ಕಾಯ್ದುಕೊಳ್ಳುವುದು ಭಾರತಕ್ಕೆ ಕಷ್ಟವಾದೀತು.
ಆರಂಭದಲ್ಲಿ ಪಾಕಿಸ್ತಾನವೂ ಬಹಿಷ್ಕಾರದ ಬೆದರಿಕೆ ಹಾಕಿತ್ತು. ಆದರೆ ಅಂತಿಮವಾಗಿ ಭಾರತದ ವಿರುದ್ಧ T20 ವಿಶ್ವಕಪ್-ನಲ್ಲಿ ಆಡಲು ನಿರ್ಧರಿಸಿತು. ಇದು ಕ್ರಿಕೆಟ್ ಎಷ್ಟು ಜರೂರತ್ತಾಗಿದೆ ಮತ್ತು ಅದಕ್ಕೆ ಸಂಬಂಧಿಸಿದ ಆರ್ಥಿಕ ಹಿತಾಸಕ್ತಿಗಳ ಜೊತೆ ತಳಕು ಹಾಕಿಕೊಂಡಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಹೈಪ್ರೊಫೈಲ್ ಪಂದ್ಯಾವಳಿಯಿಂದ ಬಾಂಗ್ಲಾದೇಶ ಹೊರಗುಳಿದ ನಂತರ ನಡೆದ ಸರಣಿ ಘಟನೆಗಳು.
ಯಾವತ್ತು ಶೇಖ್ ಹಸೀನಾ ಪದಚ್ಯುತಿ ಸಂಭವಿಸಿತೋ ಅಂದಿನಿಂದ ಪಾಕಿಸ್ತಾನವು ಭಾರತದ ತಪ್ಪುಗಳ ಪೂರ್ಣ ಲಾಭ ಪಡೆದುಕೊಂಡು ಬಾಂಗ್ಲಾದೇಶಕ್ಕೆ ನಿಕಟವಾಗಲು ಪ್ರಯತ್ನ ನಡೆಸುತ್ತ ಬಂತು. ಮುಸ್ತಫಿಜುರ್ ಪ್ರಕರಣವು ಅದಕ್ಕೆ ಇನ್ನಷ್ಟು ಆಹಾರವಾಯಿತು. ಭಾರತ ಕೈಗೊಂಡ ಈ ನಿರ್ಧಾರವು ತಿಳಿದೋ-ತಿಳಿಯದೆಯೋ ಬಾಂಗ್ಲಾದೇಶದ ಬೆಂಬಲಕ್ಕೆ ನಿಲ್ಲಲು ಪಾಕಿಸ್ತಾನಕ್ಕೆ ಅನಿರೀಕ್ಷಿತ, ಆದರೆ ಉಪಯುಕ್ತ ಅವಕಾಶವನ್ನು ಒದಗಿಸಿತು.
ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರಕ್ಕೆ ಇಷ್ಟು ಸಾಕಾಗಿತ್ತು. ಅದು ಇಸ್ಲಾಮಾಬಾದ್ ನಿಲುವನ್ನು ಪ್ರೋತ್ಸಾಹಿಸಿ ಅವರ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ನೆರವಾಯಿತು. ಇದರಿಂದಾಗಿ ಭಾರತ ಬಾಂಗ್ಲಾದಿಂದ ಇನ್ನಷ್ಟು ದೂರವಾಗುತ್ತ ಹೋಯಿತು.
ಇದಕ್ಕೆ ಪೂರಕವಾಗಿ ಭಾರತ-ಪಾಕಿಸ್ತಾನ ವಿಶ್ವಕಪ್ ಮುಖಾಮುಖಿಗೆ ಮರುಜೀವ ತುಂಬುವಲ್ಲಿ ನೆರವಾಗಿದ್ದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಸಮಾಲೋಚನೆಗಳು ಭಾರತವು ಈ ರಾಜತಾಂತ್ರಿಕ ಸಮೀಕರಣದಿಂದ ದೂರ ಉಳಿಯುವಂತೆ ಮಾಡಿತು ಎಂಬುದಕ್ಕೆ ಸಾಕ್ಷಿಯೊದಗಿಸಿತು.
ಇಷ್ಟೆಲ್ಲದರ ನಡುವೆ ಬಾಂಗ್ಲಾದೇಶದ ಜೊತೆಗಿನ ಉದ್ವಿಗ್ನತೆಯನ್ನು ಶಮನಗೊಳಿಸುವುದೇ ಅತ್ಯಗತ್ಯವಾಗಿದ್ದ ಹೊತ್ತಿನಲ್ಲಿ ನರೇಂದ್ರ ಮೋದಿ ಸರ್ಕಾರವು, ಮುಸ್ತಫಿಜುರ್ ಘಟನೆಯನ್ನು ನಡೆಯಲು ಏಕೆ ಅವಕಾಶ ನೀಡಿತು ಎಂಬುದೇ ಒಗಟಾಗಿದೆ. ದಾಖಲೆಗಳ ಪ್ರಕಾರ ಭಾರತೀಯ ಕ್ರಿಕೆಟ್ ಮಂಡಳಿಯೇ ಇದಕ್ಕೆ ಜವಾಬ್ದಾರಿಯಾದರೂ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಈ ಕ್ರಮವು ನವದೆಹಲಿಯ ಸರ್ಕಾರದ ಸೂಚನೆಯ ಮೇರೆಗೇ ನಡೆದಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.
ಮುಸ್ತಫಿಜುರ್ ಅವರನ್ನು ಐಪಿಎಲ್‌ನಿಂದ ಹೊರಹಾಕುವ ಮೂಲಕ ಬಿಸಿಸಿಐ (ಅಥವಾ ಮೋದಿ ಸರ್ಕಾರ) ಏನನ್ನು ಸಾಧಿಸಲು ಹೊರಟಿತ್ತು ಎಂಬುದು ಸ್ಪಷ್ಟವಾಗಿಲ್ಲ. ಅವರು ಈ ಪಂದ್ಯಾವಳಿಯಲ್ಲಿ ಆಡುವುದರಿಂದ ಉಭಯ ನೆರೆರಾಷ್ಟ್ರಗಳ ನಡುವಿನ ರಾಜಕೀಯದ ಮೇಲೆ ಅಥವಾ ಇನ್ನಾವುದೇ ವಿಷಯದ ಮೇಲೆ ಯಾವುದೇ ಪರಿಣಾಮ ಬೀರುತ್ತಿರಲಿಲ್ಲ. ಇದು ಭಾರತಕ್ಕೆ ಯಾವುದೇ ರೀತಿಯಲ್ಲಿ ಹಾನಿ ಮಾಡುತ್ತಿರಲಿಲ್ಲ.
ಮುಸ್ತಫಿಜುರ್ ಮತ್ತು ನಟ ಶಾರುಖ್ ಖಾನ್ ಅವರ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನಡುವೆ ಈಗಾಗಲೇ ಒಪ್ಪಂದವಾಗಿದ್ದ ಕಾರಣ, ಈ ಕ್ರಮವು ಅಸಂಬದ್ಧ ಮತ್ತು ಸಮರ್ಥಿಸಿಕೊಳ್ಳಲಾಗದ ನಿರ್ಧಾರವಾಗಿ ಕಂಡುಬಂದಿದೆ.
ತಳಕಚ್ಚಿದ ಸಂಬಂಧಗಳು
ಒಂದು ವೇಳೆ ಮುಸ್ತಫಿಜುರ್ ರಹಮಾನ್ ಘಟನೆ ನಡೆಯದೇ ಹೋಗಿದ್ದರೆ ಮತ್ತು ಬಾಂಗ್ಲಾದೇಶವು ನಿಗದಿಯಂತೆ ಭಾರತದಲ್ಲಿ T20 ವಿಶ್ವಕಪ್ ಪಂದ್ಯಗಳಲ್ಲಿ ಆಡಿದ್ದರೆ, ಅದು ಎರಡು ದೇಶಗಳ ನಡುವಿನ ಸ್ನೇಹದ ತಂತುವನ್ನು ಜೀವಂತವಾಗಿ ಇರಿಸಲು ನೆರವಾಗುತ್ತಿತ್ತು ಮತ್ತು ಪಾಕಿಸ್ತಾನವು ಈ ವಿಷಯದಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡಲು ಅವಕಾಶವಾಗುತ್ತಿರಲಿಲ್ಲ.
2024ರ ಆಗಸ್ಟ್ ತಿಂಗಳಿನಲ್ಲಿ ಬಾಂಗ್ಲಾ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅವರ ಪದಚ್ಯುತಿಯ ಬಳಿಕ, ನವದೆಹಲಿ ಮತ್ತು ಢಾಕಾ ನಡುವಿನ ಸಂಬಂಧಗಳು ತಳಕಚ್ಚಿ ಹೋಗಿವೆ. ಭಾರತ ಮತ್ತು ಹಸೀನಾ ನಡುವೆ ಬಹಳ ಕಾಲದಿಂದ ಇರುವ ನಿಕಟ ಸಂಬಂಧ ಹಾಗೂ ಭಾರತದ ರಾಜಧಾನಿಯಲ್ಲಿ ಅವರಿಗೆ ಆಶ್ರಯ ನೀಡಿರುವ ಕಾರಣದಿಂದಾಗಿ, ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಭಾವನೆಗಳು ತೀವ್ರವಾಗಿವೆ ಎಂದು ವರದಿಯಾಗಿದೆ.
ಬಾಂಗ್ಲಾದೇಶದ ಬಲಪಂಥೀಯ ಇಸ್ಲಾಮಿಕ್ ಸಂಘಟನೆಯಾದ ಜಮಾತ್-ಎ-ಇಸ್ಲಾಮಿ ಪ್ರಮುಖ ಪಾತ್ರ ವಹಿಸಿದ ದಂಗೆ ಮತ್ತು ದಂಗೆಯ ಪರಿಣಾಮವಾಗಿ, ಅಲ್ಪಸಂಖ್ಯಾತ ಹಿಂದೂಗಳನ್ನು ಗುರಿಪಡಿಸಲಾಯಿತು. ಇದು ಭಾರತದ ಆಡಳಿತಾರೂಢ ಹಿಂದುತ್ವವಾದಿಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು, ಇದರಿಂದಾಗಿ ದಕ್ಷಿಣ ಏಷ್ಯಾದ ಈ ಇಬ್ಬರು ನೆರೆಹೊರೆಯವರ ನಡುವೆ ನೆಲೆಸಿದ್ದ ತ್ವೇಷಮಯ ವಾತಾವರಣ ಮತ್ತಷ್ಟು ಹದಗೆಟ್ಟಿತು.
ಅಮೆರಿಕದ ವ್ಯಾಪಾರ ಒಪ್ಪಂದ
ಈ ನಡುವೆ, ಅನಿರೀಕ್ಷಿತ ಬೆಳವಣಿಗೆಯೂ ನಡೆಯಿತು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಾಂಗ್ಲಾದೇಶದೊಂದಿಗೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದವು ಮುನ್ನೆಲೆಗೆ ಬಂದಿದೆ. ಇದು ಇತರ ಎಲ್ಲ ವಿಷಯಗಳ ಜೊತೆಗೆ, ಬಾಂಗ್ಲಾದೇಶವನ್ನು ಭಾರತದಿಂದ ಮತ್ತಷ್ಟು ದೂರವಿಟ್ಟರೆ ಅಚ್ಚರಿಯಿಲ್ಲ.
ಭಾರತದ ಸಾಂಪ್ರದಾಯಿಕ ಪೂರೈಕೆಯನ್ನು ಕಡಿತಗೊಳಿಸಿ, ಅಮೆರಿಕದಿಂದಲೇ ಹತ್ತಿಯನ್ನು ಖರೀದಿಸುವಂತೆ ಬಾಂಗ್ಲಾದೇಶದ ಮೇಲೆ ಒತ್ತಡ ಹೇರಲು ಇತ್ತೀಚಿನ ಈ ಒಪ್ಪಂದ ರೂಪಿತಗೊಂಡಿದೆ. ಅಮೆರಿಕದಿಂದ ಹತ್ತಿ ಖರೀದಿಸುವುದು ಬಾಂಗ್ಲಾಗೆ ಹೆಚ್ಚು ಲಾಭ. ಯಾಕೆಂದರೆ ಆ ದೇಶದಿಂದ ಆಮದು ಮಾಡಿಕೊಳ್ಳುವ ಜವಳಿಗಳ ಮೇಲೆ ಶೂನ್ಯ ಸುಂಕ ವಿಧಿಸಲಾಗುತ್ತದೆ.
ಭಾರತದ ಹತ್ತಿ ಉತ್ಪಾದಕರು ಮತ್ತು ರಫ್ತುದಾರರ ಹಿತಾಸಕ್ತಿಗೆ ಧಕ್ಕೆ ತಂದು ಅಮೆರಿಕ ಮತ್ತು ಬಾಂಗ್ಲಾದೇಶದ ನಡುವೆ ನಡೆದಿರುವ ಈ ಒಪ್ಪಂದವು, ಟ್ರಂಪ್ ಅವರ ಜಗತ್ತಿನಲ್ಲಿ ರಾಜತಾಂತ್ರಿಕ ಸೂಕ್ಷ್ಮತೆಗಳಿಗೆಲ್ಲ ಯಾವುದೇ ಸ್ಥಾನವಿಲ್ಲ ಎಂಬುದನ್ನು ಮತ್ತೊಮ್ಮೆ ಖಚಿತಪಡಿಸಿದೆ.
ಒಂದು ವೇಳೆ ಈ ಹೊಸ ವ್ಯವಸ್ಥೆಯಿಂದ ಬಾಂಗ್ಲಾದ ಸಿದ್ಧ ಉಡುಪು ತಯಾರಕರಿಗೆ ಲಾಭದಾಯಕವಾಗಿ ಪರಿಣಮಿಸಿದರೆ, ಅದು ಆ ದೇಶದ ಗಾರ್ಮೆಂಟ್ ವ್ಯಾಪಾರದಿಂದ ಭಾರತವನ್ನು ಅನಾಮತ್ತಾಗಿ ಎತ್ತಿ ಹೊರಕ್ಕೆ ಹಾಕುತ್ತದೆ. ಅಷ್ಟು ಮಾತ್ರವಲ್ಲದೆ, ಇದು ಬಾಂಗ್ಲಾದೇಶವು ಭಾರತದ ಮೇಲಿರುವ ಅವಲಂಬನೆಯನ್ನು ಗಣನೀಯವಾಗಿ ತಗ್ಗಿಸುತ್ತದೆ, ಇದಕ್ಕೆ ಪ್ರತಿಯಾಗಿ ನೆರೆಹೊರೆಯ ರಾಷ್ಟ್ರದ ಮೇಲೆ ಈಗಾಗಲೇ ಕ್ಷೀಣಿಸುತ್ತಿರುವ ಭಾರತದ ಪ್ರಭಾವವನ್ನು ಮತ್ತಷ್ಟು ಕುಗ್ಗಿಸುವುದು ನಿಶ್ಚಿತ.
ಭರವಸೆಯ ಆಶಾಕಿರಣ ತಾರಿಕ್ ರೆಹಮಾನ್
ಇಂತಹ ತಾರುಮಾರಿನ ಪರಿಸ್ಥಿತಿಯಲ್ಲಿ ಕಾಣಿಸುತ್ತಿರುವ ಏಕೈಕ ಆಶಾದಾಯಕ ಬೆಳವಣಿಗೆಯೆಂದರೆ, ಬಾಂಗ್ಲಾದೇಶದ ಬಿಎನ್ಪಿ ನಾಯಕ ತಾರಿಕ್ ರೆಹಮಾನ್ ಅವರು ದೇಶಭ್ರಷ್ಟತೆಯಿಂದ ಢಾಕಾಗೆ ಮರಳಿರುವುದು. ಕ್ಷಿಪ್ರಗತಿಯಲ್ಲಿ ಹದಗೆಡುತ್ತಿರುವ ಸಂಬಂಧಗಳನ್ನು ಇವರು ಸುಧಾರಿಸಬಹುದು ಎಂದು ಭಾರತದ ಆಡಳಿತ ವರ್ಗದ ಆಶಾವಾದವಾಗಿದೆ.
ಆದರೆ ಮುಸ್ತಫಿಜುರ್ ಘಟನೆಯಂತಹ ಸಣ್ಣ ವಿಷಯಗಳಿಗೂ ಉದ್ವಿಗ್ನತೆ ಹೆಚ್ಚಾಗುತ್ತಿರುವುದು ಮತ್ತು ಬಾಂಗ್ಲಾದೇಶದಲ್ಲಿ ಟರ್ಕಿ ಹಾಗೂ ಚೀನಾದ ಬೆಂಬಲದೊಂದಿಗೆ ಪಾಕಿಸ್ತಾನದ ಪಾತ್ರ ಹಿಗ್ಗುತ್ತಿರುವುದನ್ನು ನೋಡಿದರೆ ಒಂದು ಮೂಲಭೂತ ಪ್ರಶ್ನೆ ಉದ್ಭವಿಸುತ್ತದೆ: ತಾರಿಕ್ ಅವರು ಭಾರತದೊಂದಿಗೆ ಸಂಬಂಧ ಸುಧಾರಿಸಲು ಸಿದ್ಧರಿದ್ದಾರೆಯೇ? ಒಂದು ವೇಳೆ ಅವರು ಸಿದ್ಧರಿದ್ದರೂ, ಭಾರತದ ಜೊತೆ ಮೃದು ಧೋರಣೆಯನ್ನು ಅನುಸರಿಸಲು ಅವರಿಂದ ಸಾಧ್ಯವಿದೆಯೇ?
ಅಲ್ಲದೆ, ಹಸೀನಾ ವಿರೋಧಿ ವಿದ್ಯಾರ್ಥಿ ದಂಗೆ ಮತ್ತು ಭಾರತದ ವಿರುದ್ಧ ಜನರಲ್ಲಿ ಮನೆಮಾಡಿರುವ ವ್ಯಾಪಕ ಆಕ್ರೋಶದ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದು ಮತ್ತು ಭಾರತದೊಂದಿಗೆ ಸೌಹಾರ್ದಯುತ ಸಂಬಂಧ ಮರುಸ್ಥಾಪನೆ ತಾರಿಕ್ ಅವರಿಗೆ ಸುಲಭವೇನೂ ಆಗಲಾರದು.
ಪಾಕಿಸ್ತಾನ ಕೂಡ ಸಕ್ರಿಯವಾಗಿದ್ದು, ಹೊಸ ಸರ್ಕಾರದ ವಿಶ್ವಾದ ಗಳಿಸಲು ಮತ್ತು ಬಾಂಗ್ಲಾದೇಶ-ಭಾರತ ಸಂಬಂಧಗಳು ಸುಧಾರಿಸದಂತೆ ತಡೆಯಲು ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತದೆ.
ಅಂತಿಮವಾಗಿ, ನಾವು ಆರಂಭಿಸಿದ ಮುಸ್ತಫಿಜುರ್ ಅವರನ್ನು ಐಪಿಎಲ್ನಿಂದ ಕೈಬಿಟ್ಟ ವಿಷಯಕ್ಕೆ ಬಂದರೆ, ಮೋದಿ ಸರ್ಕಾರದ ಈ ನಿರ್ಧಾರವು ಏಕೆ ಅನಗತ್ಯ ಮತ್ತು ದುಬಾರಿ ತಪ್ಪಾಗಿರಬಹುದು ಎಂಬುದು ಈಗ ಸ್ಪಷ್ಟವಾಗುತ್ತದೆ. ಒಂದು ವೇಳೆ, ಹಸೀನಾ ನಂತರದ ಬಾಂಗ್ಲಾದೇಶದ ವಿರುದ್ಧ ಯಾವುದೇ ಪರಿಣಾಮಗಳನ್ನು ಲೆಕ್ಕಿಸದೆ ಕಠಿಣ ನಿಲುವು ತಳೆಯಲು ಭಾರತ ಸಿದ್ಧವಾಗಿದೆ ಎಂಬುದರ ಸೂಚನೆ ಇದಲ್ಲದೇ ಹೋದರೆ ಇದೊಂದು ದೊಡ್ಡ ರಾಜತಾಂತ್ರಿಕ ಹಿನ್ನಡೆ ಎನ್ನದೆ ಬೇರೆ ವಿಧಿಯಿಲ್ಲ.

