ಕೇಂದ್ರ ಬಜೆಟ್: ಮುಸ್ಲಿಮರ ಕಡೆಗಣನೆ
x

ಕೇಂದ್ರ ಬಜೆಟ್: ಮುಸ್ಲಿಮರ ಕಡೆಗಣನೆ

ಮುಸ್ಲಿಮರ ಅವಗಣನೆಯಿಂದ ದೇಶದ ಪ್ರಗತಿ ಕುಂಠಿತವಾಗುತ್ತಿದೆ.


ದೇಶದ ಜನಸಂಖ್ಯೆಯಲ್ಲಿ ಏಳರಲ್ಲಿ ಒಬ್ಬರು ಮುಸ್ಲಿಮರು. ಆದರೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಮಧ್ಯಂತರ ಬಜೆಟ್‌ ನಲ್ಲಿ ಏಳನೇ ವ್ಯಕ್ತಿಯಿಂದ ಆಗುತ್ತಿರುವ ಸಾಮಾಜಿಕ ಬದಲಾವಣೆಯಿಂದ ಆರು ಮಂದಿ ಅಪಾಯ ಎದುರಿಸುತ್ತಿದ್ದಾರೆ ಎಂದು ಹೇಳಲು ಹೊರಟಂತೆ ಕಾಣುತ್ತಿದೆ.

ತಮ್ಮ ಬಜೆಟ್‌ ಭಾಷಣದಲ್ಲಿ ಅವರು ಯಾವುದೇ ಸಮುದಾಯದ ಹೆಸರು ಹೇಳಲಿಲ್ಲ. ಬದಲಾಗಿ, ಪ್ರತ್ಯೇಕ ವಿಷಯದಡಿ ʻಸಾಮಾಜಿಕ ಬದದಲಾವಣೆʼ ಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಬಜೆಟ್‌ ಭಾಷಣದ 76 ನೇ ಪ್ಯಾರಾ ಹೇಳುತ್ತದೆ,ʻಜನಸಂಖ್ಯೆ ಬದಲಾವಣೆ ಹಾಗೂ ಜನಸಂಖ್ಯೆಯ ತೀವ್ರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಆಗುತ್ತಿರುವ ಸವಾಲುಗಳನ್ನು ಅಧ್ಯಯಿಸಲು ಸರ್ಕಾರವು ಉನ್ನತಾಧಿಕಾರ ಸಮಿತಿಯನ್ನು ನೇಮಿಸಲಿದೆ. ಈ ಸಮಿತಿಯು ವೀಕ್ಷಿತ್ ಭಾರತ್ ಗುರಿಗೆ ಸಂಬಂಧಿಸಿದಂತೆ ಈ ಸವಾಲುಗಳನ್ನು ಸಮಗ್ರವಾಗಿ ಪರಿಹರಿಸಲು ಶಿಫಾರಸು ಗಳನ್ನು ಮಾಡಲಿದೆʼ.

ಜನಸಂಖ್ಯೆಯ ಹಕ್ಕುದಾರಿಕೆ

ಹಣಕಾಸು ಸಚಿವೆಯ ಮಾತುಗಳು ಬಿಜೆಪಿ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಮತ್ತು ಹಿಮಂತ ಬಿಸ್ವಾ ಶರ್ಮಾ ಅವರು ಹೇಳುವ ಇಂಥದ್ದೇ ಮಾತುಗಳೊಡನೆ ಹೊಂದಿಕೊಳ್ಳುತ್ತದೆ. ಈ ಇಬ್ಬರು ಜನಸಂಖ್ಯೆ ಹೆಚ್ಚಳಕ್ಕೆ ಮುಸ್ಲಿಮರು ಕಾರಣ. ಇದು ಭವಿಷ್ಯದಲ್ಲಿ ಸಮಸ್ಯೆ ಸೃಷ್ಟಿಸಲಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಬಿಜೆಪಿಯ ಇನ್ನಿತರ ಪ್ರಮುಖರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಾಸ್ತವವೆಂದರೆ, ದೇಶದಲ್ಲಿ ಜನಸಂಖ್ಯೆಯ ಬೆಳವಣಿಗೆ ನಿಧಾನವಾಗುತ್ತಿದೆ ಮತ್ತು ಒಟ್ಟು ಫಲವತ್ತತೆ ದರ(ಟೋಟಲ್‌ ಫರ್ಟಿಲಿಟಿ ರೇಟ್) 1950 ರಲ್ಲಿದ್ದ ಪ್ರತಿ ಮಹಿಳೆಗೆ ಐದು ಮಕ್ಕಳಿಂದ ಎರಡಕ್ಕೆ ಕುಸಿದಿದೆ. ಈ ಕುಸಿತ ಹಿಂದು ಮತ್ತು ಮುಸ್ಲಿಂ ಎರಡೂ ಸಮುದಾಯದಲ್ಲೂ ಕಂಡುಬಂದಿದೆ.

ಸೆಪ್ಟೆಂಬರ್ 2021ರ ಪ್ಯೂ ಸಂಶೋಧನಾ ಕೇಂದ್ರದ ವರದಿ ಪ್ರಕಾರ,ʻ ಹಿಂದುಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧರು ಮತ್ತು ಜೈನರು ಸೇರಿದಂತೆ ದೇಶದ ವಿವಿಧ ಧಾರ್ಮಿಕ ಗುಂಪುಗಳ ಫಲವತ್ತತೆ ಕಡಿಮೆಯಾಗಿದೆ. ಭಾರತೀಯ ಮುಸ್ಲಿಮರಲ್ಲಿ, ಒಟ್ಟು ಫಲವತ್ತತೆ ದರ ನಾಟಕೀಯವಾಗಿ ಕುಸಿದಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿ ಪ್ರಕಾರ, 1992 ರಲ್ಲಿ ಇದ್ದ ಪ್ರತಿ ಮಹಿಳೆಗೆ 4.4 ಮಕ್ಕಳಿಂದ 2015 ರಲ್ಲಿ 2.6 ಮಕ್ಕಳಿಗೆ ಕಡಿಮೆಯಾಗಿದೆ.

ಕುಗ್ಗುತ್ತಿರುವ ಅಂತರ

ವರದಿ ಹೇಳುತ್ತದೆ;ʻ1992ರಲ್ಲಿ ಹಿಂದೂ ಮಹಿಳೆಯರಿಗೆ ಹೋಲಿಸಿದರೆ ಮುಸ್ಲಿಂ ಮಹಿಳೆಯರು ಸರಾಸರಿ 1.1 ಮಕ್ಕಳನ್ನು ಹೊಂದಿರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, 2015 ಕ್ಕೆ ಈ ಕಂದರ 0.5 ಕ್ಕೆ ಕಡಿಮೆಯಾಗಿದೆ. 2015ರ ಬಳಿಕ ಸಂಖ್ಯೆ ಇನ್ನಷ್ಟು ಕಡಿಮೆಯಾಗಿರುವ ಸಾಧ್ಯತೆ ಇದೆ. ಜನಗಣತಿ ನಂತರವಷ್ಟೇ ನಿಖರ ಅಂಕಿಅಂಶ ಗೊತ್ತಾಗಲಿದೆ. ಜನಗಣತಿ ಕೋವಿಡ್‌ ಹಿನ್ನೆಲೆಯಲ್ಲಿ ನಡೆದಿಲ್ಲ ಹಾಗೂ ಸಾರ್ವಜನಿಕ ಚುನಾವಣೆ ಬಳಿಕವಷ್ಟೇ ನಡೆಯಬಹುದು.

ಹಾಲಿ ಬಜೆಟ್ ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನುಡಿಯಾಗಿದೆ. ಬಿಜೆಪಿಯ ಒಡೆದು ಆಳುವ ನೀತಿಯವನ್ನು ಪರಿಗಣಿಸಿದರೆ, ಗೃಹ ಸಚಿವೆಯ ನಿಲುವು ಅಚ್ಚರಿ ಹುಟ್ಟಿಸುವುದಿಲ್ಲ. ಆದರೆ, ಇದು ಎಲ್ಲರನ್ನೂ ಒಳಗೊಳ್ಳುವ, ವಿಸ್ತಾರ ನೆಲೆಯ ಹಾಗೂ ತಾರತಮ್ಯರಹಿತ ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತದೆ.

ಸೂಚ್ಯಂಕಗಳು ಮತ್ತು ತಾರತಮ್ಯ

ಸರ್ಕಾರ ಜನಸಂಖ್ಯೆಯನ್ನು ಆಧರಿಸಿದ ಅಭಿವೃದ್ಧಿ ಸೂಚ್ಯಂಕಗಳ ಕುಸಿತವನ್ನು ತಳ್ಳಿಹಾಕಲು ಪ್ರಯತ್ನಿಸುತ್ತದೆ. ಈ ಸೂಚ್ಯಂಕಗಳು ಜನರ ನಿಜವಾದ ಸ್ಥಿತಿಯನ್ನು ಸೂಚಿಸುತ್ತವೆ. ಅಂತಾರಾಷ್ಟ್ರೀಯ ಸಂಸ್ಥೆಗಳು ಈ ಸೂಚ್ಯಂಕಗಳನ್ನು ಆಗಾಗ ಬಿಡುಗಡೆ ಮಾಡುತ್ತವೆ; ಆಧರೆ, ಇವು ದೇಶದ ಪ್ರಗತಿಯನ್ನು ಸಹಿಸಲಾಗದವರ ಪಿತೂರಿ ಎಂದು ಸರ್ಕಾರ ತಳ್ಳಿಹಾಕುತ್ತದೆ. ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಮರು ವಿವಿಧ ಕ್ಷೇತ್ರಗಳಲ್ಲಿ ಹಿಂದೆ ಉಳಿಯುತ್ತಿದ್ದಾರೆ ಮತ್ತು ಇದರಿಂದ ಸ್ವಾಭಾವಿಕವಾಗಿ ಸೂಚ್ಯಂಕಗಳು ಕುಸಿಯುತ್ತದೆ.

ಮುಸ್ಲಿಮರಿಗೆ ಹೋಲಿಸಿದರೆ ಕ್ರಿಶ್ಚಿಯನ್ನರು ಮತ್ತು ಸಿಖ್ಖರು ಶೈಕ್ಷಣಿಕವಾಗಿ ಅಥವಾ ಆರ್ಥಿಕವಾಗಿ ಮುಂದುವರಿದಿರುವುದರಿಂದ, ಅಲ್ಪ ಸಂಖ್ಯಾತರಿಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಕೇಂದ್ರ ಬಜೆಟ್‌ನಂತಹ ಪ್ರಕ್ರಿಯೆಯಲ್ಲಿ ಇದಕ್ಕೆ ಒತ್ತು ನೀಡಬೇಕಾಗುತ್ತದೆ. ಆದರೆ, ಅಲ್ಪ ಸಂಖ್ಯಾತರ ಇಲಾಖೆಗೆ ನೀಡುವ ಅನುದಾನವನ್ನು ಮಧ್ಯಂತರ ಬಜೆಟ್‌ನಲ್ಲಿ ಗಣನೀಯವಾಗಿ ಕಡಿತಗೊಳಿಸಲಾಗಿದೆ. ಹಿಂದಿನ ಬಜೆಟ್‌ನ ಅನುದಾನವನ್ನೂ ಸಂಪೂರ್ಣವಾಗಿ ಬಳಸಿಲ್ಲ. ಜತೆಗೆ, ಬಿಹಾರದಂತಹ ರಾಜ್ಯಗಳಲ್ಲಿ ಬಡ, ಹಿಂದುಳಿದ, ಅರ್ಹ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸುವಲ್ಲಿ ಭ್ರಷ್ಟಾಚಾರ ಮತ್ತು ದುರುಪಯೋಗದ ನಿದರ್ಶನಗಳಿವೆ. ಅನುದಾನದ ಕೊರತೆಯಿಂದ ಮದರಸಾಗಳ ಸುಧಾರಣೆ ಕೂಡ ಮೂಲೆಗೆ ಸರಿದಿದೆ. ಕೆಲವನ್ನು ಮುಚ್ಚಲಾಗಿದೆ.

ಸಾರ್ವತ್ರಿಕ ಶಿಕ್ಷಣದ ಅವಶ್ಯಕತೆ

ಜನಸಂಖ್ಯೆಯ ನಿಯಂತ್ರಣ ಒಂದು ಸಮಸ್ಯೆ. ದೇಶ ಜನಸಂಖ್ಯೆಯಲ್ಲಿ ಚೀನಾವನ್ನು ಮೀರಿಸಿದೆ. ಆದರೆ, ಶಿಕ್ಷಣವನ್ನು ಸಾರ್ವತ್ರಿಕಗೊಳಿಸದೆ ಮತ್ತು ಅರಿವಿನ ಮಟ್ಟವನ್ನು ಹೆಚ್ಚಿಸದೆ ಜನಸಂಖ್ಯೆಯನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಶ್ರೀಮಂತರಿಗೆ ಹೋಲಿಸಿದರೆ ಕೆಳವರ್ಗದವರು ಹೆಚ್ಚು ಮಕ್ಕಳನ್ನು ಹುಟ್ಟಿಸಿಕೊಳ್ಳುತ್ತಾರೆ ಎನ್ನುವುದು ವಾಸ್ತವ. ಆದ್ದರಿಂದ, ಮುಸ್ಲಿಮರು ಇನ್ನಷ್ಟು ಬಡತನ, ಅನಕ್ಷರತೆ ಹಾಗೂ ಕೊಳೆಗೇರಿಗಳಲ್ಲಿ ಸಿಲುಕಿಕೊಳ್ಳುವುದನ್ನು ತಪ್ಪಿಸಲು ಪ್ರಯತ್ನಿಸಬೇಕಿದೆ. ಆದರೆ, ಆಯವ್ಯಯ ಇದಕ್ಕೆ ತದ್ವಿರುದ್ಧವಾಗಿದೆ.

(ʼದ ಫೆಡರಲ್ʼ ಎಲ್ಲ ದೃಷ್ಟಿಕೋನ ಮತ್ತು ಅಭಿಪ್ರಾಯಗಳ ಅಭಿವ್ಯಕ್ತಿಗೆ ಅವಕಾಶ ಕಲ್ಪಿಸುತ್ತದೆ. ಲೇಖನದಲ್ಲಿರುವ ಮಾಹಿತಿ, ಆಲೋಚನೆ ಅಥವಾ ಅಭಿಪ್ರಾಯಗಳು ಲೇಖಕರದ್ದು)(ಫೋಟೋ: ‌iStock)

Read More
Next Story