ಟ್ರಂಪ್ ತಾಳಕ್ಕೆ ಕುಣಿಯದ ಭಾರತ: ‘ಮೋದಿ ಯುದ್ಧ’ದ ಕಥೆ ಕಟ್ಟಿದ ಅಮೆರಿಕ
x
ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ಆತ್ಮಗೌರವಕ್ಕೆ ಈಗ ಬಹಳ ದೊಡ್ಡ ಪೆಟ್ಟು ಬಿದ್ದಿದೆ. ಹಾಗಾಗಿಯೇ ಅದು ‘ಮೋದಿ ಹೇರಿದ ಯುದ್ಧ’ ಎಂಬ ಹೊಸ ಕಥೆ ಕಟ್ಟಿದೆ. ಅಮೆರಿಕದ ಈ ಕಥೆ ಹೆಣೆಯುವ ಪ್ರವೃತ್ತಿ ಇಲ್ಲಿಗೇ ನಿಲ್ಲುವಂತೆ ಕಾಣುತ್ತಿಲ್ಲ.

ಟ್ರಂಪ್ ತಾಳಕ್ಕೆ ಕುಣಿಯದ ಭಾರತ: ‘ಮೋದಿ ಯುದ್ಧ’ದ ಕಥೆ ಕಟ್ಟಿದ ಅಮೆರಿಕ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಮಗೆ ಪಾಷಂಡಿಯಾಗಿ ಕಾಣಬಹುದು, ಆದರೆ ಹಿಂದೆ ಅಧಿಕಾರದಲ್ಲಿದ್ದವರೂ ಅಮೆರಿಕದ ಹಾದಿಗೆ ಅಡ್ಡ ಬಂದವರ ಮೇಲೆ ಆರೋಪಗಳನ್ನು ಹೊರಿಸುವ, ಬೆದರಿಸುವ ಮತ್ತು ನೇರ ದಾಳಿಗೆ ಇಳಿಯುವುದರಲ್ಲಿ ಹಿಂದೆ ಬಿದ್ದವರೇನೂ ಅಲ್ಲ.


ಪ್ರಧಾನಿ ನರೇಂದ್ರ ಮೋದಿಯವರನ್ನು ಕಟು ಮಾತುಗಳಲ್ಲಿ ವಿಮರ್ಶೆ ಮಾಡುವವರು ಕೂಡ, ರಷ್ಯಾ-ಉಕ್ರೇನ್ ಸಂಘರ್ಷವನ್ನು “ಮೋದಿ ಯುದ್ಧ” ಎಂದು ಟ್ರಂಪ್ ಆಡಳಿತವು ಬಣ್ಣಿಸಿರುವುದನ್ನು ಒಪ್ಪಿಕೊಳ್ಳಲಾರರು. ಈ ಹಂತದಲ್ಲಿ, ಇದೊಂದು ಅತಿರೇಕದ ಆರೋಪ ಎಂಬುದನ್ನು ಬಹಳಷ್ಟು ಮಂದಿ ಒಪ್ಪುತ್ತಾರೆ. ಆದರೂ, ಅಮೆರಿಕಕ್ಕೆ ಇದೇನು ಹೊಸದಲ್ಲ. ಇಂತಹ ಬೆಪ್ಪುಬೀಳಿಸುವ ಹೇಳಿಕೆಯನ್ನು ಅದು ಹಿಂದೆಯೂ ನೀಡಿತ್ತು ಮತ್ತು ಅದರಿಂದ ದುರಂತ ಪರಿಣಾಮ ಉಂಟಾಗಿದ್ದನ್ನು ಇತಿಹಾಸ ಮರೆತಿಲ್ಲ.

ಇಲ್ಲಿ ಎರಡು ಸಾಧ್ಯತೆಗಳಿವೆ. ಒಂದೊಮ್ಮೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕದನವಿರಾಮಕ್ಕೆ ಒಪ್ಪಿದರೆ, ಈ ವಿಚಾರ ತಾನಾಗಿಯೇ ಸತ್ತುಹೋಗುತ್ತದೆ. ಆದರೆ, ಪುಟಿನ್ ಏನಾದರೂ ವಿರೋಧ ವ್ಯಕ್ತಪಡಿಸಿ ಟ್ರಂಪ್ ಹೇಳಿದಂತೆ ಕೇಳಲು ನಿರಾಕರಿಸಿದರೆ, ಆಗ "ಮೋದಿ ಯುದ್ಧ" ಎಂಬ ಆರೋಪವನ್ನು ಭಾರತ ಎದುರಿಸುವುದು ಅನಿವಾರ್ಯವಾಗುತ್ತದೆ.

ತಾವೂ ಮತ್ತು ಅಮೆರಿಕವು ಶಾಂತಿಗಾಗಿ ಹೋರಾಟ ನಡೆಸುತ್ತಿದೆ ಎಂಬುದನ್ನು ಟ್ರಂಪ್ ಬಿಂಬಿಸಬೇಕಾಗಿದೆ. ಉಕ್ರೇನನ್ನು ಪಾಶ್ಚಿಮಾತ್ಯ ಮಿಲಿಟರಿ ಮೈತ್ರಿಕೂಟವಾದ ನ್ಯಾಟೋಗೆ ಸೇರಿಸಿಕೊಳ್ಳುವುದಾಗಿ ಜೋ ಬಿಡೆನ್ ಆಡಳಿತ ಪಟ್ಟು ಹಿಡಿದಿದ್ದರಿಂದಲೇ ಯುದ್ಧ ಪ್ರಾರಂಭವಾಯಿತು ಎಂಬ ನಿರೂಪಣೆಯನ್ನು ಅಮೆರಿಕವು ಸದ್ದಿಲ್ಲದೆ ಹೂತುಹಾಕಿದೆ. ಹೀಗೆ ಹೊಸಕಿಹಾಕಿದ ನಿರೂಪಣೆಯು ಯುದ್ಧಕ್ಕೆ ಅಮೆರಿಕವೇ ಏಕೈಕ ಕಾರಣ ಎಂದು ಹೇಳಬಹುದು.

ರಷ್ಯವನ್ನು ಕಾಡಿದ ನ್ಯಾಟೋ ಸದಸ್ಯತ್ವದ ಗುಮ್ಮ

ಇನ್ನೇನು ಯುದ್ಧ ಆರಂಭವಾಗುವುದಕ್ಕೆ ಕೆಲವು ವಾರಗಳಿರುವಾಗ ಉಕ್ರೇನನ್ನು ನ್ಯಾಟೋಗೆ ಯಾಕೆ ಸೇರಿಸಿಕೊಳ್ಳಬೇಕು ಎಂಬುದನ್ನು ಪ್ರತಿಪಾದಿಸಲು ಅಮೆರಿಕವು ತನ್ನ ಐರೋಪ್ಯ ಮಿತ್ರ ರಾಷ್ಟ್ರಗಳೊಂದಿಗೆ ಕೈಜೋಡಿಸಿತ್ತು. ಉಕ್ರೇನ್-ನಲ್ಲಿ ಅಂದರೆ, ರಷ್ಯಾದ ಗಡಿಯ ಮಗ್ಗುಲಲ್ಲೇ ನ್ಯಾಟೋ ಠಿಕಾಣಿ ಹೂಡುವುದು ರಷ್ಯಾದ ಭದ್ರತಾ ಹಿತಾಸಕ್ತಿಗಳಿಗೆ ಗಂಡಾಂತರಕಾರಿ ಎಂದು ಪುಟಿನ್ ಎಚ್ಚರಿಸಿದರು. ಸೋವಿಯತ್ ಒಕ್ಕೂಟದ ಪತನವನ್ನು ಕಂಡಿದ್ದ ಪುಟಿನ್, ರಷ್ಯಾ ಕೂಡ ಇದೇ ರೀತಿ ವಿಭಜನೆ ಹೊಂದುವುದು ಅವರಿಗೆ ಬೇಕಾಗಿರಲಿಲ್ಲ ಎಂಬುದು ಯಾರಿಗಾದರೂ ಅರ್ಥವಾಗುತ್ತದೆ. ಆದರೆ ಅಮೆರಿಕವು ಪುಟಿನ್ ಎಚ್ಚರಿಕೆಗಳಿಗೆ ಕಿಮ್ಮತ್ತು ನೀಡಲಿಲ್ಲ. ಉಕ್ರೇನ್-ಗೆ ಇನ್ನೇನು ನ್ಯಾಟೋ ಸದಸ್ಯತ್ವ ಸಿಗುವುದು ನಿಶ್ಚಿತವೆಂದು ತೋರಿದಾಗಲಷ್ಟೇ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿತು.

ಯುದ್ಧದ ಆರಂಭದ ದಿನಗಳಲ್ಲಿ ಉಕ್ರೇನ್ ಮತ್ತು ರಷ್ಯಾದ ತಂಡಗಳ ನಡುವೆ ತಟಸ್ಥ ಪ್ರದೇಶದಲ್ಲಿ ಶಾಂತಿ ಮಾತುಕತೆಗಳು ನಡೆದವು. ಇದರಲ್ಲಿ ತಕ್ಕಮಟ್ಟಿನ ಪ್ರಗತಿ ಕಂಡುಬಂದಾಗ, ಅಂದಿನ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ನೇತೃತ್ವದ ಪಾಶ್ಚಿಮಾತ್ಯ ಶಕ್ತಿಗಳು, ಯಾವುದೇ ಶಾಂತಿ ಒಪ್ಪಂದ ಮಾಡಿಕೊಳ್ಳದಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಒಪ್ಪಿಸುವಲ್ಲಿ ಸಫಲರಾದರು ಎಂದು ತಿಳಿದುಬಂದಿದೆ.

ಯುದ್ಧ ಮುಂದುವರಿಸಿದರೆ ಶಸ್ತ್ರಾಸ್ತ್ರ ಹಣಕಾಸಿನ ನೆರವು ಮತ್ತು ಇತರ ಲಾಜಿಸ್ಟಿಕಲ್ ಬೆಂಬಲ ನೀಡುವುದಾಗಿ ಝೆಲೆನ್ಸ್ಕಿ ಅವರಿಗೆ ಭರವಸೆ ನೀಡಲಾಯಿತು. ಅಂದಿನಿಂದ ಯುದ್ಧ ಇನ್ನಷ್ಟು ತೀವ್ರತೆಯನ್ನು ಪಡೆಯಿತು. ಆದರೆ ಈಗ ಟ್ರಂಪ್, ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ್ದಕ್ಕೆ ಪಾಶ್ಚಿಮಾತ್ಯ ದೇಶಗಳೇ ಕಾರಣ ಎಂಬ ಕತೆಯನ್ನು ಅಳಿಸಿಹಾಕುವ ಪ್ರಯತ್ನದಲ್ಲಿ, ಭಾರತ ರಷ್ಯಾದ ತೈಲವನ್ನು ಖರೀದಿಸುವ ಮೂಲಕ ಯುದ್ಧವನ್ನು ಮುಂದುವರಿಸಲು ಸಹಾಯ ಮಾಡಿದೆ ಎಂಬಂತೆ ಬಿಂಬಿಸುತ್ತಿದ್ದಾರೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಯುದ್ಧಕ್ಕೆ ಮುಖ್ಯ ಕಾರಣವಾದ ಸಂಗತಿಗೆ ಸಂಬಂಧಿಸಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಹೊಸ ಕಥೆಯನ್ನು ಸೃಷ್ಟಿಸುತ್ತಿದ್ದಾರೆ.

ಧಮ್ಕಿ ಹಾಕುವ ಟ್ರಂಪ್ ಪ್ರವೃತ್ತಿ

ಟ್ರಂಪ್ ಭಾರತದ ಮೇಲೆ ಶೇ. 50ರಷ್ಟು ಸುಂಕ ವಿಧಿಸಿದ ಹಿನ್ನೆಲೆಯಲ್ಲಿ, ನವದೆಹಲಿಯಲ್ಲಿರುವ ಚೀನೀ ರಾಯಭಾರಿ ಕ್ಸು ಫೆಯ್ಹಾಂಗ್ ಅವರು, ಟ್ರಂಪ್ ಅವರನ್ನು "ಬೆದರಿಕೆಯೊಡ್ಡುವ ಮನುಷ್ಯ" ಎಂದು ಕರೆದಿದ್ದಾರೆ. ರಷ್ಯಾ ತೈಲವನ್ನು ಚೀನಾ ಮತ್ತು ಐರೋಪ್ಯ ಒಕ್ಕೂಟ ಕೂಡ ಖರೀದಿಸುತ್ತಿದ್ದರೂ ಅವುಗಳ ಮೇಲೆ ಇದೇ ರೀತಿಯ ಆರೋಪವನ್ನು ಟ್ರಂಪ್ ಮಾಡಿಲ್ಲ. ಇದು ಭಾರತಕ್ಕೆ ಒಗಟಾಗಿದೆ. ಆದರೆ ಇದು ಒಂದು ರೀತಿಯಲ್ಲಿ ‘ಧಮ್ಕಿ ಹಾಕುವವರ’ ಸಾಮಾನ್ಯ ನಡವಳಿಕೆ. ಅವರು ದುರ್ಬಲರ ಮೇಲೆ ಗುರಿಯಿಟ್ಟು, ಪ್ರಬಲರಿಂದ ದೂರವಿರುತ್ತಾರೆ. ಆದ್ದರಿಂದ, ಒಂದು ವೇಳೆ ಟ್ರಂಪ್ ಶಾಂತಿ ಒಪ್ಪಂದ ಮಾಡಿಸುವಲ್ಲಿ ವಿಫಲವಾದರೆ, ಈ ಧಮಕಿ ಹಾಕುವವನ ಕೋಪ ಭಾರತದ ಮೇಲೆ ತೀವ್ರ ಪರಿಣಾಮ ಬೀರುವುದು ನಿಶ್ಚಿತ.

ಈ ಪ್ರಕರಣದಲ್ಲಂತೂ ಮೋದಿ ಅವರ ಕಡೆಗೆ ಬೊಟ್ಟು ನೆಟ್ಟಿರುವುದು ಪೂರ್ತಿಗೆ ಪೂರ್ತಿ ಟ್ರಂಪ್ ಅವರದ್ದೇ ಕೆಲಸ. ಆದರೆ, ಅವರು ಅಮೆರಿಕದ ಅಧ್ಯಕ್ಷರಾಗಿ ಇದನ್ನು ಮಾಡುತ್ತಿದ್ದಾರೆ ಎಂಬುದನ್ನು ನಾವು ಮರೆಯಬಾರದು. ಟ್ರಂಪ್ ನಮಗೆ ಪಾಷಂಡಿಯಾಗಿ ಕಾಣಬಹುದು, ಆದರೆ ಹಿಂದೆ ಅಧಿಕಾರದಲ್ಲಿದ್ದವರೂ ಅಮೆರಿಕದ ಹಾದಿಗೆ ಅಡ್ಡ ಬಂದವರ ಮೇಲೆ ಆರೋಪಗಳನ್ನು ಹೊರಿಸುವ, ಬೆದರಿಸುವ ಮತ್ತು ನೇರ ದಾಳಿಗೆ ಇಳಿಯುವುದರಲ್ಲಿ ಹಿಂದೆ ಬಿದ್ದವರೇನೂ ಅಲ್ಲ.

ಅಮೆರಿಕ ಬಲೆಯಲ್ಲಿ ಸಿಕ್ಕ ಸದ್ದಾಂ ಕಥೆ

ಅಮೆರಿಕ ಒಡ್ಡಿದ ಪೈಶಾಚಿಕ ಬಲೆಯಲ್ಲಿ ಸಿಕ್ಕಿಹಾಕಿಕೊಂಡ ಇರಾಕಿನ ಮಾಜಿ ಅಧ್ಯಕ್ಷ ಸದ್ದಾಂ ಹುಸೇನ್ ಅವರ ಪ್ರಕರಣವನ್ನೇ ತೆಗೆದುಕೊಳ್ಳಿ. 1979ರಲ್ಲಿ ಅಮೆರಿಕದ ಸಿಐಎ (ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ) ನಡೆಸಿದ ಕ್ಷಿಪ್ರ ಕ್ರಾಂತಿಯಿಂದಾಗಿ ಸದ್ದಾಂ ಅಧಿಕಾರಕ್ಕೆ ಬಂದರು. ಅವರನ್ನು ಬಾಗ್ದಾದ್-ನಲ್ಲಿರುವ ಅಮೆರಿಕದ ಮನಷ್ಯ ಎಂದೇ ಪರಿಗಣಿಸಲಾಗಿತ್ತು. ಆದರೆ, ಮುಂದಿನ ಕೆಲವೇ ವರ್ಷಗಳಲ್ಲಿ ಅದು ಲಗಾಟಿ ಹೊಡೆಯಿತು. ಅವರು ಇರಾಕಿನ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡುವಂತಹ ನೀತಿಗಳನ್ನು ಯಾವಾಗ ರೂಪಿಸಲು ಪ್ರಯತ್ನಿಸಿದರೋ ಆವಾಗಿನಿಂದ ಅಮೆರಿಕದ ವಿಶ್ವಾಸ ಕಳೆದುಕೊಂಡರು.

ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರ ಸೌದಿ ಅರೇಬಿಯಾ ಪ್ರಚೋದನೆಗೆ ಒಳಗಾದ ಸದ್ದಾಂ 1980ರಲ್ಲಿ ಇರಾನ್ ಜೊತೆ ಯುದ್ಧಕ್ಕಿಳಿದರು. ಆದರೆ ಅದರಿಂದ ಸದ್ದಾಂಗೆ, ಟೆಹ್ರಾನ್ ದುರ್ಬಲವಲ್ಲ ಎಂಬುದು ಅರಿವಾಯಿತು. ಎಂಟು ವರ್ಷಗಳ ಈ ಸುದೀರ್ಘ ಯುದ್ಧ ಮುಗಿಯುವ ಹೊತ್ತಿಗೆ, ಸದ್ದಾಂ ರೊನಾಲ್ಡ್ ರೇಗನ್ ಮತ್ತು ನಂತರ ಜಾರ್ಜ್ ಬುಷ್ (ಹಿರಿಯ) ಅವರ ಕೆಂಗಣ್ಣಿಗೆ ಗುರಿಯಾದರು. ಸದ್ದಾಂ ಕುವೈಟ್ ಮೇಲೆ ದಂಡೆತ್ತಿ ಹೋದಾಗ, ಮೊದಲ ಕೊಲ್ಲಿ ಯುದ್ಧ ಶುರುವಾಯಿತು. ಇದರಿಂದ ಅಮೆರಿಕ ಜೊತೆಗಿನ ಸದ್ದಾಂ ಸಂಬಂಧ ಸಂಪೂರ್ಣ ಹದಗೆಟ್ಟು ಹೋಯಿತು. 2001ರಲ್ಲಿ, 9/11ರ ದಾಳಿಯ ನಂತರ, ಇರಾಕಿ ಅಧ್ಯಕ್ಷರನ್ನು ಪದಚ್ಯುತಗೊಳಿಸಲು ಒಂದು ಕಾರಣವನ್ನು ಸೃಷ್ಟಿಸುವಲ್ಲಿ ಜಾರ್ಜ್ ಡಬ್ಲ್ಯೂ ಬುಷ್ ಆಡಳಿತ ಯಶಸ್ವಿಯಾಯಿತು.

ಅಲ್-ಖೈದಾ ನಂಟು ಎಂಬ ಶುದ್ಧ ಕಟ್ಟುಕಥೆ

ಈಗ "ಮೋದಿ ಯುದ್ಧ" ಎಂಬ ವಿಲಕ್ಷಣ ಆರೋಪ ಮಾಡುತ್ತಿರುವ ಅಮೆರಿಕ, ಆಗಲೂ ಸದ್ದಾಂಗೆ ಅಲ್-ಖೈದಾ ಜೊತೆ ಗಂಟುಹಾಕುವ ಕಥೆಯನ್ನು ಹರಿಯಬಿಟ್ಟಿತು. ವಾಸ್ತವವಾಗಿ, ಇರಾಕಿ ಅಧ್ಯಕ್ಷರಿಗೆ ಭಯೋತ್ಪಾದಕ ಸಂಘಟನೆಯೊಂದಿಗೆ ಯಾವುದೇ ನಂಟು ಇರಲಿಲ್ಲ. ಆರಂಭದಲ್ಲಿ ಈ ಆರೋಪವನ್ನು ಅನೇಕರು ಹಾಸ್ಯಾಸ್ಪದವೆಂದು ತಳ್ಳಿಹಾಕಿದ್ದರು, ಆದರೆ ಕೆಲವೇ ತಿಂಗಳುಗಳಲ್ಲಿ ಅದಕ್ಕೆ ಮಾಧ್ಯಮಗಳಲ್ಲಿ ನಾನಾ ರಂಗು ದೊರೆಯಿತು. ಅದರಿಂದಾಗಿ ಆ ವದಂತಿಗೆ ‘ವಿಶ್ವಾಸಾರ್ಹತೆ’ಯ ಲೇಪ ಸಿಕ್ಕಿತು.

ಇರಾಕಿನ ತೈಲದ ಮೇಲೆ ಅನೇಕ ವರ್ಷಗಳಿಂದ ಕಣ್ಣಿಟ್ಟಿದ್ದ ಅಮೆರಿಕವು, ಸದ್ದಾಂ ಅವರನ್ನು ಹಲವು ರೀತಿಯಲ್ಲಿ ಕೆಣಕಿ ಹೈರಾಣು ಮಾಡಿದ ನಂತರ, ಮುಖ್ಯವಾಗಿ ಅಲ್-ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಜೊತೆಗಿನ ಅವರ ಸಂಬಂಧವನ್ನು ನೆವವಾಗಿ ಮಾಡಿಕೊಂಡು ಬಾಗ್ದಾದ್ ಮೇಲೆ ಆಕ್ರಮಣಕ್ಕೆ ಮುಂದಾಯಿತು. ಒಮ್ಮೆ ಅಮೆರಿಕ ತನ್ನ ಕೆಲಸ ಮುಗಿಸಿದ ನಂತರ, ಅದರ ಕಥೆ ಶುದ್ಧ ಸುಳ್ಳು ಎಂಬುದು ಜಗತ್ತಿಗೆ ಅರಿವಾಯಿತು. ಆದರೆ ಆ ಹೊತ್ತಿಗೆ ಕಾಲ ಮಿಂಚಿಹೋಗಿತ್ತು.


ಕಳೆದ ಕೆಲವು ವರ್ಷಗಳಿಂದ ಅಮೆರಿಕ ತನ್ನ ಸ್ವಂತ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಪದೇ ಪದೇ ಸಾಬೀತುಪಡಿಸಿದೆ. ಹಾಗಂತ ಇತರ ರಾಷ್ಟ್ರಗಳು ತಮ್ಮ ಹಿತಾಸಕ್ತಿಗಾಗಿ ಕೆಲಸ ಮಾಡುವುದನ್ನು ಅದು ಎಂದಿಗೂ ಸಹಿಸಿಕೊಳ್ಳುವುದಿಲ್ಲ. ತನ್ನ ವಿವಾದಾತ್ಮಕ ಇತಿಹಾಸದ ಹೊರತಾಗಿಯೂ, ಅಮೆರಿಕದ ವರ್ತನೆಯಲ್ಲಿ ಬದಲಾವಣೆ ಉಂಟಾಗಿಲ್ಲ. ಪ್ರಜಾಪ್ರಭುತ್ವ ಮತ್ತು ಜನರ ಆಶಯಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಅದರ ನಡೆ ಇರುತ್ತದೆ ಎಂದು ಜಾಗತಿಕವಾಗಿ ಜನರು ಭಾವಿಸುತ್ತಾರೆ. ಆದರೆ ಅದು ಅದರ ಸೋಗು ಮಾತ್ರ. ಅದರ ಯಶಸ್ವಿ "ಅಮೆರಿಕನ್ ಡ್ರೀಮ್" ಕಥೆಯನ್ನು ಬಿಂಬಿಸುವ ಪ್ರಯತ್ನದಿಂದ ಇದೆಲ್ಲ ಸಾಧ್ಯವಾಗಿದೆ. ಈ ಕಥೆಯು ಸ್ವಾತಂತ್ರ್ಯ ಮತ್ತು ಆರಾಮದಾಯಕ ಜೀವನ ನಡೆಸುವ ಜನರ ಆಕಾಂಕ್ಷೆಗಳನ್ನು ದುರುಪಯೋಗಪಡಿಸಿಕೊಳ್ಳುವ ಒಂದು ನಿರ್ಲಜ್ಜ ಪ್ರಯತ್ನವಲ್ಲದೇ ಇನ್ನೇನೂ ಅಲ್ಲ.

ಕಣ್ಣಿಗೆ ಕಟ್ಟುವ ಅಮೆರಿಕದ ಸಿನಿಕತೆ

ಜಗತ್ತಿನ ಬಹುತೇಕ ಮಂದಿ ಅಕ್ಷರಶಃ ‘ನರಮೇಧ’ ಎಂದೇ ಬಿಂಬಿಸುತ್ತಿರುವ ಗಾಜಾ ಮೇಲೆ ಇಸ್ರೇಲ್ ಎರಡು ವರ್ಷಗಳಿಂದ ನಡೆಸುತ್ತಿರುವ ದಾಳಿಯ ವಿಚಾರದಲ್ಲಿ ಅಮೆರಿಕದ ಸಿನಿಕತನ ಢಾಳಾಗಿ ಕಾಣುತ್ತಿದೆ. ಇಸ್ರೇಲ್ನ ನಿರಂತರ ವೈಮಾನಿಕ ದಾಳಿಗಳಿಂದಾಗಿ, ನಾಗರಿಕರು, ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡು ಸುಮಾರು 62,000 ಜನ ಸಾವನ್ನಪ್ಪಿದ್ದಾರೆ. ಎಲ್ಲಕ್ಕಿಂತ ಕೆಟ್ಟ ಸಂಗತಿ ಎಂದರೆ, ಇಸ್ರೇಲ್ ಕೃತಕ ಕ್ಷಾಮ ಸೃಷ್ಟಿಸಿ ಅನೇಕರನ್ನು ಹಸಿವಿನಿಂದ ಸಾಯುವಂತೆ ಮಾಡುತ್ತಿದೆ ಎಂದು ಆರೋಪಿಸಲಾಗಿದೆ. ಇಡೀ ಜಗತ್ತೇ ಇದರಿಂದ ಆಘಾತಗೊಂಡಿದೆ.

ಆದರೂ ತನ್ನನ್ನು ತಾನು ನಿಜವಾದ ಸೂಪರ್ ಪವರ್ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ವೀಟೋ ಅಧಿಕಾರ ಹೊಂದಿರುವ ಸದಸ್ಯ ಎಂದು ಗೊತ್ತಿದ್ದರೂ ಅಮೆರಿಕ ಕಣ್ಣು ಮುಚ್ಚಿ ಕುಳಿತಿದೆ. ಜೋ ಬಿಡೆನ್ ಆಡಳಿತ ಮತ್ತು ಈಗಿನ ಟ್ರಂಪ್ ಆಡಳಿತ ಎರಡೂ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಇಸ್ರೇಲ್ ಕುರಿತ ಯಾವುದೇ ನಿರ್ಣಯವನ್ನು ‘ಇಸ್ರೇಲ್‌ಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿದೆ’ ಎಂದು ಹೇಳುತ್ತ ಪದೇ ಪದೇ ವೀಟೋ ಚಲಾಯಿಸಿವೆ. ಕಳೆದ ಸತತ ಎಂಟು ದಶಕಗಳಿಂದ ಅಮೆರಿಕ ಇದೇ ಕಥೆ ಹೆಣೆದು ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶಗಳಲ್ಲಿ ಇಸ್ರೇಲ್ ನಡೆಸಿದ ಅನಾಚಾರಗಳನ್ನು ಬೆಂಬಲಿಸುತ್ತ ಬಂದಿದೆ. ಇದು ಅಂತರರಾಷ್ಟ್ರೀಯ ಕಾನೂನಿಗೆ ವಿರುದ್ಧ ಎನ್ನುವುದು ಅದಕ್ಕೆ ತಿಳಿಯದ ಸಂಗತಿಯೇನೂ ಅಲ್ಲ.

ಅಮೆರಿಕವು ಭದ್ರತಾ ಮಂಡಳಿಯಲ್ಲಿ ನಿಯಮಿತವಾಗಿ ಬಳಸುವ ತನ್ನ ನಿರೂಪಣೆ ಮತ್ತು ವೀಟೋ ಅಧಿಕಾರವನ್ನು ಪ್ರಶ್ನಿಸಿ ಅಥವಾ ತಡೆಯುವ ಮೂಲಕ ಇಸ್ರೇಲ್ ರಕ್ಷಣೆಗೆ ನಿಲ್ಲಲು ಬೇರೆ ಯಾವುದೇ ರಾಷ್ಟ್ರ ಅಥವಾ ಗುಂಪಿಗೆ ಸಾಧ್ಯವಾಗಿಲ್ಲ.

ಇರಾನ್ ಮೇಲೆ ಅಣು ಬಾಂಬ್ ಸವಾರಿ

ಅಮೆರಿಕದ ಇಂತಹ ಕಥೆಗಳಿಗೆ ಗುರಿಯಾದ ಮತ್ತೊಂದು ದೇಶವೆಂದರೆ ಇರಾನ್. ಯಾವಾಗ ಸದ್ದಾಂ ಹುಸೇನ್ ಪದಚ್ಯುತಗೊಂಡರೋ, ಅಂದಿನಿಂದ ಹೊಸ ಕಥೆ ಕಟ್ಟಲು ಶುರುಮಾಡಿತು. ಇರಾನ್ ಸರ್ಕಾರವೇನಾದರೂ ನೆರೆಯ ಇರಾಕ್ ಮೇಲೆ ಹಿಡಿತ ಸಾಧಿಸಿದರೆ ಅಮೆರಿಕದ ನಿಯಂತ್ರಣಕ್ಕೆ ಕುತ್ತು ಬರುತ್ತದೆ ಎಂದು ಅರಿತ ಅಮೆರಿಕ, 2004ರಲ್ಲಿ ಇರಾನ್ ಪರಮಾಣು ಬಾಂಬ್ ನಿರ್ಮಿಸಲು ಹುನ್ನಾರ ನಡೆಸಿದೆ ಎಂಬ ಕಥೆಯನ್ನು ಹರಿಯಬಿಟ್ಟಿತು.

ಆದರೆ ವಿಪರ್ಯಾಸವೆಂದರೆ, ಈ ಹಿಂದಿನ ಅಮೆರಿಕದ ಆಡಳಿತವೇ ಪರಮಾಣು ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸಲು ಇರಾನ್ಗೆ ತನ್ನ ರಿಯಾಕ್ಟರ್ ಕೊಡುಗೆ ನೀಡಿತ್ತು. ತನ್ನ ಪರಮಾಣು ಕಾರ್ಯಕ್ರಮ ಶಾಂತಿಯುತ ಉದ್ದೇಶಗಳಿಗಾಗಿ ಮಾತ್ರ ಎಂದು ಇಸ್ಲಾಮಿಕ್ ಆಡಳಿತ ಬಾಯಿ ಬಡಿದುಕೊಂಡರೂ, ಇರಾನ್ ಶೀಘ್ರವೇ ಪರಮಾಣು ಬಾಂಬ್ ಪರೀಕ್ಷಿಸಲಿದೆ ಎಂಬ ಅಮೆರಿಕದ ಕಥೆ ಈಗಲೂ ಚಾಲ್ತಿಯಲ್ಲಿದೆ.

ಇಂತಹ ಕಥೆಯ ಫಲವಾಗಿಯೇ, ಇತ್ತೀಚೆಗೆ ಅಮೆರಿಕವು ಆ ದೇಶದ ಎರಡು ರಿಯಾಕ್ಟರ್ಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿಲ್ಲ ಎಂದು ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (IAEA)ಯ ಹಿರಿಯ ಅಧಿಕಾರಿಗಳು ಪದೇ ಪದೇ ಹೇಳಿದ್ದರೂ ಅದಕ್ಕೆ ಚಿಕ್ಕಾಸಿನ ಬೆಲೆ ಸಿಕ್ಕಿಲ್ಲ.

ಆದರೆ, ಅಮೆರಿಕದ ಈ ಕಥೆಯ ಪರಿಣಾಮ ಏನಾಯಿತು ಎಂಬುದನ್ನು ಗಮನಿಸಿ; ಕಳೆದ ಎರಡು ದಶಕಗಳ ಅವಧಿಯಲ್ಲಿ ಇರಾನ್ ಪದೇ ಪದೇ ಆರ್ಥಿಕ ದಿಗ್ಬಂಧನಕ್ಕೆ ಒಳಗಾಗಬೇಕಾಯಿತು, ರಾಜತಾಂತ್ರಿಕವಾಗಿ ಅದನ್ನು ಹೊರಗಿಟ್ಟು ಹೈರಾಣು ಮಾಡಲಾಯಿತು.

ಅಮೆರಿಕ ಅಧ್ಯಕ್ಷ ಎಂಬ ಅಹಂಗೆ ಬಿದ್ದ ಪೆಟ್ಟು

ಅಮೆರಿಕ ಈಗ ಹೆಣೆದಿರುವ ಹೊಸ ಕಥೆ "ಮೋದಿ ಯುದ್ಧ". ಇದು ಭಾರತದ ರಫ್ತಿನ ಮೇಲೆ ವಿಧಿಸಿದ ಶೇ. 50ರ ಸುಂಕಕ್ಕೆ ಭಾರತ ನೀಡಿದ ಪ್ರತಿಕ್ರಿಯೆಯೇ ಕಾರಣವಾಗಿರಬಹುದು. ಇತ್ತೀಚೆಗೆ ಭಾರತ-ಪಾಕಿಸ್ತಾನದ ನಡುವಿನ ಕದನ ವಿರಾಮದ ಬಗ್ಗೆ ವಿಶ್ವದ ಯಾವ ನಾಯಕರೂ ತಮ್ಮೊಂದಿಗೆ ಮಾತನಾಡಿಲ್ಲ ಎಂದು ಭಾರತದ ಪ್ರಧಾನಿ ಸಂಸತ್ತಿನಲ್ಲಿ ಹೇಳುವ ಮೂಲಕ, ಟ್ರಂಪ್ ಎರಡೂ ದೇಶಗಳ ನಡುವಿನ ಶಾಂತಿ ಸ್ಥಾಪಕ ಎಂದು ಪದೇ ಪದೇ ಹೇಳುತ್ತಿರುವುದು ಸುಳ್ಳು ಎಂದು ಬಿಂಬಿಸಿದರು. ಅಮೆರಿಕದ ಅಧ್ಯಕ್ಷರಿಗೆ ದೊಡ್ಡ ಅಹಂ ಇದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾದ್ದರಿಂದ, ಭಾರತದ ಈ ನಿರಾಕರಣೆಯಿಂದ ಅವರ ಅಹಂಗೆ ಪೆಟ್ಟು ಬಿದ್ದಿರುವುದು ಸ್ಪಷ್ಟ.

ಎಲ್ಲಕ್ಕಿಂತ ಮುಖ್ಯವಾಗಿ, ಭಾರತವು ಟ್ರಂಪ್ ಅವರ ಹೇಳಿಕೆಯನ್ನು ಬೆಂಬಲಿಸಲು ನಿರಾಕರಿಸಿದ್ದರಿಂದ ಶಾಂತಿಗಾಗಿ ನೊಬೆಲ್ ಬಹುಮಾನ ಗೆಲ್ಲುವ ಅವರ ಕನಸು ಭಗ್ನವಾಯಿತು. ಟ್ರಂಪ್ ಅವರನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದರ ಪ್ರಕಾರ, "ನಾನು ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ನಿಲ್ಲಿಸಿದ್ದಕ್ಕಾಗಿ ನನಗೆ ನೊಬೆಲ್ ಶಾಂತಿ ಬಹುಮಾನ ಸಿಗುವುದಿಲ್ಲ. ಇಲ್ಲ, ನಾನು ಏನೇ ಮಾಡಿದರೂ ನನಗೆ ನೊಬೆಲ್ ಶಾಂತಿ ಬಹುಮಾನ ಸಿಗುವುದಿಲ್ಲ" ಎಂದು ಹೇಳಿದ್ದನ್ನು ಗಮನಿಸಬಹುದು.

ಇವೆಲ್ಲ ಸಾಲದು ಎನ್ನುವಂತೆ ಅಮೆರಿಕದ ಮಾರುಕಟ್ಟೆಗೆ ಭಾರತದ ಕೃಷಿ ಕ್ಷೇತ್ರವನ್ನು ಮುಕ್ತಗೊಳಿಸಬೇಕು ಎಂಬ ಟ್ರಂಪ್ ಬೇಡಿಕೆಯನ್ನು ಹೊಸದಿಲ್ಲಿ ತಳ್ಳಿ ಹಾಕಿತು.

ಈ ಎಲ್ಲ ಘಟನೆಗಳಿಂದ ಟ್ರಂಪ್ ಅವರ ಆತ್ಮಗೌರವಕ್ಕೆ ಆದ "ಗಾಯ" ದೊಡ್ಡದು. ಆ ಕಾರಣದಿಂದಲೇ ಅವರ ತಂಡವು ಭಾರತದ ಮೇಲೆ ಶೇ. 50ರಷ್ಟು ಸುಂಕ ವಿಧಿಸಿದ್ದೂ ಅಲ್ಲದೆ "ಮೋದಿ ಯುದ್ಧ" ಎಂಬ ಹೊಸ ಕಥೆಯನ್ನು ಹುಟ್ಟುಹಾಕಿದೆ. ಇದನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಕಷ್ಟಗಳು ಎದುರಾಗುವ ಸಾಧ್ಯತೆಯಿದೆ.

ಟ್ರಂಪ್ ಈ ವರ್ಷದ ಕೊನೆಯಲ್ಲಿ ಕ್ವಾಡ್ ಶೃಂಗಸಭೆ ನಡೆಸಲಿದ್ದಾರೆ. ಅದಕ್ಕೆ ತಾನು ಬರುವುದಿಲ್ಲ ಎಂದು ಭಾರತ ಹೇಳಿದ್ದಾಗಿ ವರದಿಯಾಗಿದೆ. ಇದು ನಿಜವೇ ಆಗಿದ್ದಲ್ಲಿ, ಮೋದಿ ಮತ್ತು ಆಡಳಿತಾರೂಢ ಎನ್ಡಿಎ ಸರ್ಕಾರಕ್ಕೆ, ವಾಷಿಂಗ್ಟನ್ನೊಂದಿಗಿನ ಈ ಹೊಸ ಕಥೆ ಕಠಿಣ ಸಂಘರ್ಷಕ್ಕೆ ದಾರಿ ಮಾಡಿಕೊಡುವಂತೆ ಕಾಣುತ್ತಿದೆ.

Read More
Next Story