ಟ್ರಂಪ್ ‘ಇಂಧನ ನುಡಿ’- ಮೋದಿ ಮಾತು ಕೊಟ್ಟಿದ್ದು ನಿಜವೇ: ಉತ್ತರಿಸದೇ ಉಳಿದ ಪ್ರಶ್ನೆಗಳು
x
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವ್ಯಾಪಾರ, ಭೂರಾಜಕೀಯ ವಿಷಯಗಳು ಮತ್ತು ವೈಯಕ್ತಿಕ ಸಂಬಂಧಗಳು ಸೇರಿದಂತೆ ನಾನಾ ವಿಷಯಗಳ ಬಗ್ಗೆ ಭಾರತದ ಮೇಲೆ ಹೊಂದಿರುವ ನಿಲುವುಗಳು ಆಗಾಗ ಬದಲಾಗುತ್ತಲೇ ಇರುತ್ತವೆ.

ಟ್ರಂಪ್ ‘ಇಂಧನ ನುಡಿ’- ಮೋದಿ ಮಾತು ಕೊಟ್ಟಿದ್ದು ನಿಜವೇ: ಉತ್ತರಿಸದೇ ಉಳಿದ ಪ್ರಶ್ನೆಗಳು

ಅಮೆರಿಕ ಅಧ್ಯಕ್ಷರ ಹೇಳಿಕೆ ಮೋದಿ ಅವರಿಗೆ ಮುಜುಗರ ತಂದೊಡ್ಡದೇ ಇರಲು ಸಾಧ್ಯವಿಲ್ಲ; ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆಯಲ್ಲಿ ಟ್ರಂಪ್ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸಲಾಗಿಲ್ಲ.


Click the Play button to hear this message in audio format

“ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದಿಂದ ತೈಲ ಖರೀದಿಸುವುದಿಲ್ಲಎಂದು "ಭರವಸೆ" ನೀಡಿದ್ದಾರೆ. ಇದೊಂದು ದೊಡ್ಡ ಹೆಜ್ಜೆ,” ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರರ ಸಾಮಾನ್ಯ ಹೇಳಿಕೆಯ ಮೂಲಕ ಸರ್ಕಾರವು ಪ್ರತಿಕ್ರಿಯೆ ನೀಡಿದೆ.

ಟ್ರಂಪ್ ಅವರು ಅ.15ರಂದು ಶ್ವೇತಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮುಂದುವರಿದು ಮಾತನಾಡಿ, ಭಾರತವು ತಕ್ಷಣವೇ ತೈಲ ಖರೀದಿಸುವುದನ್ನು ನಿಲ್ಲಿಸಲು ಸಾಧ್ಯವಿಲ್ಲ ಇದಕ್ಕೆ ಇನ್ನೊಂದಷ್ಟು ಪ್ರಕ್ರಿಯೆಯ ಅಗತ್ಯವಿದೆ, ಆದರೆ ಎಲ್ಲಕ್ಕಿಂತ ಮುಖ್ಯವಾಗಿ, ಆ ಪ್ರಕ್ರಿಯೆ ಶೀಘ್ರದಲ್ಲೇ ಮುಗಿಯಲಿದೆ" ಎಂದು ಅವರು ದೃಢ ಮಾತುಗಳಲ್ಲಿ ತಿಳಿಸಿದರು.

ಅಮೆರಿಕದ ಅಧ್ಯಕ್ಷರಿಗೆ ಭಾರತದ ಕುರಿತು ಎರಡು ಪ್ರಶ್ನೆಗಳನ್ನು ಕೇಳಲಾಯಿತು. ಮೊದಲನೆಯದಾಗಿ, ವಿರಳ ಲೋಹದ (rare earths) ರಫ್ತಿನ ಮೇಲೆ ಚೀನಾ ವಿಧಿಸಿರುವ ನಿರ್ಬಂಧಗಳ ಹಿನ್ನೆಲೆಯಲ್ಲಿ ಈ ಪ್ರಶ್ನೆ ಕೇಳಲಾಗಿತ್ತು, ಮತ್ತು ಈ ಸನ್ನಿವೇಶದಲ್ಲಿ, ಟ್ರಂಪ್ ಭಾರತವನ್ನು "ವಿಶ್ವಾಸಾರ್ಹ" ಎಂದು ಪರಿಗಣಿಸಿದ್ದಾರೆಯೇ ಮತ್ತು ಅವರು ಕೌಲಾಲಂಪುರದಲ್ಲಿ ಮೋದಿ ಅವರನ್ನು ಭೇಟಿಯಾಗುತ್ತಾರೆಯೇ ಎಂದು ಕೇಳಲಾಗಿತ್ತು. ASEAN ಶೃಂಗಸಭೆ ಮತ್ತು ಸಂಬಂಧಿತ ಸಭೆಗಳಿಗಾಗಿ ಉಭಯ ನಾಯಕರು ಮಲೇಷಿಯಾದ ರಾಜಧಾನಿಯಲ್ಲಿ ಭೇಟಿಯಾಗಲಿದ್ದಾರೆ. ಇವು ಅ. 26 ರಿಂದ 28 ರವರೆಗೆ ನಡೆಯಲಿವೆ.

ಈ ಪ್ರಶ್ನೆಗೆ ಉತ್ತರಿಸಿದ ಟ್ರಂಪ್ ಅವರು, ಮೋದಿ ಒಬ್ಬ ಶ್ರೇಷ್ಠ ವ್ಯಕ್ತಿ ಎಂದು ಹೇಳಿದರಲ್ಲದೆ ಅವರ ನಡುವೆ ಭೇಟಿ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದರು. ಆದರೂ ಅವರು ಅದನ್ನು ಸ್ಪಷ್ಟ ಮಾತುಗಳಲ್ಲಿ ಹೇಳಲಿಲ್ಲ. ಅಲ್ಲಿಂದ ಮುಂದುವರಿದ ಅಧ್ಯಕ್ಷರು, ಮೋದಿ ಅವರು "ಇಂದು" ಭಾರತವು ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುತ್ತದೆ ಎಂದು ನನಗೆ ಭರವಸೆ ನೀಡಿದ್ದಾರೆ ಎಂದರು.

ಟ್ರಂಪ್ ಅವರಿಗೆ ಕೇಳಲಾದ ಎರಡನೇ ಪ್ರಶ್ನೆಯು, ಭಾರತಕ್ಕೆ ಅಮೆರಿಕ ರಾಯಭಾರಿ (ನಾಮನಿರ್ದೇಶಿತ) ಮತ್ತು ದಕ್ಷಿಣ ಮತ್ತು ಮಧ್ಯ ಏಷ್ಯಾದ ವಿಶೇಷ ದೂತ ಸರ್ಜಿಯೋ ಗೋರ್ ಅವರು ತಮ್ಮ ಇತ್ತೀಚಿನ ಭಾರತ ಭೇಟಿಯ ಬಗ್ಗೆ ಏನು ವರದಿ ಮಾಡಿದ್ದಾರೆ ಎಂಬುದಕ್ಕೆ ಸಂಬಂಧಿಸಿದ್ದಾಗಿತ್ತು. ಈ ಭೇಟಿಯ ಸಮಯದಲ್ಲಿ ಗೋರ್ ಅವರು ಮೋದಿಯವರನ್ನು ಭೇಟಿ ಮಾಡಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಭಾರತವು ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ನಿಲ್ಲಿಸುತ್ತದೆ ಎಂದು ಮತ್ತೆ ಪುನರಾವರ್ತಿಸಿದರು. ಆದರೆ, ಮೋದಿ ಅವರು ಒಬ್ಬ ಒಳ್ಳೆಯ ಸ್ನೇಹಿತ, ಅವರು ಟ್ರಂಪ್ ಅವರನ್ನು "ಪ್ರೀತಿಸುತ್ತಾರೆ" ಎಂದೂ ಹೇಳಿದರು.

ಈ ಹೇಳಿಕೆ ಮೋದಿಗೆ ಕಂಟಕ ತರದಿರಲಿ

ಹಾಗೆ ಬಹಿರಂಗಪಡಿಸಿದ ನಂತರ, ಟ್ರಂಪ್ ಅವರು ತಾವು ಬಹಿರಂಗಪಡಿಸಿದ ವಿಷಯವು ಮೋದಿಯವರ ರಾಜಕೀಯ ಜೀವನವನ್ನು ನಾಶಪಡಿಸಬಾರದು ಎಂದು ಹೇಳಿದರು. ಮೋದಿ ಅವರಿಗಿಂತ ಮೊದಲು ಭಾರತದಲ್ಲಿ ಅನೇಕ ಮಂದಿ ಪ್ರಧಾನಿಗಳು ಅಲ್ಪಾವಧಿಗೆ ಅಧಿಕಾರದಲ್ಲಿದ್ದ ಸಂಗತಿಯನ್ನೂ ಅವರು ಹಂಚಿಕೊಂಡರು.

ಈ ಮಾಧ್ಯಮಗೋಷ್ಠಿಯಲ್ಲಿ ಇನ್ನೊಂದು ಪ್ರಶ್ನೆಗೆ ಉತ್ತರಿಸುತ್ತ, ತಮ್ಮ ಮಧ್ಯಸ್ಥಿಕೆಯಿಂದ ಭಾರತ-ಪಾಕಿಸ್ತಾನದ ಮಿಲಿಟರಿ ಕ್ರಮವನ್ನು ನಿಲ್ಲಿಸಿದೆ ಎಂದೂ ಟ್ರಂಪ್ ಪುನರುಚ್ಚರಿಸಿದರು. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಶ್ವೇತಭವನಕ್ಕೆ ಭೇಟಿ ನೀಡಿದ್ದನ್ನು ಇದೇ ಸಂದರ್ಭದಲ್ಲಿ ನೆನಪಿಸಿಕೊಂಡರು. ಷರೀಫ್ ಅವರು, “ನಾನು ಲಕ್ಷಾಂತರ ಜೀವಗಳನ್ನು ಉಳಿಸಲು ಸಹಾಯ ಮಾಡಿದ್ದೇನೆ" ಎಂದು ನನಗೆ ಹೇಳಿದ್ದಾರೆ ಎಂದು ಟ್ರಂಪ್ ಹೇಳಿಕೊಂಡರು. ಇದು ಸ್ಪಷ್ಟವಾಗಿ ಟ್ರಂಪ್ ಅವರು ಪರಮಾಣು ಯುದ್ಧವಾಗಿ ಬೆಳೆಯುವ ಸಾಧ್ಯತೆಯನ್ನು ಹೊಂದಿದ್ದ ಪರಿಸ್ಥಿತಿಯನ್ನು ನಿಲ್ಲಿಸಿದ್ದರ ಕುರಿತ ಸ್ಪಷ್ಟ ಉಲ್ಲೇಖವಾಗಿತ್ತು.

ಟ್ರಂಪ್ ಅವರ ಒತ್ತಾಯದ ಮೇರೆಗೆ, ಷರೀಫ್ ಅವರು ಅಕ್ಟೋಬರ್ 13 ರಂದು ಗಾಜಾದಲ್ಲಿ ಕದನ ವಿರಾಮದ ಸಂದರ್ಭದಲ್ಲಿ ಶರ್ಮ್-ಎಲ್-ಶೇಖ್ನಲ್ಲಿ ಅಮೆರಿಕ ಅಧ್ಯಕ್ಷರ ಪರವಾಗಿ ವಿನೀತ ಭಾವದಿಂದ ಭಾಷಣ ಮಾಡಿದ್ದರು.

ಉತ್ತರಿಸದೇ ಉಳಿದ ಪ್ರಶ್ನೆಗಳು

ಒಟ್ಟಾರೆಯಾಗಿ ಹೇಳುವುದಾದರೆ, ಶ್ವೇತಭವನದ ಮಾಧ್ಯಮಗೋಷ್ಠಿಯಲ್ಲಿ ಟ್ರಂಪ್ ಅವರ ಹೇಳಿಕೆಗಳು ಮೋದಿಯವರಿಗೆ ಮುಜುಗರ ಉಂಟುಮಾಡದಿರಲು ಸಾಧ್ಯವಿಲ್ಲ. ಅಲ್ಲದೆ, ಅವರು ಕೆಲವು ಪ್ರಮುಖ ಅಂಶಗಳಿಗೆ ಉತ್ತರಿಸದೆ ಉಳಿಸಿದ್ದಾರೆ, ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆ ಕೂಡ ಅವುಗಳನ್ನು ಸ್ಪಷ್ಟಪಡಿಸಿಲ್ಲ ಎನ್ನುವುದು ಗಮನಾರ್ಹ. ಈ ಎಲ್ಲಾ ಅಂಶಗಳನ್ನು ಪಟ್ಟಿ ಮಾಡುವುದು ಉತ್ತಮ.

1. ರಷ್ಯಾದ ತೈಲ ಖರೀದಿಯನ್ನು ಹಂತ ಹಂತವಾಗಿ ಆದರೆ ಶೀಘ್ರ ಪ್ರಕ್ರಿಯೆಯ ಮೂಲಕ ಭಾರತವು ನಿಲ್ಲಿಸುತ್ತದೆ ಎಂದು ಅಕ್ಟೋಬರ್ 15 ರಂದು ಮೋದಿ ಅವರು ತಮಗೆ ಹೇಗೆ "ಭರವಸೆ" ನೀಡಿದರು ಎಂಬುದನ್ನು ಟ್ರಂಪ್ ಸ್ಪಷ್ಟಪಡಿಸಲಿಲ್ಲ. ಉಭಯ ನಾಯಕರ ನಡುವೆ ಸಂಪರ್ಕ ಏರ್ಪಟ್ಟಿದೆಯೇ ಮತ್ತು ಅದು ಹೇಗೆ ನಡೆಯಿತು ಎಂಬುದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆಯೂ ಕೂಡ ಸ್ಪಷ್ಟಪಡಿಸಲಿಲ್ಲ.

ಇದಕ್ಕೆ ಪ್ರತಿಯಾಗಿ ಅ. 16 ರಂದು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, “ನನ್ನ ಮಾಹಿತಿ ಪ್ರಕಾರ ನಿನ್ನೆ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ನಡುವೆ ಯಾವುದೇ ದೂರವಾಣಿ ಸಂಭಾಷಣೆ ನಡೆದಿಲ್ಲ" ಎಂದು ಪ್ರತಿಕ್ರಿಯಿಸಿದ್ದು ಗಮನಾರ್ಹವಾಗಿದೆ.

2. ತಮ್ಮ ಪಾಲಿಗೆ ಮೋದಿ ಒಬ್ಬ ಸ್ನೇಹಿತ ಎಂದು ಟ್ರಂಪ್ ಹಲವಾರು ಬಾರಿ ಪುನರುಚ್ಚರಿಸಿದ್ದಾರೆ, ಆದರೆ, ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ, ಮೋದಿ ಅವರು ಟ್ರಂಪ್ ಅವರನ್ನು ಪ್ರೀತಿಸುತ್ತಾರೆ ಎಂದು ಸೇರಿಸಿದರು. ಇದು ಭಾರತದ ಪ್ರಧಾನ ಮಂತ್ರಿಗೆ ರಾಜಕೀಯವಾಗಿ ಹಾನಿ ಮಾಡಬಹುದು ಎಂದು ಅರಿತು, ಈ ಮಾತು ಹೇಳಿದ್ದರಿಂದ ಮೋದಿಯವರಿಗೆ ಯಾವುದೇ ರಾಜಕೀಯ ಹಾನಿಯಾಗಲು ನಾನು ಬಯಸುವುದಿಲ್ಲ ಎಂದು ಟ್ರಂಪ್ ತಕ್ಷಣವೇ ಸೇರಿಸಿದರು. ಟ್ರಂಪ್ ಅವರ ವರ್ತನೆಯನ್ನು ತಿಳಿದಿರುವ ವಿರೋಧ ಪಕ್ಷಗಳು ಈ ಹೇಳಿಕೆಯನ್ನು ಮೋದಿ ಅವರ ವಿರುದ್ಧ ಬೊಟ್ಟು ಮಾಡಲು ಬಳಸಿಕೊಳ್ಳುವುದು ಅಸಂಭವ. ಆದರೂ, ಇದು ಮೋದಿ ಅವರಿಗೆ ಅನಗತ್ಯವಾಗಿದ್ದ ಹೇಳಿಕೆ ಎಂಬುದು ನಿಶ್ಚಿತ.

ಟ್ರಂಪ್ ಅವರಿಗೆ ಇತ್ತೀಚಿನ ಭಾರತದ ರಾಜಕೀಯ ಇತಿಹಾಸದ ಬಗ್ಗೆ ಪೂರ್ಣ ಅರಿವಿಲ್ಲ ಎಂಬುದು ಸ್ಪಷ್ಟ. ಬಹುಶಃ ಅವರಿಗೆ ಭಾರತದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮೂಲಭೂತ ಜ್ಞಾನವಿದ್ದರೂ ಅವರು ಅದರ ಬಗ್ಗೆ ತಲೆಕೆಡಿಸಿಕೊಳ್ಳಲಾರರು ಎಂಬುದು ಬೇರೆ ಮಾತು. ಒಂದು ವೇಳೆ ಅವರಿಗೆ ತಿಳಿದಿದ್ದರೆ, 1998 ರಿಂದ ಭಾರತವು ಕೇವಲ ಮೂವರು ಪ್ರಧಾನಿಗಳನ್ನು ಮಾತ್ರ ಕಂಡಿದೆ ಎಂದು ಅವರಿಗೆ ಅರಿವಾಗುತ್ತಿತ್ತು. ಅವರೆಂದರೆ: ಅಟಲ್ ಬಿಹಾರಿ ವಾಜಪೇಯಿ (1998-2004), ಮನಮೋಹನ್ ಸಿಂಗ್ (2004-2014) ಮತ್ತು ನರೇಂದ್ರ ಮೋದಿ (2014 ರಿಂದ ಇಂದಿನವರೆಗೆ).

ಇದೇ ಅವಧಿಯಲ್ಲಿ, ಅಮೆರಿಕ ಐವರು ಅಧ್ಯಕ್ಷರನ್ನು ಕಂಡಿದೆ: ಬಿಲ್ ಕ್ಲಿಂಟನ್, ಜಾರ್ಜ್ ಡಬ್ಲ್ಯೂ. ಬುಷ್, ಬರಾಕ್ ಒಬಾಮಾ, ಟ್ರಂಪ್ ಮತ್ತು ಜೋ ಬಿಡನ್. ಆದ್ದರಿಂದ, ಕಳೆದ 27 ವರ್ಷಗಳಿಂದ ಭಾರತದ ಪ್ರಧಾನಿಗಳು ಸುದೀರ್ಘ ಕಾಲದಿಂದ ಅಧಿಕಾರದಲ್ಲಿದ್ದಾರೆ ಎಂದು ಟ್ರಂಪ್ ಅವರ ಸಹಾಯಕರು ಅವರಿಗೆ ಹೇಳಲು ಆಸಕ್ತಿ ತೋರುವುದಿಲ್ಲ ಎಂದು ಕಾಣುತ್ತದೆ.

4. ಮೇ ತಿಂಗಳಲ್ಲಿ ಶಸ್ತ್ರಸಜ್ಜಿತ ವೈರತ್ವವನ್ನು ಕೊನೆಗೊಳಿಸಲು ತಾನು ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಿದ್ದೆ ಎಂದು ಟ್ರಂಪ್ ಪುನರುಚ್ಛರಿಸಿದರು. ಈ ವಿಚಾರವನ್ನು ಪಾಕಿಸ್ತಾನ ಮತ್ತೆ ಮತ್ತೆ ಅವರ ಮನಸ್ಸಿನೊಳಗೆ ತುಂಬಿಸುತ್ತಲೇ ಇದೆ. ಅಲ್ಲದೆ, ಆ ಸಂಘರ್ಷವು ಪರಮಾಣು ಯುದ್ಧವಾಗಿ ಮಾರ್ಪಾಡಾಗಬಹುದಿತ್ತು ಎಂದು ಅದು ಈಗ ಬಹಿರಂಗವಾಗಿ ಹೇಳುತ್ತಿದೆ.

ಭಾರತದ ಎಚ್ಚರಿಕೆಯ ನಡೆಗಳು

ಭಾರತವು ಈ ವಿಷಯದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಮೋದಿ ಅವರು ತಮ್ಮ ಸ್ವಂತ ಹೇಳಿಕೆಗಳ ಮೂಲಕ ಅಥವಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆಗಳ ಮೂಲಕ ಟ್ರಂಪ್ಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಿದ್ದಾರೆ. ಅವರು ಭಾರತದ ನಿಲುವನ್ನು ಸಾಮಾನ್ಯ ಪದಗಳಲ್ಲಿ ಹೇಳುವ ಮತ್ತು ಭಾರತದ ಹಿತಾಸಕ್ತಿಗಳನ್ನು ಖಚಿತಪಡಿಸಿಕೊಳ್ಳುವ ತಂತ್ರ ಅನುಸರಿಸಿದ್ದಾರೆ. ರಾಜತಾಂತ್ರಿಕವಾಗಿ, ಇಂತಹ ವಿಧಾನವು ಭಾರತದ ಹಿತಾಸಕ್ತಿಗಳಿಗೆ ಹಾನಿ ಮಾಡುವುದಿಲ್ಲ.

ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ಟ್ರಂಪ್ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸುತ್ತಿಲ್ಲ ಮತ್ತು ಭಾರತವು ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುತ್ತದೆ ಎಂಬ ಅವರ ಹೇಳಿಕೆಯ ಬಗ್ಗೆ ಸಂಪೂರ್ಣ ಮೌನ ವಹಿಸಿತು. ಬದಲಾಗಿ, ಭಾರತವು "ಬದಲಾಗುತ್ತಿರುವ ಇಂಧನ ಸನ್ನಿವೇಶದಲ್ಲಿ ಭಾರತೀಯ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡಲಾಗುತ್ತದೆ" ಎಂದು ಮಾತ್ರ ಪ್ರತಿಪಾದಿಸಿತು.

ಭಾರತದ ಇಂಧನ ನೀತಿಯ ಉದ್ದೇಶ, “ಸ್ಥಿರ ಇಂಧನ ಬೆಲೆ ಮತ್ತು ಸುರಕ್ಷಿತ ಪೂರೈಕೆ ಖಚಿತಪಡಿಸುವುದು” ಎಂದೂ ಅದು ಸ್ಪಷ್ಟಪಡಿಸಿದೆ. ಎರಡನೆಯದಾಗಿ, ಅದು ಮಾರುಕಟ್ಟೆ ಪರಿಸ್ಥಿತಿಗಳನ್ನು ಪೂರೈಸಲು ಇಂಧನ ಮೂಲಗಳನ್ನು ವಿಸ್ತರಿಸುತ್ತಿದೆ ಮತ್ತು "ವೈವಿಧ್ಯಗೊಳಿಸುತ್ತಿದೆ" ಎಂದು ತಿಳಿಸಿದೆ. ಈ ಸ್ಪಷ್ಟ ತತ್ವಗಳನ್ನು ಘೋಷಿಸಿದ ನಂತರ, ಭಾರತ-ಅಮೆರಿಕ ಇಂಧನ ಸಹಕಾರವು ಕಳೆದ ದಶಕದಲ್ಲಿ "ಸ್ಥಿರ ಪ್ರಗತಿ ಸಾಧಿಸಿದೆ" ಎಂದು ಹೇಳುವ ಮೂಲಕ ಟ್ರಂಪ್ ಅವರ ಬಗ್ಗೆ ಪರೋಕ್ಷ ಉಲ್ಲೇಖ ಮಾಡಿತು. ನಂತರ, ಭಾರತ ಮತ್ತು ಅಮೆರಿಕ ನಡುವೆ ಇಂಧನ ಸಹಕಾರದ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದೂ ಅದು ಬಹಿರಂಗಪಡಿಸಿತು.

ಟ್ರಂಪ್ ಅವರ ತಾಜಾ ಹೇಳಿಕೆಗಳು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮೋದಿ ಅವರನ್ನು ಮುಜುಗರಕ್ಕೀಡು ಮಾಡಲು ಹೊಸ ಅವಕಾಶ ಒದಗಿಸಿದೆ. ಅವರು ಭಾರತದ ಪ್ರಧಾನಿಗೆ ಅಮೆರಿಕ ಅಧ್ಯಕ್ಷರನ್ನು ಕಂಡರೆ ಭಯ ಎಂದು ಹೇಳಿದರು. ಭಾರತ ಮತ್ತು ಪಾಕಿಸ್ತಾನದ ನಡುವಿನ ಮಧ್ಯಸ್ಥಿಕೆಯ ಬಗ್ಗೆ ಟ್ರಂಪ್ ಅವರ ಹೇಳಿಕೆಗಳನ್ನು ನೇರವಾಗಿ ನಿರಾಕರಿಸದ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷವು ಮತ್ತೊಮ್ಮೆ ಮೋದಿ ಅವರ ಮೇಲೆ ಆರೋಪ ಮಾಡುವ ಸಾಧ್ಯತೆ ಇದೆ.

ವಿಶ್ವದ ಅತಿದೊಡ್ಡ ಇಂಧನ ಆಮದುದಾರರಲ್ಲಿ ಒಂದಾದ ಭಾರತವು ಮುಂದಿನ ಕೆಲವು ತಿಂಗಳುಗಳಲ್ಲಿ ತೈಲವನ್ನು ಎಲ್ಲಿಂದ ಪಡೆಯುತ್ತದೆ ಎಂಬುದು ನಿಜಕ್ಕೂ ಕುತೂಹಲದ ಸಂಗತಿಯಾಗಿದೆ.

ಪ್ರಸ್ತುತ, ಭಾರತವು ತನ್ನ ತೈಲ ಅಗತ್ಯಗಳ ಸುಮಾರು ಶೇ.34 ರಷ್ಟು ಭಾಗವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಇದು ದಿನಕ್ಕೆ ಸುಮಾರು 1.6 ದಶಲಕ್ಷ ಬ್ಯಾರೆಲ್ಗಳಷ್ಟಾಗುತ್ತದೆ. ಕಳೆದ ಮೂರು ತಿಂಗಳುಗಳಲ್ಲಿ ಭಾರತದ ಸರ್ಕಾರಿ ಸ್ವಾಮ್ಯದ ತೈಲಾಗಾರಗಳು ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಿವೆ, ಆದರೆ ಖಾಸಗಿ ತೈಲ ಸಂಸ್ಕರಣಾ ಕಂಪನಿಗಳು ಅದನ್ನು ತಗ್ಗಿಸಿಲ್ಲ. ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದರಿಂದ ಆಗುವ ಪ್ರಯೋಜನಗಳು ಕಡಿಮೆಯಾಗುತ್ತಿವೆ, ಏಕೆಂದರೆ ಆದ್ಯತಾ ಲಾಭಾಂಶಗಳು ಕಡಿಮೆಯಾಗಿವೆ. ಪ್ರಸ್ತುತ, ಅವು ಪ್ರತಿ ಬ್ಯಾರೆಲ್ಗೆ ಸುಮಾರು 2 ಡಾಲರ್ ನಷ್ಟಿದೆ.

ರಷ್ಯಾವೂ ಗಮನಿಸುತ್ತಿದೆ

ವಿರೋಧ ಪಕ್ಷಗಳು ಮಾತ್ರವಲ್ಲದೆ, ಟ್ರಂಪ್ ಹೇಳಿದ ಮಾತು ಸರಿಯಾಗಿದೆಯೇ ಎಂಬುದನ್ನು ರಷ್ಯಾ ಕೂಡ ಸೂಕ್ಷ್ಮವಾಗಿ ಗಮನಿಸದೇ ಇರುವುದಿಲ್ಲ. ಅದಕ್ಕಾಗಿಯೇ ಭಾರತದಲ್ಲಿನ ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಅವರು ಅಕ್ಟೋಬರ್ 16 ರಂದು, ರಷ್ಯಾ "ಭಾರತದ ಅತ್ಯಂತ ವಿಶ್ವಾಸಾರ್ಹ ಇಂಧನ ಪಾಲುದಾರ" ಎಂದು ಹೇಳಿದರು. ಅವರು ನಾಗರಿಕ ಪರಮಾಣು ಕ್ಷೇತ್ರದಲ್ಲಿನ ಭಾರತ-ರಷ್ಯಾ ಸಹಕಾರವನ್ನು ಉಲ್ಲೇಖಿಸದೇ ಇರಲಿಲ್ಲ.

ಮುಂದಿನ ತಿಂಗಳುಗಳಲ್ಲಿ ಭಾರತದ ತೈಲ ರಾಜತಾಂತ್ರಿಕತೆ ಚುರುಕಾಗಿರಬೇಕು. ಇಂದಿನ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಾಡಿದಂತಹ ಸಾಮಾನ್ಯ ಹೇಳಿಕೆಗಳು ಸಾಕಾಗುವುದಿಲ್ಲ. ಬದಲಿಗೆ ತೈಲ ಆಮದಿನ ಅಂಕಿಅಂಶಗಳನ್ನು ಮಂಡಿಸುವುದು ಮುಖ್ಯವಾಗುತ್ತದೆ.

Read More
Next Story