Najeeb Jung

ಜಗತ್ತಿನ ಕೂಗುಮಾರಿಗಳ ನಡುವೆ ಸಂಯಮವೇ ಭಾರತದ ಪಾಲಿನ ಬಹುದೊಡ್ಡ ಸವಾಲು


ಜಗತ್ತಿನ ಕೂಗುಮಾರಿಗಳ ನಡುವೆ ಸಂಯಮವೇ ಭಾರತದ ಪಾಲಿನ ಬಹುದೊಡ್ಡ ಸವಾಲು
x
ನೈತಿಕ ಸಮತೋಲನವನ್ನು ಮರುಸ್ಥಾಪಿಸುವ ಬಹುದೊಡ್ಡ ಜವಾಬ್ದಾರಿ ಭಾರತದ ಮೇಲಿದೆ. ಅದಕ್ಕಾಗಿ ಅದು ನೀತಿ ಬೋಧನೆ ಮಾಡಬೇಕಾಗಿಲ್ಲ. ಜಗತ್ತಿನ ಯಾವುದೇ ಮೂಲೆಯಲ್ಲಿ ನಾಗರಿಕರು ಪಡುವ ಸಂಕಷ್ಟದ ವಿರುದ್ಧ ಧ್ವನಿ ಎತ್ತುವುದರಿಂದ ರಾಷ್ಟ್ರೀಯ ಹಿತಾಸಕ್ತಿಯನ್ನು ದುರ್ಬಲಗೊಳಿಸಿದಂತೆ ಆಗುವುದಿಲ್ಲ. ಬದಲಿಗೆ ಅದು ವಿಶ್ವಾಸಾರ್ಹತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಭಾರತದ ಬಹುತ್ವವು ದೀರ್ಘಕಾಲದಿಂದ ವಿದೇಶಗಳಲ್ಲಿ ಅದರ ಧ್ವನಿಗೆ ಹೆಚ್ಚಿನ ಶಕ್ತಿ ತುಂಬಿದೆ. ಚಿತ್ರದಲ್ಲಿ (ಎಡದಿಂದ ಬಲಕ್ಕೆ) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್.
Click the Play button to hear this message in audio format

ಕರುಣೆಯೇ ಇಲ್ಲದ, ಕ್ಷಮೆಯೂ ಇಲ್ಲದ ಕಠಿಣ ಜಾಗತಿಕ ಭೂಮಿಕೆಯಲ್ಲಿ ಭಾರತಕ್ಕೀಗ ಅಗ್ನಿಪರೀಕ್ಷೆ. ಅದು ತನ್ನ ಪರಂಪರೆ ಮತ್ತು ಸಹಜ ಪ್ರವೃತ್ತಿ ಎರಡನ್ನೂ ನಿಕಶಕ್ಕೆ ಒಡ್ಡಬೇಕಾದ ಅನಿವಾರ್ಯತೆ ಎದುರಾಗಿದೆ. ಅದು ಸ್ವಾತಂತ್ರ್ಯದ ಹೊತ್ತಿನಲ್ಲಿ ಪ್ರವೇಶಿಸಿದ ಜಗತ್ತಿಗಿಂತ ಹೆಚ್ಚು ಕಠಿಣವಾಗಿದೆ

ಹೊಸ ಜಾಗತಿಕ ಅಸ್ಥಿರತೆಯನ್ನು ಸೃಷ್ಟಿಸುತ್ತಲೇ ೨೦೨೬ ರ ವರ್ಷದ ಈಗಾಗಲೇ ಉದಯವಾಗಿದೆ. ಒಂದು ಕಾಲದಲ್ಲಿ ನಾವು ಊಹಿಸಲು ಮಾತ್ರ ಸಾಧ್ಯವಾಗಿದ್ದ ಅಂತಾರಾಷ್ಟ್ರೀಯ ವ್ಯವಸ್ಥೆ ಇಂದು ಕಣ್ಣಿಗೆ ಕಾಣುವಂತೆ, ಅತ್ಯಂತ ನಿಚ್ಚಳವಾಗಿ ಶಿಥಿಲಗೊಳ್ಳುತ್ತಿದೆ, ಅಧಿಕಾರದಾಹೀ ರಾಜಕಾರಣವು ಮೊಂಡುತನವನ್ನು ಮೆರೆಯುತ್ತಿದೆ, ನಿಯಮಗಳು ದುರ್ಬಲಗೊಳ್ಳುತ್ತ ಸಾಗಿವೆ, ಆಂತರಿಕ ದಂಗೆ ಎನ್ನುವುದು ಈಗ ನಾಗಾಲೋಟದಲ್ಲಿ ಗಡಿಗಳನ್ನು ದಾಟಿ ಮುನ್ನುಗ್ಗುತ್ತಿದೆ…

ಇರಾನ್-ನಲ್ಲಿ ತಾಂಡವವಾಡುತ್ತಿರುವ ಅರಾಜಕತೆ, ಅಮೆರಿಕದ ಕಟುನುಡಿಗಳು ಹಾಗೂ ದಿಗ್ಬಂಧನದ ಭೀತಿ ಅಥವಾ ಬಲವಂತದ ಕ್ರಮಗಳು ಪಶ್ಚಿಮ ಏಷ್ಯಾವನ್ನು ಮತ್ತೊಮ್ಮೆ ಅಸ್ಥಿರಗೊಳಿಸಿದೆ. ಇದೇ ವೇಳೆ ಭಾರತದ ಕಡೆಗೆ ಅಮೆರಿಕ ಹೊಂದಿರುವ ಧೋರಣೆಗಳು, ಸುಂಕದ ಬೆದರಿಕೆಗಳು, ವ್ಯಾಪಾರದ ಒತ್ತಡ ಮತ್ತು ಭಾರತದ ಇಂಧನ ಆಯ್ಕೆಗಳ ಬಗ್ಗೆ ತೀವ್ರವಾದ ಅಸಮಾಧಾನ… ಇವೆಲ್ಲವೂ ಇಂದಿನ ಕಾಲಮಾನದಲ್ಲಿ ಒಂದು ಕಠಿಣ ಸತ್ಯವನ್ನು ಒತ್ತಿ ಹೇಳುತ್ತಿವೆ: ಪಾಲುದಾರಿಕೆ ಎನ್ನುವುದು ಈಗ ಒತ್ತಡದ ಮಗ್ಗುಲಲ್ಲಿ ಮಲಗಿದೆ.

ಭಾರತವು ಅನಿವಾರ್ಯವಾಗಿ ಈ ಸಂಕೀರ್ಣ ಪರಿಸ್ಥಿತಿಗಳ ಸುಳಿಯಲ್ಲಿ ಸಿಲುಕಿದೆ. ಒಂದೆಡೆ ಕಾರ್ಯತಂತ್ರದ ಕಾರಣಗಳಿಗಾಗಿ ಭಾರತಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದ್ದರೆ ಇನ್ನೊಂದು ಕಡೆ ಆರ್ಥಿಕವಾಗಿಯೂ ಒತ್ತಡವನ್ನು ಹೇರಲಾಗುತ್ತಿದೆ. ಜೊತೆಗೆ ನೈತಿಕವಾಗಿಯೂ ಸೂಕ್ಷ್ಮ ದೃಷ್ಟಿಕೋನದಿಂದ ನೋಡಲಾಗುತ್ತಿದೆ. ಈ ಹಂತದಲ್ಲಿ ಕೈಗೊಳ್ಳುವ ಪ್ರತಿಯೊಂದು ನಿರ್ಧಾರವು ಕೂಡ ಭಾರೀ ಪರಿಣಾಮಗಳನ್ನು ಬೀರುವ ಸಾಧ್ಯತೆ ಇರುವುದರಿಂದ ಭಾರತದ ವಿದೇಶಾಂಗ ನೀತಿಯ ಪ್ರವೃತ್ತಿಗಳ ಬಗ್ಗೆ ಆಳವಾದ ಚಿಂತನೆಯ ಅಗತ್ಯವಿದೆ.

ಸ್ವಾತಂತ್ರ್ಯಾನಂತರದ ಯಾವುದೇ ಕಾಲಘಟ್ಟಕ್ಕೆ ಹೋಲಿಸಿದರೂ ಇಂದು ಭಾರತದ ಜಾಗತಿಕ ಮಟ್ಟದ ವ್ಯವಹಾರಗಳು ಹೆಚ್ಚು ಕಣ್ಣಿಗೆ ಕಟ್ಟುವಂತಿವೆ ಎಂದು ನಿಸ್ಸಂದೇಹವಾಗಿ ಹೇಳಬಹುದು. ಕೆಲವೊಮ್ಮೆ ಅದನ್ನು ಜಾಗತಿಕ ದಕ್ಷಿಣ ದೇಶಗಳ ಧ್ವನಿಯಾಗಿ ಮತ್ತು ಬಹುದ್ರುವೀಯ ಜಗತ್ತಿನ ಒಂದು ನಿರ್ಣಾಯಕ ಶಕ್ತಿಯಾಗಿ ಬಿಂಬಿಸಲಾಗುತ್ತಿದೆ.

ಅಷ್ಟಾಗಿಯೂ ಇಂತಹ ಆತ್ಮವಿಶ್ವಾಸದ ಅಡಿಯಲ್ಲಿ ಒಂದು ರೀತಿಯ ಅಸ್ಪಷ್ಟ ಆತಂಕ ಅಥವಾ ಅಸಮಾಧಾನ ಅಡಗಿ ಕುಳಿತಿದೆ ಅನಿಸುತ್ತದೆ. ರಾಜತಾಂತ್ರಿಕ ಮಾತುಕತೆಯ ವೇಳೆ ಮತ್ತು ವಿದೇಶಗಳಲ್ಲಿರುವ ಅನಿವಾಸಿ ಭಾರತೀಯ ಹಿತೈಷಿಗಳಲ್ಲಿ ಇದನ್ನು ಸ್ಪಷ್ಟವಾಗಿ ಗಮನಿಸಬಹುದು.

ಈಗ ಎದ್ದಿರುವ ಪ್ರಶ್ನೆ ಏನೆಂದರೆ ಭಾರತವು ಈಗಲೂ ಸ್ಥಿರವಾದ ಕಾರ್ಯತಂತ್ರವನ್ನು ಒಳಗೊಂಡ ದಿಕ್ಸೂಚಿ ಮತ್ತು ಸ್ವಾತಂತ್ರ್ಯದ ನಂತರದ ದಶಕಗಳಲ್ಲಿ ಪ್ರದರ್ಶಿಸಿದ ಚಿಂತನಶೀಲತೆ ಹಾಗೂ ಘನತೆಯಿಂದ ಕೂಡಿದ ಮಾರ್ಗದರ್ಶನವನ್ನು ಪಡೆಯುತ್ತಿದೆಯೇ? ಅಥವಾ ಅಂತಹ ಆತ್ಮವಿಶ್ವಾಸವು ಈಗ ಅಸಹನೆಯಾಗಿ ಬದಲಾಗುತ್ತಿದೆಯೇ?

ಭಾರತವು ಇಂದು ಎದುರಿಸುತ್ತಿರುವ ಜಗತ್ತು ಅದು ಸ್ವಾತಂತ್ರ್ಯದ ಹೊತ್ತಿನಲ್ಲಿ ಪ್ರವೇಶಿಸಿದ ಜಗತ್ತಿಗಿಂತ ಹೆಚ್ಚು ಕಠಿಣವಾಗಿದೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಗ್ರೀನ್-ಲ್ಯಾಂಡ್‌ ವಶಪಡಿಸಿಕೊಳ್ಳುವ ಟ್ರಂಪ್‌ ಅವರ ಬೆದರಿಕೆಗಳು, ಪನಾಮಾ ಮೇಲೆ ದಬ್ಬಾಳಿಕೆ ನಡೆಸುವ ಅಥವಾ ಕ್ಯೂಬಾವನ್ನು ದಂಡಿಸುವ ಅವರ ಮಾತುಗಳು ಮತ್ತು ಅಂತಾರಾಷ್ಟ್ರೀಯ ಮೈತ್ರಿಗಳನ್ನು ಕೇವಲ ʼವ್ಯವಹಾರಿಕ ಚೌಕಾಶಿʼಗಳಿಗೆ ಸೀಮಿತಗೊಳಿಸಿರುವುದು ಜಾಗತಿಕ ನಡವಳಿಕೆಯಲ್ಲಿ ಆಗುತ್ತಿರುವ ವ್ಯಾಪಕ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ. ವೆನೆಜುವೆಲಾ ಅಧ್ಯಕ್ಷ ಮಡುರೊ ಅವರನ್ನು ಬಂಧಿಸಿರುವುದು ಜಗತ್ತಿನಲ್ಲಿ ಬಾಹುಬಲವು ಮತ್ತೆ ಮುಖ್ಯ ಭೂಮಿಕೆಗೆ ಮರಳಿದೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ.

ಇಂತಹ ಕರುಣೆಯೇ ಇಲ್ಲದ, ಕ್ಷಮೆಯೂ ಇಲ್ಲದ ಕಠಿಣ ಪರಿಸರದಲ್ಲಿ ಭಾರತಕ್ಕೀಗ ಅಗ್ನಿಪರೀಕ್ಷೆ. ಅದು ತನ್ನ ಪರಂಪರೆ ಮತ್ತು ಸಹಜ ಪ್ರವೃತ್ತಿ ಎರಡನ್ನೂ ನಿಕಶಕ್ಕೆ ಒಡ್ಡಬೇಕಾದ ಅನಿವಾರ್ಯತೆ ಎದುರಾಗಿದೆ.

ನೆಹರೂ ರೂಪಿಸಿದ ಅಲಿಪ್ತ ನೀತಿ

ಜವಾಹರಲಾಲ್‌ ನೆಹರೂ ಅವರ ವಿದೇಶಾಂಗ ನೀತಿಯ ಪರಂಪರೆಯನ್ನು ಗೌರವದಿಂದ ಅಥವಾ ಅಪಹಾಸ್ಯದಿಂದ ನೋಡಲಾಗುತ್ತದೆ. ಅವರೆಡರಿಂದಲೂ ನೆಹರೂ ಅವರಂತಹ ಘನ ವ್ಯಕ್ತಿತ್ವಕ್ಕೆ ಅಥವಾ ಅಂದಿನ ಕಾಲಘಟ್ಟಕ್ಕೆ ನ್ಯಾಯ ಒದಗಿಸುವುದಿಲ್ಲ. ಅಲಿಪ್ತ ನೀತಿ ಎನ್ನುವುದು ಕೇವಲ ನೈತಿಕತೆಯ ಪ್ರದರ್ಶನವಾಗಿರಲಿಲ್ಲ. ಅದು ಅಂದಿನ ಅಸಹಾಯಕತೆ ಅಥವಾ ದೌರ್ಬಲ್ಯದಿಂದ ಜನ್ಮ ತಳೆದ ಒಂದು ಕಾರ್ಯತಂತ್ರವಾಗಿತ್ತು. ಹೊಸದಾಗಿ ಸ್ವಾತಂತ್ರ್ಯ ಪಡೆದ ಮತ್ತು ಆರ್ಥಿಕವಾಗಿ ದುರ್ಬಲವಾಗಿದ್ದ ಒಂದು ರಾಷ್ಟ್ರಕ್ಕೆ ಪ್ರತಿಸ್ಪರ್ಧಿ ಬಣಗಳ ನಡುವಿನ ಸಂಘರ್ಷದಲ್ಲಿ ಸಿಲುಕಿಕೊಳ್ಳುವುದು ಅಸಾಧ್ಯದ ಮಾತಾಗಿತ್ತು. ಅಂತಹ ನಿರ್ಣಾಯಕ ಕಾಲಘಟ್ಟದಲ್ಲಿ ಅವರು ರೂಪಿಸಿ ಅನುಸರಿಸಿದ ಅಲಿಪ್ತ ನೀತಿಯು ಜಗತ್ತನ್ನು ನಿರ್ಣಯಿಸಲು, ಮಾತನಾಡಲು ಮತ್ತು ತಮ್ಮದೇ ಆಯ್ಕೆಯನ್ನು ಮಾಡಲು ಭಾರತಕ್ಕೆ ಒಂದು ಕಾರ್ಯತಂತ್ರದ ಅವಕಾಶವನ್ನು ಕಲ್ಪಿಸಿತು.

ಅಷ್ಟಾಗಿಯೂ ನೆಹರೂ ಪರಿಸ್ಥಿತಿಯನ್ನು ಕರಾರುವಕ್ಕಾಗಿ ನಿರ್ಣಯಿಸುವಲ್ಲಿ ಎಡವಿದರು. ಅವರು ಚೀನಾದ ಮಹತ್ವಾಕಾಂಕ್ಷೆಗಳನ್ನು ತಪ್ಪಾಗಿ ಅಂದಾಜು ಮಾಡಿದರು, ಏಷ್ಯಾದ ಐಕಮತ್ಯವನ್ನು ಅತಿಯಾಗಿ ನಂಬಿದರು ಮತ್ತು ಕಠಿಣ ಶಕ್ತಿಯ ವಾಸ್ತವಗಳನ್ನು ಎದುರಿಸುವಲ್ಲಿ ಸಮರ್ಪಕ ಸಿದ್ಧತೆ ಮಾಡಿಕೊಳ್ಳುವಲ್ಲಿ ವಿಫಲರಾದರು.

ಈ ತಪ್ಪುಗಳಿಗೆ ಭಾರತವು ತಕ್ಕ ಬೆಲೆ ತೆರಬೇಕಾಯಿತು. ಆದರೆ ಅಂತಹ ತಪ್ಪುಗಳನ್ನು ಒಪ್ಪಿಕೊಳ್ಳುವುದರಿಂದ ನೆಹರೂ ಅವರ ವ್ಯಕ್ತಿತ್ವಕ್ಕೇನೂ ಕುಂದುಂಟಾಗುವುದಿಲ್ಲ. ಬದಲಾಗಿ ಅವರನ್ನು ಇನ್ನೂ ಹೆಚ್ಚು ಸಹಜವಾಗಿ ತೋರಿಸುತ್ತದೆ. ವಿಶ್ವಾಸಾರ್ಹತೆಗೆ ಅರ್ಹವಲ್ಲದ ಶಕ್ತಿಯು ಬಹುಬೇಗ ಕಳಚಿ ಬೀಳುತ್ತದೆ ಎಂಬ ಅವರ ತಿಳುವಳಿಕೆ ಇಂದಿಗೂ ಗಮನಾರ್ಹವಾಗಿದೆ.

ಭಾರತದ ಆರಂಭಿಕ ರಾಜತಾಂತ್ರಿಕ ನೀತಿಯು ಸಂಯಮ ಮತ್ತು ಅಚಲತೆಯ ಸಮ್ಮಿಶ್ರವಾಗಿತ್ತು. ಇದು ಯಾವುದೇ ಪಕ್ಷಪಾತಕ್ಕೆ ಅವಕಾಶವಿಲ್ಲದಂತೆ ಭಿನ್ನಾಭಿಪ್ರಾಯಗಳ ನಡುವೆಯೇ ಭಾರತಕ್ಕೆ ಮಾತನಾಡಲು ನೆಲೆಯನ್ನು ಒದಗಿಸಿತ್ತು. ಅಂತಹ ಘನತೆಯೇ ಒಂದು ರೀತಿಯಲ್ಲಿ ʼಅದೃಶ್ಯ ಬಂಡವಾಳʼವಾಗಿ ಮಾರ್ಪಟ್ಟಿತ್ತು. ಅದರಿಂದ ಅವರ ಧ್ವನಿ ಮತ್ತು ವ್ಯಕ್ತಿತ್ವಕ್ಕೆ ಅಂತಾರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟಿತ್ತು.

ಹಾಗೆ ಭಾರತಕ್ಕೆ ದಕ್ಕಿದ ಬಂಡವಾಳವು ಇಂದು ಕ್ಷೀಣಿಸುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ.

ಇಂದಿಗೂ ಭಾರತಕ್ಕೆ ಅತ್ಯಂತ ಗಂಭೀರವಾದ ದೀರ್ಘಕಾಲೀನ ಸವಾಲಾಗಿ ಪರಿಣಮಿಸಿರುವುದು ಚೀನಾ. ಇತ್ಯರ್ಥವಾಗದ ಗಡಿ ವಿವಾದ, ೨೦೨೦ರ ಗಡಿ ಸಂಘರ್ಷದ ಆಘಾತ ಮತ್ತು ದಕ್ಷಿಣ ಏಷ್ಯಾ ಹಾಗೂ ಹಿಂದೂ ಮಹಾಸಾಗರದಲ್ಲಿ ವಿಸ್ತರಿಸುತ್ತಿರುವ ಚೀನಾದ ಪ್ರಭಾವ ಭಾರತದ ಕಾರ್ಯತಂತ್ರದ ಚಿತ್ರಣವನ್ನೇ ಬದಲಾಯಿಸಿದೆ. ಮಿಲಿಟರಿಯ ದೃಢತೆ ಮತ್ತು ಬಾಹ್ಯ ಪಾಲುದಾರಿಕೆ ಇಲ್ಲಿ ಅನಿವಾರ್ಯವಾಗಿದೆ. ಆದರೆ ಕೇವಲ ಒಂದು ವೈರತ್ವವೇ ಪ್ರತಿ ರಾಜತಾಂತ್ರಿಕ ಆಯ್ಕೆಯನ್ನು ನಿರ್ಧರಿಸುವ ಹಂತಕ್ಕೆ ಬಂದರೆ ಕಾರ್ಯತಂತ್ರವು ಕೇವಲ ಪ್ರತಿಕ್ರಿಯಾತ್ಮಕವಾಗಿ ಪರಿವರ್ತಿಸುವ ಅಪಾಯವಿರುತ್ತದೆ. ಸಂವಾದಕ್ಕೆ ಅವಕಾಶವಿಲ್ಲದ ಪ್ರತಿರೋಧವು ಯಾವತ್ತೂ ನೈಜ ಕಾರ್ಯತಂತ್ರವಾಗುವುದಿಲ್ಲ.

ಭೌಗೋಳಿಕವಾಗಿ ಭಾರತ ಮತ್ತು ಚೀನಾ ಪರಸ್ಪರರನ್ನು ಕಡೆಗಣಿಸಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣ ಮಾಡಿದೆ. ಈ ವೈರತ್ವವನ್ನು ನಿಭಾಯಿಸಲು ಬಲಪ್ರದರ್ಶನ ಇದ್ದರಷ್ಟೇ ಸಾಲದು. ಜೊತೆಗೆ ತಾಳ್ಮೆ, ಸಾಂಸ್ಥಿಕ ರಾಜತಾಂತ್ರಿಕತೆ ಮತ್ತು ಪ್ರಾದೇಶಿಕ ಭರವಸೆಯ ಅಗತ್ಯವೂ ಇದೆ. ಚೀನಾದ ಪ್ರಭಾವವು ಕೇವಲ ಶಕ್ತಿಯಿಂದ ಮಾತ್ರವಲ್ಲದೆ ಅದರ ಸ್ಥಿರತೆಯಿಂದ ಬೆಳೆದಿದೆ. ಇಂದು ಜಾಗತಿಕವಾಗಿ ಗುರುತಿಸಲ್ಪಟ್ಟಿರುವ ಈ ಬೃಹತ್ ಆರ್ಥಿಕ ಮತ್ತು ಮಿಲಿಟರಿ ಶಕ್ತಿಯನ್ನು ಹೇಗೆ ಎದುರಿಸಬೇಕು ಎಂಬುದನ್ನು ಭಾರತವು ಕಂಡುಕೊಳ್ಳಬೇಕಿದೆ.

ಬೇಕಿದೆ ಕಾರ್ಯತಂತ್ರದ ಸಂಯಮ

ಭಾರತದ ನೆರೆಹೊರೆಯೇ ಗಮನಾರ್ಹ ಸವಾಲುಗಳನ್ನು ಒಡ್ಡುತ್ತಿದೆ. ಪಾಕಿಸ್ತಾನವು ಮಿಲಿಟರಿ ಪ್ರಾಬಲ್ಯ ಮತ್ತು ಆರ್ಥಿಕ ದೌರ್ಬಲ್ಯದ ಸುಳಿಯಲ್ಲಿ ಸಿಲುಕಿದೆ, ಮತ್ತು ಭಾರತದ ಮೇಲಿನ ದ್ವೇಷವು ಅಲ್ಲಿ ಸಾಂಸ್ಥಿಕವಾಗಿ ಬೇರೂರಿದೆ. ಪಾಕಿಸ್ತಾನದ ಆಂತರಿಕ ಬೆಳವಣಿಗೆಯ ಮೇಲೆ ಭಾರತದ ಪ್ರಭಾವ ಸೀಮಿತವಾಗಿದೆ, ಆದರೆ ಸಂಬಂಧದ ಶಾಶ್ವತ ಸ್ಥಾಗಿತ್ಯ ಅಥವಾ ಸಾರ್ವಜನಿಕ ಅವಹೇಳನಕ್ಕಿಂತ ಸಮಾಲೋಚಿತ ತೊಡಗಿಸಿಕೊಳ್ಳುವಿಕೆ ಮತ್ತು ಕಾರ್ಯತಂತ್ರದ ಸಂಯಮ ಹೆಚ್ಚು ಪ್ರಯೋಜನಕಾರಿಯಾದುದು ಎಂದು ಇತಿಹಾಸದ ಪುಟಗಳು ಹೇಳುತ್ತವೆ.

ಪ್ರಧಾನಿ ಮನಮೋಹನ್ ಸಿಂಗ್ ಅವರು ನೇರ ಮತ್ತು 'ಟ್ರಾಕ್ 2' (ಅಧಿಕೃತವಲ್ಲದ) ರಾಜತಾಂತ್ರಿಕತೆಯ ಮೂಲಕ ನಡೆಸಿದ ಪ್ರಯತ್ನಗಳು ಮುಂದುವರಿಯಬೇಕು; ಪ್ರಧಾನಿ ನರೇಂದ್ರ ಮೋದಿಯವರು ಕೂಡ 2014ರ ಪ್ರಮಾಣವಚನ ಸಮಾರಂಭಕ್ಕೆ ನವಾಜ್ ಶರೀಫರನ್ನು ಆಹ್ವಾನಿಸುವ ಮೂಲಕ ಅಥವಾ ಶರೀಫರ ಜನ್ಮದಿನದಂದು ಅನಿರೀಕ್ಷಿತ ಭೇಟಿ ನೀಡುವ ಮೂಲಕ ಇಂತಹ ಹಂಬಲ ವ್ಯಕ್ತಪಡಿಸಿದ್ದನ್ನು ಕಾಣಬಹುದು.

ಬಾಂಗ್ಲಾದೇಶವು ದೀರ್ಘಕಾಲದವರೆಗೆ ಭಾರತದ ರಾಜತಾಂತ್ರಿಕ ಯಶಸ್ಸುಗಳಲ್ಲಿ ಒಂದಾಗಿತ್ತು, ಆದರೆ ಇಂದು ಅದು ಸಾಮಾಜಿಕ ಮಂಥನಕ್ಕೆ ಒಳಗಾಗುತ್ತಿದೆ. ಆರ್ಥಿಕ ಪ್ರಗತಿಯ ಜೊತೆಗೆ ಹೆಚ್ಚುತ್ತಿರುವ ಧಾರ್ಮಿಕತೆ, ಅಲ್ಪಸಂಖ್ಯಾತರ ಮೇಲಿನ ಒತ್ತಡ ಮತ್ತು ಪ್ರಬಲ ರಾಷ್ಟ್ರೀಯತಾವಾದಿ ಭಾವನೆಗಳು ಅಲ್ಲಿ ಮನೆಮಾಡಿವೆ. ಭಾರತದ ಕಟುವಾದ ಮಾತುಗಳು ಅಲ್ಲಿ ಅಸಮಾಧಾನವನ್ನು ಮೂಡಿಸುವ ಮತ್ತು ಚೀನಾದೊಂದಿಗೆ ನಿಕಟ ಸಂಬಂಧ ಬೆಳೆಸುವಂತಹ 'ಕಾರ್ಯತಂತ್ರದ ದಿಕ್ಕು ಬದಲಾವಣೆಗೆ ಪ್ರೇರೇಪಿಸುವ ಅಪಾಯವಿದೆ.

ನೇಪಾಳ, ಶ್ರೀಲಂಕಾ ಮತ್ತು ಮಾಲ್ಡೀವ್ಸ್ಗಳು ಇದೇ ಸಂದೇಶವನ್ನು ನೀಡುತ್ತಿವೆ: ಭರವಸೆ ನೀಡುವುದು ದೌರ್ಬಲ್ಯವಲ್ಲ, ಅದು ನಾಯಕತ್ವದ ಅಡಿಪಾಯ.

ಪ್ರಕ್ಷುಬ್ದ ಪಶ್ಚಿಮ ಏಷ್ಯಾ

ಪಶ್ಚಿಮ ಏಷ್ಯಾದ ಬೆಳವಣಿಗೆಗಳು ಭಾರತದ ಸಂದಿಗ್ಧತೆಗಳನ್ನು ಮತ್ತಷ್ಟು ಹೆಚ್ಚಿಸಿವೆ. ಇರಾನ್ನ ಆಂತರಿಕ ಅಶಾಂತಿ, ತೀವ್ರ ಆರ್ಥಿಕ ಸಂಕಷ್ಟ ಮತ್ತು ಅಮೆರಿಕದ ಮರು-ನಿರ್ಬಂಧಗಳು ಅಥವಾ ಬಲವಂತದ ಕ್ರಮಗಳ ಸಾಧ್ಯತೆಯು ಭಾರತದ ಹಿತಾಸಕ್ತಿಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಭಾರತದ ಇಂಧನ ಭದ್ರತೆ, ಪ್ರಾದೇಶಿಕ ಸಂಪರ್ಕ ಮತ್ತು ಮಧ್ಯ ಏಷ್ಯಾದ ಪ್ರವೇಶಕ್ಕೆ ಇರಾನ್ ಅತ್ಯಂತ ಪ್ರಮುಖವಾಗಿದೆ. ಪಾಕಿಸ್ತಾನ ಮತ್ತು ಚೀನಾದ ಆಚೆಗೆ ಕಾರ್ಯತಂತ್ರದ ಆಯ್ಕೆಗಳನ್ನು ಉಳಿಸಿಕೊಳ್ಳಲು ಚಾಬಹಾರ್ನಂತಹ ಯೋಜನೆಗಳನ್ನು ರೂಪಿಸಲಾಯಿತು. ಅಲ್ಲದೆ, ಇರಾನ್ ಜಗತ್ತಿನ ಅತಿ ದೊಡ್ಡ ನೈಸರ್ಗಿಕ ಅನಿಲ ಸಂಗ್ರಹವನ್ನು (ಕತಾರ್ನೊಂದಿಗೆ ಹಂಚಿಕೊಂಡಿರುವ ಸೌತ್ ಪಾರ್ಸ್/ನಾರ್ತ್ ಡೋಮ್) ಹೊಂದಿದೆ ಎಂಬುದನ್ನು ಮರೆಯುವಂತಿಲ್ಲ.

ಆದರೂ, ಇರಾನ್ ಜೊತೆಗಿನ ಭಾರತದ ಒಡನಾಟವು ಅಮೆರಿಕ-ಇರಾನ್ ನಡುವಿನ ಸಂಘರ್ಷದಿಂದಾಗಿ ಮಿತಿಗೆ ಒಳಗಾಗುವಂತೆ ಮಾಡಿದೆ. ಅದೇ ಸಮಯದಲ್ಲಿ, ಭಾರತದ ಬಗ್ಗೆ ಅಮೆರಿಕದ ನಿಲುವು ಹೆಚ್ಚು ವ್ಯವಹಾರಿಕವಾಗಿ ಬದಲಾಗುತ್ತಿದೆ. ಸುಂಕದ ಬೆದರಿಕೆಗಳು, ರಿಯಾಯಿತಿ ದರದ ತೈಲ ಖರೀದಿಯ ಮೇಲಿನ ಒತ್ತಡ ಮತ್ತು ನಿರ್ಬಂಧಗಳಿಗೆ ಸಂಬಂಧಿಸಿದ ಅಸ್ಪಷ್ಟತೆಗಳು - ಮೈತ್ರಿ ಎನ್ನುವುದು ಬಲವಂತದ ಕ್ರಮಗಳನ್ನು ಇಲ್ಲವಾಗಿಸುವುದಿಲ್ಲ ಎಂಬುದನ್ನು ನೆನಪಿಸುತ್ತಿವೆ. ಅಮೆರಿಕದೊಂದಿಗಿನ ಕಾರ್ಯತಂತ್ರದ ಸಮೀಕರಣವು ಆರ್ಥಿಕ ಒತ್ತಡಗಳ ನಡುವೆಯೇ ಚಾಲ್ತಿಯಲ್ಲಿರುವುದನ್ನು ಕಾಣಬಹುದು.

ಹೀಗಾಗಿ ಭಾರತವು ಏಕಕಾಲದಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ: ಇರಾನ್ನಲ್ಲಿನ ಅಶಾಂತಿ, ಅಮೆರಿಕದ ನೀತಿಗಳಲ್ಲಿನ ಅಸ್ಥಿರತೆ, ಚೀನಾದೊಂದಿಗಿನ ಹಗೆತನ ಮತ್ತು ಸೂಕ್ಷ್ಮವಾದ ನೆರೆಹೊರೆ. ಇವೆಲ್ಲವೂ ಭಾರತವನ್ನು ಒಂದು ಕಠಿಣ ಅಥವಾ ವಿಚಿತ್ರ ಪರಿಸ್ಥಿತಿಯಲ್ಲಿ ಸಿಲುಕಿಸಿವೆ ಮತ್ತು ಇವುಗಳಲ್ಲಿ ಯಾವುದನ್ನೂ ಪ್ರತ್ಯೇಕವಾಗಿ ನಿಭಾಯಿಸಲು ಸಾಧ್ಯವಿಲ್ಲ.

ಭಾರತ ಮಾಡಬೇಕಾಗಿರುವುದು ಏನು?

ಮುಂದೆ ಸಾಗಲು, ಮೊದಲನೆಯದಾಗಿ, ಭಾರತವು 'ಕಾರ್ಯತಂತ್ರದ ತಾಳ್ಮೆ'ಯನ್ನು ಒಂದು ಗುಣವಾಗಿ ಮತ್ತೆ ಮೈಗೂಡಿಸಿಕೊಳ್ಳಬೇಕು. ನಿಜವಾದ ಶಕ್ತಿಯಿರುವುದು ಸದಾ ಸಂಕೇತಗಳನ್ನು ನೀಡುವುದರಲ್ಲಿ ಅಥವಾ ಕಟುವಾದ ಮಾತುಗಳಲ್ಲಲ್ಲ, ಬದಲಿಗೆ ಸ್ಥಿರತೆಯಲ್ಲಿದೆ. ರಾಜತಾಂತ್ರಿಕತೆಗೆ ಸಂಸ್ಥೆಗಳು, ಹಳೆಯ ಅನುಭವಗಳ ನೆನಪು ಮತ್ತು ಪ್ರಶಂಸೆ ಸಿಗದಿದ್ದಾಗಲೂ ನಿಶ್ಯಬ್ದವಾಗಿ ಶ್ರಮಿಸುವ ಮನೋಭಾವದ ಅಗತ್ಯವಿದೆ.

ಎರಡನೆಯದಾಗಿ, ಭಾರತವು ತನ್ನ ನೆರೆಹೊರೆಯಲ್ಲಿ 'ದೃಢತೆ' ಮತ್ತು 'ಭರವಸೆ'ಯ ನಡುವೆ ಸಮತೋಲನವನ್ನು ಮರುಸ್ಥಾಪಿಸಬೇಕು. ಮಿಲಿಟರಿ ಸನ್ನದ್ಧತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ, ಆದರೆ ಮಾತಿನ ಧಾಟಿಯಲ್ಲಿ ವಿನಯವೂ ಅಷ್ಟೇ ಅಗತ್ಯ. ಬಲಿಷ್ಠವಾದ ಶಕ್ತಿಯು ಸಂಯಮದ ಹೆಚ್ಚಿನ ಹೊರೆಯನ್ನು ಹೊರಲೇಬೇಕಾಗುತ್ತದೆ

ಮೂರನೆಯದಾಗಿ, ಭಾರತವು ತನ್ನ ಜಾಗತಿಕ ಚಿಂತನೆಯನ್ನು ಕೇವಲ ಒಂದು ವೈರತ್ವಕ್ಕೆ (ಚೀನಾಕ್ಕೆ) ಸೀಮಿತಗೊಳಿಸದೆ ವಿಸ್ತರಿಸಬೇಕು. ಚೀನಾವೇನೂ ಅಮುಖ್ಯವೆಂದು ಹೇಳಲಾರೆ, ಆದರೆ ಅದು ಮಾತ್ರವೇ ಎಲ್ಲವನ್ನೂ ನೋಡುವ ಏಕೈಕ ದೃಷ್ಟಿಕೋನವಾಗಬಾರದು. ಆಫ್ರಿಕ, ಲ್ಯಾಟಿನ್ ಅಮೆರಿಕ ಮತ್ತು ಆಗ್ನೇಯ ಏಷ್ಯಾದ ರಾಷ್ಟ್ರಗಳೊಂದಿಗೆ ಅಭಿವೃದ್ಧಿ, ಹವಾಮಾನ, ಆರೋಗ್ಯ ಮತ್ತು ತಂತ್ರಜ್ಞಾನದ ವಿಷಯಗಳಲ್ಲಿ ಆಳವಾದ ಒಡನಾಟವು, ನಿಜವಾದ ಬಹುಧ್ರುವೀಯ ಜಗತ್ತಿನಲ್ಲಿ ಭಾರತದ ಪಾತ್ರವನ್ನು ಭದ್ರಪಡಿಸಲು ಸಹಾಯಮಾಡುತ್ತದೆ.

ವಿಶ್ವಾಸಾರ್ಹತೆ ಹೆಚ್ಚಿಸುವ ಕ್ರಮ

ನಾಲ್ಕನೆಯದಾಗಿ, ಭಾರತವು ಕೇವಲ 'ನೀತಿಬೋಧನೆ' ಮಾಡದೆ ನೈತಿಕ ಸಮತೋಲನವನ್ನು ಮರುಸ್ಥಾಪಿಸಬೇಕು. ಜಗತ್ತಿನ ಯಾವುದೇ ಮೂಲೆಯಲ್ಲಿ ನಾಗರಿಕರು ಪಡುವ ಸಂಕಷ್ಟದ ವಿರುದ್ಧ ಧ್ವನಿ ಎತ್ತುವುದರಿಂದ ರಾಷ್ಟ್ರೀಯ ಹಿತಾಸಕ್ತಿಯನ್ನು ದುರ್ಬಲಗೊಳಿಸಿದಂತೆ ಆಗುವುದಿಲ್ಲ. ಬದಲಿಗೆ ಅದು ವಿಶ್ವಾಸಾರ್ಹತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಭಾರತದ ಬಹುತ್ವವು ದೀರ್ಘಕಾಲದಿಂದ ವಿದೇಶಗಳಲ್ಲಿ ಅದರ ಧ್ವನಿಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತಾ ಬಂದಿದೆ.

ಕೊನೆಯದಾಗಿ, ಭಾರತವು 'ಕಾರ್ಯತಂತ್ರದ ಸ್ವಾಯತ್ತತೆ'ಯನ್ನು ಕೇವಲ ಒಂದು ಘೋಷವಾಕ್ಯವಾಗಿ ಬಳಸದೆ, ಒಂದು ಆಚರಣೆಯಾಗಿ ರಕ್ಷಿಸಬೇಕು. ನಾವು ಮಾಡಿಕೊಳ್ಳುವ ಮೈತ್ರಿ ನಮ್ಮ ಆಯ್ಕೆಗಳನ್ನು ವಿಸ್ತರಿಸಬೇಕೇ ಹೊರತು, ಅವುಗಳನ್ನು ಕುಬ್ಜವಾಗಿ ಮಾಡಬಾರದು. ಅಸ್ಥಿರವಾದ ಜಗತ್ತಿನಲ್ಲಿ, ಸ್ವಾಯತ್ತತೆ ಎಂದರೆ ಸನ್ನದ್ಧತೆಯೇ ಆಗಿದೆ.

ಭಾರತವು ಈಗ ಕೇವಲ ಸಂಕೋಚದ ವಸಾಹತುಶಾಹಿ ನಂತರದ ರಾಷ್ಟ್ರವಲ್ಲ ಅಥವಾ ಅಸಹನೆಯ ಮಹಾನ್ ಶಕ್ತಿಯೂ ಅಲ್ಲ; ಅದು ಸಂಯಮ ಕ್ಷೀಣಿಸುತ್ತಿರುವ ಮತ್ತು ಅಧಿಕಾರವೇ ಅಬ್ಬರಿಸುತ್ತಿರುವ ಈ ಛಿದ್ರಗೊಂಡ ಜಗತ್ತಿನಲ್ಲಿ ಪರಿಪೂರ್ಣ ಹಾದಿಯನ್ನು ಅರಸುತ್ತಿರುವ ಒಂದು ಮಹಾನ್ ನಾಗರಿಕತೆಯಾಗಿದೆ. ಇತರರಿಗಿಂತ ಜೋರಾಗಿ ಕಿರುಚುವುದು ಭಾರತದ ಮುಂದಿರುವ ಸವಾಲಲ್ಲ, ಬದಲಿಗೆ ಸ್ಥಿರತೆ, ವಿವೇಚನೆ ಮತ್ತು ಸಮತೋಲನದೊಂದಿಗೆ ಕಾರ್ಯನಿರ್ವಹಿಸುವುದು ಇಂದಿನ ಅಗತ್ಯವಾಗಿದೆ. ನಮ್ಮ ಮುಂದಿರುವ ಕಠಿಣ ವರ್ಷಗಳಲ್ಲಿ ಭಾರತದ ಸ್ಥಾನಮಾನವನ್ನು ನಿರ್ಧರಿಸುವುದು ಈ 'ನಿಶ್ಯಬ್ದ ಪ್ರೌಢಿಮೆ' ಮಾತ್ರ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ʼನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.



Next Story