TK Arun

ಅಡುಗೆಮನೆ ಅವಲಂಬಿಸದ ಕೇರಳಿಗರನ್ನು ಕಾಡುತ್ತಿರುವ ಅಡುಗೆ ಅನಿಲದ ಕೊರತೆ


ಅಡುಗೆಮನೆ ಅವಲಂಬಿಸದ ಕೇರಳಿಗರನ್ನು ಕಾಡುತ್ತಿರುವ ಅಡುಗೆ ಅನಿಲದ ಕೊರತೆ
x
ಅಡುಗೆಗಾಗಿ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಮತ್ತು ನೈಸರ್ಗಿಕ ಅನಿಲಕ್ಕೆ ಪರ್ಯಾಯವಾಗಿ ವಿದ್ಯುತ್ ಬಳಕೆಯನ್ನು ಹೆಚ್ಚು ಮಾಡುವುದು ಭಾರತದ ಮುಂದೆ ಇರುವ ದೀರ್ಘಾವಧಿಯ ಪರಿಹಾರವಾಗಿದೆ. ಇದರಲ್ಲಿ ಅತ್ಯಂತ ದಕ್ಷವಾದ ಆಯ್ಕೆ ಎಂದರೆ ಇಂಡಕ್ಷನ್ ಸ್ಟವ್ ಬಳಕೆ.
Click the Play button to hear this message in audio format

ಕೇರಳದಲ್ಲಿ ಮನೆಯಲ್ಲಿಯೇ ಆಹಾರ ಸಿದ್ಧಪಡಿಸಿಕೊಳ್ಳುವ ಸಾಮರ್ಥ್ಯ ಇದ್ದರೂ ಹೊರಗಿನಿಂದ ಆಹಾರವನ್ನು ಮನೆಗೆ ತರಿಸಿಕೊಳ್ಳುವವರು ಹೆಚ್ಚು. ಈಗ ಎಲ್ಪಿಜಿ ಕೊರತೆ ಆಹಾರದ ಪೂರೈಕೆ ಮೇಲೂ ಪರಿಣಾಮ ಬೀರಿದೆ.

ಮಧ್ಯಪ್ರಾಚ್ಯ ಯುದ್ಧದ ಕಾರಣದಿಂದ ದಿನದಿಂದ ದಿನಕ್ಕೆ ಬಿಗಡಾಯಿಸುತ್ತ ಸಾಗಿರುವ ಅಡುಗೆ ಅನಿಲ ಕೊರತೆಯು ನಾನಾ ರಾಜ್ಯಗಳು ಮತ್ತು ಪಟ್ಟಣಗಳ ಮೇಲೆ ಭಿನ್ನ ರೀತಿಯ ಪರಿಣಾಮಗಳನ್ನು ಬೀರುತ್ತಿದೆ. ಅದರಲ್ಲಿಯೂ ಮುಖ್ಯವಾಗಿ ವಾಣಿಜ್ಯ ಉಪಹಾರ ಗೃಹಗಳಲ್ಲಿ ಉಂಟಾಗಿರುವ ಎಲ್‌ಪಿಜಿ ಕೊರತೆಯಿಂದ ಸಂಕಷ್ಟಕ್ಕೆ ಗುರಿಯಾಗಿರುವ ಕೇರಳದ ಉದಾಹರಣೆಯನ್ನು ಪ್ರಸ್ತಾಪಿಸುವುದು ಇಲ್ಲಿ ಯಥೋಚಿತವೆನಿಸುತ್ತದೆ.

ಯಾಕೆಂದರೆ ಇಲ್ಲಿನ ಬಹುದೊಡ್ಡ ಸಂಖ್ಯೆಯ ಕುಟುಂಬಗಳು ಕನಿಷ್ಠ ಒಂದು ಹೊತ್ತಿನ ಊಟಕ್ಕಾಗಿ ಹೊರಗಿನ ಅಡುಗೆಯನ್ನೇ ಅಲವಲಂಬಿಸಿಕೊಂಡಿದೆ. ಇವರಲ್ಲಿ ಅತ್ಯಂತ ದುರ್ಬಲ ವರ್ಗದವರಿದ್ದಾರೆ ಮತ್ತು ಸಂಗಾತಿ ಅಥವಾ ಮಕ್ಕಳಿಲ್ಲದೆ ಏಕಾಂಗಿಯಾಗಿ ಜೀವನ ನಡೆಸುವವರು ಕೂಡ ಇದ್ದಾರೆ. ಇವರನ್ನು ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ಆರೈಕೆ ಮಾಡಲಾಗುತ್ತದೆ. ಈ ಯೋಜನೆಗಳ ಮೂಲಕ ಅವರನ್ನು ಡೇಕೇರ್ ಕೇಂದ್ರಗಳಿಗೆ ಕರೆತರಲಾಗುತ್ತದೆ ಕೂಡ. ಅಲ್ಲಿ ಅವರು ಪರಸ್ಪರ ಸಮಯ ಕಳೆಯುವುದರ ಜೊತೆಗೆ ಉಚಿತ ಊಟದ ಸೌಲಭ್ಯವನ್ನೂ ಪಡೆಯುತ್ತಾರೆ.

ಅತಿಹೆಚ್ಚು ಪ್ರಮಾಣದ ಹಿರಿಯ ನಾಗರಿಕರನ್ನು ಹೊಂದಿದ ಭಾರತದ ರಾಜ್ಯಗಳ ಪೈಕಿ ಕೇರಳಕ್ಕೆ ಅಗ್ರ ಸ್ಥಾನ. ಅಖಿಲ ಭಾರತ ಮಟ್ಟದ ಪ್ರಮಾಣವಾದ ಶೇ.11ಕ್ಕೆ ಹೋಲಿಸಿದರೆ ಕೇರಳದಲ್ಲಿರುವ ಶೇ.16ರ ಪ್ರಮಾಣವು ಅತ್ಯಂತ ಗಮನಾರ್ಹವಾದುದಾಗಿದೆ. ಇವರಲ್ಲಿ ಅನೇಕರು ಆರ್ಥಿಕವಾಗಿ ಮನೆಯಲ್ಲಿಯೇ ಆಹಾರ ಸಿದ್ಧಪಡಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದರೂ ಕೂಡ ಹೊರಗಿನಿಂದ ಆಹಾರವನ್ನು ಮನೆಗೆ ತರಿಸಿಕೊಳ್ಳಲು ಬಯಸುತ್ತಾರೆ. ಇಂತಹ ಆಹಾರದ ಸರಬರಾಜು ಕೆಲಸವನ್ನು ಅನೌಪಚಾರಿಕ ಕೌಟುಂಬಿಕ ಉದ್ಯಮಗಳು ಅಥವಾ ಸಂಘಟಿತ ಹೋಟೆಲ್ ಉದ್ಯಮಗಳು ಮಾಡುತ್ತವೆ. ಹಾಗಾಗಿ ಈ ಸಂದರ್ಭಗಳನ್ನು ಗಮನಿಸಿದರೆ ಅಡುಗೆ ಅನಿಲದ ಕೊರತೆ ಆಹಾರದ ಪೂರೈಕೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಶೇ.40ಕ್ಕೂ ಹೆಚ್ಚು ಹೋಟೆಲ್‌ಗಳು ಬಂದ್

ಕೇರಳದಲ್ಲಿಇರುವ ಇನ್ನೊಂದು ಸಮಸ್ಯೆ ಎಂದರೆ ಉತ್ತರ ಮತ್ತು ಪೂರ್ವ ಭಾರತದ ವಲಸೆ ಕಾರ್ಮಿಕರು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿ ಬೀಡುಬಿಟ್ಟಿದ್ದಾರೆ. ಅವರಲ್ಲಿ ಬಹುತೇಕರು ತಮ್ಮ ಆಹಾರಕ್ಕೆ ನಂಬಿಕೊಂಡಿರುವುದು ವಾಣಿಜ್ಯ ಉಪಹಾರ ಗೃಹಗಳನ್ನು. ಸ್ಥಳೀಯರು ಇವರನ್ನು ಸಾಮಾನ್ಯವಾಗಿ ʼಬಂಗಾಳಿಗಳುʼ ಎಂದು ಕರೆಯುತ್ತಾರೆ. ಅಂದರೆ ದಕ್ಷಿಣ ಭಾರತದವರಲ್ಲದ ಎಲ್ಲ ವಲಸೆ ಕಾರ್ಮಿಕರನ್ನು ಒಳಗೊಳ್ಳುವ ಒಂದು ಸಾಮಾನ್ಯ ಪದ ಇದಾಗಿದೆ. ಪಶ್ಚಿಮ ಬಂಗಾಲದ ಮತದಾರರು ಚುನಾವಣೆ ಬಂದಿತೆಂದರೆ ಮತ ಚಲಾಯಿಸಲು ತಮ್ಮ ಸ್ವಂತ ಊರಿಗೆ ಮರಳುವ ಪ್ರವೃತ್ತಿ ಹೊಂದಿದ್ದಾರೆ. ಹೀಗಾಗಿ ಕೇರಳದ ವಾಣಿಜ್ಯ ಉಪಹಾರ ಗೃಹಗಳು ಅಡುಗೆ ಅನಿಲದ ಕೊರತೆಯ ಜೊತೆಗೆ ಕಾರ್ಮಿಕರ ಸಮಸ್ಯೆಯನ್ನೂ ಎದುರಿಸಬೇಕಾಗಬಹುದು. ರಾಜ್ಯದಲ್ಲಿ ಶೇ.40ರಷ್ಟು ಹೋಟೆಲ್ಗಳು ಈಗಾಗಲೇ ಮುಚ್ಚಿವೆ ಎಂದು ʼದಿ ಎಕನಾಮಿಕ್ ಟೈಮ್ಸ್ʼ ವರದಿ ಮಾಡಿದೆ.

ಪುರುಷರು ಮತ್ತು ಮಹಿಳೆಯರಿಬ್ಬರೂ ದಿನವೂ ಮನೆಯಿಂದ ಹೊರಗಡೆ ಕೆಲಸ ಮಾಡುವ ಕುಟುಂಬಗಳು ಕನಿಷ್ಠ ಒಂದು ಹೊತ್ತಿನ ಆಹಾರಕ್ಕಾಗಿ ಹೊರಗಿನ ಉಪಹಾರಗೃಹಗಳನ್ನು ಅವಲಂಬಿಸಿವೆ. ಜೊತೆಗೆ ಹಾಸ್ಟೆಲ್ ಮೇಲೂ ಇದರ ಪರಿಣಾಮ ಬೀರಿದೆ.

ಚಾರಿಟೆಲ್ ಟ್ರಸ್ಟ್‌ಗಳ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉಚಿತ ಊಟದ ವ್ಯವಸ್ಥೆ ಮಾಡುತ್ತಿವೆ. ಆ ವ್ಯವಸ್ಥೆಗೂ ಈಗ ಕತ್ತರಿ ಬಿದ್ದಿದೆ. ದೇವರ ಸ್ವಂತ ನಾಡು ಎಂಬ ಖ್ಯಾತಿಗೆ ಒಳಗಾಗಿರುವ ಕೇರಳದಲ್ಲಿ ದೇವಾಲಯಗಳಲ್ಲಿ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಿಕ್ಕೂ ಎಲ್.ಪಿ.ಜಿಯ ಅಗತ್ಯವಿರುತ್ತದೆ.

ಹಾಗೆ ನೋಡಿದರೆ ನೈಸರ್ಗಿಕ ಅನಿಲದ ಕೊರತೆಗಿಂತ ಅಡುಗೆ ಅನಿಲದ ಕೊರತೆಯನ್ನು ನಿಭಾಯಿಸುವುದು ತುಲನಾತ್ಮಕವಾಗಿ ಸುಲಭದ ಕೆಲಸ. ಸದ್ಯಕ್ಕೆ ಭಾರತದ ಎಲ್ಪಿಜಿ ಬಳಕೆಯ ಶೇ.60ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದರೂ ಇತರ ಇಂಧನಗಳ ಉತ್ಪಾದನೆಯನ್ನು ತಕ್ಕಮಟ್ಟಿಗೆ ಕಡಿಮೆ ಮಾಡಿ ಸ್ಥಳೀಯ ಸಂಸ್ಕರಣಾಗಾರಗಳಲ್ಲಿ ಅಡುಗೆ ಅನಿಲದ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಇದನ್ನು ಸರಿದೂಗಿಸಲು ಸಾಧ್ಯವಿದೆ. ಇದನ್ನು ಆಗುಮಾಡಲು ಭಾರತವು ಎಷ್ಟೇ ಬೆಲೆ ತೆತ್ತಾದರೂ ಹೆಚ್ಚುವರಿ ಪ್ರಮಾಣದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಬೇಕಾದ ಅಗತ್ಯವಿದೆ. ಹಾಗೆ ಮಾಡುವ ಮೂಲಕ ಹೆಚ್ಚಿನ ಪ್ರಮಾಣದ ಅಡುಗೆ ಅನಿಲದ ಜೊತೆಗೆ ಇತರ ಇಂಧನಗಳ ಉತ್ಪಾದನೆಯನ್ನೂ ಮಾಡಬೇಕಾಗುತ್ತದೆ.

ಇಷ್ಟನ್ನು ಮಾಡಲು ಒಂದಷ್ಟು ಸಮಯ ಹಿಡಿಯಬಹುದು. ಆದರೆ ಆಹಾರ ಸೇವನೆಯಂತಹ ಸಂಗತಿ ಕಾಯುವಂತಹ ವಿಚಾರವಲ್ಲ. ವಿಶೇಷವಾಗಿ ವೃದ್ಧರು ಮತ್ತು ಅಸಕ್ತರಿಗೆ ಇದರ ತುರ್ತು ಅಗತ್ಯವಿರುತ್ತದೆ ಎಂಬುದನ್ನು ಸರ್ಕಾರ ಮನಗಾಣಬೇಕು. ಈಗಿನ ಪರಿಸ್ಥಿತಿಯಲ್ಲಿ ಯಾರೇ ಆಗಲಿ ಹೊರಗಿನಿಂದ ಆಹಾರವನ್ನು ತರಿಸಿ ಸೇವಿಸಿ ಬದುಕುವ ಆರ್ಥಿಕ ಸಾಮರ್ಥ್ಯವನ್ನು ಹೊಂದಿದ್ದರೂ ಕೂಡ ಇಂಧನ ವೆಚ್ಚದ ಏರಿಕೆ ಅವರ ಆರ್ಥಿಕ ಲೆಕ್ಕಾಚಾರವನ್ನೇ ತಲೆಕೆಳಗು ಮಾಡಿಬಿಡಬಹುದು.

ʼಅತಿಥಿ ಕಾರ್ಮಿಕರುʼ -ಮೆಚ್ಚುಗೆಗೆ ಅರ್ಹ

ಅಂದರೆ ದೇಶಾದ್ಯಂತ ಇರುವ ಸಾಮಾನ್ಯ ಅಡುಗೆ ಅನಿಲದ ಕೊರತೆಯ ಜೊತೆಗೆ ಕೇರಳ ಮುಂದಿನ ದಿನಗಳಲ್ಲಿ ಹಸಿವಿನ ಸಮಸ್ಯೆಯನ್ನು ಕೂಡ ಎದುರಿಸುವ ಸಂಭವವಿದೆ. ಬಹುಕಾಲದಿಂದ ಕೇರಳ ಇಂತಹ ಸಮಸ್ಯೆಯನ್ನು ಎದುರಿಸಿಲ್ಲ. ಈಗ ಸರ್ಕಾರದ ಮಧ್ಯಸ್ಥಿಕೆಯ ಅಗತ್ಯ ಕಾಣುತ್ತಿದೆ. ಏಪ್ರಿಲ್ 9ರಂದು ನಿಗದಿಯಾಗಿರುವ ವಿಧಾನಸಭೆ ಚುನಾವಣೆಗೂ ಮುನ್ನವೇ ಈ ಆಹಾರದ ಸಮಸ್ಯೆಯನ್ನು ಬಗೆಹರಿಸಲು ರಾಜ್ಯ ಚಿಂತನೆ ನಡೆಸಬೇಕಾಗಿದೆ.

ಕೋವಿಡ್ ವ್ಯಾಪಕವಾಗಿ ಹಬ್ಬಿದ ಸಂದರ್ಭದಲ್ಲಿ ರಾಜ್ಯದಲ್ಲಿರುವ ವಲಸೆ ಕಾರ್ಮಿಕರನ್ನು ʼಅತಿಥಿ ಕಾರ್ಮಿಕರುʼ ಎಂದು ಕರೆದು ಅವರಿಗಾಗಿ ಆಹಾರ ಮತ್ತು ವಸತಿ ವ್ಯವಸ್ಥೆಯನ್ನು ಮಾಡಿದ ಯಾವುದಾದರೂ ಒಂದು ರಾಜ್ಯವಿದ್ದರೆ ಅದು ಕೇರಳ. ಅದು ಕಾಲಕಾಲಕ್ಕೂ ಮೆಚ್ಚುಗೆಗೆ ಅರ್ಹ.

ರಾಜಕೀಯ ಪಕ್ಷಗಳು, ಮಹಿಳಾ ಸ್ವಸಹಾಯ ಸಂಘಗಳು ಮತ್ತು ವಿವಿಧ ಜನಪರ ಸಂಘಟನೆಗ ಸ್ವಯಂಸೇವಕರ ಜೊತೆ ಕೆಲಸ ಮಾಡುವ ಒಂದು ಕ್ರಿಯಾತ್ಮಕ ಆಡಳಿತ ವ್ಯವಸ್ಥೆ ಕೇರಳದಲ್ಲಿದೆ. ಇಂತಹ ವ್ಯವಸ್ಥೆ ಇರುವುದರಿಂದಲೇ ಸರ್ಕಾರದ ಸೇವೆಗಳನ್ನು ಅತ್ಯಂತ ವೇಗವಾಗಿ ಮತ್ತು ದಕ್ಷತೆಯಿಂದ ಜನರಿಗೆ ತಲುಪಿಸಲು ಸಾಧ್ಯವಾಗುತ್ತದೆ.

ಇಷ್ಟು ಮಾತ್ರವಲ್ಲದೆ ಕೇರಳದಲ್ಲಿ ಸಮಾಜದ ಬಹುತೇಕ ಎಲ್ಲ ವರ್ಗಗಳೂ ಸಂಘಟಿತವಾಗಿವೆ. ರೆಸ್ಟೋರೆಂಟ್ ಮಾಲೀಕರು ಮತ್ತು ಕಾರ್ಮಿಕರಿಗಾಗಿ ಹಲವಾರು ಸಂಘಟನೆಗಳಿವೆ. ಇಂಧನ ಕೊರತೆಗೆ ತ್ವರಿತ ಪರಿಹಾರಗಳನ್ನು ಕಂಡುಕೊಳ್ಳಲು ಸರ್ಕಾರವು ಈ ಸಂಘಟಿತ ಸಿದ್ಧತೆಗಳನ್ನು ಬಳಸಿಕೊಳ್ಳಲು ಸಾಧ್ಯವಿದೆ.

ವಿದ್ಯುತ್‌ಗೆ ಬದಲಾಗಲು ಸಕಾಲ

ಭಾರತದ ಮುಂದೆ ಇರುವ ದೀರ್ಘಾವಧಿಯ ಪರಿಹಾರವೆಂದರೆ ಅಡುಗೆಗಾಗಿ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಮತ್ತು ನೈಸರ್ಗಿಕ ಅನಿಲಕ್ಕೆ ಪರ್ಯಾಯವಾಗಿ ವಿದ್ಯುತ್ ಬಳಕೆಯನ್ನು ಹೆಚ್ಚು ಮಾಡುವುದು. ವಿದ್ಯುತ್ ಬಳಸಿ ಅಡುಗೆ ಮಾಡಲು ಅತ್ಯಂತ ದಕ್ಷವಾದ ಮಾರ್ಗವೆಂದರೆ ಇಂಡಕ್ಷನ್ ಸ್ಟವ್ ಬಳಕೆ.

ಅಡುಗೆ ಮಾಡುವುದು ಮನುಷ್ಯನಿಗೆ ಮೂಲಭೂತ ಕಾರ್ಯ. ಇದನ್ನು ಯುದ್ಧದ ಅಪಾಯಗಳು, ಪೂರೈಕೆಯಲ್ಲಿನ ತೊಂದರೆಗಳು ಮತ್ತು ವಿದೇಶಿ ವಿನಿಮಯ ದರಗಳ ಏರಿಳಿತಗಳಿಂದ ಮುಕ್ತಗೊಳಿಸುವ ಜರೂರತ್ತನ್ನು ಕೇಂದ್ರ ಸರ್ಕಾರ ಅರ್ಥಮಾಡಿಕೊಳ್ಳಬೇಕು. ಭಾರತ ತನ್ನ ಕಚ್ಚಾ ತೈಲದ ಸುಮಾರು ಶೇಕಡಾ 90 ರಷ್ಟು, ನೈಸರ್ಗಿಕ ಅನಿಲದ ಅರ್ಧದಷ್ಟು ಮತ್ತು ಅಡುಗೆ ಅನಿಲದ ಶೇಕಡಾ 60 ರಷ್ಟು ಭಾಗವನ್ನು ಆಮದು ಮಾಡಿಕೊಳ್ಳುತ್ತಿದೆ. ಆದ್ದರಿಂದ, ಜನರನ್ನು ಆಮದು ಮಾಡಿಕೊಂಡ ಹೈಡ್ರೋಕಾರ್ಬನ್ಗಳಿಂದ ದೂರವಿರಿಸಿ ವಿದ್ಯುತ್ ಚಾಲಿತ ಅಡುಗೆಗೆ ಬದಲಾಗುವಂತೆ ಪ್ರೋತ್ಸಾಹಿಸುವುದು ಸೂಕ್ತವಾಗಿದೆ ಮತ್ತು ಈ ಕಾಲದ ಅಗತ್ಯವಾಗಿದೆ.

ಅಡುಗೆ ಮತ್ತು ಇತರ ವಿದ್ಯುತ್ ಅಗತ್ಯಗಳನ್ನು ಪೂರೈಸಲು ಬೇಕಾದಷ್ಟು ಕಲ್ಲಿದ್ದಲು, ಸೂರ್ಯನ ಬೆಳಕು ಮತ್ತು ಗಾಳಿ ಶಕ್ತಿಯನ್ನು ನಮ್ಮ ದೇಶ ಹೊಂದಿದೆ. ಸಾರಿಗೆ ಸೇರಿದಂತೆ ಎಲ್ಲಾ ಕ್ಷೇತ್ರಗಳ ವಿದ್ಯುತ್ ಬೇಡಿಕೆಯನ್ನು ಪೂರೈಸಲು ನಮ್ಮಲ್ಲಿ ಸಾಕಷ್ಟು ಸಂಪನ್ಮೂಲಗಳಿವೆ ಎಂಬುದನ್ನು ಗಮನಿಸಬೇಕು.

ಇದು ಮಧ್ಯಮಾವಧಿಯ ಯೋಜನೆಯಾಯಿತು, ಆದರೆ ಅಲ್ಪಾವಧಿಯಲ್ಲಿ ಏನು ಮಾಡಬಹುದು? ಸರ್ಕಾರ ಮತ್ತು ರೆಸ್ಟೋರೆಂಟ್ ಸಂಘಟನೆಗಳು ಕೈಜೋಡಿಸಿ, ಸ್ಥಳೀಯ ತಯಾರಕರು ಅಥವಾ ವಿದೇಶಿ ಪೂರೈಕೆದಾರರಿಂದ ಇಂಡಕ್ಷನ್ ಸ್ಟೌವ್ಗಳು ಮತ್ತು ಅವುಗಳಿಗೆ ಸೂಕ್ತವಾದ ಅಡುಗೆ ಪಾತ್ರೆಗಳಿಗಾಗಿ (ಫೆರೋಮ್ಯಾಗ್ನೆಟಿಕ್ ತಳವಿರುವ ಪಾತ್ರೆಗಳು, ಅಂದರೆ ಎಲ್ಲಾ ಎರಕಹೊಯ್ದ ಕಬ್ಬಿಣ ಮತ್ತು ಹೆಚ್ಚಿನ ಸ್ಟೇನ್ಲೆಸ್ ಸ್ಟೀಲ್ ಪಾತ್ರೆಗಳು) ಖಚಿತವಾದ ಆರ್ಡರ್ಗಳನ್ನು ನೀಡಬಹುದು.

ಇನ್ನು ಮಧ್ಯಮ ಅವಧಿಯಲ್ಲಿ, ಇಂಡಕ್ಷನ್ ಸ್ಟವ್ನ ವಿವಿಧ ಭಾಗಗಳನ್ನು — ಅಂದರೆ ಕಾಂತಕ್ಷೇತ್ರವನ್ನು ನಿರ್ಮಿಸುವ ಕಾಪರ್ ಕಾಯ್ಲ್ಗಳಿಂದ ಹಿಡಿದು ಒಡೆಯದ ಗಾಜಿನ ಸೆರಾಮಿಕ್ ಮೇಲ್ಭಾಗದವರೆಗೆ — ತಯಾರಿಸಲು ಸ್ಥಳೀಯ ಸ್ಟಾರ್ಟ್ಅಪ್ಗಳಿಗೆ ಸರ್ಕಾರವು ಪ್ರೋತ್ಸಾಹ ನೀಡಬೇಕು.

ಸಾಂಪ್ರದಾಯಿಕ ಎಲೆಕ್ಟ್ರಿಕ್ ಸ್ಟವ್ಗಳು ಅಷ್ಟೊಂದು ದಕ್ಷವಲ್ಲದಿದ್ದರೂ, ಅಲ್ಪಾವಧಿಯ ತುರ್ತು ಪರಿಸ್ಥಿತಿಯಲ್ಲಿ ಅವು ಸಹಕಾರಿಯಾಗಬಲ್ಲವು. ಆದರೆ ಸರ್ಕಾರದ ಮುಂದಿನ ದೊಡ್ಡ ಸವಾಲೆಂದರೆ, ಪವರ್ ಎಕ್ಸ್ಚೇಂಜ್ಗಳಿಂದ ಹೆಚ್ಚುವರಿ ವಿದ್ಯುತ್ ಪಡೆಯುವುದು ಮತ್ತು ಅಡುಗೆಯ ಸಮಯದಲ್ಲಿ ಉಂಟಾಗುವ ವಿದ್ಯುತ್ ಹೊರೆ ತಡೆದುಕೊಳ್ಳಲು ವಿದ್ಯುತ್ ಜಾಲವನ್ನು ಬಲಪಡಿಸುವುದು.

ಇಲ್ಲಿಯೂ ಸಹ, ಸಂಘಟಿತ ಪ್ರಯತ್ನದ ಮೂಲಕ ವಿದ್ಯುತ್ ಜಾಲದ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು. ಅಡುಗೆಯ ಸಮಯವನ್ನು ಹಂಚಿಕೆ ಮಾಡುವ ಮೂಲಕ ಅಂದರೆ ವಿವಿಧ ಕುಟುಂಬಗಳು ಮತ್ತು ರೆಸ್ಟೋರೆಂಟ್ಗಳು ದಿನದ ಬೇರೆ ಬೇರೆ ಸಮಯಗಳಲ್ಲಿ ಅಡುಗೆ ಮಾಡುವಂತೆ ಸೂಚಿಸುವ ಮೂಲಕ ಗ್ರಿಡ್ ಮೇಲಿನ ಭಾರವನ್ನು ಗಣನೀಯವಾಗಿ ತಗ್ಗಿಸಲು ನಮಗೆ ಸಾಧ್ಯವಿದೆ.

Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story