Vivek Deshpande

ದಲಿತರ ಮೇಲೆ ದೌರ್ಜನ್ಯ| ಖೈರ್ಲಂಜಿಯಿಂದ ದಂಗ್ವಾಸ್‌ವರೆಗೆ: ಮುಸುಕು ಹೊದ್ದು ಮಲಗಿದೆಯೇ ʼಗುಮ್ಮʼ?


ದಲಿತರ ಮೇಲೆ ದೌರ್ಜನ್ಯ| ಖೈರ್ಲಂಜಿಯಿಂದ ದಂಗ್ವಾಸ್‌ವರೆಗೆ: ಮುಸುಕು ಹೊದ್ದು ಮಲಗಿದೆಯೇ ʼಗುಮ್ಮʼ?
x
ಕೇಂದ್ರದಲ್ಲಿ ಮತ್ತು ಬಹುಪಾಲು ರಾಜ್ಯಗಳಲ್ಲಿ ಬಿಜೆಪಿ ಆಡಳಿತದ ಕಳೆದ ಹನ್ನೆರಡು ವರ್ಷಗಳ ಅವಧಿಯಲ್ಲಿ ದಲಿತರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅತಿ ಹೆಚ್ಚು ಪ್ರಕರಣಗಳು ನಡೆದಿವೆ ಮತ್ತು ಎಗ್ಗಿಲ್ಲದೆ ಮುಂದುವರಿದಿದೆ.
Click the Play button to hear this message in audio format

ಹಿಂದುತ್ವ ಶಕ್ತಿಗಳು ಒಂದು ಕಡೆ ಅಧಿಕಾರದ ಆಸೆ ತೋರಿಸುತ್ತಲೇ, ಇನ್ನೊಂದು ಕಡೆ ಹಿಂದೂ ಸಮಾಜದ ಹಳೆಯ ಜಾತಿ ವ್ಯವಸ್ಥೆ ಮತ್ತು ತಾರತಮ್ಯಗಳಿಗೆ ಸದ್ದಿಲ್ಲದೆ ಮರುಜೀವ ನೀಡುತ್ತಿದೆ.

ಒಮ್ಮೆ ಮಹಾರಾಷ್ಟ್ರದ ಭಂಡಾರ ಜಿಲ್ಲೆಯ ಖೈರ್ಲಾಂಜಿ ಗ್ರಾಮವನ್ನು ನೆನಪಿಸಿಕೊಳ್ಳಿ. ಸರಿಯಾಗಿ ಇಪ್ಪತ್ತು ವರ್ಷಗಳ ಹಿಂದೆ, ಅಂದರೆ 2006ರಲ್ಲಿ ಮೇಲ್ಜಾತಿಯವರು ನಡೆಸಿದ ಭೀಕರ ಹತ್ಯೆಗೆ ಈ ಗ್ರಾಮ ಸಾಕ್ಷಿಯಾಗಿತ್ತು. ದಲಿತ ಸಮುದಾಯದ ಭೋತ್ಮಂಗೇ ಕುಟುಂಬದ ನಾಲ್ವರನ್ನು ಅಂದು ಕಗ್ಗೊಲೆ ಮಾಡಲಾಗಿತ್ತು. ಈ ಘಟನೆ ಪ್ರಪಂಚದಾದ್ಯಂತ ದಲಿತರ ಆಕ್ರೋಶಕ್ಕೆ ಕಾರಣವಾಗಿತ್ತು ಮತ್ತು ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು.

ಅಷ್ಟೇ ಭೀಕರವಾದ ಇನ್ನೊಂದು ಘಟನೆ ನಡೆದಿದ್ದು 2015ರ ಮೇ ತಿಂಗಳಲ್ಲಿ. ರಾಜಸ್ತಾನದ ದಂಗ್ವಾಸ್‌ ಗ್ರಾಮದಲ್ಲಿ ನಡೆದ ದಲಿತರ ಹತ್ಯಾಕಾಂಡ ನಮ್ಮಲ್ಲಿ ಎಷ್ಟು ಮಂದಿಗೆ ನೆನಪಿದೆ? ಭೂವಿವಾದದ ಹಿನ್ನೆಲೆಯಲ್ಲಿ ದಲಿತರ ಕುಟುಂಬದ ಐವರನ್ನು ಹತ್ಯೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ನಾಗೌರ್‌ ಜಿಲ್ಲೆಯ ವಿಶೇಷ ಎಸ್‌ಸಿ-ಎಸ್‌ಟಿ ನ್ಯಾಯಾಲಯವು ಮೇಲ್ಜಾತಿಗೆ ಸೇರಿದ ಎಲ್ಲ ನಲವತ್ತು ಆರೋಪಿಗಳನ್ನು ಇತ್ತೀಚೆಗೆ ದೋಷಮುಕ್ತಗೊಳಿಸುವ ವರೆಗೂ ಆ ಪ್ರಕರಣ ಯಾರಿಗೂ ನೆನಪಿದ್ದಂತೆ ಕಾಣುವುದಿಲ್ಲ.

ಈ ಎರಡೂ ಘಟನೆಗಳ ಬಗ್ಗೆ ನಮ್ಮ ಸಾಮೂಹಿಕ ಸ್ಮರಣೆಯಲ್ಲಿ ಇರುವ ಈ ವೈಪರೀತ್ಯದ ಸಂಕೇತವಾದರೂ ಏನು? ಇದು ನಮ್ಮಲ್ಲಿರುವ ಸಾಮೂಹಿಕ ಸಾಮಾಜಿಕ ಪ್ರಜ್ಞೆ ಸತ್ತು ಹೋಗಿದೆ ಎಂಬುದನ್ನೂ ಪ್ರದರ್ಶನ ಮಾಡುವುದಿಲ್ಲವೇ? ಇದಕ್ಕೆ ಉತ್ತರವು ನಿಸ್ಸಂಶಯವಾಗಿ ʼಹೌದುʼ ಎನ್ನುವುದೇ ಆಗಿದೆ.

ಜಡ್ಡುಗಟ್ಟಿದ ಸಾಮಾಜಿಕ ಸ್ಥಿತಿ

ಇಂತಹ ವೈಫಲ್ಯವನ್ನು ನಾವು ಒಪ್ಪಿಕೊಳ್ಳಬೇಕಲ್ಲವೇ? ಆದರೆ ನಾವು ಈ ವೈಫಲ್ಯವನ್ನು ಒಪ್ಪಿಕೊಂಡರೆ ಮಾತ್ರ ಸಾಕಾಗುವುದಿಲ್ಲ. ಮನುಷ್ಯ ಯಾವತ್ತೂ ಹಾಗೆ, ಆತನ ಖಾಸಗಿ ಗೂಡುಗಳಿಗೆ ತೊಂದರೆ ಆಗದೇ ಇದ್ದರೆ ಹಿಂಸಾಚಾರ ಮತ್ತು ಅನ್ಯಾಯ ಆತನ ಗಮನಕ್ಕೇ ಬರುವುದಿಲ್ಲ. ನಮಗೆ ಯಾವುದೇ ರೀತಿಯಲ್ಲಿ ಮುಖ್ಯವೆನಿಸದೇ ಇರುವ ಈ ಸಾಮಾಜಿಕ ಜಡ್ಡುಗಟ್ಟುವ ಸ್ಥಿತಿಗೆ ನಾವು ಇಷ್ಟು ಉನ್ನತ ಸಾಮಾಜಿಕ ಪ್ರಜ್ಞೆಯ ಸ್ಥಿತಿಯಿಂದ ಹೇಗೆ ಮತ್ತು ಏಕೆ ಸಾಗಿದ್ದೇವೆ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಾದ ಕಾಲ ಬಂದಿದೆ.

ಇಂತಹ ಜಡ್ಡುಗಟ್ಟುವಿಕೆ ಅಥವಾ ಉದಾಸೀನ ಪ್ರವೃತ್ತಿಗೆ ದಂಗ್ವಾಸ್‌ ಅಥವಾ ಖೈರ್ಲಂಜಿ ಮಾತ್ರ ಉದಾಹರಣೆಯಲ್ಲ.

ಕೇಂದ್ರದಲ್ಲಿ ಮತ್ತು ಬಹುಪಾಲು ರಾಜ್ಯಗಳಲ್ಲಿ ಬಿಜೆಪಿ ಆಡಳಿತದ ಕಳೆದ ಹನ್ನೆರಡು ವರ್ಷಗಳ ಅವಧಿಯಲ್ಲಿ ದಲಿತರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅತಿ ಹೆಚ್ಚು ಪ್ರಕರಣಗಳು ನಡೆದಿವೆ. ವಿಶ್ವವಿದ್ಯಾಲಯದ ಕ್ಯಾಂಪಸ್‌ಗಳಲ್ಲಿ ತೋರಿದ ತಾರತಮ್ಯದ ಫಲವಾಗಿ ರೋಹಿತ್‌ ವೆಮುಲಾ ಮತ್ತು ಪಾಯಲ್‌ ತಡ್ವಿ ಅವರು ಆತ್ಮಹತ್ಯೆಗೆ ಶರಣಾಗಿರುವುದನ್ನು ಕೂಡ ನಾವು ನೋಡಿದ್ದೇವೆ. ಊನಾ, ಉನ್ನಾವೊ ಮತ್ತು ಹತ್ರಾಸ್‌ ಮತ್ತು ಇತರ ಹತ್ತಾರು ಸ್ಥಳಗಳಲ್ಲಿ ದಲಿತ ಪುರುಷರು ಮತ್ತು ಮಹಿಳೆಯರ ಮೇಲಿನ ದೈಹಿಕ ಹಲ್ಲೆ ಮತ್ತು ಅತ್ಯಾಚಾರಗಳನ್ನು ಕೂಡ ಕಂಡಿದ್ದೇವೆ.

"ಅರ್ಹ ಅಭ್ಯರ್ಥಿ ಲಭ್ಯರಿಲ್ಲ" ಎಂಬ ನೆಪವನ್ನು ಮುಂದಕ್ಕೊಡ್ಡಿ ಮೀಸಲು ಸ್ಥಾನಗಳನ್ನು ಮೇಲ್ಜಾತಿಯ ಅಭ್ಯರ್ಥಿಗಳಿಂದ ತುಂಬುವ ಮೂಲಕ ಮತ್ತು ಆಡಳಿತದ ಉನ್ನತ ಸ್ತರಗಳನ್ನು ಮೇಲ್ಜಾತಿಯವರಿಂದ ತುಂಬಲು ಹಿಂಬಾಗಿಲ ಪ್ರವೇಶದ ಕಾರ್ಯಕ್ರಮಗಳ ಮೂಲಕ ದಲಿತರನ್ನು ಅವರ ಮೀಸಲು ಕೋಟಾದಿಂದ ವಂಚಿಸುವ ಕಪಟ ಪ್ರಯತ್ನವೂ ನಿರಂತರವಾಗಿ ನಡೆಯುತ್ತಿದೆ.

ಅಷ್ಟೇ ಅಲ್ಲದೆ, ಮಧ್ಯಪ್ರದೇಶ ಹೈಕೋರ್ಟ್‌ನ ಗ್ವಾಲಿಯರ್ ಪೀಠದಲ್ಲಿ ಪ್ರಮುಖವಾಗಿ ಮೇಲ್ಜಾತಿಯವರನ್ನು ಒಳಗೊಂಡಿರುವ ಕೆಲವು ವಕೀಲರಿಂದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸುವುದನ್ನು ಹಿಂಸಾತ್ಮಕವಾಗಿ ವಿರೋಧಿಸುವ ಪ್ರವೃತ್ತಿಯನ್ನು ಕೂಡ ನಾವು ಕಂಡಿದ್ದೇವೆ.

ಅದಷ್ಟೇ ಸಾಲದು ಎನ್ನುವಂತೆ, ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಬಿ.ಎಸ್. ಗವಾಯಿ ಅವರು ವಿವಾದಾತ್ಮಕ ಸ್ವಯಂಘೋಷಿತ ದೇವಮಾನವ ಬಾಗೇಶ್ವರ (ಧೀರೇಂದ್ರ ಶಾಸ್ತ್ರಿ) ಅವರ ಮುಂದೆ ಶಿರ ಬಾಗಿ ಆಶೀರ್ವಾದ ಪಡೆದಿರುವುದನ್ನು ಕೂಡ ನಾವು ಈ ಕಣ್ಣುಗಳಿಂದ ನೋಡಿದ್ದೇವೆ.

ಜಾತಿ ಸಮೀಕರಣದ ಪ್ರವೃತ್ತಿ

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಂಕಿಅಂಶಗಳು ಕೂಡ ದೇಶದಲ್ಲಿ ಜಾತಿ ಹಿಂಸಾಚಾರದ ಪ್ರವೃತ್ತಿ ಹೆಚ್ಚುತ್ತಿರುವುದನ್ನು ಬಹಿರಂಗಪಡಿಸುತ್ತಿವೆ. ಆದಾಗ್ಯೂ, ಈ ನಿಟ್ಟಿನಲ್ಲಿ ಇತ್ತೀಚಿನ ಬೆಳವಣಿಗೆಗಳು, ಹಿಂದೂ ಸಮಾಜವು ಸಾಧಿಸಲು ಪ್ರಯತ್ನಿಸುತ್ತಿರುವ ಹಂತ ಹಂತದ ಜಾತಿ ಸಮೀಕರಣದ ಪ್ರವೃತ್ತಿಗೂ ಇತಿಶ್ರೀ ಹಾಡುವ ಬೆದರಿಕೆ ಹಾಕುತ್ತಿವೆ.

ಮೇಲ್ಜಾತಿಯ ವಿದ್ಯಾರ್ಥಿಗಳು ಮತ್ತು ಯುವಕರಿಂದ ಮೀಸಲಾತಿ ವಿರೋಧಿ ಮತ್ತು ಯುಜಿಸಿ ನಿಯಮಗಳ ವಿರುದ್ಧದ ತೀವ್ರ ಆಕ್ರೋಶ ಹಾಗೂ ಸ್ವತಂತ್ರ ಭಾರದ್ವಾಜ್ ಎಂಬ ಗೂಂಡಾನನ್ನು ಒಳಗೊಂಡಿರುವ ಪ್ರಸಂಗವು ಹಿಂದೂ ಸಮಾಜದಲ್ಲಿನ ಅಸಹ್ಯಕರ ಜಾತಿ ಯಥಾರ್ಥತೆಯನ್ನು ಮುಚ್ಚಿಟ್ಟಿದ್ದ ತೆಳ್ಳನೆಯ ಪದರವನ್ನು ಕೂಡ ಕಳಚಿಹಾಕಿದೆ.

ಸ್ವಾತಂತ್ರ್ಯದ ನಂತರದ ಹಿಂದಿನ ದಶಕಗಳಲ್ಲಿ ಎಂದಿಗೂ ಇಲ್ಲದಂತೆ, ಕಳೆದ 12 ವರ್ಷಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವ್ಯವಸ್ಥೆಯ ಸ್ವಾಭಾವಿಕ ಮೇಲ್ಜಾತಿ ಸರ್ವೋಚ್ಚ ಮನೋಭಾವದಿಂದ ಉಂಟಾದ ಅಭೂತಪೂರ್ವ ಜಾತಿ ಹಿಂಸಾಚಾರಕ್ಕೆ ಕೆಳವರ್ಗದ ಹಿಂದೂಗಳು ತುತ್ತಾಗುತ್ತಿದ್ದಾರೆ ಎಂಬುದು ಸ್ಪಷ್ಟ.

ಹಿಂದಿನ ಜಾತಿ ಹಿಂಸಾಚಾರದ ನಿದರ್ಶನಗಳಂತಲ್ಲದೆ, ಪ್ರಸ್ತುತ ಸನ್ನಿವೇಶವು ಹಿಂದುತ್ವದ ಸ್ವಾಭಾವಿಕ ಸಾಮಾಜಿಕ-ರಾಜಕೀಯ ಪಥದ ಅನಿವಾರ್ಯ ಪರಿಣಾಮವಾಗಿ ಜಾತಿ ಕುದಿಯುವ ಕಡಾಯಿಯಂತೆ ಕ್ಷೀಣಿಸುತ್ತಿರುವಂತೆ ಕಾಣುತ್ತಿದೆ.

ತ್ರಿಮುಖ ಕಾರ್ಯತಂತ್ರ

ಹಿಂದುತ್ವ ಶಕ್ತಿಗಳು ವಾಸ್ತವವಾಗಿ ಬಯಸುವುದು ಈ ಪರಿಣಾಮವನ್ನೇ, ಆದರೆ ಅದಕ್ಕೆ ಯಾವುದೇ ರಾಜಕೀಯ ಬೆಲೆ ತೆರಬೇಕಾಗಿಲ್ಲ.

ಅದಕ್ಕಾಗಿ ಅವರು ತ್ರಿಮುಖ ಕಾರ್ಯತಂತ್ರವನ್ನು ಅಳವಡಿಸಿಕೊಂಡಂತೆ ಭಾಸವಾಗುತ್ತಿದೆ: 1) ದಲಿತರು ಮತ್ತು ಇತರ ಹಿಂದುಳಿದ ವರ್ಗಗಳನ್ನು ಹಿಂದೂ ಸಮಾಜದ ಕೆಳಸ್ತರಕ್ಕೆ ತಳ್ಳುವುದು, 2) ಆದರೂ ಒಂದು ಕಡೆ ಬೆದರಿಕೆ ಮತ್ತು ಹಿಂಸಾಚಾರ ಹಾಗೂ ಮತ್ತೊಂದು ಕಡೆ ಅವರ ನಾಯಕರನ್ನು ಹಣಕೊಟ್ಟು ಖರೀದಿಸುವ ಮೂಲಕ ಅವರ ವಿಧೇಯತೆಗೆ ನಿಯಂತ್ರಣ ವಿಧಿಸುವುದು, 3) ಅಲ್ಪಸಂಖ್ಯಾತರಿಂದ, ನಿರ್ದಿಷ್ಟವಾಗಿ ಮುಸ್ಲಿಮರಿಂದ ಅವರಿಗೆ ನಿಜವಾದ ಅಪಾಯವಿದೆ ಎಂದು ನಂಬಿಸಿ ಕಣ್ಣಿಗೆ ಮಣ್ಣೆರಚುವುದು.

ರಾಮದಾಸ್ ಅಠಾವಳೆ, ಚಿರಾಗ್ ಪಾಸ್ವಾನ್ ಮತ್ತು ಮಾಯಾವತಿ ಅವರಂತಹ ನಾಯಕರು ಹಿಂದುತ್ವ ಸಿದ್ಧಾಂತದ ಮುಂದೆ ಸಂಪೂರ್ಣ ಮಂಡಿಯೂರುತ್ತಿರುವುದನ್ನು ನಾವು ಕಾಣುತ್ತಿರುವುದರಲ್ಲಿ ಅಚ್ಚರಿಯೇನೂ ಇಲ್ಲ. ಮತ್ತು ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರದಲ್ಲಿ ಮುಂಚೂಣಿಯ ಸೈನಿಕರಂತೆ ಬಳಕೆಯಾಗುತ್ತಿರುವುದು ಇದೇ ಒಬಿಸಿಗಳು, ದಲಿತರು ಮತ್ತು ಆದಿವಾಸಿಗಳು ಎಂಬುದನ್ನು ನಾವು ಮರೆಯಬಾರದು.

ಬೌದ್ಧಿಕ ಶರಣಾಗತಿ

ದಲಿತ ರಾಜಕಾರಣಿಗಳ ಮಾತು ಬಿಡಿ, ದಲಿತ ಮತ್ತು ಬಹುಜನ ಸಾಮಾಜಿಕ ಚಳವಳಿಗಳು, ಕಲೆ ಮತ್ತು ಸಾಹಿತ್ಯ ರಂಗದಲ್ಲಿ ಇರುವ ಗಾಢ ಮೌನ ಕೂಡ ಶೋಷಿತ ವರ್ಗಗಳ ಬೌದ್ಧಿಕ ಶರಣಾಗತಿಯ ಬಗೆಗಿನ ಸ್ಪಷ್ಟ ಟೀಕೆಯಾಗಿದೆ.

ಅದೇ ಸಮಯದಲ್ಲಿ, ಇದು ಜಾತಿವಾದಿ ಶಕ್ತಿಗಳು ಮೈಕೊಡವಿಕೊಂಡು ಎದ್ದಿರುವುದು ಮತ್ತು ಅವರಲ್ಲಿ ಧೈರ್ಯ ಹೆಚ್ಚುತ್ತಿರುವುದರ ಸೂಚನೆಯಾಗಿದೆ.

ಸ್ವತಂತ್ರ ಭಾರದ್ವಾಜ್ ಪ್ರಸಂಗವು ಇದಕ್ಕೆ ಅಂತಿಮ ಸಾಕ್ಷ್ಯವನ್ನು ಒದಗಿಸುತ್ತದೆ. ಜಂತರ್ ಮಂತರ್‌ನಲ್ಲಿ ನಡೆದ ಜೆನ್-ಝೀ ಪ್ರತಿಭಟನೆಯಲ್ಲಿ ತಾನು ದಲಿತ ವ್ಯಕ್ತಿಯೊಬ್ಬನ ಅಕ್ಷರಶಃ ಅರ್ಧ ಕೊಲೆಯನ್ನು ಹೇಗೆ ಮಾಡಿದೆ ಎಂದು ಅವರು ಪಾಡ್‌ಕಾಸ್ಟ್‌ನಲ್ಲಿ ಘಂಟಾಘೋಷವಾಗಿ ಹೇಳಿಕೊಂಡರೂ ಕೂಡ ಯಾವುದೇ ಪೊಲೀಸ್ ಕ್ರಮವನ್ನು ಆತ ಎದುರಿಸಲಿಲ್ಲ. ಜೊತೆಗೆ ದೆಹಲಿ ಪೊಲೀಸರು ಹಾಗೂ ರಾಜಕಾರಣಿಗಳಾದ ಕಪಿಲ್ ಮಿಶ್ರಾ ಮತ್ತು ಚಿರಾಗ್ ಪಾಸ್ವಾನ್ ಅವರಿಂದ ಆತನನ್ನು ಹೇಗೆ ರಕ್ಷಿಸಲಾಯಿತು ಎಂಬುದನ್ನು ನಾವು ಗಮನಿಸಿದ್ದೇವೆ. ಇದು ಆರ್‌ಎಸ್‌ಎಸ್ ವ್ಯವಸ್ಥೆಯು ಮನುಸ್ಮೃತಿಯ ಕ್ರೂರ ಶ್ರೇಣೀಕೃತ ಮಾದರಿಗೆ ಮರುಜೀವ ನೀಡಲು ಹೊರಟಿರುವ ಮೇಲ್ಜಾತಿಯ ಸ್ವಯಂಘೋಷಿತ ಕಾವಲುಗಾರರಿಗೆ ಹೇಗೆ ಅವಕಾಶ ಮಾಡಿಕೊಟ್ಟಿದೆ ಎಂಬುದಕ್ಕೆ ಸಾಕ್ಷಿ ಒದಗಿಸುತ್ತದೆ.

ಮೋದಿಯವರ ಸರ್ಕಾರ ಸ್ಥಾಪನೆಯಾದ ಆರಂಭದಿಂದಲೇ ಸಂಪೂರ್ಣ ಶಸ್ತ್ರಸಜ್ಜಿತವಾಗಿರುವ ಹಿಂದುತ್ವದ ಶಕ್ತಿಗಳು, ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಮುಂತಾದ ಅಲ್ಪಸಂಖ್ಯಾತರನ್ನು ಅಂಚಿಗೆ ತಳ್ಳುವುದು ಮಾತ್ರವಲ್ಲದೆ, ಶೂದ್ರರು ಮತ್ತು ದಲಿತರಂತಹ ಬಹುಸಂಖ್ಯಾತ ಹಿಂದುಳಿದ ವರ್ಗಗಳನ್ನು ಹಿಂದೂ ಸಮುದಾಯದೊಳಗೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಇದರ ಮುಖ್ಯ ಉದ್ದೇಶ ಯಾವುದೇ ಪ್ರತಿರೋಧವೂ ಇಲ್ಲದೆ ಹೊಸ ರೂಪದ ಜಾತಿಪದ್ಧತಿಯಲ್ಲಿ ಕಷ್ಟಗಳನ್ನು ನುಂಗಿಕೊಳ್ಳುವ ಪ್ರಜೆಗಳನ್ನಾಗಿ ಮಾಡುವುದು.

ರಾಹುಲ್ ಗಾಂಧಿಯವರ ಜಾತಿ ಪ್ರಸ್ತಾಪ

ಹಿಂದೂಯೇತರರನ್ನು ಅಮುಖ್ಯರನ್ನಾಗಿ ಮಾಡುತ್ತಿರುವ ಬಗ್ಗೆ ಸಾಕಷ್ಟು ಬರೆಯಲಾಗಿದೆ, ಆದರೆ, ಹಿಂದುತ್ವ ಶಕ್ತಿಗಳು ಒಂದು ಕಡೆ ಅಧಿಕಾರದ ಆಸೆ ತೋರಿಸುತ್ತಲೇ, ಇನ್ನೊಂದು ಕಡೆ ಹಿಂದೂ ಸಮಾಜದ ಹಳೆಯ ಜಾತಿ ವ್ಯವಸ್ಥೆ ಮತ್ತು ತಾರತಮ್ಯಗಳಿಗೆ ಸದ್ದಿಲ್ಲದೆ ಮರುಜೀವ ನೀಡುತ್ತಿರುವುದನ್ನು ಯಾರೂ ಗಂಭೀರವಾಗಿ ಗಮನಿಸುತ್ತಿಲ್ಲ.

ರಾಜಕೀಯದಲ್ಲಿ ರಾಹುಲ್ ಗಾಂಧಿಯವರ ಜಾತಿ ಪ್ರಸ್ತಾಪವನ್ನು ಟೀಕಿಸುವವರು ತಪ್ಪುದಾರಿಗೆಳೆಯಲು ಇದುವೇ ನಿಖರ ಕಾರಣವಾಗಿದೆ. ಉಳಿದ "ಶೇ. 10" ರಷ್ಟು ಜನರು ಅಧಿಕಾರ ಮತ್ತು ಸಂಪತ್ತಿನ ಸಿಂಹಪಾಲು ಪಡೆದುಕೊಳ್ಳುತ್ತಿರುವುದಕ್ಕೆ ಪ್ರತಿಯಾಗಿ "ಶೇ.90" ರಷ್ಟು ಜನರ ಸಮಸ್ಯೆಯನ್ನು ಪದೇ ಪದೇ ಎತ್ತುವ ಮೂಲಕ ರಾಹುಲ್ ಅವರು ಆರ್‌ಎಸ್‌ಎಸ್ ವ್ಯವಸ್ಥೆಯ ಮೇಲೆ ಮರ್ಮಾಘಾತ ಮಾಡಿದ್ದಾರೆ. ಅವರು ಸಂವಿಧಾನ ವರ್ಸಸ್ ಮನುಸ್ಮೃತಿ ಕದನವನ್ನು ಕಲ್ಪನಾತ್ಮಕ ರೀತಿಯಲ್ಲಿ ಮುಂದಿಡುತ್ತಿದ್ದಾರೆ. ಇಲ್ಲಿ ಅರ್ಥಮಾಡಿಕೊಳ್ಳಬೇಕಾದ ಸಂಗತಿಯೆಂದರೆ ಅವರು ಹಳೆಯ ಜಾತಿ ಗಾಯಗಳನ್ನು ಕೆದಕುತ್ತಿಲ್ಲ, ಬದಲಿಗೆ ಬಿಜೆಪಿ-ಆರ್‌ಎಸ್‌ಎಸ್ ವ್ಯವಸ್ಥೆಯೇ ಅದನ್ನು ಮಾಡುತ್ತಿದೆ. ವಾಸ್ತವವಾಗಿ, ಇದಕ್ಕೆ ಸವಾಲೊಡ್ಡುತ್ತಿರುವ ಅವರು ಅಭಿನಂದನೆಗೆ ಅರ್ಹರಾಗಿದ್ದಾರೆ.

ಅಲ್ಲದೆ, ರಾಹುಲ್ ಗಾಂಧಿಯವರ ಜಾತಿ ನ್ಯಾಯದ ಪರವಾದ ನಿಲುವು, ಬಿಜೆಪಿ-ಆರ್‌ಎಸ್‌ಎಸ್‌ನ ಕೋಮುವಾದಿ ರಾಜಕಾರಣಕ್ಕೆ ಸೂಕ್ತ ಮದ್ದಿನಂತೆ ಕೆಲಸ ಮಾಡುತ್ತಿದೆ. ತಮ್ಮ ನಿಜವಾದ ಹೋರಾಟ ಹಿಂದೂ ಧರ್ಮದ ಹೊರಗಿನವರ ವಿರುದ್ಧ ಅಲ್ಲ, ಬದಲಿಗೆ ಹಿಂದೂ ಚೌಕಟ್ಟಿನೊಳಗೇ ತಮಗೆ ಸಿಗಬೇಕಾದ ಹಕ್ಕುಗಳಿಗಾಗಿ ಎಂಬುದನ್ನು ಮೇಲ್ವರ್ಗವಲ್ಲದ ಬಹುಸಂಖ್ಯಾತರು ಎಷ್ಟು ಚೆನ್ನಾಗಿ ಅರಿತುಕೊಳ್ಳುತ್ತಾರೋ, ಅಷ್ಟೇ ವೇಗವಾಗಿ ಅವರು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಅನಗತ್ಯವಾಗಿ ಕೋಮುವಾದಿ ದಾಳಗಳಾಗಿ ಬಳಕೆಯಾಗುವುದರಿಂದ ಹಿಂದೆ ಸರಿಯುತ್ತಾರೆ.

ಎದುರಿಸುವುದೇ ಅಥವಾ ಮೌನವಾಗಿ ಸಹಿಸುವುದೇ?

ಬಿಜೆಪಿಯ ಬ್ರಾಹ್ಮಣವಾದಿ ಸಿದ್ಧಾಂತದಡಿಯಲ್ಲಿ ಮೇಲ್ಜಾತಿಯ ಪ್ರಾಬಲ್ಯವನ್ನು ಸ್ಪಷ್ಟವಾಗಿ ವಿರೋಧಿಸುವುದರಿಂದ, ಅದರ ಅಲ್ಪಸಂಖ್ಯಾತ ವಿರೋಧಿ ಕಾರ್ಯಸೂಚಿಯನ್ನು ಹಿಮ್ಮೆಟ್ಟಿಸುವುದಲ್ಲದೆ, ಹಳೆಯ ಜಾತಿ ಗಾಯಗಳನ್ನು ಮರುಕಳಿಸುವಂತೆ ಮಾಡಬಹುದು. ಇದು ಹೋರಾಟದ ಗೆರೆಗಳನ್ನು ಹಿಂದೂ ಸಮುದಾಯದ ಒಳಗೇ ಬದಲಾಯಿಸುವ ಸಾಮರ್ಥ್ಯ ಹೊಂದಿದೆ.

ಈ ಬ್ರಾಹ್ಮಣವಾದಿ ಯೋಜನೆಯ ವಿರುದ್ಧ ನಡೆಸುವ ಹೋರಾಟವು ಜಾತಿ ಮತ್ತು ಹಿಂದೂ ಅಧಿಪತ್ಯದ ಪಿಡುಗುಗಳೆರಡನ್ನೂ ಶಾಶ್ವತವಾಗಿ ಅಂತ್ಯಗೊಳಿಸಲು ದಾರಿ ಮಾಡಿಕೊಡುತ್ತದೆ.

ಈ ದಿಕ್ಕಿನಲ್ಲಿ ನಡೆಯುವ ಹೋರಾಟವನ್ನು ಹಿಂದೂ ಸಮಾಜವನ್ನು ಹೊಸ ಜಾತಿ ಸಂಘರ್ಷಕ್ಕೆ ಮುಖಾಮುಖಿಯಾಗುವಂತೆ ಮಾಡಲಾಗುತ್ತದೆ ಎಂದು ನೋಡಬಾರದು. ಹಿಂದುತ್ವ ವ್ಯವಸ್ಥೆಯು ಈಗಾಗಲೇ ಅದನ್ನು ಮಾಡಿಯಾಗಿದೆ. ಈಗ ನಿಮ್ಮ ಮುಂದೆ ಇರುವುದು ಒಂದೋ ಅದನ್ನು ಸಹಿಸಿಕೊಂಡು ಇದ್ದುಬಿಡುವುದು ಅಥವಾ ಅದರ ವಿರುದ್ಧ ಹೋರಾಡುವುದು. ಮತ್ತು ಅದರ ವಿರುದ್ಧ ಹೋರಾಡುವುದರಿಂದ ಅದನ್ನು ಕೊನೆಗೊಳಿಸಲು ಉತ್ತಮ ಅವಕಾಶವಿರುತ್ತದೆ. ಆರ್‌ಎಸ್‌ಎಸ್ ಸಿದ್ಧಾಂತವನ್ನು ವಿರೋಧಿಸುವವರಿಗೆ ಅದನ್ನು ಎದುರಿಸದೆ ಬೇರೆ ದಾರಿಯಿಲ್ಲ.

ನವ-ಜಾತಿವಾದ ಎಂಬ ಪಿಡುಗನ್ನು ಅದರಿಂದ ನೊಂದವರೇ ತಮ್ಮ ಸಂಪೂರ್ಣ ಶಕ್ತಿಯನ್ನು ಬಳಸಿ ಸಂಪೂರ್ಣವಾಗಿ ತೊಡೆದುಹಾಕಲು ಮುಂದಾಗಬೇಕು. ಮತ್ತೊಮ್ಮೆ ಅವಮಾನಕರ ಸಾಮಾಜಿಕ ಶೋಷಣೆಗೆ ಒಳಗಾಗುವುದರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅವರಿಗೆ ಇದು 'ಮಾಡು ಇಲ್ಲವೇ ಮಡಿʼ ಎಂಬಂತಹ ಕೊನೆಯ ಅವಕಾಶವಾಗಿದೆ.

Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು 'ದ ಫೆಡರಲ್ ಕರ್ನಾಟಕ'ದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story