
ಸಾಂದರ್ಭಿಕ ಚಿತ್ರ
ಕರ್ನಾಟಕದಲ್ಲಿ ಸೂರ್ಯನಿದ್ದಾಗಲೇ ಹೆಚ್ಚು ಕೆಲಸ ಮಾಡಿ!
ಬೆಳಗ್ಗೆಸೂರ್ಯ ಹುಟ್ಟುತ್ತಿದಂತೆ ವ್ಯಾಪಾರ-ವ್ಯವಹಾರ ಆರಂಭಗೊಂಡಲ್ಲಿ ಸೂರ್ಯ ಮುಳುಗುವ ವೇಳೆಗೆ ಎಲ್ಲ ವ್ಯವಹಾರ ಮುಕ್ತಾಯ ಹಂತಕ್ಕೆ ಬರಬಹುದು. ಅನಿವಾರ್ಯವಾದಲ್ಲಿ ಮಾತ್ರ ಬ್ಯಾಟರಿ ಅಧರಿತ ವಿದ್ಯುತ್ ಬಳಸಿಕೊಳ್ಳಬಹುದು.
ಸೋಲಾರ್ ವಿದ್ಯುತ್ ಪರಿಪೂರ್ಣವಾಗಿ ಬಳಕೆಯಾಗಬೇಕು ಎಂದರೆ ನಮ್ಮ ಕೆಲಸದ ಅವಧಿಯನ್ನು ಬದಲಿಸಿಕೊಳ್ಳಬೇಕು. ಈಗ ಸೋಲಾರ್ ವಿದ್ಯುತ್ ಬೆಳಿಗ್ಗೆ 8 ರಿಂದ ಸಂಜೆ 4 ವರೆಗೆ ಸಂಪೂರ್ಣವಾಗಿ ಲಭಿಸುತ್ತಿದೆ. ಆಗ ಹೆಚ್ಚು ಕೆಲಸ ಮಾಡಿದರೆ ಕಡಿಮೆ ದರದ ಸೋಲಾರ್ ವಿದ್ಯುತ್ ಹೆಚ್ಚು ಬಳಸಬಹುದು. ಸಂಜೆ 4 ನಂತರ ವಿದ್ಯುತ್ ಬಳಸಬೇಕು ಎಂದರೆ ಹೆಚ್ಚಿನ ದರದಲ್ಲಿ ವಿದ್ಯುತ್ ಖರೀದಿ ಮಾಡಬೇಕು. ಇದು ಕರ್ನಾಟಕದ ಪರಿಸ್ಥಿತಿ.
ಈಗ ಸೋಲಾರ್ ವಿದ್ಯುತ್ ಬೆಳಗ್ಗೆ 11ಕ್ಕೆ ಅತಿ ಹೆಚ್ಚು ಉತ್ಪಾದನೆ ಆಗುವ ಹಂತ ತಲುಪಿದೆ. ನಾವು ಬಳಸುವ ವಿದ್ಯುತ್ ಅತಿ ಹೆಚ್ಚಾಗುವುದು ಮಧ್ಯಾಹ್ನ 1ಗಂಟೆಗೆ. ಸಂಜೆ 4 ಗಂಟೆಗೆ ಸೋಲಾರ್ ಉತ್ಪಾದನೆ ಇಳಿಮುಖಗೊಳ್ಳುತ್ತದೆ. ಈಗ ನಾವು ಅತಿ ಹೆಚ್ಚು ಎಂದರೆ 17059 ಮೆಗಾವ್ಯಾಟ್ ಬಳಸುತ್ತೇವೆ. ಅದರಲ್ಲಿ 5591 ಮೆಗಾವ್ಯಾಟ್ ಸೋಲಾರ್‌ನಿಂದಲೇ ಬರುತ್ತದೆ. ಹಿಂದೆ ನವೀಕರಣ ವಿದ್ಯುತ್ ಹೆಚ್ಚು ಬಳಸುವುದಿಲ್ಲ ಎಂದು ಪ್ರತಿದಿನದ ಬಳಕೆಯಲ್ಲಿ ಕೆಲವು ಭಾಗ ಸೋಲಾರ್, ಪವನ ಮತ್ತು ಜಲ ವಿದ್ಯುತ್‌ಗೆ ಮೀಸಲಿಡಬೇಕೆಂದು ನಿಯಮ ಮಾಡಲಾಯಿತು. ಅದರಂತೆ ಒಟ್ಟು ವಿದ್ಯುತ್ ಬಳಕೆಯಲ್ಲಿ ಶೇ.೩೩ ನವೀಕರಣ ವಿದ್ಯುತ್ ಆಗಿರಬೇಕು. ಮುಂದಿನ ಎರಡು ವರ್ಷಗಳಲ್ಲಿ ಅದು ಶೇ.43.33 ಆಗಬೇಕು. ಆದರೆಈಗಲೇ ನವೀಕರಣ ವಿದ್ಯುತ್ ನಮ್ಮ ಒಟ್ಟು ಬಳಕೆಯಲ್ಲಿ ಶೇ.52 ಆಗಿದೆ. ಸೋಲಾರ್ ಶೇ.11 ಆಗಿದೆ. ಸೋಲಾರ್ ಹೆಚ್ಚು ಬಳಸಲು ಆಗದೆ ಅದರ ಕಡ್ಡಾಯ ಬಳಕೆಯನ್ನು ಶೇ.5 ರಷ್ಟು ಕಡಿತಗೊಳಿಸಲಾಗಿದೆ. ಸೋಲಾರ್ ವಿದ್ಯುತ್ ಉತ್ಪಾದನೆ ಅಧಿಕಗೊಳ್ಳುತ್ತಿದ್ದರೂ ಅದಕ್ಕೆ ತಕ್ಕಂತೆ ವಿದ್ಯುತ್ ಪ್ರಸರಣ ಜಾಲದ ಸಾಮರ್ಥ್ಯ ಅಧಿಕಗೊಂಡಿಲ್ಲ. ಅದರಿಂದ ವಿದ್ಯುತ್ ಇದ್ದರೂ ಅದನ್ನು ಗ್ರಾಹಕರಿಗೆ ಒದಗಿಸಲು ಸಾಧ್ಯವಾಗುತ್ತಿಲ್ಲ.
ಈ ರೀತಿ ವಿದ್ಯುತ್ ವ್ಯರ್ಥವಾಗುತ್ತಿರುವುದು 500 ಗಂಟೆ. ಇದನ್ನು ತಪ್ಪಿಸಬೇಕು ಎಂದರೆ ಸೋಲಾರ್ ಮತ್ತು ಇತರ ನವೀಕರಣ ವಿದ್ಯುತ್ತನ್ನು ದಾಸ್ತಾನು ಮಾಡಲು ಬ್ಯಾಟರಿ ಆಧರಿತ ದಾಸ್ತಾನು ವ್ಯವಸ್ಥೆ ಹಾಗೂ ಪಂಪ್ಡ್ ಸ್ಟೋರೇಜ್ ಸಿಸ್ಟಂ ಅಳವಡಿಸಬೇಕು. ಪಂಪ್ಡ್ ಸ್ಟೋರೇಜ್‌ಗೆ ಪರಿಸರ ಸಮಸ್ಯೆ ತಲೆದೋರುತ್ತದೆ. ಬ್ಯಾಟರಿ ದಾಸ್ತಾನಿಗೆ ಹೆಚ್ಚಿನ ಬಂಡವಾಳ ಬೇಕು.ಬಳಕೆಯಾಗದೇ ಆಗುವ ವಿದ್ಯುತ್ ನಷ್ಟಶೇ.5.6. ಇದು ಶೇ.020 ಮಾತ್ರ ಇರಬೇಕು. ಸಂಜೆ 6 ಗಂಟೆಯನಂತರ ಸೋಲಾರ್ ಇರುವುದಿಲ್ಲ. ಪವನ ವಿದ್ಯುತ್ ರಾತ್ರಿಕೊಡ ಲಭಿಸುತ್ತದೆ. ಆದರೆ ಬೇಡಿಕೆ ಇಳಿಮುಖಗೊಂಡಿರುತ್ತದೆ. ವಿದ್ಯುತ್ ಜಾಲದಲ್ಲಿ ಸಮತೋಲನ ಕಾಯ್ದುಕೊಂಡು ಹೋಗಬೇಕು ಎಂದರೆ ಸೋಲಾರ್ ಉತ್ಪಾದನೆ ಇಳಿಮುಖಗೊಂಡಲ್ಲಿ ಅದನ್ನು ಸರಿತೂಗಿಸುವ ಇಂಧನ ಮೂಲ ಬೇಕು.
ಈಗ ಕಲ್ಲಿದ್ದಲು ವಿದ್ಯುತ್ ಮೂಲಗಳು ಹಳೆಯದಾಗಿದ್ದು ಅಷ್ಟು ವಿದ್ಯುತ್ ಕೊಡುವ ಸಾಮರ್ಥ್ಯ ಪಡೆದಿಲ್ಲ. ಅದರಿಂದ ಜಲ ವಿದ್ಯುತ್ ಮತ್ತು ಪಂಪ್ಡ್ ಸ್ಟೋರೇಜ್ ಹಾಗೂ ಬ್ಯಾಟರಿ ದಾಸ್ತಾನು ವ್ಯವಸ್ಥೆಯನ್ನು ಅವಲಂಬಿಸಬೇಕು. ಖಾಸಗಿ ರಂಗದಲ್ಲಿ ಅಣು ವಿದ್ಯುತ್ ಬಂದಲ್ಲಿ ಆಗ ವಿದ್ಯುತ್ ಜಾಲದ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ.
ಸಾಮಾನ್ಯವಾಗಿ ಮಾರ್ಚ್-ಏಪ್ರಿಲ್‌ನಲ್ಲಿ ಹೆಚ್ಚು ವಿದ್ಯುತ್ ಬಳಕೆಆಗಲಿದೆ. ಕುಡಿಯುವ ನೀರಿನ ಅಂತರ್ಜಲ ಮಟ್ಟ ಇಳಿಮುಖಗೊಳ್ಳುವುದರಿಂದ ನೀರನ್ನು ಪಂಪ್ ಮಾಡಲು ಹೆಚ್ಚು ವಿದ್ಯುತ್ ಬೇಕು. ಕೃಷಿ ಕೂಡ ಹೆಚ್ಚು ವಿದ್ಯುತ್ ಬೇಡುತ್ತದೆ. ಅಲ್ಲದೆ ನಗರಗಳಲ್ಲಿ ಹವಾನಿಯಂತ್ರಣ ಯಂತ್ರಗಳ ಬಳಕೆ ಅಧಿಕಗೊಳ್ಳುತ್ತದೆ. ಹೀಗಾಗಿ ವಿದ್ಯುತ್ ಬೇಡಿಕೆ ಅಧಿಕಗೊಳ್ಳಲಿದೆ. ಈ ವರ್ಷ ಜಲ ವಿದ್ಯುತ್ ಕೊರತೆ ಏನೂ ಇಲ್ಲ.
ಈಗ ಇನ್ನೂ 6 ತಿಂಗಳಿಗೆ ಅಗುವಷ್ಟು ನೀರಿನ ಸಂಗ್ರಹವಿದೆ. ಈಗ ಪ್ರತಿದಿನ 37 ದಶಲಕ್ಷ ಯೂನಿಟ್ ಜಲ ವಿದ್ಯುತ್ ನಿಂದ ಬರುತ್ತದೆ. ಮುಂದಿನ ದಿನಗಳಲ್ಲಿ ಸೋಲಾರ್ ಉತ್ಪಾದನೆ ಪ್ರಮಾಣ ಅಧಿಕಗೊಳ್ಳಲಿದೆ. ಕಡಿಮೆ ದರದಲ್ಲಿ ಸೋಲಾರ್ ವಿದ್ಯುತ್ ಪಡೆಯಬಹುದು. ಆದರೆ ಎಸ್ಕಾಂಗಳು ತಮ್ಮ ನಷ್ಟಗಳನ್ನು ಭರಿಸಲು ಓಪನ್ ಅಕ್ಸೆಸ್ ಗ್ರಾಹಕರ ಮೇಲೂ ಹೆಚ್ಚಿನ ಸುಂಕ ವಿಧಿಸುತ್ತಿವೆ.ಓಪನ್ ಅಕ್ಸೆಸ್‌ನಲ್ಲಿ ಸಂಪೂರ್ಣವಾಗಿ ಸೊಲಾರ್ ವಿದ್ಯುತ್ ಖರೀದಿ ಮಾಡುವವರಿಗೆ ಸುಂಕ ಮುಕ್ತ ಅವಕಾಶ ಕಲ್ಪಿಸಿಕೊಡಬೇಕು. ಕಡಿಮೆ ದರದಲ್ಲಿ ಸೋಲಾರ್ ವಿದ್ಯುತ್ ಲಭಿಸಲಿದೆ. ಅಲ್ಲದೆ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಸೋಲಾರ್ ಬಳಸಲು ಮುಂದಾಗುತ್ತಾರೆ. ಸೋಲಾರ್ ಉತ್ಪಾದನೆ ಅಧಿಕಗೊಂಡಲ್ಲಿ ಇಂಗಾಲಾಮ್ಲದ ಪ್ರಮಾಣವನ್ನು ಶೂನ್ಯಕ್ಕೆ ತರಬಹುದು.
ರೈಲುಗಳು ಸಂಪೂರ್ಣವಾಗಿ ವಿದ್ಯುತ್ ಬಳಸಬೇಕು. ಬಸ್‌ಗಳು ಎಲ್ಲವೂ ಸಂಪೂರ್ಣವಾಗಿ ಬ್ಯಾಟರಿ ಜಾಲಿತ ಆಗಬೇಕು. ಸ್ವಂತ ಕಾರು ಮತ್ತು ದ್ವಿಚಕ್ರವಾಹನ ಬಳಸುವುದನ್ನು ಶೂನ್ಯಕ್ಕೆ ತಂದಲ್ಲಿ ಪರಿಸರ ಶುದ್ಧತೆಯನ್ನು ಕಾಪಾಡಿಕೊಳ್ಳಬಹುದು. ಹವಾ ನಿಯಂತ್ರಿತ ಕಾರುಗಳಲ್ಲಿ ಓಡಾಡುವುದು ಸುಲಭ. ಆದರೆ ಕಾರಿನಿಂದ ಇಳಿದ ಕೂಡಲೇ ಕಲುಷಿತ ಗಾಳಿಯನ್ನು ಸೇವಿಸಬೇಕು. ಈಗ ದೆಹಲಿಯಲ್ಲಿ ಆಗಿರುವುದೇ ಇದು. ಇದು ಎಚ್ಚರಿಕೆ ಗಂಟೆ. ಮುಂದಿನ ದಿನಗಳಲ್ಲಿ ಬೆಂಗಳೂರು ಅದೇ ಪರಿಸ್ಥಿತಿ ತಲುಪಲಿದೆ. ಈಗ ಬೆಂಗಳೂರಿನ ಗಾಳಿಯ ಗುಣಮಟ್ಟ 134-164, ದೆಹಲಿಯ ಗಾಳಿ ಗುಣಮಟ್ಟ 197-201. ಇದನ್ನು ನಾರ್ವೆ ದೇಶಕ್ಕೆ ಹೋಲಿಸಿದಲ್ಲಿ ನಾವು ಎಷ್ಟು ಹಿಂದೆ ಇದ್ದೇವೆ ಎಂಬುದು ತಿಳಿಯುತ್ತದೆ. ಅಲ್ಲಿಯ ಗಾಳಿ ಗುಣಮಟ್ಟ 15-40 ಮಾತ್ರ. ಅಲ್ಲಿ ಹೊಸ ಕಾರು ಬ್ಯಾಟರಿ ಜಾಲಿತ ಅಥವ ಜಲಜನಕ ಇಂಧನ ಹೊಂದಿರಬೇಕು ಎಂದು ನಿಯಮ ಮಾಡಲಾಗಿದೆ.
ಅಲ್ಲಿ ರೈಲು ಪರಿಸರ ಮಾಲಿನ್ಯ ಮಾಡುವುದು ಶೇ 0.2 ಮಾತ್ರ. ಆ ಸಂದರ್ಭ ಬರಬೇಕೆಂದರೆ ವಿದ್ಯುತ್ ಉತ್ಪಾದನೆ ಮೂಲಗಳನ್ನು ಈಗಿನಿಂದಲೇ ಬದಲಿಸುವುದು ಅಗತ್ಯ. ಕಲ್ಲಿದ್ದಲು ಆಧರಿತ ವಿದ್ಯುತ್ ಉತ್ಪಾದನೆ ಕಡಿಮೆ ಮಾಡುವುದು ಅಗತ್ಯ. ಸೋಲಾರ್, ಪವನ , ಜಲ ವಿದ್ಯುತ್‌ಗಳಿಗೆ ಆದ್ಯತೆ ಕೊಡಬೇಕು. ಎಲ್ಲೆಲ್ಲಿ ಸುರಕ್ಷತೆ ಒದಗಿಸಲು ಸಾಧ್ಯ ಅಲ್ಲಲ್ಲಿ ಅಣು ವಿದ್ಯುತ್ ಉತ್ಪಾದನೆಗೆ ಅವಕಾಶ ನೀಡಬಹುದು. ಯಾವುದೇ ವಿದ್ಯುತ್ ಮೂಲವಾದರೂ 24 ಗಂಟೆ ನಿರಂತರ ವಿದ್ಯುತ್ ನೀಡುವ ಮೂಲಗಳು ಒಂದೆರಡು ಇರುವುದು ಅಗತ್ಯ. ಸೋಲಾರ್. ಪವನ ಮತ್ತು ಜಲ ವಿದ್ಯುತ್ ವರ್ಷವಿಡೀ ಸಿಗುತ್ತದೆ ಎಂದು ಹೇಳಲು ಬರುವುದಿಲ್ಲ. ಅದರಿಂದ 24 ನಿರಂತರ ವಿದ್ಯುತ್ ನೀಡುವ ಕೇಂದ್ರಗಳನ್ನು ಹೊಂದಿರುವುದು ಅಗತ್ಯ.ಜಲ ವಿದ್ಯುತ್‌ಗೆ ಜಲಾಶಯಗಳಿರುತ್ತವೆ. ಸೋಲಾರ್ ಮತ್ತು ಪವನ ವಿದ್ಯುತ್‌ಗೆ ಸಂಗ್ರಹಿಸಲು ಬ್ಯಾಟರಿ ವ್ಯವಸ್ಥೆ ಮಾಡಿಕೊಳ್ಳುವುದು ಅಗತ್ಯ.
ಜಲ ವಿದ್ಯುತ್ ಯೋಜನೆಗಳಲ್ಲಿ ಈಗ ಪಂಪ್ಡ್ ಸ್ಟೋರೇಜ್ ಸಿಸ್ಟಂ ಅಳವಡಿಸುವ ಕೆಲಸ ಎಲ್ಲ ಕಡೆ ನಡೆಯುತ್ತಿದೆ. ಎಲ್ಲಜಲ ವಿದ್ಯುತ್ ಕೇಂದ್ರಗಳಲ್ಲಿ ಈ ಹೆಚ್ಚುವರಿವಿದ್ಯುತ್ ಪಡೆಯುವ ವ್ಯವಸ್ಥೆ ಮಾಡುವುದು ಕಷ್ಟ.
ಶರಾವತಿಯಲ್ಲಿ ಇದನ್ನು ಅಳವಡಿಸಬಹುದು. ಆದರೆ ಅಲ್ಲಿ ನಿಸರ್ಗದ ಮೇಲೆ ಈಗಾಗಲೇ ಹೆಚ್ಚಿನ ಒತ್ತಡ ಬಿದ್ದಿರುವುದರಿಂದ ಮತ್ತಷ್ಟು ಹೊರೆ ಹೇರುವುದು ಸರಿಯಲ್ಲ ಎಂಬುದು ಪರಿಸರ ತಜ್ಞರ ಅಭಿಪ್ರಾಯ.
ವಿದ್ಯುತ್ ಬಳಕೆ ಪ್ರಮಾಣ ಹಗಲು ವೇಳೆ ಅಧಿಕಗೊಳ್ಳುವಂತೆ ಮಾಡಬೇಕು. ಇದಕ್ಕೆ ದುಡಿಮೆಯ ಅವಧಿಯನ್ನು ಬದಲಿಸಿಕೊಳ್ಳುವುದು ಅಗತ್ಯ. ಈಗ ಸೋಲಾರ್ ವಿದ್ಯುತ್ ಬೆಳಗ್ಗೆ 8 ಗಂಟೆಗೆ ಲಭಿಸುವುದರಿಂದ ಅದೇವೇಳೆಗೆ ಸರ್ಕಾರಿ ಕಚೇರಿ, ವಾಣಿಜ್ಯ ಮತ್ತು ಕೈಗಾರಿಕೆ ಬಳಕೆ ಅಧಿಕಗೊಂಡಲ್ಲಿ ಸೋಲಾರ್ ವಿದ್ಯುತ್‌ನಲ್ಲೇ ಎಲ್ಲವೂ ಪೂರ್ಣಗೊಳಿಸಬಹುದು. ಈಗ ಸೋಲಾರ್ ವಿದ್ಯುತ್ ದಾಸ್ತಾನಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಇದರಿಂದ ಶೇ.20 ರಷ್ಟು ಹೆಚ್ಚುವರಿ ಬಂಡವಾಳ ಹೂಡಿ ಬ್ಯಾಟರಿ ದಾಸ್ತಾನುವ್ಯವಸ್ಥೆ ಮಾಡಿಕೊಳ್ಳಬೇಕು. ಅದರ ಬದಲು ಬೆಳಗ್ಗೆಸೂರ್ಯ ಹುಟ್ಟುತ್ತಿದಂತೆ ವ್ಯಾಪಾರ-ವ್ಯವಹಾರ ಆರಂಭಗೊಂಡಲ್ಲಿ ಸೂರ್ಯ ಮುಳುಗುವ ವೇಳೆಗೆ ಎಲ್ಲ ವ್ಯವಹಾರ ಮುಕ್ತಾಯ ಹಂತಕ್ಕೆ ಬರಬಹುದು. ಅನಿವಾರ್ಯವಾದಲ್ಲಿ ಮಾತ್ರ ಬ್ಯಾಟರಿ ಅಧರಿತ ವಿದ್ಯುತ್ ಬಳಸಿಕೊಳ್ಳಬಹುದು.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ʼನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ.

