ಸಲಿಂಗಕಾಮಿಗಳ ತಪ್ಪಿತಸ್ಥ ಭಾವನೆಯನ್ನು ನವಿರಾಗಿ ನಿರಚನಗೊಳಿಸುವ ಕಾತಲ್
x

ಸಲಿಂಗಕಾಮಿಗಳ ತಪ್ಪಿತಸ್ಥ ಭಾವನೆಯನ್ನು ನವಿರಾಗಿ ನಿರಚನಗೊಳಿಸುವ 'ಕಾತಲ್'


ಭಾರತೀಯ ಯುವ ಪೀಳಿಗೆಯಲ್ಲಿ ಜಾಗೃತಿ, ಅರಿವು, ಔದಾರ್ಯ ಮತ್ತು ಸ್ವತಂತ್ರ ಮನೋಭಾವದ ಹೊರತಾಗಿಯೂ, ಸಲಿಂಗಕಾಮ ನಿಷಿದ್ಧವಾಗೇ ಉಳಿದುಕೊಂಡಿದೆ. ಎಲ್ಲೋ ಅಪರೂಪಕ್ಕೊಮ್ಮೆ ಹಜಾರದಲ್ಲಿ ಈ ಬಗ್ಗೆ ಚರ್ಚೆ ನಡೆಯಬಹುದಷ್ಟೆ. ಸಲಿಂಗಕಾಮದ ಬಗ್ಗೆ ಜನರು ತಮ್ಮದೇ ಆದ ದೃಷ್ಟಿಕೋನವನ್ನು ಹೊಂದಿದ್ದಾರೆ. ಇರಾನ್ನಂತಹ ದೇಶಗಳಲ್ಲಿ ಸಲಿಂಗಕಾಮಿಗಳು ಬಲವಂತದ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಉಗಾಂಡಾದಲ್ಲಿ ರಾಜ್ಯ ಸಲಿಂಗಕಾಮಿಗಳ ಹತ್ಯೆ ಮಾಡಬಹುದು.

ಭಾರತದಲ್ಲಿ ವ್ಯಕ್ತಿಯೊಬ್ಬನ ಲೈಂಗಿಕ ಆಯ್ಕೆಗಳ ಬಗ್ಗೆ ಮನಸ್ಸಿಲ್ಲದ ಸಮ್ಮತಿಯಿದೆ. ಹೆಚ್ಚಿನ ಸಾಂಪ್ರದಾಯಿಕ ಕುಟುಂಬಗಳು ಮದುವೆ ನಂತರ ʻಎಲ್ಲವೂ ಸರಿಯಾಗುತ್ತವೆʼ ಎಂದು ನಂಬುತ್ತವೆ. ಆದರೆ, ಈ ನಂಬಿಕೆಗೆ ಯಾವುದೇ ಆಧಾರ ಇಲ್ಲ. ಇದು ಮಲಯಾಳಂ ಚಲನಚಿತ್ರ ಕಾತಲ್ - ದಿ ಕೋರ್ನ ತಿರುಳು.

ಸಲಿಂಗಕಾಮದಂಥ ವಿಷಯದ ನಿರ್ವಹಣೆ ಚಲನಚಿತ್ರ ನಿರ್ಮಾಪಕರಿಗೆ ಹಗ್ಗದ ಮೇಲಿನ ನಡಿಗೆಯಂತೆ. ಜಾಗ ರೂಕರಾಗಿರದಿದ್ದರೆ ಚಲನಚಿತ್ರಗಳು ಈ ಪ್ರವೃತ್ತಿಯನ್ನು ತಿರಸ್ಕರಿಸುವಂತೆ, ವಿಮರ್ಶಿಸುವಂತೆ ಅಥವಾ ಹೆಚ್ಚೆಂದರೆ ಪ್ರೋತ್ಸಾಹಿಸಿದಂತೆ ಇಲ್ಲವೇ ನೈತಿಕ ಬೋಧನೆಯಂತೆ ರಚನೆಯಾಗಬಹುದು. ಆದರೆ, ನಿರ್ದೇಶಕ ಜಿಯೋ ಬೇಬಿ ನಿರೂಪಣೆಯನ್ನು ಎಷ್ಟು ಚೆನ್ನಾಗಿ ನಿರ್ವಹಿಸಿದ್ದಾರೆ ಎಂದರೆ ಕಾತಲ್, ಸಮಕಾಲೀನ ಭಾರತೀಯ ಚಿತ್ರರಂಗದ ಅತ್ಯುತ್ತಮ ಚಿತ್ರಗಳಲ್ಲಿ ಒಂದು.

ಮಲಯಾಳಂ ಚಲನಚಿತ್ರ ಸಂಸ್ಕೃತಿಯ ಅತ್ಯುತ್ತಮ ಉದಾಹರಣೆ: ಮಲಯಾಳಂನ ಚಲನಚಿತ್ರ ಸಂಸ್ಕೃತಿಯ ಅತ್ಯುತ್ತಮ ಅಂಶಗಳನ್ನು ಕಾತಲ್ನಲ್ಲಿ ನೋಡಬಹುದು. ತಮಿಳು ಮತ್ತು ಇತರ ಭಾಷೆಗಳ ಮೆಲೋಡ್ರಾಮಾಕ್ಕೆ ಹೋಲಿಸಿದರೆ ಕಾತಲ್ನಲ್ಲಿ ಅತ್ಯಂತ ತೀವ್ರವಾದ ಭಾವನೆಗಳು ಕೂಡ ಗಂಭೀರವಾಗಿವೆ; ಮೌನ, ಒಂದು ನೋಟ ಇಲ್ಲವೇ ಹೆಚ್ಚೆಂದರೆ, ಸಂಕ್ಷಿಪ್ತ ಸಾಲಿನ ಮೂಲಕ ಅಭಿವ್ಯಕ್ತಿ ಸಲಾಗಿದೆ. ಮಮ್ಮುಟಿ (ಮ್ಯಾಥ್ಯೂ ದೇವಸ್ಸಿಯಾಗಿ) ಮತ್ತು ಜ್ಯೋತಿಕಾ (ಓಮನಾ ಪಾತ್ರದಲ್ಲಿ) ತಮ್ಮ ಅಪಾರ ಪರಿಣತಿಯನ್ನು ಬೆಳ್ಳಿ ಪರದೆಗೆ ತಂದಿದ್ದಾರೆ. ವಾಸ್ತವವೆಂದರೆ, ಚಿತ್ರ ನಿರ್ದೇಶಕನ ದೃಷ್ಟಿಕೋನವನ್ನು ಪ್ರತಿಫಲಿಸಲು ಚಿತ್ರದ ಬಹುತೇಕ ಪಾತ್ರಗಳು, ಹಿರಿಯ ದೇವಸ್ಸಿ, ಮ್ಯಾಥ್ಯೂ ಸ್ನೇಹಿತ ಅಥವಾ ಇನ್ನಿತರರು,ಅವರು ಪಾತ್ರ ಎಷ್ಟೇ ಕಿರಿದಾಗಿದ್ದರೂ, ದೊಡ್ಡ ಕ್ಯಾನ್ವಾಸಿನಲ್ಲಿ ಎಚ್ಚರಿಕೆಯಿಂದ ನಿರ್ವಹಿಸ ಲಾಗಿದೆ.

ಮ್ಯಾಥ್ಯೂ ದೇವಸ್ಸಿ ತನ್ನ ತಂದೆಯ ರಾಜಕೀಯ ಪ್ರಖ್ಯಾತಿಯಿಂದಾಗಿ ಪಟ್ಟಣದಲ್ಲಿ ಗೌರವಾನ್ವಿತ ವ್ಯಕ್ತಿ. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸ್ಥಳೀಯ ಎಡ ಪಕ್ಷ ಮ್ಯಾಥ್ಯೂ ಮನವೊಲಿಸಿದೆ. ಚುನಾವಣೆ ಪ್ರಚಾರ ಪ್ರಾರಂಭವಾಗುತ್ತಿದ್ದಂತೆ ಪತ್ನಿ ಓಮನ ದಾಖಲಿಸಿದ ವಿಚ್ಛೇದನ ಅರ್ಜಿ ವಿಚಾರಣೆಗೆ ಬರಲಿದೆ ಎಂಬ ಸುದ್ದಿ ಹರಡುತ್ತದೆ. ಅದು ಸಾಲದು ಎಂಬಂತೆ ಪತಿ ಸ್ವಯಂಘೋಷಿತ ಸಲಿಂಗಕಾಮಿ ಎಂದು ಓಮನ ಆತನಿಂದ ವಿಚ್ಛೇದನ ಕೋರಿರುತ್ತಾರೆ ಎನ್ನುವ ಆಪಾದನೆ ಚರ್ಚೆಗೊಳಗಾಗುತ್ತದೆ.

ವಿಚ್ಚೇದನ ಅರ್ಜಿ ಚುನಾವಣೆ ಸಮೀಪಿಸುತ್ತಿರುವ ತಪ್ಪಾದ ಸಮಯದಲ್ಲಿ ವಿಚಾರಣೆಗೆ ಬರುತ್ತದೆ ಮಾತ್ರವಲ್ಲದೆ, ವಿಚ್ಛೇದನಕ್ಕೆ ನೀಡಿದ ಕಾರಣದಿಂದ ಮ್ಯಾಥ್ಯೂನ ಲೈಂಗಿಕ ಆಯ್ಕೆಯ ವಿಷಯ ಸಾರ್ವಜನಿಕಗೊಂಡು, ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ.

ಚಲನಚಿತ್ರ ಯಾವುದೇ ನೈತಿಕ ನಿಲುವು ತೆಗೆದುಕೊಳ್ಳುವುದಿಲ್ಲ. ವಿಚ್ಛೇದನದ ಅರ್ಜಿಯ ನ್ಯಾಯಸಮ್ಮತತೆ ಯನ್ನು ಮತ್ತು ಪತ್ನಿಯ ಅವಸ್ಥೆ ಯನ್ನು ಒಪ್ಪಿಕೊಳ್ಳುತ್ತದೆ; ನಾಯಕನ ಲೈಂಗಿಕ ಆಯ್ಕೆಯ ಬಗ್ಗೆ ರಕ್ಷಣಾತ್ಮಕ ನಿಲುವು ತೋರಿಸುವುದಿಲ್ಲ. ನಿರೂಪಣೆಯಲ್ಲಿ ಜಾರುವ ಸಾಧ್ಯತೆ ಇದ್ದರೂ, ಬೇಬಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇರಿಸಿ ಅದರಿಂದ ತಪ್ಪಿಸಿಕೊಂಡಿದ್ದಾರೆ. ಉದ್ದೇಶಿತ ವ್ಯಕ್ತಿ ಏನು ಮಾಡುತ್ತಾರೆ ಅಥವಾ ಹೇಳುತ್ತಾರೆ ಎಂದು ಪರಿಗಣಿಸದೆ ಪಡಿಯಚ್ಚು ಅಥವಾ ಬ್ರ್ಯಾಂಡಿಂಗ್ ಮಾಡುವ ಸಮಾಜದಲ್ಲಿ ಇದೊಂದು ಸಾಧನೆಯಾಗಿದೆ.

ಒತ್ತಡ ಹೆಚ್ಚುತ್ತಿದ್ದಂತೆ ಮ್ಯಾಥ್ಯೂ ಸ್ಪರ್ಧೆಯಿಂದ ಹಿಂದೆಗೆಯುವುದಾಗಿ ಪ್ರಸ್ತಾಪಿಸುತ್ತಾರೆ. ಆದರೆ, ಪಕ್ಷ ಸ್ಪರ್ಧೆಯಲ್ಲಿ ಮುಂದುವರಿಯಲು ಹೇಳುತ್ತದೆ. ಕಾಕತಾಳೀಯವೆಂಬಂತೆ, ತಾನು ಸಲಿಂಗಕಾಮಿ ಎಂದು ಘೋಷಿಸಿಕೊಂಡಿರುವ ಫ್ರೆಂಚ್ ಪ್ರಧಾನಿ ಗೇಬ್ರಿಯಲ್ ಅಟ್ಟಲ್ ಅವರು ಇರುವ ಕಾಲದಲ್ಲಿ ಚಲನಚಿತ್ರ ಪ್ರದರ್ಶನಗೊಳ್ಳುತ್ತಿದೆ.

ಸಲಿಂಗಕಾಮದ ನಿರೂಪಣೆಗಳಲ್ಲಿ ಸ್ಥಿತ್ಯಂತರ: ಭಾರತೀಯ ಚಲನಚಿತ್ರದಲ್ಲಿ 1971ರ ಚಲನಚಿತ್ರ ಬದ್ನಾಮ್ ಬಸ್ತಿಯಿಂದ ಆರಂಭಗೊಂಡ ಸಲಿಂಗಕಾಮದ ನಿರೂಪಣೆಗಳು 25 ವರ್ಷಗಳಲ್ಲಿ ಬಹಳ ದೂರ ಕ್ರಮಿಸಿವೆ. ಈ ಚಿತ್ರವನ್ನು ವಿಮರ್ಶಕರು ಸಲಿಂಗಕಾಮವನ್ನು ಬಿಂಬಿಸುವ ಚಿತ್ರ ಎಂದಷ್ಟೇ ಹೇಳಿದ್ದರು. ಭಾರತೀಯ ಚಲನಚಿತ್ರಗಳು ಒಳಿತು ಮತ್ತು ಕೆಡುಕು ಹಾಗೂ ಕಪ್ಪು ಮತ್ತು ಬಿಳಿ ಸಂರಚನೆಗಳನ್ನು ಮೀರಲು ಯತ್ನಿಸುತ್ತಿದ್ದ ಕಾಲಘಟ್ಟವೂ ಆಗಿತ್ತು.

ಇತ್ತೀಚೆಗೆ ಅನೇಕ ಚಲನಚಿತ್ರ ನಿರ್ಮಾಪಕರು ಪ್ರೇಕ್ಷಕರ ಸಂವೇದನಾಶೀಲತೆಗೆ ಧಕ್ಕೆಯಾಗದಂತೆ ಈ ವಿಷಯವನ್ನು ನಿಭಾಯಿಸಿದ್ದಾರೆ. ಆದರೆ, ಸಲಿಂಗಕಾಮಿ ಪಾತ್ರವನ್ನು ಉತ್ಪ್ರೇಕ್ಷಿಸುವ ಮೂಲಕ, ವ್ಯಂಗ್ಯಚಿತ್ರದ ಪಾತ್ರವಾಗಿಸುವ ಮೂಲಕ ಅಥವಾ ಮೇಲ್ನೋಟಕ್ಕೆ ಪರಿಗಣಿಸುವ ಮೂಲಕ ಸಲಿಂಗಕಾಮಿಗಳ ಸಮಸ್ಯೆಗಳನ್ನು ನಯವಿಲ್ಲದೆ ವ್ಯವಹರಿಸಿದ ಚಲನಚಿತ್ರಗಳಿವೆ. ಉದಾಹರಣೆಗೆ, ದೋಸ್ತಾನಾ (2008)ದಲ್ಲಿ ಪ್ರಮುಖ ಪಾತ್ರಗಳು ಬಹುಮಾನಕ್ಕಾಗಿ ಸಲಿಂಗಕಾಮಿ ಸಂಬಂಧವನ್ನು ನಕಲಿಸುತ್ತವೆ. ಚಿತ್ರನಿರ್ಮಾಪಕ ಈ ಮೂಲಕ ಕ್ಲಿಷ್ಟ ಹಾಗೂ ಊಹಿಸಲು ಸಾಧ್ಯವಿಲ್ಲದ ವಿಷಯವನ್ನು ಸ್ವೀಕಾರಾರ್ಹವಾಗುವಂತೆ ಮಾಡಲು ಪ್ರಯತ್ನಿಸುತ್ತಾರೆ; ಪ್ರೇಕ್ಷಕರು ಅದಕ್ಕೆ ಸಮ್ಮತಿ ಸುತ್ತಾರೆ. ಆದರೆ, ಅದು ವಾಸ್ತವವಲ್ಲ.

ಫೈರ್ (1996) ಸಲಿಂಗಕಾಮ ಕುರಿತ ಮೊದಲ ಗಂಭೀರ ಚಿತ್ರ. ವಾಸ್ತವಿಕ ಮತ್ತು ತೀವ್ರ ಸಲಿಂಗಕಾಮಿ ಸಂಬಂಧವನ್ನು ಚಿತ್ರಣದ ಮೂಲಕ ಸಂಪ್ರದಾಯವಾದಿ ಪ್ರೇಕ್ಷಕರನ್ನು ತಲ್ಲಣಗೊಳಿಸಿತು. ಸಂದೇಶ ಎಷ್ಟು ಪ್ರಬಲವಾಗಿತ್ತು ಎಂದರೆ ಹಿಂಸಾತ್ಮಕ ಪ್ರತಿಕ್ರಿಯೆ ಎದುರಿಸಿತು ಮತ್ತು ನಿಷೇಧಕ್ಕೆ ಒತ್ತಾಯ ಬಂದಿತು. ಅದೃಷ್ಟವಶಾತ್, ನಿರ್ಮಾಪಕಿ ದೀಪಾ ಮೆಹ್ತಾ ಬೆದರಿಕೆಗಳಿಗೆ ಅಂಜಲಿ; ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು.

ವಿಮರ್ಶಕರಿಂದ ಶ್ಲಾಘಿಸಲ್ಪಟ್ಟ ಒನಿರ್ ಅವರ ʻಮೈ ಬ್ರದರ್ …ನಿಖಿಲ್ ʼ,ಸಲಿಂಗಕಾಮಿ ಏಡ್ಸ್ ರೋಗಿಯ ಕಥನ. ಶಿಕ್ಷಣ ತಜ್ಞರೊಬ್ಬರ ನೈಜ ಕಥೆಯನ್ನು ಆಧರಿಸಿದ ಅಲಿಗಢ್ (2016) ತನ್ನ ಲೈಂಗಿಕ ಆಯ್ಕೆಯಿಂದ ತೊಂದರೆಗೊಳಗಾದ ಸಲಿಂಗಕಾಮಿ ಪ್ರೊಫೆಸರ್ ಅವಸ್ಥೆಯನ್ನು ಎತ್ತಿ ತೋರಿಸುತ್ತದೆ. ಕಾತಲ್ ಈ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿರುವ ಸ್ಮರಣಾರ್ಹ ಸಿನೆಮಾ.

ಜಿಯೋ ಬೇಬಿ ಅವರ ಕೃತಿ ಇನ್ನಷ್ಟು ಶ್ಲಾಘನೆಗೆ ಪಾತ್ರವಾಗುವ ಅರ್ಹತೆ ಹೊಂದಿದೆ. ಕಾತಲ್ ನಿಧಾನವಾಗಿ ಆದರೆ ಹಿಡಿದಿಟ್ಟುಕೊಳ್ಳುವ ಕತೆಯನ್ನು ಹೊಂದಿರುವ ಪೂರ್ವ ಯುರೋಪಿಯನ್ ಸಿನೆಮಾ ಅಥವಾ ಇತ್ತೀಚಿನ ವರ್ಷಗಳಲ್ಲಿ ಇರಾನಿನ ಅತ್ಯುತ್ತಮ ಚಿತ್ರಗಳನ್ನು ನೆನಪಿಸುತ್ತದೆ. ಚಲನಚಿತ್ರಗಳು ಶಾರುಖ್ ಖಾನ್, ರಜನಿಕಾಂತ್, ಕಮಲ್ ಹಾಸನ್ ಅಥವಾ ಸಲ್ಮಾನ್ ಖಾನ್ ಅವರ ಇತ್ತೀಚಿನ ಚಿತ್ರಗಳಲ್ಲಿ ಇರುವಂತೆ ಮೆಲೋಡ್ರಾಮಾ, ಆಕ್ಷನ್ (ಅದು ಬುದ್ಧಿಹೀನವಾಗಿದ್ದರೂ) ಹಾಗೂ ʻನಾಯಕ ಅಥವಾ ನಾಯಕಿʼ ಮೇಲೆ ಕೇಂದ್ರೀಕರಿಸಿದರೆ ಮಾತ್ರ ವೀಕ್ಷಕರನ್ನು ಸೆಳೆಯುತ್ತವೆ ಎಂಬ ಕಲ್ಪನೆಯನ್ನು ಮುರಿಯುತ್ತದೆ.

ಒಟಿಟಿಯ ವರದಾನ: ಇತ್ತೀಚೆಗೆ ಮಲಯಾಳಂ ಚಲನಚಿತ್ರಗಳು ಮಲೆಯಾಳಂ ಭಾಷಿಕರಲ್ಲದವರಿಗೆ ಒಟಿಟಿ ಮೂಲಕ ಲಭ್ಯವಾಗುತ್ತಿವೆ. ಈ ಚಿತ್ರಗಳು ಪ್ರೇಕ್ಷಕರ ಮನ ಸೆಳೆದಿವೆ. ಬೇಬಿ ʻದಿ ಗ್ರೇಟ್ ಇಂಡಿಯನ್ ಕಿಚನ್ʼ ಚಿತ್ರದಿಂದ ಸಂಚಲನ ಸೃಷ್ಟಿಸಿದರು ಸಿನೆಮಾ ಗಂಡನ ಮನೆಯಲ್ಲಿ ನವವಿವಾಹಿತ ಯುವತಿಯ ಪ್ರಕ್ಷುಬ್ಧತೆಯನ್ನು ಸೊಗಸಾಗಿ ಹೊರಹಾಕುತ್ತದೆ.

ಉನ್ನತ ಉತ್ಪಾದನೆ ಗುಣಮಟ್ಟದೊಟ್ಟಿಗೆ ಲೈಂಗಿಕ ಆಯ್ಕೆಗಳನ್ನು ಪ್ರತ್ಯೇಕಿಸುವ ಮೂಲಕ ಕಾತಲ್ ಇನ್ನೊಂದು ಹೆಜ್ಜೆ ಮುಂದೆ ಇರಿಸುತ್ತದೆ ಹಾಗೂ ವ್ಯಕ್ತಿಯೊಬ್ಬತನ್ನ ಖಾಸಗಿ ಜಾಗದಲ್ಲಿ ಉಳಿದವರಿಗಿಂತ ಭಿನ್ನವಾಗಿರುವುದರಿಂದಷ್ಟೇ ಆತ ಯಾರು ಮತ್ತು ಏನು ಎಂದು ನಿರ್ಧರಿಸಬಾರದು ಎಂಬ ಅಂಶವನ್ನು ಮನಗಾಣಿಸುತ್ತದೆ. ಆದರೆ, ಸಮಾಜದ ಸ್ವರೂಪವನ್ನು ಪರಿಗಣಿಸಿದರೆ, ಅವರು ಇವತ್ತಲ್ಲದಿದ್ದರೆ ನಾಳೆ ಖಂಡಿತವಾಗಿಯೂ ಬಿರುಗಾಳಿಗೆ ಸಿಲುಕುವುದು ಖಂಡಿತ.

Read More
Next Story