
ಗಾಜಾ ಮೇಲಿನ ಇಸ್ರೇಲ್ ದಾಳಿ: ನಾಶವಾದ ಆಧುನಿಕ, ಪ್ರಗತಿಪರ ಪ್ರಪಂಚ ಎಂಬ ಮಿಥ್ಯೆ
ಈಗಿನ ಸ್ಥಿತಿಯಲ್ಲಿ ಸೋವಿಯತ್ ಒಕ್ಕೂಟ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡಿದ್ದೇ ಹೌದಾದರೆ ಜಗತ್ತು ಹೀಗಿರುತ್ತಿರಲಿಲ್ಲ. ಯಾವುದೇ ಸವಾಲು ಇಲ್ಲದೆ ಅಮೆರಿಕವು ತನ್ನ ಹಿತಾಸಕ್ತಿಗಳನ್ನು ನಿರ್ದೇಶಿಸಲು ಸಾಧ್ಯವಾಗುತ್ತಿರಲಿಲ್ಲ...
ಹಿಂದಿನ ದಿನಮಾನಗಳಿಗೆ ಹೋಲಿಸಿದರೆ ಆಧುನಿಕ ಜಗತ್ತು ಭಿನ್ನವಾಗಿದೆ ಮತ್ತು ಹೆಚ್ಚು ಜಾಗೃತವಾಗಿದೆ ಎಂದು ಯಾರಾದರೂ ಅಂದುಕೊಂಡಿದ್ದರೆ ಅದು ಅವರ ಭ್ರಮೆ. ಕಳೆದ ಎರಡು ವರ್ಷಗಳಿಂದ ಗಾಜಾ ಮೇಲೆ ಇಸ್ರೇಲ್ ನಡೆಸುತ್ತಿರುವ ‘ನರಮೇಧ’ವನ್ನು ಕಂಡವರಿಗೆ ಜಗತ್ತು ಹೆಚ್ಚೇನು ಬದಲಾಗಿಲ್ಲ ಎಂಬುದು ಶ್ರುತವಾಗುತ್ತದೆ. ಜಗತ್ತು ತನ್ನ ದೃಷ್ಟಿಕೋನದಲ್ಲಿ ಮಧ್ಯಕಾಲೀನ ಸ್ಥಿತಿಗಿಂತ ಆಚೆಗೆ ಮುಂದುವರಿದಿಲ್ಲ. ಜೊತೆಗೆ ‘ಅಂತಾರಾಷ್ಟ್ರೀಯ ವ್ಯವಸ್ಥೆ’ ಎಂದು ಕರೆಯಲ್ಪಡುವ ವ್ಯವಸ್ಥೆಯು ನಿಜಕ್ಕೂ ವ್ಯವಸ್ಥಿತವಾಗಿಲ್ಲ ಎಂಬುದಕ್ಕೆ ಪಕ್ಕಾ ನಿದರ್ಶನವೂ ಹೌದು.
1994ರಲ್ಲಿ ರುವಾಂಡವು ಸತತ ನೂರು ದಿನಗಳ ಕಾಲ ನಡೆದ ನರಮೇಧದಿಂದ ದಂಗುಬಡಿದು ಹೋಯಿತು. ಆಡಳಿತಾರೂಢ ಹುಟು ಸಮುದಾಯವು ಎಂಟು ಲಕ್ಷದಷ್ಟು ಟುಟುಗಳನ್ನು ಮತ್ತು ಸಾಕಷ್ಟು ಹುಟುಗಳನ್ನು ಕೊಂದು ಅಟ್ಟಹಾಸ ಮೆರೆಯಿತು. ರಕ್ತಪಾತವೇ ಹರಿಯಿತು. ಆ ಕಾಲದಲ್ಲಿನ ಅಂತರ್ಯುದ್ಧದಿಂದ ಉಂಟಾದ ನರಹತ್ಯೆಯು ಇಷ್ಟೊಂದು ಅಗಾಧ ಪ್ರಮಾಣದಲ್ಲಿತ್ತು ಎಂಬುದು ಸಕಾಲದಲ್ಲಿ ನಮ್ಮ ಗಮನಕ್ಕೇ ಬರಲಿಲ್ಲ. ಮಾಹಿತಿ ಹರಿವಿನಲ್ಲಿ ಆಗಿರುವ ವಿಳಂಬದಿಂದಾಗಿ ತಡೆಯಲು ಸಾಧ್ಯವಾಗಲಿಲ್ಲ. ಇಲ್ಲವಾದರೆ ಅದನ್ನು ತಡೆಯಲು ನಾವು ಮಧ್ಯಪ್ರವೇಶ ಮಾಡುತ್ತಿದ್ದೆವು ಎಂದು ವಿಶ್ವಸಂಸ್ಥೆ ಮತ್ತು ಶಕ್ತ ರಾಷ್ಟ್ರಗಳು ಹೇಳಿಕೊಂಡಿದ್ದವು.
ಆ ಕಾಲದಲ್ಲಿ ಇಂಟರ್ನೆಟ್ ಯುಗ ಅಷ್ಟೊಂದು ಪ್ರಮಾಣದಲ್ಲಿ ವಿಸ್ತರಣೆ ಹೊಂದಿರಲಿಲ್ಲ. ಸಂವಹನವು ತೀರಾ ಸಾಂಪ್ರದಾಯಿಕ ವಿಧಾನಗಳ ಮೂಲಕವೇ ನಡೆಯುತ್ತಿತ್ತು. ಹಾಗಾಗಿ ವಿಶ್ವಸಂಸ್ಥೆ ಮತ್ತು ಅವರ ಶಕ್ತಿಶಾಲಿ ಸದಸ್ಯರು ಅಂತಹ ಕಾರಣಗಳನ್ನು ಮುಂದಿಟ್ಟು ವಿನಾಯ್ತಿಯನ್ನು ಪಡೆದರು.
ಪಂಚ-ರಾಷ್ಟ್ರಗಳೆಂಬ ಮಾಫಿಯಾ
ಆದರೆ ಈಗ ಈ 21ನೇ ಶತಮಾನದಲ್ಲಿ, ಸಾಮಾಜಿಕ ಮಾಧ್ಯಮವೇ ಉಚ್ಛ್ರಾಯ ಸ್ಥಿತಿಯಲ್ಲಿರುವಾಗ ಗಾಜಾ ಮೇಲಿನ ದಾಳಿಯನ್ನು ಪ್ರಪಂಚದಾದ್ಯಂತ ಯಾವುದೇ ಮುಚ್ಚುಮರೆ ಇಲ್ಲದೆ ತಕ್ಷಣಕ್ಕೆ ವೀಕ್ಷಿಸಬಹುದು.ಹಾಗಾಗಿ ಈಗ ಕ್ಷಮೆಯಾಗಲಿ, ವಿನಾಯ್ತಿಯ ಮಾತೇ ಇಲ್ಲ. ಈಗ ವಿಶ್ವಸಂಸ್ಥೆಯು ಪಂಚರಾಷ್ಟ್ರಗಳೆಂಬ ಮಾಫಿಯಾದ ಸಂಕೋಲೆಯಲ್ಲಿ ಬಂಧಿಯಾಗಿದೆ. ಇಸ್ರೇಲ್ ದಾಳಿಯನ್ನು ನಿಲ್ಲಿಸುವಂತೆ ಒತ್ತಾಯಿಸುವ ನಿರರ್ಥಕ ನಿರ್ಣಯಗಳ ಹೊರತಾಗಿ ಉಳಿದ 188 ರಾಷ್ಟ್ರಗಳು ಹೆಬ್ಬೆರಳುಗಳನ್ನು ತಿರುವುದನ್ನು ಬಿಟ್ಟರೆ ಬಹುತೇಕ ಬೇರಿನ್ನೇನನ್ನೂ ಮಾಡಿಲ್ಲ.
ಭದ್ರತಾ ಮಂಡಳಿಯ ಕಾಯಂ ರಾಷ್ಟ್ರಗಳು ಮತ್ತು ಅಮೆರಿಕದ ಇಬ್ಬರು ಮಿತ್ರ ದೇಶಗಳಾದ ಇಂಗ್ಲಂಡ್ ಮತ್ತು ಫ್ರಾನ್ಸ್ ಬಹುಪಾಲು ಇಸ್ರೇಲ್ ಬೆಂಬಲಕ್ಕೆ ನಿಂತಿವೆ. ತಮ್ಮ ಬೆನ್ನನ್ನು ತಾವು ಉಳಿಸಿಕೊಳ್ಳಲು ಅವರು ಪ್ಯಾಲೆಸ್ತೀನ್ ರಾಷ್ಟ್ರವನ್ನು ಮಾನ್ಯಮಾಡಿದ್ದಾರೆ. ಅವರಿಗದು ಕೇವಲ ಪ್ರಾಯೋಗಿಕ ಉದ್ದೇಶವನ್ನು ಬಿಟ್ಟರೆ ಅದಕ್ಕೆ ಬೇರೇನೂ ಅರ್ಥ ಉಳಿದಿಲ್ಲ. ಅಮೆರಿಕವಂತೂ ನಿರ್ಲಜ್ಜವಾಗಿ ಇಸ್ರೇಲ್ ಪರ ನಿಂತಿದೆ. ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದ ‘ಕಾಸ್ಟ್ ಆಫ್ ವಾರ್’ ವರದಿಯ ಪ್ರಕಾರ, ಗಾಜಾ ಮೇಲೆ ದಾಳಿ ಶುರುವಾದ ಎರಡು ವರ್ಷಗಳ ಅವಧಿಯಲ್ಲಿ ಅಮೆರಿಕ ಇಸ್ರೇಲಿಗೆ 21.7 ಕೋಟಿ ಡಾಲರ್ ನೆರವನ್ನು ನೀಡಿದೆ.
ಶಕ್ತಿಶಾಲಿಗಳು, ಗೌರವಾನ್ವಿತರು ಯಾವತ್ತೂ ದುರ್ಬಲರ ಸಹಾಯಕ್ಕೆ ಬರಬೇಕೆಂದು ನಿರೀಕ್ಷಿಸುವ ‘noblesse oblige’ಎನ್ನುವ ಸಕ್ಕರೆ ಲೇಪಿತ ಕಲ್ಪನೆಯ ಹಿಂದಿನ ಕಠಿಣ ವಾಸ್ತವವನ್ನು ಇದು ಬಯಲು ಮಾಡುತ್ತದೆ. ಹಾಗಾಗಿ ಇದು ಜಗತ್ತಿನ ಪ್ರತಿಕ್ರಿಯೆಯನ್ನು ಎಚ್ಚರಿಸುವಂತಿದೆ.
‘ಜಗತ್ತು ನಮ್ಮನ್ನು ಸಂಪೂರ್ಣವಾಗಿ ಮರೆತಂತಿದೆ’ ಎಂದು ಪ್ಯಾಲೆಸ್ತೀನಿಯರು ಅದರಲ್ಲೂ ವಿಶೇಷವಾಗಿ ಗಾಜಾದಲ್ಲಿರುವವರು ಮತ್ತೆ ಮತ್ತೆ ವಿಷಾದದಿಂದ ಹೇಳುತ್ತಲೇ ಇದ್ದಾರೆ. ಇಸ್ರೇಲಿ ಆಕ್ರಮಣವನ್ನು ನಿಲ್ಲಿಸಲು ಯಾರಿಂದಲೂ ಏನೂ ಮಾಡಲು ಸಾಧ್ಯವಾಗದೇ ಇರುವುದರಿಂದ ಈ ಮೊರೆಯ ಹಿಂದಿನ ಸಂಕಟವನ್ನು ಅರ್ಥಮಾಡಿಕೊಳ್ಳಬಹುದಾಗಿದೆ. 2023ರ ಅಕ್ಟೋಬರ್ ಏಳರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿ ನಿಜಕ್ಕೂ ಕ್ರೂರತನದಿಂದ ಕೂಡಿತ್ತು. ಈ ಭಯೋತ್ಪಾದಕ ದಾಳಿಯಲ್ಲಿ ಇಸ್ರೇಲಿ ಸೈನಿಕರು ಮಾತ್ರವಲ್ಲದೆ ನಾಗರಿಕರನ್ನೂ ಗುರಿಯಾಗಿ ಇರಿಸಿಕೊಳ್ಳಲಾಗಿತ್ತು. ಇದರಲ್ಲಿ ಹತರಾದವರು 1200ಕ್ಕೂ ಹೆಚ್ಚು ಮಂದಿ. 200ಕ್ಕೂ ಅಧಿಕ ಮಂದಿಯನ್ನು ಹಮಾಸ್ ಉಗ್ರರು ಒತ್ತೆಯಾಳುಗಳಾಗಿ ಇರಿಸಿಕೊಂಡರು.
ಇಸ್ರೇಲ್ ಅಸಮಂಜಸ ಪ್ರತಿಕ್ರಿಯೆ
ಅದಕ್ಕೆ ಇಸ್ರೇಲ್ ಪ್ರತಿಕ್ರಿಯೆ ಸಹಜವೇ ಆಗಿತ್ತು. ಆದರೆ ನಾಗರಿಕ ಹಾಗೂ ಪ್ರಜಾಪ್ರಭುತ್ವ ರಾಷ್ಟ್ರವೆಂದು ಹೇಳಿಕೊಳ್ಳುವ ಅದು ತನ್ನ ಪ್ರತಿಕ್ರಿಯೆಯನ್ನು ದಾಳಿಯ ಸೂತ್ರಧಾರರನ್ನು ಸೆರೆಹಿಡಿದು ಶಿಕ್ಷಿಸುವುದಕ್ಕೆ ಮಾತ್ರ ಸೀಮಿತಗೊಳಿಸಬೇಕಿತ್ತು. ದಾಳಿಗೆ ಏನೇನೂ ಸಂಬಂಧವಿಲ್ಲದ ಇಡೀ ಜನಸಂಖ್ಯೆಯನ್ನು ಸೇನಾಬಲದಿಂದ ಹತ್ತಿಕ್ಕುವ ಪ್ರಯತ್ನ ಮಾಡಬಾರದಿತ್ತು.
ಇತ್ತೀಚಿನ ಒಂದು ಅಂದಾಜಿನ ಪ್ರಕಾರ ಇಸ್ರೇಲಿ ದಾಳಿಯಲ್ಲಿ ಸತ್ತವರ ಸಂಖ್ಯೆ ಸುಮಾರು 66000. ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಗಾಜಾದಲ್ಲಿರುವ 20 ಲಕ್ಷ ಜನಸಂಖ್ಯೆಯಲ್ಲಿ ಉಳಿದವರೆಲ್ಲರೂ ತಮ್ಮ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇದರ ಜೊತೆಗೆ ಇಸ್ರೇಲ್ ಹಾಕಿರುವ ಆಹಾರ ದಿಗ್ಬಂಧನದಿಂದಾಗಿ ಅದು ಮುತ್ತಿಗೆ ಹಾಕಿದ ಪ್ರದೇಶದಲ್ಲಿ ಮಾನವ ನಿರ್ಮಿತ ಬರವನ್ನು ಸೃಷ್ಟಿಸಿದೆ. ಇದು ಅಲ್ಲಿರುವ ಎಲ್ಲರ ಮೇಲೆ ಪರಿಣಾಮವನ್ನು ಬೀರಿದೆ.
ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದ ಸುದೀರ್ಘ ಇತಿಹಾಸವನ್ನು ಅವಲೋಕಿಸಿದರೆ ಬೆಂಜಮಿನ್ ನೆತನ್ಯಾಹು ಸರ್ಕಾರ ಮತ್ತು ಅವರ ಬಲಪಂಥೀಯ ಸಂಪ್ರದಾಯವಾದಿ ಮಿತ್ರರು ಹಮಾಸ್ ದಾಳಿಯನ್ನು ಇಡೀ ಗಾಜಾವನ್ನು ಬಾಂಬ್ ಸುರಿಮಳೆಗೆರೆದು ಪುಡಿಗಟ್ಟಲು ಹಾಗೂ ಮಹಾದುರಂತ (ನಕಬಾ)ವನ್ನು ಮರುಸೃಷ್ಟಿಸಲು ಸಿಕ್ಕ ಐತಿಹಾಸಿಕ ಅವಕಾಶವೆಂದು ಪರಿಗಣಿಸಿದರು. 1948ರಲ್ಲಿ ನಡೆಸಿದ ಮಹಾದುರಂತದಲ್ಲಿ ಸಶಸ್ತ್ರ ಯಹೂದಿ ಗುಂಪುಗಳು ಮತ್ತು ಹೊಸದಾಗಿ ರಚಿಸಲಾದ ಇಸ್ರೇಲಿ ರಾಷ್ಟ್ರದಿಂದ ಏಳೂವರೆ ಲಕ್ಷಕ್ಕೂ ಹೆಚ್ಚು ಮಂದಿ ಪ್ಯಾಲೆಸ್ತೀನಿಯರನ್ನು ಅವರ ಮನೆಗಳಿಂದ ಬಲವಂತವಾಗಿ ಸ್ಥಳಾಂತರಿಸಲಾಯಿತು.
ಅರಬ್ ರಾಷ್ಟ್ರಗಳ ನಿಷ್ಕ್ರಿಯತೆ
ಏಳು ದಶಕಗಳಿಗೂ ಹಿಂದೆ ಪ್ಯಾಲೆಸ್ತೀನ್ ನೆರೆಯ ಅರಬ್ ರಾಷ್ಟ್ರಗಳಾದ ಈಜಿಪ್ಟ್, ಜೋರ್ಡಾನ್, ಸಿರಿಯಾ, ಇರಾಕ್ ಮತ್ತು ಆ ವಲಯದ ಇತರ ರಾಷ್ಟ್ರಗಳು ಯಹೂದಿ ಆಕ್ರಮಣವನ್ನು ಹಿಮ್ಮೆಟ್ಟಿಸಲು ಪ್ರಯತ್ನ ನಡೆಸಿದವು. ಅದು ಯಶಸ್ವಿಯಾಗಲಿಲ್ಲ. ಆದರೆ ಈಗ 2025ರಲ್ಲಿ ಅದೇ ಅರಬ್ ರಾಷ್ಟ್ರಗಳು ಮಾಡಿದ್ದೇನೂ ಇಲ್ಲ. ಮಧ್ಯಸ್ಥಿತಿಕೆಯ ಕೆಲ ಪ್ರಯತ್ನಗಳನ್ನು ಬಿಟ್ಟರೆ ರಾಜತಾಂತ್ರಿಕ ಒತ್ತಡ ಅಥವಾ ಸೇನಾ ತಂತ್ರದ ಮೂಲಕ ಯಾವುದೇ ಅರಬ್ ರಾಷ್ಟ್ರವು ಯಾವುದೇ ಉಪಕ್ರಮವನ್ನು ತೋರಿಸಲಿಲ್ಲ.
ಇರಾನ್ ಬೆಂಬಲಿತ ಲೆಬನಾನಿನ ಹಿಜ್ಬುಲ್ಲಾ ಮತ್ತು ಯೆಮನ್ನಿನ ಹೌಥಿಗಳು ಇಸ್ರೇಲಿನ ಮೇಲೆ ಕ್ಷಿಪಣಿಗಳನ್ನು ಹಾರಿಸುವ ಮೂಲಕ ಮತ್ತು ಅಂತಾರಾಷ್ಟ್ರೀಯ ಜಲಮಾರ್ಗದಲ್ಲಿ ಸರಕು ಹಡಗುಗಳಿಗೆ ಗುರಿಯಿರಿಸುವ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಇದು ತೀರಾ ಸಾಂಕೇತಿಕವಾಗಿತ್ತು ಮತ್ತು ಇಸ್ರೇಲಿನಿಂದ ಬಹುಸುಲಭವಾಗಿ ಹಿಮ್ಮೆಟ್ಟಿಸಲ್ಪಟ್ಟಿತು. ಇಸ್ರೇಲ್-ಅಮೆರಿಕ ಜಂಟಿ ದಾಳಿಯಿಂದ ಇರಾನಿನ ಪರಮಾಣು ಮೂಲಸೌಕರ್ಯಕ್ಕೆ ತೀವ್ರ ಹಾನಿಯುಂಟಾಯಿತು. ಇದರಿಂದ ಹಿಜ್ಬುಲ್ಲಾ ಬಹುತೇಕ ನಾಶವೇ ಆಯಿತು.
ಒಗ್ಗಟ್ಟಿನ ಬಲ ಪ್ರದರ್ಶಿಸದ ಅರಬ್
ಇಸ್ರೇಲ್ ಆಕ್ರಮಣವನ್ನು ನರಮೇಧ ಎಂದು ವಿಶ್ಲೇಷಿಸಿದವರು ಅನೇಕರು. ತಾನೊಂದು ದೇಶವೆಂದು ಘೋಷಣೆ ಮಾಡಿಕೊಂಡು ಏಳು ದಶಕಗಳ ನಂತರವೂ ಈ ದಾಳಿಯು ಅರಬ್ ದೇಶಗಳ ನಡುವೆ ಎಷ್ಟರಮಟ್ಟಿಗೆ ಒಗ್ಗಟ್ಟಿನ ಕೊರತೆಯಿದೆ ಎಂಬುದನ್ನು ಬಹಿರಂಗಪಡಿಸಿತು. ಅಕ್ಟೋಬರ್ ಏಳರಂದು ಹಮಾಸ್ ದಾಳಿಗೂ ಮೊದಲು ಅಮೆರಿಕದ ಒತ್ತಡಕ್ಕೆ ಮಣಿದ ಸೌದಿ ಅರೇಬಿಯಾದಂತಹ ರಾಷ್ಟ್ರವೂ ಕೂಡ ಅಬ್ರಹಾಂ ಒಪ್ಪಂದಗಳ ಅಡಿಯಲ್ಲಿ ಇಸ್ರೇಲ್ ಜೊತೆಗೆ ಔಪಚಾರಿಕ ರಾಜತಾಂತ್ರಿಕ ಸಂಬಂಧವನ್ನು ಸ್ಥಾಪಿಸುವ ಬಗ್ಗೆ ಯೋಚಿಸುತ್ತಿತ್ತು. ಇಸ್ರೇಲ್ ಗಿಂತ ಇರಾನ್ ನಿಂದಲೇ ತಮಗೆ ಅಪಾಯ ಜಾಸ್ತಿ ಎಂದು ಸೌದಿಗಳು ಭಾವಿಸಿದ್ದಾರೆ. ಪರಮಾಣು ಶಕ್ತ ರಾಷ್ಟ್ರವಾಗಿರುವ ಇರಾನ್ ಗೆ ಸೌದಿಯ ವಿರೋಧವು ಇಸ್ರೇಲ್ ವಿರೋಧದಷ್ಟೇ ತೀವ್ರವಾಗಿದೆ.
ಸಂಯುಕ್ತ ಅರಬ್ ಗಣರಾಜ್ಯ, ಬಹರೇನ್ ಮತ್ತು ಒಮಾನ್ ನಂತಹ ಕೊಲ್ಲಿ ರಾಷ್ಟ್ರಗಳು ಈಗಾಗಲೇ ಇಸ್ರೇಲ್ ಜೊತೆಗೆ ಔಪಚಾರಿಕ ಒಪ್ಪಂದವನ್ನು ಮಾಡಿಕೊಂಡಿವೆ. ಸುಮಾರು ಮೂರು ದಶಕಗಳ ಹಿಂದೆ ಇಸ್ರೇಲ್ ಜೊತೆ ಅನೌಪಚಾರಿಕ ಸಂಬಂಧ ಬೆಸೆದ ಮೊದಲ ರಾಷ್ಟ್ರಗಳಲ್ಲಿ ಒಂದೆಂದರೆ ಕತಾರ್. ಆದರೆ ಇತ್ತೀಚೆಗೆ ದೋಹಾ ಮೇಲೆ ದಾಳಿ ಮಾಡಿದ ಇಸ್ರೇಲ್ ಆ ಒಪ್ಪಂದಕ್ಕೂ ಕಿಮ್ಮತ್ತು ನೀಡಲಿಲ್ಲ. ಅದರ ರಾಜತಾಂತ್ರಿಕತೆ ಕೊನೆಗೊಳ್ಳಲು ಅಷ್ಟು ಸಾಕಾಯಿತು.
ವಿಪರ್ಯಾಸದ ಸಂಗತಿ ಎಂದರೆ 1940ರ ದಶಕದಲ್ಲಿ ವಸಾಹತುಶಾಹಿ ಬ್ರಿಟಿಷರು ಸ್ವತಂತ್ರ ರಾಷ್ಟ್ರವನ್ನು ಕಟ್ಟಲು ಯಹೂದ್ಯರಿಗೆ ಸಹಾಯ ಮಾಡಲು ಸಕ್ರಿಯವಾಗಿ ತೊಡಗಿಕೊಂಡಿದ್ದಾಗ ಆ ವಲಯದ ಅರಬ್ ನಾಯಕತ್ವವು, ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ, ಮಾತೃಭೂಮಿಯನ್ನು ಮರಳಿಪಡೆಯಲು ಸಹಾಯಮಾಡುತ್ತೇವೆ ಎಂಬ ಭರವಸೆ ನೀಡಿತ್ತು.
ಪ್ಯಾಲೆಸ್ತೀನ್ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಮಧ್ಯಪ್ರವೇಶ ಮಾಡಿದವರು ಅರಬ್ ರಾಷ್ಟ್ರಗಳ ಅಬ್ದುಲ್ ನಾಸಿರ್, ಮೌಮಾರ್ ಗಡ್ಡಾಫಿ, ಹಫೀಜ್ ಅಲ್ ಅಸಾದ್, ಕಿಂಗ್ ಅಬ್ದುಲ್ಲಾ ಐ ಮತ್ತು ಸದ್ದಾಂ ಹುಸೇನ್ ಅವರಂತಹ ಪ್ರಮುಖ ನಾಯಕರು. ಆದರೆ ಅವರು ವಿವಾದವನ್ನು ಬಗೆಹರಿಸುವ ಬದಲು ಸಂಘರ್ಷವನ್ನು ಇನ್ನಷ್ಟು ಗೋಜಲಾಗುವಂತೆ ಮಾಡಿದರು. ಇವೆಲ್ಲದರಿಂದ ಅಂತಿಮವಾಗಿ ಲಾಭವಾಗಿದ್ದು ಇಸ್ರೇಲಿಗೆ.
ಪ್ಯಾಲೆಸ್ತೀನ್ ಬಗ್ಗೆ ಮೊಟ್ಟ ಮೊದಲ ಬಾರಿಗೆ ಅತ್ಯಂತ ಗಟ್ಟಿಯಾದ ನಿಲುವು ತಳೆದಿದ್ದೇ ಅರಬ್ ರಾಷ್ಟ್ರಗಳು ಎನ್ನುವುದು ನಿರ್ವಿವಾದ. ಆದರೆ ಇದೇ ಅರಬ್ ರಾಷ್ಟ್ರಗಳು ಇಂದು ಅಮೆರಿಕದ ನಿಕಟ ಮಿತ್ರ ರಾಷ್ಟ್ರಗಳಾಗಿವೆ ಅಥವಾ ಇಸ್ರೇಲ್ ಜೊತೆ ಕೈಜೋಡಿಸಿವೆ. ಇದರ ಫಲವಾಗಿ ಪ್ಯಾಲೆಸ್ತೀನಿಯರು ಒಂಟಿಯಾಗಿದ್ದಾರೆ. ತಮ್ಮಷ್ಟಕ್ಕೆ ತಾವೇ ಹೋರಾಡುವ ಸ್ಥಿತಿ ತಲುಪಿದ್ದಾರೆ.
ಅಮೆರಿಕದ ಶಕ್ತಿಗೆ ಎದುರಾಗಿ ನಿಲ್ಲದವರು
ಇವೆಲ್ಲದರ ನಡುವೆ ಇಸ್ರೇಲಿನ ಬಲ ದಿನದಿಂದ ದಿನಕ್ಕೆ ಬೆಳೆಯುತ್ತ ಸಾಗಿದೆ. ವಿಶೇಷವಾಗಿ ಸೋವಿಯತ್ ಒಕ್ಕೂಟ ವಿಘಟನೆ ಹೊಂದಿದ ಬಳಿಕ ಮತ್ತು 1990ರ ಶೀತಲ ಸಮರ ಕೊನೆಗೊಂಡ ನಂತರ ಅದು ಅಮೆರಿಕದ ಬೆಂಬಲವನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಜಗತ್ತು ಹೆಚ್ಚೂ ಕಮ್ಮಿ ಏಕಧ್ರುವೀಯವಾಗಿದೆ ಮತ್ತು ಅಮೆರಿಕದ ಶಕ್ತಿಯನ್ನು ಎದುರಿಸಿ ನಿಲ್ಲುವವರು ಯಾರೂ ಇಲ್ಲದಂತಾಗಿದೆ.
ನೆತನ್ಯಾಹು ಸರ್ಕಾರಕ್ಕೆ ಅಮೆರಿಕದಿಂದ ಸಿಕ್ಕಿದ್ದು ರಾಜಕೀಯ ಖಾಲಿ ಚೆಕ್. ಅದನ್ನು ನಗದೀಕರಿಸುವ ಮೂಲಕ ಅದು ಜಗತ್ತಿನ ಯಾವುದೇ ದಿಕ್ಕಿನಿಂದ ಎಂತಹುದೇ ಆಕ್ರೋಶ ವ್ಯಕ್ತವಾದರೂ ಅದನ್ನು ನಿರ್ಲಕ್ಷಿಸುವ ಛಾತಿಯನ್ನು ತೋರಿಸುತ್ತಿದೆ. ಇದರಿಂದಾಗಿ ಸೋವಿಯತ್ ಒಕ್ಕೂಟದ ಅಂತ್ಯದ ಬಳಿಕ ಜಗತ್ತು ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿದೆ ಎಂಬುದಕ್ಕೆ ಪುಷ್ಟಿಯನ್ನು ನೀಡುತ್ತದೆ.
ತಾನು ಸುಳ್ಳು ಎಂದು ಸಾಬೀತುಪಡಿಸುವ ಉದ್ದೇಶದಿಂದಲೇ ಇರಾಕ್ ಮೇಲೆ ದಂಡೆತ್ತಿ ಹೋಗುತ್ತದೆ, ಜಗತ್ತಿನ ಅರ್ಥವ್ಯವಸ್ಥೆ ಹೇಗೆ ರಚನೆಗೊಳ್ಳಬೇಕು ಮತ್ತು ರಾಜಕೀಯವನ್ನು ಹೇಗೆ ನಡೆಸಬೇಕು ಎಂದು ಅದು ತಾಕೀತು ಮಾಡುತ್ತದೆ, ತನ್ನ ಪ್ರಚೋದನಕಾರಿ ಮಾತುಗಳ ಮೂಲಕ ರಷ್ಯಾ-ಉಕ್ರೇನ್ ಕದನವನ್ನು ಇನ್ನಷ್ಟು ಕೆರಳಿಸುವ ಕೆಲಸ ಮಾಡುತ್ತದೆ- ಹೀಗೆಲ್ಲ ಮಾಡುವ ಅಮೆರಿಕವನ್ನು ತಡೆಯಲು ಯಾರಿಂದಲೂ ಸಾಧ್ಯವಾಗಿಲ್ಲ.
ಸೋವಿಯತ್ ಒಕ್ಕೂಟ ಇರುತ್ತಿದ್ದರೆ ಜಗತ್ತು ಹೀಗೆಲ್ಲ ಇರುತ್ತಿತ್ತೇ, ಇವೆಲ್ಲವೂ ಸಾಧ್ಯವಾಗುತ್ತಿತ್ತೇ ಎಂಬುದು ನಿಜಕ್ಕೂ ಊಹಾತೀತ. ಯಾವುದೇ ಸವಾಲು ಇಲ್ಲದೆ ಅಮೆರಿಕವು ತನ್ನ ಹಿತಾಸಕ್ತಿಗಳಿಗೆ ಅನುಗುಣವಾಗಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ. 1950ರಿಂದ 1990ರ ವರೆಗಿನ ನಾಲ್ಕು ದಶಕಗಳನ್ನು ನೋಡಿದರೆ ಪ್ರಪಂಚದ ನಾನಾ ಭಾಗಗಳಲ್ಲಿ ಸಂಘರ್ಷಗಳು ಹಾಗೂ ಉದ್ವಿಗ್ನ ಪರಿಸ್ಥಿತಿ ಇದ್ದರೂ ಕೂಡ ಈಗಿರುವಷ್ಟು ತೀವ್ರತೆ ಅವುಗಳಿಗೆ ಇರಲಿಲ್ಲ ಎಂಬುದು ಮಾತ್ರ ಸತ್ಯ.
ಇದನ್ನು ಬಹುಷಃ ಒಂದು ಆಶಯ ಎಂದು ಭಾವಿಸಬಹುದು. ಆದರೆ ಉಕ್ರೇನ್ ಯುದ್ಧ ಸಂಭವಿಸುತ್ತಲೇ ಇರಲಿಲ್ಲ. (ಯಾಕೆಂದರೆ ಅದು ಸೋವಿಯತ್ ಒಕ್ಕೂಟದ ಒಂದು ಭಾಗವಾಗಿರುತ್ತಿತ್ತು). ಆಗ ಗಾಜಾ ಪಟ್ಟಿಯನ್ನು ನಾಶಮಾಡದಂತೆ ಅಮೆರಿಕ ಮತ್ತು ಇಸ್ರೇಲ್ ಗೆ ಮಾಸ್ಕೊ ಕಡಿವಾಣ ಹಾಕಲು ಸಾಧ್ಯವಾಗುತ್ತಿತ್ತು. ಈಗಿನಂತೆ ದುರ್ಬಲಗೊಂಡಿರುವ ರಷ್ಯಾ ತನ್ನದೇ ಭದ್ರತೆ ಮತ್ತು ಸಾರ್ವಭೌಮತೆಯನ್ನು ಕಾಪಾಡಿಕೊಳ್ಳಲು ಹೋರಾಟ ನಡೆಸಬೇಕಾದ ಪ್ರಮೇಯ ಬರುತ್ತಿರಲಿಲ್ಲ.