TK Arun

ಸಮರಗ್ರಸ್ತ ಜಗತ್ತಿನಲ್ಲಿ ಇಂಧನ ಬಿಕ್ಕಟ್ಟು: ಭಾರತದ ಅಡುಗೆ ಅನಿಲಕ್ಕೊಂದು ʼದಕ್ಷʼ ಪರ್ಯಾಯ –ಇಂಡಕ್ಷನ್ ಸ್ಟವ್


ಸಮರಗ್ರಸ್ತ ಜಗತ್ತಿನಲ್ಲಿ ಇಂಧನ ಬಿಕ್ಕಟ್ಟು: ಭಾರತದ ಅಡುಗೆ ಅನಿಲಕ್ಕೊಂದು ʼದಕ್ಷʼ ಪರ್ಯಾಯ –ಇಂಡಕ್ಷನ್ ಸ್ಟವ್
x
ಗ್ಯಾಸ್ ಸ್ಟವ್‌ಗಳಿಗೆ ಹೋಲಿಸಿದರೆ ಅಡುಗೆ ಮಾಡಲು ಇಂಡಕ್ಷನ್ ಸ್ಟವ್‌ಗಳು ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿವೆ.
Click the Play button to hear this message in audio format

ಎಲ್.ಪಿ.ಜಿ ಬೆಲೆಗಳು ಗಗನಕ್ಕೇರುತ್ತಿರುವ ಮತ್ತು ಕತಾರ್ ಕಡೆಯಿಂದ ಅನಿಲ ರಫ್ತು ಸ್ಥಗಿತಗೊಂಡಿರುವ ಈ ಸಂದರ್ಭದಲ್ಲಿ ಭಾರತವು ರಾಜಕೀಯವಾಗಿ ಕಠಿಣವಾದ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿದೆ. ಅಂದರೆ ಕಲ್ಲಿದ್ದಲು ಆಧಾರಿತ ವಿದ್ಯುತ್ ಒಲೆಗಳ ಬಳಕೆ ಆರಂಭಿಸುವುದು ಅನಿವಾರ್ಯವಾಗಿದೆ.

ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದುರಾಕ್ರಮಣ ಮಾಡಿದ ಬಳಿಕ ಜಾಗತಿಕ ತೈಲ ಮತ್ತು ಅನಿಲ ಪೂರೈಕೆಯಲ್ಲಿ ಗಣನೀಯ ಪ್ರಮಾಣದ ಕಡಿತ ಉಂಟಾಗಿದೆ. ದಿನದಿಂದ ದಿನಕ್ಕೆ ತೈಲ ಮತ್ತು ಅನಿಲದ ಬೆಲೆ ಏರುತ್ತಲೇ ಇದೆ. ಇಂತಹ ಹೊತ್ತಿನಲ್ಲಿ ತನ್ನ ಭೂಸೇನೆಯನ್ನು ನುಗ್ಗಿಸಿ ಸೈನಿಕರ ಜೀವವನ್ನು ಪಣಕ್ಕಿಡಲು ಅಮೆರಿಕ ಹಿಂಜರಿಯುತ್ತಿರುವ ಕಾರಣ ಇರಾನ್ ಆಡಳಿತ ಸುಭದ್ರವಾಗಿಯೇ ಉಳಿದಿದೆ. ಇದರಿಂದಾಗಿ ಯುದ್ಧ ಯಾವಾಗ ಕೊನೆಗೊಳಿಸಬೇಕು ಎಂಬ ನಿರ್ಧಾರ ಅಮೆರಿಕ ಅಥವಾ ಇಸ್ರೇಲ್ ಕೈಯಲ್ಲಿ ಇಲ್ಲ. ಬದಲಾಗಿ ಅದು ಇರಾನ್ ಕೈಯಲ್ಲಿದೆ.

ಭಾರತವು ತನ್ನ ಇಂಧನ ಅಗತ್ಯಗಳಿಗಾಗಿ ನಂಬಿಕೊಂಡಿರುವುದು ಆಮದನ್ನು. ಅಂದರೆ ಕಚ್ಚಾ ತೈಲಕ್ಕೆ ಶೇ.೮೦ಕ್ಕಿಂತ ಹೆಚ್ಚು ಮತ್ತು ನೈಸರ್ಗಿಕ ಅನಿಲ ಹಾಗೂ ಅಡುಗೆ ಅನಿಲಕ್ಕೆ ಸುಮಾರು ಅರ್ಧದಷ್ಟನ್ನು ವಿದೇಶಗಳ ಮೇಲೆ ಅವಲಂಬಿತವಾಗಿದೆ. ಇಂತಹ ಸ್ಥಿತಿಯಲ್ಲಿ ಇಂಧನ ವೆಚ್ಚದಲ್ಲಿನ ತೀವ್ರತರದ ಏರಿಕೆಯನ್ನು ಎದುರಿಸದೆ ಭಾರತಕ್ಕೆ ಬೇರೆ ವಿಧಿಯಿಲ್ಲ.

ನೈಸರ್ಗಿಕ ಅನಿಲದ ವಿಷಯಕ್ಕೆ ಬಂದರೆ ಭಾರತಕ್ಕೆ ಅತಿದೊಡ್ಡ ಬಾಹ್ಯಮೂಲವೆಂದರೆ ಅದು ಕತಾರ್. ಆದರೆ ಹೊರ್ಮುಜ್ ಜಲಸಂಧಿಯ ಮೇಲೆ ಇರಾನ್ ದಿಗ್ಬಂಧನ ವಿಧಿಸಿರುವ ಹಿನ್ನೆಲೆಯಲ್ಲಿ ಕತಾರ್ ಕಡೆಯಿಂದ ಆಗಬೇಕಾಗಿರುವ ರಫ್ತು ಸ್ಥಗಿತಗೊಂಡಿದೆ. ಏಷ್ಯಾದ ಮಾರುಕಟ್ಟೆಗಳಿಗೆ ತಲುಪಬೇಕಾದ ಕತಾರ್-ನ ದ್ರವೀಕೃತ ನೈಸರ್ಗಿಕ ಅನಿಲದ ಟ್ಯಾಂಕರ್-ಗಳು ಇದೇ ಜಲಸಂಧಿಯ ಮೂಲಕ ಹಾದುಹೋಗಬೇಕಿರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಭಾರತೀಯ ಎಲೆಕ್ಟ್ರಿಕ್ ಅಡುಗೆಮನೆಯ ಅಗತ್ಯತೆ

• ಇಂಡಕ್ಷನ್ ಸ್ಟವ್-ಗಳು ಅಡುಗೆ ಅನಿಲಕ್ಕಿಂತ ಸುಮಾರು ಎರಡು ಪಟ್ಟು ಇಂಧನ ದಕ್ಷತೆ ಹೊಂದಿವೆ.

• ಇದು ಎಲ್.ಪಿ.ಜಿ. ಸಿಲಿಂಡರ್-ಗಳ ವಿತರಣೆ ಮತ್ತು ಸಾರಿಗೆ ವೆಚ್ಚವನ್ನು ಸಂಪೂರ್ಣವಾಗಿ ತಪ್ಪಿಸುತ್ತದೆ.

• ಬದಲಾವಣೆಗೆ ಪೂರಕವಾದ ವಿದ್ಯುತ್ ಉತಪಾದಿಸಲು ಭಾರತದಲ್ಲಿ ಹೇರಳವಾದ ಕಲ್ಲಿದ್ದಲು ನಿಕ್ಷೇಪಗಳಿವೆ.

• ಕಲ್ಲಿದ್ದಲು ಆಧಾರಿತ ವಿದ್ಯುತ್ ಪೂರೈಕೆ ಮೇಲೆ ವಿದೇಶಿ ಯುದ್ಧಗಳು ಅಥವಾ ಅಂತಾರಾಷ್ಟ್ರೀಯ ನಿರ್ಬಂಧಗಳು ಯಾವುದೇ ಪರಿಣಾಮ ಬೀರಲು ಸಾಧ್ಯವಿಲ್ಲ.

• ಗ್ರಾಮೀಣ ವಿದ್ಯುದೀಕರಣ ಯೋಜನೆಯಿಂದಾಗಿ ಈಗಾಗಲೇ ಭಾರತದ ಬಹುತೇಕ ಮನೆಗಳಿಗೆ ವಿದ್ಯುತ್ ಸಂಪರ್ಕ ಲಭಿಸಿದೆ.

ಒಂದು ರಾಷ್ಟ್ರವಾಗಿ ನಾವು ತೀರಾ ಅಲ್ಪಾವಧಿಯಲ್ಲಿ ಏರುತ್ತಿರುವ ಹೈಡ್ರೋಕಾರ್ಬನ್ ಬೆಲೆಗಳ ಹೊರೆಯನ್ನು ಭರಿಸಬೇಕಾಗಿದೆ. ಈ ಬೆಲೆ ಏರಿಕೆಯ ಸಂಪೂರ್ಣ ಹೊಡೆತ ಬಡವರ ಮೇಲೆ ಬೀಳದಂತೆ ರಕ್ಷಿಸುವುದು ಸರ್ಕಾರದ ಆದ್ಯತೆ ಆಗಬೇಕಾಗಿದೆ. ಆದರೆ ಈಗ ಎದುರಾಗಿರುವ ಬಿಕ್ಕಟ್ಟಿನಿಂದ ನಾವು ಸರಿಯಾದ ಪಾಠ ಕಲಿಬೇಕಾದ ಅಗತ್ಯವಿದೆ. ಹಿಂದೆ ಇಂಧನ ಆಯ್ಕೆ ವಿಚಾರದಲ್ಲಿ ನಾವು ಮಾಡಿದ ಐತಿಹಾಸಿಕ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಮೂಲಕ ಭವಿಷ್ಯದಲ್ಲಿ ತೈಲ ಮತ್ತು ಅನಿಲ ಬೆಲೆಗಳ ಏರಿಳಿತದಿಂದ ದೇಶವನ್ನು ರಕ್ಷಿಸಲು ಸನ್ನದ್ಧರಾಗಬೇಕಾಗಿದೆ.

ಅಡುಗೆ ಅನಿಲ ವಿಜ್ಞಾನ ಮತ್ತು ವಿತರಣೆಯ ಸವಾಲು

ವಾಣಿಜ್ಯ ವಲಯದಲ್ಲಿ ಲಿಕ್ವಿಡ್ ಪೆಟ್ರೋಲಿಯಂ ಗ್ಯಾಸ್ (ಎಲ್.ಪಿ.ಜಿ) ಎಂದು ಕರೆಯಲಾಗುವ ಅಡುಗೆ ಅನಿಲವು ಪ್ರಮುಖವಾಗಿ ಪ್ರೊಪೇನ್ ಮತ್ತು ಬ್ಯುಟೇನ್ ಅನಿಲಗಳ ಮಿಶ್ರಣವಾಗಿದೆ. ಬ್ಯುಟೇನ್ ನಾಲ್ಕು ಕಾರ್ಬನ್ ಅಣುಗಳನ್ನು ಹೊಂದಿರುತ್ತದೆ. ನೈಸರ್ಗಿಕ ಅನಿಲದ ಪ್ರಮುಖ ಅಂಶವಾದ ಮಿಥೇನ್, ನಾಲ್ಕು ಹೈಡ್ರೋಜನ್ ಪರಮಾಣುಗಳೊಂದಿಗೆ ಸಂಪರ್ಕ ಹೊಂದಿದ ಒಂದು ಕಾರ್ಬನ್ ಪರಮಾಣುವಾಗಿದೆ, ಇಥೇನ್ ಎರಡು ಕಾರ್ಬನ್ ಹಾಗೂ ಆರು ಹೈಡ್ರೋಜನ್ ಪರಮಾಣುಗಳನ್ನು ಹೊಂದಿರುತ್ತದೆ.

ಅನಿಲವು ಭೂಮಿಯಿಂದ ಹೊರಹೊಮ್ಮಿದಾಗ (ತೈಲದ ಜೊತೆ ಅಥವಾ ಸ್ವತಂತ್ರವಾಗಿ) ಅದು ಈ ನಾಲ್ಕೂ ಅನಿಲಗಳ ಮಿಶ್ರಣವಾಗಿರುತ್ತದೆ ಮತ್ತು ಇದನ್ನು ವೆಟ್ ಗ್ಯಾಸ್ ಎಂದು ಕರೆಯಲಾಗುತ್ತದೆ. ಹೆಚ್ಚಿನ ಮೌಲ್ಯದ ಬಳಕೆಗಾಗಿ ಭಾರವಾದ ಅನಿಲಗಳನ್ನು ಪ್ರತ್ಯೇಕಿಸಲಾಗುತ್ತದೆ. ಕೇವಲ ಮಿಥೇನ್ ಮಾತ್ರ ನೈಸರ್ಗಿಕ ಅನಿಲವಾಗಿ ಮಾರಾಟ ಮಾಡಲಾಗುತ್ತದೆ. ಇಷ್ಟು ಮಾತ್ರವಲ್ಲದೆ ಕಚ್ಛಾ ತೈಲದಿಂದ ಪೆಟ್ರೋಲ್ ಮತ್ತು ಇತರ ಇಂಧನಗಳನ್ನು ಹೊರತೆಗೆಯಲು ಮಾಡುವ ʼಫ್ರಾಕ್ಞನಲ್ ಡಿಸ್ಟಿಲೇಶನ್ʼ ಪ್ರಕ್ರಿಯೆಯ ಮೂಲಕ ಅಥವಾ ಇತರ ಹೈಡ್ರೋಕಾರ್ಬನ್ ರಾಸಾಯನಿಕ ಪರಿವರ್ತನೆಯ ಮೂಲಕವೂ ಕೂಡ ಎಲ್.ಪಿ.ಜಿಯನ್ನು ಉತ್ಪಾದಿಸಲು ಸಾಧ್ಯವಿದೆ.

ಭಾರತೀಯರು ಅಡುಗೆ ಮಾಡಲು ಸಾಂಪ್ರದಾಯಿಕವಾಗಿ ಸೌದೆ ಅಥವಾ ಇತರ ಜೈವಿಕ ರಾಶಿಯನ್ನು ಬಳಸುತ್ತಿದ್ದರು. ಅತ್ಯಂತ ಹೊಗೆಕಾರಕವಾದ ಇದು ಆರೋಗ್ಯಕ್ಕೆ ಹಾನಿಕಾರಕ. ಎಲ್ಲಕ್ಕಿಂತ ಮುಖ್ಯವಾಗಿ ಅಡುಗೆ ಮಾಡುವ ಮಹಿಳೆಯರಿಗೆ ಮತ್ತು ಅವರ ಜೊತೆಗೇ ಇರುವ ಮಕ್ಕಳಿಗೆ ತೀರಾ ಅಪಾಯಕಾರಿ. ಜನರ ಆದಾಯ ಮತ್ತು ಜೀವನಮಟ್ಟವು ಸುಧಾರಣೆ ಹೊಂದಿದ ಹಾಗೆ ಆರ್ಥಿಕವಾಗಿ ಸಬಲರಾದವರು ಅಡುಗೆ ಅನಿಲದ ಬಳಕೆಗೆ ಬದಲಾವಣೆ ಹೊಂದಿದರು. ಆದರೆ ಅಡುಗೆ ಅನಿಲವನ್ನು ಜನರಿಗೆ ಲಭ್ಯವಾಗುವಂತೆ ಮಾಡುವುದು ಅತ್ಯಂತ ದುಬಾರಿ ಕೆಲಸವಾಗಿದೆ.

ವಿತರಣೆ ಮತ್ತು ಸುರಕ್ಷತೆ ಸುಲಭವಲ್ಲ

ಎಲ್.ಪಿ.ಜಿ. ಗಾಳಿಗಿಂತ ಭಾರವಾಗಿದೆ. ಒಂದು ವೇಳೆ ಅದೇನಾದರೂ ಸೋರಿಕೆಯಾದರೆ ಹಾಗೆ ಸೋರಿಕೆಯಾದ ಪ್ರದೇಶದ ಸುತ್ತಲೂ ದಹನಕಾರಿ ಪದರವನ್ನು ನಿರ್ಮಾಣ ಮಾಡುತ್ತದೆ. ಹಾಗಾಗಿ ನೈಸರ್ಗಿಕ ಅನಿಲದಂತೆ ಎಲ್.ಪಿ.ಜಿಯನ್ನು ನಗರದಾದ್ಯಂತ ಕೊಳವೆಮಾರ್ಗದ ಮೂಲಕ ಮನೆಗಳಿಗೆ ಪೂರೈಕೆ ಮಾಡುವುದು ವಿರಳ. ಮಿಥೇನ್ ಗಾಳಿಗಿಂತ ಹಗುರ. ಅದರ ಸೋರಿಕೆಯಿಂದ ಹವಾಮಾನ ಬದಲಾವಣೆಗೆ ಕಾರಣವಾಗಬಲ್ಲ ಪ್ರಬಲ ಹಸಿರುಮನೆ ಅನಿಲವಾಗಿದ್ದರೂ ಕೂಡ ಮಿಥೇನ್ ಕೊಳವೆ ಮಾರ್ಗಗಳು ಎಲ್.ಪಿ.ಜಿ.ಯಷ್ಟು ಸುಲಭವಾಗಿ ಬೆಂಕಿ ಅವಘಡಗಳಿಗೆ ದಾರಿ ಮಾಡುವುದಿಲ್ಲ.

ಎಲ್.ಪಿ.ಜಿ.ಯನ್ನು ವಿಶೇಷ ಕೊಳವೆ ಮಾರ್ಗದ ಮೂಲಕ ಆಮದು ಕೇಂದ್ರಗಳಿಂದ ಬಾಟ್ಲಿಂಗ್ ಘಟಕಗಳಿಗೆ ಸಾಗಾಟ ಮಾಡಲಾಗುತ್ತದೆ. ಅಲ್ಲಿಂದ ಅನಿಲವನ್ನು ಸ್ಟೀಲ್ ಸಿಲಿಂಡರ್‌ಗಳಿಗೆ ತುಂಬಿಸಲಾಗುತ್ತದೆ.

ಹೀಗೆ ತುಂಬಿಸಲಾದ ಈ ಸಿಲಿಂಡರ್ಗಳನ್ನು ಟ್ರಕ್ಗಳ ಮೂಲಕ ದೂರದ ಪ್ರದೇಶಗಳಿಗೆ ಸಾಗಿಸಲು ಅಪಾರ ಪ್ರಮಾಣದ ಇಂಧನ ಮತ್ತು ಶಕ್ತಿ ವ್ಯಯವಾಗುತ್ತದೆ.

ಎಲ್.ಪಿ.ಜಿಯಲ್ಲಿ ಅಡುಗೆ ಮಾಡುವುದು ಸುರಕ್ಷಿತ ಹಾಗೂ ಅನುಕೂಲ ಎಂಬುದೇನೋ ನಿಜ. ಆದರೆ ಇದು ಬಹಳ ದುಬಾರಿ. ಇದು ಸರ್ಕಾರಗಳಿಗೆ ದೊಡ್ಡ ಮಟ್ಟದ ಜನಸಮೂಹಕ್ಕೆ ʼಸಬ್ಸಿಡಿʼ ನೀಡುವ ಮೂಲಕ ರಾಜಕೀಯವಾಗಿ ಪ್ರಭಾವ ಬೀರಲು ಅಥವಾ ಆಶ್ರಯ ನೀಡಲು ಒಂದು ಅವಕಾಶವನ್ನೂ ಒದಗಿಸುತ್ತದೆ.

ಇಂಡಕ್ಷನ್ ಸ್ಟೌವ್ ಬಳಕೆಗೆ ಉತ್ತೇಜನ

ಭಾರತೀಯರಿಗೆ ಅಡುಗೆ ಮಾಡಲು ಅತ್ಯಂತ ಸೂಕ್ತವಾದ ಮಾರ್ಗವೆಂದರೆ ವಿದ್ಯುತ್ ಬಳಕೆ. ಯುಪಿಎ ಮತ್ತು ಪ್ರಸ್ತುತ ಎನ್ಡಿಎ ಸರ್ಕಾರಗಳ ಗ್ರಾಮೀಣ ವಿದ್ಯುದೀಕರಣ ಯೋಜನೆಗಳು ಯಶಸ್ವಿಯಾಗಿ ಬಹುತೇಕ ಭಾರತೀಯ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿವೆ. ಅಂದಿನಿಂದ, ಜನರನ್ನು ಇಂಡಕ್ಷನ್ ಸ್ಟೌವ್ ಬಳಸಲು ಪ್ರೇರೇಪಣೆ ನೀಡಲಾಗುತ್ತಿದೆ. ಇದು ಹೊಗೆ ಮುಕ್ತ ಅಡುಗೆಯ ಅತ್ಯಂತ ಇಂಧನ-ದಕ್ಷ ವಿಧಾನವಾಗಿದೆ.

ಆದರೆ, ಎರಡು ಪರಸ್ಪರ ಸಂಬಂಧಿತ ಕಾರಣಗಳಿಂದಾಗಿ ಇದು ಸಾಧ್ಯವಾಗಿಲ್ಲ: ಅನಿಶ್ಚಿತ ಇಂಧನ ಪೂರೈಕೆ: ವಿದ್ಯುತ್ ಲಭ್ಯತೆಯ ವಿಶ್ವಾಸಾರ್ಹತೆ ಮತ್ತು ವೋಲ್ಟೇಜ್ ರಿಳಿತದ ಸಮಸ್ಯೆ ಇನ್ನೂ ಮುಂದುವರಿದಿದೆ. ಉಚಿತ ವಿದ್ಯುತ್ ಸಂಸ್ಕೃತಿ: ಸರ್ಕಾರಗಳು ಭಾರತೀಯರಿಗೆ ವಿದ್ಯುತ್ ಅನ್ನು ಉಚಿತವಾಗಿ ಅಥವಾ ಭಾರಿ ಸಬ್ಸಿಡಿ ದರದಲ್ಲಿ ನಿರೀಕ್ಷಿಸುವಂತೆ ರೂಢಿಸಿವೆ. ಇದರಿಂದಾಗಿ ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆಯನ್ನು ಒಂದು ಸುಸ್ಥಿರ ಹಾಗೂ ಲಾಭದಾಯಕ ವ್ಯವಹಾರವನ್ನಾಗಿ ನಡೆಸುವುದು ಕಷ್ಟಕರವಾಗಿದೆ. ಇದು ಅಗತ್ಯವಾದ ರಾಜಕೀಯ ಇಚ್ಛಾಶಕ್ತಿಯಿಂದ ಮಾತ್ರ ಪರಿಹರಿಸಬಹುದಾದ ಸಮಸ್ಯೆಯಾಗಿದೆ.

ಈ ಎಲ್ಲ ಅಗತ್ಯಗಳಿಗೆ ವಿದ್ಯುತ್ ಎಲ್ಲಿಂದ ಬರಬೇಕು? ಇದು ಪ್ರಮುಖವಾಗಿ ಕಲ್ಲಿದ್ದಲಿನಿಂದಲೇ ಬರಬೇಕಾಗುತ್ತದೆ. ಕಲ್ಲಿದ್ದಲನ್ನು ನೇರವಾಗಿ ಸುಡುವ ಮೂಲಕ ಅಥವಾ ಹೆಚ್ಚು ದಕ್ಷತೆಯ 'ಕಂಬೈನ್ಡ್ ಸೈಕಲ್' ಘಟಕಗಳಿಗೆ ಇಂಧನವಾಗಿ ಬಳಸಲು ಅದನ್ನು ಅನಿಲವನ್ನಾಗಿ ಪರಿವರ್ತಿಸುವ ಮೂಲಕ ವಿದ್ಯುತ್ ಪಡೆಯಬಹುದು. ಭಾರತವು ವಿಶ್ವದ ನಾಲ್ಕನೇ ಅಥವಾ ಐದನೇ ಅತಿದೊಡ್ಡ ಕಲ್ಲಿದ್ದಲು ನಿಕ್ಷೇಪವನ್ನು ಹೊಂದಿದ್ದು, ಹೇರಳವಾದ ಸಂಪನ್ಮೂಲವನ್ನು ಹೊಂದಿದೆ.

ಭಾರತದ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಅರ್ಧದಷ್ಟು ಪಳೆಯುಳಿಕೆಯೇತರ ಮೂಲಗಳಿಂದ ಬಂದಿದ್ದರೂ, ವಾಸ್ತವಿಕವಾಗಿ ಉತ್ಪಾದನೆಯಾಗುವ ವಿದ್ಯುತ್ನಲ್ಲಿ ಶೇ. 75 ರಷ್ಟು ಪಾಲು ಥರ್ಮಲ್ ಪ್ಲಾಂಟ್ಗಳದ್ದೇ ಆಗಿದೆ. ಆದ್ದರಿಂದ, ಅಡುಗೆ ಇಂಧನದ ಬದಲಾವಣೆಗೆ ಕಲ್ಲಿದ್ದಲೇ ಪ್ರಾಧಾನ್ಯತೆ ಪಡೆಯಲಿದೆ.

ಕಲ್ಲಿದ್ದಲನ್ನು ಸುಟ್ಟು ಉತ್ಪಾದಿಸುವ ವಿದ್ಯುತ್ನ್ನು ಬಳಸುವುದರಿಂದ ಹವಾಮಾನ ಬದಲಾವಣೆಗೆ ಭಾರತದ ಕೊಡುಗೆ ಹೆಚ್ಚಾಗುವುದಿಲ್ಲವೇ? ಹವಾಮಾನ ಬದಲಾವಣೆ ತಡೆಗಟ್ಟುವಿಕೆ ಮತ್ತು ಅಳವಡಿಕೆಗೆ ಸಂಬಂಧಿಸಿದಂತೆ ಭಾರತವು ನೀಡಿದ 'ರಾಷ್ಟ್ರೀಯ ನಿರ್ಧರಿತ ಕೊಡುಗೆ' (NDC) ಬದ್ಧತೆಗಳನ್ನು ಈಡೇರಿಸಲು ಇದು ಅಡ್ಡಿಯಾಗುವುದಿಲ್ಲವೇ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ.

ಇಂಡಕ್ಷನ್ ಸ್ಟವ್ಗಳ ಇಂಧನ ದಕ್ಷತೆ

ಅಡುಗೆ ಮಾಡುವ ಹಂತದಲ್ಲಿ, ಗ್ಯಾಸ್ ಸ್ಟೌವ್ಗಳಿಗೆ ಹೋಲಿಸಿದರೆ ಇಂಡಕ್ಷನ್ ಸ್ಟೌವ್ಗಳು ಸುಮಾರು ಎರಡು ಪಟ್ಟು ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿವೆ. ಇದರ ಜೊತೆಗೆ, ಎಲ್ಪಿಜಿ ತುಂಬುವ ಸಿಲಿಂಡರ್ಗಳ ತಯಾರಿಕೆಗೆ ವ್ಯಯವಾಗುವ ಶಕ್ತಿ ಮತ್ತು ಆ ಸಿಲಿಂಡರ್ಗಳನ್ನು ಮನೆಮನೆಗೆ ವಿತರಿಸಲು ತಗಲುವ ಸಾರಿಗೆ ಇಂಧನವು ವಿದ್ಯುತ್ ಬಳಕೆಯಿಂದ ಸಂಪೂರ್ಣವಾಗಿ ಉಳಿತಾಯವಾಗುತ್ತದೆ.

ಇದಕ್ಕಾಗಿ ಸ್ವಲ್ಪ ಹೆಚ್ಚಿನ ಪ್ರಮಾಣದ ಕಲ್ಲಿದ್ದಲನ್ನು ಗಣಿಗಾರಿಕೆ ಮಾಡಬೇಕಾಗುತ್ತದೆ ಎಂಬುದು ನಿಶ್ಚಿತ ಮತ್ತು ಸಂಸ್ಕರಿಸಿ ಸಾಗಿಸಬೇಕಾಗುತ್ತದೆ. ಆದರೆ, ಭಾರತವು ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಬದಲಾಗುವುದು ಅನಿವಾರ್ಯವಾಗಿದೆ (ಅದು ಹೈಡ್ರೋಜನ್ ಇಂಧನ ಕೋಶಗಳಿರಲಿ ಅಥವಾ ಬ್ಯಾಟರಿ ಚಾಲಿತವಾಗಿರಲಿ). ಅಲ್ಲದೆ, ಭಾರತದ ತಲಾ ವಿದ್ಯುತ್ ಬಳಕೆಯನ್ನು ಜಾಗತಿಕ ಸರಾಸರಿಗೆ ಹತ್ತಿರ ತರಲು ನಾವು ಗಣನೀಯವಾಗಿ ಹೆಚ್ಚಿನ ವಿದ್ಯುತ್ ಉತ್ಪಾದಿಸಬೇಕಿದೆ. ಇವೆಲ್ಲವನ್ನೂ ಗಮನಿಸಿದರೆ, ಕೇವಲ ಅಡುಗೆಗಾಗಿ ಬಳಸುವ ಹೆಚ್ಚುವರಿ ಕಲ್ಲಿದ್ದಲಿನ ಪ್ರಮಾಣವು ತೀರಾ ನಗಣ್ಯ.

ಸಂಶ್ಲೇಷಿತ ಅನಿಲ ಮತ್ತು ಸುಸ್ಥಿರ ಗಣಿಗಾರಿಕೆ

ಕಲ್ಲಿದ್ದಲನ್ನು ಭೂಮಿಯ ಅಡಿಯಲ್ಲೇ ಅನಿಲೀಕರಣಗೊಳಿಸುವುದು ಸೂಕ್ತ. ಹೀಗೆ ಉತ್ಪತ್ತಿಯಾದ ಸಂಶ್ಲೇಷಿತ ಅನಿಲವನ್ನು (Synthesis gas ಅಥವಾ Syngas) ಭೂಮಿಯ ಮೇಲ್ಮೈಗೆ ತರಬಹುದು. ಈ ಸಿನ್ಗ್ಯಾಸ್ನ್ನು ನೇರವಾಗಿ ಸುಡಬಹುದು ಅಥವಾ ಇದನ್ನು ನೈಸರ್ಗಿಕ ಅನಿಲವಾಗಿ ಪರಿವರ್ತಿಸಿ ಕೊಳವೆ ಮಾರ್ಗಗಳ ಮೂಲಕ ದೇಶಾದ್ಯಂತ ಸಾಗಿಸಬಹುದು. ಇದನ್ನು ವಿದ್ಯುತ್ ಉತ್ಪಾದನೆಗೆ ಮಾತ್ರವಲ್ಲದೆ, ರಸಗೊಬ್ಬರ ಮತ್ತು ಇತರ ರಾಸಾಯನಿಕಗಳ ತಯಾರಿಕೆಗೆ ಕಚ್ಚಾವಸ್ತುವಾಗಿಯೂ ಬಳಸಬಹುದು.

ಇದೇ ಸಮಯದಲ್ಲಿ, ಭಾರತವು ಈ ಕೆಳಗಿನ ಕ್ಷೇತ್ರಗಳಲ್ಲಿ ಗಣನೀಯ ಸಂಶೋಧನೆ ಕೈಗೊಳ್ಳುವುದು ಅತ್ಯಗತ್ಯ: ಕಾರ್ಬನ್ ಕ್ಯಾಪ್ಚರ್ ತಂತ್ರಜ್ಞಾನ: ಇದು ಪರಿಸರಕ್ಕೆ ಬಿಡುಗಡೆಯಾಗುವ ಇಂಗಾಲವನ್ನು ಹಿಡಿದಿಟ್ಟುಕೊಳ್ಳುವ ತಂತ್ರಜ್ಞಾನ. ಪೆಟ್ರೋಕೆಮಿಕಲ್ಸ್ ಪರಿವರ್ತನೆ: ಹೀಗೆ ಹಿಡಿದಿಟ್ಟ ಇಂಗಾಲವನ್ನು ಪೆಟ್ರೋಕೆಮಿಕಲ್ ಉತ್ಪನ್ನಗಳ ತಯಾರಿಕೆಗೆ ಬೇಕಾದ ಮೂಲವಸ್ತುಗಳನ್ನಾಗಿ ಪರಿವರ್ತಿಸುವುದು.

ಕಲ್ಲಿದ್ದಲನ್ನು ಸುಟ್ಟಾಗ ಉತ್ಪತ್ತಿಯಾಗುವ ಶಾಖವನ್ನು ವಿದ್ಯುತ್ನ್ನಾಗಿ ಪರಿವರ್ತಿಸುವ ದಕ್ಷತೆಯನ್ನು ಹೆಚ್ಚಿಸುವುದು. ಪ್ರಸ್ತುತ ಬಳಕೆಯಲ್ಲಿರುವ ಅಲ್ಪ-ದಕ್ಷತೆಯ ಪವರ್ ಪ್ಲಾಂಟ್ಗಳ ಬದಲಿಗೆ, ಈಗ ಲಭ್ಯವಿರುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ, ಭಾರತವು ಅಷ್ಟೇ ಪ್ರಮಾಣದ ಕಲ್ಲಿದ್ದಲನ್ನು ಬಳಸಿ ಈಗಿನ ಎರಡರಷ್ಟು ವಿದ್ಯುತ್ ಉತ್ಪಾದಿಸಬಹುದು.

ಪರಿಸರ ಮತ್ತು ಪುನರ್ವಸತಿ

ಸಾಮಾಜಿಕ ಮತ್ತು ಪರಿಸರಕ್ಕೆ ಉಂಟಾಗುವ ಹಾನಿಯನ್ನು ಕನಿಷ್ಠಗೊಳಿಸುತ್ತಾ ಭಾರತವು ಕಲ್ಲಿದ್ದಲು ಗಣಿಗಾರಿಕೆಗೆ ಉತ್ತೇಜನ ನೀಡಬೇಕು. ಯಾವುದೇ ಕಾರಣಕ್ಕೂ ಮುಟ್ಟಬಾರದಾಂತಹ ಅತಿ ದಟ್ಟವಾದ ಕಾಡುಗಳನ್ನು ಹೊರತುಪಡಿಸಿ, ಉಳಿದ ಕಡೆಗಳಲ್ಲಿ ಗಣಿಗಾರಿಕೆ ಅಗತ್ಯವಿದ್ದಲ್ಲಿ ವ್ಯವಸ್ಥಿತವಾಗಿ ಪರ್ಯಾಯ ಅರಣ್ಯೀಕರಣವನ್ನು ಕೈಗೊಳ್ಳುವ ಮೂಲಕ ಗಣಿಗಾರಿಕೆ ನಡೆಸಬಹುದು.

ಗಣಿಗಾರಿಕೆಯಿಂದ ಸ್ಥಳಾಂತರಗೊಳ್ಳುವ ಬುಡಕಟ್ಟು ಜನರನ್ನು ಅತ್ಯಂತ ಸಾಂಸ್ಕೃತಿಕ ಸೂಕ್ಷ್ಮತೆಯೊಂದಿಗೆ ಪುನರ್ವಸತಿ ವ್ಯವಸ್ಥೆ ಮಾಡಬೇಕು. ಕೆಲವು ಪ್ರಕರಣಗಳಲ್ಲಿ ಸಂಭವಿಸಿದಂತೆ ಅವರು ವ್ಯಸನಗಳಿಗೆ ಅಥವಾ ಶೋಷಣೆಗೆ ಒಳಗಾಗದಂತೆ ಎಚ್ಚರವಹಿಸಬೇಕು. ಇಂತಹ ವಿಸ್ತೃತ ಪುನರ್ವಸತಿಗಾಗಿ ತಗಲುವ ಸಂಪೂರ್ಣ ವೆಚ್ಚವನ್ನು ಕಲ್ಲಿದ್ದಲು ಗಣಿಗಾರಿಕೆಯ ಒಟ್ಟು ವೆಚ್ಚದ ಭಾಗವಾಗಿಯೇ ಪರಿಗಣಿಸಬೇಕು.

ಬಳಕೆಯಾಗದ ಕಲ್ಲಿದ್ದಲು ಸಂಪತ್ತು

ಹಿಂದಿನ ಸರ್ಕಾರಗಳ ಕಾಲದಲ್ಲಿದ್ದ ಕಲ್ಲಿದ್ದಲು ಗಣಿಗಾರಿಕೆಯ ಮೇಲಿನ ಸರ್ಕಾರಿ ಏಕಸ್ವಾಮ್ಯದ ಕಾನೂನು ಅಡೆತಡೆಗಳನ್ನು ಪ್ರಸ್ತುತ ಸರ್ಕಾರವು ತೆಗೆದುಹಾಕಿದ್ದರೂ ಕೂಡ, ವಾಣಿಜ್ಯ ಗಣಿಗಾರಿಕೆಯನ್ನು ಕೈಗೊಳ್ಳಲು ವೃತ್ತಿಪರ ಗಣಿಗಾರಿಕಾ ಕಂಪನಿಗಳನ್ನು ಆಕರ್ಷಿಸುವಲ್ಲಿ ಅದು ಇನ್ನೂ ಪೂರ್ಣವಾಗಿ ಯಶಸ್ವಿಯಾಗಿಲ್ಲ.

ಕಳೆದ ಯುಪಿಎ ಸರ್ಕಾರದ ಅವಧಿಯಲ್ಲಿ 'ಕ್ಯಾಪ್ಟಿವ್ ಮೈನ್ಸ್' (ನಿರ್ದಿಷ್ಟ ಉದ್ದೇಶದ ಗಣಿಗಳು) ಹಂಚಿಕೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂಬ ಪ್ರಚಾರದ ನಡುವೆ ಒಂದು ಕಟು ಸತ್ಯವನ್ನು ನಿರ್ಲಕ್ಷಿಸಲಾಯಿತು; ಅದೇನೆಂದರೆ, ಭಾರತದ ಕಲ್ಲಿದ್ದಲು ವಲಯದ ಅತಿದೊಡ್ಡ ಹಗರಣವೆಂದರೆ ಆ ಸಂಪತ್ತು ಭೂಮಿಯ ಅಡಿಯಲ್ಲೇ ಬಳಕೆಯಾಗದೆ ಉಳಿದಿರುವುದು. ಭಾರತದ ವಿದ್ಯುತ್ ಸ್ಥಾವರಗಳು ಕಲ್ಲಿದ್ದಲಿನ ಕೊರತೆಯನ್ನು ಎದುರಿಸುತ್ತಿವೆ ಮತ್ತು ಭಾರತವು ತನ್ನ ಒಟ್ಟು ಅಗತ್ಯದ ಐದನೇ ಒಂದು ಭಾಗದಷ್ಟು ಕಲ್ಲಿದ್ದಲನ್ನು ಇಂದಿಗೂ ಆಮದು ಮಾಡಿಕೊಳ್ಳುತ್ತಿದೆ.

ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ, ಭಾರತವು ತನ್ನಲ್ಲೇ ಲಭ್ಯವಿರುವ ಕಲ್ಲಿದ್ದಲು ಆಧಾರಿತ ವಿದ್ಯುತ್ ಅನ್ನು ಅಡುಗೆ ಇಂಧನವಾಗಿ ಬಳಸುವ ಬದಲು, ಇಂದಿಗೂ ಎಲ್ಪಿಜಿ ಬಳಕೆಯನ್ನೇ ಮುಂದುವರಿಸುತ್ತಿದೆ. ನಾವು ದೇಶೀಯ ಕಲ್ಲಿದ್ದಲಿನಿಂದ ತಯಾರಿಸಿದ ವಿದ್ಯುತ್ನ್ನು ಬಳಸತೊಡಗಿದರೆ, ವಿದೇಶಿ ಯುದ್ಧಗಳಾಗಲಿ ಅಥವಾ ಜಾಗತಿಕ ದೊಡ್ಡಣ್ಣಗಳ ಯಾವುದೇ ನಿರ್ಬಂಧಗಳಾಗಲಿ ನಮ್ಮ ಇಂಧನ ಪೂರೈಕೆಗೆ ಅಡ್ಡಿಯಾಗಲು ಸಾಧ್ಯವಿಲ್ಲ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story