Kancha Ilaiah Shepherd

ಇಸ್ಲಾಮಿಕ್ ನ್ಯಾಟೋ ಗುಮ್ಮ: ಬದಲಾದೀತೇ ಬಿಜೆಪಿ ಆರೆಸ್ಸೆಸ್ ಧರ್ಮ ಸಿದ್ಧಾಂತ?


ಇಸ್ಲಾಮಿಕ್ ನ್ಯಾಟೋ ಗುಮ್ಮ: ಬದಲಾದೀತೇ ಬಿಜೆಪಿ ಆರೆಸ್ಸೆಸ್ ಧರ್ಮ ಸಿದ್ಧಾಂತ?
x
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ (ಎಡಚಿತ್ರ) ಮತ್ತು ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಬ್ ಎರ್ಡೋಗನ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಭವಿಷ್ಯದಲ್ಲಿ ಪಾಕಿಸ್ತಾನದ ಪರಮಾಣು ಶಕ್ತಿ, ಸೌದಿ ಅರೇಬಿಯಾದ ಸಂಪತ್ತಿನ ಶಕ್ತಿ ಹಾಗೂ ಟರ್ಕಿಯ ಸೇನಾ ಶಕ್ತಿಯನ್ನು ಒಳಗೊಂಡ ʼಇಸ್ಲಾಮಿಕ್ ನ್ಯಾಟೋʼ ಪವರ್ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ ಎಂದು ವರದಿಗಳು ಹೇಳುತ್ತವೆ.
Click the Play button to hear this message in audio format

ಈಗ ಹೊರಹೊಮ್ಮುತ್ತಿರುವ ಪಾಕಿಸ್ತಾನ-ಸೌದಿ ಅರೇಬಿಯಾ-ಟರ್ಕಿ ಒಪ್ಪಂದದ ತೀವ್ರತೆ ಎಷ್ಟು ಎಂಬುದನ್ನು ಅರ್ಥ ಮಾಡಿಕೊಳ್ಳಲು ಇದು ಸಕಾಲ.

ಪಶ್ಚಿಮ ಏಷ್ಯಾದಲ್ಲಿ ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಮೂರು ಪ್ರಬಲ ಮುಸ್ಲಿಂ ರಾಷ್ಟ್ರಗಳು ಹೊಸ ಸಂಘಟನೆಯನ್ನು ಕಟ್ಟಿಕೊಂಡಿವೆ ಎಂಬ ಸುದ್ದಿಗಳು ಸಂಚಲನವನ್ನು ಮೂಡಿಸುತ್ತಿವೆ. ಹಾಗೆ ಒಂದು ಕೂಟವನ್ನು ರಚಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿರುವ ರಾಷ್ಟ್ರಗಳೆಂದರೆ ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಟರ್ಕಿ. ಹಾಗೆಂದು ಜಾಗತಿಕ ಮತ್ತು ಭಾರತೀಯ ಮಾಧ್ಯಮಗಳಲ್ಲಿ ವರದಿಗಳು ಬರುತ್ತಲೇ ಇವೆ. ಈ ಮೈತ್ರಿಯನ್ನು ಮಾಧ್ಯಮಗಳು ʼಇಸ್ಲಾಮಿಕ್ ನ್ಯಾಟೋʼ ಎಂದು ವಿಶ್ಲೇಷಿಸಿರುವುದು ಗಮನಾರ್ಹ.

ಯುರೋಪ್, ಅಮೆರಿಕ ಮತ್ತು ಕೆನಡಾ ಸದಸ್ಯರಾಗಿರುವ ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (NATO) ಭಾಗವೂ ಆಗಿರುವ ಟರ್ಕಿ ಈಗ ಧರ್ಮ ಆಧಾರಿತವಾದ ಈ ಮೈತ್ರಿಕೂಟವನ್ನೂ ಸೇರಿಕೊಂಡಿದೆ ಎಂಬ ವರದಿ ಇದೆ. ನ್ಯಾಟೋ ಒಕ್ಕೂಟದಲ್ಲಿ ಅಮೆರಿಕಾ ನಂತರ ಎರಡನೇ ಅತ್ಯಂತ ದೊಡ್ಡ ಸೇನೆ ಎಂದರೆ ಟರ್ಕಿಯದ್ದು.

ಒಂದು ಕಡೆ ಸೌದಿ ಅರೇಬಿಯಾದ ಸಂಪತ್ತಿನ ಶಕ್ತಿ, ಇನ್ನೊಂದು ಕಡೆ ಟರ್ಕಿಯ ಸೇನಾ ಬಲ ಹಾಗೂ ಫಾಕಿಸ್ತಾನದ ಪರಮಾಣು ಶಕ್ತಿ ಸೇರ್ಪಡೆಯಾದರೆ ಈ ಕೂಟವು ಅಪಾಯಕಾರಿ ಗುಂಪಾಗಿ ಪರಿಣಮಿಸಬಹುದು ಎಂಬ ಆತಂಕ ಉಂಟಾಗಿದೆ. ಸೌದಿ ಮತ್ತು ಪಾಕಿಸ್ತಾನದ ಜೊತೆ ಟರ್ಕಿ ಕೂಡ ಸಾಥ್ ನೀಡಿರುವುದು ಒಂದು ಪ್ರಮುಖ ಜಾಗತಿಕ ಬೆಳವಣಿಗೆ ಎಂದೇ ಭಾವಿಸಲಾಗಿದೆ. ಇದರಿಂದ ಭಾರತ ಮತ್ತು ಇಸ್ರೇಲ್ ನಿದ್ದೆಗೆಡುವಂತೆ ಮಾಡಿದೆ.

NATOದಲ್ಲಿರುವ ʼಉತ್ತರ ಅಟ್ಲಾಂಟಿಕ್ʼ ಎಂಬ ಪದವು ಪಶ್ಚಿಮ ಗೋಳಾರ್ಧದ ಭೌಗೋಳಿಕ ಸ್ಥಾನದ ಸಂಕೇತವಾಗಿದೆ. ಆದರೆ ಈ ಇಸ್ಲಾಮಿಕ್ ಒಪ್ಪಂದದ ಸಂಘಟನೆಯಲ್ಲಿ ಧರ್ಮವು ಆಯಾ ದೇಶಗಳ ರಾಷ್ಟ್ರೀಯ ಹಿತಾಸಕ್ತಿಗಳನ್ನೂ ಮೀರಿ ಪ್ರಮುಖ ಪಾತ್ರ ವಹಿಸುತ್ತಿರುವುದು ವಿಶೇಷ.

ಚರಿತ್ರೆಯ ಪುಟಗಳನ್ನು ಗಮನಿಸಿದರೆ, ಇಸ್ಲಾಂ ಧರ್ಮಕ್ಕೆ ಅಪಾಯ ಅಥವಾ ಸವಾಲು ಎದುರಾದಾಗಲೆಲ್ಲ ಮುಸ್ಲಿಮರು ಒಂದು ಸಂಘಟಿತ ಶಕ್ತಿಯಾಗಿ ಒಂದುಗೂಡುವ ಪ್ರವೃತ್ತಿಯನ್ನು ಹೊಂದಿದ್ದಾರೆ. ಭವಿಷ್ಯದಲ್ಲಿ ಕುವೈತ್, ಕತಾರ್ ಮತ್ತು ದಕ್ಷಿಣ ಏಷ್ಯಾದ ಮುಸ್ಲಿಂ ರಾಷ್ಟ್ರಗಳಾದ ಇಂಡೋನೇಷ್ಯಾ, ಬಾಂಗ್ಲಾದೇಶ ಮತ್ತು ಮಲೇಷ್ಯಾ ಕೂಡ ಈ ಮೈತ್ರಿಯನ್ನು ಕೂಡಿಕೊಳ್ಳಬಹುದು. ಸದ್ಯ ಇರಾನ್ ತೀವ್ರ ಸ್ವರೂಪದ ಅಂತರ್ಯುದ್ಧದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಅದರ ಇತಿಹಾಸವು ಮುಂದೆ ಹೇಗೆ ಅನಾವರಣಗೊಳ್ಳುತ್ತದೆ ಎಂಬುದನ್ನು ಕಾಲವೇ ಹೇಳಬೇಕು.

ತಟಸ್ಥ ನೀತಿಯ ಅಂತ್ಯ

ಇತರ ರಾಜಕೀಯ ಪಕ್ಷಗಳ ಆಡಳಿತದ ಅವಧಿಯಲ್ಲಿದ್ದ ದೀರ್ಘಕಾಲದ ಬೇಡಿಕೆಯ ಭಾಗವಾಗಿ, ಬಿಜೆಪಿ/ಆರ್.ಎಸ್.ಎಸ್ ಸರ್ಕಾರವು 370ನೇ ವಿಧಿಯನ್ನು ರದ್ದುಗೊಳಿಸಿ ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಮರುರೂಪಿಸಿದ ನಂತರ, ಕೇವಲ ಪಾಕಿಸ್ತಾನ ಮಾತ್ರವಲ್ಲದೆ ಪಶ್ಚಿಮ ಏಷ್ಯಾದ ಇತರ ಮುಸ್ಲಿಂ ರಾಷ್ಟ್ರಗಳು ಕೂಡ ಕಾಶ್ಮೀರ ವಿಷಯದಲ್ಲಿ ತಮ್ಮ ತಟಸ್ಥ ನಿಲುವಿನಿಂದ ಹಿಂದೆ ಸರಿದಂತೆ ಕಾಣುತ್ತಿದೆ.

ಚುನಾವಣೆಗಳಲ್ಲಿ ಭಾರತೀಯ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಬಿಜೆಪಿ/ಆರ್.ಎಸ್.ಎಸ್ ನಡೆಸುತ್ತಿರುವ ಧಾರ್ಮಿಕ ಭಾಷೆಯ ಆಕ್ರಮಣಕಾರಿ ಬಳಕೆ ಮತ್ತು ಸಂವಿಧಾನದ ಪ್ರಸ್ತಾವನೆಯಲ್ಲಿರುವ “ಜಾತ್ಯತೀತ” ಎಂಬ ಪದಕ್ಕೆ ಅವರ ವಿರೋಧವು, ಮುಂಬರುವ ದಿನಗಳಲ್ಲಿ ಒಂದು 'ಹಿಂದೂ-ಮುಸ್ಲಿಂ ಸಂಘರ್ಷ'ಕ್ಕೆ ದಾರಿ ಮಾಡಿಕೊಡಬಹುದು ಎಂಬ ಭಾವನೆಯನ್ನು ಮೂಡಿಸಿದೆ.

ಅಮೆರಿಕದ ಪ್ರಖ್ಯಾತ ರಾಜಕೀಯ ಪಂಡಿತ ಸ್ಯಾಮ್ಯುಯೆಲ್ ಪಿ.ಹಂಟಿಂಗ್ಟನ್ ಅವರು ಮುಂದಿನ ದಿನಗಳಲ್ಲಿ ಧರ್ಮದ ಆಧಾರದಲ್ಲಿ ಸಂಘರ್ಷಗಳು ನಡೆಯುತ್ತವೆ ಎಂದು ಭವಿಷ್ಯ ನುಡಿದಿದ್ದರು. ಇದನ್ನು ಅವರು ʼನಾಗರಿಕತೆಗಳ ಸಂಘರ್ಷʼ ಎಂದೂ ವಿಶ್ಲೇಷಿಸಿದ್ದರು. ಅವರು ಎಚ್ಚರಿಕೆ ನೀಡಿದ ರೀತಿಯಲ್ಲಿಯೇ ನಾವು ಭವಿಷ್ಯದ ದಿನಗಳಲ್ಲಿ ಹಿಂದೂ-ಮುಸ್ಲಿಂ ಸಂಘರ್ಷದತ್ತ ಹೆಜ್ಜೆ ಹಾಕುತ್ತಿದ್ದೇವೆಯೇ?

ಸಂಘ ಬರೆದ ಮುನ್ನುಡಿ

ಕಾಶ್ಮೀರ ವಿವಾದ ಮತ್ತು ಮುಸ್ಲಿಂ ಸಮುದಾಯದ ಅಭಿವೃದ್ಧಿಯ ವಿಷಯಗಳನ್ನು ಒಂದು ಪ್ರಜಾಸತ್ತಾತ್ಮಕ ಚೌಕಟ್ಟಿನಲ್ಲಿ ನಿಭಾಯಿಸುತ್ತಿದ್ದ ಕಾಂಗ್ರೆಸ್ ಪಕ್ಷದ ನಡೆಯನ್ನು ʼಮುಸ್ಲಿಂ ಓಲೈಕೆʼ ಎಂದು ಟೀಕಿಸುವ ಮೂಲಕ ಆರ್.ಎಸ್.ಎಸ್ ಮತ್ತು ಬಿಜೆಪಿ ೨೦೧೪ರ ಚುನಾವಣೆಯಲ್ಲಿ ಮುಸ್ಲಿಂ ವಿರೋಧಿ ಪ್ರಚಾರವನ್ನು ಆರಂಭಿಸಿತು.

ಕಳೆದ ಹನ್ನೊಂದು ವರ್ಷಗಳಿಂದ ಇಂತಹ ಪ್ರಚಾರವೇ ಚಾಲ್ತಿಯಲ್ಲಿದೆ. ಇತ್ತೀಚಿನ ದಿನಗಳಲ್ಲಿ ಇಸ್ಲಾಮಿಕ್ ಜಗತ್ತು ಈ ಪ್ರಚಾರವನ್ನು ʼಇಸ್ಲಾಮ್ ವಿರೋಧಿʼ ನಡೆ ಎಂದೇ ವ್ಯಾಖ್ಯಾನಿಸಲು ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಇಸ್ಲಾಮಿಕ್ ರಾಷ್ಟ್ರಗಳು ಪಾಕಿಸ್ತಾನ ಮತ್ತು ಭಾರತದ ಜೊತೆಗಿನ ತಮ್ಮ ಸಂಬಂಧವನ್ನು ಮರುಪರಿಶೀಲಿಸುತ್ತಿರುವಂತೆ ಕಾಣುತ್ತಿದೆ.

ಅಪರೇಷನ್ ಸಿಂಧೂರ್

ಈ ನಿಟ್ಟಿನಲ್ಲಿ ಅಪರೇಷನ್ ಸಿಂಧೂರ್ ಒಂದು ಮಹತ್ವದ ತಿರುವು ಎಂದು ಪರಿಗಣಿಸಲಾಗುತ್ತದೆ. ಈ ನಾಲ್ಕು ದಿನಗಳ ಯುದ್ಧದಲ್ಲಿ ಯಾರು ಗೆದ್ದರು ಎಂಬುದು ಮುಖ್ಯವೇನೂ ಅಲ್ಲ. ಆದರೆ ಅದರಿಂದ ಜಾಗತಿಕ ಮೈತ್ರಿಗಳನ್ನು ಬದಲಿಸಿತು ಎಂಬುದು ಮಾತ್ರ ಸತ್ಯ. ಈ ಯುದ್ಧದಲ್ಲಿ ಮುಸ್ಲಿಂ ಜಗತ್ತು ಮೊದಲ ಬಾರಿಗೆ ಪಾಕಿಸ್ತಾನದ ಬೆನ್ನಿಗೆ ಆಸರೆಯಾಗಿ ನಿಂತಿತು.

1968 ಮತ್ತು 1971ರ ಯುದ್ಧಗಳಲ್ಲಿ ಭಾರತವು ಜಾಗತಿಕ ವೇದಿಕೆಯಲ್ಲಿ ತನ್ನ ʼಜಾತ್ಯತೀತ ನಿಲುವʼನ್ನು ಬಳಸಿಕೊಂಡು ಪಾಕಿಸ್ತಾನವನ್ನು ಒಂಟಿಯಾಗಿ ಮಾಡುವಲ್ಲಿ ಯಶಸ್ವಿಯಾಯಿತು. ಆ ಸಮಯದಲ್ಲಿ ಇದು ಕೇವಲ ಎರಡು ದೇಶಗಳ ನಡುವಿನ ಸಮಸ್ಯೆ ಮತ್ತು ಧರ್ಮವು ಇದರಲ್ಲಿ ಪ್ರಮುಖ ಪಾತ್ರ ವಹಿಸಿಲ್ಲ ಎಂಬುದು ಮುಸ್ಲಿಂ ರಾಷ್ಟ್ರಗಳಿಗೆ ಮನವರಿಕೆಯಾಗಿತ್ತು.

ʼಸಿಂಧೂರ್ ಯುದ್ಧʼವು ಇಡೀ ಚಿತ್ರಣವನ್ನೇ ಬದಲಿಸಿತು. ಪಹಲ್ಗಾಮ್ನಲ್ಲಿ ಪ್ರವಾಸಿಗರ ಭೀಕರ ಹತ್ಯೆಯನ್ನು ನೆಪವಾಗಿಟ್ಟುಕೊಂಡು ಬಿಜೆಪಿ/ ಆರ್.ಎಸ್.ಎಸ್ ಸರ್ಕಾರವು, ಭಾರತದ ಪ್ರಕಾರ 'ಪಾಕ್ ಆಕ್ರಮಿತ ಕಾಶ್ಮೀರ' (ಪಿಓಕೆ) ಮತ್ತು ಪಾಕಿಸ್ತಾನದ ಪ್ರಕಾರ 'ಆಜಾದ್ ಕಾಶ್ಮೀರ' ಎಂದು ಕರೆಯಲ್ಪಡುವ ಪ್ರದೇಶದಲ್ಲಿದ್ದ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿತು. ಇವು ವಿಭಜಿತ ದೇಶಗಳ ಎರಡು ವಿರುದ್ಧ ದೃಷ್ಟಿಕೋನಗಳಾಗಿವೆ.

ಕಾಂಗ್ರೆಸ್ ಆಡಳಿತದ ಅವಧಿಯಲ್ಲೂ ಎರಡೂ ದೇಶಗಳ ನಡುವೆ ಇದೇ ರೀತಿಯ ದ್ವೇಷವಿತ್ತು. ಆದರೆ ಬಿಜೆಪಿಯೇತರ ಸರ್ಕಾರಗಳ ಬಲವಾದ ಜಾತ್ಯತೀತ ದೃಷ್ಟಿಕೋನದ ಕಾರಣದಿಂದ ಪಶ್ಚಿಮ ಏಷ್ಯಾದ ಇತರ ಮುಸ್ಲಿಂ ರಾಷ್ಟ್ರಗಳು ಪಾಕಿಸ್ತಾನದಿಂದ ದೂರವಿರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದವು.

ಮುಸ್ಲಿಂ ವಿರೋಧಿ ವಾಕ್ಚಾತುರ್ಯ

ಪಾಕಿಸ್ತಾನವು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಎಂಬ ವಿಷಯದ ಬಗ್ಗೆ ಬಿಜೆಪಿ/ಆರ್.ಎಸ್.ಎಸ್ ಸರ್ಕಾರವು ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಪ್ರಚಾರ ನಡೆಸಿತು ಎಂಬುದರಲ್ಲಿ ಸಂಶಯವಿಲ್ಲ. ಆದರೆ, ಅದೇ ಸಮಯದಲ್ಲಿ ಭಾರತದೊಳಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಎಲ್ಲಾ ಬಿಜೆಪಿ/ಆರ್.ಎಸ್.ಎಸ್ ನಾಯಕರು ಮುಸ್ಲಿಂ ವಿರೋಧಿ ರಾಜಕೀಯ ವಾಕ್ಚಾತುರ್ಯವನ್ನು ಆಕ್ರಮಣಕಾರಿ ಧಾಟಿಯಲ್ಲಿ ಮುಂದುವರಿಸಿದರು.

ಅನೇಕ ಇತರ ನಾಯಕರೊಂದಿಗೆ ಇವರು ಕೂಡ ಕಾಂಗ್ರೆಸ್ನ "ಮುಸ್ಲಿಂ ಓಲೈಕೆ"ಯ ಬಗ್ಗೆ ಮಾತನಾಡುತ್ತಾ ಬಂದರು. ಜಾಗತಿಕ ಮಟ್ಟದಲ್ಲೂ ಅವರು 'ಸನಾತನ ಧರ್ಮ'ವೇ 'ವಿಶ್ವಗುರು' ಎಂಬ ಪ್ರಚಾರವನ್ನು ಕೈಗೆತ್ತಿಕೊಂಡರು.

ಮುಸ್ಲಿಂ ಮತ್ತು ಕ್ರೈಸ್ತ ರಾಷ್ಟ್ರಗಳಲ್ಲಿ ಧಾರ್ಮಿಕ ರಾಷ್ಟ್ರೀಯತಾವಾದಿ ದೃಷ್ಟಿಕೋನದೊಂದಿಗೆ ಹಲವಾರು ಅನಿವಾಸಿ ಭಾರತೀಯರ ಸಭೆಗಳನ್ನು ಆಯೋಜಿಸಲಾಯಿತು. ಇದರ ಜೊತೆಗೆ, ಸಂವಿಧಾನದ ಪ್ರಸ್ತಾವನೆಯಿಂದ 'ಜಾತ್ಯತೀತ' ಎಂಬ ಪದವನ್ನು ತೆಗೆದುಹಾಕಬೇಕೆಂಬ ಬಿಜೆಪಿ/ಆರ್.ಎಸ್.ಎಸ್ ನಾಯಕರ ಪ್ರಚಾರವು, ಅವರು ಗುರಿಯಾಗಿಸಿಕೊಂಡಿದ್ದು ಇಸ್ಲಾಂ ಧರ್ಮವನ್ನು ಎಂಬ ಅಭಿಪ್ರಾಯ ಮೂಡಿಸಿದ್ದರೆ ಅನುಮಾನವಿಲ್ಲ.

ಧರ್ಮಪ್ರಭುತ್ವದತ್ತ ಹೆಜ್ಜೆ

ಈ ಹಿನ್ನೆಲೆಯಲ್ಲಿಯೇ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವು ಸಂಪೂರ್ಣವಾಗಿ ಹಿಂದೂ ಧರ್ಮಪ್ರಭುತ್ವದ ರಾಷ್ಟ್ರವಾಗಲಿದೆ ಎಂಬ ಜಾಗತಿಕ ದೃಷ್ಟಿಕೋನ ರೂಪುಗೊಳ್ಳುತ್ತಿರುವಂತೆ ಕಾಣುತ್ತಿದೆ. ಭಾರತದ ಸುತ್ತಮುತ್ತಲಿರುವ ಮುಸ್ಲಿಂ ರಾಷ್ಟ್ರಗಳು ಧರ್ಮಪ್ರಭುತ್ವ ಮತ್ತು ಅಸ್ಥಿರ ಸರ್ವಾಧಿಕಾರವನ್ನು ಹೊಂದಿದ್ದು, ಅವು ಯಾವಾಗಲೂ ಸ್ಥಿರ ಚುನಾವಣಾ ವ್ಯವಸ್ಥೆಯನ್ನು ಹೊಂದಿರುವ ಭಾರತೀಯ ಪ್ರಜಾಪ್ರಭುತ್ವವನ್ನು ಅಸೂಯೆಯ ಕಣ್ಣಿನಿಂದ ನೋಡುತ್ತಿದ್ದವು.

ಎಲ್ಲಾ ಧಾರ್ಮಿಕ ರಾಷ್ಟ್ರೀಯತೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದ್ವೇಷಿಸುತ್ತವೆ. ಬಿಜೆಪಿ/ಆರ್.ಎಸ್.ಎಸ್ ಧರ್ಮವನ್ನು ರಾಷ್ಟ್ರದ ರಚನೆಯಲ್ಲಿ ಕೇಂದ್ರಿಕರಿಸಲು ಪ್ರಯತ್ನಿಸುವ ಮೂಲಕ ಒಂದು ಬಲೆಗೆ ಬೀಳುತ್ತಿರುವಂತೆ ಕಾಣುತ್ತಿದೆ.

ಇಸ್ರೇಲ್-ಪ್ಯಾಲೆಸ್ಟೈನ್ ಯುದ್ಧ

ಮಧ್ಯಪ್ರಾಚ್ಯದ ಮುಸ್ಲಿಂ ರಾಷ್ಟ್ರಗಳು ಇಸ್ರೇಲ್ನೊಂದಿಗೆ ಸುದೀರ್ಘ ಸಂಘರ್ಷವನ್ನು ಹೊಂದಿವೆ. ಆ ಪ್ರದೇಶದ ಮುಸ್ಲಿಂ ರಾಷ್ಟ್ರಗಳು ಮತ್ತು ಇಸ್ರೇಲ್ ನಡುವೆ ನಡೆದ 1967ರ ಯುದ್ಧ ಅವುಗಳ ಮನಸ್ಸಿನಿಂದ ಇನ್ನೂ ಮಾಸಿಲ್ಲ.

2023ರ ಅಕ್ಟೋಬರ್ 7 ರಂದು ಯಹೂದಿ ಜನರ ಮೇಲೆ ನಡೆದ ಭಯೋತ್ಪಾದಕ ದೌರ್ಜನ್ಯಕ್ಕೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಪ್ಯಾಲೆಸ್ಟೈನ್ ಮೇಲೆ ನಡೆಸಿದ ಇತ್ತೀಚಿನ ದಾಳಿಯು ಒಂದು ಜನಾಂಗೀಯ ಸಂಹಾರದ ಯುದ್ಧವಾಗಿತ್ತು. ಇಸ್ರೇಲ್ಗೆ ಆದ ಸಣ್ಣಪುಟ್ಟ ನಷ್ಟಗಳನ್ನು ಹೊರತುಪಡಿಸಿದರೆ, ಇದು ಕೇವಲ ಒಂದು ಕಡೆಯಿಂದ ನಡೆದ ಯುದ್ಧವಾಗಿತ್ತು.

ಶಕ್ತಿಯುತ ಮುಸ್ಲಿಂ ರಾಷ್ಟ್ರಗಳಿಗೆ ಈ ಎರಡು ಅಂಶಗಳು 'ಇಸ್ಲಾಮಿಕ್ ನ್ಯಾಟೋ' ರಚಿಸಲು ಪ್ರೇರೇಪಿಸಿದಂತೆ ಕಾಣುತ್ತವೆ.

ಭಾರತಕ್ಕೆ ಇರುವ ಭೀತಿ ಏನು?

ಆದರೆ, ಈ ಭೀತಿಯು ಭಾರತದ ಪಾಲಿಗೆ ದೊಡ್ಡದಾಗಿದೆ. ಧಾರ್ಮಿಕ ಸಿದ್ಧಾಂತದ ದೃಷ್ಟಿಯಿಂದ ನೋಡುವುದಾದರೆ, ಮುಸ್ಲಿಮರು ಮತ್ತು ಯಹೂದಿಗಳು ಸಾಮಾನ್ಯ ಅಬ್ರಹಾಮಿಕ್ ಮೂಲದಿಂದ ಬಂದವರು. ಭವಿಷ್ಯದಲ್ಲಿ, ಅವರು ಈ ಸಂಘರ್ಷವನ್ನು ಜಾಗತಿಕ ಧಾರ್ಮಿಕ ಯುದ್ಧವನ್ನಾಗಿ ಪರಿವರ್ತಿಸದೆ ಬಗೆಹರಿಸಿಕೊಳ್ಳಬಹುದು. ಈಗಾಗಲೇ ಅವರು 'ಅಬ್ರಹಾಂ ಅಕಾರ್ಡ್' (Abraham Accord) ಎಂಬ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಒಂದು ವೇಳೆ ಆ ಒಪ್ಪಂದವು ಕಾರ್ಯರೂಪಕ್ಕೆ ಬರದಿದ್ದರೂ, ಇಸ್ರೇಲ್ಗೆ ಕ್ರೈಸ್ತ ಜಗತ್ತಿನ ಬೃಹತ್ ಬೆಂಬಲವಿರುತ್ತದೆ; ಏಕೆಂದರೆ ಯಹೂದಿ-ಕ್ರೈಸ್ತ ಸಂಘರ್ಷಗಳು ಈಗ ಬಹುತೇಕ ಮಾಯವಾಗಿವೆ. 56 ಮುಸ್ಲಿಂ ರಾಷ್ಟ್ರಗಳು 'ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಷನ್' (OIC) ಮತ್ತು 'ಮುಸ್ಲಿಂ ವರ್ಲ್ಡ್ ಲೀಗ್' (MWL) ನಂತಹ ಸಾಮಾನ್ಯ ಸಂಸ್ಥೆಗಳನ್ನು ಹೊಂದಿದ್ದು, ದೊಡ್ಡ ಮಟ್ಟದ ಧಾರ್ಮಿಕ ಯುದ್ಧ ಸಂಭವಿಸಿದಲ್ಲಿ ಅವು ಒಗ್ಗೂಡುವುದು ಮಾತ್ರ ನಿಶ್ಚಿತ.

ಧಾರ್ಮಿಕ ಯುದ್ಧ ನಡೆದರೆ ನೆರೆಯ ನೇಪಾಳವು ಭಾರತದ ಜೊತೆ ಸೇರದೆ ಇರಬಹುದು. ಹಳೆಯ ಹಗೆತನದ ಹಿನ್ನೆಲೆಯಲ್ಲಿ ಚೀನಾ ನಮಗೆ ಬೆಂಬಲ ನೀಡುವುದು ಅನುಮಾನ. ಭಾರತದಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆಯು ನಾಶವಾಗಬೇಕೆಂಬುದು ಚೀನಾ ಬಯಕೆಯೂ ಆಗಿದೆ; ಯಾಕೆಂದರೆ ಭಾರತದ ಅಭಿವೃದ್ಧಿ ಹೊಂದುತ್ತಿರುವ ಪ್ರಜಾಪ್ರಭುತ್ವವು ಚೀನಾದ ಯುವಜನತೆಯನ್ನು ಅಂತಹದೇ ಪ್ರಜಾಪ್ರಭುತ್ವಕ್ಕಾಗಿ ಹಂಬಲಿಸುವಂತೆ ಪ್ರೇರೇಪಿಸುತ್ತದೆ.

ಎಚ್ಚರಿಕೆಯ ಸಮಯ

ಈಗಿನ ಸನ್ನಿವೇಶವು ಆಡಳಿತಾರೂಢ ಆರ್‌ಎಸ್‌ಎಸ್‌/ಬಿಜೆಪಿ ಹೆಚ್ಚುತ್ತಿರುವ ಜಾಗತಿಕ ಧಾರ್ಮಿಕ ರಾಷ್ಟ್ರೀಯತೆಯನ್ನು ನಿರ್ವಹಿಸುವಲ್ಲಿ ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂಬುದನ್ನು ಒತ್ತಾಯಿಸುತ್ತದೆ. ಅವರು ನಿರಂತರವಾಗಿ ಜಾತ್ಯತೀತ ವಿರೋಧಿ ಮತ್ತು ಮುಸ್ಲಿಂ ವಿರೋಧಿ ವಾಕ್ಚಾತುರ್ಯವನ್ನು ಬಳಸುವ ಮೂಲಕ ಸಂವಿಧಾನದ ಮೂಲಭೂತ ಜಾತ್ಯತೀತ ರಚನೆಯ ಮೇಲೆ ದಾಳಿ ಮಾಡುತ್ತಾ ಹೋದರೆ, ಭಾರತದ ಉಳಿವು ಮತ್ತು ಅಭಿವೃದ್ಧಿಯ ಹಾದಿಯು ಅಪಾಯದ ಸ್ಥಿತಿಯನ್ನು ತಲುಪುತ್ತದೆ.

ಈ ಕಾರಣಕ್ಕಾಗಿಯೇ ಸಂವಿಧಾನ ಶಿಲ್ಪಿಗಳು ಜಾತ್ಯತೀತತೆಯ ಆಳವಾದ ತತ್ವವನ್ನು ಸಂವಿಧಾನದಲ್ಲಿ ಅಳವಡಿಸಿದರು. ಪೀಠಿಕೆಯಲ್ಲಿರುವ “ಜಾತ್ಯತೀತ" ಎಂಬ ಪದವು ಆ ಗಹನ ರಚನೆಯ ಬಾಹ್ಯ ಅಭಿವ್ಯಕ್ತಿಯಷ್ಟೇ. ಒಂದು ವೇಳೆ ಅವರು ಅದರ ಮೇಲೆ ನಿರಂತರವಾಗಿ ದಾಳಿ ಮಾಡಿದರೆ, ಇಸ್ಲಾಮಿಕ್ ಧರ್ಮಪ್ರಭುತ್ವದ ರಾಷ್ಟ್ರಗಳು ಖಂಡಿತವಾಗಿಯೂ ಆ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುತ್ತವೆ.

ಧಾರ್ಮಿಕ ರಾಷ್ಟ್ರವಾದವಲ್ಲದೆ, ಜಾತ್ಯತೀತ ಉತ್ಪಾದಕ ರಾಷ್ಟ್ರವಾದದ ವಿಸ್ತರಣೆಗಾಗಿ ಕೆಲಸ ಮಾಡುವ ರಾಷ್ಟ್ರವಾದಿಯಾಗಿ, ಆರ್‌ಎಸ್‌ಎಸ್‌/ಬಿಜೆಪಿ ಈ ಹೊಸ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂಬುದು ನನ್ನ ಬಯಕೆ.



Next Story