KS Dakshina Murthy

ಸರ್ವನಾಶದ ಅಂಚಿನಲ್ಲಿ ನಿಟ್ಟುಸಿರು ಬಿಟ್ಟ ಜಗತ್ತು: ಶಾಶ್ವತವಾದೀತೇ 15 ದಿನಗಳ ಕದನ ವಿರಾಮ?


ಸರ್ವನಾಶದ ಅಂಚಿನಲ್ಲಿ ನಿಟ್ಟುಸಿರು ಬಿಟ್ಟ ಜಗತ್ತು: ಶಾಶ್ವತವಾದೀತೇ 15 ದಿನಗಳ ಕದನ ವಿರಾಮ?
x
ಇರಾನ್‌ನಲ್ಲಿ ಕದನ ವಿರಾಮ ಘೋಷಣೆಯಾದ ಬಳಿಕ ಜಮ್ಮುವಿನಲ್ಲಿ ಇರಾನಿನ ಸರ್ವೋಚ್ಛ ನಾಯಕ ದಿ. ಆಯತೊಲ್ಲಾ ಖಮೇನಿ ಅವರ ಭಾವಚಿತ್ರವನ್ನು ಪ್ರದರ್ಶಿಸುತ್ತಿರುವ ಜನ.
Click the Play button to hear this message in audio format

ಇಸ್ರೇಲ್ ಮತ್ತು ಇರಾನ್ ನಡುವಿನ ಭಿನ್ನಾಭಿಪ್ರಾಯದ ಸ್ವರೂಪವೇ ಕಡು-ಕಠೋರ. ಅಲ್ಲಿ ಶಾಶ್ವತ ಒಪ್ಪಂದ ಅಥವಾ ಸ್ಥಿರವಾದ ಶಾಂತಿ ನೆಲೆಸುತ್ತದೆ ಎಂದು ಭಾವಿಸುವುದೇ ಅಸಾಧ್ಯ.

1962ರ ಅಕ್ಟೋಬರ್ 28ರಂದು ಕ್ಯೂಬಾ ಕ್ಷಿಪಣಿ ಕಗ್ಗಂಟ್ಟಿನ ಸಂದರ್ಭದಲ್ಲಿ, ಜಗತ್ತು ಪರಮಾಣು ಸಂಘರ್ಷದ ಅಂಚಿಗೆ ತಲುಪಿದ್ದ ಘಟನೆಯ ಬಗ್ಗೆ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಅದನ್ನು ಕೇವಲ ಕೇಳಿ ತಿಳಿದಿದ್ದವರಿಗೆ, ಅಂತಹದ್ದೇ ಒಂದು ದಿಗಿಲು ಹುಟ್ಟಿಸುವ ಕ್ಷಣ ಮಂಗಳವಾರ (ಏಪ್ರಿಲ್ 7) ಮರುಕಳಿಸಿತೇನೋ ಎಂಬ ಅನುಮಾನ ಎದುರಾಯಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ನಾಗರಿಕತೆಯನ್ನು ಈ ಭೂಮಿಯಿಂದಲೇ ಅಳಿಸಿಹಾಕಿಬಿಡುತ್ತೇನೆ ಎಂದು ಬೆದರಿಕೆ ಹಾಕಿದಾಗ ಅಂತಹುದೇ ಆತಂಕ ಎದುರಾಯಿತು.

ಯಾವತ್ತೂ ಅಬ್ಬರಿಸಿ ಬೊಬ್ಬಿರಿಯುವಂತೆ ಹೇಳಿಕೆಗಳನ್ನು ನೀಡುವುದು ಟ್ರಂಪ್ ಅವರ ಸ್ವಭಾವ. ಅದನ್ನು ಗಮನಿಸಿದರೆ, ಅವರು ತಾವಾಡಿದ ಮಾತನ್ನು ಕಾರ್ಯರೂಪಕ್ಕೆ ತರುವುದು ಅಸಂಭವವೆಂದೇ ತೋರುತ್ತಿತ್ತು. ಆದರೂ, ಅವರ ಕ್ಷಣ ಪಿತ್ಥಂ ಕ್ಷಣ ಚಿತ್ತಂ ನಡವಳಿಕೆಯಿಂದಾಗಿ ಸಾವಿರಾರು ಜನರು ಭೀತಿಗೆ ಒಳಗಾಗಿದ್ದಾರು ಎನ್ನುತ್ತವೆ ವರದಿಗಳು. ಒಂದು ವೇಳೆ ಟ್ರಂಪ್ ತಮ್ಮ ಬೆದರಿಕೆಯಂತೆ ಇರಾನ್ನ ಯಾವುದೇ ಪರಮಾಣು ರಿಯಾಕ್ಟರ್ಗಳು, ಉಪ್ಪುನೀರು ಶುದ್ದೀಕರಣ ಘಟಕಗಳು ಮತ್ತು ವಿದ್ಯುತ್ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿದರೆ, ಅದರಿಂದ ಉಂಟಾಗುವ ಪರಿಣಾಮಗಳು ಈಗಿರುವ ಜಗತ್ತನ್ನೇ ಅಂತ್ಯಗೊಳಿಸಿ ಬಿಡಬಹುದು ಎಂಬ ಭಯ ಎಲ್ಲೆಡೆ ಆವರಿಸಿತ್ತು.

ಆದರೆ ಟ್ರಂಪ್ ಅವರು ಬಿಕ್ಕಟ್ಟಿನ ಸಂದರ್ಭದಲ್ಲಿ ಎದುರಾಳಿಯನ್ನು ತೀವ್ರ ಒತ್ತಡಕ್ಕೆ ಸಿಲುಕಿಸಿ ತಮಗೆ ಬೇಕಾದುದನ್ನು ಸಾಧಿಸಿಕೊಳ್ಳುವ ಕಲೆಯಲ್ಲಿ ಪರಿಣಿತರು. ಹಾಗಾಗಿ ಒಂದು ಸಣ್ಣ ಭರವಸೆ ಇನ್ನೂ ಉಳಿದಿತ್ತು. ಕಳೆದ ಕೆಲವು ದಿನಗಳಿಂದ ಅಮೆರಿಕ ಅಧ್ಯಕ್ಷರು ತಮ್ಮ ಬೇಡಿಕೆಯನ್ನು ಕೇವಲ ಒಂದಕ್ಕೆ ಸೀಮಿತಗೊಳಿಸಿದ್ದರು, ಅದೆಂದರೆ 'ಹೊರ್ಮುಜ್ ಜಲಸಂಧಿ'ಯನ್ನು ಮುಕ್ತಗೊಳಿಸಬೇಕು ಎಂಬುದು. ಈ ಹಿಂದೆ ಟ್ರಂಪ್ ಅವರ ಶಾಂತಿ ಪ್ರಸ್ತಾಪಗಳನ್ನು ತಿರಸ್ಕರಿಸಿದ್ದ ಇರಾನ್, ಈಗ ಅವರ ಬೆದರಿಕೆಗೆ ಮಣಿದು ಜಲಸಂಧಿಯನ್ನು ತೆರೆಯಲು ಒಪ್ಪಿಕೊಂಡಿದೆ. ಈ ಮೂಲಕ ತೀರಾ ಅಂತಿಮ ಕ್ಷಣದಲ್ಲಿ ತತ್ಕ್ಷಣದ ಬಿಕ್ಕಟ್ಟು ಸದ್ಯಕ್ಕೆ ತಿಳಿಯಾಗಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಭಿನ್ನಾಭಿಪ್ರಾಯದ ಸ್ವರೂಪವೇ ಅಂತಹದ್ದು, ಅಲ್ಲಿ ಶಾಶ್ವತ ಒಪ್ಪಂದ ಅಥವಾ ಸ್ಥಿರವಾದ ಶಾಂತಿ ನೆಲೆಸುವುದು ಕಠಿಣಾತಿ ಕಠಿಣ.

ಶಾಶ್ವತವಾದೀತೇ ಶಾಂತಿ?

ಈಗಿರುವ ಪ್ರಮುಖ ಪ್ರಶ್ನೆ ಏನೆಂದರೆ ಈಗ ಘೋಷಿಸಲಾಗಿರುವ ಕದನ ವಿರಾಮವು ಶಾಶ್ವತ ಶಾಂತಿಯಾಗಿ ಬದಲಾಗುವುದೇ ಎಂಬುದು. ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ಕ್ಷಿಪಣಿ ದಾಳಿ ಆರಂಭಿಸಿದ ಕಳೆದ 38 ದಿನಗಳ ಅವಧಿಯಲ್ಲಿ ಯುದ್ಧವು ಕೊನೆಗೊಳ್ಳುತ್ತದೆ ಎಂದು ಅನಿಸಿದ ಹಲವು ಸಂದರ್ಭಗಳು ಎದುರಾಗಿದ್ದವು. ಆದರೆ, ಪ್ರತಿ ಬಾರಿಯೂ ಟ್ರಂಪ್ ದಾಳಿಗಳನ್ನು ತೀವ್ರಗೊಳಿಸುವ ಮೂಲಕ ಅಂತಹ ಭರವಸೆಗಳನ್ನು ಸುಳ್ಳಾಗಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಟೆಹ್ರಾನ್ ಸರ್ಕಾರವು ತನ್ನ ಪರಮಾಣು ಕಾರ್ಯಕ್ರಮವನ್ನು ಮುಂದುವರಿಸುವ ಹಕ್ಕು ಸೇರಿದಂತೆ ತನ್ನ ಪ್ರಮುಖ ಬೇಡಿಕೆಗಳಿಗೆ ಬದ್ಧವಾಗಿಯೇ ಉಳಿದಿರುವುದು ವಿಶೇಷ.

ಈಗ ಕದನ ವಿರಾಮ ಏರ್ಪಟ್ಟಿದ್ದರೂ ಕೂಡ, ಅದು ತಾನಾಗಿಯೇ ಶಾಶ್ವತ ಶಾಂತಿಯನ್ನು ಖಾತರಿಪಡಿಸುವುದಿಲ್ಲ. ಏಕೆಂದರೆ ಇರಾನ್ನ ಪರಮಾಣು ಸಾರ್ವಭೌಮತ್ವ, ಅದರ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮ ಮತ್ತು ಅದರ ಮೇಲಿನ ನಿರ್ಬಂಧಗಳ ತೆರವಿನಂತಹ ವಿಷಯಗಳನ್ನು ಟ್ರಂಪ್ ತಂಡವು ಒಪ್ಪಿಕೊಳ್ಳಲೇಬೇಕಾಗುತ್ತದೆ. ಇರಾನ್ ಪಾಲಿಗೆ ಪರಿಸ್ಥಿತಿ ಇನ್ನಷ್ಟು ಸಂಕೀರ್ಣವಾಗಿದೆ; ಯಾಕೆಂದರೆ ತನ್ನ ವ್ಯೂಹಾತ್ಮಕ ಯೋಜನೆಗಳನ್ನು ಕೈಬಿಡುವುದು ಎಂದರೆ ತನ್ನ ಸ್ವಾತಂತ್ರ್ಯವನ್ನು ಬಿಟ್ಟುಕೊಡುವುದು ಮತ್ತು ದೇಶವನ್ನು ತನಗೆ ಸರಿ ಕಂಡಂತೆ ಆಳುವ ಕಾನೂನುಬದ್ಧ ಹಕ್ಕನ್ನು ತ್ಯಜಿಸಿದಂತೆ ಆಗುತ್ತದೆ.

ಪರಿಸ್ಥಿತಿಯ ಜಟಿಲತೆ ಮತ್ತು ಪಟ್ಟುಬಿಡದ ನಿಲುವುಗಳಿಗೇ ಅಂಟಿಕೊಂಡಿರುವ ಪರಿಸ್ಥಿತಿಯನ್ನು ಗಮನಿಸಿದರೆ, ಈ ಸಮಸ್ಯೆಗಳು ಮುಂದಿನ ಹದಿನೈದು ದಿನಗಳಲ್ಲಿ ಬಗೆಹರಿಯುತ್ತವೆ ಎಂಬುದು ಅನುಮಾನವೇ ಸರಿ. ಆದಾಗ್ಯೂ, ಆಶಾವಾದಕ್ಕೆ ಒಂದು ಕಾರಣವೂ ಇದೆ, ಅದೆಂದರೆ ಎರಡೂ ರಾಷ್ಟ್ರಗಳು ತಮಗೆ ಈ ಯುದ್ಧವನ್ನು ಮುಂದುವರಿಸಲು ಇಷ್ಟವಿಲ್ಲ ಎಂಬ ಸುಳಿವು ನೀಡಿರುವುದು. ಟ್ರಂಪ್ ಪಾಲಿಗೆ, ಈ ಮಿಲಿಟರಿ ಕ್ರಮವು ಕೇವಲ ಕೆಲವು ದಿನಗಳವರೆಗೆ ಇರುತ್ತದೆ ಎಂಬ ಆರಂಭಿಕ ನಿರೀಕ್ಷೆಯನ್ನು ಮೀರಿ ಬೆಳೆದಿದೆ. ಇರಾನ್ ಶೌರ್ಯದಿಂದ ಪ್ರತಿರೋಧ ಒಡ್ಡಿದರೂ ಸಹ, ಅಲ್ಲಿ ವ್ಯಾಪಕ ಸಾವು-ನೋವು ಮತ್ತು ವಿನಾಶ ಸಂಭವಿಸಿದೆ.

ತಳಕಚ್ಚಿದ ಟ್ರಂಪ್ ಜನಪ್ರಿಯತೆ

ಇತ್ತೀಚಿನ ದಿನಗಳಲ್ಲಿ ಅಮೆರಿಕ ಮತ್ತು ಇಸ್ರೇಲ್ನ ಜಂಟಿ ದಾಳಿಗಳು ಇರಾನ್ನ ನಾಗರಿಕ ನೆಲೆಗಳಾದ ವಿಶ್ವವಿದ್ಯಾಲಯ, ಸೇತುವೆಗಳು, ಆಸ್ಪತ್ರೆ, ಶಾಲೆಗಳು ಮತ್ತು ವಾಣಿಜ್ಯ ಪ್ರದೇಶಗಳನ್ನು ಗುರಿಯಾಗಿಸಲು ಪ್ರಾರಂಭಿಸಿದ್ದವು. ಈ ಯುದ್ಧದಿಂದಾಗಿ ಅಮೆರಿಕದಲ್ಲಿ ಟ್ರಂಪ್ ಅವರ ಜನಪ್ರಿಯತೆ ತಳಕಚ್ಚಲು ಕಾರಣವಾಯಿತು ಮತ್ತು ಯುದ್ಧವನ್ನು ನಿಲ್ಲಿಸುವಂತೆ ಅವರ ಬೆಂಬಲಿಗರಿಂದಲೇ ಒತ್ತಡಗಳು ಕೇಳಿಬಂದವು.

ಯುದ್ಧನಿರತ ಈ ಮೂರು ರಾಷ್ಟ್ರಗಳನ್ನು ಹೊರತುಪಡಿಸಿ, ಇರಾನ್ ಕೂಡ ಇಡೀ ಜಗತ್ತು ಆರ್ಥಿಕ ಸಂಕಷ್ಟವನ್ನು ಅನುಭವಿಸುವಂತೆ ಮಾಡಿತು. ಅತ್ಯಗತ್ಯವಾದ ಇಂಧನ ಮತ್ತು ಅನಿಲದ ಪೂರೈಕೆ ಸ್ಥಗಿತಗೊಂಡಿತು ಹಾಗೂ ಆರೋಗ್ಯ ರಕ್ಷಣೆ, ಔಷಧ ಮತ್ತು ಕೃಷಿ ಕ್ಷೇತ್ರಕ್ಕೆ ಅಗತ್ಯವಿರುವ ಹಲವಾರು ಪ್ರಮುಖ ಸರಕುಗಳ ಕೊರತೆ ಎದುರಾಯಿತು.

ಇಸ್ರೇಲ್ ತನ್ನದೇ ಆದ ಕಾರ್ಯಸೂಚಿಯನ್ನು ಹೊಂದಿತ್ತು—ಇರಾನ್ ಮೇಲೆ ಸಾಧ್ಯವಾದಷ್ಟು ಬಾಂಬ್ ದಾಳಿ ನಡೆಸುವುದು, ಅದರ ಪರಮಾಣು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಮೂಲಸೌಕರ್ಯಗಳನ್ನು ಇನ್ನಿಲ್ಲದಂತೆ ಮಾಡುವುದು ಮತ್ತು ಅಲ್ಲಿನ ಇಸ್ಲಾಮಿಕ್ ಆಡಳಿತದ ವಿರುದ್ಧ ದಂಗೆಗೆ ಪ್ರಚೋದನೆ ನೀಡುವುದು. ಆದರೆ, ಹಿಂದಿನಂತೆಯೇ ಈಗಲೂ ಅದು ಅಮೆರಿಕದ ನಿಯಂತ್ರಣಕ್ಕೆ ಒಳಪಟ್ಟಿದೆ ಮತ್ತು ಮುಂಬರುವ ಮಾತುಕತೆಗಳ ಫಲಿತಾಂಶ ಏನೇ ಇರಲಿ, ಅದಕ್ಕೆ ಬದ್ಧವಾಗಿರಬೇಕಾಗುತ್ತದೆ.

ಗೆದ್ದವರಾರು, ಸೋತವರಾರು?

ಯುದ್ಧವು ಇಷ್ಟು ದೀರ್ಘಕಾಲ ಜಗ್ಗಾಡಲು ಮತ್ತೊಂದು ಕಾರಣವೂ ಇದೆ. ಅದೇನೆಂದರೆ ವಿಜೇತರು ಯಾರು ಮತ್ತು ಸೋತವರು ಯಾರು ಎಂಬ ಚರ್ಚೆ. ಇಬ್ಬರೂ ಸೋತಿದ್ದಾರೆ ಮತ್ತು ಇಡೀ ಜಗತ್ತೇ ನಷ್ಟ ಅನುಭವಿಸಿದೆ ಎಂದು ಕೆಲವರು ವಾದಿಸಿದರೆ, ಈ ಎರಡೂ ರಾಷ್ಟ್ರಗಳು ತಾವೇ ವಿಜೇತರು ಎಂದು ಪ್ರತಿಪಾದಿಸುತ್ತಿವೆ.

ಅಮೆರಿಕ ಮತ್ತು ಇಸ್ರೇಲ್‌ ಅನ್ನು 38 ದಿನಗಳ ಕಾಲ ಕೆಚ್ಚೆದೆಯಿಂದ ಎದುರಿಸಿ ನಿಂತಿದ್ದಕ್ಕಾಗಿ ಮತ್ತು ತನ್ನ ಪ್ರಮುಖ ಕಾರ್ಯಕ್ರಮಗಳನ್ನು ಬಿಟ್ಟುಕೊಡದೇ ಇದ್ದುದಕ್ಕಾಗಿ ಇರಾನ್ ತನ್ನನ್ನು ತಾನು ವಿಜೇತ ಎಂದು ಕರೆದುಕೊಳ್ಳುತ್ತಿದೆ. ಮತ್ತೊಂದೆಡೆ, ಇರಾನ್ ಆಡಳಿತವನ್ನು ಬದಲಿಸುವಲ್ಲಿ ಯಶಸ್ವಿಯಾಗಿದ್ದೇನೆ ಮತ್ತು ಹೊರ್ಮುಜ್ ಜಲಸಂಧಿಯನ್ನು ತೆರೆಯುವಂತೆ ಇರಾನ್ ಮೇಲೆ ಒತ್ತಡ ಹೇರಿದ್ದೇನೆ ಎಂದು ಹೇಳಿಕೊಳ್ಳುತ್ತಾ ಟ್ರಂಪ್ ಆಗಲೇ ತಾವು ವಿಜೇತ ಎಂದು ಘೋಷಿಸಿಕೊಂಡಿದ್ದಾರೆ.

ಒಮ್ಮೆ ಈ ಯುದ್ಧಕ್ಕೆ ವಿರಾಮ ಬಿದ್ದ ಮೇಲೆ, ಟ್ರಂಪ್ ಮತ್ತು ಇರಾನ್ ಇಬ್ಬರೂ ಇದನ್ನು ದೀರ್ಘಕಾಲದ ಕದನ ವಿರಾಮವಾಗಿ ಅಥವಾ ಶಾಶ್ವತ ಶಾಂತಿಯನ್ನಾಗಿ ಪರಿವರ್ತಿಸಲು ಕಾರಣಗಳನ್ನು ಹುಡುಕಬಹುದು. ಏಕೆಂದರೆ ಯುದ್ಧವನ್ನು ಮುಂದುವರಿಸುವುದು ತರ್ಕಬದ್ಧವಾಗಿಲ್ಲ; ಈ ಯುದ್ಧದ ಅಸಂಬದ್ಧತೆ, ಇದು ಮಧ್ಯಪ್ರಾಚ್ಯ ಅಥವಾ ಪಶ್ಚಿಮ ಏಷ್ಯಾಕ್ಕೆ ಒಡ್ಡುತ್ತಿರುವ ಅಪಾಯಗಳು ಮತ್ತು ಜಗತ್ತಿನ ಮೇಲೆ ಬೀರುತ್ತಿರುವ ಆರ್ಥಿಕ ಪರಿಣಾಮಗಳ ಕುರಿತು ಈಗಾಗಲೇ ಜಗತ್ತಿನಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ವರದಿಗಳ ಪ್ರಕಾರ, ಮೊದಲ ಎರಡು ಸುತ್ತಿನ ಮಾತುಕತೆಗಳು ವಿಫಲವಾಗುವಲ್ಲಿ ಇಸ್ರೇಲ್ನ ಕಾರ್ಯಸೂಚಿ ದೊಡ್ಡ ಪಾತ್ರ ವಹಿಸಿದೆ ಎಂಬ ಅನುಮಾನಗಳಿವೆ. ಮೊದಲನೆಯದು ಕಳೆದ ವರ್ಷದ ಜೂನ್ನಲ್ಲಿ 12 ದಿನಗಳ ಯುದ್ಧಕ್ಕೆ ಕಾರಣವಾಗಿತ್ತು, ಆದರೆ 38 ದಿನಗಳ ಕಾಲ ನಡೆದ ಎರಡನೇ ಸುತ್ತಿನ ಸಂಘರ್ಷ ಈಗಷ್ಟೇ ತಾತ್ಕಾಲಿಕವಾಗಿ ನಿಂತಿದೆ. ಮುಂಬರುವ ಸಂಭಾವ್ಯ ಒಪ್ಪಂದಕ್ಕೆ ಇಸ್ರೇಲ್ ಬದ್ಧವಾಗಿರುವಂತೆ ಒತ್ತಾಯಿಸುವ ಶಕ್ತಿ ಇರುವುದು ಕೇವಲ ಅಮೆರಿಕಕ್ಕೆ ಮಾತ್ರ.

ನಿರ್ಣಾಯಕ ಹದಿನೈದು ದಿನಗಳು

ಮುಂದಿನ ಹದಿನೈದು ದಿನಗಳು ಅತ್ಯಂತ ನಿರ್ಣಾಯಕ ಎನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಸೇರಿದಂತೆ ಸಂಧಾನಕಾರರು, ಯಾವುದೇ ಪಕ್ಷಗಳಿಗೂ ಮುಖಭಂಗವಾಗದಂತೆ ಎಲ್ಲರೂ ಒಪ್ಪಬಹುದಾದ ಮಧ್ಯಮ ಮಾರ್ಗವನ್ನು ಕಂಡುಕೊಳ್ಳಲು ಪ್ರಯತ್ನಿಸಲಿದ್ದಾರೆ. ಇದು ಸುಲಭದ ಮಾತಲ್ಲ; ಯಾಕೆಂದರೆ ಇಸ್ರೇಲ್ ಮತ್ತು ಇರಾನ್ ನಡುವಿನ ಮುನಿಸು ಅಸಾನ್ಯವಾದುದು. ಪ್ರಸ್ತುತ ಪರಿಸ್ಥಿತಿಯಲ್ಲಿ ಅಲ್ಲಿ ಶಾಶ್ವತ ಒಪ್ಪಂದ ಅಥವಾ ಸ್ಥಿರ ಶಾಂತಿ ನೆಲೆಸುತ್ತದೆ ಎಂದು ನಿರೀಕ್ಷಿಸುವುದು ಕಷ್ಟ.

ಆದರೆ ಸರ್ವನಾಶದ ಅಂಚಿನವರೆಗೆ ಹೋಗಿಬಂದ ಜಗತ್ತಿಗೆ, ಮಧ್ಯಮ ಅವಧಿಯ ಶಾಂತಿ ಸಿಕ್ಕರೂ ಅದು ದೊಡ್ಡ ಸಾಧನೆ ಎಂದೇ ಪರಿಗಣಿಸಲಾಗುತ್ತಿದೆ.

Next Story