
- ಮುಖಪುಟ
- ತಾಜಾ ಸುದ್ದಿತಾಜಾ ಸುದ್ದಿ
- ಕರ್ನಾಟಕಕರ್ನಾಟಕ
- ರಾಷ್ಟ್ರೀಯರಾಷ್ಟ್ರೀಯ
- ವಿಶೇಷ ಲೇಖನವಿಶೇಷ ಲೇಖನ
- ಅಭಿಮತ
- ಮನರಂಜನೆಮನರಂಜನೆ
- ಕ್ರೀಡೆಕ್ರೀಡೆ
- ಉದ್ಯೋಗ ವಾರ್ತೆ
- ವಿಡಿಯೋ

(ಮಹಾಯುದ್ಧ ನಡೆದ ನಂತರ ಐದು ದಶಕಗಳ ಅವಧಿಯಲ್ಲಿ ವಿಶ್ವಕ್ಕೊಂದು ʼಜಾಗತಿಕ ವ್ಯವಸ್ಥೆʼ ಎನ್ನುವುದಿತ್ತು. ಟ್ರಂಪ್ ಯುಗದಲ್ಲಿ ಎಲ್ಲವೂ ಖುಲ್ಲಂಖುಲ್ಲ. ಪಾಶ್ಚಿಮಾತ್ಯ ಹೇರಿಕೆಗೆ ಯಾವ ಭಿಡೆಯೂ ಇಲ್ಲ!
ಅಮೆರಿಕ ಮತ್ತು ಇಸ್ರೇಲ್ ಎರಡೂ ಸೇರಿ ಫೆ. 28ರಿಂದ ಆರಂಭಿಸಿರುವ ಇರಾನ್ ಮೇಲಿನ ಯುದ್ಧ ಈಗಲೂ ಜಾರಿಯಲ್ಲಿದೆ. ಮೂರೂ ದೇಶಗಳು ಜಿದ್ದಿಗೆ ಬಿದ್ದಿರುವುದರಿಂದ ಅದೇನು ಶೀಘ್ರ ಕೊನೆಗೊಳ್ಳುವ ಲಕ್ಷಣಗಳೇನೂ ಕಾಣಿಸುತ್ತಿಲ್ಲ. ದಾಳಿಯ ಮೊದಲ ದಿನವೇ ಈ ಎರಡೂ ದೇಶಗಳು ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲ ಅಲಿ ಖಮೇನಿ ಮತ್ತು ಇರಾನಿನ ಇತರ ನಾಯಕರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದವು.
ಇರಾನಿನಲ್ಲಿ ಈಗಿರುವ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು ಎಂದು ಅಮೆರಿಕ ಕರೆ ನೀಡಿದೆ. ಅಂದರೆ 1979ರ ಇರಾನ್ ಕ್ರಾಂತಿಯ ನಾಯಕ ಅಯತೊಲ್ಲಾ ರುಹೊಲ್ಲಾ ಖೊಮೇನಿ ಅವರ ದೇವತಾಶಾಸ್ತ್ರ ಮತ್ತು ರಾಜಕೀಯ ಚಿಂತನೆಯನ್ನು ಆಧರಿಸಿ ರೂಪಿತವಾದ ಇಂದಿನ ʼವಿಲಾಯತ್-ಎ-ಫಕೀಹ್ʼ ಇರಾನ್ ಆಡಳಿತ ವ್ಯವಸ್ಥೆಯ ಅಂತ್ಯ ಹಾಡಬೇಕು ಎನ್ನುವುದು ಇದರ ಅರ್ಥವಾಗಿದೆ. ಆದರೆ ಈ ಗುರಿಯನ್ನು ಸಾಧಿಸುವುದು ಇಸ್ರೇಲ್ ಮತ್ತು ಅಮೆರಿಕಕ್ಕೆ ಅಷ್ಟೇನು ಸುಲಭದ ಕೆಲಸವಲ್ಲ.
ಇರಾನ್ ಮೇಲೆ ಈಗ ನಡೆಯುತ್ತಿರುವ ಭೀಕರ ದಾಳಿ ಮತ್ತು ಅದಕ್ಕೆ ಸಿಗುತ್ತಿರುವ ಪ್ರಪಂಚದ ಪ್ರತಿಕ್ರಿಯೆಗಳನ್ನು ಕೇವಲ ಒಂದು ನಿರ್ದಿಷ್ಟ ಘಟನೆ ಎಂದು ತಳ್ಳಿಹಾಕಲು ಸಾಧ್ಯವಿಲ್ಲ. ಇದು ಅಮೆರಿಕ ಯಾವುದೇ ಹಿಂಜರಿಕೆ ಇಲ್ಲದೆ ಹೊಸ ವಿಶ್ವ ವ್ಯವಸ್ಥೆಯನ್ನು ರೂಪಿಸಲು ಬಯಸುತ್ತಿರುವ ದೊಡ್ಡ ಕಥೆಯ ಭಾಗ. ವಿಪರ್ಯಾಸದ ಸಂಗತಿ ಎಂದರೆ ಈ ಹೊಸ ವ್ಯವಸ್ಥೆಯು 1945ರಲ್ಲಿ ಎರಡನೇ ಮಹಾಯುದ್ಧದ ನಂತರ ಅಮೆರಿಕವೇ ಸ್ಥಾಪಿಸಿದ ವ್ಯವಸ್ಥೆಗಿಂತ ಸಂಪೂರ್ಣ ಭಿನ್ನವಾಗಿರಲಿದೆ.
ಈ ಹೊಸ ವಿಶ್ವ ವ್ಯವಸ್ಥೆಯು ತನ್ನ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ಏಕಪಕ್ಷೀಯವಾಗಿ ಮತ್ತು ಕ್ರೂರವಾಗಿ ವರ್ತಿಸುವ ಬಲಿಷ್ಠ ರಾಷ್ಟ್ರಗಳ ಮೇಲೆ ಹೇರಲಾಗಿದ್ದ ನಿರ್ಬಂಧಗಳಿಗೆ ಬೆನ್ನುಹಾಕಿದೆ. ಬಲಿಷ್ಠ ದೇಶಗಳು ತಮ್ಮ ಮೂಲಭೂತ ಹಿತಾಸಕ್ತಿಗಳ ವಿಷಯದಲ್ಲಿ ವಿಶ್ವ ವ್ಯವಸ್ಥೆಯ ನಿಯಮಗಳಿಗೆ ಎಂದಿಗೂ ಅಡ್ಡಿಯಾಗಲು ಬಿಡುತ್ತಿರಲಿಲ್ಲ ಎಂಬುದು ನಿಜವೇ ಆದರೂ, ಕನಿಷ್ಠಪಕ್ಷ ತಾವು ಸ್ವತಃ ಸ್ಥಾಪಿಸಿದ ವಿಶ್ವ ವ್ಯವಸ್ಥೆಯ ಮರ್ಯಾದೆ ಕಾಯ್ದುಕೊಳ್ಳುವ ನಾಟಕವನ್ನಾದರೂ ಆಡುತ್ತಿದ್ದವು.
ಆದರೆ ಈಗ ಅಂತಹ ಯಾವುದೇ ಕದ್ದು-ಮುಚ್ಚಿ ನಡೆಸುವ ಕಸರತ್ತೂ ಮಾಯವಾಗಿದೆ. ಅವು ಎಲ್ಲವೂ ಈಗ ಖುಲ್ಲಂಖುಲ್ಲ. ಟ್ರಂಪ್ ನೇತೃತ್ವದ ಅಮೆರಿಕ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದಕ್ಕೆ ಎರಡು ಬೆಳವಣಿಗೆಗಳು ಮತ್ತು ಒಂದು ಭಾಷಣ ಸಾಕ್ಷಿ ನುಡಿಯುತ್ತದೆ.
ಜಾಗತಿಕ ನಿಯಮಗಳೆಂದರೆ ಹೇವರಿಕೆ
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಮ್ಯೂನಿಚ್-ನಲ್ಲಿ ಭದ್ರತಾ ಸಮ್ಮೇಳನವನ್ನು ಉದ್ದೇಶಿಸಿ ಫೆ. 14ರಂದು ಮಾತನಾಡಿದರು. ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸೆಲಿಯಾ ಫ್ಲೋರೆಸ್ ಅವರನ್ನು ಅವರ ದೇಶದ ರಾಜಧಾನಿ ಕಾರಕಸ್ ಮೇಲೆ ದಾಳಿ ಮಾಡಿದ ಅಮೆರಿಕದ ಪಡೆಗಳು ಅಪಹರಿಸಿದ ಸುಮಾರು ಆರು ವಾರಗಳ ಬಳಿಕ ಈ ಭಾಷಣ ಮಾಡಲಾಗಿತ್ತು. ಮಡುರೊ ಅಪಹರಣ ಜಾಗತಿಕ ನಿಯಮಗಳ ಬಗ್ಗೆ ಟ್ರಂಪ್ ಆಡಳಿತಕ್ಕಿರುವ ತಿರಸ್ಕಾರ ಭಾವನೆಯನ್ನು ತೋರಿಸಿಕೊಟ್ಟಿತ್ತು.
ರೂಬಿಯೊ ಅವರು ತಮ್ಮ ಭಾಷಣದಲ್ಲಿ ಈ ಕ್ರಮಕ್ಕೆ ಸಮರ್ಥನೆ ನೀಡಲು ನಡೆಸಿದ ಪ್ರಯತ್ನ ಹೀಗಿತ್ತು; “ನಮಗೆ ನಮ್ಮ ಜನರು ಮತ್ತು ರಾಷ್ಟ್ರಗಳ ಪ್ರಮುಖ ಹಿತಾಸಕ್ತಿಗಳು ಮುಖ್ಯವೇ ಹೊರತು ಸ್ವಯಂಘೋಷಿತ ಜಾಗತಿಕ ವ್ಯವಸ್ಥೆ ಮುಖ್ಯವಲ್ಲ.” ಅಂದರೆ ಅವರ ಪ್ರಕಾರ ʼಪ್ರಮುಖ ಹಿತಾಸಕ್ತಿಗಳುʼ ಎಂದರೆ ಒಂದು ರಾಷ್ಟ್ರದ ಮುಖ್ಯಸ್ಥ ಹಾಗೂ ಆತನ ಪತ್ನಿಯನ್ನು ಅಪಹರಿಸಿಕೊಂಡು ಬರಬೇಕು ಎಂದು ಬಯಸುತ್ತದೆ ಮತ್ತು ಅದಕ್ಕೆ ನಾವು ಕಾನೂನು ಸಮರ್ಥನೆಗಳನ್ನೂ ಹುಡುಕುತ್ತೇವೆ ಎಂದು ಅರ್ಥ.
ಮಡುರೊ ವಿಚಾರದಲ್ಲಂತೂ ಅವರ ಮಾಡಿಕೊಂಡ ಆಯ್ಕೆ ದೋಷಪೂರಿತವಾಗಿತ್ತು. ಆದ್ದರಿಂದಲೇ ಅವರು ಅಕ್ರಮವಾಗಿ ಅಧಿಕಾರ ಹಿಡಿದಿದ್ದಾರೆ ಎಂದು ಘೋಷಿಸುವ ಮೂಲಕ ಅದನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಲಾಯಿತು. ಇಷ್ಟು ಮಾತ್ರವಲ್ಲದೆ ಅವರ ಅಪಹರಣವನ್ನು ಒಬ್ಬ ಪಲಾಯನಗೈದಿರುವ ಅಪರಾಧಿಯನ್ನು ನ್ಯಾಯದ ಕಟಕಟೆ ಮುಂದೆ ತಂದು ನಿಲ್ಲಿಸುವ ʼಕಾನೂನು ಮತ್ತು ಸುವ್ಯವಸ್ಥೆʼ ಕಾರ್ಯಾಚರಣೆ ಎಂಬಂತೆ ಬಿಂಬಿಸಲಾಯಿತು.
ಎರಡನೇ ಮಹಾಯುದ್ಧದ ಬಳಿಕ ವಿಶ್ವ ವ್ಯವಸ್ಥೆ ಎಂಬುದು ʼಜಾಗತಿಕ ಬಹುತ್ವʼದ ಮೂಲ ನಂಬಿಕೆಯ ಮೇಲೆ ನೆಲೆಗೊಂಡಿತ್ತು. ಎಲ್ಲ ನಾಗರಿಕತೆಗಳು ಗೌರವಕ್ಕೆ ಅರ್ಹವಾದವು. ಒಬ್ಬ ವ್ಯಕ್ತಿ ತನ್ನ ಸ್ವಂತ ನಾಗರಿಕತೆಯ ಬಗ್ಗೆ ಹೆಮ್ಮೆಯ ಭಾವನೆಯನ್ನು ಹೊಂದಿದ್ದರೆ ಅಂತಹ ಭಾವನೆಯು ಇತರ ನಾಗರಿಕತೆಯನ್ನು ಗೌರವಿಸುವ ತತ್ವವನ್ನು ಎಂದಿಗೂ ಕುಂದಿಸಬಾರದು ಎಂಬ ಯೋಚನೆಯೇ ಇದಕ್ಕೆ ಆಧಾರವಾಗಿತ್ತು. ಆದರೆ, ಮಾರ್ಕೊ ರುಬಿಯೊ ಅವರು ಪಾಶ್ಚಿಮಾತ್ಯ ನಾಗರಿಕತೆಯನ್ನು ಗುಣಗಾನ ಮಾಡಲು ಬಳಸಿದ ಮಾತುಗಳು ದಶಕಗಳಷ್ಟು ಹಿಂದಿನ ಪಾಶ್ಚಿಮಾತ್ಯ ಉದಾರವಾದಿಗಳು ಮುಜುಗರದಿಂದ ಮುಖ ಮುಚ್ಚಿಕೊಳ್ಳುವಂತೆ ಮಾಡಿದೆ.
ಅವರು ಮುಂದುವರಿದು ಹೀಗೆ ಹೇಳಿದರು; “ಎರಡನೇ ಮಹಾಯುದ್ಧದ ಅಂತ್ಯದ ವರೆಗಿನ ಐದು ಶತಮಾನಗಳ ಕಾಲ ಪಾಶ್ಚಿಮಾತ್ಯ ಜಗತ್ತು ತನ್ನ ಮಿಷನರಿಗಳು, ಯಾತ್ರಿಕರು, ಸೈನಿಕರು ಮತ್ತು ಅನ್ವೇಷಕರನ್ನು ಸಾಗರಗಳನ್ನು ದಾಟಲು, ಹೊಸ ಖಂಡಗಳಲ್ಲಿ ನೆಲೆಸಲು ಮತ್ತು ಜಗತ್ತಿನಾದ್ಯಂತ ವಿಶಾಲವಾದ ಸಾಮ್ರಾಜ್ಯವನ್ನು ಕಟ್ಟಲು ಕಳುಹಿಸುವ ಮೂಲಕ ವಿಸ್ತರಿಸುತ್ತಲೇ ಇತ್ತು.”
ಯಾವ ಜೀವಕ್ಕೂ ಬೆಲೆ ಇಲ್ಲ
ಪಾಶ್ಚಿಮಾತ್ಯರ ಈ ವಿಸ್ತರಣಾ ಪ್ರಕ್ರಿಯೆಯು ವಸಾಹತುಶಾಹಿಯ ಭೀಕರತೆಯಿಂದ ಕೂಡಿತ್ತು. ಇದು ವಸಾಹತುಶಾಹಿ ಹಿಡಿತಕ್ಕೆ ಒಳಗಾದವರ ಸಂಪನ್ಮೂಲಗಳನ್ನು ಅತ್ಯಂತ ಕ್ರೂರವಾಗಿ ಲೂಟಿ ಮಾಡಿತು ಮತ್ತು ಅಲ್ಲಿನ ಜನರ ಜೀವಕ್ಕೆ ಚಿಕ್ಕಾಸಿನ ಬೆಲೆಯನ್ನೂ ನೀಡಲಿಲ್ಲ. ಅವರನ್ನು ʼಕಾನೂನು ವ್ಯಾಪ್ತಿಗೆ ಬಾರದ ಕೆಲಜಾತಿಗಳುʼ ಎಂದು ಪರಿಗಣಿಸಿತು. ಆದ್ದರಿಂದ ಪಾಶ್ಚಿಮಾತ್ಯರನ್ನು ಯಾರು ವಿರೋಧಿಸುತ್ತಿದ್ದರೋ ಅವರನ್ನು ಕೊಲ್ಲಬಹುದಿತ್ತು ಹಾಗೂ ಅಂತಹ ಕೊಲೆಗಳನ್ನು ಸಮರ್ಥಿಸಲು ಕಾನೂನುಬದ್ಧ ಕಾರಣಗಳನ್ನು ಹುಡುಕಲಾಗುತ್ತಿತ್ತು.
ವಿಷಯ ಹೀಗಿದ್ದರೂ ರುಬಿಯೊ ಅವರು ವಸಾಹತುಶಾಹಿಯಿಂದ ಉಂಟಾದ ದುಃಖ ಮತ್ತು ಸಂಕಟಗಳನ್ನು ನಿರ್ಲಕ್ಷಿಸಿದರು. ಪಾಶ್ಚಿಮಾತ್ಯ ನಾಗರಿಕತೆಯ ಭಾಗವಾಗಿರುವ ಯುರೋಪಿಯನ್ ಮಿತ್ರರಾಷ್ಟ್ರಗಳು ಅವಮಾನ ಮತ್ತು ಅಪರಾಧ ಪ್ರಜ್ಞೆಗೆ ಸಿಲುಕಬಾರದು ಎಂದು ಒತ್ತಾಯಿಸಿದರು.
ಇನ್ನೂ ಮಾತು ಮುಂದುವರಿಸಿದ ಅವರು, “ನಮಗೆ ತಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಹೆಮ್ಮೆ ಇರುವ ಮಿತ್ರರಾಷ್ಟ್ರಗಳು ಬೇಕು. ನಾವು ಒಂದೇ ಶ್ರೇಷ್ಠ ಮತ್ತು ಉದಾತ್ತ ನಾಗರಿಕತೆಯ ಉತ್ತರಾಧಿಕಾರಿಗಳು ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಹಾಗೂ ನಮ್ಮ ಜೊತೆಗೆ ಸೇರಿ ಅದನ್ನು ರಕ್ಷಿಸಲು ಸಿದ್ಧರಿರಬೇಕು,” ಎಂದು ಹೇಳಿದರು. ಪ್ರಬಲ ಪಾಶ್ಚಿಮಾತ್ಯ ಜಗತ್ತು ಮುಂದೆಯೂ ಅನೂಚಾನವಾಗಿ ಮುಂದುವರಿಯಬೇಕು ಎಂಬುದು ಅವರ ಮಾತಿನ ಅರ್ಥ ಎಂಬುದರಲ್ಲಿ ಅನುಮಾನವಿರಲಿಲ್ಲ.
ರೂಬಿಯೋ ಅವರ ಭಾಷಣವು ವಸಾಹತುಶಾಹಿಯ ಸಮರ್ಥನೆಯಷ್ಟೇ ಆಗಿತ್ತು. ಇದೇ ವಸಾಹತುಶಾಹಿ ವ್ಯವಸ್ಥೆಯ ವಿರುದ್ಧ ಭಾರತದ ಸ್ವಾತಂತ್ರ್ಯ ಚಳವಳಿಯು ಹೋರಾಡಿದ್ದು. ಮಹಾತ್ಮಾ ಗಾಂಧೀಜಿಯವರ ಸ್ಪೂರ್ತಿದಾಯಕ ನಾಯಕತ್ವದಲ್ಲಿ ಭಾರತವು ಸ್ವಾತಂತ್ರ್ಯವನ್ನು ಪಡೆಯಿತು. ಸ್ವತಂತ್ರ ಭಾರತವು ವಸಾಹತುಶಾಹಿ ವಿರುದ್ಧದ ಹೋರಾಟದ ನೇತೃತ್ವ ವಹಿಸಿತ್ತು. ಇದು ಎಂದಿಗೂ ಮರೆಯಬಾರದ ಉದಾತ್ತ ಪರಂಪರೆಯಾಗಿದೆ. ವಸಾಹತುಶಾಹಿ ವಿರುದ್ಧದ ಜಾಗತಿಕ ಚಳವಳಿಯ ಮುಂಚೂಣಿಯಲ್ಲಿದ್ದರೂ ಸಹ, ಸ್ವತಂತ್ರ ಭಾರತವು ತನ್ನ ಹಿತಾಸಕ್ತಿಗಳನ್ನು ಉತ್ತೇಜಿಸುವ ಮತ್ತು ರಕ್ಷಿಸುವ ಅನ್ವೇಷಣೆಯಲ್ಲಿ ಎಂದಿಗೂ ಅಳುಕಲಿಲ್ಲ. ಯಾವುದೇ ಶಕ್ತಿಯ ಮುಂದೆ ಮಂಡಿಯೂರದೆ ಭಾರತವು ಇದನ್ನು ಸಾಧಿಸಿ ತೋರಿಸಿತು.
ಸಾಕ್ಷಿ ಹೇಳುವ ಎರಡು ಪ್ರಕರಣಗಳು
ಈಗ ಟ್ರಂಪ್ ಮತ್ತು ಅಮೆರಿಕವು ಮತ್ತೊಮ್ಮೆ ಪಾಶ್ಚಿಮಾತ್ಯ ಪ್ರಾಬಲ್ಯದ ಯುಗಕ್ಕೆ ಪಶ್ಚಿಮದ ದೇಶಗಳನ್ನು ಕೊಂಡೊಯ್ಯಲು ಬಯಸಿದೆ. ಅಂತಹುದೊಂದು ಸಿದ್ಧಾಂತಕ್ಕೆ ರೂಬಿಯೊ ಅವರ ಮಾತುಗಳು ತಳಹದಿಯಾಗಿವೆ. ಇಂತಹ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ ಎಂಬುದಕ್ಕೆ ಎರಡು ಪ್ರಮುಖ ಘಟನೆಗಳು ಸಾಕ್ಷಿಯಾಗಿವೆ: ಒಂದು ಮಡುರೊ ಮತ್ತು ಅವರ ಪತ್ನಿಯನ್ನು ಅಪಹರಿಸಿರುವುದು ಮತ್ತು ಇನ್ನೊಂದು ಅಯತೊಲ್ಲ ಖಮೇನಿಯನ್ನು ಹತ್ಯೆ ಮಾಡಿದ್ದು. ಯುದ್ಧದ ಸಂದರ್ಭದಲ್ಲಿಯೂ ಕೂಡ ಶತ್ರು ನಾಯಕರನ್ನು ಗುರಿಯಾಗಿ ಮಾಡುವುದು ಅಪರೂಪ. ಆದರೆ ಯಾವುದೇ ಔಪಚಾರಿಕ ಯುದ್ಧ ಘೋಷಣೆ ಕೂಡ ಇಲ್ಲದೆ ಖಮೇನಿ ಅವರನ್ನು ಹತ್ಯೆ ಮಾಡಲಾಯಿತು. ಇದು ಹಿಂದಿನ ಪಾಶ್ಚಿಮಾತ್ಯ ವಸಾಹತುಶಾಹಿ ಶಕ್ತಿಗಳ ವರ್ತನೆಯ ಪುನರಾವರ್ತನೆಯೇ ಆಗಿದೆ ಮತ್ತು ಆ ವಿಷಯದಲ್ಲಿ ಅದಕ್ಕೆ ಯಾವ ಭಯವೂ ಇಲ್ಲ.
ಅವರು ಹೀಗೆ ನಿರ್ಭಯವಾಗಿ ವರ್ತಿಸಲು ಕಾರಣವೆಂದರೆ, ಪಾಶ್ಚಿಮಾತ್ಯ ಶಕ್ತಿಗಳು ಮತ್ತು ಇತರ ದೇಶಗಳ ನಡುವೆ ಇರುವ ಶಕ್ತಿ ಮತ್ತು ಯುದ್ಧ ಸಾಮರ್ಥ್ಯದ ನಡುವೆ ಇರುವ ವ್ಯತ್ಯಾಸ. ಹಿಂದೆ ಯುರೋಪ್ ಹಾಗೂ ಏಷ್ಯಾ-ಆಫ್ರಿಕಾ ಖಂಡಗಳ ನಡುವೆ ಇದ್ದ ವಿಜ್ಞಾನ ಮತ್ತು ತಂತ್ರಜ್ಞಾನದ ಅಂತರವೇ ವಸಾಹತುಶಾಹಿಗೆ ಕಾರಣವಾಗಿತ್ತು.
ಇಂದು ಅಮೆರಿಕ ಹಾಗೂ ಪಾಶ್ಚಿಮಾತ್ಯ ದೇಶಗಳು ಮತ್ತು ಚೀನಾ ಹಾಗೂ ಕೆಲವು ಮುಂದುವರಿದ ದೇಶಗಳನ್ನು ಹೊರತುಪಡಿಸಿ ವಿಶ್ವದ ಉಳಿದ ರಾಷ್ಟ್ರಗಳ ನಡುವೆ ಅಂತಹದ್ದೇ ಅಂತರ ಸೃಷ್ಟಿಯಾಗುತ್ತಿದೆ.
ಸ್ವದೇಶಿ ರಕ್ಷಣಾ ಅಭಿವೃದ್ಧಿ
ಒಂದು ದೇಶವು ಈ 'ನವ ವಸಾಹತುಶಾಹಿ'ಯಿಂದ ತಪ್ಪಿಸಿಕೊಳ್ಳಲು ಇರುವ ಏಕೈಕ ಮಾರ್ಗವೆಂದರೆ, ವಿಶೇಷವಾಗಿ ರಕ್ಷಣಾ ಕ್ಷೇತ್ರದಲ್ಲಿ ಸ್ವದೇಶಿ ಅಭಿವೃದ್ಧಿಯ ಮೂಲಕ ತನ್ನನ್ನು ತಾನು ರಕ್ಷಿಸಿಕೊಳ್ಳಲು ಬೇಕಾದ ನೈಜ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು. ಅಣ್ವಸ್ತ್ರಗಳನ್ನು ಹೊಂದಿರುವ ದೇಶಗಳು ನಿರ್ಬಂಧಗಳಿಗೆ ಒಳಗಾಗಬಹುದಾದರೂ, ಅಮೆರಿಕದ ಇಂತಹ ಕಠಿಣ ಶಿಕ್ಷಾರ್ಹ ಕ್ರಮಗಳಿಂದ ಪಾರಾಗುತ್ತವೆ.
ಅಮೆರಿಕದ ಈ ವರ್ತನೆಯನ್ನು ಭಾರತದ ಭದ್ರತೆ ಬಗ್ಗೆ ಯೋಜನೆ ರೂಪಿಸುವವರು ಮತ್ತು ರಾಜಕೀಯ ವರ್ಗವು ವಿಶಾಲ ವ್ಯಾಪ್ತಿಯಲ್ಲಿ ಅರ್ಥಮಾಡಿಕೊಳ್ಳುವುದು ಸೂಕ್ತ. ಭಾರತದ ಈ ತತ್-ಕ್ಷಣದ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವ ಸಂದರ್ಭ ಬಂದಾಗಲೂ ಕೂಡ ಈ ಅಂಶವನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಅತ್ಯಗತ್ಯ. ಈ ಹಿನ್ನೆಲೆಯಲ್ಲಿಯೇ ಭಾರತವು ಖಮೇನಿ ಹತ್ಯೆಯ ಬಗ್ಗೆ ನಿರ್ದಿಷ್ಟವಾಗಿ ಪ್ರಸ್ತಾಪ ಮಾಡಬೇಕು. ಒಂದು ದೇಶದ ಸರ್ವೋಚ್ಚ ನಾಯಕನನ್ನು ಗುರಿಯಾಗಿಸಿ ಹತ್ಯೆ ಮಾಡಿದ್ದಕ್ಕೆ ತಕ್ಷಣ ಕನಿಷ್ಠಪಕ್ಷ ವಿಷಾದವನ್ನಾದರೂ ವ್ಯಕ್ತಪಡಿಸಬೇಕಿತ್ತು. ಅವರ ಮನೆ ಮತ್ತು ಕಚೇರಿ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಅವರ ಕುಟುಂಬದ ಸದಸ್ಯರು ಸಾವನ್ನಪ್ಪಿದ್ದರ ಬಗ್ಗೆಯೂ ಉಲ್ಲೇಖ ಮಾಡಬೇಕಾಗಿತ್ತು. ದೇಶದ ʼಪ್ರಮುಖ ಹಿತಾಸಕ್ತಿಗಳʼ ವಿಚಾರದಲ್ಲಿ ಖಮೇನಿ ಅವರಿಗಿದ್ದ ಧೋರಣೆಗಳು ಮತ್ತು ಹೇಳಿಕೆಗಳ ಬಗ್ಗೆ ಭಾರತಕ್ಕೆ ಸಮರ್ಥಿಸಿಕೊಳ್ಳಬಹುದಾದ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಈ ಮಾನವೀಯ ಮತ್ತು ರಾಜತಾಂತ್ರಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಯಾವುದೇ ಹಿಂಜರಿಕೆ ಮಾಡಬಾರದಿತ್ತು.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

